Tuesday, July 4, 2017

ಮಾಯದ ಮುತ್ತಾಗದಿರು ಮಳೆಯೆ

ಮುನಿಸಿ ಮೌನವಾದೆಕೆ ಮಳೆರಾಯ
ಮರೆತು ಮಲಗದಿರು ಮೋಡಗಳ..
ಮಧ್ಯದಲಿ.. ಮಣ್ಣಿನ ಮಕ್ಕಳ ಮರೆತು

ದುಡಿದು ದಣಿದ ದೇಹವಿದು
ಧಗಧಗಿಸುತಿದೆ ದಾಹದ ದಳ್ಳುರಿಯಲಿ
ದಯೆತೋರು ಧರೆಗೆ ಧುಮ್ಮಿಕ್ಕಿ..

ಬರಬಿದ್ದು ಬರಡಾಗಿ ಬಾಯ್ತೆರದ
ಭೊದೊಡಲಿಗೆ.. ಬಂಗಾರದ ಬೆಳೆಯ
ಬಿತ್ತಿ ಬೆಳೆಯಲು ಬಾರೊ...ಬೆಳೆರಾಯ

ನರನಾಡಿಗಳಲ್ಲೆಲ್ಲವು ನಿತ್ರಾಣಗೊಳ್ಳುವದರೊಳಗೆ
ನರಜನ್ಮವಿದು ನಲುಗಿ ನಶಿಸುವದರೊಳಗೆ
ನಳನಳಿಸಿಬಿಡು ನಾಡೆಲ್ಲ ನಿಬ್ಬೆರಗಾಗುವಂತೆ

ಮಳೆಯೆ.. ಮಾಯದ ಮುತ್ತಾಗದಿರು
ಮಾಯದ ಮುತ್ತಾಗದಿರು.

ಕೆಂಪು ದೀಪದ ಚಿಟ್ಟೆಗಳು

ನಾವುಗಳು
ಕೆಂಪು ದೀಪದ ತೋಟದ ಹೂವುಗಳು
ಕಾದು..ಕಾದು.. ಹೊಂಚುಹಾಕಿ ತೆರೆದಿಟ್ಟು
ಎದೆಯ ಮಕರಂದವ.. ಹೀರಲು ಬರಸೆಳೆದು
ಅಪ್ಪಿಕೊಳ್ಳುವೆವು ಕಾಮದ ಹಸಿವ ಬಯಸಿ..
ಜೇಬಿನ ತುಂಬ ಹಣವ ತುಂಬಿಕೊಂಡ ಬಂದ ಚಿಟ್ಟೆಗಳ

ಇರುಳೊಳಗಿನ ದೀಪವನಾರಿಸಿ...ಒಲೆಯೊಳಗಿನ
ಕೆಂಡವ ಹೊತ್ತಿಸಿ.. ಅವರ ಕಾಮದ ಹಸಿವನಿಂಗಿಸಿ
ನನ್ನ.. ನನ್ನ ನಂಬಿದವರ ತುತ್ತು ಚೀಲವನಿಂಗಿಸಲು
ತಾಸು.. ತಾಸಿಗೂ... ಅವರ ಮೈ ಬಿಸಿಯ ತಾಪದ
ಬೆವರಿಗೆ ಕರಗುವ ಹಣೆಯ ಮೇಲಿನ ಹುಡಿಯ..
ಮತ್ತೆ ಮತ್ತೆ ಹಚ್ವಿಕೊಳ್ಳವುದಕ್ಕೆ ನನ್ನನು ಕರೆಯುವರು
ನಿತ್ಯ ಸುಮಂಗಲಿಯೆಂದು

ನಿಮಗೆ ನನ್ನ ದೇಹದ ಮುಂಭಾಗವಷ್ಟೇ ಪರಿಚಯ
ತಿಳಿದಿಲ್ಲ ನಿಮಗೆ ನನ್ನ ಬೆನ್ನ ಮೇಲೆ ಮೂಡಿರುವ
ಬಾಸುಂಡೆಗಳ ವಿಷಯ..
ಅದು ನಿಮಗೆ ಕಾಣಿಸದೂ ಕೂಡಾ.. ಕತ್ತಲಲೆ ಕೂಡಿ...
ಕತ್ತಲಲೆ ಬೆರೆತು.. ಕತ್ತಲಲೆ ಎದ್ದು ಹೋಗುವ ಗಿರಾಕಿಗಳಿಗೆ
ಮಾಂಸದ ಮುದ್ದೆಯೆ ಮುಖ್ಯವೆ ಹೊರತು.. ಆ ಮಾಂಸದ
ಮುದ್ದೆಯ ಮನಸ್ಸೆನಲ್ಲ  ಕುಡುಕ ಗಂಡನು
ಸಂಸಾರದ ನೊಗವ ಹೊರಲಾರದೆ..ಹುಟ್ಟಿಸಿದ ಮಕ್ಕಳೆರಡ
ಸಾಕಲಾಗದೆ.. ನಮ್ಮನು ಬದುಕಲು ಬಿಡದೆ.. ಸಾಯಲು ಬಿಡದೆ.. ದಿನವು ಬಡಿದು ಬಡಿದು... ನಿತ್ಯವು ದೇಹವ ಹಿಂಡುವ ಈ ಹೊಲಸು ಕೆಲಸಕ್ಕೆ ಕುಳ್ಳರಿಸುವನು..

ಇತ್ತೀಚೆಗೆ ನನಗೂ.. ಇದು ಅಭ್ಯಾಸವಾಗಿಬಿಟ್ಟಿದೆ..
ಅನಿವಾರ್ಯವೆನಿಸಿಬಿಟ್ಟಿದೆ.. ಹೋದಲ್ಲೆಲ್ಲ ಕಾಮದ ಕಣ್ಣುಗಳಿಂದ ನುಂಗುವರು.. ಯಾರಾದರೂ ಒಳ್ಳೆಯ ಗಂಡಸರು ಸಹಾಯ ಮಾಡಲು ಬಂದರೆ ಅವರ ಜೊತೆಗೆ
ಎಷ್ಟು ಸರಳವಾಗಿ ಸಂಬಂಧಗಳ ಜೋಡಿಸಿಬಿಡುವುದಿ
ಸಮಾಜ..ನಾನು ನನ್ನ ಹೊತ್ತೊತ್ತಿನ ಊಟಕ್ಕಾಗಿ ನನ್ನ
ದೇಹವನು ಘಳಿಗೆ ಘಳಿಗೆಗೂ ಮಾರಿಕೊಂಡರೆ.. ಕೆಲ
ಹೆಂಗಸರು ತಮ್ಮ ಐಷಾರಾಮಿ ಜೀವನವ ನಡೆಸಲು
ಇಲ್ಲಿ ಬಂದು ಮಲಗಿ ಹಣವ ಗಳಿಸಿ.. ಮತ್ತೆ ಬಾರ್ ಪಬ್
ಗಳಲ್ಲಿ ತೂರಾಡಿ ಕುಡಿದಾಡಿ ಮನೆಗೆ ತೆರಳುತ್ತಾರೆ..

ಎಲ್ಲರಂತೆ ನನ್ನದು ಆಗಲಿಲ್ಲವಲ್ಲ ಬಾಳು...ತವರಿನ
ಬಡತನ.. ಸಾಲು ಸಾಲು ಸೋದರಿಯರ ಮದುವೆಯ
ಖರ್ಚುಗಳು ನಾನು ಹೋಗಿ ತವರಲಿ ಕುಳಿತರೆ ಅದೊಂದು
ವೈಶ್ಯಯ ಅಡ್ಡವಾದಿತೇನೊ ಎಂಬ ಭಯ...ಅವರ
ಅಂಗಳಕ್ಕೂ ಹತ್ತುವದೇನೊ ಬಂದು ಹೋಗುವ ಗಂಡುಗಳ
ಮುತ್ತೈದೆಯರ ಶಾಪ... ಅಂಟಿಕೊಳ್ಳುವುದೇನೊ.. ಜನ್ಮ ಜನ್ಮಕೂ ಅವರಳಲಿನ ಪಾಪ..
ಓ... ಗಂಡಸರೆ ಬಂದುಬಿಡಿ ಇರುಳ ದೀಪವನಾರಿಸಿ
ತಿರಿಸಿಕೊಂಡು ಬಿಡಿ ನಿಮ್ಮ ಕಾಮದ ಹಸಿವನು..
ತುಂಬಿಸಿಬಿಡಿ ಎನ್ನೊಡಲ ಹಸಿವ ಪಾತ್ರೆಯನು..
ಬೇಗನೆ ಎದ್ದು ಹೋಗಿಬಿಡಿ... ಅಲ್ಲೊಂದು ಜೀವ
ಕಾಯುತಿಹುದು...ಸಂಜೆಯ ದೀಪವ ಹಚ್ಚಿ.. ಮುಂಜಾನೆ ಮನೆ ಬಿಟ್ಟ ಗಂಡ ಕ್ಷೇಮವಾಗಿ ಮನೆಗೆ ಹಿಂದಿರುಗಲೆಂದು...
ಬಾಗಿಲ ಬಳಿ ನಿಮ್ಮ ಬರುವಿಕೆಗಾಗಿ ಕಾತುರದಿಂದ ಹಸಿವಿನಿಂದ..  ಕಾಯುತ್ತ ನಿಂತ.. ನಿಮಗಾಗೆ
ಮಿಡಿಯುವ ಜೀವವಿಹುದು..

ಬಹುಶಃ ನನ್ನಂತವರ ನೋಡಿಯೆ..
ಹೇಳಿರಬಹುದೇನೊ... ಹೆಣ್ಣಿಗೆ ಹೆಣ್ಣೆ ಶತ್ರು ಎಂದು ?

ಹೋಗಲೆ ಗೆಳತಿ

ಗೆಳತಿ...
ಮುಡಿಗೆ ಮಲ್ಲಿಗೆ ಮುಡಿಸಿ.. ಗಲ್ಲಕೆ
ಗಂಧವ ಲೇಪಿಸಿ... ಪಚ್ಚೆ ಹಸಿರಿನ
ಸೀರೆಯ ತೊಡಿಸಿ... ನನ್ನ ಮಡಿಲಲಿ
ಮಲಗಿಸಿಕೊಂಡು ನಿನ್ನ ಹಣೆಗೊಂದು
ಸವಿಮುತ್ತ ನೀಡುವ ಮುನ್ನ ಹೊರಡಬೇಕಿದೆ ಕಣೇ...

ಆಷಾಡವು ಕಳೆದು... ನಾಗರಕಟ್ಟೆಗೆ
ಬಂದವರ ಹೊಟ್ಟೆಯುರಿಸುವಂತೆ ಜೊತೆಯಲೆ ಹೋಗಿ... ನನ್ನ ನಿನ್ನ
ಮನೆ ಮಂದಿಯದರೆಲ್ಲ ಪಾಲೆನ್ನುತ
ಹಾಲನೆರೆದು... ಬಗೆಬಗೆಯ ಸಿಹಿಯ
ಉಂಡಿಗಳ ಕಟ್ಟಿ ನನಗೆ ನೀ ತಿನಿಸುವ
ಮುನ್ನವೇ ಹೊರಡಬೇಕಿದೆ ಕಣೇ...

ಶ್ರಾವಣ ಜೋಕಾಲಿಯಲಿ ನಿನ್ನ
ಕುಳ್ಳರಿಸಿ ತೂಗಿ... ತೂಗಿ... ನಿನಗೆ
ತಲೆಸುತ್ತು ಬಂದು.. ನನ್ನೆದೆಯ ಮೇಲೊರಗಿ
ರೋಮಗಳೊಡನೆ ನಿನ್ನ ತೋರು ಬೆರಳು
ಆಟವಾಡುವ ಮೊದಲೆ ಹೊರಡಬೇಕಿದೆ ಕಣೆ..

ಮದುವೆಯ ಮದರಂಗಿಯ ಬಣ್ಣವಿನ್ನೂ
ಮಾಸಿಲ್ಲ... ಕೂಡಿ ಕಳೆದ ರಾತ್ರಿಗಳ ಹಸಿಯಿನ್ನು ಆರಿಲ್ಲ... ಮಿಲನದ ಸಂಕೇತಕೆ
ನಿನ್ನ ಬಾಯಿನ್ನು ಹುಳಿಯ ಬಯಸಿಲ್ಲ...
ಈಗಲೇ ಹೊರಡಬೇಕಿದೆ ಕಣೇ....

ನಿನ್ನ ಬಿಟ್ಟು ದೂರವುಳಿದ ಆಷಾಡ
ಮಾಸದ ವಿರಹವಿನ್ನೂ ತಣಿದಿಲ್ಲ..
ಇನ್ನೀ ವರುಷದ ವಿರಹದ ವಿಷವುಣ್ಣಲು
ಹೊರಡಲೆ ಬೇಕಿದೆ ಕಣೆ...

ನಗು ನಗುತಾ ಕಳಿಸಿಬಿಡು.. ತಾಯಿ ಸೇವೆಗೆ
ಗಡಿಯ ಕಾಯ್ದು ಮತ್ತೆ ಬರುವೆ ನಿನ್ನ ಮಡಿಲಿಗೆ
ಬರುವುದರೊಳಾಗಾಗಿ ಕಟ್ಟು ನೀನೊಂದು
ಜೋಳಿಗೆ..
ಹಾರುವ ಹಕ್ಕಿಯಾಗಿ ಬಂದು ಸೇರುವೆ
ನಿನ್ನೊಲವಿನ ಗೂಡಿಗೆ...

ಬರಲೇ ಗೆಳತಿ..
ಹೋಗಲೆಬೇಕಿದೆ...ಈಗ

Monday, July 3, 2017

ದೇಸಾಯಿಯವರು ಕಾಯುವಿಕೆ

ಗೆಳತಿ...
ಹೊತ್ತೆರುವುದ್ರೊಳಗ.. ನನ್ನ ಹತ್ರ
ಇರ್ತಿನಂದಾಕಿ..ಹೊತ್ತುಗಳನ್ನು ಹೊತ್ತು
ಹೊತ್ತು ನನ್ನ ಹೆಗಲ ಸೋತು..ನೋಡಿಲ್ಲಿ
ನೀ ಬರೊ ನಡು ದಾರ್ಯ್ಯಾಗ ಕುಂತಿನಿ..

ನಿನ್ನ ನಾಗರಜಡಿಗೆ ತಂದ ಮಲ್ಗಿ ಹೂವಾ
ಬಾಡಿ ನನ್ನ ತೊಡಿಮ್ಯಾಲ ಮಲಗೈತಿ...
ನಿನ್ನ ರಸಗುಲ್ಲದ ಬಾಯಿಗೆಂತ ತಂದಿದ್ದ
ಮಲಗೂಬಾ ಮಾವಿನ ಹಣ್ಣುಗಳೆಲ್ಲಾ
ನೀ ಬರಲಾರ್ದಕ್ಕ ನಾನು ಕಾದ.. ಕಾದ
ಕೆಂಡಾಗಿನಿ.. ಅವು ಸೂರ್ಯನ ತಾಪಕ್ಕ
ಕಾದ.. ಕಾದ.. ಕೆಂಪಾಗಿ ಮೆತ್ತಗಾಗ್ಯಾವು

ನಿಂಗ ಗೊತ್ತಿಲ್ದೇನರ ಐತೇನ... ತಿಳಿಗೇಡಿ
ಗೂಡನ್ಯಾಗ ಮರಿನಷ್ಟ ಬಿಟ್ಟ..ಹಕ್ಕಿ
ಭಾಳೊತ್ತು ಭಾನಾಗ ಹಾರಾಡತೈತನು
ಕೊಟಗ್ಯಾಗ ಕರುನ ಬಿಟ್ಟು ಹಸು..ಸಂಜಿ
ತನ್ಕ.. ಬೆಟ್ಟ ಗುಡ್ಡ ಅಡ್ಡಾಡಿ ಮೇಯ್ದ ಆರಾಮಾಗಿ
ಬರ್ತತನದು..
ಹುಟ್ಟಿದ ಸೂರ್ಯಾ... ಹೊಳ್ಳಿ ಮಲಗೊ
ಹೊತ್ತಾತು.. ನಿಂಗಂತ ಕಾಯ್ಕೊಂತ ಕುಂತ
ಚಡಪಡಿಸ್ಲಾಕ ಹತ್ತೇನಿ ನಾನು... ನಿಂಗ
ನನ್ನ ಮರುಕನ ಹತ್ತವಲ್ದೇನ...?

ಯಾಕರ ನಿಂಗಿಷ್ಟು ಕ್ವಾಪ...
ಬಿಟ್ಟ ಬಿಡು ಆ ಮೂಗಿನ ಮ್ಯಾಲಿನ ಮುಂಗೋಪ
ಮದುವ್ಯಾಗ ಚುಚ್ಚುಸ್ತೀನಿ ಅದ್ಕ ಹರಳಿನ ನತ್ತ
ಹಗಲಲ್ಲ ಹಿಂಗ ಬ್ಯಾಸ್ರಾ ಮಾಡ್ಕೊಬ್ಯಾಡ ಮತ್ತ
ನೆತ್ತಿಗೇರಾಕ್ಹತ್ತೈತಿ ನೋಡ ನಿನ್ನ ಮ್ಯಾಲಿನ ಸಿಟ್ಟಿನ ಪಿತ್ತ
ತಣ್ಣಗಾಗಿಸಬಾರ ಕೊಟ್ಟ ಒಂದು ಪ್ರೀತಿಯ ಮುತ್ತ

ನೋಡ ಹುಡುಗಿ.. ನಿನ್ನ ಕಾಯ್ಕೊಂತ ನಾ ನಡು
ದಾರ್ಯ್ಯಾಗ ಕುಂತೇನಿ..
ಆ ಯಮನ ಬಂಡಿ ಬಂದು ನನ್ನ ಕರೆದೊಯ್ಯೊ ಮೊದ್ಲ
ಜೋಡೆತ್ತಿನ ನಿನ್ನ ಪ್ರೀತಿ ಬಂಡಿ ತಂದು..ನನ್ನ ಹತ್ತಿಸ್ಕೊಂಡ
ಹೋಗ..

ದರ್ದ ಸೆ..

ಪಿಲಾವೊ.. ಮುಝೆ ಐಸಿ
ಕೊಯಿ...ಜಾಮ್
ಭ್ಹೂಲ್.. ಜಾಂಹ್ಞೂಂ.. ಉಸ್ಕೀ
ಸಾರಿ.. ಪ್ಯಾರ ಕಾ ಘಮ್

ಸಹ್ನೆ.. ಕೊ..ಮೈ ಕೊಯಿ
ಪತ್ತರ ದಿಲ್ ಕಾ ನಹೀ..ಹ್ಞೂಂ
ಉಸ್ಕಿ ಯಾದ ಮೆ..ಪಲ ಪಲ
ತಡಪ್ತಾ ಹೂವಾ ಮಾಸೂಮ್
ಪ್ರೇಮಿ ಹ್ಞೂಂ..

ನ ಜಾನೇ.. ಕೈಸೆ ಬಿತಾಂವೂ
ಉಸ್ಕೆ ಬಿನಾ ಯೇ ಜಿಂದಗಿ
ಜೀವನ್ ಕೆ ರಾಸ್ತೆ ಮೆ..ಪ್ಯಾರ್ ಕಿ
ಯಾದೊಂಕಾ ಲಾಶೆ..ಖಾಂಟೆ
ಬನ್ಕರ ಪೆಹಲ್ ಗಯಾ ತೊ

ಗುಜರು ತೊ ಕೈಸೆ ಗುಜರು...
ಬೀನಾ ಉಸ್ ಖಾಟೊಂಕಿ
ದರ್ದ್ ಸೆ..

Sunday, July 2, 2017

ಒಲವ ಗೀತೆ

ಸುತ್ತ ಹತ್ತೂರುಗಳಲ್ಲಿ
ನಿನ್ನ ಹಾಗೆ ಯಾರಿಲ್ಲವಂತೆ
ಬಲದಲಿ... ಒಲವಲಿ
ನೀನೊಬ್ಬನೆ ಮನ್ಮಥನಂತೆ

ನೀನೆ.. ನೀನೆ... ಅದು ನೀನೆ ಗೆಳೆಯ
ಎದೆಯ ರಾಗವ ಮೀಟುವಂತೆ..
ಬರೆಯಬಾರದೆ.. ನಮ್ಮಿಬ್ಬರ
ಒಲವಿಗೊಂದು ಪ್ರೇಮಗೀತೆ

Saturday, July 1, 2017

ಓ.. ಸಾವೆ ನಿನಗೆ ಶರಣು

ಓ... ಸಾವೆ ನಿನಗೆ ಶರಣು....
ಸಾವಲ್ಲೂ... ನಮ್ಮಿಬ್ಬರ ಒಂದುಗೂಡಿಸಿದ
ನಿನಗೆ.. ಇಗೋ..ಇನ್ನೊಮ್ಮೆ ನಿನಗೆ
ಶರಣು... ಶರಣು...
ನಾ ಸತ್ತು.. ಅವಳು ಬದುಕುಳಿದಿದ್ದರೆ..
ಏನು ಮಾಡುತ್ತಿದ್ದಳೊ.. ನನಗಂತು ಗೊತ್ತಿಲ್ಲ
ಅವಳು ಸತ್ತು ನಾ ಬದುಕಿದ್ದರೆ... ಒಂದರಘಳಿಗೆಯು
ನಾನು ಬದುಕುತ್ತಿರಲಿಲ್ಲ...

ಓ.. ಸಾವೆ ನೀನೆಷ್ಟು ಕರುಣಾಮಯಿ..
ಸಂಜೆ ತಂದ ಮಲ್ಲಿಗೆಯ ಮುಡಿದು..
ಬಂದಳೆನ್ನುದುರಿಗೆ ಸಂಜೆಯ ಚಹಾವ ಹಿಡಿದು..
ಅವಳ ಮಧು ತುಂಬಿದ ಬಟ್ಟಲು ಚಹಾವ ಕುಡಿದು
ಬರಸೆಳೆದು ಕುಳ್ಳರಿಸಿಕೊಂಡೆ ನನ್ನೆರಡು ತೊಡೆಗಳ
ಮೇಲೆ.. ಮಲ್ಲಿಗೆಯ ಮುಡಿದು ರಂಗೇರಿದ ಗಲ್ಲಕೆ
ಸವಿ ಮುತ್ತನೊಂದ ನೀಡುವ ಮೊದಲೆ..
ಕ್ಷಣಾರ್ಧದಿ ಧರೆಯ ಗಡಗಡ ನಡುಗಿಸಿ ನಿನ್ನ ತೆಕ್ಕೆಗೆ
ಎಳೆದುಕೊಂಡುಬಿಟ್ಟೆ.. ನಮ್ಮಿಬ್ಬರ ಪ್ರೀತಿಗೆ ಇನ್ನಾರ
ಭಯವು.. ತೊಂದರೆಯ ಕೊಡದ ಹಾಗೆ..ಶಾಶ್ವತವಾಗಿ
ನಮ್ಮನು ನಿನ್ನ ಮರಣದ ತೊಟ್ಟಿಲಲಿ ಹಾಕಿ ತೂಗಿಬಿಟ್ಟೆ...

ಓ... ಸಾವೆ ನಿನ್ನನೆಷ್ಟು ಶಪಿಸುವರಲ್ಲ ನೀನೊಬ್ಬ ಕಟುಕ
ಅದು ಹೇಗೆ ಅಂದಾರೆಲ್ಲರು..? ನನ್ನವಳ ಎದೆಯ
ಮೇಲೊರಗಿಸಿ.. ಎದೆಯ ಹಕ್ಕಿಯ ಬಿಡುಗೊಡೆಗೊಳಿಸಿದ
ನೀನೊಬ್ಬ ಕರುಣಾಜನಕ
ಎಷ್ಟು ಜನ್ಮಗಳ ಪುಣ್ಯವಿರಬಹುದು ಅವಳದು.. ನನ್ನದು
ಅವಳ ಮಡಿಲಲಿ ಮಗುವಾಗಿಸಿ ಮಣ್ಣು ತೂರಿಬಿಟ್ಟೆಯಲ್ಲ
ನಿನ್ನನು ಕಟುಕನೆನ್ನುವವರ ಬಾಯಿಗೆ ನಾನೇನು
ಹೇಳಲಿ...

ನಿಜ.. ನಿನೇಷ್ಟಿದ್ದರೂ ಕಟುಕನೆ.. ಈ ವಿಷಯದಲ್ಲಿ
ನೋಡು ಒಂದು ತಪ್ಪನು ಮಾಡಿಬಿಟ್ಟೆ.. ಆಡಲು ಹೋದ
ಮಕ್ಕಳೆರಡು ನಮ್ಮೊಟ್ಟಿಗೆ ನೀ ಕರೆದು ಕಳಿಸಿದ್ದರೆ ಎಷ್ಟು
ಸುಖವಾಗಿರುತ್ತಿತ್ತು.. ಸಾವಲ್ಲೂ...    ಅಳಿದುಳಿದ
ಆ ಮಕ್ಕಳ ಅಳುವಿಗೆ ಕಿವಿಯಾಗುವರಾರು... ?
ಅವುಗಳ ಹಸಿವಿಗೆ ತುತ್ತಾಗುವರಾರು.. ?
ಕೆನ್ನೆಗೆ ಮೆತ್ತಿದ ಕಂಬನಿಯ ಮುತ್ತನು... ಒರೆಸುವರಾರು...? ರಾತ್ರಿ ಬೀದಿ ನಾಯಿಗಳಿಗೆ ಆಹಾರವಾಗಿಸದೆ ಒಂದು
ಸೂರಿನಡಿ ತಂದು.. ಲಾಲಿಯ ಹಾಡಿ.. ಕಿಟಕಿಯ ಸರಳುಗಳ
ನಡುವಿನಿಂದ ಬಾಲ ಚಂದಿರನ ಅಂದವ ತೋರಿಸುತ್ತ...
ಕೈ ತುತ್ತನುಣಿಸುವರಾರು..?
ಎದೆಗೆ ನಾಲ್ಕಕ್ಷರದ ಬೀಜವ ಬಿತ್ತುವರಾರು..?

ಆಗು ನೀ ಇನ್ನೊಂಚೂರು ಕಟುಕ...
ನೀನಾಗಿಬಿಡು ಅವರ ಬಾಳಿಗೆ ಕಂಟಕ...
ದಯತೋರಿ ನೀಗಿಬಿಡು ಮಕ್ಕಳೆರಡರ ಸಂಕಟ..
ಕೊನೆಯ ಸಾಲುಗಳ ನೀ..ಬರೆದುಬಿಡು ಅವರ ಜಾತಕ....
ನೀಗಲಿ ಅವರ ಬಾಲ್ಯದ ನರಕ..
ಜಗವಿದು... ಅತ್ತು ಕಳೆಯುವರು ಎರಡು ದಿನಗಳ ಸೂತಕ..

ಓ.. ಸಾವೆ ನೀ ದಯಾಮಯ..
ನಮ್ಮಿಬ್ಬರನು ಸಾವಲ್ಲೂ ಒಂದು ಗೂಡಿಸಿದ್ದಕ್ಕೆ..

ಓ.. ಸಾವೆ ನೀ ಮಕ್ಕಳೆರಡ ತಬ್ಬಲಿ ಮಾಡಿದಕ್ಕೆ
ನೀನೊಬ್ಬ ಕಟುಕ.. ಕಟುಕ.. ಕಟುಕ