Thursday, March 15, 2018

ನೀ ಜೊತೆಯಿಲ್ಲದಿರುವಾಗ

ಇಳಿ ಸಂಜೆಯ ಹೊತ್ತಿನಲ್ಲಿ
ಹಾರುವ ಜೋಡಿ ಹಕ್ಕಿಗಳ ಕಂಡು
ಮನವು ತಾಳಿತಾದರೂ...ಹೇಗೆ ?
ನೀನಿಲ್ಲದ ವಿರಹವೆ ಜೊತೆಯಿರುವಾಗ !!!

ಅನುದಿನವು ಬೀಸುತ್ತಿದ್ದ ಮುಸ್ಸಂಜೆಯ
ತಂಗಾಳಿಗೂ ಮುನಿಸಾಗಿದೆ ಇಂದು
ರಮೀಸುವುದಾದರೂ ಹೇಗೆ? ತುಂಟಾಟದ ನಿನ್ನ ಮುಂಗುರುಳುಗಳು ಜೊತೆಗಿಲ್ಲದಿರುವಾಗ

ಕಹಳೆ ಊದಿ ಯುದ್ಧ ಸಿದ್ಧತೆಗೆ
ತೊಡಗಿಕೊಂಡಿವೆ ಮನಸ್ಸಿನ ಭಾವನೆಗಳು
ಸಂತೈಸಲಾದರೂ ಹೇಗೆ ? ಆ ಮಡಿಲಿಗೆ
ನಾ ಮಗುವಾಗಲು ನಿ ಜೊತೆಯಿಲ್ಲದಿರುವಾಗ

ಉರಿವ ರವಿಯು ತಣ್ಣಗಾದರೂ...
ಈ ಸಂಜೆಯೇತಕೊ...ತಂಪಗಾಗುತಿಲ್ಲ
ತಣ್ಣಗಾಗಿಸಲೆ ಹೇಗೆ? ಹುಣ್ಣಿಮೆ ಬೆಳದಿಂಗಳ
ನಗುವ ಚೆಲ್ಲಲು ನಿ ಜೊತೆಯಿಲ್ಲದಿರುವಾಗ

ನೀ...ಜೊತೆಯಿಲ್ಲದಿರೆ..
ಕರಗದು ಕಡು ಕಪ್ಪಗತ್ತಲು
ಬೆಳಕು ಮೂಡುವುದಾದರೂ ಹೇಗೆ ?
ಆಶಾಕಿರಣವಾಗಿ ನಿ ನನ್ನ ಜೊತೆಗಿರದೆ

Monday, March 12, 2018

ಮರೆಯದೆ ಬಿಡುತಿಲ್ಲ

ಉರಿವ ಬಿಸಿಲಿಗೆ
ಸುರಿದು ಹೋದ
ಮಳೆ ಹನಿಗಳ
ನೆನಪಿಲ್ಲ...
ಕೊರೆವ ಚಳಿಗೆ
ಬೇಸಿಗೆಯ ಬೆಚ್ಚನೆಯ
ಆಲಿಂಗನದ ಅರಿವಿಲ್ಲ

ಋತು...ಋತುಗಳೆ
ಕರಗಿದವು ಗೆಳತಿ...
ಕಾಲನ ಗರ್ಭದಲಿ..

ನಿನ್ನ ನೆನಪುಗಳು
ಮಾತ್ರ ನನ್ನನು
ಮರೆಯದೆ ಬಿಡುತಿಲ್ಲ

ಹಾಂಗ ನೋಡಬ್ಯಾಡ

ಹಾಂಗ ಸರಸಬ್ಯಾಡ ನಿನ್ನ ಮುಂಗುರುಳ
ಮೊದ್ಲ ಅದೀನ ನಾ.. ಹೆಂಗರುಳ
ನಿನ್ನ ನಗುವಿನ ಜೋಳಗ್ಯಾಗ ಬಿದ್ದ
ನಾ ಹೆಂಗ ಕಳಿಲೆ... ಹಗಲಿರುಳ

ಕಬ್ಬಿನ ತೋಟಕ್ಕ ನುಗ್ಗಿದ ಸಲಗನ
ಹಂಗಾಗೈತಿ ನನ್ನ ಮನಸ್ಸು.. ಮಾತ ಕೇಳವಲ್ದು
ಬೆಲ್ಲದ ಪೆಂಟಿಗೆ ಮುಗಿಬಿದ್ದ ಇರುವಿ
ಹಂಗ ಆಗೈತಿ ಕನಸು... ರಾತ್ರಿ ನಿದ್ದಿನ ಹತ್ತವಲ್ದು

ಆ ನಿನ್ನ ನಗೂನ್ಯಾಗ ಇಷ್ಟ ಮತ್ತ
ಐತೆಂದು ನಂಗ ಗೊತ್ತ....ಇರಲಿಲ್ಲ
ಜೇನ ತುಂಬಿದ ತುಟಿ ರಸಾನ...ನಾ
ಕುಡಿಲಾರ್ದ ಬಿಡ್ತೀರಲಿಲ್ಲ...

ಸಾಕ ಬಿಡ...ಜೋಡ ಜಡಿಯಾಗ
ಕೆಂಪಾನ ರಿಬ್ಬನ್ ಕಟ್ಗೊಂಡ ಹುಡ್ಗಿ
ಬರೀ...ಹಚ್ಗೊಂಡ ಕಪ್ಪ ಕಾಡ್ಗಿ ಕಣ್ಣಿಲೆ
ನೋಡಿ...ನೋಡಿ..ಕೊಲ್ಲಬ್ಯಾಡ ನನ್ನ ಗುಂಡ್ಗಿ

ಶಾಯರಿ ೨೫

ಮುಪ್ಪಿನ
ಭಾರ
ಉರುಗೋಲಿಗಷ್ಟೆ
ಗೊತ್ತು
ಸಾಕಿ....
ಬದುಕಿರುವೆ....
ನನ್ನೆದೆಯ
ನೋವಿನ
ಭಾರವನೆಲ್ಲ
ನಿನ್ನ ಮಧು
ಬಟ್ಟಲಿಗೆ
ಹಾಕಿ

Saturday, March 10, 2018

ನಲ್ಲ...

ನೀ... ನೋಡುವ ನೋಟ
ಕಾಮದ್ದೊ...? ಪ್ರೇಮದ್ದೊ...?
ನನಗೇನು ಗೊತ್ತೊ ?....ಮಲ್ಲ
ಆದರೂ... ಆ ಅಮಲುಗಣ್ಣಿಗೆ
ನಾ... ಸೋತಿರುವೆನಲ್ಲ..!!!

ನೀನೇನು...ನೀರೆಯರ ಸೀರೆಗಳನು
ಕದೆಯುವವನಲ್ಲ
ನನಗೂ... ಅರಿವಾಗದಂತೆ ಸದ್ದಿಲ್ಲದೆ
ನನ್ನ ಮನವ ಕದ್ದೆಯಲ್ಲ
ಅಮವಾಸೆಯ ಕತ್ತಲಲೂ...ಕಣ್ಣಲಿ
ಒಲವ ಚಂದ್ರನ ಬಿಂಬವ ತುಂಬಿದೆಯಲ್ಲ

ನನಗೆ ಗೊತ್ತು... ನೀನೆಂತಹ ಮಳ್ಳ
ಹಗಲಿರುಳುಗಳ ಸುಖವನೆ ಕದ್ದ ಕಳ್ಳ
ಬರೀಯ ಮಾತುಗಳಲೆ ನನ್ನನದೇಷ್ಟು
ಬೇಯಿಸುವೆಯಲ್ಲ...
ಆ ಕಣ್ಣ ಕಾಂತಿಯಿಂದಾದರೂ...
ತಣಿಸಬಾರೆಯಾ....ನಲ್ಲ

ಬಡಿದು...ಬಡಿದುಕೊಂಡು
ಕೆಂಪಗಾಗಿದೆ ಗಲ್ಲ
ಆ ತುಟಿಯಂಚಿಂದ ತಂಪಾಗಾಗಿಸು
ಬಾರೊ.. ನೀಡಿ ಒಂದು ಬೆಲ್ಲ
ನನಗೊಬ್ಬಳಿಗೆ ಗೊತ್ತು ನೀನು
ಎಲ್ಲರಂತವ...ನಲ್ಲ..

೮೫ ನೇ ವಾರ

ವಾರದ ೮೫ ನೇ ಉಪನ್ಯಾಸಕರಾಗಿ ಆಗಮಿಸಿದ್ದಂತಹ
ಶ್ರೀಮತಿ ಎಸ್. ಎಮ್.ಕುಲಕರ್ಣಿ, ಪ್ರಧಾನಗುರುಮಾತೆ, ಜ.ತೋಂಟದಾರ್ಯ ಪ್ರಾಥಮಿಕ ಶಾಲೆ.  ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡುತ್ತಾ , ಮನೆಯೆ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ತಾಯಿಯಿಂದಲೆ ಸಂಗೀತಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಹೇಳುತ್ತಾ, ಹಿಂದಿನ ಕಾಲದ ಮಹಿಳೆಯರು ವಳ್ಳಿನಲ್ಲಿ ಬ್ಯಾಳಿಯನ್ನು ಹಾಕಿ ಒರಗಿತ್ತಿಯರೊಂದಿಗೆ ಜನಪದ ಹಾಡನ್ನು ಹಾಡುತ್ತಾ.. ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರಲ್ಲದೆ, ಭತ್ತಗಳನ್ನು ಕುಟ್ಟುವುದು, ಹೊಲಗಳಲ್ಲಿ ಕಳೆ ತೆಗೆಯುವಾಗ ನೆತ್ತಿಯ ಮೇಲಿನ ಸುಡು ಸೂರ್ಯನ ಶಾಖವನ್ನು ಮರೆಯಲು ಹಾಡುತ್ತಿದ್ದರು, ಸಂಸಾರದ ಜಂಜಾಟಗಳಿಂದ ಹೊರಬರಲು ಭಕ್ತಿಗೀತೆ ಭಾವಗೀತೆಗಳನ್ನು ಹಾಡಿಕೊಳ್ಳುತ್ತಾ ಗೃಹಿಣಿಯರು ಮನೆಯೊಳಗಿನ ಎಲ್ಲ ಸಂಕಷ್ಟಗಳನ್ನು ಮರೆಯಬಹುದಾಗಿದೆ ಎನ್ನುತ್ತಾ ಈಗಾಗಲೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಲತಾ ಮಂಗೇಶ್ಕರ, ಎಂ.ಡಿ.ಪಲ್ಲವಿ, ಮಂಜುಳಾ ಗುರುರಾಜ, ನಮ್ಮ ಧಾರವಾಡದವರೆ ಆದ ಶಾಸ್ತ್ರೀಯ ಸಂಗೀತಗಾರರಾದಂತಹ ಗಂಗೂಬಾಯಿ ಹಾನಗಲ್, ಸಂಗೀತಾ ಕಟ್ಟಿ ಹೀಗೆ ಅನೇಕರನ್ನು ನೆನೆಯುತ್ತಾ ದಾಸರಪದ, ವಚನ, ಭಾವಗಿತೆಯನ್ನು ಹಾಡುವುದರ ಮೂಲಕ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ಗೀತಾ ಯಾಳಗಿಯವರು ಕವನ ವಾಚನವನ್ನು ಮಾಡಿದರು. ಅಧ್ಯಕ್ಷರ ನುಡಿಯಲ್ಲಿ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದಂತಹ ಶರಣಮ್ಮ ಅಂಗಡಿಯವರು ಮಾತನಾಡುತ್ತಾ ಇಪ್ಪತ್ತೊಂದನೇ ಶತಮಾನದಲ್ಲೂ ಮಹಿಳೆಯರ ಶೋಷಣೆಯು ನಿಂತಿಲ್ಲ ಅಲ್ಲದೆ ಇಂದಿನ ಮಹಿಳೆಯರು ಎಲ್ಲ ರಂಗದಲ್ಲಿ ಮುನ್ನುಗ್ಗುತ್ತಿರುವುದು ಖುಷಿಯ ಮತ್ತು ಸಮಾಧಾನಕರ ವಿಷಯವೆನ್ನುತ್ತಾ ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ಶ್ರೀ ಜಗದ್ಗುರು ತೋಂಟದಾರ್ಯ ಶಾಲೆಯ ಮಕ್ಕಳಿಂದ ಮನಸೊರೆಗೊಳ್ಳುವಂತಹ ನೃತ್ಯವನ್ನು ಮಾಡದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷರಾದಂತಹ ಐ.ಎ.ರೇವಡಿ, ಕೆ.ಎಸ್. ಗಾರವಾಡ ಹೀರೆಮಠ, ಬಿ.ಟಿ. ಹೊಸಮನಿ ಬಿ.ವ್ಹಿ.ಮುನವಳ್ಳಿ , ಐ.ಎ.ರೇವಡಿ, ಹೆಚ್ಚ.ಎ.ಚಿಂತಗುಂಟಿ, ಇಂದಿರಾ ಪಾಟೀಲ್ ,  ಎ.ಎಸ್.ನರಗುಂದ, ಸಂಗಮ್ಮ ಸಿನ್ನೂರ, ವಿಜಯಲಕ್ಷ್ಮಿ ಕಮ್ಮಾರ, ವಿಜಯಲಕ್ಷ್ಮೀ ಕೋಟಿ, ದಾನಮ್ಮ ಪಟ್ಟೇದ, ಆರ್.ಎಸ್.ಇಟಗಿ ಎಮ್.ಎಸ್. ಮಕಾನದಾರ, ಹುಚ್ಚಪ್ಪ ಹಾವೇರಿ, ಶರಣಪ್ಪ ಬೇವಿನಕಟ್ಟಿ ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.

Friday, March 9, 2018

ನಮಗೇತಕೆ ಬೇಕು ? ಪ್ರತಿಮೆಗಳು

ಉರುಳಿಸಿಬಿಡಿ ಬಜಾರಿನ ಮುಖ್ಯರಸ್ತೆಯ
ಮಧ್ಯದಲಿ ನಿಲ್ಲಿಸಿಬಿಟ್ಟ ಪ್ರತಿಮೆಗಳನ್ನು....
ಅವರು ಹಾಕಿಕೊಟ್ಟ ದಾರಿ ನಮಗೇತಕೆ ಬೇಕಿದೆ ಈಗ
ಇರುವರೇನು ನಮ್ಮಷ್ಟು ಜಾಣರು ಯಾರಾದರೂ..
ಈ ಶತಮಾನದಲ್ಲಿ..!!!! ಹೆಣ್ಣು ಹೂವನು ಹೊಸಕುವವರನ್ನು
ಹೊತ್ತು ಮೆರೆಸುವೆವು ಹೊನ್ನ ಪಲ್ಲಕಿಯಲಿ,
ಏಷ್ಟಾದರೂ..ಕಳಬೇಡ..ಕೊಲಬೇಡನೆಂದವರನ್ನು
ಹೊಳೆಗೆ ಹಾರಿಸಿದಂತಹ ಧೀರರು ನಾವು...

ಮಸಿ ಬಳೆದುಬಿಡಿ... ವಾಯು ವಿಹಾರದ ತೋಟದಲಿ
ನಡೆಯುವ ಕಾಮಕೇಳಿಗಳ ಕಂಡು...ಕಾಣದ ಹಾಗೆ
ಕಣ್ಮುಚ್ಚಿ ನಗುತಿರುವ ಪುತ್ಥಳಿಗಳಿಗೆ....
ಕಾಯಕವೇ ಕೈಲಾಸದ ಹೆಸರಿನಡಿಯಲ್ಲಿ
ಕೈ ಬೆಚ್ಚಗಾಗಿಸಿಕೊಳ್ಳುವವರನ್ನು ಬೈಯ್ಯದೆ
ಇಷ್ಟೇಲ್ಲಾ...ಮಾಡಿ ಮತ್ತೆ ರಾಜರಂತೆ ಎದೆಯುಬ್ಬಿಸಿ
ನಡೆಯುವಂತೆ ಸಂವಿಧಾನ ರೂಪಿಸಿಕೊಟ್ಟ ಶಿಲ್ಪಿಗಳಿಗೆ

ಏಕೆ ಉರುಳಿಸುತ್ತೀರಿ ಸ್ವಾಮಿ..ಪ್ರತಿಮೆಗಳನ್ನು..
ಶಿಲ್ಪಗಳನ್ನು... ಮರೆತು ಮಲಗಿಬಿಟ್ಟಿರುವಿರೇನು..?
ಇಂದಿನ ನಿಮ್ಮ ಸುಖಕ್ಕೆ...ಅವರುಂಡ ನೋವಿನ
ದಿನಗಳನು, ಹನುಮನಂತೆ ಎದೆ ಸೀಳಿ ತೋರಿಸಬಲ್ಲಿರೇನು?
ಆ ಮಹಾನುಭಾವರ ಆದರ್ಶಗಳನು, ಇಲ್ಲವಲ್ಲ..!!!
ಮತ್ತೇಕೆ...? ಅವರ ಹಾಕಿಕೊಟ್ಟ ಹಾದಿಯು ನಿಮಗೆ
ಬೇಡವಾಗಿರುವಾಗ... ಇವ ನಮ್ಮವ...ಇವ ನಮ್ಮವನೆಂದು
ಜಯಂತಿಗಳ ದುಂದುವೆಚ್ಚವ ಮಾಡುವಿರಿ...

ಅಷ್ಟೊಂದು ಕೋಪ ಪ್ರಕೋಪವೆ..ನಿರ್ಜೀವ ಪುತ್ಥಳಿಗಳ ಮೇಲೆ, ಬನ್ನಿ..ಹಾಗಿದ್ದರೆ,... ಜಾತ್ಯಾತೀತವಾದಿಗಳೆ...೧೨ ನೇ
ಶತಮಾನದಲ್ಲಾಗದ್ದನ್ನು ಈ ೨೧ ನೇ ಶತಮಾನದಲ್ಲಾದರೂ
ಸಾಧಿಸೋಣ...ಮೇಲು ಕೀಳುಗಳ ಮಹಲನು ಒಡೆಯೋಣ
ರಾಜಕೀಯ ಪ್ರೇರಿತ ಧರ್ಮ ವಿಭಜನೆಗಳನು ಖಂಡಿಸೋಣ
ಬರುವಿರಾ...!! ಬರುವಿರಾ...!!! ಬರುವಿರಾ...!!!!!
ಹೇಗೆ ತಾನೆ ಬರುವಿರಿ...ಕುಲದ ರೇಖೆಯನು ದಾಟಿ...
ಹೊರಡಬನ್ನಿ... ಅಗೋ ನೋಡಿ..ರಸ್ತೆಯ ತಿರುವಿನಲ್ಲೊಂದು
ಪುತ್ಥಳಿ ನಗುತ್ತಿದೆ ನಮ್ಮನೆ ನೋಡಿ..
ಇಂದು ರಾತ್ರಿಗೆ ಅದಕ್ಕೆ ಗುಂಡಿಯ ತೋಡಿ..