Wednesday, March 7, 2018

ಕಾಮ - ಕಾಮನೆಗಳ ದಹನ

ಶತಶತಮಾನಗಳು ಕರಗಿಹೋದವು
ಕಾಲನ ಗರ್ಭದಲಿ.....ತಣ್ಣನೆ !!
ಮರದ ನಿರ್ಜೀವ ಕೊರಡುಗಳು
ಉರಿದು ಹೋದವು.... ಧಗಧಗನೆ ಸುಮ್ಮನೆ...!!
ಉರಿಸಿದವರೆದೆಯಲ್ಲಿ ಹೊತ್ತಿದೊಂದಾವುದು
ಉರಿದು ಬೂದಿಯಾಗಲಿಲ್ಲವಲ್ಲ ಕಾಮನೆ..!!!!

ಉರಿದು ಬೂದಿಯಾಗಿ.. ಸುಳಿಗಾಳಿಗೆ ಸಿಕ್ಕು
ಅನಂತದಲಿ ಲೀನವಾಗುವ ಕಾಮಣ್ಣನ ಮಣ್ಣಿನಲಿ...
ನಿಲ್ಲುತಿಲ್ಲವಲ್ಲ ಹಸುಕಂದಗಳ ಮೇಲಿನ ಬಲತ್ಕಾರ..
ಕೇಳುತಿಲ್ಲವೇನೊ...? ಮೂಜಗದ ಮೂಕ್ಕಣ್ಣನೆ...
ಹಸಿದ ಹದ್ದುಗಳ ವಾಂಛೆಗೆ ಬಲಿಯಾದ
ನೊಂದೊಡಲುಗಳು ಚೀರುವ ಚಿತ್ಕಾರ...

ಸುಟ್ಟು.. ಸಂಭ್ರಮಿಸಿ ಎರಚಾಡುವರಲ್ಲ
ಬಗೆ ಬಗೆಯ ಬಣ್ಣವನು...ಯಾವ ಬೇಧವಿಲ್ಲದೆ
ಮತ್ತೇಕೆ ..? ಹಂಚಿಕೊಳ್ಳುವಿರಿ... ಸಮಾಜ ಸ್ವಾಸ್ಥ್ಯವ
ಹದಗೇಡಿಸುವ ಬಣ್ಣ ಬಣ್ಣದ ಬಟ್ಟೆಗಳನು..
ಸಪ್ತ ರಂಗುಗಳ ಮಿಲನಕರಳಿತು ಬಿಳಿಯು
ಮಿಲನಗೈಯ್ಯದ ಬಾವುಟಗಳು ಕಕ್ಕುತಿಹವು ನೆತ್ತರನು..

ನಾಗರೀಕತೆಯ ಸೋಗಿನಲ್ಲೂ...ನರಹತ್ಯೆಗಳು ನಿಲ್ಲುತಿಲ್ಲ
ಮದನ ಮಣ್ಣಾಗುವ ನೆಲದಲ್ಲೂ ಬಲತ್ಕಾರಗಳಿಗೆ ಬರವಿಲ್ಲ
ಭೂಗರ್ಭ ಸಂಜಾತೆಯ ಹೊತ್ತೊಯ್ದ ದಶಮುಖನ ದಹನಗೈದು, ಲೋಕಕೆ ರಾಮಾಯಣವ ಕೊಟ್ಟ ಮಣ್ಣಿದು
ಮಾತೃ ಸ್ವರೂಪಳ ಸೇರಗಿಗೆ ಕೈ ಹಾಕಿದ ವಂಶಸ್ಥರ ರಕ್ತದ
ಕಾಲುವೆಯನೆ ಹರಿಸಿ...ಕಾರ್ಯಫಲದ ಗೀತೆ ಸಾರಿದ ಬೀಡಿದು

ಉರಿಸುವವಷ್ಟೇ... ಮಾತು ಬಾರದ, ಕಡೆದು
ಒಡೆದು ಹಾಕಿದ ಟೊಂಗೆಗಳ...
ಲಾಠಿಯ ಹಿಡಿದು... ಅಟ್ಟಾಡಿಸಿ, ಹೊಡೆದೊಡಿಸಲಾಗುತಿಲ್ಲ
ಕಾಮಮದವೇರಿದ ಮಂಗಗಳ..

Saturday, March 3, 2018

೮೪ ನೇ ವಾರ

ವಾರದ ೮೪ ನೇ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ವಿಜ್ಞಾನದಲ್ಲಿ ಮಹಿಳೆಯರ ಪಾತ್ರ ಈ ವಿಷಯದ ಕುರಿತು ಶ್ರೀಮತಿ ಎಸ್.ಡಿ.ಕೋಲಕಾರ ಶಿ. ಇವರು ಈಗಾಗಲೇ ವಿಜ್ಞಾನದ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವಂತಹ ಮಂಗಲಾ ನಾರ್ಲಿಕರ್ - ಇವರು ತಮ್ಮನ್ನು ಒಬ್ಬ ಅರೆಕಾಲಿಕ ವಿಜ್ಞಾನಿ ಎಂದು ಕರೆದುಕೊಳ್ಳುತ್ತಾರೆ. ಇವರು ತಮ್ಮ ಪಿ.ಎಚ್ಡಿಯನ್ನು ಮದುವೆಯಾಗಿ ೧೬ ವರ್ಷಗಳ ನಂತರದಲ್ಲಿ ಪೂರ್ಣಗೊಳಿಸುತ್ತಾರೆ. ಅವರು ಪುಣೆ ಮತ್ತೆ ಮುಂಬೈನ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಅಗಿ ಕಾರ್ಯವನ್ನು ನಿರ್ವಹಿಸಿದ್ದಾರಲ್ಲದೆ ಇಂದಿಗೂ ತಮ್ಮ ಮನೆಯಂಗಳದಲ್ಲಿ ಬಡ ಮಕ್ಕಳಿಗೆ ಗಣಿತವನ್ನು ಹೇಳಿಕೊಡುತ್ತಿದ್ದಾರೆ. ಇವರಷ್ಟೆ ಅಲ್ಲದೆ, ಜಾನಕಿ ಅಮ್ಮಾಲ- ಸಸ್ಯಶಾಸ್ತ್ರಜ್ಞೆ, ಆನಂದಿಭಾಯಿ ಜೋಷೆ- ವೈದ್ಯಕೀಯ, ಆಶೀಮಾ ಚಟರ್ಜಿ, ರಾಜೇಶ್ವರಿ ಚಟರ್ಜಿ, ಅಣ್ಣಾ ಮನಿ ಹೀಗೆ ಇನ್ನೂ ಅನೇಕ ಮಹನೀಯರ ಜೀವನಗಾಥೆ, ಅವರ ಬದುಕಿನ ಏಳುಬೀಳು, ಅವರ ಮಹತ್ಸಾಧನೆಗೆ ಪ್ರೇರೇಪಿಸಿದಂತಹ ಅಂಶಗಳ ಕುರಿತು ಹಾಗೂ ೫೧೪ ವಿಜ್ಞಾನದ ನೊಬೆಲ್ ಪಾರಿತೋಷಕದಲ್ಲಿ ೧೦ ಜನ ಮಹಿಳೆಯರು ಪಡೆದಿದ್ದನ್ನು ಅತ್ಯಂತ ಗರ್ವದಿಂದ ಹೇಳಿಕೊಂಡರಲ್ಲದೆ,ಮುಂದಿನ ಯುವ ಪೀಳಿಗೆ ವಿಜ್ಞಾನದ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶಕ್ಕೆ ಕೀರ್ತಿಯನ್ನು ತಂದುಕೊಡಬೇಕೆಂದು ಆಶೀಸಿದರು.

ಅತಿಥಿಗಳಾಗಿ ಆಗಮಿಸಿದ್ದಂತಹ ಡಾ.ಆಯ್.ಜೆ.ಮ್ಯಾಗೇರಿ ಇವರು ಕಸಾಪ ದ ಕಾರ್ಯವೈಖರಿಯನ್ನು ಶ್ಲಾಘೀಸುತ್ತಾ ತಾವು ಲಂಡನ್ ಗೆ ಹೋದ ಸಮಯದಲ್ಲಿ ಷೇಕ್ಸ್‌ಪಿಯರ್ ಮನೆಗೆ ಭೇಟಿಕೊಟ್ಟ ಸಂದರ್ಭವನ್ನು ನೆನಪಿಸಿಕೊಂಡು,ಮಹಿಳೆ ಹುಟ್ಟಿನಿಂದಲೇ ವಿಜ್ಞಾನಿ ಆಗಿದ್ದು ಮನೆಯನ್ನು ನಡೆಯುವ ಹಾಗು ಯುದ್ಧ ವಿಮಾನ ಚಲಾಯಿಸುವ ಧೀಮಂತಳಾಗಿದ್ದಾಳೆ ಎಂದರಲ್ಲದೆ,.ಮುಂದಿನ ದಿನಮಾನಗಳಲ್ಲಿ ಗಜೇಂದ್ರಗಡದ ಸಾಹಿತ್ಯದ ಕಂಪು ನಾಡಿನಾದ್ಯಂತ ಪಸರಿಸಲೆಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಆಯ್.ಎ.ರೇವಡಿಯವರು ಸಾಧನೆಗೈದ ಮಹಿಳಾ ಸಾಧಕಿಯರ ಮಾತನಾಡುತ್ತಾ, ಈಗೀನ ಯುವಪೀಳಿಗೆಯು ಪ್ರತಿಭಾ ಪಲಾಯನಗೈಯ್ಯುವುದನ್ನು ಖಂಡಿಸುತ್ತಾ, ಇಲ್ಲೆ ಇದ್ದು ದೇಶಕ್ಕೆ ಸೇವೆಯನ್ನು ಮಾಡುವುದರ ಮೂಲಕ ದೇಶದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸಬೇಕೆಂದು ನುಡಿದರು.

ಸರಕಾರಿ ಮಾದರಿಯ ಶಾಲೆಯ ಮಕ್ಕಳು ಸಂಗೊಳ್ಳಿ ರಾಯಣ್ಣನ ನಾಟಕವನ್ನು ಮಾಡಿ ತೋರಿಸುವುದರ ಮೂಲಕ ಜನಮನವನ್ನು ಗೆದ್ದರಲ್ಲದೆ, ಯಾವ ಆಂಗ್ಲ ಮಾಧ್ಯಮದ ಶಾಲೆಗಳಿಗಿಂತಲೂ ನಾವು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಿ.ವಿ.ಮುನವಳ್ಳಿ,, ಇಂದಿರಾ ಪಾಟೀಲ, ಎ.ಕೆ.ವಂಟಿ, ರಮೇಶ ಮೆಣಸಗಿ, ಆಯ್ .ಜೆ. ಮ್ಯಾಗೇರಿ
ಎನ್.ಎ. ಅಮಟೆ, ಎಸ್.ಎಮ್.ನೂಲ್ವಿ, ಗ್ಯಾನೇಶ ಗೊಂದಳೆ , ಹೆಚ್.ವಿ. ಕಂಬಳಿ, ಶರಣಮ್ಮ ಅಂಗಡಿ, ಭಾರತಿ ಮಿಟಗಲ್ಲ, ಶಾಸ್ತ್ರೀಜಿ ಜ್ಯೋಶಿ, ಡಿ.ಆರ್.ಮ್ಯಾಗೇರಿ

Friday, March 2, 2018

ಅರಿಯೆ ಏನೊ...?

ನಾನಾರೆಂದು ನೀನರಿಯದೆ ಹೋದೆಯೆ..?
ಕಣ್ಣ ಕೊಳದಲ್ಲಿ ಈಜು ಬಾರದೆಂದು ಸತಾಯಿಸಿದವನು....
ಕಟ್ಟಿದ ತುರುಬನು ಬಿಚ್ಚಿ...ಹರಡಿದ ಮುಂಗುರುಳ
ಮೂಸಿ ಮನಸೋತು,
ಜಡೆತುಂಬಾ ಮಲ್ಲಿಗೆಯ ಮುಡಿಸಿದವನೆ..
ಏಳು ಮಡಿಕೆಯ ಇಳಕಲ್ ಸೀರೆಯ
ತಂದುಡಿಸಿದವನೆ...
ಕಲ್ಲೆದೆಯಲೂ... ಹೂವರಳಿಸುವ
ಜಾದುಗಾರನೆ... ಅರಿವಾಗಲಿಲ್ಲವೆ
ನಿನಗಿಂದು

ನನ್ನ ಕಾಯಿಸುವಿಕೆಯಲ್ಲಿ ನಿನಗದೇಷ್ಟು
ಸುಖವೊ....ದೊರೆಯೆ
ಕೊಳದ ಮೇಲಣ ಸುಳಿದು ಬಂದ
ತಂಗಾಳಿಯೂ... ಸುಡುತಿಹುದು ಸಖನೆ...
ವಿರಹದ ಕಾವಿಗೆ ಸಿಕ್ಕು ಕುದ್ದು...ಕುದ್ದು..
ಉಕ್ಕೇರಿ ಹೊತ್ತಿ ಹೋಗುವ ಮುನ್ನ ...
ಬಂಧಿಸು ಬಾರೋ ತಂಪೆರಿಸೊ... ಆ
ತೋಳ್ಬಂಧನದಲಿ...

ಒಣಗಿಸಬೇಡ ಒಲವಿನಾಸೆಗಳ
ಭೋರ್ಗರೆದಾದರೂ...ಬಾ.. ತುಂತುರು
ಹನಿಗಳ ಸಿಂಚನಗೈಯುತವಾದರೂ...ಬಾ...
ನೆನಪುಗಳ ಬಿಸಿಗೆ ಬಳಲಿ ಬೆಂಗಾಡಾಗಿರುವ
ತನುವಣುವಣುವನು ನೀ.... ತಣಿಸು.. ಬಾ...

ಶಾಯರಿ ೨೪

ಅವಳ
ಸೇಬು ಕೆನ್ನೆಯ
ರಂಗನ್ನೆ
ನೋಡುತ್ತಾ
ಮೈ ಮರೆತಿದ್ದೆ
ಸಾಕಿ...
ನನಗರಿವಾಗಲೆ
ಇಲ್ಲ... ಅವಳು
ನನ್ನ ಮುಖಕ್ಕೆ
ಮಸಿ ಬಳೆದು
ಹೋದದ್ದು

ಶಾಯರಿ ೨೨

ನಿನಗೆ ಗೊತ್ತಿಲ್ಲ
ಸಾಕಿ...
ಎದೆ ಬಂಡೆಗೆ
ಅವಳು ನೀಡಿದ
ಉಳಿ ಪೆಟ್ಟಿನ ನೋವು...

ಪ್ರೇಮ
ಮೂರ್ತಿಯನ್ನಾಗಿಸುತ್ತೇನೆಂದವಳು
ನಿಷ್ಕರುಣೆಯಿಂದಲೆ...
ಭಗ್ನಗೊಳಿಸಿದಳು...

ಶಾಯರಿ ೨೩

ನಾ...
ಹೇಗೆ ಸಹಿಸಿಕೊಳ್ಳಲಿ
ಸಾಕಿ...
ನನಗೆ ಕಣ್ಣನು
ಹೊಡೆದು..
ಕೈಯಲ್ಲಿದ್ದ ರಂಗನ್ನು
ಗೆಳೆಯನ ಕೆನ್ನೆಗೆ
ಅವಳು
ಸವರಿದ್ದನ್ನು

ಮಿಡಿಯಲಿ ನಿನ್ನದೆ ಹೆಸರನಲಿ

ಏಕೆ ನಿಂತುಬಿಟ್ಟಿರುವೆ ಹೀಗೆ...
ನವರಾಗವ ಮೀಟದೆ.. ನನ್ನೆದೆಯಲ್ಲಿ
ಹೀಗೆ ತುಟಿಯಂಚಲಿ ನಕ್ಕು..
ಕಣ್ಣಿಗೆ ಮಿಂಚಿ ಹಾಗೆ ಮಾಯವಾಗಿಬಿಡಬೇಡ

ಮನದ ಮೂಲೆಯಲೊಂದು ಸಾಲು
ಬಿಕ್ಕುತಿದೆ ನೋಡು...ನಿನ್ನಯ ರಾಗಕೆ
ಮೆದುವಾಗಿ ಬೆರಳಾಡಿಸಿಬಿಡು....
ಗುಂಗುರುಳೆದೆಯ ಮೇಲೆ, ವಿಶ್ರಾಂತಿಸಿಬಿಡಲದು

ನಾನೇಷ್ಟು ಕೇಳಿಕೊಳ್ಳಲಿ, ಮತ್ತೆ...ಮತ್ತೆ
ಪದಗಳು ಹಳತದಾರೂ... ಸಂಭಾಳಿಸಿಕೊ...
ಮೀಟಿಬಿಡು ಕಿರುಬೆರಳಲಿ ಮಿಡಿಯಲಿ
ಮನವಿದು ನಿನ್ನದೆ ಹೆಸರಲಿ....