Sunday, May 28, 2017

ಚೆಲುವು

ನಿಜವಾಗಿಯೂ..

ನೋವುಗಳಲ್ಲಿಯೂ ಹುರುಪು
ತುಂಬುವ ನಿನ್ನ ನಗವು..

ಹೇಳುತಿದೆ..

ಇವೆಷ್ಟು ಕಷ್ಟಗಳು ನಿನಗೆ..
ಎದ್ದೇಳು ಮೊದಲು.... ಎನ್ನುತಿದೆ
ನಿನ್ನ ಚೆಲುವು..

Friday, May 26, 2017

ಏನಾಗಿದೆ ಮನಸೆ..

ಏನಾಗಿದೆಯೊ... ನಿನಗೆ ಮನಸೆ
ಮತ್ತೆ... ಮತ್ತೆ.. ಅವಳ ನೆನಪುಗಳ
ಕೊಳದಲ್ಲಿ ಜಿಗಿಯುವದೇಕೆ..ಈಜುವುದೇಕೆ..
ಎದ್ದು ಬಂದು ಬಿಡು ಸಾಕು....ಅದಲ್ಲ
ಒಲವಿನ ವರತೆ...

ಅವಳ ನೆನಪಿನ ಹೂಳನ್ನು
ಎಷ್ಟೇ....ಎತ್ತಿ ಹೊರಹಾಕಿದರೂ...
ಕಳೆದ ದಿನಗಳ ನೋವಿನ ನೀರು
ಮತ್ತೆ ಜಿನಗುವುದಲ್ಲ....ದುಃಖದ
ಮಡುವದು ಮತ್ತೆ ತುಂಬುವದಲ್ಲ..
ಅವಳಿಲ್ಲ ಇನ್ನೂ ನನ್ನ ಬಾಳಲ್ಲಿ ಎನ್ನುವ
ಹೂಳು ಹೊರಳಿ.. ಮರಳಿ.. ತುಂಬಿ
ಬರುವುದಲ್ಲ..

ನೆನಪೆ ಏಕೆ ಮನದ ನೆತ್ತಿಯ
ಹತ್ತಿ ಕುಳಿತಿರುವೆ..
ಇಳಿದು ಬಾ ಸಾಕಿನ್ನು.... ಅವಳಿಗೆಂದೆ
ಎಷ್ಟೆಂದು ಸುರಿಸಲಿ ಕಣ್ಣೀರನು..
ತರಿಸಬೇಕಿದೆ.. ಅವಳ ಮರೆವೆಂಬ
ಮಳೆಯ ಹನಿಗಳನು... ಹರಿಸಬೇಕಿದೆ
ಮನದಿಂದ ವಿರಹದ ಕಾಲುವೆಯನು..
ಹಿಡಿದಿಡಬೇಕಿದೆ....ನವ ಬಾಳಿನ
ಚೈತನ್ಯವನು...ಚಿಮ್ಮಿಸಬೇಕಿದೆ
ಮತ್ತೆ ಬದುಕಿನ ಚಿಲುಮೆಯನು

ಪ್ರೇಮ ಗೀತೆ

ನಿನ್ನ ಮೊದಲ ನೋಟಕೆ
ನಾಚಿದ ರೆಪ್ಪೆಗಳು
ಕಣ್ಣ ಪುಟದಲಿ ಬರೆದವು
ನಿನ್ನೊಲವ ಕವಿತೆಯನು

ನಿನ್ನ ಮೊದಲ ಮಂದಹಾಸಕೆ
ಅರಳಿದ ಹೃದಯವು
ಮನದ ಪುಸ್ತಕದಲಿ ಬರೆದಿಟ್ಟಿದೆ
ಅದೇಷ್ಟೊ... ಪ್ರೇಮ ಗೀತೆಗಳನು

ನಿತ್ರಾಣ

ಹಂಸದ ನಡಿಗೆ
ಮಲ್ಲಿಗೆ ಮುಡಿಗೆ
ಬಿಂಕದ ಗಡಿಗೆ

ಮಾತು ಮತ್ತು
ಕೇಳೆ ಮುತ್ತು
ನಾಚಿಲ್ಲ ಯಾವತ್ತೂ

ಮನೆಗೆ ಒಡತಿ
ಮನಕೆ ಗೆಳತಿ
ಬಾಳ ಪ್ರಣತಿ

ಅವಳು ಮೇಣ
ನನ್ನೆದೆಯ ಪ್ರಾಣ
ಅವಳಿಲ್ಲದೆ ನಾ ನೀತ್ರಾಣ

Thursday, May 25, 2017

ಮರಳು ಮರಳಾಗಿ

...ಗಂಧದ ನಾಡಿನ ಚಂದನದ ಚೆಲುವೆ
ಏಕೆ ಬೇಕು ನಿನಗೆ.. ಒಡವೆಗಳ ಗೊಡವೆ
ಮೈ ಕಾಂತಿಯೆ ಮಂಕಾಗಿಸಿರುವುದು
ಆಭರಣಗಳ ಸಾಕಿಲ್ಲವೆ...

ಏನು.. ತಿಳಿಕೊಳದೊಳರಳಿನಿಂತ
ಕಮಲದಂತಹ ನಯನಗಳೊ...
ತೊಂಡೆ ಹಣ್ಣುಗಳೆ ನಾಚಿ ನೀರಾಗಿ
ಉದುರಿ ಬೀಳುವಂತೆ... ಕೆಂಪೆರಿರುವ
ಕೆಂದುಟಿಗಳೊ...
ಹೂವಿನ ಬಾಣಗಳ ಹೂಡಿ.. ನೋಡುಗರ
ಎದೆಯನೆ ಸಿಳ್ಳುವಂತೆ ಮೂಡಿರುವ
ಕರಿ ಹುಬ್ಬುಗಳೊ...
ಮೇಣದೊಳು.. ಕಾಮಧೇನುವಿನ
ಬೆಣ್ಣೆಯ ಬೆರೆಸಿ.. ದೇಹ ಸಿರಿಯ ತಿದ್ದಿ
ತಿಡಿ ನಿಲ್ಲಿಸಿದ ಗೊಂಬೆಯೊ...

ನಿನ್ನ ನಗುವ ನೋಟದ ಈ ಬಿಂಕಕೆ
ಕಲ್ಲು ಹೃದಯವು ಹದವಾದ ಮಣ್ಣಾಗಿ
ನಿನ್ನ ಪ್ರೀತಿಯ ತುಂಬಿಸಿಕೊಳ್ಳುಲು ...
ಚಡಪಡಿಸುವ ಮಡಿಕೆಯಾಗುವುದೊ...
ಮರಳುಗಾಡಿನಲಿ ನಿನ್ನೊಲವಿನ
ಮಳೆಯೆಂಬ ಹನಿ ಹನಿಗಾಗಿ ಕಾಯುವ
ಮರುಳಾಗುವುದೊ... ಇಲ್ಲವೆ ನಾನೆ..
ಮರಳು ಮರಳಾಗಿ.. ಮರುಳಾಗಿ ಬಿಡುವೆನೊ....

ರಾಜಕುಮಾರ


ಮುದ್ದು ಮುಖದ ಸುಕುಮಾರ
ನಮ್ಮ ಸಹೋದರಿಯ ಮುದ್ದಿನ ರಾಜಕುಮಾರ
ನಿನ್ನ ನಗುವ ಮೋಡಿಗೆ ಸೋಲದೆ
ಇಲ್ಲವಲ್ಲ... ನಿನೆಂಥ ಸರದಾರ
ನಿನ್ನ ದುಂಡು ಮೊಗವ ಕಂಡ ಹೆಂಗಳೆಯರ
ಮನದಲಿ ಉಕ್ಕಿ ಬರದೆ ಇರುವುದೆ
ಪ್ರೀತಿಯ ಮಮಕಾರ

ಪುಟ್ಟ ಪುಟ್ಟ ಹೆಜ್ಜೆಗಳ ಹಾಕುತ ಓಡಾಡುವ
ಬಾಲ ಚಂದಿರ
ಆಗಾಗ ಅಳದಿರು ನೀನು ಜೋಕುಮಾರ
ನೀನೆ ನಮ್ಮ ಭಾವನವರ ಮುದ್ದಿನ
ಕೃಷ್ಣಕುಮಾರ
ನಮ್ಮೆಲ್ಲರ ಮನವ ಗೆದ್ದ ಸಾಹುಕಾರ
ಆ ದೇವರ ಹಾರೈಕೆ ಸದಾ ನಿನ್ನ ಮೇಲಿರಲೊ..
ನಮ್ಮ ಮುದ್ದಿನ ರಾಜಕುಮಾರ

Wednesday, May 24, 2017

ಅನಾಥರು..

ಅನಾಥರು ನಾವು ಅನಾಥರು
ಹರೆಯದ ವಯಸಲಿ ಎಡವಿದ
ತಪ್ಪಿಗೆ.. ಅವರು ಮಾಡಿದ ರಾತ್ರಿಗಳ
ಪಾಪಕ್ಕೆ... ಹುಟ್ಟಿದ ಪಾಪದ ಪಾಪುಗಳು

ಜೀವವನಿತ್ತ ಪರಮಾತ್ಮನು ಕರುಣಿಸೆ
ಯಾರದೊ ಜೋಳಿಗೆಯ ಪಿಂಡಗಳಾಗುವೆವು
ಇಲ್ಲವೊ ಬೀದಿ ನಾಯಿಗಳ ಬಾಯಿಗೆ ಸಿಕ್ಕ
ಮಾಂಸದ ಉಂಡೆಗಳಾಗುವೆವು...

ನಮ್ಮ ಅಳುವೆ ನಮಗೆ ಜೋಗುಳ
ತೂಗುವವರಿಲ್ಲ... ಲಾಲಿಸುವವರಿಲ್ಲ..
ಹಸಿದಿಹೆ... ಎಂದು ಎತ್ತಿ ಎದೆಹಾಲ
ಕೊಡುವವರಿಲ್ಲ... ಕೆನ್ನೆಗೆ ಮೆತ್ತಿದ
ಕಣ್ಣೀರಿನ ಉಪ್ಪನು ಒರೆಸುವರಿಲ್ಲ..

ಚಳಿಯೆಂದು ಹೊದಿಸುವರಿಲ್ಲ..
ಮಳೆಯೆಂದು ಕೊಡೆ ಹಿಡಿಯದವರಿಲ್ಲ.
ಬಿಸಿಲೆಂದು ಕುಡಿಯಲು ನೀರು ಕೊಡುವವರಿಲ್ಲ
ಹಸಿವೆಂದು ಬೇಡಿದರು... ಕರೆದು ಕೂಳು
ಹಾಕುವರಿಲ್ಲ..

ಅನಾಥರು... ಸ್ನಾನದ ಹೆಸರನು
ಕೇಳದ ಗೊಬ್ಬು ನಾರುವ ನಾಥರು...
ಊರಿಲ್ಲ... ಸೂರಿಲ್ಲ... ನೆಲೆಯಿಲ್ಲ
ಬೇಡಿದ್ದೆ ಊರು.. ಮಲಗಿದ ನೆರಳೆ
ಸೂರು... ದಣಿವಾರಿಸಲು ಕುಳಿತ
ಸ್ಥಳವೆ.. ನೆಲೆಯು..

ಓಡಾಡುವ ರಸ್ತೆಗಳಲಿ ಗಾಡಿಗಳು
ಗುದ್ದಿ ಹೋದರು... ರಾತ್ರಿ ಮಲಗಿದಾಗ
ನಿದ್ರೆ ಮಂಪರು ಬರಿಸಿ...ಅಂಗಾಂಗಗಳ
ಕಿತ್ತುಕೊಂಡು ಹೋದರು.. ಕೆಲಸಕ್ಕಿರುವ
ಮನೆಯಲ್ಲಿ ಹೊಡೆದು ಬಡೆದು..ಲೈಂಗಿಕ
ಕಿರುಕುಳ ಕೊಟ್ಟರು.. ನಮ್ಮನ್ನಾರೂ..
ಕೇಳದ.. ಲೆಕ್ಕಿಸದ ಅನಾಥರು...

ಸುಸಂಸ್ಕೃತರ ನಾಡಿನಲಿ ಅಸಂಸ್ಕೃತರು
ಮಾಡಿದ ಗಲೀಜು ನಾವು...ವಯಸ್ಸಿನ
ಅಮಲಿನಲಿ.. ಹಣದ ಮೋಹಕ್ಕೊಳಗಾಗಿ
ಶೋಕಿಗಾಗಿ ಸಂಸ್ಕೃತವಂತರು ಮಾಡಿದ
ಲಜ್ಜೆಗೇಡಿತನಕ್ಕಾಗಿ... ನಿಮ್ಮ ಸುಸ್ವಸ್ಥವಾದ
ಸಮಾಜದಲ್ಲಿ ಗೊಬ್ಬು ನಾರುವ
ಅ....ನಾಥರು..