Showing posts with label ನೀನೂ... ಹೀಗೆ ಬೆನ್ನು ತೋರಿಸಿ. Show all posts
Showing posts with label ನೀನೂ... ಹೀಗೆ ಬೆನ್ನು ತೋರಿಸಿ. Show all posts

Sunday, July 7, 2019

ರಂಗೀ....ಕಜಲ್

ನೀನೂ.....ಹೀಗೆ ಬೆನ್ನ ತೋರಿಸಿ ನಿಂತುಬಿಟ್ಟರೆ
ಹೇಗೆ ರಂಗೀ.....
ಬಿಟ್ಟು ಹೋದವಳು ಅವಳು, ನಿನೇಕೆ ಮುನಿಸಿಕೊಂಡಿರುವೆ.
ಹೆಣವಾದರೆ, ಹೊರಲು ನಾಲ್ಕು ಭುಜಗಳು ಇಲ್ಲ,ಹೊರಗಲ್ಲಿ... ನಾ ತಿರುಗಿದ ಗಲ್ಲಿ..ಗಲ್ಲಿಗಳನ್ನು ತೊಳೆದು, ಬಣ್ಣವ ಬಳಿಯುತಿಹರು ಮತ್ತೆ ಹೊಸದಾಗಿ, ಪೀಡೆ ತೊಲಗಿತೆಂದು.

ಸಾಗರದ ಒಡಲಲ್ಲಿ, ಜಾರಿಬಿದ್ದ ಮಳೆ ಹನಿ ನಾನೀಗ,
ನಿನ್ನೆದುರು ಮನಸಾರೆ ಅತ್ತುಬಿಡಲು ನಾಚಿಕೆಯಾಗುತ್ತಿದೆ
ರಂಗೀ.......
ಬಿಗಿಯಾಗಿ ಎದೆಗಪ್ಪಿಕೊಂಡು ಬಿಡು ನನ್ನನು, ಆಟದಲಿ ಸೋತು, ಅಳುತ್ತಾ ಬಂದ ಮಗುವ ಸಂತೈಸುವಂತೆ....
ಹಣೆಗೊಂದು ಹೂ ಮುತ್ತನಿಟ್ಟು, ನೆವರಿಸಿಬಿಡು ತಲೆಯ
ಮೇಲೆ, ನಾನಿರುವೇನು ಬಿಡು ಎಂಬ ಭರವಸೆಯೊಂದಿಗೆ.

ನನ್ನ ಪಾಲಿಗೆ ಜಗವೆಲ್ಲ ಮೌನ, ಸುಖದುಃಖಗಳೆರಡಕ್ಕೂ
ಕಿಟಕಿ ಬಾಗಿಲುಗಳಿಲ್ಲ ರಂಗೀ.....
ಹೂವೆಂದುಕೊಂಡು ಸೋತು ಹೋಗಿದ್ದೆನವಳಿಗೆ, ಕಲ್ಲಾಗಿಬಿಟ್ಟಳು!!! ನಂಬಿಬಿಟ್ಟಿದ್ದೆ, ಎಷ್ಟೆಂದರೆ....
ಮೋಸ ಮಾಡಿದಾಗ, ಅರಗಿಸಿಕೊಳ್ಳಲಾಗದೆ ದೇಹಕ್ಕೆ
ಬೆಂಕಿಯನ್ನೆ.... ಹಚ್ಚಿಕೊಂಡು ಉರಿದು ಹೋಗುವಷ್ಟು....

ಇಲ್ಲಿ.....ಸಾವನ್ನು ಕೂಗಿ...ಕೂಗಿ...ಕರೆಯುತ್ತಿರುವವನು
ನಾನೊಬ್ಬನೇನಾ? ರಂಗೀ....
ಬದುಕಬೇಕೆಂದು ಪುಣ್ಯ ಮಣ್ಣುಗಳಿಗೆ ಹೋಗಿ
ಬಂದವರು... ಕಣ್ಮುಂದೆಯೆ ಮಣ್ಣಾಗುತಿರುವರಲ್ಲ!!!
ಅದಕ್ಕೇನು ಕುರುಡಾ? ನಾನದರ ಕಣ್ಣಿಗೆ ಕಾಣುತ್ತಿಲ್ಲವಾ?
ಅದೇನು ಕಿವುಡಾ? ಗಂಟಲು ಹರಿದು ಹೋಗುವ ಹಾಗೆ
ಕಿರುಚಿಕೊಂಡರು ಇತ್ತ ತಲೆಯನ್ನು ಹಾಕುತ್ತಿಲ್ಲವಲ್ಲ!!

ನಾನೊಬ್ಬ..... ಪ್ರೇಮದ ಬಳ್ಳಿಯಿಂದ ಒಣಗಿ, ಉದುರಿಬಿದ್ದ
ಹೂವಿನಂತವನು.... ರಂಗೀ...
ಹೂವು ಪಾರಿಜಾತವೆ ಆದರೇನು? ದೇವರ ನೆತ್ತಿಯ ಮೇಲೆ
ಒಣಗಿದ ಮೇಲೆ, ತೆಗೆದು ಕಸಕ್ಕೆ ಎಸೆಯುವುದಿಲ್ಲವೇನು?
ಪ್ರೇಮಿಯೆಂದು ಪೂಜಿಸಿದ ಜನರೇ...ಇಂದು... ವಿರಹಿಯೆಂದು
ಬೀದಿಗೆಸೆದಿದ್ದಾರೆ....
ನೀನೂ.... ಹೊರಹಾಕಿದರೆ, ಹೋಗುವುದಾದರು ಇನ್ನೇಲ್ಲಿಗೆ? ಮಸಣವೊಂದನ್ನು ಬಿಟ್ಟು!!!