Wednesday, April 4, 2018

ಶಾಯರಿ ೧೧೯

ಬತ್ತಿಯಿಲ್ಲದ
ದೀಪಕೆ
ಸುರಿಯದಿರು
ಎಣ್ಣೆಯನು
ಸಾಕಿ...

ಒಲವ
ಬತ್ತಿಯಿಲ್ಲದೆ
ಒಣಗುತಿರುವ
ನನ್ನನು...
ಉಳಿಸಿಕೊಳ್ಳುವಾಸೆ
ಏಕೆ...?
ಬಟ್ಟಲೊಳಗಿನ
ಮಧುವನ್ನು
ಹಾಕಿ

ಶಾಯರಿ ೧೧೮

ಈ ಹುಣ್ಣಿಮೆ
ಕಳೆಯುವವರೆಗೂ
ನಿನ್ನ ದಾವಣಿಯಿಂದ
ನನ್ನ ಮೊಗವನ್ನು
ಮುಚ್ಚಿಬಿಡು
ಸಾಕಿ..

ನನಗೂ
ಅವನಿಗೂ..
ಬಹಳ
ದಿನಗಳಿಂದ
ಮತ್ಸರ

ಶಾಯರಿ ೧೧೭

ಅವಳ
ಪ್ರೀತಿಯ
ನಶೆಯಲ್ಲಿ
ಕಣ್ಮುಚ್ಚಿಕೊಂಡು
ನಾನದೇಷ್ಟು
ದೂರ.... ನಡೆದು
ಬಂದಿದ್ದೆ
ಸಾಕಿ

ಅವಳು
ಕೈ ಕೊಟ್ಟು
ಕಣ್ತೆರಿಸಿದಾಗಲೆ
ನನಗರಿವಾದದ್ದು
ನಾ ನಡೆದು
ಬಂದದ್ದು
ಮುಳ್ಳಿನ
ಹಾದಿಯಂದು

ಶಾಯರಿ ೧೧೬

ಈ ಜಗದ
ಮೇಲಿನ
ನಂಬಿಕೆಯನ್ನೆ...
ಕಳೆದುಕೊಂಡಿರುವೆ
ಸಾಕಿ...

ನನ್ನೆದೆಯ
ನೋವುಗಳನ್ನೆಲ್ಲ
ನಿನ್ನ
ಮಧು ಬಟ್ಟಲಿಗೆ
ಹಾಕಿ..

ಬಾನೆತ್ತರ ಮುಟ್ಟಲಿ ನಮ್ಮೊಲವು...

ಅಳೆಯುವ ಎತ್ತರವಿಲ್ಲದಿರಬಹುದು
ನಮ್ಮಿಬ್ಬರದು... ಗೆಳತಿ
ಮಾಪಿಸುವರೇನು....? ಎದೆಯ ಗೂಡೊಳಡಗಿ
ಕುಳಿತಿರುವ ಮುಗಿಲೆತ್ತರದ ಪ್ರೀತಿ

ನಿಜ... ನಾವಿಬ್ಬರು ಕಪ್ಪು ಹಲಗೆಯ
ಬಣ್ಣದವರೆ... ಆದರೇನಾಯಿತು..?
ಒಲವ ಬಿಳುಪಿನ ಬಳಪದಿಂದ,
ಬದುಕಿಗೆ ಹೊಸ ಕಾವ್ಯವ ಬರೆಯಲಾರವೆ....

ನಿಲುಕದು ನಮ್ಮಿಬ್ಬರಿಗೂ.. ಮಧುಮಂಚ !!!
ಆಡಿ ನಗುವುದೇನೊ ನೋಡಿ ಪರಪಂಚ...
ಭೂದೇವಿಯ ಮಡಿಲಿದೆ, ಹಾಸುವ ಚಾಪೆಯ ಕೊಂಚ
ಹರೆಯ ಹರಿದು ಹೋಗಲಿ ಬೇಡವಿನ್ನು ಸಂಕೋಚ..

ಚೆಲುವೆ...ಜಗತ್ತು ದೊಡ್ಡದು, ಮನಸ್ಸು ಚಿಕ್ಕದು
ನಾವು ಚಿಕ್ಕವರು ಅಳತೆಯಲ್ಲಿ, ಬದುಕೆಂದು ದೊಡ್ಡದೆ ನಮಗೆ
ಈಜುವ ಬಾಳ ಸಾಗರದಲಿ, ಯಾರೊಬ್ಬರಿಗೂ ಅಂಗಲಾಚದೆ
ಶಕ್ತಿಯಿಲ್ಲದಿರಬಹುದು ತೋಳಲಿ, ಛಲವೊಂದಿಹುದಲ್ಲ ಎದೆಯಲಿ..

ನಡೆಯುವ ಬದುಕಿನ ಹಾದಿ ಬಹುದೂರ...
ಮೊಲದ ಹೆಜ್ಜೆಗಳನೀಡುತಲಾದರೂ...ಕ್ರಮಿಸೋಣ
ಕಲ್ಲು..ಮುಳ್ಳುಗಳು.. ನೋವು...ಅಪಹಾಸ್ಯಗಳು
ನಮಗೇನು ಹೊಸತಲ್ಲ, ಜೊತೆಗೂಡಿ ಜಯಿಸೋಣ

ಹಾದಿ ಬೀದಿಯಲಿ ನೋಡಿ ನಗುವರು, ನೀ ಅಳಬೇಡ
ಗೇಲಿ ಮಾಡುವರು, ಮರು ಮಾತನಾಡಬೇಡ
ಬೇಕು ಬೇಕೆಂದೆ ಚುಡಾಯಿಸುವರು, ಸಿಡುಕಬೇಡ
ಅವರೆಲ್ಲರನ್ನೊಮ್ಮೆ ನೋಡಿ ನೀ...ನಕ್ಕು ನಡೆಯುವದನ್ನು ಮರಿಬೇಡ

ಬದುಕಿದ್ದೇವೆಂದು...ಬದುಕುವುದು ಬೇಡ..
ಬದುಕಲು ಒಂದು ಅವಕಾಶವಿದೆಯಲ್ಲ...ಅನುಭವಿಸೋಣ
ಬಾನೆತ್ತರಕೇರಿದವರು ತುಳಿಯಲೇ..ಬೇಕಲ್ಲ ನೆಲವ
ನೆಲದಲ್ಲಿದ್ದುಕೊಂಡೆ ಬಾನೇತ್ತರವ ಮುಟ್ಟಿಸುವ ನಮ್ಮೊಲವ

Monday, April 2, 2018

ಶಾಯರಿ ೧೧೫

ಇರುಳೆಲ್ಲ
ಕುಳಿತುಕೊಳ್ಳುವೆ
ನನ್ನೆದುರಿಗೆ
ಸಾಕಿ
ಹಾಲಂತ
ನಗುವನ್ನು
ಚೆಲ್ಲುತ್ತಾ...
ಆದರೂ...
ಅವಳ ನಗುವಿನಷ್ಟು
ಮತ್ತಿಲ್ಲ...

ಎಂದೊ...
ನಕ್ಕು, ಇಳಿಯದ
ನಶೆಯನ್ನು
ಏರಿಸಿ..
ಹೋಗಿರುವಳಲ್ಲ
ಅವಳ
ನಗೆಯಲಿರುವಷ್ಟು
ಮತ್ತು...
ನಿನ್ನ ಕೆಂದುಟಿಯ
ನಗುವಲಿ
ಏಕಿಲ್ಲ...?

Sunday, April 1, 2018

ಶಾಯರಿ ೧೧೪

ಎದೆಯಲ್ಲಿ
ಅವಳ
ನೆನಪುಗಳಿಗೆಲ್ಲ
ಗೋರಿ
ಕಟ್ಟಿರುವೆ
ಸಾಕಿ...

ಆದರೂ
ನೋಡು
ಗೋರಿಯ
ಮೇಲೆ
ಕನಸಿನ
ಬಳ್ಳಿ
ಚಿಗುರಿವುದು