Tuesday, November 27, 2018

ತಮ್ಮಾ

ಕೊಡ್ತಾರಂತಂದು ಹೆಗ್ಲಮ್ಯಾಲ
ಹೊತ್ಗೊಂಡ ಬಂದ್ಬಿಡೋದೇನೊ ತಮ್ಮಾ..
ಅದನ್ನ ಪಡೆಯೊ ಯೋಗ್ಯತೆನು
ನಿನ್ಹತ್ರ ಇರ್ಬೇಕಲ್ಲೊ ತಿಮ್ಮಾ...

ಪುಗ್ಸಟ್ಟೆ ಹೆಣ್ಣ ಸಿಗತೈತನಕೊಂಡು
ಮನಿಗೆ ಹೊತ್ಗೊಂಡ ಬಂದ್ಬಿಡೋದೇನೊ
ತಮ್ಮಾ...
ಜಾನ್ಕಿ...ಪಾಂಚಾಲಿ ಮೆಟ್ಟ ನೆಲ ಇದು...
ಸುಟ್ಟು ಬೂದಿಯಾಗಿ ಹೋದಿಯೊ ತಿಮ್ಮ

ಬೆವ್ರ ಹರ್ಸಿ ಬೆಳ್ಸಿದ ಬೆಲೆ ನಿನಗೇನ
ಗೊತ್ತೈತೊ ತಮ್ಮಾ...
ಅಪ್ಪಾ ಮಾಡಿಟ್ಟ ಹಾದರ ಹಣ್ದಾಗ
ಮಜಾ ಮಾಡೋರಾ ಭಾಳ ಮಂದಿ
ಅದಾರ ನೋಡ್ತಿಮ್ಮಾ...

ಮೂರು ಬಿಟ್ಟೊರು ದೇಶಾನ ಆಳಾಕ
ಹೊಂಟಾರೊ ತಮ್ಮಾ...
ಮೂರು ಮುಚ್ಕೊಂಡು ಮನಿಯಾಗ ಕುಂತೊರು
ಸಿಡಿದೆದ್ರ... ಇವ್ರ ಕೋಪದ ತಾಪಕ್ಕ ಸಿಕ್ಕ
ಸುಟ್ಟ ಬೂದಿಯಾಗ್ಹೊಕ್ಕಾರೊ ತಿಮ್ಮಾ..

ತಮ್ಮಾ ೨

ಜನಾ ಅದಾರು.. ನನ್ಹಿಂದ ಜನಾ
ಅದಾರು  ಅಂದ್ಕೊಂಡ ಹುಚ್ಚ ಕುದ್ರಿ
ಹಂಗಾ ಹಾರಾಡಬೇಡ್ಲೆ ತಮ್ಮಾ...
ಸತ್ತಾಗ, ಹೊತ್ಗಂಡ ಹೋಗೊ ಮುಂದ
ಹೊರು ಹೆಗ್ಲಗಳು ಸೈತ ಬ್ಯಾರೆ ಬ್ಯಾರೆ ಆಕ್ಕಿರ್ತಾವ್ಲೆ ತಿಮ್ಮ

ನಾ...ಕಟ್ಟಿದ್ದು... ನಾ ಗಳ್ಸಿದ್ದಂತಂದು
ಎದೆಯುಬ್ಬಿಸಿ ಬಿಗಬ್ಯಾಡ್ಲೆ ತಮ್ಮಾ..
ಮಣ್ಣಿಂದ ಹುಟ್ಟಿದ್ದು ಹೊಳ್ಳಿ ಮಣ್ಣಾ
ಸೇರ್ತೈತಿ ಅನ್ನೊ ಸತ್ಯ ನಿ ಮೊದ್ಲ ತಿಳ್ಕೊಂಡ
ಬಾಳೆ ಮಾಡ್ಲೆ ತಿಮ್ಮಾ...

ಜನ ಕಾಲ್ಕೆಳ್ಗ ಅದಾರು... ಅಂದ್ಕೊಂಡ
ಕಣ್ಮುಚ್ಗೊಂಡ ಕುಂದ್ರಬ್ಯಾಡ್ಲೆ ತಮ್ಮಾ...
ಮೈ ಮರ್ತೆಂದ್ರ...ಕಾಲೊತ್ತೊ ಜನಾನ
ನಾಳೆ‌ ಕುತ್ಗಿ ಹಿಸ್ಕತಾರೋ ತಿಮ್ಮ...

ನಮ್ಮವ್ವ

ಗಂಗಿಯೊಳಗ
ಮುಳುಗೆದ್ರ ಪಾಪ
ಕಳದ್ಹೊಕ್ಕೈತೇನೊ
ನಮ್ಮವ್ವ
ಅಂಗಿಯೊಳ್ಗಿನ
ಕಿಸೆಯಿಂದ ನಾಕಾಣೆ
ಧರ್ಮ ಮಾಡ್ಲಿಲ್ಲಂದ್ರ
ಪುಣ್ಯಾನರ ಹ್ಯಾಂಗ
ಹುಟ್ತೈತೊ
ನಮ್ಮವ್ವ

ಬಿಸೊ...ಬಿರುಗಾಳಿಗೆ
ಬಿದ್ದ್ಹೋಗ ಮರಕ್ಕ
ಸುತ್ತ ಹಾಕಿದ್ರೇನ
ಬಂತೊ
ನಮ್ಮವ್ವ
ಹೆತ್ತ ಜೀವಕ್ಕ
ಎರ್ಡ ಹೊತ್ತು... ತುತ್ತ
ಹಾಕದಿದ್ರ ಏನ
ಬಂತೊ ನಮ್ಮವ್ವ

ಹೊಟ್ಟೆ...ಬಟ್ಟೆ ಕಟ್ಟಿ
ಕುಡಿನ ಶ್ಯಾಣೆನ
ಮಾಡಿ...ಗೂಟದ
ಕಾರನ್ಯಾಗ ಅಡ್ಡಾಡುವಂಗ
ಮಾಡ್ಯಾರು
ನೋಡವ್ವ...
ಹಡ್ದ...ಬೆಳ್ಸಿದ
ಋಣಕ್ಕ...
ಸಾಕಲಾರ್ದ್ನ
ಆಶ್ರಮಕ್ಕ ಬಿಟ್ಟ
ಬರೊ ಇವ್ರ
ಶ್ಯಾಣೆತನಕ್ಕ
ಏನಂತ ಹೇಳ್ಬೇಕೊ
ನಮ್ಮವ್ವ

ನಮ್ಮವ್ವ

ತುಂಬಿದ ಸೇರ
ಒದ್ದ ಬಂದಾಕಿ
ತುಂಬಿದ ಮನಿನ
ಒಡ್ದಾಳಲ್ಲೊ
ನಮ್ಮವ್ವ
ಹಾಲುಕ್ಕಿಸಿ...
ಸುಖ ತುಂಬ್ತೀನಂದಾಕಿ..
ಮನಿ ಒಡೆಯೊ, ವಿಷದ
ಗಾಳಿನ....ಉಸಿರಾಳಲ್ಲೊ
ನಮ್ಮವ್ವ

ಎಷ್ಟ ಓದಿ..ಡಿಗ್ರಿ
ತಗೊಂಡ್ರೇನಾತ,
ಸಂಜಿತನ್ಕ ....
ಟಿ.ವಿ ಮುಂದ ಕುಂತ್ರ
ಏನ ಬಂತ
ನಮ್ಮವ್ವ...
ಕೈಯ್ಯಾಗ ಬಳಿ
ತೊಟ್ಟಾಕಿ...ಹೊಟ್ಟಿಗೆ
ತಿನ್ನೊ‌ ಅನ್ನಾನ
ರೊಕ್ಕಾ ಕೊಟ್ಟ
ತರ್ಸಿಕೊಂಡ ತಿನ್ನುದ್ರಾಗ
ಏನ ಸುಖ ಐತೊ
ನಮ್ಮವ್ವ

ಪೆಟ್ಗಿ ತುಂಬಾ...
ಬೆಳ್ಳಿ ಬಂಗಾರ ತುಂಬ್ಕೊಂಡ
ಬಂದೀನ ಅನ್ನೊ..
ದೌಲತ್ತು ಛಲೋ ಅಲ್ನೊಡದ
ಹೌದಲ್ಲವ್ವ...
ಹಿಂದ್ಕ ಹಂಡೆ ತುಂಬಾ
ಬಂಗಾರ ತಂದಾಕೀನ, ಇವತ್ತ
ನಿನ್ಮುಂದ.. ಹೊತ್ತ
ಕೂಳಿಗೆ ಕೈ ಚಾಚಿ
ಕೇಳುವಂಗಾಗೈತಿ
ಗೊತ್ತಾಯ್ತೇನವ್ವ

ನಮ್ಮವ್ವ

ಮಳಿ..ಮಳಿ..ಅಂದ
ಮುಂಗಾರು ಮಸಣ
ಕಾಣ್ತೋ...
ಕೇಳವ್ವ
ಹಿಂಗಾರಿ ಮಳಿನೂ ಇಲ್ಲ..
ಛಳಿನು ಇಲ್ಲ...
ಬಿತ್ತಿದ ಭಾಳೆ ಹಳಿಸಿ
ಹೊಂಟೈತಲ್ಲೊ
ನಮ್ಮವ್ವ

ಉತ್ತಿ...ಬಿತ್ತಿದ
ಬೆಳೆಗೆಲ್ಲಾ...
ಹುಳಾ ಬಿದ್ದ ಹೊಂಟಾವು
ನೋಡವ್ವ....
ಹೊಟ್ಯಾಗ.. ಹುಟ್ಟಿದ
ಹುಳುಗಳ ಬಾಯಿಗೆ
ಏನ್ ಮಣ್ಣ
ಸುರಿಬೇಕೊ...ಹ್ಯಾಂಗೊ
ನೀನೆ ಹೇಳವ್ವ

ಸಾಲದ ಭಾರಾನ
ಹೊತ್ತ...ಹೊತ್ತು...
ಹೆಗಲನ್ನೊವೊ
ಮೆತ್ತಗಾಗ್ಯಾವು
ಗೊತ್ತೆನವ್ವ...
ಭೂಮಿಗೆ ಭಾರ
ಅನ್ಕೊಂಡ, ಗೋಣಿಗೆ
ಕುಣ್ಕಿ ಹೊಸೆಯೊ
ಮುಂಚಾದ್ರು ಕೈ
ಹಿಡಿದೆತ್ತೊ...
ನಮ್ಮವ್ವ

ತಮ್ಮಾ

ಕಿಸೆ ತುಂಬ್ದೊರ ಮಂಚದ ಆಸೆ
ನಿನಗ್ಯಾಕ ಬಂತೊ ತಮ್ಮಾ...
ಕಂಡು..ಕಂಡು ಕಣ್ಮುಚ್ಚಿ ನಡೆಯೋರ
ಮುಂದ.. ಬಣ್ಣ ಹಚ್ಚಿ ಗೆಲ್ಲಾಕ
ಆಗ್ತದೇನೊ ತಿಮ್ಮ..

ಏನ್ ಬರೀತಿರಿ...ಅಂತ
ಅವ್ರೆದರು ನಿಂತು ನಿ, ಏನು ಕೇಳ್ಬ್ಯಾಡೊ ತಮ್ಮಾ...
ಊರೂರ ಅಡ್ಡಾಡಿ ಅವ್ರ ಹೊತ್ತ
ತರೋ ಬಿರ್ದು ಬಾವ್ಲಿಗಳನ್ನ ನೋಡ್ಕೊಂತ
ಸುಮ್ಕಿದ್ಬಿಡು ತಿಮ್ಮ...

ನಾಡ ಕಟ್ತೀವಿ...ನಾಡ ಕಟ್ತೀವಿ ಅಂದ
ನಾಡ ಕಟ್ಟೋರ
ನಡುನ ಗಟ್ಟಿಲ್ಲ ನೋಡ್ತಮ್ಮಾ....
ಸ್ವಾಭಿಮಾನಾನ ಇಲ್ಲಂದ ಮ್ಯಾಲ, ಏನ್
ಕಟ್ಟಿ, ಗುಡ್ಡ ಹಾಕಿದ್ರೇನ ಬಂತೊ ತಿಮ್ಮ.‌.

ಮುಖಕ್ಕ ಬಳ್ಕೊಂಡಿದ್ದ ಸಾಲ್ದಂತ
ನಾಲ್ಗಿಗೂ ಬಣ್ಣ ಹಚ್ಗೊಂಡಾರೊ ಕೇಳ್ತಮ್ಮಾ...
ಅವ್ರ ಆಡಿದ ಮಾತನ್ನ ನಂಬಿ ಕುಂತೆಂದ್ರ...
ಮುಲ್ಲಾನ ಓದ್ಗಿನೂ ಓದಲಾರ್ದನ, ಕತ್ತ
ಕೊಯ್ದ ಬಿಡ್ತಾರೊ ತಿಮ್ಮ...

ಹೊರಾಕ ಹೆಗಲ ಗಟ್ಟಿಯದಾವ ಅನ್ಕೊಂಡ
ಹೊತ್ತು ಊರೂರ ಮೆರವಣ್ಗಿ ಹೊಂಡಬ್ಯಾಡೊ
ತಮ್ಮಾ...
ನೂರ ಎಕರೆ ಹೊಲ ಬಿತ್ನಿ ಮಾಡಿ ಬಂದ್ರ ಏನಾತು
ಸಂಜಿಕ...ದನಾನ ಕೊಟ್ಗ್ಯಾಗ ಕಟ್ತಾರೊ ತಿಮ್ಮಾ...

ನಂಬ್ಕಿ ಅನ್ನೊ.. ಹಾಲಿನ ಮಡಕ್ಯಾಗ, ಸದ್ದಿಲ್ದಂಗ
ಹಲ್ಲಿ ಬಡ್ದ ಹಾಕೋರ ಅದಾರೊ ತಮ್ಮಾ...
ಕುಡ್ದ ಮ್ಯಾಲ ಗೊತ್ತಾಗೊದ... ಹಾಲೊಳಗಿನ
ಹಾಲಾಹಲದ ಕರಾಮತ್ತು. ಹ್ಯಾಂಗರ ನಂಬಬೇಕು
ಮಂದಿ ನಗುನ ಹಿಂದಿರೊ ಮಸಲತ್ತು
ಅರಿಯೊದಾದ್ರು ಹ್ಯಾಂಗ ನೀನದಿಯಲ್ಲ ಇನ್ನೂ ತಿಮ್ಮ..

Monday, November 19, 2018

ಶಾಯರಿ ೪೦೪

ಯಾವ ಧರ್ಮದವನೆಂದು
ಬಾಯ್ತಪ್ಪಿಯು
ಕೇಳಬೇಡ
ಸಾಕಿ....
ಮೇಲುಕೀಳುಗಳ
ಗೋಡೆಯೆ ನನ್ನ
ಪ್ರೀತಿಗಿಂದು
ಅಡ್ಡವಾದದ್ದು