Saturday, May 28, 2016

ದಿನಗಳು

ಪ್ರೀತಿಗೆ ಬಹಳ ದಿನ
ಉಪವಾಸ ಇಡಬಾರ್ದು
ದ್ವೇಷಕ್ಕ ಬಹಳ ದಿನ
ಖೂಳ ಹಾಕಬಾರ್ದು

ನೀತಿಗೆ ಬಹಳ ದಿನ
ಸತಾಯ್ಸಿರಬಾರ್ದು
ಅನ್ಯಾಯಾನ ಬಹಳ ದಿನ
ಸಹಿಸ್ಕೊಬಾರ್ದು

ಹೆಂಡ್ತಿನ ಬಹಳ ದಿನ
ರಮೀಸಬಾರ್ದು
ತಾಯಿನ ಬಹಳ ದಿನ
ನೋಯಿಸಬಾರ್ದು

...ದಿನಗಳು

ಸೋಲಿನ ದಿನಗಳ
ಮರೆಯದೆ ಸೋತೆ
ಗೆಲುವಿನ ದಿನಗಳ
ಉಳಿಸದೆ ಸೋತೆ

ನೋವಿನ ದಿನಗಳ
ಅಳಿಸದೆ ಹೋದೆ
ಹರುಷದ ದಿನಗಳ
ಗಳಿಸದೆ ಹೋದೆ

ದಾರಿದ್ರ್ಯ ದಿನಗಳ
ಕಳಚಲು ಎದ್ದೆ
ಪಾವಿತ್ರ್ಯ ದಿನಗಳ
ಬಳಚಲು ಬಿದ್ದೆ

ಸಾವಿನ ದಿನಗಳ
ಕಹಿಯನು ಅರಿತೆ
ಬದುಕಿನ ದಿನಗಳ
ಸವಿಯನು ಮರೆತೆ

ಗಂಡೇ...

ನೋಡದಿರು ದಿನವು ಹೀಗೆ
ನನ್ನ, ಕಾಮದ ಕಣ್ಣಿಂದ ಸುಡುವ ಹಾಗೆ

ಆಡದಿರು ದಿನವು ಹೀಗೆ
ನನ್ನ, ಚುಚ್ಚಿ ಚುಚ್ಚಿ ಕೊಲ್ಲುವ ಹಾಗೆ

ನಗದಿರು ದಿನವು ಹೀಗೆ
ನನ್ನ, ಹಿಯ್ಯಾಳಿಸಿ, ತುಳಿಯುವ ಹಾಗೆ

ಹೊಡೆಯದಿರು ದಿನವೂ ಹೀಗೆ
ನನ್ನ, ನಾನೇ ಸಾಯುವ ಹಾಗೆ

ಗಂಡೇ....

ನಲ್ಲ ನೀನಿರದೆ

ನಲ್ಲ...
ನೀನಿಲ್ಲದ ರಾತ್ರಿಗಳು
ಕಳೆಯಲಿ ಹೆಂಗ ನಾ..

ಹೂವಿನ ಹಾಸಿಗೆ
ಮುಳ್ಳಾಯ್ತು ನೀನಿರದೆ
ಚಂದ್ರನ ಕಾಂತಿ
ಉರಿಯಾಯ್ತು ನೀನಿರದೆ
ಮುಡಿಯ ಮಲ್ಲಿಗೆ
ಬಾಡಿತು ನೀನಿರದೆ

ನೀನಿರದೆ...
ಹಾಲು ಕಹಿಯಾಯ್ತು
ಹಣ್ಣು ಸಪ್ಪಾಯ್ತು
ನಿದಿರೆ ದೂರಾಯ್ತು
ಮನಸ್ಸು ಗೂಡಾಯ್ತು
ನಲ್ಲ  ನೀನಿರದೆ

ಬಾಗಿಲು ನಾಚುತಿದೆ
ದೀಪವು ನಗುತಿದೆ
ಹಾಸಿಗೆ ನಲಗುತಿದೆ
ದೇಹವು ಉರಿಯುತಿದೆ
ನಲ್ಲ ನೀನಿರದೆ.

ತಂಪ. . ತಂಪ ..

ಮುಂಗಾರಿಗೆ ಬದು ತಂಪ
ಹಿಂಗಾರಿಗೆ ತಳ ತಂಪ
ರಾತ್ರಿಗೆ ಚಂದ್ರನ ತಂಪ
ಮಾಗಿಗೆ ಸೂಯನ ತಂಪ

ಹುಡುಗಿ..

ನೀ ನಕ್ರ ಕಪಾಳ ಕೆಂಪ
ಕಣ್ಣಿಗೆ ನಿನ ಅಂದ ತಂಪ
ಕಿವಿಗೆ ನಿನ ಮಾತ ಇಂಪ
ಮಾತಾಡಿದ್ರ ನನ ಎದಿನ ತಂಪ

Thursday, May 26, 2016

ಅಂದು ಇಂದು

ನೀನೇಕೆ ಬಂದೆ ನನ್ನೆದುರಿಗಿಂದು
ಮರೆಯದ ನಗುವ ಮೊಗದಲಿ ಹೊತ್ತು
ಎದೆ ಬಡಿತದ ತುಡಿತವ ಹೆಚ್ಚಿಸಿದೇಕೆ
ಆ ಕುಡಿ ನೋಟದ ನೋಟ ಬಿಟ್ಟು
ನುಡಿಸಿದೆದೆಯ ವೀಣೆಯನೇಕಿಂದು
ಆ ತುಟಿಯಂಚಿನ ನಗುವಿನಲಿ

ಇಂದೇಕೆ ಮರೆಯಾದೆ
ಆರದ, ಮರೆಯದ ನೆನಪನು ಬಿಟ್ಟು
ನಲಿವಿನ ಹಾಡಿಗೆ ನೋವಿನ ಶೃತಿಯನು ಮೀಡಿದು
ಹಾರೋ ಮನಸಿನ ಹಕ್ಕಿಗೆ ಮಾಯೆಯ ಬಾಣವ ಬಿಟ್ಟು
ಬಾಳ ಪ್ರೇಮ ಹಾದಿಯಲಿ ಮುಳ್ಳಿನ ಹಾಸಿಗೆ ಹಾಸಿ
ಇಂದೇಕೆ ಮರೆಯಾದೆ.

ನಾಚಿಕೆ

ಮದುವೆಗೆ ಮುಂಚೆ..

ನನ್ನಾಕೆಗೆ ತುಂಬಾನೆ ನಾಚಿಕೆ
ಅದಕ್ಕೆ ಮರೆಯಾಗುತ್ತಾಳ
ಸೀರೆ ಸೇರಗಿನಲ್ಲಾಕೆ
ಎರಡು ಸಲ ಭೇಟಿಯಾದರೂ ನೋಡಲಿಲ್ಲ
ನನ್ನತ್ತ ಒಮ್ಮೆಯಾದರೂ ಕಣ್ಣೆತ್ತಿ
ನನ್ನಾಕೆ

ಮದುವೆಯ ನಂತರ...

ನನ್ನಾಕೆಗೆ ತುಂಬಾನೆ ನಾಚಿಕೆ
ಅದಕ್ಕೆ ಸೆರೆಯಾಗುತ್ತಾಳೆ ನನ್ನ
ಬಾಹು ಬಂಧನದಲ್ಲಾಕೆ
ಮಾತು ಮಾತಿಗೂ ಅನ್ನುತ್ತಾಳೆ ನಾಚಿಕೆ
ಅದಕ್ಕೆ ಮಾತಾಡಲೂ ಬಿಡುವುದಿಲ್ಲ ರಾತ್ರಿಗೆ