Tuesday, May 23, 2017

ಪ್ರೀತಿಯ ಆರಿಸಿ

ನಾ ಹಚ್ಚಿದ ರಂಗೋಲಿ
ನಿನ್ನ ಅಂಗೈಯಿಂದ ಅಳಿಸಿಲ್ಲ
ಕೊಟ್ಟಿರುವ ಬಳೆಗಳು ನಿನ್ನ
ಕೈ ಸಿರಿಯೊಳು ಮಾಸಿಲ್ಲ
ಬೆರಳಿಗೆ ತೊಡಿಸಿದ ಉಂಗುರದ
ಹೊಳಪು ಕಪ್ಪಿಟ್ಟಿಲ್ಲ
ಮುಡಿಗೆ ಮುಡಿಸಿದ ಮಲ್ಲಿಗೆ
ಇನ್ನೂ ಬಾಡಿಲ್ಲ..... ಆಗಲೇ
ಎದೆಯಲಿ ಹಚ್ವಿದ ಪ್ರೀತಿಯ
ಹಣತೆಯನು ಊದಿಬಿಟ್ಟೆಯಲ್ಲ...

Monday, May 22, 2017

ಆಷಾಢ ಗಾಳಿ

ಆಷಾಢ ಗಾಳಿ ಬಿಸಿ... ಬಿಸಿ...
ಮೈಯ ತುಂಬೆಲ್ಲಾ... ಹಸಿಪಸಿ
ಮನದ ಮೂಲೆಯಲ್ಲಾ.. ಬಿಸಿಬಿಸಿ
ರಾತ್ರಿಯ ಹೊತ್ತುಗಳೆಲ್ಲಾ... ಕಸಿವಿಸಿ

ಅವಳಿಲ್ಲದೆ... ಒಂಥರಾ......
ಇದ್ದಿದ್ದರೆ... ಏನೊ...ಇನ್ನೊಂಥರಾ...
ಒಟ್ಟಿಗಿದ್ದಿದ್ದರೆ... ಥರ...ಥರ..ಥರಾ...
ಮುಂದಿನದು ಹೇಳಲಾದಿತೆ... ಸರಸರ....ಸರಸರಾ....

ಕಾಡುತಿಲ್ಲವೆ... ನೆನಪುಗಳು
ಸುಡುತಿಲ್ಲವೆ... ಹಗಲುಗಳು
ಬೇಯಿಸುತಿಲ್ಲವೆ... ರಾತ್ರಿಗಳು
ಬರೀ...ನೆನೆಯುವುದೆ ಆಗಿದೆ.. ಹಗಲಿರುಳು

ಆಷಾಢವೆ.. ನೀನೆಂಥಹ ಉರಿ..
ಹೊತ್ತಿಸಿಬಿಟ್ಟುರುವೆಯಲ್ಲೊ... ವಿರಹದುರಿ...

ಜಾರಿದೆ ಹನಿ

ಮಳೆಹನಿಯು ಜಾರಿದೆ ಮೋಡದಿಂದ..
ಇಳೆಯ ಹಸಿರಲಿ ನಗುಮೊಗವ ಮೂಡಿಸಲು
ತುಂಟು.. ತುಂಟಾಟದ ಕೆಂಪು ರಂಗಿನ
ಚಿಗುರೆಲೆಗಳ ಹೊಳಪನು ಹೆಚ್ಚಿಸಲು

ಒಣಗಿ ಬಿರುಕು ಬಿಟ್ಟ ಭೂದೇವಿಯ
ತುಟಿಯ..ಕೆರೆಗಳಲಿ ಮಳೆಯಂಬ
ಮಧುವ ತುಂಬಲು.. ಬರಿದಾಗಿ ನಿಂತ
ಒಡಲಿಗೆ ಹಸಿರಿನ ಬಾಗಿನವ ಅರ್ಪಿಸಲು

ಜಾರಿದೆ... ಜಾರಿದೆ... ಜಾರಿದೆ.. ಹನಿ
ಅವಳಂತರಂಗವ ತಣಿಸಿದೆ...
ಭೂ ಮಂಡಲದೊಳು ಹೂ ನಗೆಯ
ಚೆಲ್ಲಿದೆ.. ಜಾರಿದೆ ಹನಿ.. ಬಾನಿಂದ
ಕರಿಮೋಡದ ತೆಕ್ಕೆಯಿಂದ

ಸೊಸೆಯಂದರೆ...

ಸೊಸೆಯಂದರೆ...

ಸೊಸೆಯಂದರೆ..
ಕೇವಲ ಅವಳೊಬ್ಬಳು
ಮಗನ ಮಡದಿಯಲ್ಲ..
ಬೀಗರು ನಮ್ಮ ಮನೆಗೆ
ಧಾರೆಯರೆದು ಕೊಟ್ಟ ಹೆಣ್ಣಲ್ಲ
ಎಲ್ಲ ಭಾಂಧವ್ಯಗಳ ಕರುಳ
ಚೀವುಟಿಕೊಂಡು ಬಂದವಳಲ್ಲ
ನಿಮ್ಮ ವಂಶದ ಕಳಶಗಳ ಹೆತ್ತು
ಕೊಡುವ ಗರ್ಭದವಳಷ್ಟೆಯಲ್ಲ.
ಅವಳು ಬರಬೇಕು ನಿಮ್ಮ ಮನೆಗೆ
ಹೊಸ್ತಿಲು ತುಳಿದು..

ಸೊಸೆಯಾಗಿಯಲ್ಲ...ಮಡದಿಯಾಗಲ್ಲ...
ಮಗಳಾಗಿಯೂ ಅಲ್ಲ...
ನಿಮ್ಮನ್ನೆಲ್ಲ ಕಣ್ಣಲಿ ಕಣ್ಣಿಟ್ಟು ಕಾಪಾಡುವ
ಪೋಷಿಸುವ... ಹೂವಂತೆ ಸಾಕುವ ತಾಯಿ
ಯಾಗಿ ಬರಬೇಕು.. ಅವಳನ್ನು ನಾವು ತಾಯಿಯಂತೆ
ಕಾಣಬೇಕು..
ಎದೆಹಾಲ ಕುಡಿಸುವುದನೊಂದನು ಬಿಟ್ಟು
ಅವಳು ಯಾವ ತಾಯಿಗೂ ಕಡಿಮಿಯಿಲ್ಲ..

ಗಂಡನು ಕೇವಲ ಕಾಮದ ಗೊಂಬೆಯನ್ನಾಗಿ..
ಅತ್ತೆ ಮಾವಂದಿರು ಕೆಲಸದ ಹೆಣ್ಣನ್ನಾಗಿ..
ಮೈದುನ ನಾದಿನಿಯರು ತುಚ್ಛವಾಗಿ.. ಅವಳ
ನೋಡದೆ.. ಅವಳೂ ನೂರಾರು ಕನಸುಗಳ
ಹೊತ್ತ ಬಂದ...ನಿಮ್ಮೆಲ್ಲರ ಪ್ರೀತಿ.. ಗೌರವಗಳ
ಬಯಸಿ ಬಂದಂಥ.. ನೋವಾದರೆ ಸ್ಪಂದಿಸುವ
ನಲಿವಾದರೆ ಹಂಚುವಂತಹ ಜೀವಂತ ಮನಸ್ಸಿನ
ಪುತ್ಥಳಿ ಗೊಂಬೆ

ಸೊಸೆಯಂದರೆ...
ಹಣದ ಪೆಟ್ಟಿಗೆಯ.. ಮೈ ತುಂಬ ವಜ್ರ
ವೈಡೊರೆಗಳ.. ಕೆಜಿ.. ಕೆಜಿ. ಬಂಗಾರವ
ಹೊತ್ತುವ ತರುವ ಗೊಂಬೆ ಅಷ್ಟೇಯೆ..???

ಬದುಕಬಲ್ಲೆಯಾ..?

ನೀ ಎದುರಿಗೆ ಹೀಗೆ ಕುಳಿತರೆ
ನಾನೇನು ಮಾಡಲಿ.. ಮಲ್ಲಿಗೆ
ಬಣ್ಣದೊಳಗಿನ ಕಡುಕಪ್ಪು
ಕಾಡಿಗೆಯ ರೂಪದ ನಿನ್ನ
ನಯನಗಳು ನನ್ನ ಬಂಧಿಸಿವೆಯಲ್ಲ..

ಆಡುವ ಜನರೆನು... ಪ್ರೀತಿಯ
ಗುಡಿಯ ಕಟ್ಟಿದರೂ.. ಒಲವಿನ
ಗೋರಿಯ ಕಟ್ಟಿದರೂ.. ಮಾತನಾಡುವರಲ್ಲ
ಇಲ್ಲ.. ಇಲ್ಲ.. ಎನ್ನುತಲೆ ನಾವಿಬ್ಬರೂ
ಸೇರಿಬಿಟ್ಟೆವಲ್ಲ..ಇನ್ನೂ.. ಹೃದಯದ
ಮಾತುಗಳ ತಡೆಯುವರಾರು..

ಕಣ್ಣಲೆ ಬಲೆ ಬಿಸಿ.. ಎದೆಯ ಗೂಡಿನಲ್ಲಿ
ಬಂಧಿಸಿದವಳು.. ಇಂದು ನನ್ನ ನೀ
ತೊರೆಯಬಲ್ಲೆಯಾ...
ಮರೆಯಬಲ್ಲೆಯಾ...
ಬದುಕಬಲ್ಲೆಯಾ..?

Sunday, May 21, 2017

ನೆನಪುಗಳ ವ್ಯಥೆ

ಮನಸುಗಳೆ...ದೂರವಾದ ಮೇಲೆ
ನಾನಿನ್ನು ಬರುವ ಮಾತೆಲ್ಲಿ..
ನಾನೆ ಇಲ್ಲದ ಮೇಲೆ ಆ ಸುಡು
ನೆನಪುಗಳ ವ್ಯಥೆಯ ಕಥೆಗಳೆಕಿಲ್ಲಿ...

ಗಂಡನಿಲ್ಲದ ಬಾಳಿಗೆ ಗಂಡಾಗು

ವಿಧವೆ ನೀನು..ಗಂಡಾಗು ನಿನ್ನ ಬಾಳಿಗೆ
ದಿಕ್ಕು ದೆಸೆಯಿಲ್ಲದೆ..ಕಷ್ಟದ ಬಿರುಗಾಳಿಗೆ
ಸಿಕ್ಕು ಹೊಯ್ದಾಡುತ್ತಿರುವ ನಿನ್ನ ಬಾಳಿನ
ನೌಕೆಗೆ......ನೀನೆ ನಾವಿಕಳಾಗು...

ಕಲ್ಲಾಗು... ಬರುವ ಕಷ್ಟಗಳಿಗೆ
ಜನರಾಡುವ ನುಡಿಗಳಿಗೆ... ಹಿಯ್ಯಾಳಿಸುವ
ಮಾತುಗಳಿಗೆ...ನಿಂದಿಸುವವರಿಗೆ
ಕೊಂಕುಮಾತಿನವರಿಗೆ.. ಕೈಗಳೆರಡನು
ಕಬ್ಬಿಣವಾಗಿಸು.. ಬದುಕಿನ ಕಷ್ಟದ ಕಬ್ಬಿಣವನ್ನು
ನಿನ್ನ ಆಕಾರಕ್ಕೆ ಬರುವವರೆಗೂ ಬಾರಿಸು..
ಹತ್ತಲಿ ಧಮ್ಮು.. ಸುಧಾರಿಸಿಕೊ ಎರಡು ಘಳಿಗೆ
ಮತ್ತೆ ಬಾರಿಸು... ಬಾರಿಸು...

ಗುರುವಾಗು... ನಿನ್ನಂತೆ ನೊಂದವರ ಬಾಳಿಗೆ
ಹುಟ್ಟಿಸಿದ ಮಕ್ಕಳನ್ನು ಕೇವಲ ಹೊಟ್ಟೆಪಾಡಿಗಾಗಿ
ಅನಕ್ಷರಸ್ಥರನ್ನಾಗಿಸದೆ.. ಶಾಲೆಗ ಕಳಿಸು.. ಸಂಜೆ
ಬಂದ ಮಕ್ಕಳಿಗೆ ಮನೆಪಾಠವ ಮಾಡು... ನಮ್ಮ
ನಾಡಿನ ನಡೆ ನುಡಿಯ ಬಗ್ಗೆ... ನಾಡಿಗಾಗಿ ಹೋರಾಡಿದ..
ನಾಡನು ಕಟ್ಟಲು ದುಡಿದ ನಾಯಕರ ಬಗ್ಗೆ...
ನಿನ್ನಂಥ ವಿಧವೆಯನ್ನು ಸಮಾಜದಲ್ಲಿ ಹೇಗೆ
ಗೌರವಿಸಬೇಕೆಂದು.... ಪರಸ್ತ್ರೀಯರನು ಉತ್ತಮ
ಸ್ಥಾನದಲಿಟ್ಟು ನೋಡುವುದನೆಲ್ಲವ ಕಲಿಸಿಕೊಡುವ
ಮಾತೆಯಾಗು..

ಮಾದರಿಯಾಗು... ಗಂಡ ಸತ್ತ ಮೇಲೆ ನಮ್ಮಿಂದೇನೂ..
ಆಗದು..ಎಂದು ಕೈ ಚೆಲ್ಲಿ ಕುಳಿತವರ ಬಾಳಿನ ಜ್ಯೋತಿಯಾಗು
ಹಣೆಯ ಸಿಂಧೂರ ಅಳಿಸಿ ಹೋದರು.... ಮೊಗದ
ಮೇಲಿನ ನಗುವು ಬಾಡದಿರಲಿ.... ಚಿಗುರಿಸು ಅವರ
ಬಾಳಲಿ ಮತ್ತೆ ವಸಂತವ.... ಕೇಸರಿನ ಬಾಳಲೂ
ಅರಳಿಸು ಸುಕೋಮಲ ಕಮಲವ...ಒಟ್ಟಿನಲಿ
ನೀನೊಬ್ಬಳು ಕಿತ್ತೂರು ಚೆನ್ನಮ್ಮನ ಪ್ರತಿರೂಪವಾಗು