Tuesday, January 21, 2020

ರಂಗೀ

ನೀ.. ಬರೆಯುವ
ಪದಗಳನು ಅಳೆದು, ತೂಗುವ
ತಕ್ಕಡಿಯುಂಟೇನು? ಈ
ಜಗದಲ್ಲಿ!!
ರಂಗೀ
ಹೂವಿನ ಜೊತೆಯಲ್ಲಿ
ನಾರಿಗೂ..ಸ್ವರ್ಗವಿದೆ!
ನನಗೆ ಮಾತ್ರ ಗೊತ್ತಿದೆ!
ಜಗವು ನೀಡುವ ನೋವ
ಮರೆಸುವ ಶಕ್ತಿ, ನಿನ್ನ
ಮಡಿಲಲಷ್ಟೆ ಇದೆ.

Sunday, January 19, 2020

ಶಾಯರಿ

ಎದೆಯೊಳಗೆ 
ಉರಿಯುತಿರುವ,
ವಿರಹಾಗ್ನಿಯನ್ನು ತಣಿಸಿಕೊಳ್ಳಲು
ಕುಡಿದರದೆಷ್ಟು ಬಂತು
ಸಾಕಿ....
ನಾನೇ.... ಉರಿದು
ಹೋಗದ ಹೊರತು,
ಅದು ಆರುವುದಿಲ್ಲವೆಂಬ
ಸತ್ಯವನರಿತೂ...ನೀನು 
ಬಟ್ಟಲಿಗೆ, ಮದ್ಯವನ್ನು
ಸುರಿಯುತ್ತಿರುವೆ. ನಾನೂ....
ಕುಡಿಯುತ್ತಿರುವೆ, ಆರಿ
ಹೋಗುವುದೆಂಬ ಹುಚ್ಚು
ಭ್ರಮೆಯಲ್ಲಿ.

Sunday, January 12, 2020

ನಿರ್ಭಾವುಕತೆಗಳು

ನನ್ನೆದೆಯೇನು.. ದುಃಖದ
ಭಂಡಾರವೇನಲ್ಲ!
ಅವುಡುಗಚ್ಚಿ ಎಲ್ಲ ನೋವುಗಳನ್ನು 
ಅದುಮಿಟ್ಟುಕೊಳ್ಳಲು.
ತೋಡಿಕೊಳ್ಳಲೆ? ಹೇಗೆ?
ಮಿಡಿಯುವ ಮನಸ್ಸಿಗಿಂತ, ಆಡಿಕೊಳ್ಳುವ
ತಾಮ್ರದ ಬಾಯಿಗಳೆ ಹೆಚ್ಚು.
ಜಗತ್ತು... ಮೊದಲು ಮನೆಯಲ್ಲಿಯೆ
ಕೂಡಿ ಹಾಕಿ, ಹಿಂಡುತ್ತಿತ್ತು...ಹಿಂಸೆ
ಸಂಕಟಗಳಾರಿಗು ಕಾಣಿಸುತ್ತಿರಲಿಲ್ಲ!
ಈಗ!!! ಸಮಾನತೆಯ ಹೆಸರಿನಲ್ಲಿ ಬಯಲಿಗೆ
ಬಿಟ್ಟು, ಹಗಲಿರುಳು ಬೇಟೆಯಾಡುತ್ತಿದೆ
ಹೂವನ್ನು ಹೊಸಕುವುದು ಇವರಿಗೆ
ಹೊಸತಲ್ಲ! ವಿಧಾನ ಬೇರೆಯಾಗಿದೆಯಷ್ಟೆ!.

Saturday, January 11, 2020

ರಂಗೀ ಕಜಲ್

ಹುಚ್ಚು ಮನಸ್ಸಿನ ನೂರೊಂದು ಭಾವಗಳೊಂದಿಗೆ, 

ತಿಕ್ಕಲು...ತಿಕ್ಕಲಾಗಿ ಬರೆಯುವವರ ಸಹವಾಸಕ್ಕಿಂತ, 

ನಿನ್ನ ಅನಕ್ಷರಸ್ಥದ ಮಡಿಲೆ ವಾಸಿ ಸಾಕಿ....

ಎದೆಯಾಳದಿ ತುಂಬಿಟ್ಟುಕೊಂಡಿರುವ ಭರವಸೆಯನ್ನು

ನಾನೇ.. ಉಸಿರುಗಟ್ಟಿಸುತ್ತಾ, ಹಗುರಾಗುತ್ತಿರುವೆ ಸೇದುತ್ತಾ

ನಿನ್ನರಮನೆಯ ಭಂಗಿ...


ಒಡೆದು ಹಾಕಿಬಿಟ್ಟೆ ಮನಸಿನ ಕನ್ನಡಿ, ತೋರಿಸುತ್ತಿತ್ತು

ಮುಖಗಳನ್ನಷ್ಟೇ!!! ಅವರ ಹುಳುಕು ಮನಸ್ಸುಗಳಿಗಿಂತ,

ಚೆಲ್ಲಿದ ಮದಿರೆಯ ಹೀರಿಕೊಂಡು ಗಬ್ಬು ನಾರುವ, ನಿನ್ನರಮನೆಯ ಚಾದರವೆ ಲೇಸು ಸಾಕಿ....

ಕಾಡುತ್ತಿರುವುದು..ಚುಚ್ಚುತ್ತಿರುವುದು..ನೋಯಿಸುತ್ತಿರುವುದು

ನೆನೆದಾಗಲೆಲ್ಲ, ಇವರೇ... ಅವರಾ? ಎಂದು


ತಣ್ಣ...ತಣ್ಣಗೆ ಮಾತನಾಡಿ ತಂ ಅಂಗೈಗಳನ್ನು ಬೆಚ್ಚಗಾಗಿಸಿಕೊಳ್ಳುವವರ ನಡುವಲ್ಲಿ ಇರುವುದಕ್ಕಿಂತ, 

ಕ್ಷಣವಾದರು ಸಾಕು, ಊರ ಜನರೆಲ್ಲ ಬೆಚ್ಚಗಾಗಿ ಹೋಗುವ

ನಿನ್ನ ಮಡಿಲಿನ ಕಾವೇ...‌ ವಾಸಿ ಸಾಕಿ...

ನಾನೂ...ಸಾಚಾ ಎಂದು ನಿರೂಪಿಸಿಕೊಳ್ಳಲಿ ಹೇಗೆ?

ಅಗ್ನಿಯನ್ನು ಪ್ರವೇಶಿಸಲೆ!!!!?

ಈ ಮಣ್ಣಿನಲ್ಲಿ ಹೆಣ್ಣಿಗೆ ಪರೀಕ್ಷೆಗಳನ್ನು ಒಡ್ಡಿದಷ್ಟು, ಗಂಡಸರಿಗೆಂದೆ ಯಾವ  ಪರೀಕ್ಷೆಗಳು ಇಲ್ಲವಲ್ಲ!!!


ಎಷ್ಟು ನೀರನ್ನು ಸುರಿದರು....ಬಣ್ಣ ಬದಲಿಸದ ಹಾಲಿಗಿಂತ

ಚೂರೆ...ಚೂರು ನೀರಿಗೆ ಬಣ್ಣ ಬದಲಿಸಿದರೂ, ಮತ್ತನ್ನೇರಿಸುವ

ನಿನ್ನ ಹೂಜಿಯೊಳಗಿನ ಮದ್ಯವೆ ವಾಸಿ ಸಾಕಿ....

ಸೋಗುಗಾರರ... ಸೋಗಲಾಡಿತನದ ನಡುವೆ ಸಿಕ್ಕು,

ಸುಕುಮಾರನಾಗಿರುವುದಕ್ಕಿಂತ, ಸೋಮಾರಿಯಾದರು ಸರಿ

ಬರೆದಿಟ್ಟಿಬಿಡುವೆ ಈ ಬದುಕನ್ನು... ಅವಳ್ಹೆಸರಿಗೆ, ನಿನ್ನ..

ಮದ್ಯಕ್ಕೆ.... ನಿನ್ನ ಮದ್ಯಕ್ಕೆ....


Thursday, January 9, 2020

ನಿರ್ಭಾವುಕತೆಗಳು


ತಿರುವಿ ಬಿಗಿದುಕೊಂಡ ತುರುಬು
ಮೊದಲಿನಷ್ಟು ಹೇರಳಾಗಿಲ್ಲ!
ಮೊದಲು, ಮುಡಿಗೆ ಮಲ್ಲಿಗೆಯ
ಮುಡಿಸಿ ಮನವ ತಣಿಸುವ ಮುದುಕನು
ಮಣ್ಣಾಗಿ ಹೋಗಿದ್ದಾನೆ!
ಇರುಳುಗಣ್ಣಿನ ಕನ್ನಡಕಕ್ಕಾಗಿ, ಬಿಚ್ಚಿಕೊಟ್ಟ
ಕಿವಿಯೋಲೆಯ ಸಂಧು ತುರಿಕೆಯ ಬಿಡುತ್ತಿದೆ!
ಈ ಏಕಾಂತ ಇಷ್ಟು ಕ್ರೂರವಾದದ್ದೆಂದು
ನನಗೆ ಮೊದಲೆ ಅರಿವಾಗಿದ್ದರೆ, ಅವರ 
ಹಿಂದೆ ನಾನುನೂ ಹೆಜ್ಜೆಗಳನ್ನು ತುಳಿದುಬಿಡುತ್ತಿದ್ದೆ!
ಹೊತ್ತು ತುತ್ತಿಗಾಗಿ ಬದುಕುವುದು
ನನಗೀಗ, ಅಸಹನೀಯವೆನಿಸಿಬಿಟ್ಟಿದೆ!
ಅರಿವಾಗುತ್ತಿಲ್ಲ ನನಗೆ... ಈಗ ಯಾವ
ದಾರಿಯನ್ನು ತುಳಿಯಲಿ.

Wednesday, January 8, 2020

ರಂಗೀ

ನಿನ್ನ ಕಂಡಾಗಲೆಲ್ಲ...
ರಂಗೇರುತ್ತದೆ
ರಂಗೀಯ
ಗಲ್ಲ!!!
ನೆನಪಾಗುವವೇನೊ?
ಹಳೆಯ ನೆನಪುಗಳವಳಿಗೆ!
ನಾ ಕಚ್ಚಿದವಳ
ತುಟಿಯೆಂಬ
ರಸಗುಲ್ಲ!!

ಚುಟುಕು

ಈ ಸಂದರ್ಭಕ್ಕೆ
ಹಳಸಿ ಹೋಗುವ
ಸಂಬಂಧಗಳ 
ಹೆಸರನ್ನಿಡುವುದಿಲ್ಲ!
ಕೂಡಿ ಬೆರೆತು
ಕಳೆದ ಈ ಘಳಿಗೆಯನ್ನು
ನಾನೆಂದು
ಮರೆಯುವುದಿಲ್ಲ!