Friday, January 26, 2018

ನಿನ್ನ ಹಾಗೆಯೇ....

ಜೋಡು ಹಾಸಿಗೆಯಲಿ ನಿನ್ನೊಬ್ಬಳನೆ...
ಒಂಟಿಯಾಗಿಸಿ, ಬರುವಾಸೆಯು
ನನಗೂ... ಇರಲಿಲ್ಲ
ಎಷ್ಟೇ.. ಹೊರಳಾಡಿ.. ಕಣ್ಮುಚ್ಚಿದರೂ...
ಗಡಿಯಾರದ ಶಬ್ದವು... ಮಲುಗಲೆ ಬಿಡುತಿಲ್ಲ

ಸವಿ ನೆನಪುಗಳೊಂದಿಗೆ...ಹಿಂಡಿ
ಹಿಪ್ಪಿಕ್ಕುವ ಚಳಿಯ ತೊಳಿಗೆ ನಿನ್ನ
ಕೊಟ್ಟು ಬರಲು ನನ್ನಲಿ ಅದೇಷ್ಟು
ಸಂಕಟ.. ನಿನಗೂ ಗೊತ್ತು..!!! ಕ್ಷಣ..ಕ್ಷಣವು
ಅಣು...ಅಣುವನು ಸುಡುತಿಹುದು ನಿನ್ನದೆ ಮತ್ತು..!!!

ತೋಳ್ಬಂದಗಳಿ ಬಂಧಿಯಾಗಿಯಿಬ್ಬರು
ಕನಸಿನರಮನೆಗೆ ಕಿಚ್ಚು ಹಚ್ಚಿ...
ಅದರ ಕಾವಲ್ಲೆ... ಇರುಳನು
ಸ್ವರ್ಗವಾಗಿಸಿಕೊಳ್ಳುವ ಪರಿಯನ್ನು
ನಿನ್ನಿಂದಲೇ...ತಾನೆ ನಾ ಕಲಿತದ್ದು...

ಜಗಕೆ.. ಊರ್ಮಿಳೆ, ಸೀತೆಯರ ಒಂಟಿ
ವನವಾಸದ ವಿರಹವಷ್ಟೇ ಗೊತ್ತು...
ರಾಮ, ಲಕ್ಷ್ಮಣರೆದೆಯಲರಳುತಿದ್ದ
ಕನಸುಗಳು ಕಸುವಿಲ್ಲದೆ ಸಾಯುತ್ತಿದ್ದುದು...
ಯಾರಿಗೆ ತಾನೆ ಗೊತ್ತು..?

ನಿನ್ನ ಹಾಗೆಯೇ...
ನನ್ನದು ಹಾಗೆ ಇದೆ ಪರಿಸ್ಥಿತಿ..
ತಿಳಿನೀರ ಕೊಳದಲ್ಲಿ ಕಲ್ಲುಬಿದ್ದ ಹಾಗೆ...
ಮಾಗಿಯ ನಡುಕದಲಿ... ತಣ್ಣೀರಿನ ಕಲ್ಯಾಣಿಯಲಿ
ಮುಳುಗೆದ್ದ ಹಾಗೆ...!!!

ನಿನ್ನ ಮನದ ಭಾವಗಳನು...
ಆ ತುಂಬು ಚಂದಿರನಲ್ಲಾದರು ನೀ...
ತೊಡಿಕೊಳ್ಳಬಹುದು !!
ನನ್ತನುಮನದ ಉರಿಯ ಹೇಗಾದರು...
ತಣಿಸಿಕೊಳ್ಳಲಿ ನಾನು....?

ಚಂದ್ರವ್ವ ಸಾಹಿತ್ಯ ಸಂಜೆ

 ದಿ.೦೩-೦೨-೨೦೧೮ ಶನಿವಾರ ಸಂಜೆ ೬.೦೦ ಕ್ಕೆ ಮೈಸೂರು ಮಠದಲ್ಲಿ ನಡೆದ ೮೦ ನೇ ವಾರದ ಸಾಹಿತ್ಯ ಚಿಂತನಾಗೋಷ್ಠಿಯ ಉಪನ್ಯಾಸಕರಾಗಿ ಆಗಮಿಸಿದ್ದಂತಹ  ಶರಣಪ್ಪ ಕ. ಬೇವಿನಕಟ್ಟಿ ಗ.ಗಡ  ಇವರು ವ್ಯಕ್ತಿಯ ಒಂದು ಸಾಹಿತ್ಯದ ಹಸಿವು ಎಷ್ಟು ಉನ್ನತಮಟ್ಟದವರೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳುವುದರ ಮೂಲಕ   ಕಳೆದ ತಿಂಗಳು ಮುಂಬೈನಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಇವರ  'ಚಂದ್ರವ್ವ' ಎಂಬ ಕಥೆಗೆ ತೀರ್ಪುಗಾರರ ವಿಶೇಷ ಬಹುಮಾನವು ಲಭಿಸಿದ್ದು ಅದರ ವಿಷಯವಾಗಿ ನಾನು ನನ್ನ ಕಥೆ ಎಂಬ ತಮ್ಮದೆ ಕಥೆಯ ಹುಟ್ಟು, ಸಾರಾಂಶ ಮತ್ತು ವೈಶಿಷ್ಟ್ಯತೆ ಹಾಗೂ ತಾವು ಸಾಹಿತ್ಯದೆಡೆಗೆ ನಡೆದು ಬಂದ ಹಾದಿಯ ವಿವರವನ್ನು ಪ್ರಸ್ತುತಪಡಿಸಿದರಲ್ಲದೆ, ಸಮಾಜದಲ್ಲಿ ಕಿತ್ತು ತಿನ್ನುವ ಬಡತನಕ್ಕೆ ಸಿಕ್ಕ ಕುಟುಂಬವು ಕಾಮಾಂದನ ಕೈಗೆ ಸಿಕ್ಕ ಹೆಣ್ಣು ಪಡುವ ಪಾಡನ್ನು ಹೇಳುವ ಮೂಲಕ ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸಿದರು. ತದ ನಂತರದಲ್ಲಿ ಅತಿಥಿಗಳಾಗಿ ಆಗಮಿಸಿದ್ದಂತಹ ಜಗದೀಶ ಹುಲ್ಲೂರ ಅವರು ಕಥೆಯ ಕುರಿತು ವಿಮರ್ಶಾತ್ಮಕ ನುಡಿಗಳನ್ನಾಡುತ್ತ ಕಥೆಯು ಹೇಗಿರಬೇಕು, ಅದರಲ್ಲಿ ಬಳಸಿಕೊಳ್ಳುವ ಪದಗಳು, ಮುಕ್ತಾಯ ಹೇಗಿರಬೇಕು ಹಾಗೂ ಈ ಕಥೆಯಲ್ಲಿ ಕಥೆಗಾರರು ದಾನವನ್ನು ಮಾನವನ್ನಾಗಿಸಿ ಮಾನವನಿಂದ ಭಗವಂತನನ್ನಾಗಿಸುವ ಪರಿ ಹಾಗೂ ಇವರು ಬಳಸಿದಂತಹ ಶಬ್ದಗಳು, ನಿರೂಪಣಾ ಶೈಲಿ ಓದುಗರ ಕಣ್ತೆರೆಸುವಂತಿವೆ, ಕಥೆ ಓದುಗನನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ ಎಂದು ಅಭಿನಂದಿಸಿದರು.ಎ.ಕೆ.ವಂಟಿ ಕಾರ್ಯಕ್ರಮದ ಉಪಸ್ಥಿತಿಯ ಕುರಿತು ಮಾತನಾಡಿದರೆ, ಕಾವ್ಯ ಪರಿಚಯವನ್ನು ಕು. ಎ.ಟಿ.ಪೋಲಿಸ್ ಪಾಟೀಲ ನಡೆಸಿಕೊಟ್ಟರೆ, ಕವನ ವಾಚನವನ್ನು ಕು. ಕೆ.ಬಿ. ಮಾಳೋತ್ತರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಶರಣಮ್ಮ ಅಂಗಡಿ ಶಿ. ಕ.ಸಾ.ಪ.ಮಹಿಳಾ.ಅ.ಇವರು ಮಾತನಾಡಿದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಎಸ್.ಎ. ನರೆಗಲ್ ಅವರು ನಿರೂಪಿಸಿಕೊಟ್ಟರೆ, ಹನಮಂತಪ್ಪ ಭಜಂತ್ರೀ ಅವರು ವಂದನಾರ್ಪಣೆಯ ಮೂಲಕ ಕಾರ್ಯಕ್ರಮಕ್ಕೆ ತೆರೆಯನೆಳೆದರು. ಈ ಒಂದು ಯಶಸ್ವಿ ಕಾರ್ಯಕ್ರಮದಲ್ಲಿ
ಕೆ.ಎಸ್.ಗಾರವಾಡಹಿರೇಮಠ, ಕೆ.ಜಿ‌. ಸಂಕಟಿ, ಸಾಂಗ್ಲಿಕರ, ಎಮ್.ಎಸ್.ಮಕಾನದಾರ, ಲಲಿತಾ ಪವಾರ, ಎಚ್. ಎ ಚಿಂತಗುಂಟಿ ಹುಚ್ಚಪ್ಪ ಹಾವೇರಿ, ಚಂದ್ರಶೇಖರ ಮಾಡಲಗೇರಿ, ವಿನಾಯಕ ಕರ್ಣೆ,  ವಿಶ್ವಬ್ರಾಹ್ಮಣ ಮುಂತಾದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.

Tuesday, January 23, 2018

ದೇಹಕೆ ಬೆಲೆ


ಕಟ್ಟ ಬನ್ನಿರಿ... ಈ ಮಾಂಸ
ಮುದ್ದೆಗೆ ಒಂದಿಷ್ಟು ಬೆಲೆ...
ಕಂಡುಕೊಳ್ಳಬೇಕಿದೆ.. ನೀವು
ತೆತ್ತ ಬೆಲೆಯಲ್ಲಿ ನನ್ನ ನೆಲೆ...

ಮಂದ ಬೆಳಕಲಿ..ತೋರಿಸುವೆ
ನನ್ನೆಲ್ಲ..ಮೈ ಮಾಟ
ಬಳಸಿ ಉಂಡೆದ್ದು ತೇಗಿ
ನಡೆದುಬಿಡಿ ಹಬ್ಬದೂಟ

ಮೂಡುವುದೆಂದೊ...? ಬಾಳಲಿ
ಬೆಳ್ಳಿ ಕಿರಣ
ಹಗಲಿರುಳು ಸುಡುವ ಕೆಂಪು
ದೀಪಕೆ ಬದುಕಾಗುತಿಹುದು
ಹರಣ...

Monday, January 22, 2018

ಆರುವುದೆಂದು ಕಿಚ್ಚು

ಬಲಿಕೊಡಲೆತ್ತುವ ಕೈಗಳ ಬಲವು ಕುಂದಬಹುದು
ಕತ್ತರಿಸುವ ಆ ಉಕ್ಕಿನ ರಕ್ತದಾಹವದು ಇಂಗುವುದೇನು..?
ಉರಿದುರಿದು ಹೋಯಿತು ಧಗಧಗನೆ ನಡು ರಸ್ತೆಯಲಿ.. ಚಮ್ಮಾರನ ಹಸಿವಿನಾಸರೆಯ ಕಡು ಕಪ್ಪು ಗಾಲಿ..
ಉರಿಸಿದವರ ಹೊಟ್ಟೆಯ ಕಿಚ್ಚು ಆರಿತೇನು..?

ಮದುವೆ ಮುಂಜಿಯೆಂದು ಮಾಡಿ, ಮೊಮ್ಮಕ್ಕಳ
ಲಾಲಿಸಬೇಕಾದವಳ ತೊಡೆಯ ಮಡಿಲಲಿ..
ಮಗನ ಹೆಣವನು ಮಲಗಿಸುವಿರಲ್ಲಾ...!!!!
ಕೊಚ್ಚಿ...ಕೊಚ್ಚಿ...ಕೊಚ್ಚಿ...ಕೊನೆಯ ಘಳಿಗೆ
ತಾಯಿ ಮಗನ ಮುಖವನು ಕಾಣದಾ...ಹಾಗೆ

ಹೇಗೆ ನಿದ್ರಿಸಿಬಿಡುವಿರಿ ನೀವು...? ಅಶಾಂತಿಯ
ತೋಟಕೆ ರಕ್ತದ ಕಾಲುವೆಯನು ಹರಿಸಿ...
ಬಿಡುಗಡೆಯ ಭಾಗ್ಯಕೆ....ಹೆತ್ತ ಮಕ್ಕಳ ನೆತ್ತರ
ಹೊದ್ದು ಮಲಗಿದ ಪುಣ್ಯ ಮಣ್ಣಿದು...ಸಹಿಸಿಕೊಳ್ಳುವುದೆ ?
ಧರ್ಮ ದಾಳಕೆ ಸಿಕ್ಕು ಉರುಳಿತಿರುವ ತಲೆಗಳನು..!!!

ಉತ್ತರವಾದರೂ...ಇದೆಯಾ..? ಹೊತ್ತಿ ಉರಿದಿದ್ದು
ಹೊಟ್ಟೆ ಹೊರೆಯಲೆಂದು ಇಟ್ಟ ಡಬ್ಬಿಯ ಚಹಾದಂಗಡಿ
ಬೂದಿಯಾಯಿತಾ...? ಒಡಲೊಳಗಿನ ಬೆಂಕಿ..ಇಲ್ಲ
ಹುಡಿಯಾಯಿತು ಬಡವನ ಬಾಳು... ಧರ್ಮದ ಬೆಂಕಿಗೆ
ಸಿಲುಕಿ...ಹೊಟ್ಟೆ ತುಂಬಿದವರ ಅಟ್ಟಹಾಸಕೆ ನಲುಗಿ...

ಬೆಂಕಿ ತನ್ನ ತಾ ಸುಡದೆ ಮತ್ತೊಬ್ಬರನು ಸುಡದು...
ನೀವು ಹೊತ್ತಿಸಿದಾ ಜಾಣ ಕಿಚ್ಚು, ನಿಮ್ಮನು ಬಿಟ್ಟು
ಅಪ್ಪಿಕೊಂಡವರೆಲ್ಲವರನು ಸುಡುತಿಹುದು...
ಆರುವುದೆಂದು ಈ ಕಿಚ್ಚು...!!!!
ಮಣ್ಣಲಿ ಮುಚ್ಚಿ ಹಿಡಿಯುವುದೆಂದು ತುಕ್ಕು... ಮಚ್ಚು..!!!

Monday, January 15, 2018

ನಾನು ಜಾರುವವಳಲ್ಲ....

ನಾನೊಂದು ನಗುವಿನ ನಗವಿಲ್ಲದೆ
ಸೊರಗುತಿರುವ ಬಳ್ಳಿ...
ಬಿಟ್ಟು ಬಂದಿರುವೇನು ಹೊಟ್ಟೆಯ
ಹೊರೆಯಲು ನನ್ನಯ ಹಳ್ಳಿ

ನನ್ನೊಡಲಿನ ಹಸಿವಿನ ನಿಟ್ಟುಸಿರಿಗೆ
ಜೀವತುಂಬಿ ನಿಂತಿವೆಯನ್ನ..ಕೈಯಲ್ಲಿ ಉಬ್ಬಸಗಳು
ಊದಿದಷ್ಟು... ಹೆಚ್ಚಾಗುತಿದೆ ಹೊಟ್ಟೆಯೊಳಗೆ
ಹಸಿವೆಂಬ ಮರಳುಗಾಡಿನ ಕಾವು..

ಕೇಳುವರಾರು ? ಸುಡು ನೆತ್ತಿಯ ರಭಸಕೆ
ಮುಡಿದ ಮಲ್ಲಿಗೆಯ...ಬಾಡಿದ ಗೋಳು..
ಅರೆಯುವರಾರು ?  ನೆಲದ ಕೆಂಡಕೆ ಬೊಬ್ಬೆಯೆದ್ದು
ನೋವುಣ್ಣುತಿರುವ ಪಾದಗಳ ಅಳಲು...

ಬೆಲೆ ಕಟ್ಟುವರು...!!! ನನ್ನುಸಿರ ನುಂಗಿ
ನಿಂತ ಉಬ್ಬುಸುಗಳಿಗಲ್ಲ....
ಹಸಿವ ನಿಗಿಸಿಕೊಳ್ಳಲು ಬಂದಿರುವ, ನನ್ನ
ದೇಹದ ಉಬ್ಬು ತಗ್ಗುಗಳಿಗೆ....ಕಟ್ಟುವರು

ಹಸಿವಿದೆ...ಕಾಂಚಣದ ಝಣ..ಝಣದ
ಸದ್ದಿಗೆ ಜಾರುವ ಜಾರಿಣಿಯು ನಾನಲ್ಲ...
ಕೆಚ್ಚೆದೆಯಿದೆ... ಅನುದಿನವು ಹಸಿವಿನಿಂದ ಸತ್ತರೂ..
ಎದೆಯ ಮೇಲಿನ ಸೇರಗನು ಜಾರಿಸುವುದಿಲ್ಲ...

Wednesday, January 3, 2018

ಕೈ ಕೊಟ್ಟ ಮಾಂವ

ಅಯ್ಯೋ.. ದ್ಯಾವ್ರೆ..ಎಂತಾ ಮಾಂವನ ಕೊಟ್ಟಿ
ಅಂವ ತೋರ್ಸೊ ಪ್ರೀತಿ ಆಗೈತಲ್ಲೊ...ಖೊಟ್ಟಿ
ಕೊಪ್ಳ ಜಾತ್ರಿಗ ಹೋಗೊಣ ಅಂದಾವ ಕೊಟ್ಟಾನ ಕೈನ
ಅತ್ತು...ಕರೆದು ಯಾರ್ಮುಂದ ತೋಡಿಕೊಳ್ಲೆ..ಎದಿ ದುಃಖಾನ

ಇಳಿಹೊತ್ಗೆ ಬರ್ತಿನಂದ.. ಕತ್ಲಾದ್ರೂ ಬರಲಾರ್ದಾಂವ
ಬೆಲ್ಲದ ಮಾತ ಹೇಳಿ ಗಲ್ಲಕ ಬೆಲ್ಲದ ಮುತ್ತ ಗೆದ್ದಾಂವ
ಮೊಳ ಮಲ್ಗಿ ಮುಡಿಸಿ....ಮೊಗದಾಗ ಚಂದ್ರನ
ನಗುವಾ ಅರಳ್ಸಾಂವ
ಮಾತ ಮಾತಿಗೂ.. ಕೆನ್ನೆ ಹಿಂಡಿ ಕೆಂಪಗಾಗ್ಸಾಂವ

ಜೋಡೆತ್ತಿನ ಬಂಡಿ ಹೋಡ್ಕೊಂಡ ಹೋಗೊಣಂದಾವ
ಜೋಡಿ-ಕೂಡಿ ಜಾತ್ರಿ ಜೋಕಾಲಿ ಜೀಕುನಂದಾವ
ಕೈಯ ಬಳೆ, ಮುತ್ತಿನ ಸರ ಕೊಡ್ಸ್ತೀನಂದಾವ
ಸಂಜಿ ಮುಂದಾ..ಮಿರ್ಚಿ ಮಂಡಕ್ಕಿ ತಿನ್ಸ್ತೀನಂದಾವ

ಬಾರೋ..ಮಾಂವ ಮನಿಗೆ ರಾತ್ರಿ ಅಪ್ಪಗ ಹೇಳ್ತಿನಿ
ಒಂಟಿ ಕಾಲಿಲೆ ನಿಲ್ಲಿಸಿ ನಿನ್ನ ಜಾಗರಣೆ ಮಾಡಸ್ತೀನಿ
ವಾರಿಗ್ಯೋರ ಮುಂದ ನನ್ನ ಮರ್ಯಾದಿ ಕಳದೀದಿ..
ಜಾತ್ರಿ ತೋರ್ಸೊ ಕನಸಿಗೆ ತಣ್ಣೀರ ಸುರಿದೀದಿ..

ಈ ಜೀವಕೆ

ಬೈದರೇನು ನೀನು...
ಕಂಗಳು ನಿನ್ನನೆ ಹುಡುಕುವವು...!!
ಕಾಣದಿದ್ದರೆ ಅರೆ ಘಳಿಗೆ...
ತೊರೆಯಿಂದ ಹೊರಬಿದ್ದ
ಜೀವದಂತಾಗುವುದು ಮನವು !!!
ಎಷ್ಟಿದ್ದರೇನು ಗೆಳೆಯ ನನ್ನ ಮೇಲೆ
ನಿನಗೆ ಮುನಿಸು..
ಆ ಮುನಿಸಿನಿಂದಾದರೂ ಎರಡು
ಮಾತನಾಡೆಯಾ...?
ಸ್ವಾತಿ ಮಳೆಗೆ ಕಾದ ಚಿಪ್ಪಂತೆ...
ನಿನ್ನ ಮಾತಿನ ಮುತ್ತಿಗೆ ಕಾದು
ಕುಳಿತ ಈ ಜೀವಕೆ

Monday, January 1, 2018

ನಿನ್ನದೆ ಹೆಸರು...

ಓದಲಾಗದ...ಗ್ರಂಥವು ನೀನು
ನೆನಪಿಟ್ಟುಕೊಳ್ಳಲಾಗದ ಪದ್ಯವು ನೀನು
ಓದದೆ...ಮೊದಲ ಪುಟದಲ್ಲಿ ನಿನ್ನ
ಹೆಸರ ನಾ ಬರೆದಿಹೆ...

ಗೆಳೆಯಾ.....
ಹೇಳಲು ಅಧರಗಳು ಅದರುತಿವೆ...
ಮನಸಿದು ಮಾತ ಕೇಳದೆ ನಲಗುತಿದೆ...
ಬೆಸೆಯ ಬಾರೆಯಾ... ? ನನ್ನ ಹೆಸರಿನ
ಹಿಂದೆ ನಿನ್ನಯ ಹೆಸರನು....