Tuesday, November 28, 2017

ಶರಣ ೬

ಬದುಕಿನಾ ಸಂತೆಯಲಿ...
ಬಂಧು ಬಾಂಧವರು..
ಒಡಹುಟ್ಟಿದವರು...ಸ್ನೇಹಿತರ
ಮರಣದ ನಂತರ... ಚಟ್ಟವ
ಹೊರುವ ಭುಜಗಳನ್ನಾಗಿರಿಸದಿರಯ್ಯ
ಅವರ ಉನ್ನತಿಯ ಹಾದಿಯಲ್ಲಿ
ಹತ್ತುವ ಮೆಟ್ಟಿಲುಗಳನ್ನಾಗಿಸಯ್ಯ
ಎನ್ನ ಹೆಗಲುಗಳ....
ಶ್ರೀ ಶರಣಬಸವ

ಈ ಪ್ರೀತಿಗೆ ಬೆಂಕಿನರ ಹಚ್ಚ

ಹೋಗೊದ ಹೊಂಟಿ ನೋಡಬ್ಯಾಡ
ನಿ ನನ್ನ ಹೊಳ್ಳಿ
ಕರುಳಿಲ್ದ...ಪ್ರೀತಿ ಬಣವಿ ಒಣಗಿಸಿ
ಇಟ್ಟ ಹೊಂಟಿಯಲ್ಲ ಉರಿಯೊ ಕೊಳ್ಳಿ
ಮಾವಿನ ತೋಟದ ನಡು ತೋಪನ್ಯಾಗ
ಎಷ್ಟರ ಮಾತಾಡ್ತೀದ್ದಿ ಮಳ್ಳಿ
ಅಗಸಿ ಬಾಗಲ್ದಾಗ ನಿಂದ್ರೀಸಿ ಹೊಂಟಿಯಲ್ಲ ನನ್ನ
ನಗಾಕ ಹತ್ತೈತಿ ನೋಡಿಲ್ಲೆ....ನಾವ್ ಕೂಡಿ ಆಡಿದ ಹಳ್ಳಿ

ಗಂಧದಂತ ನಿನ್ನ ರೂಪಾನ ತುಂಬ್ಕೊಂಡಿದ್ದ ಈ
ಜೋಡಿ ಕಣ್ಣಾಗ ಹಾಕಿ ಹೊಂಟೊಯಲ್ಲ.. ಬೊಗಸೆ ಮಣ್ಣ
ಕಾಡಿ.. ಬೇಡಿ ಕೇಳಿದ್ರೂನು ವರ ಕೊಡ್ತಾನ ಆ ಕರಿ ಕಲ್ಲಿನ
ದ್ಯಾವ್ರು... ಕೊಟ್ಟ ವರಾನ ಶಾಪ ಮಾಡಿ ಹೊಂಟ ನಿಂತಿಯಲ್ಲ ನೀನೆಂಥ ಹೆಣ್ಣ
ನನಗ ಗೊತ್ತಾಗ್ಲಿಲ್ವಲ್ಲೆ..... ಚೆಲ್ವಿ ನಿನ್ನ ಊಸರವಳ್ಳಿ ಬಣ್ಣ
ನಿನ್ನನ್ನ ನಂಬಿ ಹೊಡ್ಕೊಂತಿದ್ದ ಈ ಎದಿಯಾಗ...
ಮಾಸಲಾರ್ದಂತದ್ದು ಮಾಡಿಟ್ಟಿಯಲ್ಲೆ ಪ್ರೀತಿಯ ಹುಣ್ಣ

ನಾ.. ಕೊಟ್ಟ ಮಲ್ಗಿ ದಂಡಿ ಕಿತ್ತ ಒಗ್ದಿಯಲ್ಲ ಸೆಗಣಿ ಗುಂಡ್ಯಾಗ
ಸಾವುಕಾರನ್ ಮನಿ ಸೊಸಿಯಾಗಿ ಹೊಂಟಿಯಲ್ಲ ಜೋಡೆತ್ತಿನ
ಬಂಡ್ಯಾಗ
ನನ್ನ ನೆಪ್ಪಾಗಿ ಓಡೋಡಿ ಬರ್ತೀಯೇನೊ... ಅಂಥಾ ಕಾಯ್ಕೊಂತ ಕುಂತೇನ ಈ ಕೆರಿ ದಂಡ್ಯಾಗ
ಆಗೋದಿಲ್ಲಂದ್ರ... ನಿನ್ನ ನೆಪ್ಪನ್ಯಾಗ ಒಣಗಿ ಕುಂತ ನನ್
ಮೈಗೆ ಬೆಂಕಿನರ ಹಚ್ಚಿಬಿಡು... ಸುಟ್ಟ ಹೋಗ್ತಿನಿ ನಿನ್ನ
ನೆನಪಿನ ತಂಡ್ಯಾಗ

Monday, November 27, 2017

ಸಾವು ಕರೆಯುವವರೆಗೂ....

ಹಸಿವು.. ಹಸಿವೆನ್ನುತ ಸಾಯುವ ಮಣ್ಣಲಿ
ಎನ್ನ ಜೀವದ ಬೀಜಾಂಕುರವಾಗಿದೆ...
ನಾಟಿ, ಚಿಗುರೊಡೆದಿರುವೆ... ರೆಂಬೆ
ಕೊಂಬೆಗಳ ಹರಡಿ.. ಮುಗಿಲು ಮುಟ್ಟಲು
ಬೇಕಿದೆ ನೀರು ಗೊಬ್ಬರಗಳು...

ಬಲಿಯುವ ಮೊದಲೆ.... ಬಡವಾಗಿ ಬಗ್ಗಿದೆ
ನಡುವು... ಹಸಿವಿನೊಂದಿಗೆ ಕಾದಾಡುವ
ಮೊದಲೆ ಸೋತು ಶರಣಾಗಿವೆ ತೋಳುಗಳು..

ಹೊತ್ತಿಗೆ ಕುಡಿಸಿದ ನೀರು ಅಮೃತವಾಯಿತು..
ನೀನೀಡಿದ ತುತ್ತೊಂದು ಮೃಷ್ಟಾನ್ನವಾಯಿತು
ಈ ಘಳಿಗೆಯ ಸಾವು ಇನ್ನೊಂದು
ಹೊತ್ತಿಗೆ ಸರಿದು ಕೂತಿತು

ಹಸಿವೆನ್ನುವುದು ಈ ನಾಡಿನ ಶಾಪ
ಹುಟ್ಟುತ್ತಿರುವವೊ ಅರಿವಿಲ್ಲದೆ ನನ್ನಂತ
ಎಷ್ಟೊಂದು... ಪಾಪ
ತಟ್ಟುತ್ತಿಲ್ಲವಲ್ಲ ಆ ದೇವನಿಗೆ ನಮ್ಮಯ ಹಸಿವಿನ ತಾಪ
ಇರಬೇಕು ಅದೇಷ್ಟು ನಮ್ಮ ಮೇಲೆ ಕೋಪ

ನಡೆಯಬೇಕಿದೆ ಬದುಕಿದು ಹೀಗೆ..
ರವಿಯ ತಾಪಕೆ ಕರಗುವವರೆಗೂ..
ಕಾಲನ ಕಾಲಿಗೆ ಸಿಕ್ಕು ಮುದುಡುವವರೆಗೂ...
ಬೆಂದು ಬಾಯ್ಬಿಟ್ಟ ಭೂ ಒಡಲಲಿ
ಮಣ್ಣಾಗುವವರೆಗೊ..
ನಾನರಿಯೆ..

ಸೊಗಸಾದ ಸಾಲುಗಳು ಕವಿಮಿತ್ರರೆ
ಶುಭೋದಯ

Saturday, November 25, 2017

ನಿನಗಿದು ತರವೆ..? ಜನನಿ

ನಿನಗಿದು ತರವೆ...? ಜನನಿ
ಉಸಿರಿಲ್ಲದೆ ಮಡಿಲಲಿ ಮಲಗಿ
ಮಾಡಿದೆಲ್ಲ ನನ್ನನು ಜಗದೊಂದಿಗೆ ಮೌನಿ
ಎನಿತು ಜನ್ಮಗಳ ಪುಣ್ಯಗಳ ಫಲವೊ...
ಹೆತ್ತು.. ಹೊತ್ತು... ಎದೆ ಹಾಲುಣಿಸಿ...
ಆಸೆ ಕಂಗಳಲೆನ್ನ ನೋಡುತಾ....ಮಡಿಲಲಿ
ಮಲಗಿಸಿಕೊಂಡು ಮುದ್ದಾಡುತಿದ್ದ ಜ್ಯೋತಿಯೆ...‌

ಲೆಕ್ಕ ಮುಗಿಸಿದ ಕಾಲ ತಜ್ಞನ ಸುಳಿಗಾಳಿಗೆ
ಸಿಕ್ಕು , ಸರಿದೆಯಲ್ಲವ್ವ... ಕಾರ್ಗತ್ತಲಲಿ
ಲಕ್ಷ.. ಲಕ್ಷ.. ಮಾಡಿದರು ವೆಚ್ಚ..!!!
ಮಿಡಿಯಲಿಲ್ಲ ಇನ್ನಷ್ಟು ದಿನ... ನಿನ್ನ
ಹೃದಯದ ಬಡಿತ... ಅರಿವಾಗಲಿಲ್ಲವೇಕೊ...?
ಚತುರ್ಮುಖನ ಲೇಖನಿಗೆ.. ಅನುಕ್ಷಣವು ಅಮ್ಮನಿಗಾಗಿ
ಹಲಬುತಿರುವ ನನ್ನ ಮನದಾಳದ ತುಡಿತ !!!

ವಲೆಯ ಕಾವನುಂಡು ನಿ ಬಡಿಯುತ್ತಿದ್ದ ರೊಟ್ಟೆಯ
ಸಪ್ಪಳಕ್ಕಿಂತ... ನನ್ನೆದೆಯ ಬಡಿತವು... ಹೊಡೆದು
ಹೊಡೆದು...ಸಿಡಿಯುವುದೇನೊ..? ಎಂದೆನಿಸುತಿದೆ..
ನೀನಿಂದು ಪೂರ್ಣಾಗ್ನಿ ಕಾವಿಗೆ ಹೊತ್ತುರಿಯುತ್ತಿರುವುದ ಕಂಡು. ಮನೆಯೊಲೆಯೊಳು ಸುಟ್ಟು ಮಲಗಿದೆ ಸುಖಗಳ ಬೂದಿ... ಮನದೊಲೆಯೊಳು ಸಹಿಸದ ಕಿಚ್ಚ ಹೊತ್ತಿಸಿದೆ...
ನಿನ್ನ ನುಂಗಿ ಮಲಗಿದ ಬೂದಿ

ನನಗೇನು ಅರಿವಾಗುತ್ತಿತ್ತೊ..? ಜೀವನ್ಮರಣದಿ ಕಾದಾಡಿ
ನನಗೆ ಜನ್ಮವಿಯ್ಯಲು ನೀನನುಭವಿಸಿದ ನೋವು..!!!
ಅರಿವಾಗುತಿವುದಿಂದು...ಎದೆಯಲಿ ಸಾವಿರ ನೋವಿನ
ಸೂಜಿಗಳ ನರ್ತಗೈಯಿಸುತಿದೆ ಅವ್ವ... ನಿನ್ನ ಸಾವು !!!
ಇನ್ನಾರ ಬಳಿ ನಾ ಕೈ ಚಾಚಿ ಬೇಡಲಿ... ಕೈ ತುತ್ತನುಣಿಸಿ
ಲಾಲಿಯ ಹಾಡಿ ಇಂಗಿಸುವರೆ...? ತಾಯ್ವೊಲವ ಹಸಿವು !!!

ನಿನಗಿದು ತರವೆ...? ಜನನಿ
ಹೆಗಲೆರಿಸಿ ಹೊರಟು ಹೋದೆಯಲ್ಲ ನೀನು
ನೋವಿನ..‌ ಶನಿ

Tuesday, November 21, 2017

ಪಾಪದ ಪಿಂಡವಾದಳು

ಅಪ್ಪನ ಅಕ್ಕರೆಯ ಸಕ್ಕರೆಯ ಗೊಂಬೆಯು...... ಕರಗಿಹೋಯಿತು
ಕಾಮದ ಬೆಂಕಿಗೆ ಸಿಲುಕಿ
ಯೌವ್ವನದ ಹೊದೋಟದಲಿ ನಳನಳಿಸುತಿದ್ದ ಹೊವೊಂದನು ಕಿತ್ತು
ಆಘ್ರಣಿಸಿ... ನಡೆದು ಹೋದನು ಕಾಲ
ಬುಡದಲಿ ಹೊಸಕಿ

ಅಕ್ಕಪಕ್ಕದ ಮನೆಯವರ ಪಾಲಿಗೆ
ಚಪ್ಪರಿಸಿ ತಿನ್ನುವ ಸಿಹಿಯಾದಳು
ಮದುವೆಯ ಮುಂಜಿಯ ಕನಸು ಕಂಡಿದ್ದ
ಅಪ್ಪನ ಗಂಟಲಲಿ ನುಂಗಲಾರದ ತುತ್ತಾದಳು

ಹರೆಯದ ಹೊಸ್ತಿಲಲ್ಲಿ ನಲುನಲುಗಿ
ನರಕದ ಹಜಾರದಲಿ ಮಲಗಿಹಳು
ನೋಡುಗರ ಕಣ್ಣಿಗೆ ಸಿಪ್ಪೆ ಒಡೆದ
ಕಡಲೆ ಬೀಜವಾದಳು
ಬೇರಿಲ್ಲದ ಕನಸುಗಳ ಹೊತ್ತು
ತಾಯಾದಳು.. ಪಾಪದ
ಪಿಂಡಕ್ಕೆ ವಾರಸುದಾರಳಾದಳು

ಇಷ್ಟೇ ಕಣ್ರೀ ಮಿತ್ರರೆ ನನ್ನ ಕೈಲಿ ಬರೆದು ಹಾಕಲಾಗುವುದು..
👌👌👌👌👌 🙏🙏🙏🙏
ಶುಭರಾತ್ರಿ

Saturday, November 18, 2017

ಬೇರಿಲ್ಲದ ಕನಸುಗಳು

"ಅಯ್ಯೋ.. ಮೂದೇವಿ, ಎದ್ದೇಳೆ ನಿನಗೇನು ಹೊತ್ತುಗಿತ್ತು ಆಗೈತೆ ಇಲ್ಲೊ..? ಸೂರ್ಯ ಆಗ್ಲೇ ನೆತ್ತಿ ಮೇಲೆ ಬಂದವ್ನೆ" ಎಂದು ದಬದಬ ಬಾಗಿಲು ಬಡೆಯುತ್ತಿತ್ತು ಮುದುಕಿ. ಆ ಸದ್ದಿನ ಸಪ್ಪಳಕ್ಕೆ ಧಿಕ್ಕನೆ ಎದ್ದು ಕುಳಿತಳು ಮಂಜುಳಾ. ಗೋಡೆಗೆ ನೇತು ಹಾಕಿದ ಗಡಿಯಾರವ ನೋಡಿದಳು ರಾತ್ರಿ ಮೂರಕ್ಕೆ ಇಪ್ಪತ್ತಕ್ಕೆ ನಿಂತು ಬಿಟ್ಟಿದೆ. ಬೆಳಗ್ಗೆ ಐದು ಮೂವತ್ತಕ್ಕೆ ಎಬ್ಬಿಸಬೇಕಾದದ್ದು ಹಾಳಾದ್ದು ತಾನು ನಿಂತು ನನ್ನನ್ನು ಇವತ್ತು ಅತ್ತೆಯ ಕೈಯಿಂದ ಬೆಳಿಗ್ಗೆ ಬೆಳಿಗ್ಗೆಯೆ ಮಂಗಳಾರತಿ ಮಾಡಿಸುತ್ತಿದೆ ಎಂದುಕೊಂಡು ಮೆಲ್ಲನೆ ಏಳು ತಿಂಗಳ ಹೊಟ್ಟೆಯ ಹಿಡಿದುಕೊಂಡು ಮೇಲೆದ್ದು ತಲಬಾಗಿಲವ ತೆರೆದಳು. ಹಾಳ ಮುಖದ್ಲೆ... ಅತ್ತಿ ಮತ್ತಿಷ್ಟು ಶುರು ಹಚ್ಚಿಕೊಂಡು ಬಿಟ್ಲು, "ಅಯ್ಯೊ ನಿನ್ನ ದುರ್ಗವ್ವ ನುಂಗಿ ದ್ಯಾಮವ್ವ ನೀರ ಕುಡಿಲಿ, ಏದ್ದಿದ್ದ ಹೊತ್ತಾಗಿ ಅಂತಾದ್ರಾಗ ಮತ್ತ ನಿನ್ನ ನೀರ ಕಾಣ್ದ ಹಾಳ ಸುಡಗಾಡಿ ಮೊತಿ ತೋರ್ಸಿಬಿಟ್ಟೆಲ್ಲ, ಆತ ಇವತ್ತು ಸಂಜೆನ್ನೊದ್ರೊಳಗ ಏನ ಕಾದೈತೊ ಏನೊ, ಸರಿಸರಿ ದಾರಿಬಿಡು, ಕ್ವಾಣ ಊರ ಕ್ವಾಣ ನಾಳೆ ಹೊಟ್ಟಿ ತೆರ್ದ ಹಡದ್ರ ತಾಯಿ ಆಗಾಕಿ ಅದೀದಿ ಅಷ್ಟು ಗೊತ್ತಾಗದಿಲ್ಲನು ನಿನಗ " ಅಂತಾ ವಟಗುಡುತ್ತಾ ಹಾಗೆ ಊರಗೋಲನ್ನು ಹಿಡ್ಕೊಂಡು ಒಳಗೆ ಹೋದಳು.  ತಡವಾಗಿ ಎದ್ದಿದ್ದಕ್ಕೆ ತನ್ನನ್ನೆ ಬೈದುಕೊಳ್ಳುತ್ತಾ, ಕೊಟ್ಗಿಯಲ್ಲಿದ್ದ ಎಮ್ಮೆಯನ್ನು ಮನೆಯನ ಪಕ್ಕದಲ್ಲಿದ್ದ ವೀರಭದ್ರೇಶ್ವರ ದೇವಸ್ಥಾನದ ಮೈದಾನದಲ್ಲಿದ್ದ ಬೇವಿನ ಗಿಡಕ್ಕೆ ಕಟ್ಟಿ ಬಂದು, ಸಗಣಿ ಸಾರಿಸಿ, ಅಂಗಳದ ಕಸ ಹೊಡೆದು, ನೀರನ್ನು ಹಣಿಸಿ, ಚುಕ್ಕಿಯ ಸೇರಿಸಿ ರಂಗೋಲಿಯನಿಟ್ಟು, ದಡಬಡನೆ ಬಂದು ಮೊಖವನ್ನು ತೊಳೆದುಕೊಂಡು ಒಲೆಯ ಹಚ್ಚಿದಳು ಚಹಾವ ಸೊಸಲು. ಚಹಾವ ಸೊಸಿ ಅತ್ತೆಗೆ ಕೊಟ್ಟು ಮನೆಯ ಪಕ್ಕದ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದ ಮಾನವನನ್ನು ಎಬ್ಬಿಸಿ ಅವರಿಗೆ ಕುಡಿಯಲಿಕ್ಕೆ ನೀರು, ಚಹಾವನ್ನು ಕೊಟ್ಟು ಬಂದು ಗಂಡನನ್ನು ಹುಡುಕಿದಳು. ಅವನ್ಯಾವಗಲೊ ಎದ್ದು ಹೋದ ಹಾಗಿತ್ತು, ಅಷ್ಟರಲ್ಲೇ ಸರಕಾರಿ ನಳವು ಝಳು ಝಳೆಂದು ಸದ್ದು ಮಾಡತೊಡಗಿತ್ತು ಅಕ್ಕಪಕ್ಕದವರು ಆವಾಗಲೆ ಎರಡೆರಡು ಕೊಡಗಳ ಪಾಳೆಯ ಹಚ್ಚತೊಡಗಿದ್ದರು. ಮಂಜುಳಾನು ಅವಸರಿಸಿ ಕೊಡವ ತೆಗೆದುಕೊಂಡು ಹೋಗಿ ಪಾಳೆಗಿಟ್ಟಳು. ಬಿಡುವುದೆ ಒಂದು ತಾಸು ನೀರು ಅಷ್ಟರಲ್ಲಿ ಎರಡು ದಿನಕ್ಕಾಗುವಷ್ಟು ನೀರನ್ನು ಹೊತ್ತು ಹಾಕಬೇಕಿತ್ತು. ಪಾಳೆಯ ಬಂದು ತುಂಬಿದ ಬಿಂದಿಗೆಯನ್ನು ಎತ್ತಿ ಕಂಕುಳಲ್ಲಿ ಇಟ್ಟುಕೊಳ್ಳಬೇಕೆಂಬಷ್ಟರಲ್ಲಿ ಹೊಟ್ಟೆಯ ಬಲ ಪಕ್ಕಡಿಯಲ್ಲಿ ಮುಳ್ಳಂತೆ ಚುಚ್ಚಿದ ಅನುಭವವಾಯಿತು. ಅದೊಂದೆ ಕೊಡವ ಹೊತ್ತು ತಂದು ಜಗುಲಿಯಲ್ಲಿಟ್ಟು, ಹೊಟ್ಟೆಯ ಹಿಡಿದುಕೊಂಡು, ಗೋಡೆಗೆ ತಲೆಕೊಟ್ಟು ಆಸರೆಯಾಗಿ ಕಣ್ಮುಚ್ಚಿ ನಿಂತು ರಾತ್ರಿ ನಡೆದ ಘಟನೆಯನ್ನು ನೆನಪಿಸಿಕೊಂಡು ಬೆಚ್ಚಿಬಿದ್ದಳು.

       ಸಮಯ ಮಧ್ಯರಾತ್ರಿ ಹನ್ನೆರಡು ವರೆಯಾಗಿತ್ತು, ಓಣಿಯ ಬೀದಿಗಳೆಲ್ಲ ಅಲ್ಲೊ ಇಲ್ಲೊ ಬೀದಿ ನಾಯಿಗಳು ಬೌಂ...‌ ಅನ್ನುವ ಕೂಗೊಂದನು ಹೊರತುಪಡಿಸಿ ನಿಶ್ಯಬ್ದವನ್ನು ಹೊದ್ದು ಮಲಗಿದ್ದವು, ಬಾಗಿಲ ಸಂದಿಯಲ್ಲಿ ಗುಯ್ಯಂ.. ಅನ್ನುವ ಹುಳದ ಶಬ್ದ, ವಲೆಯ ಮೇಲೆ ಮಾಡಿದ ಅಡುಗೆ ಆರಿ ಮಲಗಿತ್ತು, ಮಂಜುಳಾಳ ಕಣ್ಣುಗಳು ಮೆಲ್ಲಗೆ ನಿದ್ರೆಗೆ ಜಾರತೊಡಗಿದ್ದವು. ಡಬ್ ಡಬ್ ಎಂದು ಬಾಗಿಲ ಬಡಿತದ ಶಬ್ದ ಆ ಶಬ್ದಕ್ಕೆ ತಟ್ಟನೆ ಎಚ್ಚರವಾಗಿ ಎದ್ದು ಹೋಗಿ ಬಾಗಿಲನ್ನು ತೆರೆದಳು. ಗಂಡ ಸುರೇಶನು ಎಂದಿನಂತೆ ಇವತ್ತು ಹೊತ್ತಾಗಿ ಸ್ವಲ್ಪ ಕುಡಿದೆ ಬಂದಿದ್ದನು. " ಯಾಕೀಷ್ಟೊತ್ತು ಬಾಗ್ಲಾ ತಗಿಯಾಕ ?, ಎದೆಯುದ್ಕ ತಿಂದ ಕುಂತಬಿಟ್ಟಿದ್ದೇನ ಟಿ.ವಿ ನೋಡ್ಕೊಂಥ " ಎನ್ನುತ್ತಾ ಅವಳ ಭುಜವ ಹಿಡಿದು ಸರಿಸಿ ಒಳ ನಡೆದ ಇವಳಿಗೆ ಸ್ವಲ್ಪ ಗಾಭರಿಯಾಯಿತು ದಿನಕ್ಕಿಂತಲೂ ಇಂದು ಯಾಕೊ ಅವರ ಮಾತಲ್ಲಿ ತಿರಸ್ಕೃತ, ಸಿಟ್ಟಿನ ಭಾವ ಹೆಚ್ಚಾಗಿತ್ತು. ಬಟ್ಟೆಯ ಬದಲಿಸಿ ಮುಖವನ್ನು ತೊಳೆದುಕೊಂಡು ಊಟಕ್ಕೆ ಬಂದು ಕುಳಿತನು. ಮಂಜುಳಾನು ಮಾಡಿದಡುಗೆಯ ನೀಡಿ ಗೋಡೆಗೆ ಒರಗಿ ನಿಂತಳು. ಅನ್ನವನುಣ್ಣುವ ಮುಂದ ನೀಡಿದ ಸಾರು ತಣ್ಣಗಾಗಿತ್ತು. ತುತ್ತನ್ನು ಕೈಯಲ್ಲಿ ಹಿಡಿದುಕೊಂಡು " ಮನ್ಯಾಗ ಕುತ್ಕೊಂಡು ಏನ ಮಾಡ್ತೀದಿ ನೀನು, ಕತ್ತಿಗಿತ್ತಿ ಕಾಯಾಕರ ಹೋಗು ಏನ ನಿಮ್ಮವ್ವ ಅಡ್ಗಿ ಮಾಡಿ ನೀಡೊದನ್ನ ಹಿಂಗ ಕಲ್ಸ್ಯಾಳನು" ಎಂದು ಮಾತ ಮಾತನಾಡುತ್ತಲೆ ಕೈಯಲ್ಲಿದ್ದ ತುತ್ತನ್ನು ಅವಳ ಮುಖಕ್ಕೆ ಎಸೆದನು, ಕೋಪ ತಣ್ಣಗಾಗಲಿಲ್ಲವೇನೊ, ಅತ್ತ ಇತ್ತ ನೋಡಿ ಮುಂದಿ ಕುಡಿಯಲಿಕ್ಕೆಂದು ತುಂಬಿಟ್ಟಿದ್ದ ಚರಿಗೆಯನ್ನು ತೆಗೆದುಕೊಂಡು ಮಂಜುಳಾತ್ತ ಎಸೆದನು. ಅದು ನೇರವಾಗಿ ಬಂದು ಅವಳ ಬಲ ಪಕ್ಕಡಿಗೆ ಬಿದ್ದಿತು. ಉಸಿರೆ ನಿಂತಂತ ಅನುಭವವಾಗಿತ್ತು ಮಂಜುಳಾಳಿಗೆ ಹಾಗೆ ಹೊಟ್ಟೆಯ ಹಿಡಿದುಕೊಂಡು "ಅವ್ವಾ..." ಎಂದು ಚೀರಿ ಅಲ್ಲೆ ಹೊಟ್ಟೆಯ ಹಿಡಿದುಕೊಂಡು ಅಳುತ್ತಾ ಕುಳಿತು ಬಿಟ್ಟಳು. ಗಂಡನೆಂಬುವನು ಅವಳ ನೋವಿಗೆ ಕಿವಿಗೊಡದೆ ಹಾದಿಗೆ ದಿಂಬನು ಎತ್ತಿಕೊಂಡು ಮಾಳಿಗೆಯ ಹತ್ತಿಬಿಟ್ಟಿದ್ದನು. ಆ ನೋವನ್ನು ಹಾಗೊ ಹೀಗೊ ಸಹಿಸಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮೇಲೆದ್ದಳು, ಅಡುಗೆ ಮನೆಗೆ ಹೋಗಿ ಕೊಡದ ಮುಚ್ಚಳವನ್ನು ತೆಗೆದು ಚರಿಗೆ ನೀರನ್ನು ಕುಡಿದು ಹೊರಗೆ ಪಡಸಾಲೆಗೆ ಬಂದು ಅಲ್ಲಿಯೆ ಮೆಲ್ಲಗೆ ನೆಲದ ಮೇಲೆ ಹಾಸಿಕೊಂಡಿದ್ದ ಹಾದಿಗೆಯ ಮೇಲೆ ಮಲಗಿದಳು. ಹೊಟ್ಟೆಗೆ ಬಿದ್ದ ಪೆಟ್ಟಿಗೂ.. ಮದುವೆಯಾಗಿ ಐದು ವರುಷಗಳಲ್ಲಿ ಪಟ್ಟ ನೋವುಗಳ ನೆನೆದು ಕಣ್ಣಂಚಿನ ತುದಿಯಿಂದ ಕಣ್ಣೀರು ಜಾರಿ ತಲೆ ದಿಂಬನ್ನು ತೊಯಿಸುತ್ತಿದ್ದವು. ಮಲಗಿದಲ್ಲಿಯೆ ಮದುವೆಯ ನಂತರದ ದಿನಗಳನ್ನು ನೆನೆಯ ಹತ್ತಿದಳು.

   "ಬೇಕಾಗಿಲ್ರೀ ನಿಮ್ಮ ಮಗಳು ನಮ್ಗ, ಒಂದು ತೊಲಿ ಬಂಗಾರ ಕೊಡೊದ ಅಗೋದಿಲ್ಲಂದ್ರ ನಿಮ್ಮ ಮಗ್ಳನ್ನ ಇಲ್ಲೆ ಇಟ್ಕೊಳ್ಳಿ ನಮಗೇನು ಜರುರತ್ತೇನಿಲ್ಲ, ನಿಮ್ಮ ಮಗಳ ಕೈಲೆ ರೊಟ್ಟಿ ತಿನ್ಬೇಕ ಅನ್ನೊದು. ಬಂಗಾರ ತಯಾರಾದಾಗ ಹೇಳ್ರಿ, ನಾನಾ ಖುದ್ದಾಗಿ ಬಂದು ಬಂಗಾರನ ನಿಮ್ಮ ಮಗ್ಳನ ಕರ್ಕೊಂಡು ಹೊಗ್ತೀನಿ. ಅಲ್ಲಿ ತನ್ಕ ನಿಮ್ಮ ಮಗ್ಳನ ಇಲ್ಲೆ ನಿಮ್ಮ ತವರ ಮನಿಯಾಗ ಇಟ್ಕೊಳ್ರಿ" ಅಂಥ ಅತ್ತೆ ಅಂದು ಮದುವೆಯಾದ ಮೂರೆ ದಿನಕ್ಕೆ ಹಾಕಿದ ಮೂರು ಗಂಟುಗಳಿಗೆ ಬೆಲೆ ಕೊಡದೆ, ಬೆನ್ನಿ ತಿರುಗಿಸಿ ನಡೆದುಬಿಟ್ಟಿದ್ದಳು. ಪಾಪ ಅಪ್ಪ ಎರಡು ಕೊಡ ನೀರು ತುಂಬಲು ಒಂದು ನಲ್ಲಿ ಇರದ ಮನೆಗೆ ಎರಡು ಲಕ್ಷ ಖರ್ಚು ಮಾಡಿ, ಅವರು ಕೇಳಿದಷ್ಟು ವರದಕ್ಷಿಣೆ ಬಂಗಾರವ ಕೊಟ್ಟಿದ್ದ ಅದೊಂದು ತೊಲಿಯ ಬಂಗಾರಕ್ಕಾಗಿ ನನ್ನ ಬಾಳು ಸಂಸಾರದ ಮೊದಲ ಮೆಟ್ಟಿಲಲ್ಲೆ ನಿಂತುಬಿಟ್ಟಿತು. ಬಂದು ಬಳಗದವರಾರು ಕೈ ಚಾಚಿ ಕೊಡಲು ಮುಂದೆ ಬರಲಿಲ್ಲ. ಅವರ ಗುಣವನರಿತಿದ್ದ ಅಪ್ಪನು ಅವರ ಮುಂದೆ ಕೈ ಚಾಚಿರಲಿಲ್ಲ. ನನ್ನಲ್ಲೆ ಕ್ಷಮೆ ಕೇಳಿ, ಕಣ್ಣೀರಿಟ್ಟು ಆ ಒಂದು ತೊಲೆಗಾಗಿ ಹಗಲಿರುಳು ದುಡಿಯಲು ಹತ್ತಿದ. ದಿನಗಳೆದಂತೆ ಕಷ್ಟಗಳು ಹೆಚ್ಚಾಗುತ್ತ ಹೋದಾವು, ಅಮ್ಮನ ಅರೋಗ್ಯ, ತಮ್ಮನ ವಿದ್ಯಾಭ್ಯಾಸ, ಹಬ್ಬ ಹರಿದಿನಗಳಿಗೆ ಬಂದು ಹೋಗುವ ಅಕ್ಕ, ಅವರ ಮಕ್ಕಳಿಗೆ ಬಟ್ಟೆ ಬರೆ ಹಾಗೆ... ನೋಡ ನೋಡುತ್ತಿದ್ದಂತೆಯೆ ನಾಲ್ಕು ವರ್ಷಗಳು ಕಳೆದು ಹೋದವು.
ಹಣವು ಹೊಂದಿತು. ಬಂಗಾರವು ಬಂದಿತು, ಅತ್ತೆಯ ಬಂದಿದ್ದಳು ತನ್ನ ನವವಧುವನ್ನು ಮನೆಯ ತುಂಬಿಸಿಕೊಳ್ಳಲು.
ಹ್ಞೂಂ.. ಇನ್ನೇನು ಉಳಿದಿತ್ತು ನವ ವಧುವಿನಲ್ಲಿ ಮದುವೆಯ ಹೊಸತರಲ್ಲಿ ಕಂಡ ಕನಸುಗಳು ಬೇರಿಲ್ಲದೆ ಕಮರಿದ್ದವು. ಮೈ ಕೈಗೆ ಹಚ್ಚಿದ ಅರಿಷಿಣದ ಬಣ್ಣ ಎಂದೊ ಮಾಸಿ ಹೋಗಿತ್ತು. ಸುರಿಗೆ ನೀರಲ್ಲಿ ಎರೆದ ದೇಹವು ವಿರಹದಿಂದಲೆ ಬಾಡಿ ಹೋಗಿತ್ತು. ಬಾಳಲ್ಲಿ ಈಗ ವಸಂತವೇನೊ ಬಂದಿತ್ತು ಆದರೆ ಅದರ ಚಿಗುರನು ತಿಂದು ಸಂತಸದಿ ಹಾಡುವ ಆಸೆ ಇರಲಿಲ್ಲ.

   ಹೇಗೊ.. ಅಕ್ಕಿ ಬೆಲ್ಲದ ಸೇರನ್ನು ಒದ್ದು ಬಲಗಾಲಿಟ್ಟು ಒಳಗೆ ಬಂದೆ, ಆರತಿ ಶಾಸ್ತ್ರಗಳೊಂದಿಗೆ ಮಧುಮಂಚಕೆ ಹೋದೆ, ಇಷ್ಟು ದಿನಗಳ ಮೇಲಾದರೂ ಬಾಳಲಿ ಕಾಮನಬಿಲ್ಲು ಅರಳುವುದಲ್ಲ ಎಂದವಳಿಗೆ ಆಘಾತ ಕಾದಿತ್ತು. ಇವಳಿಗಿಂತ ಮುಂಚೆಯೆ ಸುರೇಶ ಸುರಪಾನವ ಸೇವಿಸಿ ಸುರಲೋಕದ ಪಯಣದಲ್ಲಿದ್ದ. ನಾಲ್ಕು ವರ್ಷಗಳಲ್ಲಿ ಹೇಗಿದ್ದೀಯಾ ಎಂದು ಕೇಳದವನು ಇಂದಾದರೂ.. ನನ್ನನೆತ್ತಿ ಅಪ್ಪಿ ಮುದ್ದಾಡುವನೇನೊ ಎಂದು ಕಂಡ ಕನಸು... ಕನಸಾಗಿಯೆ ಉಳಿಯಿತು... ನನಗನ್ನಿಸಿದ್ದು ಅಂದು ನಾ ದಾಟಿ ಬಂದದ್ದು ನರಕದ ಬಾಗಿಲೆಂದು. ಬೆಳಗಾಯಿತು.. ದಿನ ದಿನಕ್ಕೆ ಕೆಲಸದ ವೇಳೆಯು ನಿಗದಿಯಾಯಿತು.. ಕೆಲಸ ಮುಗಿದ ಮೇಲೆ ದಿನ ರಾತ್ರಿ ಗಂಡನ ಕಾಯುವ ಪಾಳೆಯಾಯಿತು. ಕುಡಿದ ಮತ್ತಿನಲಿ ಒಪ್ಪಿಯೊ.. ಒಪ್ಪದೇಯೊ.. ದೇಹವನುಂಡದ್ದಾಯಿತು.. ಬೆಳಗು ಕತ್ತಲೂ..ಕತ್ತಲೂ ಬೆಳಗಿನಾಟದೊಳಗೆ ಬಸುರು ಉಸಿರಿತು. ಅತ್ತೆಯು ನನ್ನ ತವರು ಮನೆಗೆ ಹೋಗಿ ಸೀಮಂತ ಕಾರಣಕ್ಕೆ ಹೋಗಿ ಬೇಡಿಕೆಯನ್ನಿಟ್ಟು ಬಂದಿದ್ದಳು. ಬಂದ ದಿನದಿಂದ ಶುರುವಾಗಿತ್ತು ಬೈಗಳುಗಳ ಸುರಿಮಳೆ, ಒಮ್ಮೊಮ್ಮೆ ಹೊಡೆತ
ಹಾಗೊ ಹೀಗೊ ಕುಂಟುತ್ತಾ ದಿನಗಳ ದೂಡುವ ಹೊತ್ತಿಗೆ.. ಈ ಕತ್ತಲಿಗೆ ಅವನ ಕೋಪದ ತಾಪಕ್ಕೆ ಹೊಟ್ಟೆಗೆ ಪೆಟ್ಟು ಬಿದ್ದಿತ್ತು. ಹಾಗೆ ಎಲ್ಲವ ನೆನೆಯುತ್ತಾ.. ನೆನೆಯುತ್ತಾ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ.. ಅತ್ತೆಯು ಬೆಳಿಗ್ಗೆ ಬೈಯುತ್ತಾ ಬಾಗಿಲ ಬಡೆಯುವವರೆಗೂ ಎಚ್ಚರವಾಗಿರಲಿಲ್ಲ. " ಅಯ್ಯೋ.. ಬೇಗ ಬಾರೆ ಮಂಜು ನಿನ್ನ ಕೊಡ ತುಂಬಿತು " ಎಂದು ಎದುರುಮನೆ ಶಾಂತಕ್ಕ ಕೂಗಿದಾಗಲೆ ಕಳೆದ ಘಟನೆಗಳಲಿ ಲೀನವಾಗಿದ್ದ ಮಂಜು ಎಚ್ಚರವಾಗಿ ಮೊದಲೆ ತುಂಬಿದ್ದ ಕೊಡವನ್ನು ಹರಿವಿಗೆ ಸುರಿದು, ಮತ್ತೆ ನೀರನ್ನು ತರಲು ನಲ್ಲಿಯ ಕಡೆಗೆ ನೋವನ್ನು ಅವುಡುಗಚ್ಚುತ್ತಾ ನಡೆದಳು.

   ಎಲ್ಲೆಲ್ಲೂ.. ಓಡಾಟದ ಸಂಭ್ರಮ ಆರತಿಯ ಹಾಡುಗಳು, ಚಿಕ್ಕ ಮಕ್ಕಳ ಕೇಕೆಗಳು, ತವರು ಸೀರೆಯನುಟ್ಟು ಉಡಿತುಂಬ.......  ತುಂಬಿಕೊಂಡು ಗಂಡ ಸುರೇಶನೊಂದಿಗೆ ಸೀಮಂತ ಕಾರಣದ ಕಾರ್ಯಕ್ರಮದಲ್ಲಿ ಕುಳಿತುಕೊಂಡಿದ್ದರು.
ದೂರದೂರಿಂದ ಬಂದಂತಹ ಬೀಗರು, ಮನೆಯವರು, ಓಣಿಯ ಎಲ್ಲ ಮುತ್ತೈದೆಯರು ಆರತಿಯ ಮಾಡಿ ಹುಟ್ಟುವ ಮಗುವು ಬಂಗಾರದಂತಹ ಗುಂಡು ಕಲ್ಲಿನಂಥಹ ಗಂಡಾಗಲೆಂದು ಎಲ್ಲರೂ ಹರಸಿ ಹಾರೈಸುತ್ತಿದ್ದರು. ಮಂಜುಳಾನ ಅಪ್ಪ ಭೀಮಪ್ಪಜ್ಜನು ಅಳಿಯನಿಗೆ ಉಡುಗೊರೆಯಾಗಿ ಅರ್ಧ ತೊಲೆ ಬಂಗಾರದ ಸುತ್ತನ್ನು ಅವನ ನಡು ಬೆರಳಿಗೆ ತೋಡಿಸಿ ಹರಸಿದನು. ಅತ್ತೆ ರತ್ನವ್ವಳ ಮೊಗದಲ್ಲಿ ವಿಜಯದ ನಗು ಕುಣಿಯುತ್ತಿತ್ತು... ದೀಪದಾರತಿಯ ಬೆಳಕಿಗೆ ಸುತ್ತು ಫಳಫಳನೆ ಹೊಳೆಯುತ್ತಿತ್ತು..
ಅಷ್ಟೇಲ್ಲ ಸಂಭ್ರಮ ಸಡಗರಗಳ ನಡುವೆ ಬಾಗಿಲ ಸಂಧಿಯಲಿ ನಿಂತಿದ್ದ ಭೀಮಜ್ಜನ ಕಣ್ಣುಗಳಿಂದ ಜಾರಿದ ಹನಿಗಳನ್ನು ಯಾರು ಗಮನಿಸಿರಲಿಲ್ಲ... ತಾಯಿ ಕಾಯಿಲೆಯಿಂದ ಸಾವಿನಂಚಿನಲ್ಲಿ ಇದ್ದುದ್ದರಿಂದ ಈ ಶುಭ ಕಾರ್ಯಕ್ಕೆ ಬಂದಿರಲಿಲ್ಲ. ಅಬ್ಬಾ..!!!  ಇನ್ನೇನು ಎಲ್ಲಾ ಸೂಸುತ್ರವಾಗಿ ಮುಗಿಯಿತೇನ್ನುವಷ್ಟರಲ್ಲಿಯೆ ಅಡುಗೆ ಬಡಿಸುತ್ತಿದ್ದ ಸ್ಥಳದಿಂದ ಗದ್ದಲದ ಸದ್ದು ಕೇಳಿ ಬಂದಿತ್ತು.

  "ಏನೋ ಇಷ್ಟೇಲ್ಲಾ ಖರ್ಚು ಮಾಡಿ ಊಟಕ್ಕೆ ಉಪ್ಪಿನಕಾಯಿ ತಂದಿಲ್ವಾ, ಥೂ ನಿಮ್ಮ ಜನ್ಮಕ್ಕಿಷ್ಟು" ಅಂತಾ ಗಂಡನ ಮನೆಯ ಕಡೆಯ ಬೀಗರೊಬ್ಬರು ಉಪ್ಪಿನಕಾಯಿಯ ಸಲುವಾಗಿ ಜಗಳವನ್ನು ಪ್ರಾರಂಭಿಸಿಬಿಟ್ಟಿದ್ದರು. ಯಾರು ಎಷ್ಟೇ ಸಮಾಧಾನಪಡಿಸಿದರು ಸಮಾಧಾನವಾಗದೆ, ಅತ್ತೆಯೂ... ಮಧ್ಯಸ್ಥಿಕೆ ವಹಿಸಿ ಇತ್ಯರ್ಥಗೊಳಿಸಬೇಕೆನ್ನುವಷ್ಟರಲ್ಲಿ, " ಏನಮ್ಮ ನಿಮ್ಮ ಮನೆ ಕಾರ್ಯಕ್ಕೆ ಬಂದವರಿಗೆ ಛಲೋ ಮರಿಯಾದಿನ ಕೊಟ್ರಿ ಬಿಡ್ರಿ" ಎಂದು ಬಿಟ್ಟ ಒಬ್ಬ ಆಸಾಮಿ. ಇಷ್ಟು ದಿನದ ಹೊಟ್ಟೆಯೊಳಗಿನ ಎಲ್ಲ ಕೆಸರನ್ನು ಹೊರಹಾಕಿ, ಶುಭಕಾರ್ಯವನ್ನು ಅಶುಭವಾಗಿ ಮಾರ್ಪಾಡಿಸಿಬಿಟ್ಟಳು. ಮಂಜುಳಾಳ ತಂದೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು, ಕವಡೆ ಕಾಸು ಕಿಮ್ಮತ್ತು ಕೊಡದೆ, ಉಟ್ಟ ಬಟ್ಟೆಯಲ್ಲೆ ಎಲ್ಲ ಬಂಧು ಬಾಂಧವರ ಎದುರಿನಲ್ಲಿ ತುಂಬು ಗರ್ಭಿಣಿಯನ್ನು ಹೊರದಬ್ಬಿಬಿಟ್ಟರು. ಹಣೆಬರಹಾನ ಯಾರ ತಪ್ಪಿಸೊಕೆ ಸಾಧ್ಯ ಬನ್ನಿ ಹೋಗೊಣ ದೇವರಿದ್ದಾನೆ ಎನ್ನುತ್ತಾ ಎಲ್ಲ ಹೆಣ್ಣಿನ ಕಡೆಯವರು ಹೊರಟು ನಿಂತರು. ಮಂಜುಳಾ ಇಲ್ಲಿಗೆ ನನ್ನ ಗಂಡನ ಮನೆಯ ಹೊಸ್ತಿಲು ಭಾಗ್ಯ ಮುಗಿಯಿತೇನೊ ಎಂಬಂತೆ ಎರಡು ಕ್ಷಣ ನಿಂತು, ಹೊಟ್ಟೆಯ ಹಿಡಿದುಕೊಂಡು ಅಪ್ಪನ ಕಡೆ ಒಮ್ಮೆ ನೋಡಿ, ಕಣ್ಣೀರನ್ನು ಒರೆಸಿಕೊಂಡು " ಸಾಕಪ್ಪ ಈ ಬಾಳ್ವೆ, ನನ್ನ ಕರುಳಬಳ್ಳಿ ಯಾವುದೆ ಇರಲಿ, ನಾನೆ ದುಡಿದು ಸಂಪಾದಿಸಿ, ಆ ಕಂದನನ್ನು ಹೆಮ್ಮರವಾಗಿ ಬೆಳೆಯುವಂತೆ ನಾನು ಹಗಲಿರುಳು ಕಷ್ಟ ಪಡುವೆ, ನಿ ಚಿಂತಿಸದಿರು, ಸಾಕು ನಡೆಯಿರಿ ಇಲ್ಲಿಂದ ಅವರು ಮಾಡಿದ ಅವಮಾನದಿಂದ ಈಗಲೆ ಸಾಕಷ್ಟು ಹೊಟ್ಟೆ ತುಂಬಿದೆ, ಇನ್ನಷ್ಟು ಹೆಚ್ಚಿನದನ್ನು ನಾವು ಬಯಸಿದರೆ ಅದು ಅಜೀರ್ಣವಾದಿತು". ಎನ್ನುತ್ತಾ ಮಂಜುಳಾ ತನ್ನಪ್ಪನ ಕೈಯನ್ನು ಹಿಡಿದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದಳು.

  "ಅಮ್ಮಾ " ಎಂದು ಜೋರಾಗಿ ಕಿರುಚಿದಳು ಮಂಜುಳಾ, ಆ ಕಿರುಚುವಿಕೆಯ ಹಿಂದೆಯೆ ಮಗುವಿನ ಅಳುವಿನ ಶಬ್ದವು ಅರಳಿತು ಮಧ್ಯರಾತ್ರಿಯಲ್ಲಿ, ಭೀಮಜ್ಜನ ಕಣ್ಣುಗಳಲ್ಲಿ ಕಾಂತಿ, ತಾಯಿ ಮಗು ಆರೋಗ್ಯವಾಗಿರುವುದನ್ನ ವಿಚಾರಿಸಿಕೊಂಡು ಸಮಾಧಾನದ ನಿಟ್ಟುಸಿರನ್ನು ಬಿಟ್ಟನು. ಮಂಜುಳಾಳು ಗಂಡು ಮಗುವಿಗೆ ಜನ್ಮವನಿತ್ತಿದ್ದಳು. ತವರುಮನೆಯಲ್ಲಿ ಸಂತಸಕ್ಕೆ ಪಾರವೆ ಇರಲಿಲ್ಲ, ಮತ್ತೆ ದೀಪಾವಳಿ ಬಂದಿತೆಂದು ಮನೆಯವರೆಲ್ಲರೂ ಸಂಭ್ರಮಿಸಿದರು. ಇತ್ತ ಗಂಡನ ಮನೆಯವರಿಗೆ ಸುದ್ಧಿ ತಿಳಿದ ತಕ್ಷಣವೆ ಅತ್ತೆ ರತ್ನವ್ವಳಿಗೆ ಬೆಟ್ಟದಷ್ಟು ಸಂತೋಷದೊಂದಿಗೆ, ಆದ ಘಟನೆಯ ನೆನೆದು ಹಲುಬತೊಡಗೊದಳು. ಹೇಗೊ ಮತ್ತೆ ಊರ ಜನರ ಪಂಚಾಯ್ತಿ ಸೇರಿಸಿ, ಭೀಮಜ್ಜನ ಮನೆ ಬಾಗಿಲವರೆಗೂ ಬಂದು, ಮೊಮ್ಮಗನನ್ನು ಎತ್ತಿ ಸಂತೋಷಿಸಿದಳು, ಬಹಳ ವಿಜೃಂಭಣೆಯಾಗಿ ತೊಟ್ಟಿಲ ಕಾರ್ಯಕ್ರಮವು ನೇರವೇರಿತು.
ಹಳೆಯ ನೆನಪುಗಳ ಎಲೆಗಳುದಿರಿ ಹೊಸ ಕನಸುಗಳ ಚಿಗುರುಗಳು ಚಿಗುರೊಡೆಯುವುವೇನೊ.. ಬಾಳಲ್ಲಿ ಎಂದುಕೊಂಡಿದ್ದ ಮಂಜುಳಾಳ ಮನದಲ್ಲಿ ಇನ್ನೂ ದುಗುಡುವು ಮನೆ ಮಾಡಿತ್ತು. ಗಂಡನು ಅಷ್ಟಕ್ಕಷ್ಟೇ, ಮಾವ ಲೆಕ್ಕಕ್ಕಿಲ್ಲ,‌ ಇನ್ನೂ ತಾಸು ತಾಸಿಗೂ ಬುದ್ದಿ ಬದಲಾಯಿಸುವ ಅತ್ತೆಯ ನೆನಸಿಕೊಂಡರೆ ಮೈಯಲ್ಲೆಲ್ಲಾ ನಡುಕ, ಯಾವ ಹೊತ್ತಿನಲಿ ಯಾರ ಮಾತ ಕೇಳಿ ನನ್ನನ್ನು ಹೊರಗೆ ದೂಡಿದರೆ !!! ಏನು ಮಾಡುವುದು? ಎಂಬ ಆತಂಕವೊಂದು ಅನುದಿನವು ಮಂಜುಳಾಳನ್ನು ಕಾಡುತ್ತಿತ್ತು. ಬೇಡ... ಬೇಡ ಇಷ್ಟು ದಿನ ಅವರೊಂದಿಗಿದ್ದು ಅವರು ಕೊಟ್ಟ ನೋವನ್ನು ಅನುಭವಿಸಿದ್ದು ಸಾಕು. ಮಡಿಲಲ್ಲಿ ಬೆಂಕಿಯಂತ ಗಂಡು ಮಗನಿದ್ದಾನೆ, ಇವನಿಗಿಂದು ನಾನಾಸರೆಯಾದರೆ, ನಾಳೆ ಇವನು ನನಗಾಸರೆಯಾಗಲಾರನೇನು? ಇದೊಂದೆ ನನ್ನ ಕನಸು, ಈ ಕನಸನ್ನು ಪೂರ್ಣಗೊಳಿಸಲು ನಾನು ಅಣಿಗೊಳ್ಳಬೇಕಿದೆ, ನಾ ಕಂಡ ಕನಸು ಕಾಮನಬಿಲ್ಲಾಗದೆ, ಸದಾ ರವಿಯ ಕಿರಣದಂತೆ ನಳನಳಿಸುತಿರಬೇಕು. ಎಂದು ಕಣ್ಮುಚ್ಚಿ ಮಗುವಿಗೆ ಎದೆಹಾಲನ್ನು ಕುಡಿಸುತ್ತಾ ಕುಳಿತಿದ್ದ ಮಂಜುಳಾಗೆ ಮಗುವು, ಕೆಮ್ಮಿ, ಕೆಮ್ಮಿ ಕುಡಿದ ಹಾಲನ್ನೆಲ್ಲ ಕಕ್ಕಿಬಿಟ್ಟಿತು, ಮುಂಜಾನೆ ಸ್ವಲ್ಪ ಹುಳಿ ಜಾಸ್ತಿ ಉಂಡಿದ್ದಕ್ಕಾಗಿ ಅವನು ಈ ಥರ ಕಕ್ಕಿರಬೇಕೆಂದು ಮಂಜುಳಾ ಸುಮ್ಮನಾದಳು. ಸಂಜೆಯವರೆಗೂ ಇದೆ ಪುನರಾವರ್ತನೆಯಾಗತೊಡಗಿತು. ರಾತ್ರಿ ವೇಳೆಗೆ ವ್ಯಧ್ಯರ ಹತ್ತಿರ ಹೋಗಿ ಔಷದಿಯ ಬರೆಸಿಕೊಂಡು ಬಂದಳು. ದಿನದಿಂದ ದಿನಕ್ಕೆ ಖಾಯಿಲೆ ಹೆಚ್ಚಾಗುತ್ತಲೆ ಹೋಯಿತು, ಗಂಡನ ಮನೆಗೆ ತಿಳಿಸಿದರೆ ಅವರ್ಯಾರು ಹೆಚ್ಚಿಗೆ ತಲೆಯನ್ನು ಕೆಡಸಿಕೊಳ್ಳಲಿಲ್ಲ, ಮಂಜುಳಾ ಮತ್ತು ಭೀಮಜ್ಜ ಇಬ್ಬರೂ ಕೂಸನ್ನು ಕರೆದುಕೊಂಡು ಇಲಕಲ್ ನ ದೊಡ್ಡ ದವಾಖಾನೆಗೆ ತೋರಿಸಿಕೊಂಡು ಬರಲು ಹೊರಟರು. ವಿಧಿ ದಾರಿ ಮಧ್ಯೆದಲ್ಲಿ ಕಾದು ಕುಳಿತಿದ್ದು ಮಂಜುಳಾಳ ಮಗನ ಪ್ರಾಣಹರಣವನ್ನು ಮಾಡಿಬಿಟ್ಟಿತು. ನಡುದಾರಿಯಲ್ಲೆ ಇಳಿದು, ಅಲ್ಲೆ ಪಕ್ಕದಲ್ಲೆ ಹೊಲದ ಬದುವಿಗೆ ಇದ್ದ ಬೇವಿನ ಮರದ ನೆರಳಿಗೆ ಕುಳಿತು ಮಡಿಲಲ್ಲಿ ಮಗುವನ್ನು ಮಲಗಿಸಿಕೊಂಡು, ಮುಳುಗುತ್ತಿರುವ ಸೂರ್ಯನನ್ನೆ ದಿಟ್ಟಿಸುತ್ತಾ ಕುಳಿತಳು, ಅವಳ ಮನದಲ್ಲಿ "ದೇವರು ನನಗೆ ಏತಕೆ ಬೇರುಗಳಿಲ್ಲ ಕನಸುಗಳನ್ನು ಕಟ್ಟಿಕೊಟ್ಟನು". ಎಂಬ ಪ್ರಶ್ನೆಯು ಕಾಡುತ್ತಿದ್ದರೆ, ಇದ್ದ ಒಂದು ಕನಸು ಕಮರಿಹೋಗಿದ್ದನ್ನು ಕಂಡು, ನಾಳೆಗೆ ಮೂಡುವ ಸೂರ್ಯನ ಭರವಸೆಯನ್ನು ಹೊಂದದೆ ಭೀಮಜ್ಜ ಮಗಳ ರಟ್ಟೆಯನ್ನು ಹಿಡಿದೆಬ್ಬಿಸಿ, ಮರಳಿ ತಮ್ಮೂರಿಗೆ ಕಡೆಗೆ ಭಾರವಾದ ಹೆಜ್ಜೆಗಳ ಹಾಕುತ್ತ ನಡೆದರು.

ಕನ್ನಡಿಯೊಳಗಿನ ಕಗ್ಗಂಟು ತಾಯಿಯ ಕೈ ತುತ್ತು ಲೇಖನ

ಅಬ್ಬಾ..!!! ಅದೆಂತಹ ಸುಂದರ ಸಂಜೆ, ರವಿಯು ತನ್ನ ದಿನದ ಕೆಲಸವ ಮುಗಿಸಿಕೊಂಡು ಪಶ್ಚಿಮಾತ್ಯದೊಳು ಮುಳುಗುವ ಹೊತ್ತು. ಬೆಳಿಗ್ಗೆಯಿಂದಲೂ ಬಿಸಿಲಲಿ ಸುತ್ತಾಡಿ ಮೈಯೆಲ್ಲ ಬೆವರಿನಿಂದ ತೊಯ್ದು ಬಟ್ಟೆ ಮೈಗೆ ಅಂಟಿಕೊಂಡು ಅಂಟಂಟಾಗಿತ್ತು. ಮೂಡಣದ ಸಣ್ಣಗೆ ತಣ್ಣಗೆ ಬೀಸತೊಡಗಿದ ಗಾಳಿಯು, ನನ್ನನು ಎದೆತುಂಬ ಹಾಲುಣಿಸಿ ತೊಟ್ಟಿಲಲಿ ಮಗುವನು ಹಾಕಿ ಜೋಗುಳವ ಹಾಡುತ್ತ ಹಸುಕಂದನನ್ನು ಮಲಗಿಸುವಂತಹ ಅನುಭವವನ್ನು ನೀಡಿತು, ನಾನು ಮಿತ್ರ ಚಂದ್ರು ರಾಜಸ್ಥಾನ ವಿಶೇಷ ಪಾನಿಪುರಿಯನ್ನು ತಿನ್ನಲು ಒತ್ತು ಅಂಗಡಿ ಬಳಿ ಬಂದು ನಿಂತಿದ್ದೇವು. ಹಿಂದೆಯೆ ಆಲದ ಮರ. ಆ ಮರದ ರೆಂಬೆಗಳ ತುದಿಗಳಲಿ ಆಗ ತಾನೆ ಗೂಡು ಸೇರುತ್ತಿದ್ದ ಗಿಳಿಗಳ ಚಿಲಿಪಿಲಿ ಹಿಂಡು, ಆ ಮರದ ಕೆಳಗೆ ಚಿಕ್ಕ ಉದ್ಯಾನವನ, ಕೆಲವು ಮಕ್ಕಳೊಂದಿಗೆ ತಾಯಂದಿರು ಅವರೊಡಗೂಡಿ ತಾವು ಚಿಕ್ಕ ಮಕ್ಕಳ ಹಾಗೆ ಆಡಿ ಓಡಾಡಿ ತಮ್ಮ ದಿನದ ಕೆಲಸದ ಒತ್ತಡವನ್ನು ಕಳೆದುಕೊಳ್ಳುತ್ತಿರುವುದನ್ನು ಅವರ ಮೊಗದಲ್ಲಿ ಕಾಣಬಹುದಾಗಿತ್ತು.. ಹಾಗೆ ನೋಡ್ತಾ ನೋಡ್ತಾನೆ ಅಂಗಡಿಯವನು ಎರಡು ಬಿಸಿಬಿಸಿ ಕಚೋರಿಯನ್ನು ಮಾಡಿಕೊಟ್ಟನು.. ಅವನು ಅದಕ್ಕೆ ಹಾಕಿದ ಗರಂ ಮಸಾಲೆಯ ವಾಸನೆಗೆ ಹೊಟ್ಟೆಯೊಳಗೆ ಮತ್ತಷ್ಟು ಹಸಿವಿನ ಕಾವು ಹೆಚ್ಚಾಯಿತು ಇನ್ನೇನು ಒಂದು ತುತ್ತನ್ನು ಬಾಯಲ್ಲಿ ಇಟ್ಕೊಳ್ಳಬೇಕು ಅಷ್ಟರಲ್ಲಿ ಒಂದು ಮಗು ಮಮ್ಮಿ...ಮಮ್ಮಿ ... ಆಯ್ ವಾಂಟ್ ನೂಡಲ್ಸ.. ಎಂದು ರಚ್ಚೆ ಹಿಡಿಯಿತು. ಆ ತಾಯಿಯು ಒಂದು ಪ್ಲೇಟ್ ನೂಡಲ್ಸನ್ನು ಹೇಳಿದಳು. ನನಗೆ ಏಕೊ ಏನೊ ಆ ಕ್ಷಣ ಆ ಕಚೋರಿಯನ್ನು ತಿನ್ನಬೇಕೆಂಬ ಮನಸ್ಸಾಗಲಿಲ್ಲ. ಮನಸ್ಸು ನನ್ನನು ನನ್ನ ಬಾಲ್ಯದ ದಿನಗಳಿಗೆ ಕರೆದೊಯ್ಯಿತು. ಮತ್ತೆ.. ಮತ್ತೆ ನನ್ನವ್ವ ನನಗೆ ನೀಡುತ್ತಿದ್ದ ಕೈ ರುಚಿಯ ಸವಿಯ ನೆನಪಾಗಿಸಿತು.

  ನನಗೆ ತಿಳುವಳಿಕೆ ಬಂದಾಗಿನಿಂದಲೂ ನಮ್ಮವ್ವ ಹೇಳುತ್ತಿದ್ದಳು ನಾನು ಹಠಮಾರಿಯಂತೆ, ಕೇಳಿದ್ದನ್ನು, ಕಂಡದ್ದನ್ನು ಕೊಡಿಸುವವರೆಗೂ ಬೀಡುತ್ತಿರಲಿಲ್ಲವಂತೆ. ನನಗಿನ್ನು ಚೆನ್ನಾಗಿ ನೆನಪಿದೆ. ನಾನು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಶಾಲೆಗೆ ಹೋಗಲು ಬಹಳಷ್ಟು ಹಠವನ್ನು ಮಾಡುತ್ತಿದ್ದೆ, ನಮ್ಮ ಚಹಾದಂಗಡಿಯ ಆಳುಗಳು ನನ್ನನ್ನು ಕೈ ಕಾಲು ಕಟ್ಟಿ ಶಾಲೆಗೆ ಹಾಕಿ ಬರುತ್ತಿದ್ದರು. ಶಾಲೆಯೊಳಗೆ ಹೋದ ಮೇಲೆ ರಾಯಬಾಗಿ ಗುರುಗಳ ಬೆತ್ತದ ರುಚಿನು ಸವಿಬೇಕಾಗಿತ್ತು, ವಿಧಿಯಿಲ್ದೆ ಮಧ್ಯಾಹ್ನದವರೆಗೂ ಒಂದು ಮೂಲೆಯಲ್ಲಿ ಕುಳಿತಿರುತ್ತಿದ್ದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ
ಓಡೋಡಿ ಮನೆಗೆ ಬರುತ್ತಿದ್ದೆ. ನಮ್ಮವ್ವನಿಗೆ ಗೊತ್ತು ನನಗೆ ಯಾವ ರೀತಿಯಲ್ಲಿ ಕೈ ತುತ್ತನ್ನು ಉಣ್ಣಿಸಬೇಕೆಂದು. ಆ ರುಚಿಗಾಗಿಯೆ ಅಷ್ಟು ದೂರದ ಶಾಲೆಯಿಂದ ಓಡೋಡಿ ಬರುತ್ತಿದ್ದೆ. ಅವ್ವ ಮಧ್ಯಾಹ್ನಕ್ಕೆ ಬಿಸಿಬಿಸಿ ಅನ್ನ, ಆ ಅನ್ನದ ಮೇಲೆ ಬ್ಯಾಳಿ ಸಾರು, ಕುಟ್ಟಿದ ಗುರಳ್ಳ ಚಟ್ನಿ, ಒಂದು ಚಮಚೆ ತುಪ್ಪ, ಅಪ್ಪ ಶೇಂಗಾ ಎಣ್ಣೆಯಲ್ಲಿ ಕರೆದ ಮಿರ್ಚಿ, ಎಲ್ಲವನ್ನು ಕಲಿಸಿ ಒಂದು ತುತ್ತನ್ನು ನನ್ನ ಬಾಯಿಗೆ ಇಟ್ಟು, ಮಿರ್ಚಿ ಬಜಿಯನ್ನು ತಿನ್ನಿಸುತ್ತಿದ್ದರೆ..... ಆಹಾ...!!! ಹಾ...! ನೆನೆದಾಗಲೆಲ್ಲ  ಬಾಯ್ತುಂಬ ನೀರು ಬರುತ್ತದೆ. ಅಷ್ಟುಂಡು ನೀರನ್ನು ಕುಡಿದು ಶಾಲೆಗೆ ಹೋಗುತ್ತಿದ್ದೆ, ಒಂದು ಬಟ್ಟಲವನ್ನು ತೆಗೆದುಕೊಂಡು ಈಗೀನ ಹಾಗೆ ಪ್ಲಾಸ್ಟಿಕ್ ಹಾಳೆಗಳ ಕಾಟವಿರಲಿಲ್ಲ. ಸಂಜೆ ನಾಲ್ಕಕ್ಕೆ ಸರಿಯಾಗಿ ಗೋಧಿ ಉಪ್ಪಿಟ್ಟು ಬರುತ್ತಿತ್ತು. ಎಲ್ಲ ಗೆಳೆಯರೊಂದಿಗೆ ಸಾಲಿನಲ್ಲಿ ನಿಂತು, ಬಟ್ಟಲಿನಲ್ಲಿ ಉಪ್ಪಿಟ್ಟನ್ನು ಹಾಕಿಸಿಕೊಂಡು ಮನೆಗೆ ಓಡೋಡಿ ಬರುತ್ತಿದ್ದೆ. ಆ ಉಪ್ಪಿಟ್ಟಾದರೂ ಎಷ್ಟು ರುಚಿಯಿರುತ್ತಿತ್ತು, ಉಳ್ಳಾಗಡ್ಡಿ, ಎಣ್ಣೆ, ಹಸಿ ಮೆಣಸಿನಕಾಯಿ ಇವನ್ನಷ್ಟೆ ಹಾಕಿ ಮಾಡಿರುತ್ತಿದ್ದರು, ಮನೆಗೆ ತಂದ ಮೇಲೆ, ಅದಕ್ಕೆ ಅವ್ವ, ಕುಟ್ಟಿದ ಒಣಮೆಣಸಿನಕಾಯಿ ಖಾರ ಕಲಿಸಿ, ಅದರ ಜೊತೆಗೆ ಚೂರು ಹಾಲಿನ ಕೆನೆಯನ್ನು ಹಾಕಿ, ಕಲಿಸಿ ಬಾಯಲ್ಲಿ ಒಂದು ತುತ್ತನು ಇಡುತ್ತಿದ್ದರೆ, ಈ ಸಂಜೆಗೆ ಈ ಹೊತ್ತು ತಿನ್ನಲು ಕುಳಿತಿರುವ, ಕೇಳುತ್ತಿರುವ ಈ ಆಹಾರವನ್ನು ನೋಡಿದರೆ ಅವೆಲ್ಲದರ ಮುಂದೆ ಸಪ್ಪೆ ಎನಿಸತೊಡಗಿತು ನನಗೆ.

ಇನ್ನೊಂದು ಘಟನೆ ನೆನಪಾಯಿತು ನನಗೆ, ಅದು ಬಿ.ಎ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಮನೆಯವರೆಲ್ಲರೂ ಸೇರಿಕೊಂಡು ದಕ್ಷಿಣ ಕನ್ನಡದತ್ತ ಪ್ರಯಾಣವನ್ನು ಬೆಳಸಿದ್ದೇವು. ಮೈಸೂರನ್ನು ನೋಡಿಕೊಂಡು ಶ್ರೀರಂಗಪಟ್ಟಣಕ್ಕೆ ಹೋಗುವಾಗ ಬಹಳಷ್ಟು ಕತ್ತಲಾಗಿಬಿಟ್ಟಿತ್ತು, ಎಲ್ಲರ ಹೊಟ್ಟೆಯು ಹಸಿದಿತ್ತು, ಗಾಡಿಯಲ್ಲಿ‌ ಅಡುಗೆ ಮಾಡಿಕೊಳ್ಳುವ ಎಲ್ಲ ಸಾಮಾನುಗಳಿದ್ದರೂ....ಹೊತ್ತಾಗಿಬಿಟ್ಟಿತ್ತು, ದಾರಿ ಮಧ್ಯದಲ್ಲಿ ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನವನ್ನು ನಿಲ್ಲಿಸಿ, ಊಟದ ವ್ಯವಸ್ಥೆಗಾಗಿ ಹುಡುಕಾಡಿದವು ಅಷ್ಟೊಂದು ಹೊತ್ತಿನಲ್ಲಿ ಏನು ಸಿಗಲಿಲ್ಲ, ಒಂದು ಅಂಗಡಿಯಲ್ಲಿ ಬಿಸಿಬಿಸಿ ಮಿರ್ಚಿ ಬಜಿಯನ್ನು ಹಾಕುತ್ತಿದ್ದರು, ಎಲ್ಲರಿಗೂ ಎರಡೆರಡು ತಿನ್ನಲು ಬರುವಷ್ಟು ಬಜಿಯನ್ನು ಅಪ್ಪನು ತಂದುಕೊಟ್ಟನು.
ಮಧ್ಯಾಹ್ನ ಮೈಸೂರ ಅರಮನೆಯ ಹೊರಾಂಗಣದಲ್ಲಿ ಮಾಡಿದ್ದ ಅನ್ನವು ಉಳಿದಿತ್ತು. ನಿಲ್ದಾಣದ ಬಯಲಿನಲ್ಲಿ ತಾಡಪಾಲನ್ನು ಹಾಸಿದೆವು, ದಿನವಿಡಿ ಗಾಡಿಯಲ್ಲಿ ಕುಳಿತು ಮೈಯಲ್ಲ ಬೇವರಿನಿಂದ ಸೆಕ್ಕಿಟ್ಟು ಹೋಗಿತ್ತು, ತಣ್ಣನೆ ಇರುಳಗಾಳಿ ತನುವನೆಲ್ಲವನು ತಣಿಸಿತ್ತು, ಸುತ್ತಮುತ್ತಲೆಲ್ಲ ಚುಕ್ಕಿಗಳ ಮಂದ ಬೆಳಕು ಚೆಲ್ಲಿತ್ತು, ಹೊಟ್ಟೆಯು ಬಿಸಿ ಮಿರ್ಚಿಯ ವಾಸನೆಗಾಗಲೆ ಚುರ್ರಗುಟ್ಟಿತ್ತು, ನಮ್ಮ ದುರಾದೃಷ್ಟಕ್ಕೆ ಆ ಮಧ್ಯಾಹ್ನದ ಅನ್ನದೊಂದಿಗೆ ಚಿಪಿ ತಿನ್ನಲು ಒಂದು ಹೋಳು ಉಪ್ಪಿನಕಾಯಿಯು ಉಳಿದಿರಲಿಲ್ಲ, ಊರಿಂದ ಕಟ್ಟಿಕೊಂಡು ಬಂದಿದ್ದ ಕಡ್ಲಿಪುಡಿಯೊಂದೆ ಉಳಿದಿತ್ತು. ಅವ್ವ ಅದನ್ನೆ ಎಲ್ಲರ ತಾಟಿಗೆ ಅನ್ನವ ಬಡಿಸಿ ಮೇಲಿಷ್ಟು ಕಡ್ಲಿಪುಡಿಯನ್ನು ಹಾಕಿಕೊಟ್ಟಳು, ನನಗಾವಗಲೇ ಹಿರಿಯರ ಒಂದು ಮಾತು ನೆನಪಿಗೆ ಬಂದಿತ್ತು "ಹೊಟ್ಟೆ ಹಸಿದು ಸಾಯೋ ಮುಂದ ಹಳಸಿದ್ದು ಮೃಷ್ಟಾನ್ನವಾಗುತ್ತದೆ". ಎಂಬುದು ಹಾಗೆ ಅನ್ನ ಚಟ್ನಿ ಎರಡನ್ನು ಕಲಿಸಿಕೊಂಡು ಒಂದು ತುತ್ತು ಬಾಯಿಗಿಟ್ಟುಕೊಂಡು ಮಿರ್ಚಿಯನ್ನು ಕಡೆದು ತಿಂದರೆ... ಹ್ಮ....ಹ್ಮ...‌ಹ್ಮ... ನನಗೀಗಲೂ ಬಾಯಲ್ಲಿ ನೀರು ಸುರಿಯುತ್ತದೆ. ಇಂತಹ ಅನೇಕ ಘಟನೆಗಳು ನನ್ನ ನೆನಪಿನ ಬುತ್ತಿಯಲ್ಲಿ ಭದ್ರವಾಗಿವೆ, ಈಗ ಶ್ರಾವಣ ಬಂತೆಂದರೆ ಮನೆಯಲ್ಲಿ ಕಡ್ಲಿ ಹಿಟ್ಟಿನ ಕರದಂಟನ್ನು ಮಾಡುತ್ತಾರೆ, ನಾನು ಚಿಕ್ಕವನಿದ್ದಾಗ ಅರ್ಧ ಕೆ.ಜಿ.ಯಷ್ಟು ತುಪ್ಪವನ್ನು ನಾನೊಬ್ಬನೆ ವಾರದಲ್ಲಿ ತಿಂದು ಮುಗಿಸುತ್ತಿದೆ, ಅದ್ಹೇಗೆಂದರೆ ಹೇಳಿದರೆ ನಿಮ್ಮ ಬಾಯಲ್ಲೂ ನೀರು ಬಾರದೆ ಇರದು. ಒಂದು ಕರದಂಟಿನ ಬಿಲ್ಲೆ ಮೇಲೆ ಅದರ ಮೇಲ್ಮೈ ತುಂಬಾ ತುಪ್ಪವ
ಸವರಿಕೊಂಡು ಅದರ ಮೇಲೆ ಮತ್ತೊಂದು ಬಿಲ್ಲೆಯನಿಟ್ಟು ಅವ್ವ ಕೊಡುತ್ತಿದ್ದಳು ಅದನ್ನು ತಿನ್ನುತ್ತಿದ್ದರೆ ಎದುರಿಗಿರುವವರೆಲ್ಲರೂ ಹೊಟ್ಟೆಯುರಿದುಕೊಳ್ಳಬೇಕು ಅಷ್ಟು ಮಜಾ ಬರುತ್ತಿತ್ತು, ಇದರ ಹಾಗೇನೆ ನಮ್ಮ ಕಡೆ ಎಳ್ಳ ಅಮವಾಸೆಗೆ ಎಳ್ಳು ಹೋಳಿಗೆಯಂತ ಮಾಡುತ್ತಾರೆ, ಅದನ್ನು ಇದೇ ತರನಾಗಿ ಅವ್ವ ತಯಾರು ಮಾಡಿ ಕೊಡುತ್ತಿದ್ದಳು. ಉಫ್ !!!! ... ಎಷ್ಟೊಂದು ರುಚಿಗಳು ನೆನೆದಾಗಲೆಲ್ಲ ಕಣ್ಣಾಲಿಗಳು ತೇವವಾಗದೆ ಇರದು.

   ಈಗೀನ ಮಕ್ಕಳ ಬಾಲ್ಯವನ್ನು ನೆನೆದರೆ, ನಾವೆ ಎಲ್ಲೊ ಅವರ ಬಾಲ್ಯವನ್ನು ಕೇವಲ ಹಣಗಳಿಕೆಯ ಯಂತ್ರಗಳನ್ನಾಗಿ ರೂಪಿಸುವಲ್ಲಿ ಕೈ ತೊಳೆದುಕೊಂಡು ಬೆನ್ನು ಹತ್ತಿಬಿಟ್ಟಿರುವೇವೇನೊ?

ತೀರಾ ಇತ್ತೀಚೆಗಷ್ಟೇ ನಮ್ಮನ್ನಗಲಿದ ಸೋದರತ್ತೆ ಹನುಮಸಾಗರದವರು ಅವರು, ನಾನು ಊರಿಗೆ ಹೋದಾಗಲೆಲ್ಲ ಒಣಬ್ಯಾಳಿ ಪಲ್ಯೆಯನ್ನು ಎರಡು ರೊಟ್ಟೆಯಲ್ಲಿ ಹಚ್ಚಿಕೊಂಡು ಎಡಗೈಯಲ್ಲಿ ಹಿಡಿದುಕೊಂಡು, ಬಲಗೈಯಲ್ಲಿ ಒಂದು ಚರಿಗೆ ಮಜ್ಜಿಗೆಯನ್ನು ತೆಗೆದುಕೊಂಡು "ಅಯ್ಯಯ್ಯ ನಮ್ಮ ಗಡಾದ ಶಾಣಪ್ಪ ಬಂದಾನಂತ, ಸರೀರಿಲ್ಲೆ ಎಲ್ಲ ಅದಾನ ಅಂವಾ, ಅವ್ಗ ನಾಷ್ಟಾಗೀಷ್ಟಾ ಮಾಡಬ್ಯಾಡ್ರಿ, ಅವಂಗ ಹೊಟ್ಟಿ ತುಂಬಂಗಿಲ್ಲ." ಎನ್ನುತ್ತಾ ಓಣಿಗೆಲ್ಲಾ ಕೇಳುವಂತೆ ನನ್ನಕ್ಕನ ಪಕ್ಕದ ಮನೆಯಿಂದ ಮಾತನಾಡುತ್ತ ಬರುತ್ತಿದ್ದಳು, ನನ್ನ ಬಳಿ ಬಂದು ಆ ಎರಡು ರೊಟ್ಟಿಯ ಊಟ ಹೊಟ್ಟೆತುಂಬಾ ಮಜ್ಜಿಗೆಯ ಕುಡಿಸಿದ ಮೇಲೆಯೆ ಅತ್ತೆಯು ಮೇಲೆಳುತ್ತಿದ್ದಳು. ಇಂದು ಅತ್ತೆಯಿಲ್ಲ, ಮೊನ್ನೆ ಆ ಊರಿಗೆ ಹೋದಾಗ ಓಣಿಯ ಬೀದಿ ಬೀಕೊ ಎನ್ನಿಸುತ್ತಿತ್ತು, ಅಕ್ಕನ ಮನೆಯಲ್ಲಿ ಹೋಗಿ ಕುಳಿತು ನೀರು ಕುಡಿದು ಕುಳಿತೆ, ಅಕ್ಕ ಕೇಳಿದಳು ನಾಷ್ಟಾ ಏನಾರ ಮಾಡ್ಲೇನು ? ಅಂತಾ, ತಕ್ಷಣ ನನ್ನ ಬಾಯಿಂದ ಬಂದದ್ದು "ಅತ್ತೆ ರೊಟ್ಟಿ ತರ್ತಾಳೀರು"ಅಂತಾ, ಕ್ಷಣ ಇಬ್ಬರು ಮೌನವಾಗಿಬಿಟ್ಟೆವು ಕಾರಣ ಅತ್ತೆ ಮೊನ್ನೆಯಷ್ಟೆ ಬಾರದೂರಿಗೆ ಹೋಗಿದ್ದರು, ಅವಳು ತೋರಿಸುತ್ತಿದ್ದ ಕೈ ತುತ್ತಿನ ರುಚಿ ಮರೆಯದಂತೆ ಮಾಡಿತ್ತು.

  " ಶರಣಪ್ಪಣ್ಣಾರ ಬೇಗ ತಿನ್ರೀ ಆರಿ ಹೊಕ್ಕೈತದು" ಎಂದು ಮಿತ್ರ ಚಂದ್ರು ಎಚ್ಚರಿಸಿದಾಗಲೆ ನೆನಪಿನ ಸುಳಿಯಿಂದ ಹೊರಬಂದದ್ದು. ಏಕೋ ಏನೋ ಕಚೋರಿಯನ್ನು ತಿನ್ನಲು ಮನಸ್ಸಾಗಲಿಲ್ಲ ಪ್ಲೇಟಿನಲ್ಲಿದ್ದ ಕಚೋರಿಯು ಆರಿ ತಣ್ಣಗೆ ಮಲಗಿತ್ತು ಆದರೆ ಮನದೊಳಗಿನ ಹಳೆಯ ನೆನಪುಗಳ ವಲೆಗೆ
ಕಿಡಿಯನ್ನು ಹೊತ್ತಿಸಿತ್ತು, ಅದನ್ನು ಅಲ್ಲಿಯೆ ಬಿಟ್ಟು ಮಿತ್ರನಿಗೆ ವಿದಾಯ ಹೇಳಿ ಹಸಿದ ಹೊಟ್ಟೆಯಲ್ಲೆ ಊರಿನ ಬಸ್ಸನ್ನು ಹತ್ತಿದೆ. ಮನೆಯಲ್ಲಿ ಅವ್ವನ ಕೈಯಿಂದಲೆ ಏನಾದರೂ ಮಾಡಿಸಿಕೊಂಡು ಹೊಟ್ಟೆ ತುಂಬಾ ಉಣ್ಣಬೇಕೆಂದು ಸೀಟಿನಲ್ಲಿ ಕುಳಿತು ಕಣ್ಮುಚ್ಚಿ ಕುಳಿತುಕೊಂಡೇನು ಮತ್ತೆ ಹಳೆಯ ನೆನಪುಗಳ ಹೊಳೆಯಲ್ಲಿ ಈಜಲು