Saturday, March 9, 2019

ಶಾಯರಿ ೬೯೬

ಬುದ್ಧನ
ನೆಲದಲ್ಲಿ
ಯುದ್ದವೇಕೆ?
ಪ್ರಶ್ನಿಸುತ್ತಿರುವರಲ್ಲ
ಸಾಕಿ...
ಕೇಳಿದವರೆಲ್ಲ,
ಹುರಿದು
ಮುಕ್ಕುತಿರುವವರಲ್ಲ!!!
ಬಾಡೂಟವನ್ನು
ಮನೆಯ ಕದವನ್ನು
ಹಾಕಿ

Friday, March 8, 2019

ಶಾಯರಿ ೬೬೧

ಚಿಗುರು ಮೀಸೆಗೂ..‌
ಅವಳ ಕೆನ್ನೆಯನೊಮ್ಮೆ
ಚುಂಬಿಸುವಾಸೆಯಿತ್ತೇನೊ?
ಸಾಕಿ....
ದುರಾಸೆ ಒಳ್ಳೆಯದಲ್ಲ!!!
ನೋಡೀಗ...
ನನ್ನ ತುಟಿಗಿಂತ ಮೊದಲೆ,
ಅವುಗಳೆ ನಿನ್ನ ಮಧು
ಬಟ್ಟಲೊಳಗಿನ ಮದ್ಯದಲ್ಲಿ
ಮಿಂದೇಳುತ್ತೀವೆ.

Thursday, March 7, 2019

ಸಾಕಿ

ಕೋವಿಯ ತುದಿಯಲ್ಲಿ....
ಮದ್ದು ಹಾರಿಸಿದ ಬಿಸಿ ಇನ್ನೂ ಹಾಗೆ
ಸುಡುತಿಹುದು ಸಾಕಿ....
ಹೇಗೆ ಬಂದು ಕೂರಬೇಕಲ್ಲಿ ಶಾಂತಿಯ ಹಕ್ಕಿ...
ರಣಹದ್ದುಗಳೆ ಕಾಯುತಿವು, ಅಮಾಯಕರ
ಬದುಕನ್ನೆ ತಿನ್ನಲು ಹುರಿದು ಮುಕ್ಕಿ...

ಕರುಳ ಕತ್ತರಿಸಿ, ಆರಡಿ ಭಂಟನ ಗಡಿ
ಕಾಯಲು ಕಳಿಸಿಕೊಟ್ಟವಳ ಮಡಿಲಲಿಂದು
ಮಗನ ಬೂದಿಯೆ ತುಂಬಿಕೊಂಡಿದೆ ಸಾಕಿ....
ಹೇಗೆ ನಿಂತುಕೊಳ್ಳಲಿ ? ನಾನವಳ ಮುಂದೆ...
ವೈರಿಗಳೆಂದರೆ...ಸಿಡಿಸಿಡಿಯುತ್ತಿದ್ದವನು, ತುಂಡು
ಸಿಡಿಮದ್ದಿಗೆ ಸಿಕ್ಕು, ಹಿಡಿ ಮಾಂಸದ ಮುದ್ದೆಯಾಗಿ,
ತೊಡೆಯ ಮೇಲೆ ಮಲಗಸಿಕೊಂಡು ಅಳಲು
ಇಂಚು ದೇಹವು ಉಳಿಯದೆ ಹೋಗಿರುವಾಗ

ಬುದ್ಧನಿಲ್ಲವೆ?.... ಇರುವನಲ್ಲ !!!! ಇದ್ದುದರಿಂದಲ್ಲವೆ
ಅವರಿನ್ನು ಉಸಿರಾಡುತ್ತಿರುವುದು ಸಾಕಿ...
ಆಸೆಯೇ ದುಃಖಕ್ಕೆ ಮೂಲವೆಂದನವನು..
ದುರಾಸೆಯೆ ಆದಾಯವೆಂದುಕೊಂಡಿಹರಿವರು...
ಅವರೇನಾದರು..‌ ಮರೆತು ಕುಳಿತಿರಬಹುದೇನೊ..?
ಬುದ್ಧನ ಹೆತ್ತ ಒಡಲು...ಭಗತ್ ಸಿಂಗ್ ನಂತಹಾ
ಕಿಡಿಗಳನ್ನು ಹೆತ್ತಿದ್ದನ್ನು...
ತಗ್ಗಿ..ಬಗ್ಗಿ ನಡೆದರೆ ಬುದ್ಧನ ಹಾದಿ, ಇಲ್ಲಸಲ್ಲದ
ರಕ್ತಪಾತವನ್ನು ಹರಿಸುವಂತಹ ಹೇಯ ಕೃತ್ಯಕ್ಕೆ
ಕೈ ಹಾಕಿದರೆ.....ಹೇಳುವುದು ಮಂತ್ರವನಲ್ಲ.!!!
ಉಗುಳುವೆವು ಬೆಂಕಿಯ ಉಂಡೆಗಳನ್ನ...

ಇರುವ ಜಾಗವನ್ನೆ ಜನ್ನತ್ ನ್ನಾಗಿ ಮಾಡಿಕೊಳ್ಳದವರು...
ನರಮೇಧವ ಮಾಡಿ ಇನ್ನೆಲ್ಲಿ ಸ್ವರ್ಗವ ಕಾಣುವರು
ಸಾಕಿ...
ಯಾವ ಧರ್ಮ ಹೇಳಿದೆ ನೀನೆ ಹೇಳು...?
ಒಬ್ಬರ ಸಮಾಧಿಯ ಮೇಲೆ ನಿನ್ನ ಧರ್ಮದ
ಝೆಂಡಾವನ್ನು ಹಾರಿಸಿಬಿಡೆಂದು...
ಗುಂಡು..ಸಿಡಿಮದ್ದಿಗಳಿಗೇನು ಗೊತ್ತು? ಕೊಲ್ಲುವುದೊಂದನು
ಬಿಟ್ಟು...
ಆದದ್ದು ಆಗಿ ಹೋಯಿತು...ಎಲ್ಲವ ತೊರೆದು
ಸೃಷ್ಟಿಕರ್ತನ ಕದವನ್ನು ತಟ್ಟು...
ಆಗದಿದ್ದಲ್ಲಿ.. ಉರಿದು ಹೋಗುವಿರಿ, ಕಟ್ಟೆಯೊಡೆದ
ಜಗದ ಕೋಪಕ್ಕೆ ಸುಟ್ಟು...

Wednesday, March 6, 2019

ಶಾಯರಿ ೭೦೩

ಯಾರೊಬ್ಬ ವಿರಹಿಯ
ತುಟಿಯ ಮುಟ್ಟದ
ಬಟ್ಟಲೊಂದಿದ್ದರೆ,
ನನಗೆ.....ಕೊಟ್ಟುಬಿಡು
ಸಾಕಿ...
ಎಲ್ಲ ಬಟ್ಟಲುಗಳಂಚಿನಲ್ಲಿ
ಅವರೆಲ್ಲರ ವಿರಹದ
ಏಂಜಿಲೆ ಅಂಟಿಕೊಂಡಿದೆ...
ನೀ ಸುರಿದ ಮಧು ರಸದ
ಸವಿಯನ್ನೆ... ಸವಿಯದಂತಾಗಿದೆ.

ಶಾಯರಿ ೬೮೬

ರಂಗೀಯ ನೆನಪಿಗಾಗಿ
ನೆಟ್ಟ ಗಿಡದಲ್ಲಿಂದು
ಹೂವು ಅರಳಿವೆ
ಸಾಕಿ...
ಮೂಸುವುದೊ...?
ಕಿತ್ತುವುದೊ...?
ನೀನೆ ಹೇಳು
ಅವಳಿಲ್ಲದಿರುವಾಗ

Tuesday, March 5, 2019

ಸಾಕಿ

ಹೊತ್ತುಗೊತ್ತಿಲ್ಲದೆ ಮುಳ್ಳಿನ
ಹಾಸಿಗೆಯಲ್ಲಿಯೇ... ಮುಲುಗುವವಳ
ಕುರಿತು ನಾನೇನು ಹೇಳಲಿ ಸಾಕಿ....
ಸುರಿದು ಮಲ್ಲಿಗೆಯ, ಅವಳೆದೆಯ
ಸುಧೆಯನ್ನೆ ಹೀರಿ ಹೋದವರೆಲ್ಲ!!!
ನರಳಿ..ನರಳಿ..ನಲುಗಿ ಹುಸಿ
ನಗುಮೊಗವ ತೋರುವವಳ ನೋವು
ಯಾರಿಗೂ ಬೇಕಿಲ್ಲ...

ಇರಲಿಬಿಡು, ಇವಳಿಗೂ....
ರೂಢಿಯಾಗಿಬಿಟ್ಟಿದೆ ಈಗೀಗ ಸಾಕಿ
ತೊಗಲಿನ ದೇಹಕೆ, ತುತ್ತಿನ ಚಿಂತೆ
ಬಾಳೊಂದು ಸಂತೆಯಂತೆ, ಇವಳೊಂದು
ಕಂತೆ.... ದಮ್ಮಡಿಯುಳ್ಳವರು,
ವಗ್ಗರಣೆಯನ್ನು ಚೆನ್ನಾಗಿಯೆ ಹಾಕಿಕೊಳ್ಳುವರು

ಇವಳೇನು ಹೊರುವಳಲ್ಲ... ಹೇರುವವಳಲ್ಲ...
ಕೆಜಿ..ಕೆಜಿ.. ಬೆಳ್ಳಿ ಬಂಗಾರಗಳೊಡವೆಯನ್ನು
ಬಯಸುವವಳಲ್ಲ, ಸಂಜೆ-ಮುಂಜೆಗೆ ದಿನಸಿ
ತರಕಾರಿಗಳ ತರಲಿಲ್ಲವೇಕೆ? ವೆಂಬ ತಕರಾರಿನವಳು ಅಲ್ಲವಲ್ಲ ಸಾಕಿ...
ಇವಳೊಬ್ಬಳು ದೀಪ...ಸುಡುಬಿಸಿಲಿನ,
ನಡು ಹಾದಿಯ ಹಾದರದ ಕಟ್ಟೆಯ ಮೇಲಿಟ್ಟಂತವಳು...
ಎತ್ತಿಟ್ಟುಕೊಳ್ಳುವವರಾರು... ಈ ದೀಪವನು
ಎಲ್ಲರ ಮನದಲ್ಲಿ.. ಕಾಮದ ವಾಂಛೆ
ತುಂಬಿರುವಾಗ !!!!
ಇವಳೆಂದರೆ... ಜಗಿದು ಉಗಿಯುವ
ಹಣ್ಣೆಂದೆ..ಮುದ್ರೆಯನೊತ್ತಿ ಕುಳಿತಿರುವಾಗ!!!

Saturday, March 2, 2019

ಶಾಯರಿ ೭೦೪

ನಾನೇಕೆ
ಇಡಲಿ,
ಕುಡಿದಿಟ್ಟ
ಪ್ಯಾಲೆಗಳ
ಲೆಕ್ಕ..!!!
ಸಾಕಿ....
ಬೇಕಿದ್ದರೆ
ಕೇಳು...
ರಂಗೀಯಿಲ್ಲದ
ಕಳೆದ ರಾತ್ರಿಗಳನು...
ಕೊಡುವೆನು
ಪಕ್ಕಾ...!!!