Showing posts with label ಪಾಗಲ್. Show all posts
Showing posts with label ಪಾಗಲ್. Show all posts

Wednesday, January 8, 2020

ಕಜಲ್

ನೀನು ಬಾರದೆ, ವಿರಹದೊಲೆಯ ಮೇಲಿಟ್ಟ 
ಹಾಲಿನಪಾತ್ರೆಯ ಹಾಗೆ, ಕುದ್ದು... ಕುದ್ದು 
ಸುಟ್ಟು ಹೋಗುತ್ತಿರುವೆ ಪಾಗಲ್
ಹೆಪ್ಪನ್ನು ಹಾಕದಿದ್ದರೂ ಸರಿ, ಹುಳಿಯನ್ನಾದರು
ಹಿಂಡಿಬಿಡು ನಿಶ್ಚಿಂತತೆಯಲಿ ಒಡೆದು ಪಿಸುರು
ಪಿಸುರಾಗಿಯಾದರು ಹೋಗುವೆ.

ನಿನ್ನ ನೆನಹುವಿನ ತಾಪಕೆ ತನುವಿನ ಕಣಕಣದಲಿ 
ಬೆವರುಕ್ಕಿ, ಎದೆಯ ರವಿಕೆಯನು ತೋಯಿಸುವಾಗ, 
ಕಾದ ಕವಾಯಿಯ ಮೇಲೆ ನೀರನ್ನು ಚುಮುಕಿಸಿ ಚುರ್ರ... ಎಂದೆನಿಸಿದ ಹಾಗಾಗುತ್ತಿದೆ ಪಾಗಲ್
ಬಿಸಿ ನೀರಿಲ್ಲದಿದ್ದರೂ ಸರಿ, ತಣ್ಣೀರನ್ನಾದರೂ ಸುರಿದು
ದೇಹದ ಬಿಸಿಯನ್ನು ತಣಿಸು ಬಾ.... ಇಲ್ಲವೆ,
ಬಾಹುಗಳಲಿ ಬಿಗಿದಪ್ಪಿ, ಕೊಬ್ಬಿದ ಈ ಕಬ್ಬಿನ
ಜಲ್ಲೆಯನು ಹಿಂಡಿ, ಹಿಪ್ಪಿಕ್ಕುವುದಕ್ಕಾದರು ಬಾ...

ಹಿಂಡಿದ ಪಾಕವು ಬೆಂದು ಬೆಲ್ಲವಾದಾಗ, ಕಚ್ಚಿ
ಸಿಹಿ ನೋಡುವಾತುರ ನಿನಗಿಲ್ಲವೇನು? ಕಚ್ಚಿಸಿಕೊಂಡ
ನೋವಿನ ಸವಿಯನ್ನು ನಾನನುಭವಿಸಬಾರದೇನು ಪಾಗಲ್
ಅವಧಿ ಮೀರಿದ ಬೆಲ್ಲ, ಹುಳಿಯಾಗುತ್ತದೆ. ಹುಳಿಯು
ಮದ್ಯವಾಗುತ್ತದೆ, ಮದ್ಯವು ಅಮಲೆರಿಸುತ್ತದೆ, ಏರಿದ
ಅಮಲು ಮತ್ತೆ... ಮತ್ತೆ.. ಮಧುರಾನುಭವಗಳ ಹೆಕ್ಕಿ 
ಕೊಡುತ್ತದಂತೆ, ನಿಜವಲ್ಲವೇನು?

ಬೆಂಕಿಯ ಕೆನ್ನಾಲಿಗಿಗೆ ಸಿಕ್ಕು ಉಳಿದವರಾರು?
ನಾನೇನು ಸೀತೆಯಲ್ಲ ಎದ್ದು ಬರಲು ಪಾಗಲ್
ನಾನೆಂದಿದ್ದರು ಗಿಣಿ...!! ಅಲ್ಲಲ್ಲ... ಹದ್ದುಗಳು ಕಚ್ಚಿ
ತಿನ್ನುವ ಹಣ್ಣು, ಕಚ್ಚುವುದೊ! ಕುಕ್ಕುವುದೊ! 
ಯಾವುದಾದರೇನು? ನೋವಾಗದೆ ಇರುವುದೇನು?
ನೀನು ಬರದೆ.....ಈ ತನುಮನಕ್ಕೆ ಮದ್ದು ದೊರೆಯುವುದೇನು?
ಮದ್ದಿನ ಮುದ್ದಿಲ್ಲದೆ ನಾನು ಬದುಕುಳಿಯಬಲ್ಲೆನೇನು?