Wednesday, July 12, 2017

ನಿರೀಕ್ಷೆ

ನಿರೀಕ್ಷೆ..

ನಾಳೆಗಳ ನಿರೀಕ್ಷೆಗಳಲೆ ನಾನು
ಬದುಕುತಿರುವದು....ಉಸುರುತಿರುವುದು...
ಬರೆಯುತಿರುವುದು...ಯಾವುದೊ ಒಂದು
ವೇದಿಕೆ ನನಗಾಗಿ ಕಾದಿದೆ ಎಂದು ಓದಿ..
ಓದಿ.. ಸಜ್ಜಾಗುತಿರುವುದು..

ನಿರೀಕ್ಷಿಸುವೆ ನಾನು ಅತಿಯಾಗಿ.. ನಾ
ಬರೆಯುವ ಕವನಗಳಿಗೆ.. ವಿಮರ್ಶಿಸಿ
ಅದರ ಒಳಹೊರವನು ಅರಿತು ಎರಡು
ಸಾಲು ಬರೆದು ಹಾಕುವರೆಂದು...

ಮೆಚ್ಚಿ ಬೆನ್ನ ತಟ್ಟಿ.. ಮುಂದಿನ ಬರೆಯುವ
ಕವನಗಳಿಗೆ ಪ್ರೋತ್ಸಾಹಿಸುವರೆಂದು.. ಇದ್ದ
ತಪ್ಪುಗಳ ತಿದ್ದಿ ತಿಳಿಹೇಳುವರೆಂದು.. ಈಗಷ್ಟೇ ಅಂಬೆಗಾಲಿಡುತಿರುವೆನಗೆ
ದಾರಿ ದೀಪವಾಗುವಿರೆಂದು..

ನಿರೀಕ್ಷಿಸುವೆ ಬಹಳಷ್ಟು ಮುಖಪುಟದ ಸಹೋದರಿಯವರಿಂದ ಉತ್ತಮವಾಗಿ
ಬರೆದು ಹಾಕಿ ನಾವು ಬರೆಯುವ ಎರಡು
ಸಾಲುಗಳಿಗೆ ಸ್ಪೂರ್ತಿಯಾಗುವರೆಂದು
ಹೊಸ ಹೊಸ ಚಿಂತನೆಗಳ ಬಿತ್ತುವರೆಂದು

ನನ್ನ ನಿರೀಕ್ಷೆಗಳ ಸುಳ್ಳಾಗಲಿಲ್ಲ..
ಮಿತ್ರ ಚಂದ್ರಶೇಖರ ಮಾ. ಅವರು
ಒಂದು ವೇದಿಕೆಯ ಒದಗಿಸಿಕೊಟ್ಟರು
ಸಾಹಿತ್ಯ ಸಂಜೆ ಸಮ್ಮೇಳನಗಳ ವೇದಿಕೆಯ
ನೀಡಿತು.. ನಮ್ಮ ಮುಖಪುಟದ ಹಿರಿಯರು
ದೊಡ್ಡಮನಸ್ಸಿನ ಶಂಕರ ದೊಡ್ಡಮನಿಯವರು
ದೊಡ್ಡದೊಂದು ಅವಕಾಶವನ್ನೆ ಮಾಡಿಕೊಟ್ಟರು..

ನಮ್ಮಲ್ಲಿರುವ ಶಕ್ತಿಯ ನಂಬಿ ನಿರೀಕ್ಷೆಯ
ಮಾಡಿದರೆ..ಅದಕ್ಕೆ ಪ್ರತಿಫಲ ಎಲ್ಲಾದರೂ
ಸಿಕ್ಕೆ ಸಿಗುತ್ತದೆ.. ಅದನ್ನು ನಾವು ಬಳಸಿಕೊಳ್ಳಬೇಕಷ್ಟೆ..  ನಿಜ ಕೆಲವೊಮ್ಮೆ
ನಮ್ಮ ನಿರೀಕ್ಷೆಗಳು ಸುಳ್ಳಾಗುತ್ತವೆ.. ನೋವನ್ನು ತರುತ್ತವೆ... ಏಕೆ? ಮೋಡ
ಕವಿದ ಭಾನು ನಾಲ್ಕು ಹನಿಯ ಮಳೆಯ
ಸುರಿಸದೆ ಹೋಗಿ ಬಿಡುವುದಲ್ಲವೆ..

ನಿರೀಕ್ಷೆಗಳಿರಬೇಕು ಬಾಳಿನ ಹೋರಾಟಕ್ಕೆ
ಒಂದು ನಿರೀಕ್ಷೆ ಸುಳ್ಳಾದಾಗಲೆಲ್ಲ ಮತ್ತೆ ಹತ್ತು ಹಲವು ನಿರೀಕ್ಷೆಗಳನ್ನು ಹೊಂದಬೇಕು
ಆವಾಗಲೇ ಸೋಲು ನಮ್ಮ ಕಾಲಡಿಯಲ್ಲಿ
ಇರುವುದು.. ನಿರೀಕ್ಷೆಗಳ ಕಹಿ ರೂಢಿಯಾಗುವುದು..

ಅಲ್ಲವೆ...?

ಮಂಜಾದಳವಳು

ಹರೆಯದ
ವಯಸ್ಸಿಗೆ
ಮರೆಯದ
ಕನಸುಗಳ
ಬಿತ್ತಿದವಳು
ನನ್ನವಳು...
ನನಸಾಗಿಸದೆ
ಮುಂಜಾನೆಯ
ಮಂಜಾದಳವಳು..

ಹೊಸಕದಿರು ಹುಡುಗಿ

ಹುಡುಗಿ...
ಇರಲಿಬಿಡು ಇನ್ನೆರಡು ಘಳಿಗೆ
ಒಲವಿಂದ ನಿನ್ನ ಮುಡಿಯ ಸೇರದೆ...
ನೀನೊಪ್ಪದೆ... ಕೈ ಬಿಟ್ಟಿರುವ ಕುಸುಮವದು
ಬಿಕ್ಕುತಿದೆ.. ನಿನ್ನದೆ ಹೆಸರಿನಲಿ..
ನಿರಾಕರಣೆಯ ನೋವಲಿ ನಲುಗಿ..
ನಲುಗಿ... ನರುಳುತಿರುವ ಸುಮವದು
ಹೊಸುಕದಿರು.. ಅದರೆದೆಯ ಗಂಧ ನಿನ್ನೆದೆಯ
ಸೇರದೆ... ಮಣ್ಣಲಿ ಮಣ್ಣಾಗುವ ಹಾಗೆ..

ನಿನಗೇತಕಿಷ್ಟೊಂದು ಇರ್ಷ್ಯೆ...
ನಿನ್ನ ಕೆನ್ನೆಯ ರಂಗೀಗಿಂತಲೂ..
ಎಸಳುಗಳ ರಂಗು ಹೆಚ್ಚಿದೆಯಂದೊ..
ನಿನ್ನ ಮೋಹಕ ನಗುವಿಗಿಂತಲೂ..
ಇದರ ಮೋಹಕ ನಗವು ನಿನ್ನ ಚುಚ್ಚಿತಿಹುದೊ
ನಿನ್ನಧರದ ಜೇನು ಬಟ್ಟಲುಗಳಿಗಿಂತ
ಇದರೊಳಡಗಿದ ಜೇನು ಸವಿಯಾಗಿದೆಯಂದೊ
ನಿನ್ನಂದವ ಮೆಚ್ಚಿ ಮಾತನಾಡದವರು..
ಈ ಅಂದಕೆ ಮನಸೋತು ಮಾರುಹೋಗಿರುವವರೆಂದೊ
ಇಲ್ಲವೆ.. ನಿನ್ನುಧರದ ಕಿಚ್ಚಿಗೆ ಕಿತ್ತಲು ಹೋದಾಗ..
ಚುಚ್ಚಿದ ಮುಳ್ಳಿನ ಸೇಡಿಗಾಗಿ ಹೊಸಕುತಿರುವೆಯೊ..

ಹೊಸುಕದಿರು ಹೆಣ್ಣೆ...
ಇದು ನಿನಗೆ ತರವಲ್ಲ...

Tuesday, July 11, 2017

ಜೀವಾಮೃತವಾಗು

ಮಳೆಯ ಹನಿಗಳಿಲ್ಲದೆ ಧರೆಯ
ಒಡಲಿದು ಬಳಲಿ ಬೆಂಡಾಗಿದೆ..
ಕರಿಮೋಡಗಳ ಆಗಮನದ
ನೀರಿಕ್ಷೆಯಲಿ ಕಾದ ಕಂಗಳಲಿ
ಹಸುವಿನಳುವಿನ ನೆತ್ತರ ಕಣ್ಣೀರು
ಸುರಿಸುತಿದೆ...

ಬೊಳು ಬೊಳಾದ ಮರದ
ರೆಂಬೆಗಳಲಿ ಬದುಕಿನ ಗೂಡನು
ಕಟ್ಟಲಾಗದ ಹಕ್ಕಿಗಳು.... ತಿನ್ನಲು
ಕಾಳು ಕಡಿಗಳಿಲ್ಲದೆ.. ಒಣಗಿಬಿದ್ದ
ತರಗೆಲೆಗಳ ಮೇಲೆ ಹೆಣವಾಗಿ
ಬಿದ್ದೀವೆ

ರವಿಯ ಕಡು ತಾಪಕೆ.... ಎಲ್ಲೊ..
ಮೂಲೆಯಲಿ ಹೊತ್ತಿದ ಅಗ್ನಿಯು
ಕಾನನದ ತುಂಬಾ ತನ್ನ ಕೆನ್ನಾಲಿಗೆಯ
ಚಾಚಿದೆ... ಹಸಿವಿನಿಂದ ನಡೆಯಲು...
ಓಡಲು ಬಾರದ ವನ್ಯ ಜೀವಿಗಳೆಲ್ಲ
ಅಗ್ನಿಗಾಹುತಿಯಾಗಿ.. ಬೂದಿಯಾಗಿವೆ..

ಕೊರಕಲು ಬಿಟ್ಟು ಭೂವಿಯ
ಒಡಲಿಗೆ ಹನಿಗಳ ಅಮೃತದ
ಸಿಂಚನವಗೈಯ್ಯು...
ನೀನಿಲ್ಲದೆ ಬಾಯಾರಿ ಬೀರಿದ
ಅಧರಗಳಿಗೆ ಜೀವಾಮೃತವಾಗು

Sunday, July 9, 2017

ಶರೀಪಜ್ಜನ ಅಂಗಳದ ಸಂತೆ

ನೀವೊಮ್ಮೆ ಬರಬೇಕಾಗಿತ್ತು ಕಣ್ರೀ..
ಆ ಜೋಡು ಮಹಾದ್ವಾರಗಳ ನಡುವೆ
ನಡೆದು ಹೋಗುವಾಗ ಎಡದಲಿ ಹಚ್ಚ ಹಸಿರನೆ
ಹಾಸಿ ಹೊದ್ದು ಮಲಗಿದ ಹೊಲದ ಕಣ್ತಣಿಸುವ
ಸೌಂದರ್ಯ... ಬಲದಲಿ ಭೂವಿಗೆ ಮುತ್ತಿಕ್ಕಿ ತಾನು
ಕೆಂಪಾಗಿ ಕರಗುತಿರುವ ರವಿಯ ಸೌಸುಂದರ ದೃಶ್ಯವ
ಕಾಣಲು.. ದೂರದ ನಡಿಗೆ ಎಂದು ಕವಿಮಿತ್ರ ಗುಡದಿ ತನ್ನ
ವಾಹನದಲ್ಲಿ ಕರೆದುಕೊಂಡು ಹೋಗುವ ಆತ್ಮೀಯತೆಯ
ಅನುಭವಿಸಲು... ಅಜ್ಜನ ಅಂಗಳದ ಸುತ್ತಮುತ್ತ ಕೂಗುವ
ಕೋಗಿಲೆಯ ಇಂಪಾದ ಗಾನಕೆ ಮನಸೋಲಲು....
ಆ ಅಜ್ಜನ ಕಟ್ಟೆಯ ಮೇಲೆ ಕುಳಿತರೊಮ್ಮೆ ಸಾಕು
ಬದುಕಿನ ಜಂಜಾಟಗಳ ಮರೆತು ಕಣ್ಣಿಗೆ ನಿದಿರೆ
ದೇವಿಯು ರೆಪ್ಪೆಗಳ ಹೊದಿಕೆಯ ಹೊದಿಸದೆ ಬಿಡಳು
ಮನದ ದುಗುಡ ದುಮ್ಮಾನಗಳೆಲ್ಲವ ಕಳೆದುಬಿಡುತ್ತಿತ್ತು
ಅಂತಹ ಒಂದು ಸುಂದರ ಸಂಜೆಯ ಸವಿಯನನುಭವಿಸಲು
ನೀವು ಬರಬೇಕಿತ್ತು ಕಣ್ರೀ...

ನಿಜವಾಗ್ಲೂ ನೀವು ಬರಬೇಕಿತ್ತು ಕಣ್ರೀ...
ಅಷ್ಟು ಜನರು ನಾವು ವಾಚಿಸುವ ಪ್ರತಿಯೊಂದು ಕವನಕ್ಕೆ
ಅವರು ತಟ್ಟುತ್ತಿದ್ದ ಚಪ್ಪಾಳೆಗೆ ಮನವದು ಅರಳಿ ಹೂವಾಗುವ
ಸಮಯದಲಿ... ಕಾರ್ಯಕ್ರಮ ಮುಗಿದು ಸಂಜೆಯ ಚಹಾಕ್ಕೆ
ಶಿರ್ಶಿಯ ಮಾರಿಕಾಂಬೆಯ ತಾಯಿಯ ರೂಪವ ಹೊತ್ತು
ಬಂದಿದ್ದ ಸಹೋದರಿ ಹವ್ಯಕ ನಾಗಮಂಜರಿಯವರು..
ತಮ್ಮ ಮನೆಯಿಂದ ಮಾಡಿ ತಂದಿದ್ದ ಕೊಡುಬಳೆ.. ಎರಡು
ತರದ ಸವಿಯುಂಡೆ.. ಸಿಹಿ ಖಾರದ ಮಿಶ್ರಣವ ಮಾಡಿ
ನಾಲಿಗೆ ಚಪ್ಪರಿಸಿ ತಿನ್ನುವ ಮಾವಿನಕಾಯಿಯ ಚಟ್ನಿ
ಆಹಾ...ಹಾ.. ನೆನೆಸಿದರೆ ಈಗಲೂ ಬಾಯಲಿ ನೀರು..
ರಾತ್ರಿಯೂಟಕ್ಕಂತೂ..ರೊಟ್ಟಿ.. ಚಪಾತಿ..ಬುಂದಿ..ಖಾರಾ
ಮೊಸರು.. ಹಾಲು.. ಶೆಂಗಾ ಚಟ್ನಿ.. ತತ್ತಿ ಸಾರು..
ಅಬ್ಬಬ್ಬಾ ಸಹೋದರಿಯವರು ಬಡಿಸಿದ್ದೆ ಬಡಿಸಿದ್ದು
ಉಂಡು ಮಲಗಿದ ಹೊಟ್ಟೆಗೆ ಬೆಳಗಿನ ಆರರ ತನಕ
ಪ್ರಯಾಣದ ಆಯಾಸವನೆಲ್ಲವ ಹೊಡೆದು ಹಾಕಿ
ಮಲಗಿಸಿಬಿಟ್ಟಿತ್ತು..

ನೀವು ಇರಬೇಕಿತ್ರಿ... ಈ ಮುಂಜಾವಲಿ ಎಲ್ಲೆಲ್ಲೂ
ಹಕ್ಕಿಗಳ ಚಿಲಿಪಿಲಿ ಕಲರವ... ನಾವುಳಿದ ಕಟ್ಟಡದ ಎದುರು
ಚಿಕ್ಕ ಕೆರೆಗಳಲೆಯಲಿ ರವಿಯ ನರ್ತನ... ಬೀಸಿ ಬರುವ ಗಾಳಿ
ಅಲೆಗಳ ಚುಂಬಿಸಿ.. ಮೈ ಮನಗಳಿಗೆ ತಂಪಗೈಯುತ್ತಿದ್ದ ಕ್ಷಣಕೆ
ಎಲ್ಲದಕೂ ಮಿಗಿಲಾಗಿ... ಈ ಸಂತೆಯ ಚಿಂತಕರು ಪ್ರತಿಯೊಂದು ವಿಷಯದಲ್ಲು ತೋರಿಸಿದ ಕಾಳಜಿ.. ತಂದೆಯ
ಹಾಗೆ ಊಟಕ್ಕೆ ಒಂದನ್ನು ಕೊರತೆ ಬರದ ಹಾಗೆ.. ತಾಯಿಯಂತೆ ಮಲಗಲು.. ಸ್ನಾನಕ್ಕೆ.. ಬೆಳಗಿನ ಚಹಾಕ್ಕೆ
ಕವನ ವಾಚನದಲ್ಲಿ ಗುರುವಂತೆ ಎಲ್ಲರ ಕವನಗಳ ಆಸ್ವಾದಿಸಿ
ಬೆಂಬಲಿಸುತ್ತಿದ್ದ ಅವರ ಕವಿ ಹೃದಯವ ಅನುಭವಿಸಲು..
ಆ ಸಂತನ ನೆಲದಲ್ಲಿ.. ಇಂತಹ ಚಿಂತಕರ ಆಶ್ರಯದಲ್ಲಿ
ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದದ್ದೆ ನಮ್ಮ ಪೂರ್ವಜನ್ಮದ ಪುಣ್ಯ... ಎಲ್ಲಿಯ ಬಿಜಾಪುರ.. ಎಲ್ಲಿಯ
ಬೆಂಗಳೂರು.. ಎಲ್ಲಿಯ ಶಿರ್ಶಿ.. ಎಲ್ಲಿಯ ನಾನು ಕೂಡಿ
ಕಳೆದ ಸಮಯಕೆ ಬೆಲೆ ಕಟ್ಟಲಾದಿತೆ... ಇನ್ನೊಂದು ಗೊತ್ತೆ
ಸಹವಾಸ ದೋಷದಿಂದೇನೊ..ಸಹೋದರಿ ನಾಗಮಂಜರಿಯವರ ಮಗನಾದಂತಹ ಗಣೇಶನು ಅಲ್ಲಿ
ಕುಳಿತಲ್ಲಿಯೆ ಕವನ ಬರೆದು  ಎಲ್ಲರ ಹುಬ್ಬೇರಿಸುವಂತೆ
ಮಾಡಿದ್ದು ಮರೆಯಲಾದಿತೆ..

ನೀವೆಲ್ಲ ಅನುಭವಿಸಲೆ ಬೇಕಿತ್ತು ಕಣ್ರೀ.. ಕೂಡಿದ
ಒಂದೆ ದಿನದಲಿ ಬೆಸೆದ ಭಾಂದವ್ಯ.. ಎಲ್ಲರೂ ಮರಳಿ
ಅಜ್ಜನ ಆಶೀರ್ವಾದವ ಪಡೆದು ನಗುನಗುತ್ತಲೆ ಒಬ್ಬರಿಗೊಬ್ಬರು ಬಿಳ್ಕೊಟ್ಟು ನಮ್ಮೂರ ಬಸ್ ಹತ್ತಿ
ಮರಳಿ ಊರಿಗೆ ಪ್ರಯಾಣಿಸಿದಾಗ... ಕಿಟಕಿಯ
ಹತ್ತಿರ ಕುಳಿತು ಕಣ್ಮುಚ್ಚಿ ಕುಳಿತೆ.. ಆ ಸಂತೆಯೊಳಗಿನ
ಎಲ್ಲರು ತೋರಿದ ಭಾವಸಂಗಮದ ಪ್ರೀತಿ ವಿಶ್ವಾಸವ ನೆನೆದು..
ಮನದುಂಬಿ ಕಣ್ಣಂಚಲಿ ಒಂದು ಹನಿ ಜಾರದೆ
ನಿಲ್ಲಲಿಲ್ಲ...

Friday, July 7, 2017

ದುಂಡು ಮಲ್ಲಿಗೆ

ಮೊಳದ ಮಲ್ಲಿಗೆ ಮುಡಿಸುತಿರುವೆ
ಮುನಿಸದಿರು ಮನದ ಮಾಲೀಕಳೆ..
ಬಾಳ ಹಾದಿಯ ತುಂಬ ನೀ... ತುಂಬಿದ
ಮಧುವಿಗಿಂತ.. ಇದರ ಘಮಲು ಸಾಟಿಯಾದಿತೇನು
ಹರೆಯದೊಳು ನೀ ಹೊತ್ತು ನಿಭಾಯಿಸಿದ
ಕಷ್ಟಗಳ ಭಾರಗಳಿಗಿಂತ.. ಈ ಮೊಳ ಮಲ್ಲಿಗೆ
ನಿನ್ನ ಮುಡಿಗೆ ಭಾರವಾಗಲಾರದೇನೊ..

ನನ್ನಲ್ಲೇನೂ ನೋಡಿ ಮದುವೆಯಾದೆಯೊ
ನಾನರೀಯೆ.. ನನಗಾಗಿ ನೀ ಸವೆಸಿದ ಬಾಳಿನ
ಹಾದಿಯನ್ನು ನಾನೆಂದು ಮರೆಯೆ..
ಪ್ರತಿಸಲ ನಮ್ಮ ಮನೆಯ ಮೂರು ದೀಪಗಳ
ಹೊತ್ತಿಸುವ ಹೊತ್ತಿನಲ್ಲಿ... ಸಾವಿನ ಬಾಗಿಲವ
ತಟ್ಟಿ ತಟ್ಟಿ ಮೂರು ಮುತ್ತುಗಳ ಹೆತ್ತು ಕೊಟ್ಟೆ
ಇದ್ದ ದುಡಿಮೆಯಲ್ಲೆ.. ತಂದು ಕೊಟ್ಟ ಪುಡಿಗಾಸಿನಲ್ಲೆ
ನೀನೊಂದು ಹೊತ್ತು ಉಪವಾಸವಿದ್ದು...ಎರಡು
ಹೊತ್ತು ನಮಗೆ ಬಡತನದ ಅರಿವೆ ಬಾರದಂತೆ
ಅಡುಗೆಯಲಿ ಅಕ್ಕರೆಯ ತುಂಬಿ ಬಡಿಸುತ್ತಿದ್ದೆ...

ಮುಂಜಾವೈದಕ್ಕೆದ್ದು.. ಮಕ್ಕಳೆಲ್ಲರ ಎಬ್ಬಿಸಿ..ಅವರಿಗೆ
ಕುಡಿಯಲಿಕ್ಕೆ ಹಾಲು.. ಬೂಸ್ಟನ್ನು ಕುಡಿಸದಿದ್ದರು..
ಚಹಾದ ಪುಡಿಯನ್ನಷ್ಟೆ ಹಾಕಿ ಕುದಿಸಿ.. ಸ್ವಲ್ಪ ಸಕ್ಕರೆ
ಹಾಕಿ ಓದಲು ಕುಳ್ಳರಿಸಿ.. ಒಲೆಗೆ ಬೆಂಕಿಯ ಹಾಕಿ..
ನೀರನು ಕಾಯಿಸಿ.. ಅಡುಗೆ ತಯಾರಿಯ ಮಾಡಿಕೊಂಡು
ಮಕ್ಕಳ ಸ್ನಾನ ‌ಮಾಡಿಸಿ ಅವರ ತಿಂಡಿ.. ಶಾಲೆಯ ಚೀಲ
ಮದ್ಯಾಹ್ನಕ್ಕೊಂದಿಷ್ಟು ಬುತ್ತಿಯ ಕಟ್ಟಿಕೊಟ್ಟು ಕಳಿಸಿ..
ನನ್ನನು ಕಳಿಸಿಕೊಡುವ ಹೊತ್ತಿಗೆ.. ಅಂಗಿಯ ಎದೆಯ
ಮೇಲಿನ ಗುಂಡಿ ಕಿತ್ತುಹೋಗಿರಲು.. ನನ್ನನು ಹುಸಿಮುನಿಸಿನಿಂದ ಬೈಯುತ್ತಲೆ ಖಾಜಿಯ ಹೊಲೆದು
ಕೆಲಸಕ್ಕೆ ಕಳಿಸಿ..ನೀನು ಉಣ್ಣುತ್ತಿದ್ದೇಯೊ.. ಇಲ್ಲವೊ..
ಮುಂದಿನ ಮನೆಯ ಕಾಲೇಜ್ ಉಪನ್ಯಾಸಕರ ಮನೆಗೆಲಸಕ್ಕೆ ಹೋಗಿ ಅವರ ಮನೆಯ ಕೆಲಸಗಳನೆಲ್ಲವ ಮುಗಿಸಿ..
ಮತ್ತೆ ಸಂಜೆ ಬಂದ ಮಕ್ಕಳಿಗೆ ಅಭ್ಯಾಸ..ರಾತ್ರಿಯಡುಗೆ
ನನ್ನ ಕಾಲು ತಲೆನೋವೆಂದು ಬೇಡ ಬೇಡವೆಂದರೂ..
ಆ ಮುಲಾಮು ಹಚ್ಚಿ...ನನ್ನ ಕಟ್ಟಿಕೊಂಡ ತಪ್ಪಿಗೆ ಅಂಗೈ
ಅದೃಷ್ಟ ರೇಖೆಗಳೆ ಅಳಿಸಿಹೋದ ಬೆರಳುಗಳಿಂದ ನನ್ನ
ತಲೆಯನ್ನು ಸವರುವಾಗ...ನನಗನ್ನಿಸುವುದು ಆವಾಗ

ಸಿರಿಯ ಆಶಾಕಿರಣವನ್ನೂ ಮೂಡಿಸದೆ ಬಡತನದ
ಬಾಳನೇಕೆ ನೀಡಿದನೆಂದು... ಸಾಕ್ಷಾತ್ ಲಕ್ಷ್ಮೀಯ ಗುಣದ
ಅಪರಾವತಾರವನ್ನೆ ನನ್ನ ಬಾಳಿಗೆ ನೀಡಿರುವಾಗ.. ಇಂದು
ಬಂದು ನಾಳೆ ಹೋಗುವ ಚಂಚಲ ಲಕ್ಷ್ಮೀಯನ್ನು ನನಗೆ
ನೀಡದಿರುವುದೆ ನನ್ನ ಬಾಳಿನ ಸೌಭಾಗ್ಯ...
ನೀನೇಕೆ ಕೆಲಸಕ್ಕೆ ಹೋಗುವೆ ಎರಡು ಹೊತ್ತಿನ ಹೊತ್ತಿಗೆ
ನಾ ದುಡಿಯುತಿರುವಾಗಲೆಂದಲ್ಲೆಲ್ಲ.. ಅಯ್ಯೋ ಸುಮ್ನಿರ್ರೀ..
ನಿಮಗಿರುವುದು ಎರಡೆ ತೋಳು ಎಷ್ಟಂಥ ದುಡಿದು
ತರ್ತಿರಾ... ಉಣ್ಣುವ ಹೊಟ್ಟೆಗಳು ಐದಿವೆ ಗೊತ್ತೆ..
ನಿಮ್ಮ ಬೆನ್ನ ಹಿಂದೆ ಬಂದವಳು ನಾನು ನಿಮಗೊಂಚೂರು
ಬೆಂಗಾವಲಾಗಿ ಇರಬಾರದೆ... ಎಂದು ಗದರಿ ನನ್ನ
ಬಾಯಿಗೆ ಬೀಗ ಹಾಕುವ ನಿನ್ನ ಪರಿಗೆ.. ನಾನಾವ ರೀತಿಯಲ್ಲಿ ಆ ದೇವರಿಗೆ ನಮಸ್ಕರಿಸಲಿ..

ಒಪ್ಪಿಸಿಕೊ.... ಮಲ್ಲಿಗೆ ನಿನ್ನ ಮುಡಿಗೆ ಮೆಲ್ಲಗೆ
ನನ್ನಲೆನೀದೆ ನಿನ್ನೊಲವನೊಂದನು ಹೊರತುಪಡಿಸಿ
ಇದೆ.. ನಾ ನಿನಗೆಂದೆ ತಂದ ಕೊಡುಗೆ..
ಮಲ್ಲಿಗೆ... ಅರಳುವುದು... ಉಸುರುವುದು..
ಬಾಡುವುದು ಸಂಜೆಗೆ
ನೀ ತುಂಬಿದ ಒಲವ ಮಧುಬಿಂದುಗಳ.. ನಾ ಹೇಗೆ
ಮರೆಯಲಿ ನಿನ್ನೊಡನೆ ಕಳೆದ ದಿನಗಳ ಕ್ಷಣಗಳಿಗೆ
ಇರಲಿ.. ಜನ್ಮ ಜನ್ಮಕೂ ನಮ್ಮಿಬ್ಬರ ಮುರಿಯದ ಬೆಸುಗೆ
ನೀನೆಂದಿದ್ದರೂ.. ನನ್ನ ಬಾಳಿಗೆ ಬಾಡದ.. ಉದುರದ
ಸದಾ ಒಲವ ರಸವ ತುಂಬಿ ಸೂಸುವ ದುಂಡು ಮಲ್ಲಿಗೆ
ನೀನೊಂದು ದುಂಡು ಮಲ್ಲಿಗೆ

Thursday, July 6, 2017

ಮುತ್ತಿನ ಮಳೆ ಸುರಿಸಿದೆ

ಗೆಳತಿ
ನಿನ್ನ ಮಾತಿಲ್ಲದ ಮೌನಕೆ
ಮುಗಿಲ ಮೋಡವದು
ಹೆಪ್ಪಾಗಿ ಕಪ್ಪಾಗಿ ಮಲಗಿತ್ತದು
ನಿನ್ನಷ್ಟೇ ಮುನಿಸಿನಿಂದಲೆ..
ಈಗ ನೋಡು ನಿನ್ನೀ.. ಬೆಳ್ಳಿ
ಬೆಳದಿಂಗಳ ನಗುವಿಗೆ...
ಮೋಡವದು ಕರಗಿ... ನಾಚಿ
ನೀರಾಗಿ ನಮ್ಮ ಪ್ರೀತಿಯ
ಅಂಗಳಕೆ ಮುತ್ತಿನ ಹನಿಗಳ
ಸುರಿಸುತಿದೆ..