Thursday, May 25, 2017

ರಾಜಕುಮಾರ


ಮುದ್ದು ಮುಖದ ಸುಕುಮಾರ
ನಮ್ಮ ಸಹೋದರಿಯ ಮುದ್ದಿನ ರಾಜಕುಮಾರ
ನಿನ್ನ ನಗುವ ಮೋಡಿಗೆ ಸೋಲದೆ
ಇಲ್ಲವಲ್ಲ... ನಿನೆಂಥ ಸರದಾರ
ನಿನ್ನ ದುಂಡು ಮೊಗವ ಕಂಡ ಹೆಂಗಳೆಯರ
ಮನದಲಿ ಉಕ್ಕಿ ಬರದೆ ಇರುವುದೆ
ಪ್ರೀತಿಯ ಮಮಕಾರ

ಪುಟ್ಟ ಪುಟ್ಟ ಹೆಜ್ಜೆಗಳ ಹಾಕುತ ಓಡಾಡುವ
ಬಾಲ ಚಂದಿರ
ಆಗಾಗ ಅಳದಿರು ನೀನು ಜೋಕುಮಾರ
ನೀನೆ ನಮ್ಮ ಭಾವನವರ ಮುದ್ದಿನ
ಕೃಷ್ಣಕುಮಾರ
ನಮ್ಮೆಲ್ಲರ ಮನವ ಗೆದ್ದ ಸಾಹುಕಾರ
ಆ ದೇವರ ಹಾರೈಕೆ ಸದಾ ನಿನ್ನ ಮೇಲಿರಲೊ..
ನಮ್ಮ ಮುದ್ದಿನ ರಾಜಕುಮಾರ

Wednesday, May 24, 2017

ಅನಾಥರು..

ಅನಾಥರು ನಾವು ಅನಾಥರು
ಹರೆಯದ ವಯಸಲಿ ಎಡವಿದ
ತಪ್ಪಿಗೆ.. ಅವರು ಮಾಡಿದ ರಾತ್ರಿಗಳ
ಪಾಪಕ್ಕೆ... ಹುಟ್ಟಿದ ಪಾಪದ ಪಾಪುಗಳು

ಜೀವವನಿತ್ತ ಪರಮಾತ್ಮನು ಕರುಣಿಸೆ
ಯಾರದೊ ಜೋಳಿಗೆಯ ಪಿಂಡಗಳಾಗುವೆವು
ಇಲ್ಲವೊ ಬೀದಿ ನಾಯಿಗಳ ಬಾಯಿಗೆ ಸಿಕ್ಕ
ಮಾಂಸದ ಉಂಡೆಗಳಾಗುವೆವು...

ನಮ್ಮ ಅಳುವೆ ನಮಗೆ ಜೋಗುಳ
ತೂಗುವವರಿಲ್ಲ... ಲಾಲಿಸುವವರಿಲ್ಲ..
ಹಸಿದಿಹೆ... ಎಂದು ಎತ್ತಿ ಎದೆಹಾಲ
ಕೊಡುವವರಿಲ್ಲ... ಕೆನ್ನೆಗೆ ಮೆತ್ತಿದ
ಕಣ್ಣೀರಿನ ಉಪ್ಪನು ಒರೆಸುವರಿಲ್ಲ..

ಚಳಿಯೆಂದು ಹೊದಿಸುವರಿಲ್ಲ..
ಮಳೆಯೆಂದು ಕೊಡೆ ಹಿಡಿಯದವರಿಲ್ಲ.
ಬಿಸಿಲೆಂದು ಕುಡಿಯಲು ನೀರು ಕೊಡುವವರಿಲ್ಲ
ಹಸಿವೆಂದು ಬೇಡಿದರು... ಕರೆದು ಕೂಳು
ಹಾಕುವರಿಲ್ಲ..

ಅನಾಥರು... ಸ್ನಾನದ ಹೆಸರನು
ಕೇಳದ ಗೊಬ್ಬು ನಾರುವ ನಾಥರು...
ಊರಿಲ್ಲ... ಸೂರಿಲ್ಲ... ನೆಲೆಯಿಲ್ಲ
ಬೇಡಿದ್ದೆ ಊರು.. ಮಲಗಿದ ನೆರಳೆ
ಸೂರು... ದಣಿವಾರಿಸಲು ಕುಳಿತ
ಸ್ಥಳವೆ.. ನೆಲೆಯು..

ಓಡಾಡುವ ರಸ್ತೆಗಳಲಿ ಗಾಡಿಗಳು
ಗುದ್ದಿ ಹೋದರು... ರಾತ್ರಿ ಮಲಗಿದಾಗ
ನಿದ್ರೆ ಮಂಪರು ಬರಿಸಿ...ಅಂಗಾಂಗಗಳ
ಕಿತ್ತುಕೊಂಡು ಹೋದರು.. ಕೆಲಸಕ್ಕಿರುವ
ಮನೆಯಲ್ಲಿ ಹೊಡೆದು ಬಡೆದು..ಲೈಂಗಿಕ
ಕಿರುಕುಳ ಕೊಟ್ಟರು.. ನಮ್ಮನ್ನಾರೂ..
ಕೇಳದ.. ಲೆಕ್ಕಿಸದ ಅನಾಥರು...

ಸುಸಂಸ್ಕೃತರ ನಾಡಿನಲಿ ಅಸಂಸ್ಕೃತರು
ಮಾಡಿದ ಗಲೀಜು ನಾವು...ವಯಸ್ಸಿನ
ಅಮಲಿನಲಿ.. ಹಣದ ಮೋಹಕ್ಕೊಳಗಾಗಿ
ಶೋಕಿಗಾಗಿ ಸಂಸ್ಕೃತವಂತರು ಮಾಡಿದ
ಲಜ್ಜೆಗೇಡಿತನಕ್ಕಾಗಿ... ನಿಮ್ಮ ಸುಸ್ವಸ್ಥವಾದ
ಸಮಾಜದಲ್ಲಿ ಗೊಬ್ಬು ನಾರುವ
ಅ....ನಾಥರು..

ನಾಚಿ ನಿಲ್ಲದಿರು ಹೀಗೆ

ನಾಚಿ ನಿಲ್ಲದಿರು ಹುಡುಗಿ ಹೀಗೆ
ಎದೆಬಡಿತವ ತಡೆಹಿಡಿಯಲಾದರೂ
ಹೇಗೆ.. ಮಿಟುಕಿಸೊಮ್ಮೆ ಆ ಜೋಡಿ
ಜಿಂಕೆ ಕಂಗಳ.. ಮಿಡಿಯಲಿ ಹೃದಯವಿದು
ನಿನ್ನ ಹೆಸರಿಗೆ

ನೋಡಿಲ್ಲಿ ನಿನ್ನ ನಗುವ ಮೋಹಕತೆಗೆ
ಎಷ್ಟು ಸುಮಗಳು ಅರಳಿ.... ಉದುರಿ
ಬಿದ್ದಿವೆ ನಿನ್ನ ದಾರಿಗೆ ...
ಬೀಸಿ ಬರುವ ಗಾಳಿಯು ನಿನ್ನ
ಮೈ ಗಂಧವ ಸೂಸಿ ತಂದಿದೆ
ಸುಮಗಳೆದೆಯ ಗಂಧವನು
ನಾಚಿಸಿದೆ.. ನನ್ನ ಕನಸುಗಳನ್ನೆ
ಬಂಧಿಸಿಬಿಟ್ಟಿದೆ..

ತೋರು ಮಗದೊಮ್ಮೆ ಆ
ನಿನ್ನ ನಗೆ.. ಬಂಧಿಯಾಗಿಬಿಡಲಿ
ಮನವು ನಿನ್ನೊಲವಿನಾ ನಗುವಿಗೆ

ಯಾರು ಹಿತವರು

ನನ್ನ ತಿಳುವಳಿಕೆಗೆ ನಿಲುಕಿದಷ್ಟು
ಅಲ್ಲಿ ಇಲ್ಲಿ ಓದಿ.. ಅವರಿವರು ಹೇಳಿ
ಕೇಳಿದ್ದಷ್ಟು ಇಲ್ಲಿ ಬರೆಯುತ್ತಿದ್ದೇನೆ ಮತ್ತು
ಈ ಬರಹಕ್ಕೆ ನಾನೆ ಹೊಣೆಗಾರನಾಗಿರುತ್ತೇನೆ...

ರಾಮ...
ಕೈಕೆಯ ಮಗನ ಸಿಂಹಾಸನದ ಮೋಹದಾಸೆಗಾಗಿ
ದಶರಥನಿತ್ತ ಎರಡು ವರವ ಸದ್ವಿನಿಯೋಗಪಡಿಸಿಕೊಂಡಳವಳು ಪಟ್ಟಗಟ್ಟುವಲ್ಲಿ
ಮದುವೆಯ ಹೊಸತನದ ಸವಿಯ ಸೀತೆಯ
ಜತೆ ಸವಿಯಬೇಕೆಂದಾಗಲೆ.. ಮಲತಾಯಿಯ
ವಚನಕ್ಕೆ ಸೋತ ತಂದೆಯ ಮಾತಿಗೆ ನಡೆದನವನು
ಕಾಡಿಗೆ... ಕೈಕೆಯ ಮನದ ಮೋಸಕೆ ಎಲ್ಲ ಸುಖವನಿದ್ದೂ
ಕಾನನ ವಾಸಕೆ ನವದಂಪತಿಗಳು ನಡೆದರೆ ಅಣ್ಙನಿಲ್ಲದೆ
ನಾನಿಲ್ಲ ಎಂದ ಲಕ್ಷ್ಮಣ ಉತ್ತರಕ್ಕೆ.. ಇದಾವುದರ ಪರಿವೆಯೆ
ಇಲ್ಲದ ಊರ್ಮಿಳೆಗೆ ಗಂಡನಿಲ್ಲದ ವನವಾಸ ನರಕದರಮನೆಯ ಸೆರೆವಾಸ..
ಶೂರ್ಪನಖಿಯು ಕಾಮದಾಸೆಗಾಗಿ ನಖವ ಕತ್ತರಿಸಿಕೊಂಡಳು
ಲಕ್ಷ್ಮಣನಿಂದ.. ಇದರ ಸೇಡಿನ ಕಾವಿಗಾಗಿ ಬಂದ
ರಾವಣನು ಹೊತ್ತೊಯ್ದುದ್ದು ಸೀತೆಯನು.. ಎಲ್ಲ
ಬಿಟ್ಟು ಬಂದು ಕಾನನದಲ್ಲಾದರೂ ಬಾಳ ಸವಿಯ ಸವಿಯಬಹುದೆಂದಿದ್ದ ರಾಮನಿಗೆ ಇಲ್ಲೂ ಅವಳಗಲಿಕೆಯ
ಆಘಾತ.. ಮನಮೆಚ್ಚಿದ ಮಡದಿ ಇನ್ನೊಬ್ಬರ ಬಂಧನದಲ್ಲಿರಲು ಯಾರು ಅರಿಯರು ಅವನ ಮನದ
ತಳಮಳವ..
ರಾಜನಾಗಿ.. ರಾಜಧರ್ಮವ ನಿಭಾಯಿಸಲು ಮಡದಿಯನ್ನು
ಕಾಡಿಗೆ ಕಳುಹಿಸಿದನು.. ಒಬ್ಬಳನ್ನ ಕಾಡು ಮೃಗಗಳಿರುವ
ಭೀಕರ ಅರಣ್ಯಕ್ಕೆ ಕಳುಹಿಸಿ ಹೇಗಿದ್ದನೊ ಅವಳಿಲ್ಲದ ವಿರಹವ ಸಹಿಸಿಕೊಂಡು..

ಬುದ್ಧ...
ಸದಾ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿದ ರಾಜನು
ಮುದಿತನ.. ರೋಗಗ್ರಸ್ಥ.. ಸಾವನ್ನು ಕಂಡು ವೈರಾಗಿಯಾದವನು ಇವನ ಬದುಕಿನಲ್ಲಿ ಹೆಣ್ಣು ಹೊನ್ನು ಮಣ್ಣು ಕೇವಲ ಇವನಿಗೆ ವೈರಾಗ್ಯ ತೋರಲು ನೆಪವಾದವುಗಳಷ್ಟೇ.. ವಿಶ್ವಕ್ಕೆ ಶಾಂತಿಯ ಮಂತ್ರವ
ಸಾರಿದನವನು ಬುದ್ದಿಯಿಲ್ಲದವರಿಗೆ ಬೌದ್ಧಿಕ ಬುದ್ದಿಯ
ಸಾರುವಂತವನಾದವನು

ಬಸವಣ್ಣ...
ಇವನ ಕ್ರಾಂತಿ ಬಂಡಾಯವೆದ್ದಿದ್ದೆ ಮನೆಯಂಗಳದಿಂದ
ಅವನಕ್ಕಳಿಗೂ ಉಪನಯನವ ಮಾಡದಿದ್ದಾಗ ಸಿಡಿದೆದ್ದವ
ಮೊದಲು ಮಹಿಳೆಯರಿಗೆ ಸಮಾಜದಲ್ಲಿ ಗಂಡಸಿಗೆ
ಸಮಾನವಾದ ಸ್ಥಾನಮಾನವ ದೊರಕಿಸಿಕೊಟ್ಟವ..
ಪ್ರತಿಯೊಂದು ಹೆಣ್ಣಿನಲ್ಲೂ ತಾಯಿ ರೂಪವ ಕಂಡವನು
ಇಬ್ಬರು ಸತಿಯರನ್ನು ಎರಡು ಕಣ್ಣುಗಳಂತೆ ಕಂಡವನು
ವಚನ ಸಾಹಿತ್ಯದಲ್ಲಿ ಮಹಿಳೆಯರನ್ನು ಗುರುತಿಸಿ ಅಕ್ಷರ
ಜ್ಞಾನದಿಂದ.. ಕಾಯಕದ ಕಾರ್ಯದಿಂದ ಎತ್ತಿ ಹಿಡಿದವನು
ಮಹಾ ಮಾನವತಾವಾದಿಯಾದವನು ಬಸವಣ್ಣ..

ಈ ತ್ರಿವಳಿಗಳು ಆಯಾ ಕಾಲಕ್ಕೆ.. ತಕ್ಕಂತೆ ಬದುಕಿನ
ವಿರುದ್ಧ ಹೋರಾಡಿದವರೆ ಜಗದಲಿ ತುಂಬಿದ
ಅಜ್ಞಾನ ಮತ್ತು ಕಾಮದ ವಿರುದ್ದ ಹೋರಾಡಿದವರೆ
ಇನ್ನೂ ಇವರು ಮೂವರಲ್ಲಿ ನಿಮಗೆ ಹಿತವರಾರು
ಎಂದೊಡೆ ನಾನೇನ ಹೇಳಲಿ... ಕಳಕಮಲ್ಲಯ್ಯ..

ನಾರಿ ಒಲಿದರೆ

ಇದೊಂದು ಜಠಿಲವಾದ...
ಎಂದೂ ಬಗೆಹರಿಯದ..ಇತ್ಯರ್ಥವೆ
ಕಾಣದಂತಹ ಬಹುದೊಡ್ಡ ಸಮಸ್ಯೆ

ಅವಳಂದಕೆ ಹೋರಾಡಿದವರು..
ಕಳೆದುಕೊಂಡರು ಪ್ರಾಣವನು...ಅಳಿಸಿ
ನಿರ್ನಾಮವಾಗಿ ಹೋದವು ಸಾಮ್ರಾಜ್ಯಗಳು
ಎಷ್ಟೊ... ಅಮಾಯಕ ಸೈನಿಕರ ನೆತ್ತರಿನ
ಕಾಲುವೆಗಳೆ ಹರಿದುಬಿಟ್ಟವು... ಲೆಕ್ಕವಿಲ್ಲದಷ್ಟು
ಸಿಂಧೂರದ ಹಣೆಗಳು ಬಂಡೆಯಾಗಿಬಿಟ್ಟವು..
ಸ್ನೇಹಿತನ ಹೊಟ್ಟೆಯನೆ ಸೀಳಿಬಿಟ್ಟವು ಚಾಕುಗಳು
ಅವಳ ಅಂದದ ಅರಮನೆಯ ಬಯಸಿ..

ಅವಳಂತರಂಗವನರಿತವರು.. ಕಟ್ಟಿದರು
ಅವಳು ಅಳಿದು ಹೋದರು ಅವಳ ನೆನಪು
ಮಾಸದಂತೆ ಬೇಲೂರಿನ ಶಿಲಾಬಾಲಿಕೆಗಳಾಗಿ
ಸ್ನಿಗ್ಧ ಸೌಂದರ್ಯದ ಕುರುಹುವಾಗಿ ತಾಜಮಹಲನು
ರವಿವರ್ಮನ ಚಿತ್ರಪಟಗಳಲಿ... ಚಿತ್ರಿಸಿದರು
ಮೈಸೂರು ಮಲ್ಲಿಗೆಯ ಕಾವ್ಯದಲಿ..
ಬೇಂದ್ರೆಯವರ ಭಾವದ ಸಾಲುಗಳಲಿ
ಕುವೆಂಪುರವರ ಪ್ರೇಮಕಾಶ್ಮೀರದ
ಪುಸ್ತಕದಲಿ ಬರೆದಿಟ್ಟಿರುವರು

ಈ ಇಪ್ಪತ್ತೊಂದನೆ ಶತಮಾನದಲ್ಲಿ...ತಾಂತ್ರಿಕತೆಯ
ಉತ್ತುಂಗದ ಹೊಸ್ತಿಲಲಿ ....ಅವಳ ದಾಸ್ಯವ ಅವಳೆ
ತೊಡೆದುಕೊಳ್ಳಬೇಕು... ಹಾಸ್ಯ ಮಾಡುವ
ಬಾಯಿಗಳ ಮುಚ್ಚಿಸಬೇಕು.. ಮನವನರಿಯದ
ಕಟುಕರೆದೆಯ ಮೇಲೆ ಕಾಳಿಯಂತೆ ನರ್ತಿಸಬೇಕು
ಅವರ ಮನದಲೂ ಪ್ರೀತಿಯ ಗರಿಕೆಯ ಬೆಳೆಸಬೇಕು
ನಾರಿ... ನೀ ಒಲಿದರೆ ನಾರಿ
ಮುನಿದರೆ... ಮಾರಿ ಎಂಬ ನಾಣ್ಣುಡಿಯ
ನಿಜವಾಗಿಸಬೇಕು..

Tuesday, May 23, 2017

ಶರಣುದಾಸ ನಾನು

ನಿನ್ನ ರಂಗೇರಿದ ಕೆನ್ನೆಯ ಕಂಡು
ಕಾಶ್ಮೀರದ ಸೇಬದು... ನಾಚಿದೆ

ನಿನ್ನ ಅಧರಮೃತದ ಸವಿಗೆ ಸುರೆಯ
ಸುಧೆಯೆ ಸಾಟಿಯಾಗದಂತಾಗಿದೆ..

ನಿನ್ನ ಹೊಳೆಯುವ ಕಂಗಳಿಗೆ
ಜಿಂಕೆಯ ನಯನಗಳೆ...ನಾಚಿವೆ

ನಿನ್ನ ಸುಶ್ರಾವ್ಯದ ಗೀತೆಗೆ ಶಾರದೆಯ
ವೀಣೆಯು ಮೀಡಿಯದೆ ಮೌನತಾಳಿದೆ

ನಿನ್ನ ನಡುವ ನಡೆಯ ಸೊಬಗ ಕಂಡು
ಬಳ್ಳಿ ಅಳುಕಿ ಬಳುಕಿ ತರುವನಪ್ಪಿದೆ

ನಿನ್ನ ದೇಹ ಸಿರಿಯ ವೈಭವವ ಕಂಡು
ರಸಿಕಲೋಕವೆ ಕಾದ ಉಂಡೆಯಾಗಿದೆ

ನನ್ನಂತರಂಗಕೆ ನಿನ್ನ ಕೈ ಹಿಡಿದು
ಕರೆತರಲು ಮನವು ಕಾತರಿಸುತಿದೆ..

ಯಾವ ಕವಿಯ ಕಾವ್ಯದ ಕಲ್ಪನೆಯೊ..
ಅದಾವ ಶಿಲ್ಪಿಯ ಕೈಯೊಳಗೆ ಮೂಡಿದ ಶಿಲೆಯೊ..

ನನ್ನ ಬದುಕಿನ ಉಸಿರು ನೀನು
ನಿನ್ನ ಪ್ರೀತಿಗೆ ಶರಣಾದ... ಶರಣುದಾಸ
ನಾನು..

ಈ ಹರೆಯದ ಹೃದಯಕೆ

ಓ... ಗೆಳತಿ ನಿನಗೆಂದೆ
ತುಂಬಿ ಬಂದಿದೆ ಹರೆಯ..
ನಿನ್ನ ಪ್ರೀತಿಯ ಬಯಸಿ
ಓಡೊಡಿ ಬಂದಿದೆ ಹೃದಯ

ಕಡಲಲೆಗಳಂತೆ ತೇಲಿ ತೇಲಿ
ಬರುತಲಿವೆ ನೂರಾರು ಕನಸುಗಳು
ಗಿರಿಶೃಂಗದಿಂದ ಜಾರಿ ಚಿಮ್ಮಿ...ಚಿಮ್ಮಿ..
ಧುಮಕಿ ಬರುತಿರೆ ಭಾವಗಳು

ನಿನ್ನ ಆಲಿಂಗನದ ಆಸೆಗಾಗಿ
ಕಾದಿಹೆ ನನ್ನೆರಡು ತೋಳುಗಳು
ಎದೆಯುಸಿರ ಬಿಸಿಯ ಸೋಕಿಸಿಕೊಳ್ಳಲು
ಉಸಿರುಗಟ್ಟಿ ನಿಂತಿವೆ ನರನಾಡಿಗಳು

ಸಾಕು ಸಾಕಾಗಿದೆ ನೀನಿಲ್ಲದೆ
ಕಳೆದ ವಿರಹದ ಕ್ಷಣಗಳನು
ತಂದು ಹರಿಸಿಬಿಡು ಈ ದಿನಗಳಿಗೆ
ತುಂಬು ಪ್ರೀತಿಯ ಚಿಲುಮೆಯನು

ಹರಿದು ಬಾ ಝರಿಯಂತೆ
ಎದೆಯ ಕೊಳವ ತುಂಬಲು
ಬೀಸಿ ಬಾ ತಂಗಾಳಿಯಂತೆ
ಮನದ ಬಯಕೆಯ ತೀರಿಸಲು

ಹೂವು ಎಲ್ಲಿದ್ದರೇನು...
ದುಂಬಿಗದರ ಇರವು ಅರಿಯದೆ
ನಿನ್ನ ಪ್ರೀತಿಯ ಅರಿವು ನನಗಿದೆ
ನನ್ನ ಪ್ರೀತಿಯ ಅರಿತು ಬರಬಾರದೆ
ಈ ಹರೆಯದ ಹೃದಯಕೆ...