Sunday, February 19, 2017

ಸೋತೆ

ನೀಶಸ್ತ್ರನಾದೆ
ನಿನ್ನೆದೆಗೆ ಪ್ರೇಮದ
ಬಾಣಗಳ ಹೂಡಿ ಹೂಡಿ
ಬತ್ತಳಿಕೆಯ ಬಾಣಗಳೆಲ್ಲವು
ಬರಿದಾದರೂಂದಾದರು
ನಾಟಲಿಲ್ಲ ನಿನ್ನ ಮನಕೆ

ನಿರ್ಲಜ್ಜನಾಗಿರುವೆ
ಎಷ್ಟು ಬಾರಿ ನಿನ್ನೆದುರು ಸೋತರು
ಮರಳಿ ಮರಳಿ ನಿನ್ನ ಗೆಲ್ಲಲು
ಇನ್ನೊಬ್ಬರು ನಿನ್ನನ್ನು ಆಕ್ರಮಿಸುವವರೆಗೂ
ನನಗಲ್ಲದೆ ಇನ್ನಾರಿಗೂ ನೀ ಶರಣಾಗದಂತೆ
ಬರುವೆ ನಿನ್ನೆದುರಿಗೆ ಪ್ರೇಮದಲಿ ಕಾದಾಡಲು

ನಿಶ್ಯಕ್ತನಾಗಿರುವೆ
ನೀನಾಡಿದ ಆ ಮೊನಚು ಬಾಣದ
ಮಾತಿನಿಂದ
ಎಂತಹ ವಸ್ತ್ರವ ಧರಿಸಿದ್ದರೂ ನಿನ್ನ
ನಿರಾಕರಣೆಯ ಮಾತಿನ ಬಾಣಗಳು
ಎದೆಯ ರಕ್ಷಾಕವಚವನೆ ಸೀಳಿ, ನುಗ್ಗಿ
ಗಾಯವ ಮಾಡಿಹವು
ವೇದನೆಯಿಂದ ನಿನ್ನ ಹೆಸರನ್ನೂ
ಕೂಗಲಾಗದಂತೆ

ನೀನಿಲ್ಲದೆ
ಬಾಳ ರಣರಂಗದಲ್ಲಿ ಸಾರಥಿಯಿಲ್ಲದ
ರಥವನೇರಿ ಯುದ್ಧಕ್ಕಿಳಿದಂತಾಗಿದೆ
ಒಲವ ಬಲವಿಲ್ಲದ ಬಾಹುಗಳಿಗೆ
ಭೀಮನ ಗಧೆಯನ್ನು ಕೊಟ್ಟಂತಾಗಿದೆ
ಬದುಕಿನ ಕಷ್ಟಗಳ ಕೋಟೆಯ ಛಿದ್ರಿಸಲು
ಬ್ರಹ್ಮಾಸ್ತ್ರವಿರದ ಯೋಧನಂತಾಗಿರುವೆ

ನೀನಗಲ್ಲದೆ
ಇನ್ನಾರ ಸ್ವಯಂವರದ ಹಾರಕೆ
ಕತ್ತನ್ನು ಬಾಗಿಸಲಿ
ರತ್ನಗಂಬಳಿಯ ಹಾಸಿ, ಮಯೂರ
ಪಲ್ಲಕ್ಕಿಯಲಿ ಹೊತ್ತು ಯಾವ ಚೆಲುವೆಯನು
ಮನದ ಮನೆಗೆ ತರಲಿ
ಅಂತರಂಗದ ಕೋಣೆಯ ತುಂಬ ನಿನ್ನ
ಭಾವಗಳ ಚಿತ್ರಗಳೆ ಚಿತ್ರಿತವಾಗಿರುವಾಗ
ನೀನಗಲ್ಲದೆ ಇನ್ನಾರಿಗೆ ಬಾಗಿಲವ
ತೆರೆಯಲಿ

ಸೋತೆ ಸೋತೆ ಸೋತೆ
ನಾ ನಿನಗೂ, ನೀನಿರದ ಬಾಳಿಗೂ

Friday, February 17, 2017

ಕರಗದು

ಕೂತುಂಡ್ರ ಹೊನ್ನು
ಕರಗತೈತಿ
ಉಂಡನ್ನ ಕರಗೊದಿಲ್ಲ

ದುಡುದುಂಡ್ರ ಉಂಡನ್ನ
ಕಸುವಾಕೈತಿ
ಹೊನ್ನು ಸವಿಯೊದಿಲ್ಲ

Tuesday, February 14, 2017

ಗುಂಡಿ ೪೪೨

ಹುಡಗ್ಯಾರು ಜಲ್ದಿ ಯಾವ ಗುಂಡಿಗೂ
ಬೀಳೊದಿಲ್ಲ ಯಾಕಂದ್ರ ಅವು ತಲಿ
ತಗ್ಗಿಸ್ಕೊಂಡು ಹೊಕ್ಕಾವು
ಗಂಡನ್ನೊವು ಮೊದಲ ಗುಂಡಿಗೆ
ಬಿದ್ದಿರ್ತಾವು
ಯಾಕಂದ್ರ ಇವು ಹುಡಗ್ಯಾರ್ನ
ನೋಡಕೊಂತ ಹೊಕ್ಕಿರ್ತಾವು

Sunday, February 12, 2017

ನೆನೆದರೆ

ಮಾವು ನೆನೆದರೆ ಸಾಕ
ಬಾಯ್ತುಂಬ ನೀರು
ಮಧು ಅಂತ ನಿನ್ನ ಹೆಸರ
ಕರದ್ರ ಸಾಕ ಎದಿ ತುಂಬಾ
ಜೇನ ಸುರಿತೈತಿ

ಮಲ್ಲಿಗೆ ನೆನೆದರೆ ಸಾಕ
ಅದರ ಘಮ ನೆನಪಿಗೆ
ಮುತ್ತಿಕ್ಕತೈತಿ
ಮೋಹಿನಿ ಅಂತ ನೆನಸಿದ್ರ ಸಾಕ
ನೀನಾಡಿದ ಮೋಹದ ಮಾತಗಳು
ನನ್ನನ್ನ ಕಟ್ಟಿ ಹಾಕ್ತವ ನೋಡ

ಭಾವಗಳಿಗೆ ರೂಪ

ಮನಸಿನ ಭಾವನೆಗಳನೆಲ್ಲವ
ಕಬ್ಬಿಣದ ಹಾಗೆ ಕಾಯಿಸಿ
ಬಡೆದು ರೂಪವ ಕೊಡುವಂತಿದ್ದರೆ

ಬೆಡಗಿ
ನಿನ್ನೆಲ್ಲ ಕಹಿ ನೆನಪುಗಳನು
ವಿರಹದ ಕುಲಾವಿಯ ಬೆಂಕಿಯೊಳು ಹಾಕಿ
ಕಾಯಿಸಿ, ಬಡೆದು ಬಡೆದು ಮತ್ತೆ ಮತ್ತೆ
ಮೆತ್ತಗಾಗುವಂತೆ ಕಾಯಿಸಿ
ನಿನ್ನೊಡನಾಟದ ಕ್ಷಣಗಳನೆಲ್ಲವ
ಬುನಾದಿಯ ಕೆಳಗೆ ತುಂಬಿ ಅದರ
ಮೇಲೊಂದು ಹೊಸ ಬದುಕನ್ನು ಕಟ್ಟಲು
ಸಲಿಕೆಯನ್ನಾಗಿಸುತ್ತಿದ್ದೆ

ಪ್ರೀತಿಯ ನೀರೆರೆದು ಬಾಳ ಕನಸಿನ
ಹೆಮ್ಮರವ ಪೋಷಿಸುವೆನೆಂದವಳು
ಮುಂಗಾರಿನ ಮಿಂಚಂತೆ ಮಿಂಚಿ
ಮರೆಯಾದೆ, ಆ ನಿನ್ನ ಹುಸಿ ಪ್ರೇಮದ
ಮರದ ರಂಬೆಗಳ ಕತ್ತರಿಸಲಿಕ್ಕೆ
ಒಂದು ಪರಶುವನ್ನಾಗಿಯಾದರೂ
ಪರಿವರ್ತಿಸುತ್ತಿದ್ದೆ

ಮುಳ್ಳಿನ ಗಿಡವ ನೆಟ್ಟು
ಮಲ್ಲಿಗೆಯ ಮಾತನು ಮಾತಾಡಿ
ಬಾಳ ಅಂಗಳದಲಿ ನೆಟ್ಟ ಸುಳ್ಳುಗಳ
ಮುಳ್ಳನ್ನೇ ತುಂಬಿಕೊಂಡ ಆ ಗುಲಾಬಿ
ಗಿಡದ ಬುಡವನೆಬ್ಬಲು
ಗುದ್ದಲಿಯನ್ನಾಗಿಸುತ್ತಿದ್ದೆ

ಭಾವಗಳು ಹೊಂದುತ್ತಿದ್ದರೆ ರೂಪ
ಸುಡಲು, ಕಾಯಿಸಲು, ಬಡೆಯಲು
ಹರೆಯಲು, ಕಳೆಯಲು, ತೊಳೆಯಲು
ಎಲ್ಲ ಕನಸುಗಳ ಕಟ್ಟಿ ಮೂಟೆ ಓಗೆಯುವಂತಿದ್ದಿದ್ದರೆ
ನೀನಿರದ ವಿರಹದ ನೋವು ನನಗೆ
ಕಾಡುತ್ತಿರಲಿಲ್ಲವೇನೊ?

Friday, February 10, 2017

ಕವಿತೆ ಮೂಡದಾಗಿದೆ

ಯಾಕೊ ಏನೊ
ಮನಸ್ಸು ನಿಲ್ಲದಾಗಿದೆ
ಹೇಗೋ ಎಂತೊ
ಕಲ್ಪನೆಗಳು ಕವಲೊಡೆಯುತಿವೆ
ನೆಲೆಗೊಳ್ಳದ ನೆನಪಿನ ಭಾವಗಳು
ಅಕ್ಷರಕ್ಕೆ ಸೆರೆ ಸಿಕ್ಕದೆ ಓಡುತಿವೆ

ಮಾಡಲಿ ಏನು ನಾ?
ಬರೆಯಲಿ ಇನ್ನೇನು ನಾ?
ಕನಸಲಿ ಕಂಡ ಕನಕದ ಗಂಟಂತೆ
ಕುರುಡನ ಮನದಲಿ ಮೂಡಿದ
ಕಾಮನಬಿಲ್ಲಿನ ಕಲ್ಪನೆಯಂತೆ
ಮೂಡಿಯು ಬರೆಯಲಾಗದೆ
ಬರೆದೂ ಪೂರ್ಣಗೊಳಿಸಲಾಗದೆ
ಚಡಪಡಿಸುತಿರುವೆ ಪದಗಳೆ

ನೆನಪುಗಳೆ, ನರಮಂಡಲದಲಿ ಹೊಕ್ಕು
ನರಗಳನೆಲ್ಲವ ಗಂಟು ಹಾಕಿ
ಯೋಚಿಸಿ ವಿವೇಚಿಸಿ ಬರೆಯಲನುಕೂಲವ
ಮಾಡಗೊಡದೆ, ತಲೆಚಿಟ್ಟು ಹಿಡಿದು
ಹಿಡಿದ ಹಾಳೆಯ ಹರೆದು, ಬರೆವ ಲೇಖನಿಯ
ಮುರಿದು, ಕುಳಿತ ಕೋಣೆಯೆ...
ಯಾವ ಪಾಪವಗೈಯದ ನಿರಪರಾಧಿಯನು
ಕಬ್ಬಿಣ ಸರಳುಗಳ ಹಿಂದೆ ತಳ್ಳಿದಂತೆ
ನನ್ನೆ ನಾ ಬಂಧಿಖಾನೆಯೊಳಗೆ
ಬಂಧಿಸಿದಂತಾಗಿದೆ

ನವಮಾಸಗಳ ಮಾಸವ ಹೊತ್ತು
ಪ್ರಸೂತಿಯ ನೋವನನುಭವಿಸುವ
ತಾಯಿಯ ಹಾಗೆ ಎಷ್ಟೆಂದು ಸಂಕಟಗೊಳ್ಳಲಿ
ವಾರಗಳೆರಡು ಕಳೆದರೂ ಒಂದೇ ಒಂದು
ಕಾವ್ಯಪದಗಳ ಪ್ರಸೂತಿಯಾಗುತಿಲ್ಲವಲ್ಲ
ನಿಮ್ಮನು ಬರೆದು ಓದುವ ಅಮೃತ ಘಳಿಗೆಯ
ರಸನಿಮಿಷಗಳೆ ಬರವಾಗಿವೆಯಲ್ಲ

ನನಗೆ ನೀವು ಮರಭೂಮಿಯ ನೀರಾಗದಿರಿ
ರಶ್ಮಿಯು ಸ್ಪರ್ಶಿಸದ ಕಾನನವಾಗದಿರಿ
ಆ ಬೆಳ್ಳಿ ಮೋಡಗಳ ಮಿಂಚಾಗದಿರಿ
ಹುಣ್ಣಿಮೆಗೆ ಮೀನುಗುವ ಮಿಂಚು ಹುಳುಗಳಾಗದಿರಿ
ಮೂಡಿರಿ ಮೂಡಿರಿ ಮೂಡಿರಿ
ನನ್ನಲೊಮ್ಮೆ

ಮೂಡಣದ ಮುಂಬೆಳಕು ಸಾಗರದಲೆಗಳ
ಚುಂಬಿಸುವ ಹಾಗೆ
ಮುಂಜಾವಿನ ಮಂಜು ತರುಲತೆಗಳ
ಅಪ್ಪುವ ಹಾಗೆ
ಉಕ್ಕಿದ ಹಾಲು ಗಡಿಗೆಯ ಕಂಟಕೆ
ಮುತ್ತಿಕ್ಕುವ ಹಾಗೆ
ಮನಸಿನ ದುಃಖಕೆ ಕಂಗಳೇರಡು
ಕೆನ್ನೆಯ ತೊಯಿಸಿದ ಹಾಗೆ

ಮೂಡಿರಿ ಮೂಡಿರಿ ಮೂಡಿರಿ