Saturday, May 4, 2019

ಶಾಯರಿ ೭೯೯

ಎದೆಯ ಮೇಲೆ
ಅವಳ ಅಚ್ಚೆಯನ್ನು
ಹಾಕಿಸಿಕೊಂಡರೇನು
ಬಂತು ಪ್ರಯೋಜನ
ಸಾಕಿ....
ಹಣೆಯಲ್ಲಿ
ಬ್ರಹ್ಮನೆ ಬರೆದಿಲ್ಲ
ವೆಂದಾಗ, ಆಗುವುದೆಂದು
ನನ್ನ ಅವಳ
ಸಮ್ಮೀಲನ

Friday, May 3, 2019

ಇವರಂತೆ

ಬಿಲದೊಳಗೆ ಅವಿತು ಕುಳಿತ ನರಿಗಳೂ ಕೂಡಾ ಘರ್ಜಿಸುತ್ತಿವೆ ಸಿಂಹದಂತೆ
ಗೂಬೆಗಳು ಹಾರುತ್ತಿವೆಯಂತೆ
ಬಾನೆತ್ತರಕ್ಕೆ ಹದ್ದಿನಂತೆ
ನಿಂತಿರುವುದೆ ತುಂಡು ಭೂಮಿಯಲ್ಲಿ
ಗೆದ್ದಿರುವರಂತೆ ಜಗತ್ತನ್ನೇ..

ಬೆನ್ನಿಗೆ ಚೂರಿ ಇರಿಯುವವರೆಲ್ಲ
ಪರಾಕ್ರಮಿಗಳಂತೆ
ನಡು ನೀರಿನಲ್ಲಿ ತೆಪ್ಪದ ದಿಕ್ಕನ್ನು
ತಪ್ಪಿಸುವವರು ನಾಯಕರಂತೆ
ಬೆಕ್ಕೂ ಇಂದು ಧೈರ್ಯವಾಗಿ, ಕಣ್ಬಿಟ್ಟುಕೊಂಡೆ ಹಾಲನ್ನು ಕುಡಿಯುತ್ತಿದೆಯಂತೆ...
ಜಗತ್ತೆ ಕಣ್ಮುಚ್ಚಿಕೊಂಡಿದೆ ಎಂದು

ಗುರುವನ್ನೆ ಗುಲಾಮರನ್ನಾಗಿಸಿಕೊಂಡವರು
ಜಗದ್ಗುರುಗಳಾಗಿರುವರಂತೆ...
ಕಂಡ..ಕಂಡವರ ಮನೆಗೆ ಕನ್ನ ಹಾಕಿದವರಿಂದು
ಸಾಧು ಸಜ್ಜನರಂತೆ..

ನಾರಿ ಸೇರಗಿಗೆ ಕೈ ಹಾಕಿದವರಿಂದು
ಧರ್ಮರಾಯರಾಗಿದ್ದಾರೆ...
ಶಕುನಿಗಳಂತವರೆಲ್ಲ... ನಮ್ಮೆಲ್ಲರಿಗೆ
ದಾರಿ ತೋರಿಸುವ ಪಂಜಾಗಿದ್ದಾರೆ..
ಯಾವುದು ಸರಿ...ಯಾವುದು ತಪ್ಪು...
ಎಂದು ವಿವೇಚಿಸಲು ಸಮಯವಿಲ್ಲದ
ನಮ್ಮಂಥವರು ಮಂದೆಗಳಾಗಿದ್ದೇವೆ...

ಹೇಳುವುದು, ಹಂಚಿಕೊಳ್ಳುವುದು, ವಿಮರ್ಶಿಸಿಕೊಳ್ಳಲು ಸಾಕಷ್ಟು ವಿಷಯವೆ ಇದೆ. ಎದುರುಬದುರು ಕುಳಿತು ಚರ್ಚಿಸುವ ಮನಸ್ಸುಗಳೆ ಇಲ್ಲ ಆತ್ಮೀಯರೆ. 'ನಾನು ಆಗಿ ಬಿಡಲೆ ಗುಂಪಿನಲ್ಲಿ ಗೋವಿಂದ' ‍
ಆಗಿಬಿಟ್ಟರೆ? ನಿನಗೆಲ್ಲಿ ಬೆಲೆಯಿದೆಯೊ...
ಕನ್ನಡದ ಕಂದ 🙏🙏🙏

ಶಾಯರಿ ೭೮೯

ನನಗವಳ
ಬೆತ್ತಲೆ ಹಣೆಯನ್ನೆ
ನೋಡುವುದಿಷ್ಟವಿರಲಿಲ್ಲ
ಸಾಕಿ... ಇನ್ನೂ
ಬೆತ್ತಲೆ ಬೆನ್ನಿನ ಮಚ್ಚೆಯ
ಮಾತೆಲ್ಲಿ.... ಅವಳಿಗಾಗಿ
ನನ್ನೊಳಗೆ ಕನಸುಗಳಿದ್ದವು
ಕಾಮವಲ್ಲ!!

ಶಾಯರಿ ೭೮೮

ಹಗಲಿರುಳಿನಾಟ
ನನಗೇತಕೀಗ
ಸಾಕಿ...
ಮತ್ತೇರಿದರೆ
ಕತ್ತಲು!
ನಿಶೆ ಇಳಿದರೆ....
ಹಗಲು!

ಶಾಯರಿ ೭೮೭

ಅವಳು ಕೇಳಿದ
ಒಂದೊಂದೆ ಮುತ್ತನ್ನು
ಕೊಡುತ್ತಾ...ಹಾರವನ್ನೆ
ಪೋಣಿಸಿಕೊಟ್ಟಿದ್ದೆ
ಸಾಕಿ...
ಪ್ರತಿಫಲಕ್ಕೆ!!!
ಇಂದು ನಿನ್ನ
ಮಧು ಬಟ್ಟಲಿಗೆ
ಮುತ್ತಿಕ್ಕುತ್ತಿರುವೆ!

ಶಾಯರಿ ೭೮೬

ಅವಳು ಯಾವಾಗಲೂ
ಬರೆಯುತ್ತಿದ್ದದ್ದು
ಅರ್ಧ ಕವಿತೆಗಳನ್ನೆ
ಸಾಕಿ....
ನೀನಾದರೂ
ಪೂರ್ಣಗೊಳಿಸು
ಖಾಲಿ ಬಟ್ಟಲಿಗೆ
ಸುರಿದು
ಮದ್ಯವನ್ನೆ

ಚುಟುಕು ೭೮೫

ಅಲ್ಲಿ ನಿನ್ನ
ಮನದಲ್ಲಿ
ತುಂಬಿದೆ
ಕತ್ತಲು!!
ಇಲ್ಲಿ ನನ್ನ
ಮನಸ್ಸಿಗೆ
ಹತ್ತಿದೆ
ಗೆದ್ದಿಲು!!