Wednesday, September 30, 2020

ಶಾಯರಿ

ಈ ಮಣ್ಣಿನಲ್ಲಿ
ಧರ್ಮದ ನಶೆಯೇ...
ಇನ್ನೂ ಇಳಿದಿಲ್ಲ
ಸಾಕಿ...
ಹೂಗಳು 
ಅರಳುವುದಾದರು
ಹೇಗೆ?
ಕಾಮಾಂಧರ ಕಾಲಲಿ
ಸಿಕ್ಕು ಹೋಗುತ್ತಿರುವಾಗ
ಹೊಸಕಿ.

Friday, September 25, 2020

ಶಾಯರಿ

ಎಡೆಬಿಡದೆ ಸುರಿಯುತ್ತಿರುವ
ಮಳೆಯಲ್ಲಿ, 
ನನ್ನ ಹೆಣವನ್ನೊಮ್ಮೆ
ಮಲಗಿಸಿಬಿಡು ಸಾಕಿ...
ತಣ್ಣಗಾಗಲಿ!
ವಿರಹದಲೆ ಕುದ್ದು..ಕುದ್ದು
ಬೆಂದು ಹೋದ ಜೀವವಿದು.
ಗೋರಿಯೊಳಗಿನ 'ಕಾವ'ನ್ನಾದರು
ತಡೆದುಕೊಳ್ಳಲಿ.

ಶಾಯರಿ

ನಮ್ಮಿಬ್ಬರ ನಡುವೆ
ಏನಿತ್ತೆಂದು
ಬಾಯ್ಬಿಟ್ಟು ನಾ
ಹೇಗೆ ಹೇಳಲಿ
ಸಾಕಿ....
ಊರಿಗೆ ಗೊತ್ತಿದ್ದದ್ದು
ನಿನಗೆ ಅರಿವಿಲ್ಲವೆಂದರೆ?
ಈ ಮಧು ಬಟ್ಟಲು
'ಮೃತ್ಯುಪಾನ'ವಾಗುವುದರಲ್ಲಿ
ಸಂದೇಹವಿಲ್ಲ.

Thursday, September 24, 2020

ಶಾಯರಿ

ಬೆಂದು ಹದವಾದ
ಕವಿತೆಗಳ ಕೆಳಗೆ
'ರುಜು'ವನ್ನು
ಮಾಡಲು ರಂಗಿಯೇ...
ಇಲ್ಲವಲ್ಲ
ಸಾಕಿ....
ಮೂಢ ಜನರಿಲ್ಲಿ
ಮೊದಲು ಪ್ರೀತಿಸಿದ್ದನ್ನೆ
'ರುಜುವಾತು'
ಮಾಡೆನ್ನುತ್ತಿದ್ದಾರಲ್ಲ!

Tuesday, September 22, 2020

ಶಾಯರಿ

ರಂಗೀಯನ್ನು
ಮರೆಯಲೆಬೇಕೆಂಬ
ಹುಚ್ಚು ಬಯಕೆಯೇನು
ಇಲ್ಲ
ಸಾಕಿ...
ಅವಳೊಂದು
ನೆಪವಷ್ಟೆ...
ಮದ್ಯದ ಬಟ್ಟಲಿಗೆ
ಮುತ್ತಿಕ್ಕಲು.

Saturday, September 12, 2020

ಚುಟುಕು

ತೊಟ್ಟ 'ಬಟ್ಟೆ'
ಎಂದಿದ್ದರೂ...
ಕೊಳೆಯಾಗಲೆಬೇಕು
ಗೆಳೆಯ!
ಕಳಚುತ್ತಾರಷ್ಟೆ, ಲೌಕಿಕ
ಸುಖಕ್ಕಾಗಿ ಕತ್ತಲ
ಕೋಣೆಗಳಲ್ಲಿ!
ಅವರ 'ತೊಟ್ಟು' ಕಳಚಿ
ಬಿಳುತ್ತದೆ ಹೊರತು,
ಹರಿಯುವುದೆ ಇಲ್ಲ ಎಂದಿಗೂ..‌
ಅಂಧಕಾರದ ಪರದೆಯು..

Friday, September 11, 2020

ಚುಟುಕು

ಹೂವೇನು?... ಮುಳ್ಳೇನು?....
ಮುತ್ತಿಕ್ಕುತ್ತವೆ ಮಂಜಿನ
ಹನಿಗಳು, ಎಂತಹ
ಸೋಜಿಗ!
ಮುತ್ತಿಕ್ಕಲು ಹೋದದ್ದು
ಹೂವಿಗೆ,
ಚುಚ್ಚಿದ್ದು? ಮುಳ್ಳುಗಳು 
ಎದೆಯ ಗೂಡಿಗೆ. ಇದ
ಕಂಡು, ಕೇಳುತ್ತದೆ 'ಏನಾಯಿತು?'
ಎಂದು ಮೂಜಗ!!