Friday, April 7, 2017

ಸಮರಸ

ಯಾವುದು ಸವಿಯೋ...
ಯಾವುದು ಕಹಿಯೋ...
ಸಮರಸದಲಿ ಜೀವನ
ಸಾಗಿಸುತಿರುವಾಗ

ಸವಿಯು ಕಣ್ಣಿಗೆ ಪೊರೆಯ
ಕಟ್ಟಿ ಬಾಳಲಿ ಎಡವುವಂತೆ
ಮಾಡಿದರೆ

ಕಹಿಯು ಪೊರೆಯ ಹರಿದು
ನಡೆಯುವ ಹಾದಿಯನ್ನು
ಕಣ್ತೆರೆದು ನೋಡುವಂತೆ ಮಾಡುತ್ತದೆ

ಸವಿಕಹಿಗಳ ಮಿಶ್ರಣದ ಬದುಕಿರುವುದು
ನಮ್ಮ ಕೈಗಳಲ್ಲೆ, ಬದುಕಲ್ಲೆ, ನಡೆಯಲ್ಲೆ
ಸಮರಸವಾಗಿ ಬದುಕಿ ಬಾಳುವುದೆ
ಬಾಳಿಗೆ ಬೆಳಕು

Thursday, April 6, 2017

ಅವಳೆಂದರೆ

ಅವಳೆಂದರೆ ಹಾಗೆ....
ವಸಂತ ಮಾಸದ ಕೋಗಿಲೆಯ ಹಾಗೆ...
ವಿರಹ ವೇದನೆ ಗೀತೆಯ ಮರೆಸಿ
ಪ್ರೇಮಗೀತೆಯ ಹಾಡುವಾಕೆ...

ಅವಳೆಂದರೆ ಹಾಗೆ.....
ಶ್ರಾವಣ ಮಾಸದ ಜೋಕಾಲಿಯ ಹಾಗೆ...
ತನ್ನೆಲ್ಲ ನೋವುಗಳ ಹಿಂದಕ್ಕೆ ತಳ್ಳಿ
ನನ್ನ ನಲಿವುಗಳಿಗೆ ಮುಂದಕ್ಕೆ ಜೀಕುವಾಕೆ..

ಅವಳೆಂದರೆ ಹಾಗೆ...
ಆಷಾಡ ಮಾಸದ ದಿನಗಳಿದ್ದ ಹಾಗೆ...
ಕರಗಲಾರದ ಹಗಲುಗಳ ಬಿಟ್ಟು
ನಿದ್ರಿಸಲಾರದ ರಾತ್ರಿಗಳ ನೀಡುವಾಕೆ...

ಅವಳೆಂದರೆ ಹಾಗೆ.....
ಕಾರ್ತಿಕ ಮಾಸದ ಹುಣ್ಣಿಮೆಯ ಹಾಗೆ
ತಮ ತುಂಬಿದ ಮನಕೆ, ತಮ ಹೊದ್ದೀಹ
ಬಾಳ ಹಾದಿಗೆ ಹೊಂಬೆಳಕ ಚೆಲ್ಲುವಾಕೆ

ನಿನ್ನ ಆಸೆ


ಕಳೆದು ಹೋದ ದಿನಗಳಲ್ಲಿ
ನಿನ್ನ ನೆನಪುಗಳನ್ನು
ಹುಡುಕುವಾಸೆ

ಬಿಟ್ಟು ಹೋದ ದಾರಿಯಲ್ಲಿ
ನಿನ್ನ ಹೆಜ್ಜೆ ಗುರುತುಗಳ
ಹಿಡಿದು ನಿನ್ನ ಸೇರುವಾಸೆ

ಮಲಗಿ ಹೋದ ಕನಸುಗಳನ್ನು
ಎಬ್ಬಿಸಿ ಅದರಲಿ ನಿನ್ನನ್ನು
ಕೂಡುವಾಸೆ

ಸಂಭಾಷಣೆ

ನಾನು

ನನ್ನ ಮನದ ಮಲ್ಲಿಗೆಯಾಗಿದ್ದರೆ
ಮನದ ಮಾತುಗಳೇದೆಷ್ಟೊ
ನಿನಗರಿವಾಗುತ್ತಿತ್ತು

ನೋವಲಿ ನನ್ನೆದೆಯ ಮೇಲೆ ಮಲಗಿದ
ನಿನ್ನ ಕಿವಿಗಳು ಒಳಗಿನ ನೋವನು
ಆಲಿಸಬೇಕಿತ್ತು

ನನ್ನ ಪ್ರೀತಿಯ ವಿದಾಯದಂಚಿನಲಿ
ನೀನಿದ್ದಾಗ, ನನ್ನ ಕಣ್ಣಂಚಿನ ಹನಿಗಳನು
ನಿನ್ನ ಕಣ್ಣುಗಳು ಗುರುತಿಸಬೇಕಾಗಿತ್ತು

ನೋಡದೆ ಹೋದೆ ಜಾರಿದ ಕಂಗಳ ಮುತ್ತುಗಳ
ನಿಂತು ಹೋದ ನನ್ನೆದೆಯ ಬಡಿತವನು ವಿಚಾರಿಸದೆ ನಡೆದೆ
ನಾನೊಬ್ಬ ಅಪರಿಚನಂತೆ

ಅವರು
ನಾ ಬಯಸಿದ್ದೆ ನಿನ್ನ ಮನದ ಮಲ್ಲಿಗೆಯಾಗಬೇಕೆಂದು....
ವಿಧಿಯದು ಬಯಸಿತ್ತು
ನಾವು ಒಂದಾಗಬಾರದೆಂದು....
ನನ್ನ ಮಾತಿನ ಅರ್ಥ ತಿಳಿಯಲು
ಸೋತೆ ನೀನಂದು....
ನಿನ್ನ ಮೌನವ ಅರಿಯಲಾರದೇ
ಬಿಕ್ಕುತಿರುವೆ ನಾನಿಂದು....

ನಾನು

ಏಕೆ ?
ಕಾಣದ ವಿಧಿಯನೇಕೆ ತರುವೆ ಈ
ಒಲವಿನಲಿ
ನಿನ್ನಾವ ಮಾತು ನನಗರ್ಥವಾಗದೆ
ಇದ್ದುದು, ನಿನ್ನ ಅದರದಂಚಿನ ಮಿಂಚೊಂದು
ಸಾಕಿತ್ತು ಪ್ರೀತಿ ಹಾದಿಯ ಮುಳ್ಳನೆಲ್ಲವ
ಕಿತ್ತು ಹಾಕಲು
ಮೌನದಲೇ ಹಾಡಿದ್ದೆ ಅದೇಷ್ಟೊ ರಾಗವ
ಒಂದಕ್ಕಾದರೂ ನೀನು ಶೃತಿಯಾಗಿದ್ದರೆ
ನನ್ನ ಬದುಕೊಂದು ಅಪಸ್ವರದ
ಗೀತೆಯಾಗುತ್ತಿರಲಿಲ್ಲ....

ಅವರು
ಒಣ ಅಹಮಿಕೆಯೇ
ನಮ್ಮಿಬ್ಬರ ನಡುವೆ
ಮುಳ್ಳಾಯಿತೇನೋ ಗೆಳೆಯಾ....

ಹೂವಂತ ಪ್ರೀತಿಯದು
ನಲುಗಿ ಹೋಗುವುದನು
ನಾವು ಅರಿಯದಾದೆವಾ....?

ಒಮ್ಮೆ ನನ್ನೆಡೆಗೆ ತಿರುಗಿ
ನನ್ನ ಕಣ್ಣಲಿ ನಿನ್ನ
ಬಿಂಬವ ನೋಡಬಾರದೇ....?

ಹುಚ್ಚು ಅಹಂ ಅದು ಒಲವ
ಹೊಳೆಯಲಿ ಕೊಚ್ಚಿ
ಹೋಗದೇ ಇರುವುದೇ....?

ನಾನು
ನನ್ನೆಲ್ಲ ಒಣ ಅಹಮಿಕೆಯನು
ಮುರಿದು, ನಿನ್ನೆದುರು ಮಂಡಿಯೂರಿ
ಕುಳಿತದ್ದು ನಿನಗೆ ನೆನಪಿಲ್ಲವೆ ಗೆಳತಿ

ಹಾಲಿನೊಲವಿನಲಿ ಬಾಳ ಜೇನ
ಬೇರೆಸುವದ ಮರೆತು ಹುಳಿಹಿಂಡಿ
ನಡೆದುಬಿಟ್ಟೆಯಲ್ಲ

ನಿನ್ನ ಕಣ್ಣಲಿ ನನ್ನ ಬಿಂಬವ ನಾ ಹೇಗೆ
ಕಾಣಲಿ, ಹೊರಡುವಾಗ ಕಣ್ಣಲ್ಲಿ
ಕಣ್ಣಿಟ್ಟು ಒಮ್ಮೆಯಾದರು ನೀ ನೋಡದಿದ್ದಾಗ

ಅಹಂ ಅದು ನೆಪ ಮಾತ್ರ ನಿನಗೆ
ನನ್ನಿಂದ ನೀನು ಬೇರ್ಪಡಲು
ಬಳಸಿದ ಪದವಷ್ಟೇ

ನಡೆದು ಹೋದೆ ನೀನು ಕಡಲ
ತೀರದುದ್ದಕೂ, ಮಿಡುಕಾಡಿ
ಹುಡುಕುತಿರುವೆ ಆ ಹೆಜ್ಜೆಗಳನು
ಇನ್ನೂ...

ಅವರು
ನಿನ್ನ ಹಾಲಂತ ಪ್ರೀತಿಗೆ
ಜೇನಾಗಬೇಕೆಂದಿದ್ದೆ ಗೆಳೆಯಾ
ನೀ ನನ್ನಂತರಂಗವ
ತಿಳಿಯದೇ ಹೋದೆಯಾ?

ನಿನ್ನ ಪ್ರೀತಿಯಲಿ ಬಂಧಿ
ಮಾಡಿದೆ ನೀ ನನ್ನ
ಒಮ್ಮೆಯೂ ತಿಳಿಯದಾದೆ
ನನ್ನೊಳಗನ್ನ

ಎಲ್ಲದಕೂ ಮಾಡಿದೆ
ನೀ ನನ್ನ ಕಾರಣ
ಆಗುತಿದೆ ಇಲ್ಲಿ ನನ್ನ
ಮನದ ಅವಸಾನ

ಬಾಳಿನ ಬಂಡಿಗೆ ಆಗಬೇಕು
ನಾವೆರಡು ಚಕ್ರಗಳು
ನಾನೆಂದೂ ಆಗಲಾರೆ
ನಿನ್ನಯ ಗುಲಾಮಳು

ನಾನು
ನಿನ್ನಂತರಂಗವ ಅರಿಯಲೆಂದೆ
ಓಡೊಡಿ ಬಂದಿದ್ದೆ ನಾನು
ಮೋಡದ ಮಿಂಚಂತೆ ಸಿಗದೆ
ಮಿಂಚಿ ಮರೆಯಾಗಿದ್ದೆ ನೀನು

ನಿನಗನ್ನಿಸಿತೆ ಪ್ರೀತಿಯಲಿ
ದಾಸಿಯ ಮಾಡಿದನೆಂದು
ಮರೆತುಬಿಟ್ಟೆಯಾ?
ನಿನ್ನ ಪ್ರೀತಿಯ ನೆರಳಲಿ
ಅದೇಷ್ಟು ದೂರ ನಡೆದು
ಬಂದ ಈ ದಾಸನನ್ನು

ಅವರು
ಇದ್ದರೂ ಇದ್ದೀತು ತಪ್ಪು
ನಿನ್ನಲೂ ಗೆಳೆಯಾ
ಆಗಿದ್ದರೂ ಆಗಿರಬಹುದು
ನೋವು ನನ್ನಿಂದಲೂ ಇನಿಯಾ

ಹಾಲಂತ ಪ್ರೀತಿಯದು
ಒಡೆಯದಿರಲಿ
ಹೂವಂತ ಮನಸುಗಳು
ನಲುಗದಿರಲಿ

ನಿನ್ನ ಪ್ರೇಮ ರಾಜ್ಯಕೆ
ನಾನಾಗುವೆ ಮಹಾರಾಣಿ
ನಿನ್ನ ಪ್ರೀತಿಯಲಿ ನನ್ನ  ನೀ
ಮಾಡದಿರು ಖೈದಿ

ಸಮರಸದಲಿ ಜೀವನ
ಮಾಡೋಣ ಗೆಳೆಯ
ನಿನ್ನೊಲವಲಿ ಮಿಂದೇಳಬಯಸಿದೆ
ಈ ನನ್ನ ಹೃದಯ....

ನಾನು
ಮಣ್ಣಲ್ಲಿ ಮಣ್ಣಾಗಿ ಹೋದ
ತಪ್ಪುಗಳನೆಲ್ಲವ ಕೆದಕಿ
ಎದೆಯ ಗಾಯವ ಹೆಚ್ಚಿಸಬೇಡ

ಹರಿದು ಗಾಳಿಗೆ ಹಾರಿದ
ಕನಸಿನ ಹಾಳೆಗಳ ಹೆಕ್ಕಿ
ತಂದು ನನ್ನೆದುರು ಇರಿಸಬೇಡ

ಮೋಹದ ಮಾತಿನ ಮೊಳೆಗಳ
ಪ್ರೀತಿಯ ಬಾಗಿಲಿಗೆ ಬಡಿದು
ತಿರುಗಿಯೂ ನೋಡದಂತೆ
ಹೋದದ್ದು ನೀ ಮರೆತಿರುವೆಯಾ ?

ಅವರು
ಸತ್ತು ಹೋದ ತಪ್ಪುಗಳ
ಕೆದಕಿ ಕೆದಕಿ ತೆಗೆಯದೇ
ಉಕ್ಕಿ ಬರುವ ಒಲವಲಿ
ಬದುಕಿ ಬಾಳಬಾರದೇ ?

ಯಾರ ಬದುಕಲಿಲ್ಲ
ಏರಿಳಿವು ನೂರಾರು
ಸಿಕ್ಕಿ ನರಳದಿರಲಿ
ಅದರಲ್ಲಿ ಪ್ರೀತಿ,ಒಲವು

ಯಾರಿಗೂ ಸಿಗದಿರಲಿ
ಪ್ರೀತಿಯಲಿ ಸೋಲು
ಒಬ್ಬರಿಗೊಬ್ಬರು ಸೋಲೋಣ
ಸಿಗಲಿ ಒಲವಿಗೆ ಗೆಲುವು

ನಾನು
ಒಲವ ಗೆಲುವಿಗಾಗೆ ಓಡೋಡಿ
ಬಂದಿದ್ದೆನಂದು, ಕೈಯಲ್ಲಿ
ಮಲ್ಲಿಗೆಯ ಹಿಡಿದು
ಮುಖ ತಿರುವಿ ನಿಂತೆ

ಪ್ರೀತಿ ಶಿಖರದಿಂದ ಎಷ್ಟು ಸಲ
ದೂಡಿದೆ ನನ್ನನು ಸೋಲದೆ
ಮತ್ತೆ ಮತ್ತೆ ಹತ್ತಿ ಬಂದೆ

ಸೋತು ನೋಡು ಒಂದೊಮ್ಮೆ
ಈ ಪ್ರೀತಿಯಲಿ
ಜಗದ ಸುಖವ ತಂದಿರಿಸುವೆ
ನಿನ್ನ ಕಾಲಡಿಯಲಿ

ಅವರು
ಜಗದ ಸುಖವನೆಲ್ಲಾ
ಬಯಸಿಲ್ಲ ಗೆಳೆಯಾ
ಬಯಸಿದ್ದು ಬಂಧನವಾಗದ
ನಿನ್ನ ಪ್ರೀತಿ ಹೃದಯ

ಪ್ರೀತಿಯಲಿ ಇರಲಿ
ಉಸಿರಿಗೆ ಜಾಗ
ಬಾರದಿರಲಿ ಅಲ್ಲಿ ಉಸಿರು
ಕಟ್ಟುವ ವಾತಾವರಣ

ಆಗಲಾರೆ ನಾನೆಂದೂ
ಪಂಜರದ ಗಿಳಿ
ಹಾರಾಡುವೆ ಸಮನಾಗಿ
ನಿನ್ನೊಂದಿಗೆ ಬಾನಲಿ

ನಾನು
ನಿನ್ನುಸಿರಲಿ ನನ್ನೀ...ಹೆಸರಿರುವಾಗ
ಆ ಉಸಿರ ನಾ ಹೇಗೆ ಕಟ್ಟಿಸಲಿ

ಚಿನ್ನದ ಮನದವಳಿಗೆಕೊಂದು
ಬಂಗಾರದ ಪಂಜರವ ತರಲಿ

ಗಿಡುಗಗಳು ಬಹಳುಂಟು
ಬಾನಲಿ, ಹೆದರದಿರು ನಾನೀರುವೆ
ನಿನ್ನ ಜೊತೆಯಲಿ

ಅವರು
ಹೀಗೇ ಇರಲಿ ಗೆಳೆಯಾ
ನಿನ್ನೊಲವಿನ ಒರತೆ
ಕಾಡದಿರಲಿ ನನಗೆಂದೂ
ಅದರ ಕೊರತೆ

ನಿನ್ನ ಬೆಚ್ಚನೆಯ ಪ್ರೀತಿಯಲಿ
ಸ್ವಚ್ಛಂದ ಆಗಸದಲಿ
ನಿನ್ನೊಂದಿಗೆ ಹಾರಾಡುವೆ
ನಿನ್ನೊಲವಲಿ ಮುಳುಗೇಳುವೆ

ಬೇಡ ನನಗೆ ಈ
ಮುನಿಸಿನಾ ಮೌನ
ಬಯಸಿದೆ ಮನ
ನಿನ್ನೊಲವಿನ ಆಲಿಂಗನ

ನಾನು

ಮುನಿಸು
ಮುಡಿಗೆ ಮಲ್ಲಿಗೆ ಮುಡಿಸುವ
ಮೊದಲೇ ಮುನಿಸಿಕೊಂಡೇಕೆ?
ಮಾತ ಮತ್ತಲಿ ಮರೆಸುವ
ಮುನ್ನವೇ ಮೌನವಾದೇಕೆ?
ಮನದ ಮೂಡಣದಿ ಮೂಡುವ
ಮುಂಚೆಯೇ ಮರೆಯಾದೆಯೇಕೆ?

ಹರುಷದ ಹೊನಲು ಹಸಿರಾಗಿಸದೆ
ಹಗೆಯಾಗಿಸಿದೇಕೆ?
ಹುಸಿಯಿರದ ಹಸನಾದ ಹಾದಿಗೆ
ಹೂವಾಗಲಿಲ್ಲವೇಕೆ?
ಹವಳದಂತಹ ಹರೆಯದ ಹೊತ್ತುಗಳ
ಹಾರವಾಗಿಸಲಿಲ್ಲೇಕೆ?

ಕಂಡು ಕಾಣದಂತೆ ಕತ್ತಲಲ್ಲಿ
ಕರಗಿಬಿಟ್ಟು
ಕಾಣದಾ.. ಕಲ್ಪನಾ... ಕನ್ನಡಿಯಲ್ಲಿ
ಕುಳಿತುಬಿಟ್ಟೆ
ಕಂಡ ಕನಸುಗಳನೆಲ್ಲವ ಕೊಳ್ಳಲೀನ್ನೂ
ಕಾಯಿಸುತಿರುವೆ

ಮರತೆಬಿಡು ಮನದ ಮುನಿಸು
ಮಲಗಿ ಮಡಿಲಲೆನ್ನ ಮರೆಸು
ಮೂಡಲಿ ಮೊಗದಲಿ ಮಂದಹಾಸ
ಮುರಿಯೋಣ ಮನಗಳೆರಡ ಮೌನವಾಸ

ಅವರು
ವಾವ್.....ಬಹಳಾ ಚೆನ್ನಾಗಿದೆ....
ಖುಷಿಯಾಯ್ತು....ನಿಮ್ಮೊಂದಿಗಿನ  ಪದಗಳ ಆಟದಿಂದ....
ಬಹಳಾ ಕಾಡಿ ಬಿಟ್ಟಿರಿ ನೀವಿಂದು.....😀😀

ಧನ್ಯವಾದಗಳು....ಶುಭರಾತ್ರಿ

ನಾನು
ದೊಡ್ಡಮಾತು ದೊಡ್ಡಮಾತು
ಕಾಡಲೇನು ನಾನೇನು ನಕ್ಷತ್ರಿಕನೇ...?
ನಾನೊಬ್ಬ ವ್ಯಾಪಾರಿ.. ಮೇಲಾಗಿ
ಸಂಸಾರಿ
ಅಂಗಡಿಯಲ್ಲಿ ಇದ್ದ ಸಮಯದಲ್ಲಿ
ಅಷ್ಟೊ ಇಷ್ಟೊ ಸಿಕ್ಕ ಪದಗಳ ಜಾಲಾಡಿ
ಎಳೆದಾಡಿ, ಸಾಲುಗಳಲಿ ತುರುಕಿ
ನಿಮ್ಮಂಥ ಕವಿತಜ್ಞರ ಮುಂದೆ ಚಿಕ್ಕದಾಗಿ
ಒಪ್ಪಿಸುತ್ತೀರುವೆನಷ್ಟೇ...
ಶುಭರಾತ್ರಿ

Wednesday, April 5, 2017

ನಾನು ಒಕ್ಕಲಿಗ

ನಾನು ಒಕ್ಕಲಿಗ
ಕೋಳಿ ಕೂಗುವ ಮೊದಲೇ
ರವಿಯ ಕಿರಣಗಳು ಭೂದೇವಿಯ
ಚರಣವ ಸ್ಪರ್ಶಿಸುವ ಮುನ್ನವೇ
ರೆಕ್ಕೆಯ ಬಿಚ್ಚದೆ ಬೆಚ್ಚಗೆ ಗೂಡೊಳು
ಮಲಗಿರುವ ಹಕ್ಕಿಗಳು ಕಲರವದ
ಸದ್ದನುಗೈಯುವ ಮುಂಚೆಯೆ
ಭೂ ಮಾತೆಯ ಸೇವೆಗೆ ಹೊರಟು
ನಿಲ್ಲುವವನು ನಾನು

ಸುರಿಯುವ ಮಳೆಯೊ, ಉರಿಯುವ
ಬಿಸಿಲೊ, ಬೀಸುವ ಬಿರುಗಾಳಿಯೊ
ತರತರಗಟ್ಟಿಸುವ ಚಳಿಯೊ
ಎಲ್ಲವನ್ನು ಕಲ್ಲು ಬಂಡೆಯಂತೆ ಸಹಿಸಿಕೊಂಡು
ಬದುಕ ಸಂಗಾತಿಗಳಾದ ನನ್ನೆರಡು
ಎತ್ತುಗಳನು ಹೂಡಿಕೊಂಡು
ಬರಡಾದ, ಹೆಂಟೆಗಳಿಂದ ಕೂಡಿದ
ಬಿಸಿಲಿಗೆ ಕಾದು ಕಾದು ಬಂಡೆಯಾದ
ಹೊಲವನ್ನು, ಸೀಳಿ, ಹದಮಾಡಿ
ಬೀಜವ ಬಿತ್ತಿ, ಹಸಿರನು ಬೆಳಸಿ
ಬಂಗಾರದ ಬೆಳೆಯನು ಬೆಳೆದು
ಜಗಕೆ ಅನ್ನವ ನೀಡುವ ನನ್ನಿಂದೀನ
ಪರಿಸ್ಥಿತಿಯನ್ನು

ನೋಡಿರುವಿರಾ ? ಕೇಳಿರುವಿರಾ?
ವರುಣನ ಹಂಗನೊಂದನು ಹೊರತು
ಪಡಿಸಿ, ಇನ್ನಾರಲ್ಲೂ ಕೈ ಚಾಚದ
ದುಡಿಯುವ ಕೈಗಳಿಗೆ ಕಂಕಣವ
ಕಟ್ಟಲು ಯಾರು ಒಪ್ಪುತ್ತಿಲ್ಲ‌
ಎಷ್ಟೋ ಮನೆಯ ಎಷ್ಟೋ
ಬಾಗಿಲುಗಳ ನಾ ತಟ್ಟಿ ಬಂದರೂ
ಅವರ ಮಗಳನ್ನು ಈ ಮಣ್ಣ ಮಗನಿಗೆ
ಧಾರೆಯರೆಯುವುದಿಲ್ಲವಂತೆ

ಕಾರಣ, ಅವಳ ಮಗಳು ಹೊಲದ
ಮೊಖವ ನೋಡಿಲ್ಲವಂತೆ, ಸಗಣಿಯ
ಪುಟ್ಟಿಯನೆತ್ತಿಲ್ಲವಂತೆ, ಸರಕಾರಿ
ನಲ್ಲಿಯ ನೀರನು ಹೊತ್ತು ತಂದಿಲ್ಲವಂತೆ
ಹೆಚ್ಚು ಓದಿರುವಳಂತೆ ಹೀಗೆ ಇಲ್ಲಸಲ್ಲದ
ಜೊಳ್ಳು ಕಂತೆಗಳ ಮೂಟೆಯನ್ನೇ ತೋರಿಸಿ
ಬಾಗಿಲನ್ನು ಹಾಕುತಿಹರು ನನ್ನನು ಹೊರದೂಡಿ
ಇನ್ನೂ ಕೆಲವರಂತೂ ನಾನು ಒಕ್ಕಲಿಗನೆಂದರೆ
ಸಾಕು ಕನ್ಯೆಯೆ ಇಲ್ಲವೆಂದು ಮುಖಕ್ಕೆ ಹೊಡೆದ
ಹಾಗೆ ಹೇಳಿಬಿಡುತ್ತಾರೆ

ನನಗೆ ಬೇಕಿರುವುದೊಂದು ಕನ್ಯೆ
ನನ್ನ ಕುಲವ ಹಬ್ಬಿಸಲು, ಭೂದೇವಿಯ
ಸೇವೆಯ ಗೈಯ್ಯುವದಕ್ಕಾಗಿ, ನಾಳೆ ನಾ
ಸತ್ತರೆ ಮಣ್ಣ ಮಾಡಲಿಕ್ಕಾದರೂ ಮಕ್ಕಳನ್ನು
ಹೇರುವುದಕ್ಕಾಗಿ
ನನ್ನ ಬರಗಾಲದ ಬದುಕಲ್ಲಿ ಚಿಗುರಾಗಿ
ಹಬ್ಬಲು, ನೋವಿನ ದಿನಗಳಲಿ ನಗೆಯ
ಅಮೃತ ಸಿಂಚನವ ಚೆಲ್ಲಲು
ನನಗೊಬ್ಬ ಕನ್ಯೆಯು ಬೇಕು

ಹುಡುಕಿ ಕೊಡುವಿರಾ ?
ನನ್ನ ಕನ್ನಡದ ಬಂಧುಗಳೆ

Saturday, April 1, 2017

ಗೋವು

ನಾನೇಕೆ ಇಲ್ಲಿಗೆ ಬಂದೆನೆಂದು
ಗೊತ್ತಿಲ್ಲದಿರುವುದೆ ನಿನಗೆ ?
ಗೊತ್ತಿದ್ದರೂ....
ಸುಮ್ಮನೆ ಕುಳಿತಿರುವೆ ಏಕೆ ?
ನಿನ್ನ ಹಾಗೆ ನನ್ನನು ಹಸಿವು
ಬಾಯಾರಿಕೆಯಿರದ ಶಿಲೆಯನ್ನಾಗಿ
ರೂಪಿಸಿದ್ದರೆ ಎಷ್ಟೊ ಸುಖವಿರುತ್ತಿತ್ತು
ಈ ಜಗದಲಿ

ನಿನಗೊ.. ಬರುವ ಭಕ್ತರು
ಉರಿ ಬಿಸಿಲಲಿ ಬೆಯುವೆಯೆಂದು
ಈಗೊ ಇಲ್ಲಿರುವೆರಡು ತಾಮ್ರದ
ಕೊಡಗಳಿಂದ ನಿನ್ನನು ಸ್ನಾನಿಸಿ
ತಂಪಗೈವರು, ಪೂಜಿಸುವರು
ತರತರದ ನೈವೇದ್ಯವ ಎಡೆಗೈವರು

ನೋಡು ನನ್ನತ್ತ ಒಮ್ಮೆ...
ನನ್ನ ನೇಗಿಲೊಡೆಯನು
ಹೊಲಗದ್ದೆಗಳಲಿ ಮೇವಿಲ್ಲವೆಂದು
ಕೊಟ್ಟಿಗೆಯಲಿ ಕಟ್ಟಿ ಸಾಕಲಾಗದೆಂದು
ಅಂಬಾ.... ಎಂಬ ಎನ್ನೊಡಲ ಹಸಿವಿನ
ಕೂಗನು ಕೇಳಲಾಗದೆ
ಕಲ್ಲೆದೆಯ ಮಾಡಿ ಕಟುಕನಿಗೆ ಕತ್ತರಿಸಲು
ಮಾರಲಾಗದೆ
ಕೈ ಬಿಟ್ಟಿಹನು ನನ್ನನು ನೀರಿಲ್ಲದೆ ಒಣಗಿ
ಮಲಗಿದ ಕೆರೆಯ ದಂಡೆಯಲಿ

ಮೇವಿಗಾಗಿ ಅಲೆದು ಅಲೆದು
ನೀರಿಗಾಗಿ ತಪತಪಿಸಿ ಹಪಹಪಿಸಿ
ಕಾಲುಗಳು ಬಲವಿಲ್ಲದೆ ನಿತ್ರಾಣಗೊಂಡು
ಬಂದು ಕುಳಿತಿರುವೆ ನಿನ್ನೆದುರಿಗೆ
ಪ್ರಾರ್ಥಿಸು ಆ ನಿನ್ನ ಶಿವನಲ್ಲಿ
ನಾಕು ಹನಿ ಅಮೃತವೆಂಬ ಮಳೆಯ
ಸಿಂಚನವಗೈಯಲಿ ಧರೆಗೆ

ಇಲ್ಲದಿದ್ದರೆ...
ಹಸಿವು ಬಾಯಾರಿಕೆಯಿಂದ ಬಳಲಿ
ಸಾಯುತ್ತಿರುವ ಈ ನನ್ನ ದೇಹಕೆ
ಮುಕ್ತಿಯ ನೀಡಲಿ, ಮುಂದಿನ ಜನ್ಮದಲಿ ನಿನ್ನಂತೆ
ನನ್ನನ್ನೂ ಕಣ್ಣೀರಿಟ್ಟರು ಕರಗದ
ಶಿಲೆಯಂತಾಗಿಸಲಿ

ಯುಗಾದಿ ತಗಾದಿ

ಬಂದಿದೆ ಯುಗಾದಿ
ಈ ವರ್ಷವಾದರೂ
ಯಾರೊಂದಿಗೂ ತಗೆಯದೆ
ಇರೋಣ
ತಗಾದಿ