Friday, December 7, 2018

ಶಾಯರಿ ೩೮೯

ಅವಳಿಗ ಎದುರಿಗೆ
ಬಂದು ನಿಂತರೆ
ಏನು ಮಾಡಲಿ
ಸಾಕಿ...
ಈಗೀಗ ಅವಳ
ಮೋಹಕ್ಕಿಂತ, ನಿನ್ನ
ಮದ್ಯದ ಅಮಲೆ
ನನ್ನನಾವರಿಸಿಕೊಂಡುಬಿಟ್ಟಿದೆಯಲ್ಲ

ಶಾಯರಿ ೩೯೮

ಅವಳ
ಪ್ರೀತಿಯನ್ನು
ಪಡೆಯುವ ರಭಸದಲ್ಲಿ
ಯಾರೊಬ್ಬರೂ...
ಹಾದಿಯನ್ನೆ ಬಿಡಲಿಲ್ಲ
ಸಾಕಿ...
ನಿನ್ನ ಮದ್ಯವನ್ನು
ಕುಡಿದ ಮೇಲೆ...
ಇಡಿ‌ ಬೀದಿಯೆ
ಬರಿದಾಗಿಬಿಟ್ಟಿತಲ್ಲ..

ಶಾಯರಿ ೪೧೨

ಮರೆಯಬೇಕೆಂದಷ್ಟು
ಅವಳ
ನೆನಪುಗಳ
ಒರತೆಯೆ
ಕಡಿಮೆಯಾಗುತಿಲ್ಲ
ಸಾಕಿ...
ಬಿಟ್ಟು ಬಿಡಬೇಕೆಂದಷ್ಟು
ನಿನ್ನ ಮಧು
ಬಟ್ಟಲಿನ ರುಚಿಯೆ
ನನ್ನ ಕೈಯನ್ನು
ಬಿಡುತಿಲ್ಲ

Thursday, December 6, 2018

ಬಿಡುವುದಿಲ್ಲ - ಬಿಡುವುದೇ... ಇಲ್ಲ

ಹೀಗೆಕೆ ನಗುತಿರುವೆ ನನ್ನನೆ ನೋಡಿ...
ಸಣ್ಣದೇನು ನನಗೂ..ಎಲ್ಲರಿಗೂ ನಿ ಮಾಡಿರುವ ಮೋಡಿ
ಇದೊಂದು ಹೊತ್ತಿಗೆ ನೀನಾಗಿಬಿಡುವೆ ಅನ್ನದ ಹಿಡಿ
ಕಳೆದುಕೊಂಡ ಕ್ಷಣವೆ ನಾನಾಗಿಬಿಡುವೆನಲ್ಲ ಹುಡಿ
ದುಡಿದುಣ್ಣಲು ಮುಪ್ಪೊಂದು ಹಾಕಿಹುದಲ್ಲ ದೇಹಕ್ಕೆ ಬೇಡಿ
ಬದುಕಲಾದಿತೆ...ತುತ್ತು...ತುತ್ತಿಗು ಜನರನ್ನು ಕಾಡಿ ಬೆಡಿ

ಊರು, ನೆಂಟರು, ಭಂಟರನೆಲ್ಲರ ಬಿಟ್ಟುಬಂದೆ
ನಿನ್ನ ಪಡೆಯಲು... ಬಿಸಿಲೊ.. ಮಳೆಯೊ, ಬೆವರ
ಹರಿಸಿ ಪಡೆದೆ, ಉಸಿರಗಟ್ಟಿಸಿಯು ಇಟ್ಟುಬಿಟ್ಟೆ ನಿನ್ನನು...ಕಬ್ಬಿಣದ ಪೆಟ್ಟಿಗೆಯಲಿ...
ಹುಟ್ಟಿಕೊಂಡವದೆಷ್ಟು ಕುರುಡು ಸಂಬಂಧಗಳಾಗ,
ತೊಡರಿಕೊಂಡ ಬಳ್ಳಿಗಳದೇಷ್ಟೊ ಬಲ ಬಂದಾಗ

ಕೊನೆಯವರೆಗೂ ಜೊತೆಗಿರುವೆನೆಂದವರೆಲ್ಲ, ಬಾಳ
ಮದ್ಯದಲೆ ಹುಟ್ಟಿನ... ದಿಕ್ಕನು ಬದಲಿಸಿಬಿಟ್ಟರಲ್ಲ..!!!
ಹಾದಿಯಲಿ ಎಡವಿ ಬಿದ್ದವರಿಗದೇಷ್ಟೊ ಹೆಗಲಾಗಿದ್ದೆ,
ಜೇಬ ತುಂಬಿಸಿಕೊಂಡವರೊಬ್ಬರಾರು ಹಿಂತಿರುಗಿ ನೋಡಲಿಲ್ಲವಲ್ಲ...!!!

ಮಾತೆತ್ತಿದರೆ ಪ್ರಾಣವನೆ ಕೊಡುತ್ತಿದ್ದೆನೆನ್ನುವರೆಲ್ಲ,
ನಿನ್ನ ಗಾಳಿ ಸೋಕಿದೊಡೆ.. ಬೆಣ್ಣೆಯನು ಇರಿದ
ಹಾಗೆ, ಬೆನ್ನಿನಲಿ ಚೂರಿಯನ್ನಾಡಿಸಿಬಿಟ್ಟರಲ್ಲ,
ನಗುನಗುತ್ತಲೆ...!!!!
ನನಗೇನು ಗೊತ್ತಿತ್ತು..? ಅವರ ಮೊಗದ ಮೇಲೆಲ್ಲ
ನಿನ್ನ ಹಾಗೆಯ ಒಂದು ಮೋಸದ ? ನಗೆಯೊಂದಿತ್ತಲ್ಲ..!!

ಬೀದಿಯಿಂದ ಬಂದವನು...ಮತ್ತೀಗ ಬೀದಿಯಲ್ಲೆ ಬಿದ್ದಿರುವೆ
ನೀನು ಬಂದ ಹೋದ ನಡುವೆ..ಎಂತೆಂತಹ ಪಾತ್ರಗಳ
ಸೃಷ್ಟಿಸಿಬಿಟ್ಟೆ... ಆಡಿಸಿಬಿಟ್ಟೆ... ಕುಣಿಸಿಬಿಟ್ಟೆ.. ಧಗಧಗನೆ ಉರಿಸಿಯೂ ಬಿಟ್ಟೆ..., ಕಣ್ಣೀದ್ದರೂ...ಅವರಾಡುವ ನಾಟಕವ
ಅರಿಯದೆ ಹೋದೆ, ಅದರ ತಪ್ಪಿಗೆ... ಹೆಸರಿಲ್ಲದ ಬೀದಿಗಳಿಗೆ
ನನ್ನನಿಂದು ರಾಜನನ್ನಾಗಿಸಿದೆ

ಬೇಕು...ಬೇಕು ನೀನು.. ಎಲ್ಲದಕ್ಕೂ.. ಹುಟ್ಟಿಗೆ, ಹೊಟ್ಟೆಗೆ,
ಬಟ್ಟೆಗೆ, ಕೊನೆಕೊನೆಯ ಚಟ್ಟಕ್ಕೆ.., ಚಟ್ಟವನೇರಿದ ಮೇಲೆ
ಅವರ ಹಿಂದೆ ನೀನೇನು ಹೋಗುವುದಿಲ್ಲ, ನಿನ್ನನೇಷ್ಟೆ ಗಳಿಸಿಟ್ಟುಕೊಂಡರು...ಹೋದ ಅವರ ಪ್ರಾಣವ ಮರಳಿ
ತರುವುದು ನಿನಗಾಗುವುದಿಲ್ಲ.., ಗೊತ್ತೊ.. ಗೊತ್ತಿಲ್ಲದೆಯೊ
ಆದರೂ... ನಿನ್ನ ಪಡೆಯುವ... ಹುಚ್ಚು ಹಂಬಲ ಮಾತ್ರ, ನರರನ್ನು ಬಿಟ್ಟಿಲ್ಲ...‌ಬಿಡುವುದೆ ಇಲ್ಲ...

ಚಿತ್ರ ಕೃಪೆ : ಯೋಗಿರಾಜ ಎಸ್ ಎಸ್

Wednesday, December 5, 2018

ನಮ್ಮವ್ವ

ಕಷ್ಟ ಅಂತಂದು
ಎಲ್ಲಾದಕ್ಕು...
ದೇವ್ರ ಮುಂದೋಗಿ
ಕೈ ಮುಕ್ಕೊಂಡ
ನಿಂತ್ಕೊಳ್ತಾರು
ನೋಡವ್ವ...
ಪೂಜೆ ಮಾಡ್ಸಿಕೊಳ್ಳೊ
ಕಲ್ಲು... ಪೆಟ್ಟ
ತಿನ್ನಲಾರ್ದನ ದೇವ್ರಾಗ್ಲಿಲ್ಲ
ಅನ್ನೊ ಸತ್ಯಾನ...
ಎಲ್ರೂ ಮರ್ತ ನಿಂತ್ಗೊಂಡ್ರ
ಹ್ಯಾಂಗವ್ವ

ಮೈಕೈ ತಿಕ್ಕಲಾರ್ದ
ಮೈ ಮ್ಯಾಲಿನ
ಹೋಲ್ಸು...
ಹೋಗೊದಿಲ್ಲ
ಹೌದಲ್ಲವ್ವ...
ಇನ್ನ... ಬರೀ ನೀರಾಗ
ಮುಳುಗೆದ್ರ,
ಮಾಡಿದ ಪಾಪಾ
ತೋಳ್ದಹೊಕ್ಕಾವೇನೊ
ನಮ್ಮವ್ವ

ಅದನ್ನ ಕಡಿಬ್ಯಾಡ..
ಇದನ್ನ ಕೊಯ್ಯಬ್ಯಾಡ ಅನ್ಕೊತ
ಎಷ್ಟೊಂದ ಬಡ್ದಾಡ್ಕೊಂಡ
ಸಾಯ್ತಾರಲ್ಲೊ
ನಮ್ಮವ್ವ...
ಯಾವ ಧರ್ಮ‌ ಹೇಳೈತಿ?
ನಿಮ್ಮ ಹಠಕ್ಕ...
ಹೆತ್ತಾಕಿ ಮಡಿಲಾಗ..
ಸಾವಿನ ಕೆಂಡ
ಸುರೀರಂತ

Tuesday, December 4, 2018

ಶಾಯರಿ ೩೯೬

ಚಳಿ ಹೆಚ್ಚೆಂದು ಯಾರೂ...
ದೇಹಕ್ಕೆ ಬೆಂಕಿಯನ್ನೇನು
ಹಚ್ಚಿಕೊಂಡಿಲ್ಲ
ಸಾಕಿ...
ಹೀಗಿರುವಾಗ..
ಅವಳ ನೆನಪುಗಳ
ನೋವು, ತಾಳಲಾಗದೆಂದು
ಸಾಯಲು..
ನಾನೇನು ಹುಚ್ಚನೇನು

ಶಾಯರಿ ೩೯೯

ನನ್ನ ಮನದೊಳಗೆ
ಅವಳದೆ
ಅಚ್ಚಳಿಯದ ಹೆಸರಿದೆ
ಹೇಗೆ ಅಳಿಸಿಕೊಳ್ಳಲಿ
ಸಾಕಿ..
ನಿನ್ನ ಮದ್ಯದ
ಜಗುಲಿಯಲ್ಲಿ ನನ್ನ
ಪ್ರೀತಿಯು ನರಳಾಡುತ್ತಿದೆ
ಉಳಿಸಿಕೊಳ್ಳಲಿ ಹೇಗೆ ?
ಬರೀ ನಿನ್ನ ಮದ್ಯವನ್ನೆ
ಹೀರಿ....