Monday, January 29, 2024

ಗಾಲಿಬ್...

ಗಾಲಿಬ್....

ಮುಗಿಲ ತುಂಬೆಲ್ಲಾ...‌‌ ಗರ್ಭ ಕಟ್ಟದ
ಮೋಡಗಳೆ ತುಂಬಿಕೊಂಡಿದ್ದರೆ ಏನು ಬಂದಿತು,
ಹುಳಿಯಾಡುವ ಮುನ್ನವೇ ಕಡೆದು
ಬೆಣ್ಣೆಯ ತೆಗೆಯದೆ ಹೋದರೆ ಏನು ಉಳಿಯುವುದು
ಗಾಲಿಬ್..
ಮಾತಿಲ್ಲದೆ...ಸುಮ್ಮನೆ ಗಾಳಿಗೆ ಚದುರಿ ಹೋಗುವ
ಮೋಡಗಳಂತೆ ದೂರ ಸರಿದು ಹೋದರೆ..!!
ಬಾಯಾರಿ, ಬಿರುಕು ಬಿಟ್ಟ ಎದೆಯ ಭಾವದ
ಬಯಲಿಗೆ ತಂಪನ್ನಾದರು ಎರೆಯುವುದಾದರು ಯಾರು?
ಇನ್ನೂ... ಹದಮಾಡದ ನೆಲದ ಮೇಲೆ
ವಿಷದ ಬೀಜವನ್ನು ಚೆಲ್ಲಿ ಹೋಗಿರುವರಲ್ಲ...
ಅದೆಂತಹ ಅದಮ್ಯ ನಂಬಿಕೆ ಅವರದ್ದು..!!


ಕಾಲ...ಕಾಲಭೈರವನ ಮಾತನ್ನೇ..ಕೇಳುವುದಿಲ್ಲ..!!
ಎಷ್ಟು ದೂರ ನಡೆದುಬರಲಿ ನಾನು...ನನ್ನ ಕಾಲೊಳಗಿನ
ಶಕ್ತಿಯು ಕುಂದುತ್ತಿದೆ ಗಾಲಿಬ್...
ಬಯಸಿದ್ದೆ ಮೂರು ಗಂಟು...ಬದುಕನ್ನೆ ಕಗ್ಗಂಟನ್ನಾಗಿ
ಮಾಡಿಬಿಟ್ಟರಲ್ಲ..!!
ಅರಿಷಿಣದ ದಾರವನ್ನು ಕುಣಿಕೆಯನ್ನಾಗಿಸಿ ನನ್ನೇದುರಿಗೆ
ಹಾಕಿರುವರು..!! ಕಣ್ಣುಮುಚ್ಚಿ ಕತ್ತನೊಡ್ಡುಬಿಡಲೆ..?
ಇಲ್ಲವೆ ಹೆದರಿ ಹಿಂದಕ್ಕೆ ಪಲಾಯನಗೈದುಬಿಡಲೆ...?
ಯಾವುದನ್ನು ಆಯ್ದುಕೊಳ್ಳಲಿ...

ಕಡ್ಡಿ ಮುರಿದ ಹಾಗೆ ಸಂಬಂಧವನ್ನು ಕಡೆದುಕೊಂಡು
ಹೋದರೆ ಹೇಗೇಳು....?
ಗಿಡದಿಂದ ಚಿವುಟಿದ ಮೇಲೂ ಹೂವಿನೆದೆಯಿಂದ
ಮಧುವು ಪಸರಿಸದೆ ಇರುವುದೇನು ಹೇಳು...?
ಗಾಲಿಬ್....
ಮುಂಬರುವ ಎಲ್ಲ ಬಂಜೆ ಸಂಜೆಗಳ ತೊಳಲಾಟಕ್ಕೆ
ಸುಂಕವನ್ನು ಕಟ್ಟುವವರು ಯಾರು..?
ಬುಲೆಟ್ ರೈಲಿನಲ್ಲಿ ಹೋದವರ ಹಿಂದೆ ಹೋಗಲು,
ನಾನು ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ
ಅವರು ಸಿಗುವರೇನು..?


ಯೋಚಿಸುತ್ತಾ ಕುಳಿತುಕೊಂಡುಬಿಟ್ಟರೆ ಯೌವ್ವನ..?
ಯೌವ್ವನ ಸುಡುಗಾಡಿನ ಗೇಟನ್ನು ದಾಟಿರುತ್ತದೆ..!!
ನಡುಗುವ ಕೈಗಳನ್ನು ಹಿಡಿದು, ನಡೆದಾಡಲು ಬಾರದ
ಮೊಣಕಾಲು ನೋವಿನೊಂದಿಗೆ ಕರೆದುಕೊಂಡು ಹೋಗಲು ಬಂದರೆ....!! ಏನು ಮಾಡಲಿ..
ಗಾಲಿಬ್....
ನಾನೇನು ಮಾವಿನಕಾಯಿಯ ಗೊಟ್ಟವೆ..? ಉಪ್ಪು,
ಎಣ್ಣೆ, ಅರಿಷಿಣದ ಮಸಾಲೆಯೊಂದಿಗೆ ಬೆರಸಿ ಡಬ್ಬದಲ್ಲಿ
ಹಾಕಿಟ್ಟು.. ಮಾಗಿದ ಮೇಲೆ ಉಣ್ಣಲು..!!
ಹೆಣ್ಣು-ಹಣ್ಣಾಗಿರುವೆ.. ಕೊಳೆತು ತಿಪ್ಪೆಯ ಸೇರಿ ಹಂದಿಯ ಬಾಯಿಗೆ ಆಹಾರವಾಗುವ ಬದಲು...
ಗಿಣಿ ಕಚ್ಚಿಬಿಟ್ಟ ಹಣ್ಣಂತಾದರೂ ನಾನಾಗಬೇಡವೆ..?

Friday, December 8, 2023

ಚುಟುಕು


ಅವನಂದು, ಹೂವನ್ನು
ಹಿಡಿದುಕೊಂಡು  ಬಂದಾಗಲೇ..
ನೋಡಿರಲಿಲ್ಲ..!!
ಇನ್ನೂ...ಇಂದವನ ಹೆಣದ
ಮೆರವಣಿಗೆಯನ್ನು ಹೇಗೆ...
ನೋಡಲಿ...!!
ಮುಡಿಯವ ಮಲ್ಲಿಗೆಯೆನ್ನೆ..
ನಿರಾಕರಿಸಿದವಳಿಗೆ..
ಪರಿಮಳವನ್ನು ಸವಿಯುವ
ಹಕ್ಕುಂಟೇನು...?

ಅಕ್ಷರ ಬಡವ‌ 🙏

Tuesday, November 21, 2023

ರಂಗೀ


ಇವಳೆಂಥಹ.....
ಹುಚ್ಚು ಹುಡುಗಿ..!!
ಮುಡಿಯುವ ಮಲ್ಲಿಗೆಯನ್ನು
ಮುಂಗೈಗೆ ಸುತ್ತಿಕೊಂಡು
ಆಘ್ರಾಣಿಸುತ್ತಿದ್ದಾಳೆ....
ಊರಾಚೆ ಎಸೆಯಬೇಕಿದ್ದ
ಈ ಮದ್ಯದ ದಾಸನನ್ನು
ತನ್ನ ಹೃದಯ 
ಮಂದಿರದೊಳಗಿಟ್ಟುಕೊಂಡು
ಆರಾಧಿಸುತ್ತಿದ್ದಾಳೆ..!!

ಅಕ್ಷರ ಬಡವ.

Friday, October 20, 2023

ಚುಟುಕು

ಜಾಸ್ತಿ ಕುಡಿಯಬೇಡ..!!!
ಆರೋಗ್ಯ ಹಾಳಾಗಿ 
ಹೋಗುತ್ತದೆಂದು...
ಇನ್ನಾರದ್ದೊ ಕೈಯಲ್ಲಿ
ಹೇಳಿ ಕಳುಹಿಸುತ್ತಿದ್ದಾಳೆ
ಆ ಹುಡುಗಿ..!!
ಮರೆತು ಹೋಗಿರಬಹುದೇನೊ...
ಅವಳಿಗೆ..
ಎದೆತುಂಬ.. ವಿರಹದ
ವಿಷವನ್ನೆ ಸುರಿದು
ಹೋದದ್ದು..!!

Wednesday, October 18, 2023

ಗೆಳೆಯ


ಕಳೆದು ಹೋದದ್ದನ್ನು
ಹಿಡಿದಿಟ್ಟುಕೊಳ್ಳಬಹುದೇನು?
ಕೈಯಲ್ಲಿ ಇರುವುದನ್ನು
ಚೆಲ್ಲಿ ಕೂರುವುದು
ತರವೇನೊ....
ಗೆಳೆಯ...
ಪ್ರತಿಯೊಂದು ನಿಲ್ದಾಣಕ್ಕೂ...
ಒಬ್ಬ ಮಾಲಿಯಾದರೂ..
ಇರುತ್ತಾನೆ, ನಿಜ.
ಇಲ್ಲಿ... ನೆನಪಿನ ಮೂಟೆಯನ್ನು
ನಾವೇ..ಹೊತ್ತು ಸಾಗಬೇಕು.!!
ಇಳಿಸುವವರಕ್ಕಿಂತಲೂ...
ಹೊರಸಿ ಹೋಗುವವರೆ
ಜಾಸ್ತಿ...!!

Thursday, October 12, 2023

ಚುಟುಕುಗಳು


ಉಣ್ಣುವ ಅನ್ನವನ್ನು
ಬಿತ್ತುವುದು
ಮಣ್ಣಿನಲ್ಲಿಯೇ... ಹಾಗಂತ,
ಅನ್ನದ ತಾಟಿನಲ್ಲಿ 
ಮಣ್ಣನ್ನು ಕಲಿಸಿ
ಉಣ್ಣಲು ಸಾಧ್ಯವೇನೊ..?
ಗೆಳೆಯ
ಮೋಸದ ಬರೆಗೆ ಒಮ್ಮೆ
ಬೆನ್ನನೊಡ್ಡಿದ್ದೆ ಸಾಕಿತ್ತು..
ಸುಟ್ಟ ಸಲಾಕೆಯು ತಣ್ಣಗಾಗುತ್ತದೆ
ನಿನ್ನ ಹಾಗೆ ಪದೇ...ಪದೇ...
ಕೆಂಡವನ್ನು ಕಾರುವುದಿಲ್ಲ..!!

ಭಗ್ನ ಪ್ರೇಮಿಯ ಕಥೆ
ಕಲ್ಲಿಗೂ.... ಬೇಡವಾಗಿ 
ವಿಘ್ನಗೊಂಡು
ಬಿದ್ದಿದೆ ನೋಡು
ರಂಗೀ...
ತೆಪೆ ಬಳೆಯುವವರ
ಕೈಯಲ್ಲಿ...ಈಗ
ಗುದ್ದಲಿ-ಕುಡಗೋಲು
ಸಿಕ್ಕಿದೆಯಲ್ಲ..!!

ನೀನಂದು ಹೇಳಿದ್ದು
ಇಂದು ನಿಜವಾಯಿತು
ನೋಡು ರಂಗೀ...
ಅವಳಿಗೆಲ್ಲಿ ಮನಸ್ಸಿದೆ..?
ಹುಗಿದ ಗೋರಿಯ ಮುಂದೆ
ಬಾಡಿ ಹೋಗುವ
ಹೂಗುಚ್ಛವನ್ನು ಇಟ್ಟಿರುವಳಲ್ಲ!!
ಇದೇ ಹೂವನ್ನು
ಆ ಸಂಜೆಗೆ ಒಪ್ಪಿ
ಅಪ್ಪಿಕೊಂಡಿದ್ದರೆ...

ಅವಳಿಗೆ ಹೇಳು...
ಹುಗಿದ ಗೋರಿಯ ಮೇಲೊಂದು
ಹೂವನ್ನಿಡುವ ಬದಲು
ಕಲ್ಲು ಬಂಡೆಯನ್ನು ಹೇರಿ
ಹೋಗೆಂದು
ರಂಗೀ...
ಇದ್ದಾಗ.. ತಲೆಯ ಮೇಲೆ
ಹಾಕುವ ಅವಕಾಶ
ಸಿಕ್ಕಿರಲಿಕ್ಕಿಲ್ಲ...!! ಇಲ್ಲಿ
ಹಾಕಿದರು.. ಯಾರಿಗೇನು
ಜವಾಬು ಕೊಡುವ
ಅವಶ್ಯಕತೆ ಬಿಳುವುದಿಲ್ಲ..

ಜಗತ್ತು....
ಮುಳ್ಳು-ಕಂಟೆಗಳ 
ಮಧ್ಯದಲ್ಲಿ ನಿಲ್ಲಿಸಿ...
ಹೂ ಹಾಸಿಗೆಯ ಮೇಲೆ
ನಡೆದು ಹೋಗೆನ್ನುತ್ತದೆ
ಜಾನೆಮನ್...
ನಡೆದು ಬಿಡುತ್ತೇನೆ ಬಿಡು..‌
ಹಾದಿಯ ತುಂಬ
ಕಂದಕಗಳನ್ನು ತೋಡಿದ್ದರು....
ತೋಡಿಲ್ಲವೆಂಬಂತೆ...

ಅಂಗೈಯೊಳಗಿನ 
ಹೂವಿನಂತೆ
ಕಾಪಿಟ್ಟುಕೊಳ್ಳುವೆನೆಂದು
ಮಾತನ್ನು ಕೊಟ್ಟಿದ್ದೆಯಲ್ಲ
ಗೆಳೆಯ...
ನೀನೆ ಹೇಳು...
ಬಳ್ಳಿಯಿಂದ ಹೂವುಗಳೇನೊ
ಕಳಚಿವೆ...
ಆಘ್ರಾಣಿಸುವೆಯೊ...?
ಉಸಿರ ಕಟ್ಟಿಸುವೇಯೊ...?

ಮೋಸ ಮಾಡುವ ಈ
ಜೋಡಿ ಕಣ್ಣುಗಳಿಂದ
ಪದೇ..ಪದೇ...
ನನ್ನನ್ನೆ..
ವಂಚಿಸುತ್ತಿರುವಳಲ್ಲ
ರಂಗೀ...
ಜಾಲಕ್ಕೆ ಸಿಕ್ಕಿಬಿದ್ದು
ಒದ್ದಾಡುವವನ
ನೋವಿನಲ್ಲಿ 
ಯಾರು ಪಾಲನ್ನು
ಬೇಡುವುದಿಲ್ಲ..!!

ಚುಟುಕು

ಆ ಬೀದಿಯ ಕೊನೆಯಲ್ಲಿ
ಯಾರೂ... ಹೋಗಬೇಡಿ
ಮುದುಕರು ಸಹ..!!
ಅಲ್ಲೊಂದು ಹೂವಿದೆ.
ನೋಡಿದವರು... 
ಮತ್ತೆ, ಸಾಮಾನ್ಯ 
ಬದುಕಿನಲ್ಲಿ
ಉಸಿರಾಡಲಾರರು..