Tuesday, September 12, 2017

ಯಾಕ ತಂಗಿ

ಯಾಕ ತಂಗಿ..
ಹಿಂಗ್ಯಾಕ ಸೆಟಗೊಂಡ ಹೊಂಟಿ
ಛಲೋ ಅಲ್ನೋಡಿದು ನೀ ತಗೆಯೊ ತಂಟಿ
ನೀ ಇಲ್ದ ಒಣಗಿ ಹೊಂಟೈತಿ ಗುಲಾಬಿ ಕಂಟಿ
ನಿನ್ನ ಹೆಜ್ಜೆನ ಮಾತಿಲ್ದ ಮನಿಯಾಗೈತಿ ಒಂಟಿ
ಸೆಡವು ಮರತ ಮನಿಗ ಬಾರ ತುಂಟಿ

ಬೆಂಗ್ಳೂರಣ್ಣ ರೇಷ್ಮಿ ಸೀರಿ ಕೊಡ್ಸಿಲ್ಲಂತ
ಸಿಟ್ಟಾಗಿಯನು..
ಶಿರಶಿ ಅಕ್ಕೊರು ಚಕ್ಲಿ.. ಕೊಡ್ಬಳೆ ತಿನ್ಸಿಲ್ಲಂತ
ಕೊರಗಾಕ ಹತ್ತಿಯನು
ಗುರುಗಳು ಶಿಶುನಾಳಗೆ ಕರ್ದಿಲ್ಲಂತ
ಬ್ಯಾಸ್ರಾ.. ಮಾಡ್ಕೊಂಡಿಯನು..
ಹೋಗ್ಲಿ ಬಿಡ.. ತಂಗಿ ಈ ನಿಮ್ಮ
ಗಡಾದಣ್ಣ ಇಳಕಲ್ಲ ಚಮ್ಕಾ ಸೀರಿ ತರ್ತಾನ
ನಮ್ಮೂರ ಕತ್ರ್ಯಾನ ಬೆಲ್ಲದ ಜಿಲೆಬಿ ತಿನ್ನಸ್ತಾನ
ವಾರ.. ವಾರ ಮೈಸೂರು ಮಠದಾಗ ನಡೆಯೊ
ಸಂಜಿ ಹೊತ್ತನ್ಯಾಗ.. ನಿನವ ಛಲೊವೊ..
ನಾಕ ಕವನ ಓದಾಕ ಹಚ್ತಾನ..

ತೆಪ್ಪದಾಗ ಕುತಗೊಂಡ ತೆಪ್ಪಗಿರಬ್ಯಾಡ ನಮ್ಮವ್ವ
ಎಲ್ಲಾ.. ನೆನದ ನೆನದ ಕಣ್ಣಾಗ ಹನಿ ತಂದ್ಕೊಬ್ಯಾಡ
ಮೊದ್ಲ ಮಲ್ಗಿ ಬಳ್ಳಿ ಅದಿ ನೀನು ಇನ್ನಷ್ಟು ಸೊರಗಬ್ಯಾಡ
ಗೊತ್ತು ಗುರಿಯಿಲ್ದ ದಾರಿ ಹಿಡ್ದ ಹೊಂಡಬ್ಯಾಡ
ನೀ..ಹೊಳ್ಳಿ ಬರ್ತಿಯಂತಾನ ಕೈಯಾಗ ಜೀವ
ಹಿಡ್ಕೊಂಡು ಕುಂತಿವಿ ನೀ ಇದನ್ನ ಮರಿಬ್ಯಾಡ

ಬಿಟ್ಯಾಕ ಹೋದಿ.. ನನ್ ಮರತ

ಬಿಟ್ಟ್ಯಾಕ ಹೋದಿ ನನ್ ಮರೆತ...
ಯಾರು ಇಲ್ಲ ಈ ಜಗದಾಗ ನಿನ್ನ ಪರತ
ಹ್ಯಾಂಗರ ಇರ್ತೀ ನೀ.. ನನ್ನ ಹೊರತ
ಸೇರೊನು ಬಾರಾ.. ಹಾಲು ಜೇನ್ಹಂಗ
ಒಂದಾಗಿ ಬೇರೆತ
ಅರಿತ ಬಾಳಿದ್ರ... ನಮ್ಮಿಬ್ರಿಗೂ ಒಳಿತ

ಪ್ರೀತಿ ಹಾಲಿಗೆ ಹೆಪ್ಪ ಹಾಕೋದ ಬಿಟ್ಟು
ಉಪ್ಪ.. ಹಾಕಿ ಹೋಗೊದೇನ
ನಂಬ್ಕಿ ಮಡ್ಕಿಗೆ ತೂತು... ಹಾಕಿದ್ದು ಮರಿತೇನ
ಯಾರ್ದರ ಮಾತಿಗೆ ತಾಮ್ರದ ಕಿವಿ ಕೊಟ್ಟ
ಕೆಡ್ಸಕೊಂಡಿ ಯಾಕ ನಿನ್ನ ನಡ್ತಿ
ಬೆಲ್ಲದ ಮಾತನ್ಯಾಗ ವಿಷ ತುಂಬೊದ್ನ
ನೀ.. ಯಾರಿಂದ ಕಲ್ತಿ..

ಪ್ರೀತಿ ಬಳ್ಳಿ ಇಷ್ಟೇತ್ತರಕ್ಕ ಬೆಳಸಿ... ಹೂವಾ
ಬಿಡೊ ಮುಂದ.... ಅದನ್ಯಾಕ ಚಿವುಟಿದಿ
ಬದುಕಿನ ಅಂಗಳ್ದಾಗ... ಕನಸಾ ಕಂಡ...
ಬಿಡಿಸಿದ ರಂಗೋಲಿಗೆ.... ನೀರ..ರ ಯಾಕ ಸುರ್ದಿ...
ನಿನ್ನ ನಗುವಿನಾ ರೂಪಾನ... ಹೊತ್ಕೊಂಡ ತಿರ್ಗತೀದ್ದ
ನನ್ನೇದಿ ಕನ್ನಡಿನ.. ಯಾಕರ ಒಡ್ದಿ..

ನಿನ್ನ ನೆಪ್ಪನ್ಯಾಗ ನೆಂದ.. ನೆಂದ..ತುಕ್ಕ
ಹಿಡಿಯಾಕ ಹತ್ತೈತಿ..ಈ ಪ್ರೀತಿಯ ಕಂಬಿ
ಹೋಗಬ್ಯಾಡ ನೀ ಹಿಂಗ.. ಮನಸಿನ
ಮಡಿಕ್ಯಾಗ ನೋವಿನ ಬ್ಯಾನಿ ತುಂಬಿ...
ಬಾಳೆನರ.. ಹ್ಯಾಂಗ ಮಾಡ್ಲಿ ನಾನು..ನೀನಿಲ್ದ
ವಿಷಾ ತುಂಬಿದ ಈ ಜಗತ್ತನ್ನ ನಂಬಿ...

Sunday, September 10, 2017

ನಾನೆಂದೂ ಸತ್ತಿಲ್ಲ

ಬಯಸಿ.. ಬಯಸಿ ಪಡೆದ ಸಾವಲ್ಲ
ನಿನ್ನಳಿಸಲೆಂದೇ.. ನಾನಿಲ್ಲಿ ಮಲಗಿಲ್ಲ
ತುಂಬು ಪ್ರೀತಿಗೆ ಯಾರ ಕಣ್ಣು ತಾಕಿತೊ.. ಗೊತ್ತಿಲ್ಲ
ಎಷ್ಟೆ ಬೇಡಿದೆ..... ಜವರಾಯ ಮಾತ್ರ ಬಿಡಲಿಲ್ಲ

ನಿನ್ನ ಮುಡಿಗೇರಬೇಕಿದ್ದ ಸುಮಗಳೆಲ್ಲ
ನನ್ನ  ಗೋರಿಯ ಮೇಲಿವೆ
ಕಂಡ ಕನಸುಗಳೆಲ್ಲ ನನಸಾಗದೆ
ನನ್ನೊಡನೆ ಹೂತು ಮಲಗಿವೆ

ನಡು ದಾರಿಯಲ್ಲಿಯೆ ಬಿಟ್ಟು ಬಂದಿರುವೆ

ನಿನಗೆಂದೆ ಕೊಡುವ ಮುತ್ತು
ನನ್ನಲಿ ಉಳಿದು ಹೋಯ್ತು
ಬದುಕಿ ಬಾಳಬೇಕಾದ ದಿನಗಳೆಲ್ಲ
ಮಣ್ಣಲೆ ಬೇರೆತು ಹೊಯ್ತು
ನಿನ್ನ ಬಿಟ್ಟು ಬಂದ ಜಗವಿದು
ನೀನಿಲ್ಲದೆ ಬರಿದಾಯ್ತು

Saturday, September 9, 2017

ಏನೀ ಬಾಳು

ಏನೀ.... ಬಾಳು
ಮಾಯಾನಗರಿಗೆ ಬಂದರೂ...
ತಪ್ಪುತ್ತಿಲ್ಲವಲ್ಲ ಗೋಳು
ಬರವು ಹಳ್ಳಿಯ ಬದುಕನ್ನೆ
ಮಾಡಿದೆಯಲ್ಲ ಹೋಳು
ನೆರೆಯು ತುತ್ತಿನ ಚೀಲದೂರಿಗೂ...
ತುಂಬಿಸಿಬಿಟ್ಟಿತಲ್ಲ ಹೂಳು

ಅರಿವಿಲ್ಲದಾಯಿತೆ ವರುಣ..
ನಮ್ಮೂರಿನಲ್ಲಿ ನೀನೀತ್ತ ಹಸಿವಿನ ಸಂಕಟ
ನಿನಗಿಲ್ಲವಾಯಿತೆ ಕರುಣ...
ತಂದಿಟ್ಟೆಯಲ್ಲೊ ಬೆಂದೂರಿನಲ್ಲಿ
ದುಡಿಮೆಗೂ ಕಂಟಕ
ನಿನಗರಿವಾದಿತೊ...ಬೀದಿ ಕಾಮಣ್ಣರ ಕಣ್ತಪ್ಪಿಸಿ
ಬದುಕುವ ಬದುಕಿನ ಸಂಕಷ್ಟ

ಹುಟ್ಟಿದೂರಿನಲಿ ವಲೆಗೆ ಬೆಂಕಿಯ
ಹಚ್ಚಲು ಶಕ್ತಿಯ ನೀಡಲಿಲ್ಲ
ವಲಸೆ ಬಂದಲ್ಲಿ ವಲೆಯ ಹಚ್ಚಲು.. ನೀರು
ಸುರಿಸಿ.. ಆರಿಸಿ ನಿನ್ನ ಕುಯುಕ್ತಿ ಬಿಡಲಿಲ್ಲ
ತೋಯ್ದ ಬಟ್ಟೆಗಳೊಂದಿಗೆ ನಿನ್ನ ಹನಿಗಳಲಿ
ನೆನೆಯುತ್ತ ಸೂರಿಲ್ಲದೆ ಸಾಗುತಿಹುವೆವಲ್ಲ

ನಮಗಿನ್ನೂ... ಬದುಕುವ ಆಸೆಯಿದೆ
ಬದುಕ ಕಟ್ಟಿಕೊಳ್ಳುವ ಛಲವಿದೆ
ಊರ ಶೆಟ್ಟರಂಗಡಿಯ ದಿನಸಿ ಬಾಕಿಯನ್ನು
ಚುಕ್ತಾ ಮಾಡುವ ದುರಾಸೆಯಿದೆ
ಕರುಳ ಬಳ್ಳಿಗಳ ಓದಿಸಿ ನಮ್ಮ ಕಷ್ಟಗಳಿಗೆ
ಅವರ ಕೈಯಿಂದಲೆ...ಮುಕ್ತಿ ಹಾಡಿಸಬೇಕೆಂಬ
ಮಹದಾಸೆಯಿದೆ

ಬದುಕಬೇಕಿದೆ ನಾವು.. ನಾಳೆಗಳ ಗೆಲ್ಲೋಕೆ
ಮೆಟ್ಟಬೇಕಿದೆ ನಾವು ನೀ ಕೊಟ್ಟ ಕಷ್ಟಗಳ
ಬರುವ ಬದುಕಿನ ಹಾದಿಯ ಹಸನಾಗಿಸೋಕೆ

ನಗಿ ಬಾವ್ಯಾಗ ಬಿದ್ದಾಂವ

ಬಾವಿಕಟ್ಟಿ ಮುಂದ ನೀ ನನ್ನ
ನೋಡಿ ನಕ್ಕಿದ್ದು ಸುಳ್ಳಲ್ಲ
ಆ ನಗಿ ಬಾವ್ಯಾಗ ಸದ್ದಿಲ್ದ ಬಿದ್ದಾಂವ
ನಾನಂತ ಇಲ್ಲೆ ಯಾರಿಗೂ.. ಗೊತ್ತಿಲ್ಲ
ಎಷ್ಟ ಬಿಂದ್ಗಿ ನೀರ ಸೇದಿ ಸುರಕೊಂಡ್ರೂ
ನಿನ್ನ ನಗಿ ಮತ್ತ.. ಇಳಿತಿಲ್ಲ

ಹಾದಿ ಮೂಲ್ಯಾಗ ನಿಂತ್ಗೊಂಡ ಜಿಂಕಿ
ಕಣ್ಣಿಲೆ ಎಷ್ಟರ ಪ್ರೇಮದ ಬಾಣ ಬಿಟ್ಟಿ
ಹಗಲ್ಯಾವ್ದೊ... ರಾತ್ರಿಯಾವ್ದೊ...ಕಣ್ಣಿಗೆ
ಪುರಸೊತ್ತ ಇಲ್ದಂಗ ನಿದ್ದಿಗೆ ಕೊಳ್ಳಿ ಇಟ್ಟಿ
ಕಣ್ಣಿದ್ದೂ.. ಕುರ್ಡನಂಗ ಅಡ್ಯಾಡಕ ಹಚ್ಚಿಯಲ್ಲ
ನನ್ನ.... ಕಣ್ಣಿಗೆ ನಿನ್ನ ಪ್ರೀತಿ ಬಟ್ಟಿಯ ಕಟ್ಟಿ

ಎದಿಯಾಗ ಎಷ್ಟ ಭಾರ ಆಗೈತಿದು
ನಿನಗ ಹೇಳುವಂತ‌ ಮಾತ... ಒಂದು
ಕೇಳಿಯೂ... ಕೇಳ್ದಂಗ ಹೋಗ್ಬ್ಯಾಡ ನೀನು
ಪ್ರೀತಿ ಹಾದ್ಯಾಗ ಕಾದ ಕುಂತ ಹಕ್ಕಿನ ಕೊಂದು
ಬಾಳೊದ ಆಗೋದಿಲ್ಲ ನಂಗ... ವಲ್ಲೆನ್ನೊ
ನೋವಿನ ಬೆಂಕ್ಯಾಗ ಬೆಂದು ನೊಂದು

ನಿನ್ನ ನಗಿ ಬಾವ್ಯಾಗ ಬಿದ್ದಾವ್ನ
ಮುಳಗುಸ್ತೀಯೊ... ತೇಲಸ್ತಿಯೊ...ಹೆಂಗೊ.?
ತಲಿಬಾಗ್ಲದಾಗ ಅಕ್ಕಿ ತುಂಬಿದ ಸೇರಿಟ್ಟಿನಿ
ಒದ್ದ ಒಳಗ ಬರ್ತೀಯೊ...‌.
ನಿನ್ನ ನಂಬಿ ಕುಂತ ಎದಿಮ್ಯಾಲ ಕಾಲಿಟ್ಟ
ಅದರ ಉಸುರ ನಿಲ್ಲಿಸಿ ಹೋಗ್ತಿಯೊ...

Monday, September 4, 2017

ಸೇಡವು

ಎಷ್ಟರ..ಸೇಡವು ನನ್ನ ಮ್ಯಾಲೆ
ಮುಡಿಗೆ ತೊಡಿಸ್ಲೇನ ಹೂವಿನ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆಮೇಲೆ
ಆ ಮೊಗದಾಗ ನಗುವಿನ ಮಲ್ಗಿನ.. ಇಲ್ಲಂದ್ರ
ನಾ ಹ್ಯಾಂಗರ ಬದುಕಿರ್ಲಿ..ಈ ಭೂಮಿ ಮ್ಯಾಲೆ

ಮನದಾನ ಸಿಟ್ಟನ್ನ ಕನಸಿಗ್ನೂ
ಯಾಕ ಕಲಿಸಿದಿ
ಕನಸನ್ನು ಕಸಗೊಂಡು ರಾತ್ರಿ
ನಿದ್ದಿ ಯಾಕ ಮರೆಸಿದಿ
ನೆನಪಿನ ಭಾರನ ಎದಿಮ್ಯಾಲ
ಅದೇಷ್ಟು ಹೊರಿಸಿದಿ
ನೋವಿನ ನೀರು ಎಷ್ಟ ಕಹಿಯಂತ
ನೀ ಏನ ತಿಳಿದಿ
ನನ್ನ ಕಣ್ಣೀರಾಗ ನಿನ್ನ ಕಣ್ಣನ್ನರ ತೊಳ್ಕೊ...
ತಿಳಿಯಾಗ್ಲಿ ನಿನ್ನ ಕಣ್ಣಾನ ಹಳ್ದಿ

ಮುಚ್ಚಿಟ್ಟಿದ್ದು ಭಾಳ ದಿನ ನಿಂದ್ರಂಗಿಲ್ಲ
ಹಳಸಿ ಹೊಕ್ಕೈತಿ
ಪ್ರೀತಿ ಉಸಿರ ತಡೆ ಹಿಡ್ಕೋಬ್ಯಾಡ
ತಡ ಆದ್ರ ಅದರ ಉಸಿರ ನಿಲ್ತತೈತಿ
ಜೇನು ಹೂವಿಗೆ ಮುತ್ತು ಕೊಟ್ರ..ಹೂ
ಅರಳಿದ್ದು ಸಾರ್ಥಕ ಆಕ್ಕೈತಿ
ನನ್ನ ಹೂವಿನ ಜೊತೆ ನಾನು ಬಾಳೆ ಮಾಡಿದ್ರನ
ಬದುಕಿಗೊಂದು ಅರ್ಥ ಬರತೈತಿ..

Sunday, September 3, 2017

ಗುರುಗಳೆ

ಬೆತ್ತದ ರುಚಿಯಲಿ
ಬತ್ತದ ಅಕ್ಷರಗಳ ಕಲಿಸಿದವರು
ಗೆಜ್ಜೆಗಳ ನಾದದಲಿ
ಗೋವಿನ ಹಾಡನು ಹಾಡಿಸಿದವರು
ಒಂಟಿ ಕಾಲಲೆ ನಿಲ್ಲಿಸಿ
ಸಾಲು ಸಾಲು ಮಗ್ಗಿಗಳ ಕಲಿಸಿಕೊಟ್ಟವರು

ಹಗಲಿರುಳು ತಮ್ಮ ತಾ ಸುಟ್ಟುಕೊಂಡು
ನಮ್ಮ ಬಾಳಿಗೆ ಬೆಳಕ ಚೆಲ್ಲಿದವರು
ಬಗ್ಗದ.. ಜಗ್ಗದ ದಡ್ಡ ಕಬ್ಬಿಣಗಳ
ಕಾಯಿಸಿ..ಕಾಯಿಸಿ ರೂಪವ ಕೊಟ್ಟವರು
ಜೀವನದ ಹಾಳೆಯಲಿ ತಪ್ಪುಗಳನೆಲ್ಲವ
ಅಳಿಸಿ.. ಮರಿಸಿ..ಒಳ್ಳೆಯದಕ್ಕೆ ಮುನ್ನುಡಿಯ
ಬರೆದವರು

ಬೆಟ್ಟ ಗುಡ್ಡಗಳ ಸುತ್ತಾಡಿಸಿ.. ಪ್ರಕೃತಿಯ ಮಡಿಲಲಿ
ಬೇರಸಿ.. ಮಲಗಿಸಿ ಮಾಸದ ಅನುಭವವ
ಕಟ್ಟಿಕೊಟ್ಟವರು
ಗೆಲುವೆಂದರೆ ಅದು ನಿನ್ನಿಂದ ಎಂಬ
ಹುರುದುಂಬಿಸುವ ಮಾತುಗಳಿಂದ ಕ್ರೀಡೆಗಳಿಗೆ
ಕಳಿಸುತ್ತೀದವರು
ನಮಗಾಗಿ ಬದುಕುವುದು ಬದುಕಲ್ಲ..
ಇನ್ನೊಬ್ಬರಿಗಾಗಿ ಬದುಕುವುದು ಬದುಕೆಂದು
ಬದುಕಿ ತೋರಿಸಿಕೊಟ್ಟವರು

ಜಡವಾದ ಕೊರಡಾಗಿದ್ದೇನ್ನನು.. ನೆಟ್ಟು
ಜ್ಞಾನದ ನೀರೆರೇದು ಪೋಷಿಸಿದವರು
ಮನಸಿನ ಕಲ್ಮಷವನು ಶಿಕ್ಷಣದ ಗಂಗೆಯಲಿ
ತೊಳೆದು ಸನ್ಮಾರ್ಗವ ತೋರಿದವರು
ಸಮಾಜಕ್ಕೆ ನೆರಳಾಗಿಸಿ.. ದೇಶಕ್ಕೆ ಉತ್ತಮ
ಫಲಕಾರ್ಯಗಳ ನೀಡುವಂತೆ ರೂಪಿಸಿದವರು

ಗುರುಗಳೆ...ನೀವು ಬಿತ್ತಿದ ಪದ ಪದಗಳಿಗೂ
ನಾನವ ಬೆಲೆಯ ಕಟ್ಟಲಿ... ಅದಾವ ರೀತಿಯಲ್ಲಿ
ಗುರು ಕಾಣಿಕೆಯನರ್ಪಿಸಲಿ...