Thursday, June 7, 2018

ಶಾಯರಿ ೨೨೧

ವರುಷಗಟ್ಟಲೆ...
ಅವಳ ಹಿಂದಲೆದರೂ...
ನನ್ನದೊಂದು ಗುಲಾಬಿ
ಅವಳ ಮುಡಿಯೇರಿ
ನಗಲಿಲ್ಲ
ಸಾಕಿ....

ನೋಡಿಗ...
ಅವಳಿಟ್ಟು ಹೋದ
ಗುಲಾಬಿಯು ನಗುತಿಹುದು..
ನನ್ನೆದೆಯ ಮೇಲೆ
ಸುರಿದು ಹೋದ
ಮಣ್ಣಿನ ಮೇಲೆ

Tuesday, June 5, 2018

ಸಾಕಿ ೪

ಬರೆಯುವುದೆನಿದ್ದರು...ಅವಳನ್ನು
ಪ್ರೀತಿಸುತ್ತಿದ್ದ ಮೊದಲಿಗೆ
ಬರೆದುಬಿಟ್ಟಿರುವೆ
ಸಾಕಿ...
ಅವಳಿಲ್ಲದ ಈ ಸಂಜೆಯಲಿ,
ವಿರಹವನ್ನೆಲ್ಲ ಕಾಗದೆದೆಯ
ಮೇಲೆ ಗೀಚಿ....ಪದಗಳನ್ನು
ಅವಮಾನಿಸಲಾರೆ.....

ಕಣ್ಣಲ್ಲಿ...ಕಣ್ಣಿಟ್ಟು ಕನಸುಗಳ
ತುಂಬುತ್ತಿದ್ದವಳು....ಕಣ್ಣಿನಲಿ ಕಿರು
ಬೆರಳೊಂದನು ಆಡಿಸಿ ನಡೆದುಬಿಟ್ಟಳಲ್ಲ
ಸಾಕಿ...
ಸುರಿದದ್ದು...ಕಣ್ಣೀರೊ...ನೆತ್ತರೊ
ಎಂಬುದನ್ನು ಸಹ... ತಿರುಗಿ ನೋಡದೆ

ನಿರ್ಧರಿಸಿಬಿಟ್ಟಿದ್ದೆ...
ಒಲವಿನೂರಿಗವಳೆ...ರಾಣಿಯಂದು...
ನನಗಿಂದು ಅರಗಿಸಿಕೊಳ್ಳಲೆ...ಆಗುತ್ತಿಲ್ಲ
ಸಾಕಿ....
ನೋವಿನೂರಿನ ಸಿಂಹಾಸನಕೆ,
ನನ್ನನು ಅವಳು ರಾಜನನ್ನಾಗಿಸಿ...
ನಡೆದು ಹೋದದ್ದು..

Monday, June 4, 2018

ಶಾಯರಿ ೨೨೦

ಶಾಸ್ತ್ರವನ್ನು
ನೋಡಿಯೆ
ಪ್ರೇಮ
ನಿವೇದನೆಯನ್ನು
ಅವಳಲ್ಲಿ
ನಿವೇದಿಸಿಕೊಂಡಿದ್ದೆ
ಸಾಕಿ....

ಅಮೃತ ಘಳಿಗೆಯಲ್ಲೆ
ತಿರಸ್ಕರಿಸಿಬಿಟ್ಟಳಲ್ಲ...!!!!
ರಾಹುಕಾಲದಲ್ಲೊಮ್ಮೆ
ಪರೀಕ್ಷಿಸಲೇನು...?

ಹಿಂಗ ಕುಂತ್ರ ನಾ ಹ್ಯಾಂಗ ಮಾಡ್ಲಿ

ಕುಂದ್ರಬ್ಯಾಡ ನೀ ಹಿಂಗ ಹಣಿಗೆ ಕೈ ಇಟ್ಕೊಂಡ
ಮೊಳ ಏನು, ಬುಟ್ಟಿ ತುಂಬ ಮಲ್ಗಿ ದಂಡಿ ತರ್ತೀನ ಹೊತ್ಗೊಂಡು
ಕಾದ...ಕಾದ..ಪ್ರೀತಿಯದು ಅಚ್ಚ ಹಾಕಿದ ಬೆಲ್ದಚ್ಚ ಇದ್ದಂಗ
ಬೆಲ್ದಂತ ಗಲ್ಲಕ್ಕೊಂದು ಮುದ್ರೆ ಒತ್ತತೀನಿ ನೀ.. ನಾಚುವಂಗ

ಜ್ವಾಕಿಲಿ ಹಿಡ್ಕೊಂಡಿರು ಹುಡುಗಿ ನಿನ್ನ ಮನಸಿನ ಮಡ್ಕಿ
ಮನಸಿನ ಮಾತ ತುಂಬ ಬೇಕ ಅದರಾಗ ಏ ಲಡ್ಕಿ
ಕಣ್ಣೀರಿಲೆ ಕಟ್ಟಿ ಹಾಕಬೇಡ ನನ್ನ ಪ್ರೀತಿಗೆ ಕುಣ್ಕಿ
ತಂದು ಕೊಡ್ತೀನ ನಿಂಗ ಮಾಸದಂತೊಂದು ಕಾಣ್ಕಿ

ಹರಿಯೊ ಹೊಳಿ ನೋಡಿ ಮನಸ್ನು ಹರಿ ಬಿಡಬ್ಯಾಡ
ಹರೆ ತುಂಬಿದ ಕೊಡ ನೀನು, ಬ್ಯಾಸರ್ಕಿಲೆ ಕುಂದ್ರಬ್ಯಾಡ
ಬರೋದ ತಡ ಆತಂದ...ಮುಡೇನ ಮಲ್ಗಿ ಕಿತ್ತೊಗಿಬ್ಯಾಡ
ಮರ್ತಿನಂತಂದ್ಕೊಂಡು ಮನಸಿನ ಗೂಡಿಂದ ಹೊರಗ ಹಾಕಬ್ಯಾಡ

ನೀ ಹಿಂಗ ಬಿಸ್ಲಿಗೆ ಕುಂತ್ರ ನಿನ್ನ ಮೈ ಬಣ್ಣ ಸುಟ್ಟಾತು..
ಸುಟ್ಟ ಮೈ ಬಣ್ಣ ನೋಡಿ ನನ್ನ ಮನಸ್ಸರ ಹ್ಯಾಂಗ ತಡದಾತು
ಕಾಯ್ಸಿದ ಪಾಪಕ್ಕ ಅತ್ತ...ಅತ್ತ ಸತ್ತ ಹೋದಾತು
ಇನ್ನೊಮ್ಮೆ ಹಿಂಗ ಮಾಡುದಿಲ್ಲೇಳ ಹುಡ್ಗಿ ತಪ್ಪಾತು..

ಹೊಡಿಬ್ಯಾಡ ನೀ....ಕಣ್ಣ

ಹೊಡಿಬ್ಯಾಡ ಏ ಹುಡ್ಗಿ ನೀ...ಕಣ್ಣ
ಹಿಂದ..ಹಿಂದ ಬರ್ಲಾಕ ನಾನದೀನಿ ಬಲು ಸಣ್ಣ
ಬಲಶಾಲಿ ಭೀಮನಂತೊನದಾನು... ನಿಮ್ಮಣ್ಣ
ಒಂದ ಕೈಯ್ಲೆ ಎತ್ತೋಗುದು ಮುಕ್ಕುಸ್ತಾನ ನನ್ನ ಮಣ್ಣ

ಏನಾದ್ರೇನ...ಚೆಲ್ವಿ, ನೀನದಿದಿ ನಮ್ಮೂರ ಭಾರಿ ಹೆಣ್ಣ
ಹ್ಯಾಂಗ ಹೇಳ್ಲಿ ಮಾತನ್ಯಾಗ...ರಸಪೂರಿ ಮಾವಿನ ಹಣ್ಣ
ಕಣ್ಣ ತಿರ್ಗತಾವ ಬೆಡಗಿ ನೋಡಿ ನಿನ್ನ ಮೈ ಬಣ್ಣ
ಈ ಯುಗಾದಿಗೆ ಏನಾರ ಮಾಡಿ...ಮನಿ ಗ್ವಾಡಿಗೆ ಬಡ್ಸಬೇಕ ಸುಣ್ಣ

ಕಣ್ಣಿಗೆ ತೀಡ್ಕೊಂಡಿಯಲ್ಲ ಕಡು.. ಕಪ್ಪಾನ ಕಾಡ್ಗಿ
ನಡುವಿಗೆ ದಾವಣಿ ಕಟ್ಟಿಕೊಂಡ ಹೊಂಟಿ, ಏನ್ ನಿನ್ನ ನಡ್ಗಿ
ಮ್ಯಾಲ ಕುಂತಾವ ಯಾ ಹೊತ್ನಾಗ ಮಾಡಿರಬೇಕ ಈ ಗಡ್ಗಿ
ಹತ್ರಕ್ಕ ಹೋಗಬೇಕಂದ್ರ ಅವರಣ್ಣ ಹಿಡ್ಕೊಂಡ ಕುಂತಾನಲ್ಲ ಬಡ್ಗಿ

ಹುಡ್ಗಿ...ಒಂಟಿ ಕಣ್ಣಿಲೆ ಹಾರಿಸಿಬಿಟ್ಟಿಯಲ್ಲ ಗುಂಡು
ಗೊತ್ತಿಲ್ಲ ನಿನ್ಗ.... ನಾನಲ್ಲ ಅಂತಿಂಥ ಗಂಡು
ತಲಿಕೆಟ್ರ...ಯಾರಿಗೂ ಹೇದರದಂತ ಜಗಮೊಂಡು
ಬರ್ತೀನ ನಿಮ್ಮನಿಗೆ ವಿಳ್ಯೆದೆಲೆ ತಾಟ ಹಿಡ್ಕೊಂಡು

ಮದ್ವಿ ಆಗೋನ ಮಲ್ಲಿ, ಕಳಕಪ್ಪನ ಗುಡಿಯಾಗ
ಜೇನಿನ ಹೊಳಿನ ಹರ್ಸ್ತೀನಿ ಬಾಳಿನ ಹಾದ್ಯಾಗ
ವರ್ಷ ಕಳಿಯೊದ್ರಾಗ, ಮಗು ಹಾಕ್ತೀನಿ ನಿನ್ನ ಮಡಿಲಾಗ
ಹಗಲು ರಾತ್ರಿ ದುಡಿದುಣ್ಣೊನು ಭೂ ತಾಯಿ ಒಡಲಾಗ

Saturday, June 2, 2018

ಶಾಯರಿ ೨೧೯

ಜಗ ಮರೆಯದ
ಪ್ರೇಮ ಕಥೆಯೊಂದನ್ನು
ಹುಟ್ಟು ಹಾಕಲು
ಹೋದೆ
ಸಾಕಿ....

ವಿರಹ ಸೌದೆಯಲ್ಲಿ
ಸುಟ್ಟು...ವರ್ತಮಾನಕ್ಕು
ಸಿಗದಂತೆ...
ನಾನಾಗಿ
ಹೋದೆ....ಬೂದಿ..

ಶಾಯರಿ ೨೧೮

ಬೆಲೆ ಕಟ್ಟದೆ...
ಅವಳಧರದ
ಸವಿಯನ್ನು
ಸವಿದಿದ್ದೆ
ಸಾಕಿ....
ಸಾಕಾಗುವಷ್ಟು

ನಿನ್ನ ಮಧುವಿಗೀಗ
ಬೆಲೆ ಕಟ್ಟಿಯೆ
ಕುಡಿಯುತ್ತಿರುವೆನಾದರು....
ಅವಳೆರಿಸಿದ ಮುತ್ತಿನ
ಮತ್ತೆ...ಇಳಿಯುತ್ತಿಲ್ಲ
ಇನ್ನೂ....