Thursday, February 23, 2023

ಚುಟುಕು

ಹೀಗೆ ಒಂಟಿಯಾಗಿ
ಕೆಸರಿನಲ್ಲಿ ನಡೆದು
ಹೋಗಬೇಡ
ಹುಡುಗಿ...!!
ಜಾರಿಬಿದ್ದು ನಡು ಉಳುಕಿ
ಹೋದರೆ..!?😋
ಎಣ್ಣೆಹಚ್ಚಿ ತಿಡುವ
ಸೌಭಾಗ್ಯಕ್ಕಿಂತ...😍
ಮನೆಯ, ಮೂರು ಹೊತ್ತಿನ 
ಕಸ-ಮುಸರಿಯನ್ನು ತಿಕ್ಕುವಷ್ಟು
ನನ್ನ ನಡು ಗಟ್ಟಿಯಿಲ್ಲ 
ಇಲ್ಲಿ...!!😜

Wednesday, February 15, 2023

ಚುಟುಕು

ಮೂಗನ್ನೂ 
ಮುಚ್ಚಿಕೊಂಡು 
ಹೊರಟುಬಿಡು 
ಬೆಂದ ಎದೆಯ ವಾಸನೆ
ನಿನಗೆ ಹಿಡಿಸದು!!
ಯಾರಿಗೂ ಹೇಳುವುದಿಲ್ಲ
ಹೀಗೆ ನೀನು ಅರೆಬರೆ
ಸುಟ್ಟು ಹೋದದ್ದು

Tuesday, February 14, 2023

ಪೊಲ್ವಾಮ್


ಅಲ್ಲಿ ನೆತ್ತರು ಹರಿದು ಹೋದ ರಸ್ತೆಯಲ್ಲ
ಸ್ವಚ್ಛವಾಗಿದೆ!
ಏನಾಗಿತ್ತಲ್ಲಿ ಎಂಬುದನ್ನು ಮರೆತು ಗಾಡಿ-
ಮೋಟಾರುಗಳು ಓಡಾಡುತ್ತಿವೆ!
ಇತಿಹಾಸದ ಪುಟದಲ್ಲಿ ಅದೊಂದು ದಿನವು
ಸೇರಿ ಹೋಗಿದೆಯಷ್ಟೆ!!

ನೆನಪಿಸಿಕೊಂಡು ಅಳುವುದಕ್ಕೆ; ದುಃಖಿಸುತ್ತ
ಕೂರುವುದಕ್ಕೆ ಅವರೇನು ಒಡಹುಟ್ಟಿದವರೆ?
ಯಾರೊ ಹೆತ್ತ ಮಕ್ಕಳು... ಹೊಟ್ಟೆಪಾಡಿಗಾಗಿ
ಸೇರಿದವರು!!
ಇದ್ದರೇಷ್ಟು ಹೋದರೇಷ್ಟು... ಅಲ್ಕಣೆ...
ಉಪ್ಪಿಟ್ಟು ರೆಡಿಯಾಯ್ತ..? ಇವತ್ತೊಂದು
ಬಕರಾಗೆ ಸೈಟ್ ಹೊಂದಿಸಿಕೊಡಬೇಕಿದೆ..

ಓಹ್..!! ಅವರೀಗತಾನೆ ವೇದಿಕೆಯಿಂದ
ಇಳಿದು ಹೋದರು!! ಹೇಳಿದ್ದಾದರೂ ಏನು?
ಹೇಳುವುದಾದರೇನು ಪಾಪ... ನೀವು
ಅವರಂತಾಗಬೇಕಷ್ಟೆ! ಮುಂದಕ್ಕಿದೆಯಲ್ಲ
ಸುರಿಸಲಿಕ್ಕೆ ನಾಟಕದ ಎರಡು ಹನಿ..

ಛೇ...ಪಾಪ ಆ ಜಾತಿಯ ಮಕ್ಕಳಂತೆ
ಈ ರಸ್ತೆಗೆ ಅವರ ಹೆಸರು ಇಡಬೇಕಾ?
ಏನು ಕಡೆದು ಗುಡ್ಡೆ ಹಾಕಿದ್ದನೆಂದು ಕಟ್ಟೆಯನ್ನು
ಕಟ್ಟಿಸಬೇಕು!!
ಒಂದು ಗುಲಾಬಿ ಹೂ ಸಾಕಲ್ಲವಾ? ಅಯ್ಯೋ
ಜೇಬಿನಲ್ಲಿ ಚಿಲ್ಲರೆಯೆ ಇಲ್ಲವಲ್ಲ..!!
ಏನಪ್ಪ ನಿನ್ನ ಹತ್ತಿರ ಪೋನ್ ಪೇ ಇದೆಯಾ?

ಅಯ್ಯೋ ಬಿಡ್ರಿ.. ನಮ್ಮವರಿಗಿನ್ನೂ ಮೀಸಲಾತಿಯೆ
ಸಿಕ್ಕಿಲ್ಲ!!
ಅನುಭವಿಸುತ್ತಿರುವವರಿಗೆ ಯಾರ ಗೊಡವೆಯೂ ಬೇಕಿಲ್ಲ!!
ಇವತ್ತೇನು ರಜೆ ಕೊಟ್ಟಿಲ್ಲ ! ಥಿಯೇಟರ್ ನಲ್ಲೂ ಅಂಥ
ಯಾವ ಒಳ್ಳೆ ಸಿನಿಮಾ ಬಂದಿಲ್ಲ!!
ಇರ್ಲಿ ಬಿಡ್ರಿ "ದೇಶದ ಕಥೆ ಇಷ್ಟೆ ಕಣಮ್ಮಿ"
ಅಂದ್ಬಿಡುವಾ...!!

Wednesday, February 8, 2023

ಗಾಲಿಬ್


ನನ್ನರಮನೆಯ ಮೇಲಿಂದು ಗರಡಿಯ
ಮನೆಯಲ್ಲಿ ಮೈ ಹುರಿಗೊಳಿಸಿಕೊಂಡ
ಸುಲ್ತಾನನಂತೆ......ಮೈದುಂಬಿ ಬಂದಿರುವ
ಚಂದಿರನಿಂದು ಗಾಲಿಬ್!!!
ಇಷ್ಟು ಹೊತ್ತು... ಹಸಿದವರಿಗೆ ಬಿಸಿಯಾಗಿ
ಬಡಿಸಿ..ಉಣಿಸಿ..ತಣಿಸಿ ಕಾದು ನಿಂತವಳು ನಾನು!!
ಹಳಸಿದ ಅನ್ನವನುಂಡು ಕೈ ತೊಳೆಯದ, ನಿನ್ನ ಒರಟು ಎಂಜಲು ಬೆರಳುಗಳಿಂದ ಈ ತುಟಿಯಂಚನ್ನು ಸವರದೆ
ಹೋದರೆ.... ನನ್ನೊಳಗಿನ ಬಿಸಿ, ಹೇಗೆ ತಾನೆ ಆರಿ ಹೋದಿತು!!

ಅವನಿಗೇನುಬಿಡು ಊರೊಳೊಗೆ ಅವನನನ್ನು
ಕಾಯುತ್ತಿರುವವರು... ಒಬ್ಬರೆ... ? ಇಬ್ಬರೆ..?
ಹಸಿದ ದೇಹಗಳೇಷ್ಟೊ?, ಬೆಂದ ಮನಸುಗಳೇಷ್ಟೊ?
ಎಲ್ಲರಿಗೂ ಅವನೇ ಬೇಕು...ನನಗೆ..!!? ನನಗೆ ಮಾತ್ರ
ನೀನೆ ಬೇಕು ಗಾಲಿಬ್ ನೀನೆ ಬೇಕು...
ಹೊಟ್ಟೆ ತುಂಬಿದವರಿಗೇನು ಗೊತ್ತು!!? ಹಸಿದವನ
ಸಂಕಟ, ಕೇವಲ ಕಾಮದ ವಾಸನೆಯನ್ನೆ....
ತುಂಬಿಕೊಂಡಂತಹ ಮಲ್ಲಿಗೆಯನ್ನು ಎಷ್ಟೂ...ಅಂತ
ಮೂಸಲಿ..ಮುಡಿಯಲಿ..ವಾಕರಿಕೆ ಬರುತ್ತಿದೆ!!
ಈಗೀಗ ಏತಕೋ...ಕಮಟು ವಾಸನೆ ತುಂಬಿದ ನಿನ್ನೆದೆಯ
ಮೇಲಿನ ಬಟ್ಟೆಯೆ ಹಿತವೆನಿಸುತ್ತಿದೆ..

ನೀನಿನ್ನು ಪ್ರೇಮಿಯಾಗಿರಲಿಲ್ಲ.... ದೊಡ್ಡ ಬಟ್ಟಲಿನಲ್ಲಿ
ಕಾಮಧೇನುವಿನ ಕೆಚ್ಚಲಿನಿಂದ ಕರೆದ, ನೊರೆಯಿಲ್ಲದ
ಹೊಳೆಯುವ ಹಾಲಿನಂತವನಿಗೆ, ನಾ ಮಧುಶಾಲೆಗೆ
ಕಾಲಿಟ್ಟಾಗಿನಿಂದ  ಮೋಹಿತಳಾಗಿರುವೆ ಗಾಲಿಬ್!!
ಹುಟ್ಟು ಕಿವುಡನಿರಬೇಕವನು!! ಯಾರು ಕೇಳದ ನೋವು,
ಯಾರಲ್ಲಿ ಹೇಳಿಕೊಳ್ಳಲಾಗದಂತಹ ಸಂಕಟ, ಅನುಭವಿಸುವ
ಅವಮಾನ-ಯಾತನೆಯನ್ನು.... ದಿನೆ...ದಿನೆ
ಮೋಡದ ಮರೆಯಿಂದ ಇಣುಕಿಣುಕಿ ನೋಡುತ್ತಲೆ
ಪೂರ್ಣವಾಗುತ್ತಾನೆ...
ನಾನು ಹೀಗೆ, ಮಧುಶಾಲೆಯ ಮಹಡಿಯ ಮೇಲೆ ನಿಂತು
ಆಸೆ ಕಂಗಳಲ್ಲಿ ಅವನನ್ನು ನೋಡುತ್ತಾ, ಮಾತಾಡುತ್ತ
ನಿಂತೆನೆಂದರೆ ಸಾಕು...... ತಣ್ಣಗೆ ಕರಗುತ್ತ, ಹೊಟ್ಟೆಯಲ್ಲಿ
ಆರದ ಕಿಚ್ಚನ್ನು ಹಚ್ಚಿ ಕರಗಿ ಹೋಗಿಬಿಡುತ್ತಾನೆ.

ಇವನನ್ನು ನಂಬುವುದಾದರೂ ಹೇಗೆ? ತಬ್ಬಿ
ಮುದ್ದಾಡಲು... ಸನಿಹದಲ್ಲಿಲ್ಲ!! ಹಗಲಿಗೆ..? ಹೆಗಲಾಗುವುದಿಲ್ಲ !!
ಉತ್ತರಕುಮಾರನಷ್ಟೇ ಪೌರುಷ ಇವನದು ಗಾಲಿಬ್!!
ನಾನು ಹೂವಂತೆ ಹಗುರಾಗಬೇಕು ನಿನ್ನ
ಮಡಿಲೊಳಗೆ...!
ಬೆಚ್ಚಗಾಗಬೇಕು ಕಾವುಣ್ಣುವ ಮೊಟ್ಟೆಯಂತೆ!
ಜಗವನೇ....ಮರೆಯಬೇಕು ತೆಕ್ಕೆಯೊಳಗೆ!!
ಜೀವಸೆಲೆಯಾಗಿಬಿಡು ಈ ರಾತ್ರಿಗೆ...
ಇದೆಲ್ಲವ... ಕಂಡವನು ಹೊಟ್ಟೆಯುರಿದುಕೊಂಡು
ಮರೆಯಾಗಬೇಕು ನೋಡವನು ಮೊಡದೊಳಗೆ!!

Tuesday, January 31, 2023

ವ್ಯಾಖ್ಯಾನ...


ದಾರವಾಡದಲ್ಲಿ ಜರುಗಿದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ನಂತರ ಇಂದು ಮತ್ತೆ ಸುಶೀಲಣ್ಣ ಕುಂದರಗಿ ಇವರ  ಆಜ್ಞೆಯ ಮೇರೆಗೆ ಇಂದಿಲ್ಲಿ ಒಂದೆರಡು ಮಾತುಗಳನ್ನಾಡುವ ಸದಾವಕಾಶ ಒದಗಿ ಬಂದಿದೆ. ಅವರಿಗೂ ಕಾರ್ಯಕ್ರಮದ ಆಯೋಜಕರಿಗೂ ಮತ್ತು ಇಲ್ಲಿಯ ತನಕ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಸೂರೆಗೊಳಿಸಿದಂತಹ ಎಲ್ಲ ಗಾನ ಕೋಗಿಲೆಗಳಿಗೆ ಮತ್ತು ಇಲ್ಲಿ ನೆರೆದಿರುವಂತಹ ಎಲ್ಲ ಸಾಹಿತ್ಯಾಸಕ್ತರಿಗೂ ನನ್ನ ನಮನಗಳನ್ನು ಸಲ್ಲಿಸುತ್ತ ಸಮಯದ ಅಭಾವವಿರುವುದರಿಂದ ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಜನಪದ ವ್ಯಾಖ್ಯಾನ ಇದು ನನ್ನ ಪಾಲಿಗೆ ಬಂದಂತಹ ಸೌಭಾಗ್ಯವೆ ಎಂದು ಹೇಳಬೇಕು ಕಾರಣವಿಷ್ಟೆ. ಈ ಜನಪದಕ್ಕೆ ಯಾವುದೇ ಜಾತಿ -ಧರ್ಮ ಮೇಲು-ಕೀಳು ಅಸ್ಪೃಶ್ಯತೆ-ಕೀಳರಿಮೆ, ದೌರ್ಜನ್ಯ-ದರ್ಪ, ಅಹಂಕಾರ-ಹಗೆತನ ಯಾವುದೆಂದರೆ ಯಾವುದರ ಸೊಂಕು ಇದರಲ್ಲಿ ಸುಳಿದಿಲ್ಲ. ಇಲ್ಲಿ ನಮಗೆ ದಕ್ಕುವುದು ಬರೀ ಪ್ರೀತಿ-ಪ್ರೇಮ, ನಿವೇದನೆ, ಅಂತಃಕರಣದ ನೋವು, ಹೇಳಲಾಗದಷ್ಟು ಸಂತೋಷ, ಕರುಣೆ-ದಯೆ, ಸಹಾನುಭೂತಿ ಒಟ್ಟಾರೆಯಾಗಿ ಸಿಗುವುದು ಒಡಲಾಳದ ಮಡಿಕೆಯಲ್ಲಿ ಕಟೆದ  ಅನುಭವದ ಬೆಣ್ಣೆ ಇದನ್ನು ನಾವು ಯಾವಾಗ? ಎಷ್ಟು? ಹ್ಯಾಗಬೇಕೊ ಹಾಗೆ ಕರಗಿಸಿಯೊ ಅಥವಾ ಸವರಿಕೊಂಡು ಬಾಯ್ಚಪ್ಪರಿಸಿ ಉಣ್ಣುವಂತಹದ್ದಾಗಿದೆ  ಹಾಗೆ ಇನ್ನೂ ಗರ್ವಪಟ್ಟು ಹೇಳುವುದಾದರೆ ಇವುಗಳಿಗೆಲ್ಲ ಯಾರೊಬ್ಬರ ಹೆಸರಿನ ಹಂಗಿಲ್ಲ. ಯಾರು? ಎಲ್ಲಿ? ಹೇಗೆ? ಬರೆದರು ಎಂಬ ಹೆಸರು- ಗುರುತಿನ ಹಂಗಿಲ್ಲ.

ನನ್ನ ಪಾಲಿಗೆ ಇಂದು ವ್ಯಾಖ್ಯಾನಿಸಲು ಸಿಕ್ಕ ಜನಪದ ಗೀತೆ ಸಂಸಾರ. ಸಂ ..... ಸಾರ
ಸಂ...ಸಾರ ಅಂತಂದ ಯಾಕ ಅಂತಂದನೆಪಾ ಅಂತಂದ್ರ ಈಗ ನೀವ್ ನೋಡ್ರಿ ಇವತ್ತಿನ ಹತ್ತ ನಿಮಿಷ ಮಾತಾಡೊ ಕಾರ್ಯಕ್ರಮಕ್ಕ ನಿಮ್ಮ ನಿಮ್ಮ ಮನಿಯಾಗ ನಿಮ್ಮ ಹೆಣ್ಮಕ್ಳು ಜಲ್ದಿ ಎದ್ದು ನೀರ ಕಾಸಿ ಬಟ್ಟಿ ಇಸ್ತ್ರೀ ಮಾಡಿಕೊಟ್ಟು ಬರುವಾಗ ಹುಷಾರು ಹೊತ್ತಿಗೆ  ಊಟ ನಾಷ್ಟ ಮಾಡ್ರಿ, ಸಂಜಿಕ ಜಲ್ದಿ ಬಂದ್ಬಿಡ್ರಿ ಗಿರಮಿಟ್ ಮಿರ್ಚಿನೊ, ಮಂಡಕ್ಕಿನೊ ಮಾಡಿಟ್ಟಿರತಿನಿ ಬಂದು ತಿನ್ನೊರುವಿರಂತ ಅಂತಂದ ಅಷ್ಟ ಜ್ವಾಕಿ ಮಾಡಿ ಕಳಿಸಿಕೊಡ್ತಾರ ನಮ್ಮ ಮನಿಯಾಗ ಹಂಗಿಲ್ಲ ಮುಂಜಾನೆ ಎದ್ದ ದಾಡಿ ಮಾಡ್ಕೊಂಡ ಜಳಕ ಮಾಡಿ ಹೊಸ ಬಟ್ಟಿ ಹಾಕ್ಕೊಂಡು ನಮ್ಮಾಕಿ ಮುಂದ ನಿಂತಗೊಂಡು

ಆಕಿಗೆ ಅಂದೆ
ಈಗ ಹ್ಯಾಂಗ ಕಾಣಕ
ಹತ್ತೀನಿ!!😘
ಯಾಕ ಇಷ್ಟ ಜಲ್ದಿ ಎದ್ದು
ಎಲ್ಲಿಗೆ ಹೊಂಟಿರಿ ಅಂದ್ಲು!!🤔
ಕುಂದಗೋಳ ದೇಸಾಯರ
ವಾಡೇಕಾ...😍
ಯಾಕ ದನಾ ಕಾಯೋರ
ಕಮ್ಮಿ ಬಿದ್ದಾರನು ಅಂದ್ಲು...,🤐

ಮಾತ... ಇಲ್ಲ. ಸುಮ್ನ ಬ್ಯಾಗ ಎತ್ಕೊಂಡ ಬಸಸ್ಟ್ಯಾಂಡಗೆ ಬಂದಬಿಟ್ಟ್ಯಾ...
-------
ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ |
ಅಡಿಗೆ ಬಾಯಿಗೆ ರುಚಿಯಿಲ್ಲ | ಹಡೆದವ್ವ |
ಮಡದಿ ತವರಿಗೆ ಹೋಗ್ಯಾಳ

ಮೂರು ದೃಷ್ಟಾಂತಗಳು
೧. ರಸಿಕತೆ - ಯಾಕ ಬಾಯಿಗೆ ರುಚಿ ಬರೋದಿಲ್ಲಪಾ ಅಂತಂದ್ರ ನಮ್ಮ ದೋಸ್ತಂದ ಮದುವಿಯಾದ ಸಂತೋಷಕ್ಕ ಅವ್ರ ಮನಿಗೆ ಉಟಕ್ಕ ಕರದಿದ್ನಾ ಮೂರ ಮಂದಿ ಹೋಗಿದ್ವಿ, ಕೈ ತೊಳಕೊಂಡು ಸಾಲ ಹಿಡಿದು ನಾಲ್ಕು ಮಂದಿ ಕುಂತಗೊಂಡ್ವಿ ಅವ್ನ ಹೆಂಡ್ತಿ ಬಂದ ಊಟದ ತಾಟ ಇಟ್ಟ ಹೋದಳು ನೋಡ್ತೀವಿ ಕಾಮತ ಹೋಟಲ್ ನ್ಯಾಗ ಉಪ್ಪಿಟ್ಟು ಇಟ್ಟ ಕೊಟ್ಟಂಗ ಅನ್ನ ಇಟ್ಟ ಕೊಟ್ಟಿದ್ರು ನಾನವಂಗ ಕೇಳಿದ್ಯಾ
"ಯಾಕೊ ನಿಮ್ಮ ಹೆಣ್ಮಕ್ಳು ಬ್ರಾಹ್ಮಣ್ಸನು'
'ಯೇ.. ಅಲ್ಲೊ ಮಾರಾಯ ನಮ್ಮ ಮಂದಿಯಾಕಿಯ'
'ಮತ್ ಬರೀ ಅನ್ನಾ ನಿಡ್ಯಾರಲ್ಲೊ'
'ಏ ಮತ್ ನಿಮ್ ಮನಿಯಾಗ ನಿಮ್ಮ ತಂಗಿಗೆ ಅಡಗಿ ಮಾಡದ ಕಲಿಸಿ ಕೊಟ್ಟಿಲ್ಲಲ್ಲ ಆಕಿಗೆ' ಅಂತಂದ ನನ್ನ ಮ್ಯಾಲ ಮುರಕೊಂಡ ಬಿದ್ದ
'ಹೋಗ್ಲಿಬಿಡು, ಒಂದಿಷ್ಟು ಸ್ವೀಟಾದ್ರು ಮಾಡ್ಸಬೇಕಿತ್ತಿಲ್ಲೊ'
'ಯೇ...ಹೇ... ಹಾಗಿಲ್ಲಪ್ಪ ಇಬ್ರೂ ಡಯಟ್ ನ್ಯಾಗ ಅದೀವಿ ಅದ್ಕ ಸ್ವೀಟ್ ಗೀಟ ಏನು ಮಾಡಿಲ್ಲ '
ಅಲ್ಲ ಇಬ್ರನ್ನೂ ಸೇರಿಸಿ ತೂಗಿದ್ರೂನು ೫೦ ಕೆ.ಜಿ. ತೂಗೊದಿಲ್ಲ ಅಂತದ್ರಾಗ ಮತ್ ಡಯಟ್!! ಹಾಳಾಗಿ ಹೋಗ್ಲಿ ಅತ್ಲಾಗ ಅನ್ಕೊಂಡ, ಉಣ್ಣೊಕ ನನ್ನ ಕೈ ಚೂರು ಮುಂದ ದಬದಬ ಸಾರ ಹಾಕ್ಕೊಂಡ ಗಬಗಬ ಕಲಿಸಿಕೊಂಡ ಒಂದ ತುತ್ತ ಬಾಯಿಗೆ ಇಟ್ಗೊಂಡನ್ರೀ.... ಹೇಳ್ತಿನ್ ನಿಮ್ಗ ಕರೆಂಟ್ ಹೊಡ್ದ ಕಾಗಿ ಹಂಗ ಆಗಿಬಿಡ್ತ ಆಗ ನನ್ನ ಪಾಡು. ಜಗಿಲಿಲ್ಲ, ನುಂಗಲಿಲ್ಲ ಮಗ್ಗಲದಾಗ ಕುಂತಗೊಂಡ ಇಬ್ರು ಗೆಳೆಯರಿಗೆ ತಲಿಲೆ ಸೊನ್ನಿ ಮಾಡಿದ್ಯಾ ತಿನಬ್ಯಾಡ್ರಲೆ ಅಂತ, ಅವ್ರು ಮಕ್ಳು ಬ್ಯಾರೆನ ತಿಳ್ಕೊಂಡ ಬಿಟ್ರೊ ಎನೊ ಹ್ಞಾಂ ಮಗ ಅಡಗಿ ಮಸ್ತ್ ಇದ್ದಾಗ ಐತಿ, ಅದ್ಕ ಎಲ್ಲಾ ತಾನ ತಿನ್ನಾಕ ನಮ್ಗ ಬ್ಯಾಡ ಅನ್ನಾಕ ಹತ್ತಾನ ಅಂದ್ಕೊಂಡ್ರೊ ಏನೋ ಅವ್ರು ತಡನ ಮಾಡ್ಲಿಲ್ಲ ಗಬಗಬ ಅಂತ ಹೇಳಿ ಒಂದೊಂದು ತುತ್ತು ಬಾಯಿಗೆ ಹಾಕ್ಕೊಂಡ ಬಿಟ್ರು...!! ಏನ್ ಹೇಳ್ಲಿ ನಿಮ್ಗ ಅವ್ರ ಕತಿನಾ... ಎಮ್ಮೆ ಗಂಜಲಾ ಕುಡದ ಮ್ಯಾಲ ಮೊಸಡಿ ಹ್ಯಾಂಗ ಮಾಡಿರತಾವಲ್ಲ ಹಾಂಗ ಮಾರಿ ಮಾಡಕೊಂಡ ನನ್ನ ನೋಡಾಕ ಹತ್ತಿಬಿಟ್ರು. ಯಾಕಂತಂದ್ರ ಆ ತಂಗೆವ್ವ ಅನ್ನಕ್ಕ ಉಪ್ಪು ಹಾಕಿದ್ಲೊ ಏನ... ಉಪ್ಪನ್ಯಾಗ ಅಕ್ಕಿ ಹಾಕಿ ಅನ್ನ ಮಾಡಿದ್ಲೊ ಗೊತ್ತಿಲ್ಲ ಒಂದ ತುತ್ತಿಗೆ ಬಾಯಿ ಕೊರದಂಗ ಆಗಿ ಮುಖ-ಮುಖ ನೋಡ್ಕೊಂತ ಕುಂತಗೊಂಡ್ವಿ. ನಮ್ದ ಹಿಂಗಾತು ಇನ್ನ... ಗಂಡನ ಪಾಡ ಹ್ಯಾಂಗ ಆಗೀರಬ್ಯಾಡ ಅನ್ಕೊತ ಮೂವಾರು ಅವನ್ನ ನೋಡ್ತೀವಿ ಅಂವಾ... ಹೆಂಡ್ತಿ ಮುಖಾ ನೊಡ್ಕೊಂತನಾ ಉಣ್ಣಾಕ ಹತ್ತ್ಯಾನ ಆಕಿ ಕಣ್ಣ ಸನ್ಯಾಗ ಕೇಳಾಕ ಹತ್ತ್ಯಾಳ ಅಡಗಿ ಹ್ಯಾಂಗ ಆಗೈತಿ ಅಂತ
ಇವನು ಕಣ್ಣ ಸನ್ನಿಲೆ ಮಸ್ತ್ ಆಗೈತಂತಂದು ಸೊನ್ನಿ ಮಾಡಾಕ ಹತ್ಯಾನ. ಇದನ್ನ ನೋಡಿ ಒಂದ ತುತ್ತಿಗೆ ದಿಕ್ಕನೆ ಎದ್ದ ನಿಂತ ಹೊಂಟನಿಂತ ತಕ್ಷಣ ಅಂವಾ ಅಂದ
ಯಾಕೊ ದೋಸ್ತ' ನಾ ಅಂದೆ 'ಹೊಟ್ಟಿ ತುಂಬಿ ಹೋತೊ ಮಾರಾಯ'
ಅವನ ಹೆಂಡ್ತಿ ಅಂದ್ಲು 'ಅಣ್ಣಾರ ಇನ್ನೊಂದ ತುತ್ತ ರೀ'
ನಾನು ಕೈ ಮುಗಿದು 'ಸಾಕ ತಾಯಿ ಮಹಾಭಾರತದೊಳಗ ಶ್ರೀ ಕೃಷ್ಣ ಪರಮಾತ್ಮ ಹ್ಯಾಂಗ ದ್ರೌಪದಿ ಕೈಯ್ಯಾನ ಒಂದ ಅಗಳ ಉಂಡು ಸಂತೃಪ್ತನಾಗ್ತನಲ್ಲ ಹಾಂಗ ಇದೊಂದು ತುತ್ತು ಸಾಯೊ ತನಕ ಮರೆಯೊದಿಲ್ಲವ್ವ' ಅಂತ ಹೇಳಿದ್ದಷ್ಟ ತಡ ಮುಸುರಿ ಕೈನ ಮುಕುಳಿ ಹಿಂದ ಪ್ಯಾಂಟಿಗೆ ಒರಿಸಗೊಂತ ಮನಿಕಡೆಗೆ ಓಟನ..
ಹಿಂಗ ಮಣ್ಣೇತ್ತಿನ ಅಮವಾಸೆ ಸುನೆ ಹೆಂಡ್ತಿ ತವ್ರಿಗೆ ಹೋಗಿದ್ಲು ಇಂವಾ ಮತ್ ಪೋನ ಮಾಡಿದ ದೋಸ್ತ ನಿಮ್ ತಂಗಿ ಊರಿಗೆ ಹೋಗಿ ವಾರಾತೊ ಯಾಕೊ ಮನಿಯಾನ ಅಡುಗಿನ ರುಚಿ ಬರುವಲ್ದೊ ಅಂದ
ನಾನಂದೆ ಬರೋದಿಲ್ಲ ದೋಸ್ತ..ಬರೋದಿಲ್ಲ ಇನ್ನೊಂದ ವಾರ ತಡಿ ನಾನಾ ಹೋಗಿ ತಂಗ್ಯಮ್ಮನ್ನ ಕರಕೊಂಡ ಬಂದ ನಿನ್ ಕಡೆ ಬಿಟ್ಟ ಬರ್ತಿನಿ ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ಯಾ
ಇದು ಬಾಂಧವ್ಯದ ರಸಿಕತೆ

೨. ಬೇಸರ - ಮೊದ್ಲ ನಂ ಗಂಡ ಮಕ್ಳ ಗಿಡದಾನ ಮಂಗ್ಯಾ ಇದ್ಹಂಗ ಹೆಂಡ್ತಿ ತವ್ರಿಗೆ ಹೋಗ್ಯಾಳಂತಂದ ತಕ್ಷಣ ಅವತ್ತ ರಾತ್ರಿ ಏನೊ ಬೆಳಕ ಹರೆತನಾನು ಡಾಬಾದಾಗ ಟೆಂಟ್ ಎರಡನೆ ದಿನ ಸಾವಜಿ ಖಾನಾವಳಿ ಮೂರನೆ ದಿನಕ್ಕ ಭೀಮಾಂಬಿಕಾ ಖಾನಾವಳಿ ನಾಲ್ಕನೆ ದಿನಕ್ಕ ಬಾಯಿ ರುಚಿ ಇಲ್ಲ ರುಚಿ ಇಲ್ಲ

೩. ಸರ್ವಾಧಿಕಾರಿ- ಹೆಂಡ್ತಿ ಮ್ಯಾಲ ದೌಲತ್ತ ತೋರಸಿಲಿಕ್ಕಂತಂದ್ರ ನಮ್ಗ ಊಟ ಸೇರೊದರಿಲ್ಲ ನಾಕ ಬೈಗಳ ಬೈದ ಮ್ಯಾಲ ಗಂಟಲದಾಗ ಅನ್ನ ಇಳಿತಿರ್ತದ. ಏನ್ ಪಲ್ಯ ಮಾಡಿಲೆ ಇವನೌನ ಒಂದಕ್ಕರ ಉಪ್ಪಿಲ್ಲ ಖಾರಿಲ್ಲ ಒಂದಿಷ್ಟು ಕೊಬ್ರಿ, ಗುರಳ್ಳ ಪುಡಿ ಹಾಕಿ ಮಾಡಿದ್ರ ಏನ ನಿಮ್ಮಪ್ಪನ ಮನಿ ಗಂಟ ಹೊಕ್ಕಿತ್ತನ ದನಾನರ ತಿಂತಾವನಲೆ ಇಂತ ಖೂಳನ ಅಂದಾಗ
ಒಳಗಿಂದ ಒಂದ ಮಾತ ಬರ್ತದ್ರಿ ಅದ್ಕ ನಿಂಗ ಹಾಕಿನ
ನಮ್ಮಪ್ಪಗ ಹೇಳಿದ್ಯಾ ಇನ್ನೊಂದ ಎರಡ ವರ್ಷ ಬ್ಯಾಡ ತಡಿಯೊ ಮಾರಾಯ ಅಂತಂದ್ರು ಕೇಳಲಿಲ್ಲ ಇಂತಾಕಿನ ತಂದು ಜೋಡ ಮಾಡಿದ ನಂಗ
ಹ್ಞೂಂ.. ಮತ್ತೆ ನಾವೆನರ ಕರಿಯಾಕ ಬಂದಿದ್ವೇನು ಮನಿತನಕ ಇಪ್ಪತ್ತ ಊರ ಅಡ್ಯಾಡಿ ಕೊನಿಗೆ ಬಂದಿದ್ರೆಲ್ಲ ಮಾಡ್ಕೊಂಡ್ರ ಈಕಿನಾ ಮಾಡ್ಕೊತಿನಿ ಅಂತಂದ
ಆವಾಗ ಮಂಕ ಬಡದಿತ್ತಲೆ, ಇವಾಗ ಆಗಿದ್ರ ಲಕ್ಷ ಲಕ್ಷ ರೂಪಾಯಿ ವರದಕ್ಷಿಣೆ ಎಂಟೆಂಟ ತೊಲಿ ಬಂಗಾರ..
ಹೌದಪ್ಪ ಜೊಕಮಾರ ಕೊಡ್ತಿದ್ರ ನಿನ್ಗ, ಹದಿನೈದ ದಿನದ್ದ ಹೋತ್ತಾತ ಕಾಂತಾರ ಸಿನಿಮಾಕ ಕರ್ಕೊಂಡ ಹೋಗಂತಂದ
ಅಂದ ತಕ್ಷಣ ಗಂಟಲನ್ನ ಕ್ಯಾಕರಿಸಿ ಸರಿಮಾಡಿಕೊಂಡು
ಒಂದು ಕವನ ಹೇಳಿ ಬಿಡೊದು
ಎಷ್ಟರ ಸೆಡವು ನನ್ ಮ್ಯಾಲೆ
ಮುಡಿಗೆ ತೊಡಿಸ್ಲೇನ ಮಲ್ಲಿಗೆ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆ ಮೇಲೆ
ಆ ಮೊಗದಾಗ ಮಲ್ಗಿ ನಗುನ ಇಲ್ಲಂತಂದ್ರ
ನಾ ಹ್ಯಾಂಗರ ಬದುಕಿರ್ಲ್ಯಾ ಈ ಭೂಮಿ ಮ್ಯಾಲೆ!!

ಹಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ|
ಬೆಚ್ಚಿ ನನ್ನ ಮ್ಯಾಲೆ ಒಗೆವಂಥ |ರಾಯರನ
ಬಿಟ್ಟಾಂಗ ಬರಲಿ ಹಡೆದವ್ವ ||

ಬಿಚ್ಚಿ ನನ್ನ ಮ್ಯಾಲೆ ಒಗೆವಂತ ಆಹಾ.... ಜೇನಿನ ಹುಟ್ಟಿಗೆ ಕೈ ಹಾಕಿ ಸೀದಾ ಬಾಯೊಳಗೆ ಹಿಂಡಿಕೊಂಡಂತಹ ಭಾವ. ಇದನ್ನ ನೆನಸಿಕೊಂಡರೆ ಹರೆದ ಹುಡುಗರು ಎರಡ ಹೆಜ್ಜೆ ಮುಂದಕ್ಕ ಹೋಗ್ತಾರ ನಮ್ಮಂತೊರು ಒಂದ ಹೆಜ್ಜಿ ಹಿಂದಕ್ಕ ಹೋಕ್ಕಿವಿ.
ಇಲ್ಲಿ ಒಂದು ಸಂದರ್ಭವನ್ನು ನಾನು ನೆನಪಿಸಿಕೊಳ್ಳ ಇಷ್ಟಪಡ್ತೀನಿ ಬಹುಶಃ ಆ ತಾಯಿ ಶಾರದೆ ಇಂತಹ ಗಳಿಗೆಯಲ್ಲಿ ಅಂತಹ ವಿಷಯವನ್ನು ನನಗೆ ನೆನಪು ಮಾಡಿಕೊಟ್ಟಿದ್ದಕ್ಕೆ ನಾನು ಧನ್ಯ ಎಂದುಕೊಳ್ಳುತ್ತೇನೆ. ೧೯೯೭-೯೮ ರಲ್ಲಿ ಗಂಗಾವತಿಯಿಂದ ೧೩ ಕಿ.ಮೀ ದೂರ ಇರುವ ಹೊಸಳ್ಳಿ ಕ್ಯಾಂಪನಲ್ಲಿ ನಾನು ಯಾವುದು ಒಂದು ಕಾರಣಕ್ಕೆ ೨೦ ದಿನ ಇದ್ದೆ ಈಗೀನ ಹಾಗೆ ಅಲ್ಲಿನ್ನೂ ಕಾಂಕ್ರೀಟ ಕಟ್ಟಡಗಳು ತಲೆಯೆತ್ತಿದ್ದಲ್ಲ. ಗುಡಿಸಲುಗಳೆ ಜಾಸ್ತಿ, ನಾನಿದ್ದ ಎದುರು ಗುಡಿಸಲಿನಲ್ಲಿ ಒಂದು ಕುಟುಂಬವಿತ್ತು ಇಬ್ಬರೆ ಗಂಡ-ಹೆಂಡತಿ ಅವರದ್ದು ಚಹಾದಂಗಡಿಯ ವ್ಯಾಪಾರ ಬೆಳಿಗ್ಗೆ ೫-೩೦ ಕ್ಕೆ ಆ ತಾಯಿ ಇಡ್ಲಿ ವಡೆ ಮತ್ತು ರಸಂ ನ್ನು ಮಾಡಿಟ್ಟಿರುತ್ತಿದ್ದಳು ಆ ಸುತ್ತಮುತ್ತಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರು ಬೆಳಿಗ್ಗೆ ಆರು ಗಂಟೆಗೆ ಎದ್ದು ಇವರ ಅಂಗಡಿಯಲ್ಲಿ ಇಡ್ಲಿ ವಡೆಯನ್ನು ತಿಂದು ಗದ್ದೆಗಳಿಗೆ ಹೊರಟುಬಿಡುತ್ತಿದ್ದರು ಎಂಟು ಗಂಟೆಯೊಳಗೆ ಮಾಡಿದ ಎಲ್ಲ ತಿಂಡಿ ಖಾಲಿಯಾಗಿಬಿಡುತ್ತಿತ್ತು. ಮತ್ತೆ ತಿಂಡಿಯೇನಾದರು ಬೇಕಾದರೆ ಗಂಗಾವತಿಗೆ ಹೋಗಬೇಕಾಗಿತ್ತಿತ್ತು. ಆದರೆ ಇದಲ್ಲ ವಿಶೇಷತೆ ವಿಷಯ ಏನಪ್ಪಾ ಅಂದರೆ ಆಕೆಯ ಗಂಡ ಸಾಯಂಕಾಲ ಐದು ಗಂಟೆಗೆ ಸೈಕಲ್ ತಗೊಂಡು ಗಂಗಾವತಿಗೆ ಹೋಗಿ ಅಲ್ಲಿಂದ ಕಿರಾಣಿ ಸಾಮಾನನ್ನು ತರುವುದರ ಜೊತೆಗೆ ಮಲ್ಲಿಗೆ ಹೂವನ್ನು ಹಿಡಿದುಕೊಂಡು ಬರುತ್ತಿದ್ದ, ರಾತ್ರಿ ಎಂಟು ಗಂಟೆಯನ್ನುವಷ್ಟರಲ್ಲಿ ಮಲಗಿಬಿಡುತ್ತಿದ್ದರು  ನಾನು ಹೋದ ದಿನದಿಂದ ಹಿಡಿದು ಬರುವ ಹಿಂದಿನ ದಿವಸದವರೆಗೂ ಇದನ್ನೆ ಗಮನಿಸುತ್ತಿದ್ದೆ ನನಗೆ ಕುತೂಹಲವನ್ನು ತಡೆದುಕೊಳ್ಳಲಾರದೆ ನಾನುಳಿದುಕೊಂಡಿದ್ದ ಗುಡಿಸಲಿನ ಮಾಲೀಕನ ಮಗನನ್ನು ಕೇಳಿಯೆಬಿಟ್ಟೆ. ಅವನೆಂದ ಇವತ್ತು ರಾತ್ರಿ ಆ ರಹಸ್ಯನ ನಿನಗೆ ತೋರಿಸ್ತೀನಿ ಅಂದ ನನಗೆ ಒಳಗೊಳಗೆ ಏನೇನೊ ಒಂಥರಾ
ಖುಷಿ ಮತ್ತು ಕಳವಳ ಈ ವಿಷಯವಂತೂ ಇಡಿ ಹಳ್ಳಿಗೆ ಗೊತ್ತಾದ್ದರಿಂದ ಯಾರು ಇವರ ಬಗ್ಗೆ ಅಷ್ಟೊಂದು ತಲೆಯನ್ನು ಕೆಡಸಿಕೊಳ್ಳುತ್ತಿರಲಿಲ್ಲ ನಾನು ಹೊಸಬ ನನಗೇನೊ ಕುತೂಹಲ. ಸರಿ ರಾತ್ರಿ ಎಂಟರ ಸಮಯ ನಮ್ಮ ಮಾಲೀಕನ ಮಗ ಗುಡಿಸಲಿನ ಬಾಗಿಲಿನ ಕಿಂಡಿಯಿಂದ ನನ್ನನ್ನು ನೋಡಲು ತಿಳಿಸಿದ ನಾನು ತುಂಬಾ ಮುಜುಗರದಿಂದಲೆ ನೋಡತೊಡಗಿದೆ.
    ಒಳಗಡೆ ಗುಡಿಸಲಿನಲ್ಲಿ ಇಬ್ಬರು ಊಟಕ್ಕೆ ಕುಳಿತುಕೊಂಡಿದ್ದರು. ಊಟವಾದ ನಂತರ ಅ ಅಜ್ಜ ಅಜ್ಜಿಯ ಭುಜವನ್ನು ಹಿಡಿದು ಮಂಚದ ಮೇಲೆ ಕುಳ್ಳರಿಸಿ ತಾನು ತಂದಂತಹ ಮಲ್ಲಿಗೆಯನ್ನು ಬಾಯಿಯಿಂದ ಹರಿದು ಎರಡು ಭಾಗ ಮಾಡಿ ಒಂದನ್ನು ಅಜ್ಜಿಯ ತುರುಬಿಗೆ ಮುಡಿಸಿ ಹಿಂದೆ ಸರಿದು ಅವಳ ಕಾಲಡಿಯಲ್ಲಿ ಕುಳಿತುಕೊಂಡು ಅಜ್ಜಿಯ ಪಾದಗಳೆರಡನ್ನು ತನ್ನ ತೊಡೆಯ ಮೇಲೆ ತೆಗೆದುಕೊಂಡು ಪೂಜೆ ಮಾಡಿ ಹೂವನ್ನು ಹಾಕಿ ಮತ್ತೆ ಆ ಪಾದಗಳನ್ನು ನೆಲಕ್ಕೆ ಸೋಕಿಸದೆ ಹಾಗೆ ಎತ್ತಿ ಹಾಸಿಗೆಯ ಮೇಲೆ ಇಟ್ಟು ಅಜ್ಜಿಯನ್ನು ಮಲಗಿಸಿ, ಸೊಳ್ಳೆಗಳನ್ನು ಓಡಿಸಲು ಹೊಗೆಯನ್ನು ಹಾಕಿ ನಂತರದಲ್ಲಿ ಮಂಚದ ಸುತ್ತ ಸೊಳ್ಳೆ ಪರದೆಯನ್ನು ಬಿಟ್ಟು ತಾನು ಕೆಳಗಡೆ ಮಲಗಿಕೊಂಡ ಇಂತಹ ದೃಶ್ಯ ಇಂದಿಗೂ ನನ್ನೆದೆಯಲ್ಲಿ ಅಚ್ಛಳಿಯದೆ ಉಳಿದುಬಿಟ್ಟಿದೆ. ಆಶಯ ನುಡಿಗಳನ್ನಾಡುವ ಸಂದರ್ಭದಲ್ಲಿ ಶ್ರೀಯುತರು ಹೇಳಿದ ಹಾಗೆ ನಾವೆಲ್ಲ ಪೂರ್ವ ಜನ್ಮದಲ್ಲಿ ನಿಜವಾಗಲೂ ತಪಸ್ಸನ್ನು ಮಾಡಿರಬೇಕು. ಎಲ್ಲಿಯ ಗಂಗಾವತಿ!! ಎಲ್ಲಿಯ ಕುಂದಗೋಳ!! ಎಷ್ಟೋ ವರ್ಷದ ಹಳೆಯ ನೆನಪು ಇಂದು ಇಲ್ಲಿ ನಾನು ಈ ಸಾಲುಗಳಿಗೆ ಸಂದರ್ಭಕ್ಕನುಗುಣವಾಗಿ ಹೇಳುವುದೆಂದರೆ ನನ್ನದು ದೊಡ್ಡ ಪುಣ್ಯವೆ.
   ಹಾಗೆ ನಾನು ನಮ್ಮಾಕಿಗೆ ಅಗಾಗ ಕಾಲೆಳೆಯಲು ಈ ಕೆಳಗಿನ ಸಾಲುಗಳನ್ನು ಹೇಳುತ್ತಿರುತ್ತೇನೆ.

ತಳಕ್ಯಾಡಿ ನುಳಿಕ್ಯಾಡಿ
ನುಲಿಯತ್ತ ಬರಬೇಡ!!
ನಿಮ್ಮಪ್ಪ ಕೊಟ್ಟ
ಮಂಚದ ಕಾಲು ಗಟ್ಟಿಲ್ಲ!!
ಮುರಿದು ಬಿದ್ದರೆ...
ಎರಡನೆ ಮದುವೆಗಾಗಿ ನನ್ನಲ್ಲಿ
ಸಮಯವಿಲ್ಲ!!

    ಈ ಸಾಲುಗಳನ್ನು ಹೇಳಿದ ಮೇಲೆ ಗಂಡಸರ ಪಾಡು ಏನಾಗಿರಬೇಡ!!?

ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
ಲಿಂಗಕ ನೀರು ಎರೆದಾಂಗ| ಹಿಡಿ ಹೊಳೆಯ
ಗಂಗಪ್ಪ ಸಾಗಿ ಹರಿಧಾಗ ||

ಸಂಸಾರ ಅಂದಮೇಲೆ ಜಗಳ ಇದ್ದಿದ್ದ. ಜಗಳ ಮಾಡಲಾರ್ದ ಇರೋ ಸಂಸಾರದೊಳಗ ಸಾರನ ಇರೋದಿಲ್ಲ. ಅಂತ ಶಿವ ಪಾರ್ವತಿಯರ ಸಂಸಾರದೊಳಗ ಜಗಳಾಟ ಆಗ್ಯಾವು ಇನ್ನ ನಮ್ಮಂಥ ಸಾಮಾನ್ಯ ಜನರ ಬದುಕನ್ಯಾಗ ಜಗಳ ಇಲ್ಲಂತಂದ್ರ ಹ್ಯಾಂಗ ಅಂದ್ರ ನಾಹೇಳೊ ಅರ್ಥ ಬದುಕನ್ನ ಜಗಳ ಮಾಡ್ಕೊಂತ ಹೋಗಿಬಿಡ್ರಿ ಅನ್ನೊದಲ್ಲ ಮುನಿಸು ಒಂದಿಟು ಬಾಯಿ ಮಾಡ್ರಿ ಬಿ.ಪಿ. ಮತ್ತು ಮಾನಸಿಕ ಒತ್ತಡ ಕಮ್ಮಿ ಅಕ್ಕೈತಿ ಸಂತೋಷ ಸಮಯ ಇದ್ದಾಗ ಜೊತೆಗೆ ಹಂಚಿಕೊಂಡು ನಕ್ಕೊತ ಇರ್ರಿ ಆಯುಷ್ಯ ಹೆಚ್ಚಾಗ್ತದ ಅದ್ಕ ಶಿವ ತನ್ನ ನೆತ್ತಿ ತಣ್ಣಗಿರ್ಲೆಂತಂದ ಗಂಗಿನ ಕುಂದ್ರ್ಸಕೊಂಡು ಪಾರ್ವತಿನ ಪಕ್ಕಕ್ಕ ಕರ್ಕೊಂಡ ಕುಂತಾನ. ನಮ್ದು ನೆತ್ತಿ ತಣ್ಣಗಿರ್ಲೆಂತಂದ ಮತ್ತ ಇನ್ನೊಬ್ರನ್ನ ಕಟ್ಗೊಬ್ಯಾಡ್ರ ಮತ್ತ
ಒಬ್ರ ಹೆಂಡ್ರಿಗೆ ಎರಡು ಕ್ರೆಡಿಟ್‌ ಕಾರ್ಡ್ ಸಾಲೊದಿಲ್ಲ ಅಂತಾದ್ರೊಳಗ ಮತ್ತೊಬ್ಬಾಕಿನ ಕಟ್ಗೊಂಡ ಬಂದ್ವೆಂದ್ರ ತಲಿಮ್ಯಾಲ ಎ.ಟಿ.ಎಮ್ ಮೇಷಿನ್ ಇಟ್ಗೊಂಡ ತಿರಗ್ಯಾಡ
ಬೇಕಾಗ್ತದ.

ನಮ್ಮ ಮನಿಯಾಗನೂ ನಮ್ಮಾಕಿ ಯಾವುದಕ್ಕರ ಸಿಟ್ಟಾದ್ರ
ನಾನು ಹಿಂಗ ಹೇಳ್ತಿನ್ರಿ...

ಸಿಡಿದಾರ ಸಿಡಿಸಿಬಿಡು ನಿನ್ನ
ಮಾತಿನ ಸಿಡಿಮದ್ದು
!!ಕಣ್ಣೀರ ತುಂಬಿದ ಕಣ್ಣಿಲೆ
ನನ್ನ ನೋಡಬ್ಯಾಡ!!
ನೊಂದು - ಬೆಂದು ಬರೆಯಾಕ
ನಾ ಬೇಂದ್ರೆ ಅಜ್ಜ ಅಲ್ಲ

ಹಾಸಿಗೆ ಹಾಸಿಂದ ಮಲ್ಲಿಗೆ ಮುಡಿಯೆಂದ|
ಬೇಸತ್ತರೆ ಮಡದಿ ಮಲಗಿಂದ| ನನ ರಾಯ|
ತನ್ನ ನೋಡಿ ತವರ ಮನೆಯೆಂದ||

ಮಡದೀಯ ಬಡಿದಾನ ಮನದಾಗ ಮರುಗ್ಯಾನ |
ಒಳಗೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ ಹೆಚ್ಚೋ ||

ಬಹುಶಃ ಜಗತ್ತೀನಲ್ಲಿ ಅತೀ ಭಾವುಕ, ಅಂಜುಬುರುಕ, ಭಾವೋದ್ವೇಗ ಜೀವಿ ಯಾವುದಾದರು ಇದೆ ಅಂತಂದ್ರೆ ಅದು ಗಂಡು ಪ್ರಾಣಿ. ಹುಟ್ಟಿನಿಂದ ಹೆಣ್ಣು  ಸಾಯುವವರೆಗೂ ಗಂಡಿನ ನೆರಳಿನಲ್ಲಿಯೆ ಬದುಕಬೇಕೆಂಬುದನ್ನ ಸಮಾಜ ಶಾಸ್ತ್ರ, ಧರ್ಮ ಕಟ್ಟು ಪಾಡುಗಳೆಲ್ಲ ಹೇಳಿವೆ, ಹೇಳಿಕೊಂಡು ಬಂದಿವೆ ಹೇಳಿಕೊಂಡೆ ಸಾಗುತ್ತಿವೆ ಇದು ತಪ್ಪು. ಗಂಡೆ ಹುಟ್ಟಿನಿಂದ ಹಿಡಿದು ಸಾಯುವವರೆಗೂ ಹೆಣ್ಣಿನ ಆಶ್ರಯ, ಮಡಿಲು ಆಕೆಯ ಸಹಾಯ ಸಹಕಾರ ಧೈರ್ಯದಿಂದಲೆ ಬದುಕನ್ನ ಸಾಗಿಸುತ್ತಾನೆ ಮಗುವಾಗಿದ್ದಾಗ ತಾಯಿ ಮಡಿಲು ಯೌವ್ವನಾವಸ್ಥೆಗೆ ಮಡದಿ ಮುಪ್ಪಿನಲ್ಲಿ ಮಗಳು ಮತ್ತು ಮೊಮ್ಮಗಳ ಮೇಲೆ ಹೆಚ್ಚು ವ್ಯಾಮೋಹವನ್ನು ಹೊಂದುಕೊಂಡಿರುವಂತವನಾಗಿರುತ್ತಾನೆ. ಮಕ್ಕಳು ಬೆಳೆದು ಕಾಲೇಜೊ ಹಾಸ್ಟೆಲೊ ಎಂದು ದೂರದೂರಿಗೆ ಹೋದಾಗ ಆಗ ಹೆಂಡತಿ ತವರೂರಿಗೆ ಹೋಗಿ ಬರುತ್ತೇನೆ ಎಂದಾಗ ಮೇಲ್ನೊಟಕ್ಕೆ ಹ್ಞೂಂ ಎಂದರು ಒಳಗೊಳಗೆ ಒಂಟಿತನದ ಭಾವ ಕಾಡಲು ಶುರುವಾಗಿರುತ್ತದೆ.

ನಮ್ಮಾಕಿ ತವರಿಗೆ
ಹೊಂಟು ನಿಂತಾಗಲೆಲ್ಲ ಅವಳ
ಸೇರಗನ್ನು ಹಿಡಿದು ನಾನು
ಬೇಡಿಕೊಳ್ಳುತ್ತೇನೆ ಹೋಗಬೇಡ
ಹೋಗಬೇಡ!! ಎಂದು...
ಆಗ ನನ್ನಾಕೆ ಕಣ್ಣಲ್ಲೆ ಕಣ್ಣೀಟ್ಟು
ಕೈಯಲ್ಲಿದ್ದ ಲಗೇಜನ್ನು ಕೇಳಗಿಟ್ಟು
ಕೇಳುತ್ತಾಳೆ...ಹಂಗಿದ್ರ ಜಾತ್ರಿಗೆ ಸೀರಿ
ತರಾಕ ಸೇಡಜಿ ಅಂಗಡಿಗೆ ಯಾವಾಗ
ಹೋಗುನು...?
ನಾನೆನ್ನುತ್ತೇನೆ ೭ - ೧೫ ರ ಲಾಸ್ಟ್ ಬಸ್
ಮಿಸ್ ಆಕ್ಕೈತಿ ಜಲ್ದಿ ನಡಿ
ಬಸ್ ಸ್ಟ್ಯಾಂಜಡಿಗೆ ಹೋಗುಣು.

ಇಂತಹ ಒಂದು ಸುಂದರ ಅನುಭವದ ಮೂಟೆಯನ್ನು ಕಟ್ಟಿಕೊಡಲು ಅವಕಾಶ ಮಾಡಿಕೊಟ್ಟಂತಹ ಸುಶೀಲಣ್ಣ ಕುಂದರಗಿ ಹಾಗೂ ರವಿ ಕಮದೊಳ್ಳಿ ಮತ್ತು ಕುಂದಗೋಳ ಧಣಿ ಮತ್ತವರ ತಂಡಕ್ಕ ನನ್ನ ಅನಂತ ಶರಣು 🙏

Tuesday, January 24, 2023

ಭೈರಾಗಿ.!!



ಹಂಗೀನ ಬದುಕನ್ಯಾಗ
ಹುಚ್ಚು ಮಲ್ಲರ ಸಂಗ ಯಾಕೋ?
ಜೋಳಗಿ ಹಿಡದ ಹೊಂಟಿ ಹಿಡಿ 
ಪ್ರೀತಿ ಇಲ್ಲದ ಬದುಕಬಲ್ಲವೇನೊ? ಭೈರಾಗಿ!!

ಮಳ್ಳ ಮಾತ ಮಾತಾಡಿ
ಮಂದಿ ಮೋಸ ಮಾಡೊರ ಹೆಗಲ್ಯಾಕೋ?
ಎರಡ ಪದ ಬರಿತೀವಂದ್ರ, ಅದು ಓದೋನ
ಎದಿ ದುಃಖ್ಖಾನ ಕಮ್ಮಿ ಮಾಡಿದ್ರ ಸಾರ್ಥಕ
ಅಲ್ಲವೇನೊ? ಭೈರಾಗಿ!!

ಮುಕ್ಕಣ್ಣನಿಗೂ ಬಿಡದ ತಾಪ-ತ್ರಯ
ನಮ್ಮನ್ನು ಬಿಟ್ಟಿತು ಹೇಗೊ?
ಸಂಸಾರದ ಮಡಿಕ್ಯಾಗ ಕಷ್ಟ-ಸುಖಾನ
ಸಮನಾಗಿ ಕಡದು-ಕುಡದ  ವಿಷಕಂಠ
ನಾಗಬೇಕಲ್ಲವೇನೊ? ಭೈರಾಗಿ!!

ಸಾಸಿವೆ ಜ್ಞಾನವನ್ನು ಹೊಂದದೆ
ಇಲ್ಲಿಯವರೆಗೂ ನಡೆದು ಬಂದು
ಬಿಟ್ಟೆವಲ್ಲೊ?
ತಪಗೈಯ್ಯಬೇಕು, ಒಳಗಿನೆಲ್ಲದವ
ಕಳೆದುಕೊಂಡು; ಬದುಕಬೇಕು ಭೈರಾಗಿ!!
ಬದುಕಬೇಕು...

ಶರಣಪ್ಪ ಬೇವಿನಕಟ್ಟಿ 🙏🙏🙏🙏

ಕಡು ಕತ್ತಲೆ ಹಾದಿಯ ಕ್ರಮಿಸಲು ಕಾವ್ಯದ 
ನಂದದ ಕಂದೀಲ ಕೈಗಿತ್ತ ಆತ್ಮ ಬಂಧುವೆ 
ಬರಿದಾದ ಜೋಗಿ ಜಂಗಮನ ಜೋಳಿಗೆಗೆ
ಅಕ್ಷರಗಳ ಅರಿವ ಸುರಿದು ಹರಸಿದ್ದು ನಿಜವೆ 
ಇಗೋ ನಿನಗೊಂದು ನಮನ !

*****

ಅಪವಾದದ ಅವಮಾನದ ಗೀರು ಗಾಯಗಳಿಗೆ
ಮದ್ದರೆವ ಸಾಹಿತ್ಯ ಸಿದ್ಧ ಸೂತ್ರವ ತಿಳಿಸಿದೆ 
ನೋವಿಗೊಂದು ನಲಿವಿಗೊಂದು ಕವಿತೆ ಬರೆವಂತೆ
ಗೆಳೆತನದ ಮರದ ಮರೆಯಲೇ ನಿಂತು ಹರಸಿದೆ
ಇಗೋ ನಿನಗೊಂದು ನಮನ !

*****

ತಿಳಿದಿರುವುದು ಅಲ್ಪ ತಿಳಿಯಬೇಕಿರುವುದು ಕಲ್ಪ
ಹಿಂದೆ ತೆಗಳಿ ಮುಂದೆ ಹೊಗಳುವವರ ಬಿಡೋ ಹುಚ್ಚ
ನಿನ್ನ ದಾರಿ ನೀ ಹಿಡಿದು ಸಾಗುತಿರು ಎನುತಲಿ ಎಚ್ಚರಿಸಿ
ಹೇಳಿದೆ ಹೀಗಳೆಯುವವರ ಸಾಹಿತ್ಯ ಶಿವನೂ ಮೆಚ್ಚ
ಇಗೋ ನಿನಗೊಂದು ನಮನ !

✍🏻ರಾಜ್ ಆಚಾರ್ಯ
       ೨೪-೦೧-೨೦೨೩




Saturday, November 12, 2022

ಮಂಗಳಮುಖಿ ೧

ಮಂಗಳಮುಖಿ ೧
   ಪೇಟೆಗೆ ಹೋಗಿ ಹಾಲು ಮತ್ತು ತೋಟದಲ್ಲಿ ಬೆಳೆದಂತಹ ತರಕಾರಿಗಳನ್ನು ಮಾರಿಕೊಂಡು ಮರಳಿ ಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ನಿಂಗವ್ವನ ಗಂಡನ ಬೈಕ್ ಗೆ ಎದುರಿನಿಂದ ಬರುತ್ತಿದ್ದ ಲಾರಿಯ ನಿಯಂತ್ರಣ ತಪ್ಪಿ ಇವನ ಬೈಕ್ ಗೆ ಗುದ್ದಿದರ ಪರಿಣಾಮ ನಿಂಗವ್ವನ ಗಂಡನ ಪ್ರಾಣ ಸ್ಥಳದಲ್ಲಿಯೆ ಹೋಗಿಬಿಡುತ್ತದೆ. ಲಾರಿ ಚಾಲಕ ಬೈಕ್ ಸವಾರನಿಗೆ ಏನಾಗಿದೆ ಎಂದು ನೋಡದೆ ಲಾರಿಯನ್ನು ಮತ್ತಷ್ಟು ವೇಗವಾಗಿ ಓಡಿಸಿಕೊಂಡು ಹೋಗಿಬಿಡುತ್ತಾನೆ. 
ಆಗಿನ್ನೂ ಚಿಕ್ಕ ವಯಸ್ಸು ನಿಂಗವ್ವನದು. ಒಬ್ಬನೆ ಮಗ, ಮೂರು ವರ್ಷದವನಿರಬೇಕು. ತುಂಬು ಹರೆಯದ, ಇನ್ನೂ ಬದುಕಿನ ಸಿಹಿ-ಕಹಿಗಳ ಅನುಭವಿಸಿದ  ವಯಸ್ಸಿನಲ್ಲಿ ಈ ದುರ್ಗತಿ ಬಂದಿದ್ದನ್ನು ನೋಡಿ ಊರಿಗೆ ಊರೆ ದುಃಖದ ಮಡುವಿನಲ್ಲಿ ಮಿಂದಿತ್ತು. ತವರು ಮನೆಯವರು ಎಷ್ಟೋ ಒತ್ತಾಯವನ್ನು ಮಾಡಿದರು ತವರಿಗೆ ಕರೆದುಕೊಂಡು ಹೋಗಲು. ಕೊಟ್ಟು ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ನಿಂಗವ್ವ ಕಲ್ಲು ಬಂಡೆಯಂತೆ ಧೃಡ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಗಂಡ ಬಿಟ್ಟು ಹೋದಂತಹ ಮೂರುವರೆ ಎಕರೆ ತೋಟದಲ್ಲೆ ದುಡಿದು, ಮಗನನ್ನು ಬೆಳಸಿಕೊಂಡು, ಕಷ್ಟಾನೊ?, ಸುಖಾನೊ? ಬಂದದ್ದು ಬರಲಿ ಗಂಡನ ಮನೆ ಹೊಸ್ತಿಲನ್ನು ನಾನು ದಾಟಿ ಬರುವುದಿಲ್ಲ ಎಂದು ಹಿಡಿದುಕೊಂಡಿದ್ದ ಅವಳ ಹಠವೆ ಜಯಿಸಿತ್ತು. ನಿಂಗವ್ವನ ಗಂಡ ಅತ್ತೆ ಮಾವಂದರಿಗೆ ಒಬ್ಬನೆ ಒಬ್ಬ ಮಗ. ಇವರ ವಿವಾಹವಾದ ಎರಡು ವರ್ಷದಲ್ಲೆ ಅವರು ಶಿವನ ಪಾದವನ್ನು ಸೇರಿಕೊಂಡಿಬಿಟ್ಟಿದ್ದರು ಅನಾರೋಗ್ಯದಿಂದ. ಗಂಡನ ಮನೆಯಲ್ಲಿಗ ಇವಳು ಮತ್ತು ಹಾಲುಗಲ್ಲದ ಹಸುಗೂಸು ಮಾತ್ರ. ಈ ಕಾರಣಕ್ಕಾಗಿ ತವರು ಮನೆಯವರು ಇವಳನ್ನು ತವರಿಗೆ ಕರೆದುಕೊಂಡು ಹೋಗುವ ನಿರ್ಧಾರಕ್ಕೆ ನಿಂಗವ್ವ ತಣ್ಣೀರನ್ನು ಎರೆಚಿದ್ದಳು.  ಇವಳ ಈ ದಿಟ್ಟ ನಿರ್ಧಾರಕ್ಕೆ ಬೆಂಬಲವಾಗಿ, ಗಂಡನ ಪ್ರಾಣ ಸ್ನೇಹಿತನಾದಂತಹ ಮಲ್ಲಪ್ಪ ಮತ್ತು ಅವನ ಮಡದಿ ಶಾಂತವ್ವಳು ಬೆಂಗಾವಲಾದರು. ವಿಧಿ ಇಲ್ಲದೆ ತವರು ಮನೆಯವರು ನಿಂಗವ್ವಳನ್ನು ಗಂಡನ ಮನೆಯಲ್ಲಿಯೆ ಬಿಟ್ಟು ಹೋದರು. 
     ಕಾಲದ ಸುರುಳಿ ಸುತ್ತುತ್ತ ಬಂದಿತು. ಮಲ್ಲಪ್ಪನ ಬೆಂಬಲ, ಸಲಹೆಗಳೊಂದಿಗೆ ತೋಟವನ್ನು ನಳನಳಿಸುವಂತೆ ಮಾಡಿದಳು, ವರ್ಷಕ್ಕೆರಡು ಬೆಳೆಗಳು, ಕಾಲಕಾಲಕ್ಕೆ ಗೊಬ್ಬರ ನೀರನ್ನು ಕೊಡುತ್ತಾ ಬಂಗಾರದಂತಹ ಬೆಳೆಗಳನ್ನು ಬೆಳೆಯುವಲ್ಲಿ, ಬೆಳೆದ ಬೆಳೆ, ತರಕಾರಿಗಳನ್ನು ತಾನೆ ಖುದ್ದಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟವನ್ನು ಮಾಡಿಕೊಂಡು ಬರುತ್ತಾ ಜೊತೆಜೊತೆಯಲ್ಲಿ ಮಗನ ಆರೈಕೆ, ಅಭ್ಯಾಸದ ಕಡೆಗೂ ಗಮನವನ್ನು ಹರಿಸಿ, ಬೆಳೆಸಿ ಕಾಲೇಜಿಗೆ ಸೇರಿಸಿದ್ದಳು. ಮಲ್ಲಪ್ಪನ ಮಗನು ನಿಂಗವ್ವನ ಮಗನು ಒಂದೆ ವಯಸ್ಸಿನವರಾದ್ದರಿಂದ ಇಬ್ಬರನ್ನು ಜೊತೆಗೂಡಿಯೆ ಪದವಿಪೂರ್ವ ಶಿಕ್ಷಣಕ್ಕೆ ಹಳ್ಳಿಯಿಂದ ಸುಮಾರು ಇಪ್ಪತ್ತೆರಡು ಕಿ. ಮೀ. ದೂರವಿರುವ ಗಜೇಂದ್ರಗಡ ನಗರದ ಕಾಲೇಜಿನಲ್ಲಿ ಸೇರಿಸಿ ಬಂದಿದ್ದರು. 

ಎಲ್ಲವು ಸರಿಯಾಗಿಯೆ ನಡೆದುಕೊಂಡು ಹೊರಟಿತ್ತು. ಎಲ್ಲವೂ... ಸರಿಯಾಗಿ, ನಾವಂದುಕೊಂಡಂತೆಯೆ ನಮ್ಮ ಬದುಕಿನ ಹಾದಿ ಹಾಸಿದ್ದರೆ!!! ನರೇಂದ್ರ ಬುದ್ಧನಾಗುತ್ತಿದ್ದನೊ?
ಕಂಸ ಸಾಯುತ್ತಿದ್ದನೊ? ಗಾಂಧಿ ಮಹಾತ್ಮನಾಗುತ್ತಿದ್ದನೆ?
ತಿಮ್ಮಕ್ಕ ಸಾಲುಮರಗಳ ತಾಯಿಯಾಗುತ್ತಿದ್ದಳೆ? ವೀರಪ್ಪನ್ ಬಂದೂಕು ಹಿಡಿದುಕೊಳ್ಳುತ್ತಿದ್ದನೆ? ಕಾಡುವ ಹಸಿವಿಗೆ ಮಂಚವನೇರುವ ದುಸ್ಥಿತಿ ಅವಳಿಗೆ ಬರುತ್ತಿರಲಿಲ್ಲ ಬದುಕೆ ಹೀಗೆ ಅಲ್ಲವೆ? ಹಾದಿಯೊಳಗಿನ ಅದಾವ ತಿರುವು ನಮ್ಮ ಬದುಕಿನ ದಿಕ್ಕನ್ನೆ ಬದಲಿಸಿಬಿಡುತ್ತದೆಯೋ? ಯಾರಿಗೆ ಗೊತ್ತು. ಹಾಲೆಂದುಕೊಂಡದ್ದು ವಿಷವಾಗಿಬಿಡುತ್ತದೆ,  ಕೊಳವಾಗಿದ್ದದ್ದು ಕೆಸರಾಗಿಬಿಡುತ್ತದೆ, ಕಲಿಸಿಟ್ಟ ಅಗುಳು ಹಳಸಿ ಹೋಗುತ್ತದೆ. ಹೀಗೆ ತುಂಬು ಚಂದಿರನ ಪ್ರತಿರೂಪವನ್ನೆ ಹೋಲುತ್ತಿದ್ದಂತಹ, ಹೆಂಗಸರು ಮುಟ್ಟಿದರೆ ಮಾಸಿ ಹೋಗುವವನೇನೊ? ಎಂಬಂತಹ ಮೈ ಬಣ್ಣ, ನಕ್ಕರೆ ಪೂರ್ಣಿಮೆಯ ಬೆಳಕನ್ನು ನಿವಾಳಿಸಿ ಒಗಿಯಬೇಕೆನ್ನುವಂತಹ ಸೆಳೆತ ಇಂತಹ ಸ್ಪುರದ್ರೂಪಿ ಶಶಿಕಾಂತನ ಯೌವ್ವನದ ಹಾದಿಯು ಒಂದು ತಿರುವನ್ನು ಕಂಡಿತು. 
ಮಲ್ಲಪ್ಪನ ಮಗ ನಾಗರಾಜನಿಗೂ ಗೊತ್ತಿರಲಿಲ್ಲ, ಕಾಲೇಜ್ ಬಿಟ್ಟ ತಕ್ಷಣ ಒಂದರ್ಧ ಗಂಟೆ ನಾಗರಾಜನನ್ನು ಬಸ್ ನಿಲ್ದಾಣದಲ್ಲಿಯೆ ಕೂರಿಸಿ, ಶಶಿಕಾಂತನು ಎಲ್ಲಿಗೂ ಹೋಗಿ ಬರುತ್ತಿದ್ದನು. ಬರುವಾಗ ಮಾತ್ರ ಅವನ ಮುಖ ಸೇಬು ಹಣ್ಣಿನ ಕೆಂಪು ಬಣ್ಣದ ಹಾಗೆ ರಂಗೇರಿರುತ್ತಿತ್ತು. ನಾಗರಾಜ ಈ ವಿಷಯವನ್ನು ಎಷ್ಟು ಕೇಳಿದರು ಶಶಿಕಾಂತನು ಒಂದು ದಿನವು ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ ' ಟೈಂ ಬರ್ಲಿ ತಗೊಳ್ಲೆ ಮಗ್ನ ಆವಾಗ ನಿಂಗ ಎಲ್ಲಾ ಗೊತ್ತಾಕೈತಿ' ಎಂದು ಊರ ಬಸ್ಸನ್ನು ಹತ್ತಿ, ಹಳ್ಳಿಯನ್ನು ತಲುಪುವವರೆಗೂ ಮೊಬೈಲ್ ನಲ್ಲಿ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಲೆ ಇರುತ್ತಿದ್ದ.


ರಾತ್ರಿ ಎಂಟೂವರೆಯಾಗಿತ್ತು, ಮಲ್ಲಪ್ಪನು ಅದೆ ತಾನೆ ಊಟವನ್ನು ಮಾಡಿಕೊಂಡು ಬಂದು ಜಗುಲಿಯ ಮೇಲೆ ಕುಳಿತುಕೊಂಡಿದ್ದನು. ಮಡದಿ ಶಾಂತವ್ವ ವಿಳ್ಯೆದೆಲೆ ತಟ್ಟೆಯನ್ನು ತಂದು ಗಂಡನ  ಮುಂದಿಟ್ಟಳು. ಸಣ್ಣಪ್ಪನು ಒಂದೆರಡು ಎಲೆಗಳನ್ನು ತೆಗೆದುಕೊಂಡು ತೊಟ್ಟನ್ನು ಚಿವುಟಿ ಒಗೆದು,  ಬಲಗೈ ಹೆಬ್ಬರಳಿನಿಂದ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವನ್ನು ಗೀರಿಕೊಂಡು ಎಲೆಗಳಿಗೆ ಸವರಿ, ಒಂದೆರಡು ಅಡಿಕೆ ಹೋಳುಗಳನ್ನು ಮತ್ತು ಒಣ ಕೊಬ್ಬರಿಯ ತುಂಡೊಂದನ್ನು ಮುರಿದಿಟ್ಟುಕೊಂಡು ಎಲೆಯನ್ನು ಮಡಿಚಿ, ಬಾಯೊಳಗೆ ಹಾಕಿಕೊಂಡು ಜಗಿಯತೊಡಗಿದನು. ಹತ್ತು ನಿಮಿಷ ಕಳೆಯಿತು , ಎದುರು ಮನೆಯಿಂದ ನಿಂಗವ್ವ ಮೈ ತುಂಬಾ ಸೆರಗನ್ನು ಹೊದ್ದುಕೊಂಡು ಬಂದಳು 'ಯಣ್ಣಾ ಊಟಾಯ್ತಾ?, ಅತ್ತೆಮ್ಮ ನಿಂದು'  ಕೇಳುತ್ತ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡು ಶಾಂತವ್ವಳ  ಹತ್ತಿರಕ್ಕೆ‌ ಬಂದು ನಿಂತಳು. ಮಲ್ಲಪ್ಪನೆಂದರೆ ಎಲ್ಲಿಲ್ಲದ ಭಯ, ಭಕ್ತಿ, ಗೌರವವಲ್ಲದೆ ಸ್ವಂತ ಅಣ್ಣನಿಗಿಂತಲೂ ಒಂದು ಕೈ ಮೇಲೆಯೆ ಎನ್ನುವಂತಿದ್ದ ನಂಬಿಕೆ.

ನಿಂಗಪ್ಪ ಬಾಯಲ್ಲಿ ತುಂಬಿಕೊಂಡಿದ್ದ ವಿಳ್ಳದ ರಸವನ್ನು ಕಟ್ಟೆಯಾಚೆಗೆ ಉಗಿಯುತ್ತಾ, 'ನಿಂದೂಟ ಆತನವಾ?'
'ಹ್ಞೂಂ' 
'ಮತ್ತೇನವ ಸಮಾಚಾರ, ಬೆಳಿಗೆ ಹುಳಾ ಬಿದ್ದಾವಂತ, ಆ ಹಿತ್ಲಮನಿ ಸೀನ್ಯಾಗ ಹೇಳಿನಿ, ಹೊತ್ತಾರೆನೆ ಹೋಗ್ಬಿಟ್ಟು ಬೆಳಿಗೆಲ್ಲಾ ಎಣ್ಣಿ ಹೊಡ್ದಬಿಟ್ಟ ಬಂದ್ಬಿಡಂತ ಹೇಳಿನಿ'.
'ಹಂಗಾ ಆಗ್ಲಾಳಣ್ಣ' ಸೋತ ಧ್ವನಿಯಲ್ಲಿ ಮಾತನಾಡಿದಳು.
ಅವಳ ಮಾತಿನಲ್ಲಿ ಗೆಲುವಿಲ್ಲದಿರುವುದನ್ನು ಕಂಡುಕೊಂಡ ಮಲ್ಲಪ್ಪನು, ಮುಂದೆ ತುಂಬಿಟ್ಟಿದ್ದ ಚರಿಗೆ ನೀರನ್ನು ಎತ್ತಿಕೊಂಡು ಬೀದಿಯ ಪಕ್ಕಬಂದು, ಬಾಯಲ್ಲಿ ಹಾಕಿಕೊಂಡಿದ್ದ ವಿಳ್ಯದೆಲೆಯನ್ನು ಉಗುಳಿ, ಚರಿಗೆ ನೀರಿನಿಂದ ಬಾಯಿಯನ್ನು ತೊಳೆದುಕೊಂಡು, ಮರಳಿ ಕಟ್ಟೆಯ ಮೇಲೆ‌ ಕುಳಿತುಕೊಂಡು ಗಂಭೀರವಾಗಿ ಮಾತನಾಡಲು ಗಂಟಲನ್ನು ಕೆಮ್ಮಿ ಧ್ವನಿಯನ್ನು ಸರಿಪಡಿಸಿಕೊಂಡು ಎರಡು ನಿಮಿಷ ಸುಮ್ಮನಿದ್ದು, 'ಹೇಳವಾ ಏನರ ಬ್ಯಾರೆ ಮಾತಾಡೋದೈತನು?'
'ಅದು ಊರಿಂದ ಅಣ್ಣಯ್ಯ ಬೆಳಿಗ್ಗೆ ಪೋನ್ ಮಾಡಿದ್ದ'
'ಏನಂತ?'
'ಮಗ್ಳ ಸುಮವ್ವಗ ಗಂಡ ನೋಡಾಕ್ಹತ್ತಾರಂತ'
'ಹೌದಾ? ಆಗ್ಲೆ ಲಗ್ನ‌ ಮಾಡುವಷ್ಟ ಬೆಳ್ದ ಬಿಡ್ತಾ ಆ ಹುಡ್ಗಿ, ಇವನೌನ್ ಅಲ್ಲ ಬೆ ಮೊನ್ ಮೊನ್ನೆ ಶಾಣಬಸಪ್ಪನ ಜಾತ್ರ್ಯಾಗ ಲಂಗಾ ದಾವಣಿ ಹಾಕೊಂಡ ಓಡಾಡ್ತಿದ್ದ ಹುಡ್ಗಿ ಅದು. ಅದಕ್ಕ ಲಗ್ನಾನ? ಹಂಗವ್ವಾ.. ಹೆಣ್ಮಕ್ಳಂದ್ರ ನಿಲಗೇರಿ ಗಿಡ ಇದ್ದಂಗ ಪುರುಪುರು ಅಂತಂದ ಬೆಳ್ದ ನಿಂತ ಬಿಡ್ತಾವು, ನಮ್ಗ ಒಂದು ಹೆಣ್ಣಿಲ್ಲ, ಇದ್ದಿದ್ರ ಇಷ್ಟೊತ್ಗೆ ನಾನು ನೀನು ಅಜ್ಜಾ ಅಜ್ಜಿಯಾಗಿ ಮೊಮ್ಮಕ್ಳನ ಆಡಿಸಿಕೊಂತ ಕುಂದ್ರಬೇಕಾಗಿತ್ತ ನೋಡ್ವಾ, ಹ್ಞೂಂ.. ಮದ್ವಿ, ಮಕ್ಕಳು, ಮೊಮ್ಮಕ್ಳು ಹಿಂಗಾ ಕಣ್ಮುಚ್ಚಿ ಕಣ್ ತೆಗಿಯೊದ್ರಾಗ ಎಲ್ಲಾ ಆಗಿ ಹೋಗಿ ಬಿಡ್ತಾವು. ಹೊಟ್ಟಿ-ಬಟ್ಟಿಗೆ ಕಮ್ಮಿ ಇರ್ಲಿಲ್ಲಂತಂದ್ರ ದಿನಾ ಹ್ಯಾಂಗ ಹ್ವಾದವು ಅನ್ನೋದ ತಿಳಿಯಂಗಿಲ್ಲ ನೋಡ್ವಾ. ಮತ್ತೇನೀಗ ಇಲ್ಲೆ ಎಲ್ಲೇರ ಗಂಡ ನೋಡ್ಬೇಕಂತನು?'
ಅಷ್ಟೊತ್ತು ಸುಮ್ನಿದ್ದ ನಿಂಗವ್ವ, ಬಾಯಿಗೆ ಸೀರೆ ಸೇರಗನ್ನು ಹಿಡಿದು ಬಿಕ್ಕಳಿಸಿ ಅಳತೊಡಗಿದಳು.
'ಯಾಕ ನಮ್ಮವ್ವ, ಏನಾತು' ಶಾಂತಾಳು ನಿಂಗವ್ವನ ಭುಜಕ್ಕೆ ಕೈ ಹಾಕಿ ತಬ್ಬಿಕೊಂಡು ಕೇಳಿದಳು.
ನಿಂಗವ್ವ, ಕಣ್ಣೀರನ್ನು ಒರೆಸಿಕೊಳ್ಳುತ್ತಾ,
'ಮನ್ಯಾಗ ಎದಿಯುದ್ಕ ಬೆಳ್ದ ನಿಂತ  ಅಳಿಯಾ ಅದಾನ, ಅವನ್ನ ಬಿಟ್ಟ ಮತ್ ಹೊರ್ಗನೊರ್ ಯಾರಿಗೊ ಮಗ್ಳ ಕೊಡ್ತಾನಂತ, ನಾನೇನ ಸತ್ ಹೋಗಿನೇನು ಅವ್ರ ಪಾಲಿಗೆ, ಆಕಿನ್ನ ನಿನ್ನ ಮಗ್ಗ ತಗೊರವಾ ಅಂತ ಕೇಳಿದ್ರ ನಾನೇನ ಬ್ಯಾಡ ಅಂತಿದ್ನೇನು? ಕಳ್ಳು-ಬಳ್ಳಿಂತಂದ ಕಲಿಯೋದರ ಯಾವಾಗ? ಆಕಿನ್ನ ಈ ಮನಿ ಸೊಸಿ ಮಾಡ್ಕೊಂಡನೆಂತಂದ್ರ ಛಲೋ ಆಕ್ಕೈತಿಲ್ಲೊ? ಅವ್ರಿಗೆ ಮಗ್ಳು ಇಲ್ಲೆ ಕಣ್ ಮುಂದೆ ಇರ್ತಾಳ, ನಂಗೂ ಬ್ಯಾರೆ ಸೊಸಿನ ತಂದ ಆಕಿಗೂಟ ಏಗೊದ ತಪ್ಪತೈತಿ' ಎದೆಯೊಳಗಿದ್ದ ದುಗುಡವನ್ನೆಲ್ಲ ತೋಡಿಕೊಂಡಳು.
ವಿಷಯವನ್ನು ಅರಿತುಕೊಂಡ ನಿಂಗಪ್ಪನು 
'ಆತ ತಗೋಬೆ, ಇಷ್ಟಕ್ಕೆಲ್ಲ ಯಾಕ ಕಣ್ಣೀರ ಹಾಕಿ, ನಂ ಹುಡ್ಗೇನ ಕುರ್ಡನ, ಕುಂಟ್ನ ಅವ್ರ ಕನ್ಯೆ ಕೊಡೊದಿಲ್ಲ ಅನ್ನಾಕ... ನಾಳಿ ಮುಂಜಾನಿನ ಖುದ್ದ ಹೋಗಿ ಲಗ್ನದ ವಿಷಯನಾ ಮಾತಾಡಿಕೊಂಡ ಬರ್ತಿನಿ, ನಿನೇನ ಅದ್ರ ಬಗ್ಗೆ ಚಿಂತಿ ಮಾಡಾಕ ಹೋಗಬ್ಯಾಡ ಆತ'
ಹ್ಞೂಂ... ಎನ್ನುವ ರೀತಿಯಲ್ಲಿ ತಲೆಯನ್ನಾಡಿಸಿದಳು ನಿಂಗವ್ವ.

  ಬೆಳಿಗ್ಗೆ ಬೇಗ ಎದ್ದವನೆ, ನಿಂಗವ್ವಳ ತವರು ಮನೆಗೆ ಹೋಗಿ ಎಲ್ಲ ನಿಶ್ಚಿತಾರ್ಥ, ಮದುವೆಯ ಕುರಿತು ಮಾತನಾಡಿಕೊಂಡು ಬಂದು ನಿಂಗವ್ವಳಿಗೆ ತಿಳಿಸಿದನು. ಅಣ್ಣನು ತನ್ನ ಮಗಳನ್ನು ಶಶಿಕಾಂತನಿಗೆ ಕೊಡುವ ಮಾತನ್ನು ಕೇಳಿ ಎದೆತುಂಬಿ ಬಂದಿತ್ತು.  ವಾರದಲ್ಲಿ ಹೋಳಿಗೆ ಊಟ ಎನ್ನುವುದು ಖಾತರಿಯಾಯಿತು. ಇದೆ ಸಂದರ್ಭದಲ್ಲಿ ಮಲ್ಲಪ್ಪನ ಮಗ ನಾಗರಾಜನಿಗೂ ಪಕ್ಕದ ಹಳ್ಳಿಯಿಂದ ಹೆಣ್ಣನ್ನು ನಿಶ್ಚಿಯಿಸಿ ಎರಡು ಕಾರ್ಯಗಳನ್ನು ಒಂದೆ ದಿನ ಮಾಡಿ ಮುಗಿಸಿ, ಎರಡು ಮದುವೆಯನ್ನು ಒಂದೆ ಚಪ್ಪರದಲ್ಲಿ ಮಾಡಿ ಮುಗಿಸಿಬಿಡುವ ಯೋಚನೆಯೊಂದಿಗೆ, ಎಲ್ಲರೂ ಮದುವೆ ತಯಾರಿಯ ಕಾರ್ಯದಲ್ಲಿ ತೊಡಗಿಕೊಂಡರು. ಇಲ್ಲಿ ಶಶಿಕಾಂತನ ಮೊಗದಲ್ಲಿ ಮದುವೆ ಮದುಮಗನ ಕಳೆ ಇಲ್ಲದಿರುವುದನ್ನು ಯಾರೊಬ್ಬರು ಗಮನಿಸಲೆ ಇಲ್ಲ. ಮದುವೆಗೆ ಇನ್ನೊಂದು ವಾರ ಬಾಕಿ ಇದ್ದಾಗಲೆ,.