Sunday, June 18, 2017

ಬಾಳಿನ ಗೂಡು

ನನ್ನವಳ
ನಗೆಯಲೊಂದು ಮಿಂಚಿಹುದು
ಮನದ ಮೌನಕೆ
ನವಿರಾದ
ಮಾತುಗಳ ಕಲಿಸುವುದು

ನನ್ನವಳ
ತೋಳಿನಲ್ಲಿವುದು
ಬದುಕಿನ ಜಂಜಾಟಗಳ
ಮರೆಸಿ
ಸ್ವರ್ಗವ ತೋರಿಸುವುದು

ನನ್ನವಳ
ಮಾತಿನಲ್ಲುಂಟು
ಸುಮದೆದೆಯ ಘಮವು
ಮೋಹಕವಾಗಿ
ಸೆಳೆಯುವ ನುಡಿಗಳಿಹುದು

ನನ್ನವಳ
ಕಾಲ್ಗೆಜ್ಜೆಯಲ್ಲಿಹುದು
ಎದೆಯ ವೀಣೆಯ ಮೀಟಿ
ಒಲವಿನ
ರಾಗವ ನುಡಿಸುವುದು

ನನ್ನವಳ
ಜೊತೆಯೊಂದಿಗಿನ
ಬದುಕಲುಂಟು ಸವಿಜೇನ
ತುಂಬಿದ
ಬಾಳಿನ ಗೂಡು

ಅಪ್ಪನಿಗೊಂದು ದಿನ

ಅಪ್ಪನಿಗೊಂದು ದಿನವಂತೆ....

ಈ ಭರತಖಂಡದಲ್ಲಿ.... ಈ ಪುಣ್ಯಭೂಮಿಯಲ್ಲಿ
ಹೆತ್ತ ತಪ್ಪಿಗೆ... ಸಾಕಿ ಸಲುಹಿ.. ಎದೆಯುದ್ದ ಬೆಳಸಿ
ನೌಕರಿಯೊ.. ಸ್ವಂತ ಉದ್ಯೋಗವೊ... ಒಕ್ಕಲುತನ
ವನ್ನು ಹೀಗೆ ದುಡಿದುಣ್ಣಲು ಹಚ್ಚಿ... ಬದುಕಿನ ಬಂಡಿಗೆ
ಒಂದು ತುಂಬು ಸಂಸಾರದ ಹೆಣ್ಣನ್ನು ತಂದು...ನಿನಗೆ
ಜೋಡಿಯನ್ನಾಗಿಸಿ... ಬೆಚ್ಚನೆ ಹೂ ಹಾಸಿಗೆಯ ಮೇಲೆ
ನಿಮ್ಮ ಮಲಗಿಸಿ.. ತಾ ನೆಮ್ಮದಿಯ ಮನಸೊಂದಿಗೆ
ಮನೆಯ ಜಗಲಿಯೊ... ಮಾಳಿಗೆಯೊ...ಅಂಗಳದಲೊ
ಊರ ಮುಂದಿನ ಗುಡಿಯ ಕಟ್ಟೆಯ ಮೇಲೆಯೊ..
ಮಲಗುವ ಅಪ್ಪನಿಗೆ.... ಈ ಒಂದು ದಿನದಲ್ಲಿ ಇಷ್ಟು
ವರ್ಷಗಳ ಅವನ ಕಸುವಿನ ದಿನಗಳಿಗೆ ಬೆಲೆ ಕಟ್ಟಲಾದಿತೆ
ಅರಳಿದ ನಾಕು ಕೆಂಗುಲಾಬಿ.. ಹೊಸ ಬಟ್ಟೆ ಬರೆಗಳ
ಕೊಡಿಸಿಬಿಟ್ಟರೆ ತೀರಿಬಿಡುವುದೆ ಋಣ...

ಏನಾಗಿದೆ... ನಮಗೆ ? ಏಕೆ ಪಾಶ್ಚಾತ್ಯ ಸಂಸ್ಕೃತಿಯೆ
ನಮ್ಮ ದೇಹದಲಿ ಹೊಕ್ಕ ಭೂತಗಳಂತೆ ಆಡುತ್ತಿದ್ದೇವೆ..
ಇದೊಂದೆ ದಿನಕೆ ಸೀಮಿತವೆ... ತಂದೆಯ ಸಾಧನೆಗಳ..
ಅವನ ಮೇಲಿರುವ ಪ್ರೀತಿಗಳ ವ್ಯಕ್ತಪಡಿಸುವುದಕ್ಕೆ
ಯಾಕೆ ?  ತಂದೆಯ ವಚನಕ್ಕಾಗಿ ನವವಧುವಿನ
ಜೊತೆಯಲಿ ಕಾಡಿಗೆ ನಡೆದ ರಾಮನ.. ತಂದೆಯ
ಆಜ್ಞೆಯ ಮೇರೆಗೆ ಹೆತ್ತ ತಾಯಿಯ ರುಂಡವ ಚೆಂಡಾಡಿ
ಮತ್ತೆ ತಾಯಿಗೆ ಮರುಜೀವ ಕರುಣಿಸು ಎಂದು
ಪರಶುರಾಮನ.. ಪ್ರತಿಯೊಬ್ಬರ ಜೀವನದ ಅತಿ ಮಧುರ
ಮಧು ತುಂಬಿದ ರಾತ್ರಿಯ ಹೊಸ್ತಿಲಲ್ಲಿ... ತಂದೆ
ಯಯಾತಿ ಮಗ ಪುರನ ಯೌವ್ವನವನೇ ಬೇಡಿದಾಗ
ತಿರುಗಿ ಮಾತನಾಡದೆ ಯೌವ್ವನವ ಧಾರೆಯೆರೆದ..
ಇಂತಹ ಮಹಾನ್ ಪುತ್ರರಿಗೆ ಜನ್ಮವಿತ್ತ ಭೂಮಿಯಲ್ಲಿ
ಅವರ ಆದರ್ಶಗಳ ಎದೆಯಲ್ಲಿ ಬಿತ್ತಿಕೊಂಡು ಜೀವನ
ಪೂರ್ತಿ ಬಾಳಿ... ಹೊರಲೋಕಕ್ಕೆ ಭವ್ಯ ಭಾರತದ
ತಂದೆ ಮಕ್ಕಳ ಅನುಬಂಧವ ಸಾರುವದ ಬಿಟ್ಟು...

ಅರವತ್ತರ ಇಳಿ ವಯಸ್ಸಿನಲ್ಲೂ... ಅವನನ್ನು ಹೊರಗೆ
ದುಡಿಯಲು ಕಳಿಸುವ.. ಊಟ ಹಾಕದೆ ಹಸಿವಲಿ
ಬಳಲಿಸುವ... ದುಡ್ಡು ದುಡ್ಡೆಂದು ನಗರಗಳಿಗೆ ಬಂದು
ಹೆಂಡತಿ ತನ್ನೆರಡು ಮಕ್ಕಳೊಂದಿಗೆ ಆರಾಮವಾಗಿ
ಬದುಕುತಿರುವ ಇಂದಿನ ಪೀಳಿಗೆ.. ಕುಳಿತರೆ ಎದ್ದು
ನಿಲ್ಲಲಾಗದ.. ಮಲಗಿದರೆ ಎದ್ದು ಕುಳ್ಳಿಸಲು ಆಗದ
ದೇಹಕ್ಕೆ ಜ್ವರ ಬಂದು ಮಲಗಿದಾಗ ನೋಡಿಕೊಳ್ಳಲು
ಅವರ ಪಕ್ಕದಲಿ ಇಲ್ಲದಿದ್ದಾಗ ಆ ಹಿರಿಜೀವ ಎಷ್ಟು
ನೊಂದಿತು... ತಿಂಗಳು ತಿಂಗಳು ಹಣವು ಖಾತೆಗೆ
ಹಾಕಿ ಕುಳಿತುಬಿಟ್ಟರೆ ನಾವು.. ಆ ಹಣವ ತರಲಿಕ್ಕಾದರೂ
ಆ ನಡುಗವ ಕೈಗಳೊಂದಿಗೆ ಬ್ಯಾಂಕ್ ಮೆಟ್ಟಿಲುಗಳ ಹತ್ತಿ
ಸರತಿ ಸಾಲಿನಲಿ ನಿಂತು ಹಣವ ಪಡೆದು ಬರುವ
ಹೊತ್ತಿಗೆ.... ಆ ಜೀವಕೆ ಮತ್ತೆ ನಿಮ್ಮನು ಹಡೆದು..
ಬೆಳಸಿ.. ನಿಮ್ಮ ಕಾಲ ಮೇಲೆ ನಿಲ್ಲಿಸಲು ಪಟ್ಟ ಕಷ್ಟದಷ್ಟು
ಕಷ್ಟವುಂಟಾಗುತ್ತದೆ...

ತಂದೆ ನಿನಗೆ ನಾ ರಾಮನಾಗಲಾರೆ.. ಪರಶುರಾಮನೂ
ಆಗಲಾರೆ.. ಪುರನೂ ಆಗಲಾರೆ.... ನಿನ್ನ ಮುಸ್ಸಂಜೆಯ
ದಿನಗಳಿಗೆ ಊರುಗೋಲಾಗಿರುವೆ... ಇಷ್ಟೇ ನನ್ನ ಕೊಡುಗೆ

ಮುಂದೊಂದು ದಿನ ಅವಿಭಕ್ತ ಕುಟುಂಬ ದಿನಾಚರಣೆ
ಬರುವ ದಿನವು ದೂರ ಉಳಿದಿಲ್ಲ...

Friday, June 16, 2017

ಅವಳೊಲುಮೆ

ಅವಳ ಪ್ರೀತಿಯ ಕಡಲಲಿ
ನಾವಿಕನಾಗಲೆಂದೆ ಏನೋ..
ಈ ಪ್ರೇಮಲೋಕದಲಿ ನಾ
ಜನಿಸಿದ್ದು..

ಪ್ರೀತಿಯ ಬರ ಬಿದ್ದ ಬೀದಿಗಳಲಿ
ಇವಳ ಎನ್ನೆದೆಯ ಸಿಂಹಾಸನದಿ
ಆಸಿನಿಸಿ... ಹೊತ್ತು ತಿರುಗುವ ಪ್ರೇಮಿ
ಯಾಗಲೆಂದೊ ಏನೋ...
ಅವಳಿಗೆ ನಾ ದಾಸನಾಗಿದ್ದು..

ಒಣಗಿ ಕೊರಡಾಗಿ ನಿಂತಿದ್ದ
ಮನದ ಮರಕೆ.. ಪ್ರೀತಿಯ
ಚಿಗುರೆಲೆಗಳ ಜೀವವ ತುಂಬಲೆಂದೆ
ಬಂದ ಜೀವ ಗಂಗೆಯೇನೊ...

ಕನಸುಗಳೆ ಇಲ್ಲದ ಕಳೆಯುವ
ರಾತ್ರಿಗಳಿಗೆ ಹೊಸ ಕಲ್ಪನೆಗಳ
ಕತ್ತಲು ಹೊಲಕೆ ಬಿತ್ತಲು ಬಂದ
ದೇವತೆಯೇನೊ..

ಅವಳೊಂದು ಬದುಕಿಗೆ ಚಿಲುಮೆ
ಬಾಳ ಪಯಣದಲೊಂದು ಸುಂದರ ಪ್ರತಿಮೆ
ತೋರುತಿಹಳು ಅದೇಷ್ಟು ನನಗೆ ಒಲುಮೆ
ಇವಳ ಒಲವಿನಲಿ ನಾನೆಂದು ಆರದ ಕುಲುಮೆ

ಕಣ್ಣೀರು ನಿಲ್ಲಲಿಲ್ಲ

ಅವಳಿಗೆ ಹೇಳುವ ಮಾತುಗಳೆಲ್ಲವು
ತುಟಿಯಂಚಲಿ ಬಂದು ನಿಂತರು..
ಮೌನವು ಸಮ್ಮತಿಸಲಿಲ್ಲ ....
ಅವಳು ಬಿಟ್ಟು ಹೋದ ಘಳಿಗೆಯಲಿ
ಎಷ್ಟೇ ತಡೆಹಿಡಿದರೂ..
ಕಣ್ಣೀರು ನಿಲ್ಲಲಿಲ್ಲ...

Thursday, June 15, 2017

ನೀನಿಲ್ಲದ ವಿರಹ

ಘಳಿಗೆ ಅರೆಗಳಿಗೆಗೂ ನನ್ನ
ಕಾಡಿಸಿ ಪಿಡಿಸಿ ನಿನ್ನಂದದ
ವರ್ಣನೆಗೆ ಸಾಲುಗಳ ಬರೆಸಿಕೊಂಡು
ಪ್ರತಿ ಪದಗಳ ಅಮೃತದ ಸವಿಯಂತೆ
ಸವಿದವಳು.. ನೀನೆ ಅಲ್ಲವೆ ?

ಬೆಳಿಗ್ಗೆ ದೇವಸ್ಥಾನ.. ಮದ್ಯಾಹ್ನಕ್ಕೆ
ಸಿನಿಮಾ... ಸಂಜೆಗೆ ಉದ್ಯಾನವನ
ಹೀಗೆ ಹೊತ್ತು ಹೊತ್ತುಗಳಲಿ ನನ್ನೊಡಗೂಡಿ
ನಮ್ಮ ಪ್ರೀತಿಗೆ ಮಧುರ ಕ್ಷಣಗಳ
ತುಂಬುತ್ತಿದ್ದವಳು ನೀನೆ ಅಲ್ಲವೆ ?

ಮನೆಯ ಜಂಜಾಟಗಳ ತಲೆ
ನೋವಿಗೆ.... ನಿನ್ನ ಮಡಿಲಲಿ ಮಲಗಿಸಿಕೊಂಡು
ಹಣೆಯ ತಿಕ್ಕುತ... ಕೈ ಬೆರಳುಗಳ
ನನ್ನ ತಲೆಗೂದಲಿನಲಿ ಓಡಾಡಿಸುತ
ನೋವನ್ನು ಮರೆಸುತ್ತಿದ್ದವಳು
ನೀನೆ ಅಲ್ಲವೆ ?

ಇಳಿಸಂಜೆ ಹೊತ್ತಿನಲಿ ನಿನ್ನ
ಮನೆಯ ಮುಂದೆ ಬಿಟ್ಟು ಹೊರಡುವಾಗ
ನನ್ನ ಕೈ ಹಿಡಿದು ತಡೆದು... ಹಣೆಗೆ
ಸಿಹಿ ಮುತ್ತನಿತ್ತು... ನಾಳಿನ ಕನಸು
ಗಳಿಗೆ ರೆಕ್ಕೆಯ ಕಟ್ಟುತ್ತಿದ್ದವಳು
ನೀನೆ ಅಲ್ಲವೆ ?

ಆ ಒಂಟಿ ಮರದ ಕೆಳಗೆ.. ನನ್ನೆದೆಯ
ಮೇಲೆ ಮಲಗಿ.. ನನ್ನೆದೆಯ ರೋಮಗಳನು
ನಿನ್ನ ತುದಿ ಬೆರಳಿಂದ ಸುತ್ತುತ್ತ.. ನೀನಿಲ್ಲದೆ
ನಾ ಹೇಗೆ ಬದುಕಲಿ... ನೀನಿಲ್ಲದೆ ಕ್ಷಣಗಳ
ಹೇಗೆ ಕಳೆಯಲಿ ಎಂದು ಹೇಳುತ್ತಿದ್ದವಳು
ನೀನೆ ಅಲ್ಲವೆ ?

ನೀನೆ ನನ್ನದೆಲ್ಲವಾಗಿದ್ದಾಗ ಈಗಿಲ್ಲವಾದೇಕೆ
ಜಾರಿದೆ ಹೇಗೆ ನೀನು ನನ್ನ ಪ್ರೀತಿಯ ಲೋಕದಿಂದ
ಎಲೆಯ ಮೇಲೆ ಕುಳಿತ ಮುತ್ತು ಕರಗಿದಂತೆ
ಹುಟ್ಟು ಕಳೆದ ದೋಣಿ ನಡು ನೀರಿನಲಿ ನಿಂತಂತೆ

ತೀರಿತೆ ನಿನ್ನ ಪ್ರೇಮದ ಮೋಹ
ಹೊತ್ತಿಸಿ ಎನಗೆ ಪ್ರೇಮದ ದಾಹ
ಬತ್ತಿಸಿ ಬದುಕಿನದೆಲ್ಲದರ ಉತ್ಸಾಹ
ನೀಡಿಬಿಟ್ಟೆಯಲ್ಲ ಬಾಳಿನುದ್ಧಕೂ
ನೀನಿಲ್ಲದ ವಿರಹ...

ನನ್ನುಸಿರಿದು

ಎನ್ನೆದೆಯ ಪ್ರೀತಿಗೆ ತುಂತುರು
ಮಳೆ ಹನಿಯ ಒಲವ
ಸುರಿಸೆಯಾ...
ಕಾದು ಸೋತ ಬಂಜರು
ಭೂಮಿಯಿದು  ತಣಿಸೆ
ಹನಿ ಹನಿಯಾಗಿಯಾದರೂ
ಉಸುರಲಿ ನಿನ್ನ ಹೆಸರಲಿ
ನನ್ನುಸಿರದು

ನನ್ನ ಮದುವೆ

ನನ್ನ ಮದುವೆ...

ಕಾಡಿ ಬೇಡಿ..ನಾ ಹೋಗಿ ಬರುವ
ದಾರಿಯಲಿ.... ಹೂ ನಗೆಯ ತುಂಬಿ
ನನಗೆ ಎದುರಾಗುವನು... ದಾರಿಯ
ಕೊನೆಯ ತಿರುವಿನಲ್ಲಿ ಅವನ ಪ್ರೀತಿಗೆ
ಮತ್ತಷ್ಟು ಕೆಂಬಣ್ಣವ ಹೊತ್ತು ... ನನಗೆಂದೆ
ಎರಡು ಸಾಲು ಬರೆದಿಟ್ಟ ಹಾಳೆಯ ಮೇಲೆ
ಮಲಗಿದ ಗುಲಾಬಿಯು ಸಿಗುವುದು...
ಅದನ್ನು ಎದೆಗವುಚಿ... ಯಾರಿಗೂ ಕಾಣದ
ಹಾಗೆ ಮನೆಗೆ ಬಂದು ಕೋಣೆಯ ಬಾಗಿಲು
ಮುಚ್ಚಿ.... ಅಕ್ಕನೊ... ತಮ್ಮನೊ.. ಅವ್ವನೊ
ಅವರೆಲ್ಲರ ಕಣ್ಣು ತಪ್ಪಿಸಿ ಆ ಪತ್ರವ ಓದುವಾಗ
ನಮ್ಮಿಬ್ಬರ ಮುಂದಿನ ಬಾಳನು ಕುರಿತು...
ನನ್ನನು ನಡೆಸಿಕೊಳ್ಳುವ ಪರಿ... ಭವಿಷ್ಯದ
ಬಗ್ಗೆ ಅವನು ಕಟ್ಟಿಕೊಂಡಿರುವ ಕನಸುಗಳನ್ನೆಲ್ಲವ
ಓದಿ...  ಮನೆಯವರೆಲ್ಲರನ್ನೂ ಎದುರಿಸಿ ಇವನ
ಮದುವೆಯಾಗಲೆ....?

ಉಬ್ಬು ಹಲ್ಲಿನ... ದಪ್ಪ ಹೊಟ್ಟೆಯ.. ಕರಿಮೊಗದವನ
ಮೇಳುಗಣ್ಣಿನ... ತಲೆಯೆ ಅರ್ಧ ಮರಭೂಮಿಯಾಗಿರುವ
ಮೈತುಂಬ ಸರ್ಕಾರಿ ನೌಕರನೆಂಬ ಹುಂಬುತನವನ್ನೆ
ತುಂಬಿಕೊಂಡಂತಹ ಅಪ್ಪನು ತೋರಿಸುವ ವರನೆದುರಿಗೆ
ಮನಸ್ಸಿಲ್ಲದೆ ಮಲ್ಲಿಗೆ ಮುಡಿದು... ಹುರುಪಿಲ್ಲದೆ ಹೊಸ
ಸೀರೆಯ ತೊಟ್ಟು .... ಮನದ ನೋವು ಮೊಗದಲಿ
ಮೂಡದಂತೆ ಬಣ್ಣವ ಹಚ್ಚಿ ಮಾರಾಟಕ್ಕಿಟ್ಟ ಬೊಂಬೆಯಂತೆ
ಕುಳಿತುಕೊಂಡು... ಅವರು ಕೇಳಿದ ದರಕ್ಕೆ ನಮ್ಮ
ಮನೆಯವರು ಒಪ್ಪಿ ನನ್ನನು.. ಆಸೆಗಳಿಲ್ಲದ ಅರಮನೆಯ
ರಾಣಿಯಾಗಲು ಮದುವೆಯಾಗಲೆ ..?

ನನಗಿಲ್ಲವಾಗಿದೆ ನನ್ನ ಮನದೊಡೆಯನ ಆರಿಸುವ
ನಿರ್ಧಾರ... ನಿನಗೆ ಅಡುಗೆ ಬರುತ್ತದೆಯೆ.. ನೃತ್ಯ..
ಗಾಯನ... ಉತ್ತಮ ವಿದ್ಯಾಭ್ಯಾಸ.. ಒಳ್ಳೆಯ ಎತ್ತರ
ಕೇಸರಿಯ ಹೊತ್ತಿರುವಂತ ಮೈ ಬಣ್ಣ.. ಅವರೆಲ್ಲ
ಬಂಧು ಬಳಗದವರೊಂದಿಗೆ ಹೊಂದಿಕೊಂಡು
ಹೋಗುವಂತ ಗುಣ...‌ಗುಣಗಳ ಗಣಿತವನೆ ಮಾಡಿ
ಕೊಂಡುಕೊಳ್ಳುವರು ನನ್ನನು.. ಹಾಗೆ ಸುಮ್ಮನೆನಲ್ಲ
ಹಣವ ಪಡೆದುಕೊಂಡು....

ನನ್ನ ದೇಶದ ವಿಪರ್ಯಾಸವೆಂದರೆ....
ಮಾತು ಬರದ... ಮೂರಿದು ಬೀಳುವ..‌. ಸುಟ್ಟು
ಕರಕಲಾಗುವ..ನೀರ್ಜಿವ ಚೆಂದದ ಗೊಂಬೆಗೆ
ಹಣವ ಕೊಟ್ಟು ಕೊಂಡು ತರುವರು....
ಜೀವವಿದ್ದು... ನಿಮ್ಮೆಲ್ಲರ ಮನಸ್ಥಿತಿಯನರಿತು
ಅಡುಗೆ ಮಾಡುವ.. ಮಕ್ಕಳು ಹೇರುವ
ಬಾಳಿನೂದ್ದಕು ನಿಮ್ಮ ಕಷ್ಟ ಸುಖಗಳಲಿ ಭಾಗಿಯಾಗುವ
ಈ ದೇಹವನು ಹಣವ ಪಡೆದು ಕರೆದೊಯ್ಯುವಿರಲ್ಲ...

ನಾನು ಒಂದು ಜೀವವಿಲ್ಲದ ಬೊಂಬೆಯಾಗಿಬಿಡಲೆ ?