Friday, November 30, 2018

ಶಾಯರಿ ೪೦೧

ಒಂಟಿ ಮಾಡಿದ
ಲೋಕದ
ನಂಟು ನನಗೇಕಿಗ
ಸಾಕಿ...
ಸಾಯಲಿಷ್ಟವಿಲ್ಲ...
ಮರೆತು ಮಲುಗಲಾದರು
ಸುರಿದುಬಿಡು ನನ್ನೆದೆಗೆ
ಹೂಜಿಯೊಳಗೆ
ಮಲಗಿದ ಮದ್ಯವನ್ನಾದರು
ಕಲಕಿ....

ಶಾಯರಿ ೪೦೨

ಒಂದೆ ಮಾತಿನಲ್ಲಿ
ಹೇಳಿದ್ದರು
ಸಾಕಿತ್ತಲ್ಲವೆ..
ಸಾಕಿ....
ಹೀಗೆ ಮೌನವಾಗಿದ್ದು
ಕ್ಷಣ..ಕ್ಷಣವು
ನನ್ನನು
ಕೊಲ್ಲುವ ಪಾಡು
ಅವಳಿಗೆ ಹಿತವಾಗಿತ್ತ

Wednesday, November 28, 2018

ಶಾಯರಿ ೪೦೩

ಮತ್ತೊಬ್ಬರ ಮತಿಯ
ಮದವೇರಿಸಿ....ಗೊರಲೆ
ತಿನ್ನುವ ಫಲಕಗಳ
ಪಡೆದುಕೊಳ್ಳುವ ಹುಚ್ಚು
ಹಂಬಲ ನನಗೇಕೆ
ಸಾಕಿ...
ಸಾಯುವವರೆಗೂ...
ಕೈ ಬಿಡದ, ಮತ್ತೇರಿಸುವ
ನಿನ್ನ ಮಧು ಬಟ್ಟಲೊಂದು
ಕೈಯಲ್ಲಿರುವಾಗ...

ಸಾಕಿ

ಎದೆಯಲ್ಲಿ ನೆಟ್ಟ ಪ್ರೀತಿಯ ಬಳ್ಳಿಯ
ಚಿಗುರನು... ಸದ್ದಿಲ್ಲದೆ, ನೋವಾಗದಂತೆ
ಚಿವುಟಿ ಹೋದಳಲ್ಲಳವಳು ಸಾಕಿ...
ಕ್ಯಾ ಪ್ಯಾರ ಕರ್ನೆವಾಲೊಂಕೊ ಇಸಿ...
ತರಹ ಕಿ ಸಜಾ ಕ್ಯೂಂ ಮಿಲ್ತಿ ಹೈ...
ಜಿಂದಾ ರಹ್ತೆ ಹೈಂ ಜರೂರು..
ತಡಪ್ನೆವಾಲೆ ಉನ್ಕಿ ಯಾದೊಂಕಾ
ಕತ್ಲ ಕರ್ನಾ ನಾ ಹೊತೆ ಹುಯೆ...

ಎದೆಯ ಗೂಡಿನಲ್ಲಿ ಕನಸುಗಳ
ಮೊಟ್ಟೆಯನಿಟ್ಟು... ಕಾವು ಕೊಡದೆ
ರೆಕ್ಕೆಬಿಚ್ಚಿ ಹಾರಿ ಹೋಗಿದೆಯಲ್ಲ ಸಾಕಿ
ನನ್ನೆದೆಯ ಹಕ್ಕಿ...
ಜಾಲ ಬಿಚಾಕೆ ಬೈಟ್ನೆಕೆಲಿಯೆ ಮೈ ಕೊಯಿ
ಹತ್ಯಾರ ನಹೀ ಹ್ಞೂಂ...
ಉಸೀನೆ ಬಿಚಡೆ ಹುಯೆ ಜಾಲ್ ಪೆ ಫಸ್ಕರ
ತಡಪ್ತಾ ಹುವಾ ನಾದಾನ ಪ್ರೇಮಿ ಹ್ಞೂಂ..

ಹನಿ..ಹನಿಯಾಗಿಯಾದರೇನು...?
ಬಟ್ಟಲು...ಬಟ್ಟಲುಗಳಾದರೇನು...?
ಲೆಕ್ಕವಿಡದ ಹೂಜಿ...ಹೂಜಿಗಳ ಮದಿರೆಯನ್ನೆ
ಕುಡಿದರೇನು ಬಂತು ಸಾಕಿ...
ಎದೆಯುರಿಯೆ ಆರದಿರುವಾಗ..!!!
ಪಿತಾ ಹ್ಞೂಂ ಜಾನಬೂಜಕರ್..
ಪಿತಾ ಹ್ಞೂಂ ಜಾನಬೂಜಕರ್...
ಕ್ಯಾ ಕರೂಂ...ಜಿನೆ ಮೆ ಕೋಯಿ ಧಮ್ ನಹೀ ಹೈ
ಮರ್ನೆ ಮೆ ಮುಝೆಕೋಯಿ ಘಮ್ ನಹೀ ಹೈ

ತಮ್ಮಾ ೧

ಮಾಡಿದ ಪಾಪಾ ಕಳ್ಕೊಳ್ಳಾಕ
ಸಾಕಷ್ಟ ನದಿಗಳದಾವಂದ ಮ್ಯಾಲ
ಪಾಪ ಮಾಡೊದೇನ ತಪ್ಪೊ ತಮ್ಮಾ...
ಮಾಡಿದ ತಪ್ಪನ್ನ ತಿದ್ಕೊಳ್ಳದ ಮಣ್ಣ
ಸೇರಿದ್ರ, ಬದುಕನ್ನ ಯಾವ ತಕ್ಕಡ್ಯಾಗಿಟ್ಟರ
ತೂಗ್ತೀಯೊ ತಿಮ್ಮ...

ತುಳ್ದ...ತುಳ್ದ ಗಳ್ಸಿದ ಕಾಸೆಲ್ಲ
ಕಬ್ಣದ ಪೆಟ್ಗಿ ಹೊಟ್ಟಿ ಸೇರ್ತಲ್ಲೊ ತಮ್ಮಾ..
ಗೊತ್ತಿಲ್ಲದ್ದೇನು ? ಹೊಟ್ಟಿ..ಬಟ್ಟಿ ಕಟ್ಟಿ
ದುಡ್ದ ಜೀವಾ ಅದು, ಸತ್ತ ಮ್ಯಾಲ ಕಟ್ಗಿ
ಕಪಾಟನ್ಯಾಗ ಮುಚ್ಗೊಂಡ ಹೋಗ್ತಾರು ತಿಮ್ಮ

ಮೂಲೋಕ ಗೆದ್ದವಂಗ ಮನ್ಯಾನ ಹೆಂಡ್ತಿನ
ಸಂಭಾಳ್ಸಾಕ ಆಗೋದಿಲ್ಲೊ ತಮ್ಮಾ...
ಎಷ್ಟ ದೇಶದ ಚುಕ್ಕಾಣಿ ಹಿಡದ್ರೇನಾತ, ಗಂಡನ
ಜುಟ್ಟು ಕೊನಿಗೆ ಹೆಂಡ್ತಿ ಕೈಯ್ಯಾಗ ಇರತೈತೊ ತಿಮ್ಮ

ಕಾಲ್ಕೆದರಿ ಕದನಕ್ಕ ಬಂದೊರೆಲ್ಲ ಕಾಲಕಾಲಕ್ಕೂ
ಉಳಿಲಿಲ್ಲ ನೋಡ್ತಮ್ಮಾ....
ಕಾಲನ ಹೊಡ್ತಕ್ಕ ಸಿಕ್ಕವ್ರು ಚರಿತ್ರೆಯೊಳಗಿನ
ಪುಟದಾಗ ಹೇಳ ಹೆಸರಿಲ್ದಂಗ ಅಳಸಿ ಹೋಗ್ಯಾರ
ನೋಡ್ತಿಮ್ಮಾ

Tuesday, November 27, 2018

ತಮ್ಮಾ

ಕೊಡ್ತಾರಂತಂದು ಹೆಗ್ಲಮ್ಯಾಲ
ಹೊತ್ಗೊಂಡ ಬಂದ್ಬಿಡೋದೇನೊ ತಮ್ಮಾ..
ಅದನ್ನ ಪಡೆಯೊ ಯೋಗ್ಯತೆನು
ನಿನ್ಹತ್ರ ಇರ್ಬೇಕಲ್ಲೊ ತಿಮ್ಮಾ...

ಪುಗ್ಸಟ್ಟೆ ಹೆಣ್ಣ ಸಿಗತೈತನಕೊಂಡು
ಮನಿಗೆ ಹೊತ್ಗೊಂಡ ಬಂದ್ಬಿಡೋದೇನೊ
ತಮ್ಮಾ...
ಜಾನ್ಕಿ...ಪಾಂಚಾಲಿ ಮೆಟ್ಟ ನೆಲ ಇದು...
ಸುಟ್ಟು ಬೂದಿಯಾಗಿ ಹೋದಿಯೊ ತಿಮ್ಮ

ಬೆವ್ರ ಹರ್ಸಿ ಬೆಳ್ಸಿದ ಬೆಲೆ ನಿನಗೇನ
ಗೊತ್ತೈತೊ ತಮ್ಮಾ...
ಅಪ್ಪಾ ಮಾಡಿಟ್ಟ ಹಾದರ ಹಣ್ದಾಗ
ಮಜಾ ಮಾಡೋರಾ ಭಾಳ ಮಂದಿ
ಅದಾರ ನೋಡ್ತಿಮ್ಮಾ...

ಮೂರು ಬಿಟ್ಟೊರು ದೇಶಾನ ಆಳಾಕ
ಹೊಂಟಾರೊ ತಮ್ಮಾ...
ಮೂರು ಮುಚ್ಕೊಂಡು ಮನಿಯಾಗ ಕುಂತೊರು
ಸಿಡಿದೆದ್ರ... ಇವ್ರ ಕೋಪದ ತಾಪಕ್ಕ ಸಿಕ್ಕ
ಸುಟ್ಟ ಬೂದಿಯಾಗ್ಹೊಕ್ಕಾರೊ ತಿಮ್ಮಾ..

ತಮ್ಮಾ ೨

ಜನಾ ಅದಾರು.. ನನ್ಹಿಂದ ಜನಾ
ಅದಾರು  ಅಂದ್ಕೊಂಡ ಹುಚ್ಚ ಕುದ್ರಿ
ಹಂಗಾ ಹಾರಾಡಬೇಡ್ಲೆ ತಮ್ಮಾ...
ಸತ್ತಾಗ, ಹೊತ್ಗಂಡ ಹೋಗೊ ಮುಂದ
ಹೊರು ಹೆಗ್ಲಗಳು ಸೈತ ಬ್ಯಾರೆ ಬ್ಯಾರೆ ಆಕ್ಕಿರ್ತಾವ್ಲೆ ತಿಮ್ಮ

ನಾ...ಕಟ್ಟಿದ್ದು... ನಾ ಗಳ್ಸಿದ್ದಂತಂದು
ಎದೆಯುಬ್ಬಿಸಿ ಬಿಗಬ್ಯಾಡ್ಲೆ ತಮ್ಮಾ..
ಮಣ್ಣಿಂದ ಹುಟ್ಟಿದ್ದು ಹೊಳ್ಳಿ ಮಣ್ಣಾ
ಸೇರ್ತೈತಿ ಅನ್ನೊ ಸತ್ಯ ನಿ ಮೊದ್ಲ ತಿಳ್ಕೊಂಡ
ಬಾಳೆ ಮಾಡ್ಲೆ ತಿಮ್ಮಾ...

ಜನ ಕಾಲ್ಕೆಳ್ಗ ಅದಾರು... ಅಂದ್ಕೊಂಡ
ಕಣ್ಮುಚ್ಗೊಂಡ ಕುಂದ್ರಬ್ಯಾಡ್ಲೆ ತಮ್ಮಾ...
ಮೈ ಮರ್ತೆಂದ್ರ...ಕಾಲೊತ್ತೊ ಜನಾನ
ನಾಳೆ‌ ಕುತ್ಗಿ ಹಿಸ್ಕತಾರೋ ತಿಮ್ಮ...

ನಮ್ಮವ್ವ

ಗಂಗಿಯೊಳಗ
ಮುಳುಗೆದ್ರ ಪಾಪ
ಕಳದ್ಹೊಕ್ಕೈತೇನೊ
ನಮ್ಮವ್ವ
ಅಂಗಿಯೊಳ್ಗಿನ
ಕಿಸೆಯಿಂದ ನಾಕಾಣೆ
ಧರ್ಮ ಮಾಡ್ಲಿಲ್ಲಂದ್ರ
ಪುಣ್ಯಾನರ ಹ್ಯಾಂಗ
ಹುಟ್ತೈತೊ
ನಮ್ಮವ್ವ

ಬಿಸೊ...ಬಿರುಗಾಳಿಗೆ
ಬಿದ್ದ್ಹೋಗ ಮರಕ್ಕ
ಸುತ್ತ ಹಾಕಿದ್ರೇನ
ಬಂತೊ
ನಮ್ಮವ್ವ
ಹೆತ್ತ ಜೀವಕ್ಕ
ಎರ್ಡ ಹೊತ್ತು... ತುತ್ತ
ಹಾಕದಿದ್ರ ಏನ
ಬಂತೊ ನಮ್ಮವ್ವ

ಹೊಟ್ಟೆ...ಬಟ್ಟೆ ಕಟ್ಟಿ
ಕುಡಿನ ಶ್ಯಾಣೆನ
ಮಾಡಿ...ಗೂಟದ
ಕಾರನ್ಯಾಗ ಅಡ್ಡಾಡುವಂಗ
ಮಾಡ್ಯಾರು
ನೋಡವ್ವ...
ಹಡ್ದ...ಬೆಳ್ಸಿದ
ಋಣಕ್ಕ...
ಸಾಕಲಾರ್ದ್ನ
ಆಶ್ರಮಕ್ಕ ಬಿಟ್ಟ
ಬರೊ ಇವ್ರ
ಶ್ಯಾಣೆತನಕ್ಕ
ಏನಂತ ಹೇಳ್ಬೇಕೊ
ನಮ್ಮವ್ವ

ನಮ್ಮವ್ವ

ತುಂಬಿದ ಸೇರ
ಒದ್ದ ಬಂದಾಕಿ
ತುಂಬಿದ ಮನಿನ
ಒಡ್ದಾಳಲ್ಲೊ
ನಮ್ಮವ್ವ
ಹಾಲುಕ್ಕಿಸಿ...
ಸುಖ ತುಂಬ್ತೀನಂದಾಕಿ..
ಮನಿ ಒಡೆಯೊ, ವಿಷದ
ಗಾಳಿನ....ಉಸಿರಾಳಲ್ಲೊ
ನಮ್ಮವ್ವ

ಎಷ್ಟ ಓದಿ..ಡಿಗ್ರಿ
ತಗೊಂಡ್ರೇನಾತ,
ಸಂಜಿತನ್ಕ ....
ಟಿ.ವಿ ಮುಂದ ಕುಂತ್ರ
ಏನ ಬಂತ
ನಮ್ಮವ್ವ...
ಕೈಯ್ಯಾಗ ಬಳಿ
ತೊಟ್ಟಾಕಿ...ಹೊಟ್ಟಿಗೆ
ತಿನ್ನೊ‌ ಅನ್ನಾನ
ರೊಕ್ಕಾ ಕೊಟ್ಟ
ತರ್ಸಿಕೊಂಡ ತಿನ್ನುದ್ರಾಗ
ಏನ ಸುಖ ಐತೊ
ನಮ್ಮವ್ವ

ಪೆಟ್ಗಿ ತುಂಬಾ...
ಬೆಳ್ಳಿ ಬಂಗಾರ ತುಂಬ್ಕೊಂಡ
ಬಂದೀನ ಅನ್ನೊ..
ದೌಲತ್ತು ಛಲೋ ಅಲ್ನೊಡದ
ಹೌದಲ್ಲವ್ವ...
ಹಿಂದ್ಕ ಹಂಡೆ ತುಂಬಾ
ಬಂಗಾರ ತಂದಾಕೀನ, ಇವತ್ತ
ನಿನ್ಮುಂದ.. ಹೊತ್ತ
ಕೂಳಿಗೆ ಕೈ ಚಾಚಿ
ಕೇಳುವಂಗಾಗೈತಿ
ಗೊತ್ತಾಯ್ತೇನವ್ವ

ನಮ್ಮವ್ವ

ಮಳಿ..ಮಳಿ..ಅಂದ
ಮುಂಗಾರು ಮಸಣ
ಕಾಣ್ತೋ...
ಕೇಳವ್ವ
ಹಿಂಗಾರಿ ಮಳಿನೂ ಇಲ್ಲ..
ಛಳಿನು ಇಲ್ಲ...
ಬಿತ್ತಿದ ಭಾಳೆ ಹಳಿಸಿ
ಹೊಂಟೈತಲ್ಲೊ
ನಮ್ಮವ್ವ

ಉತ್ತಿ...ಬಿತ್ತಿದ
ಬೆಳೆಗೆಲ್ಲಾ...
ಹುಳಾ ಬಿದ್ದ ಹೊಂಟಾವು
ನೋಡವ್ವ....
ಹೊಟ್ಯಾಗ.. ಹುಟ್ಟಿದ
ಹುಳುಗಳ ಬಾಯಿಗೆ
ಏನ್ ಮಣ್ಣ
ಸುರಿಬೇಕೊ...ಹ್ಯಾಂಗೊ
ನೀನೆ ಹೇಳವ್ವ

ಸಾಲದ ಭಾರಾನ
ಹೊತ್ತ...ಹೊತ್ತು...
ಹೆಗಲನ್ನೊವೊ
ಮೆತ್ತಗಾಗ್ಯಾವು
ಗೊತ್ತೆನವ್ವ...
ಭೂಮಿಗೆ ಭಾರ
ಅನ್ಕೊಂಡ, ಗೋಣಿಗೆ
ಕುಣ್ಕಿ ಹೊಸೆಯೊ
ಮುಂಚಾದ್ರು ಕೈ
ಹಿಡಿದೆತ್ತೊ...
ನಮ್ಮವ್ವ

ತಮ್ಮಾ

ಕಿಸೆ ತುಂಬ್ದೊರ ಮಂಚದ ಆಸೆ
ನಿನಗ್ಯಾಕ ಬಂತೊ ತಮ್ಮಾ...
ಕಂಡು..ಕಂಡು ಕಣ್ಮುಚ್ಚಿ ನಡೆಯೋರ
ಮುಂದ.. ಬಣ್ಣ ಹಚ್ಚಿ ಗೆಲ್ಲಾಕ
ಆಗ್ತದೇನೊ ತಿಮ್ಮ..

ಏನ್ ಬರೀತಿರಿ...ಅಂತ
ಅವ್ರೆದರು ನಿಂತು ನಿ, ಏನು ಕೇಳ್ಬ್ಯಾಡೊ ತಮ್ಮಾ...
ಊರೂರ ಅಡ್ಡಾಡಿ ಅವ್ರ ಹೊತ್ತ
ತರೋ ಬಿರ್ದು ಬಾವ್ಲಿಗಳನ್ನ ನೋಡ್ಕೊಂತ
ಸುಮ್ಕಿದ್ಬಿಡು ತಿಮ್ಮ...

ನಾಡ ಕಟ್ತೀವಿ...ನಾಡ ಕಟ್ತೀವಿ ಅಂದ
ನಾಡ ಕಟ್ಟೋರ
ನಡುನ ಗಟ್ಟಿಲ್ಲ ನೋಡ್ತಮ್ಮಾ....
ಸ್ವಾಭಿಮಾನಾನ ಇಲ್ಲಂದ ಮ್ಯಾಲ, ಏನ್
ಕಟ್ಟಿ, ಗುಡ್ಡ ಹಾಕಿದ್ರೇನ ಬಂತೊ ತಿಮ್ಮ.‌.

ಮುಖಕ್ಕ ಬಳ್ಕೊಂಡಿದ್ದ ಸಾಲ್ದಂತ
ನಾಲ್ಗಿಗೂ ಬಣ್ಣ ಹಚ್ಗೊಂಡಾರೊ ಕೇಳ್ತಮ್ಮಾ...
ಅವ್ರ ಆಡಿದ ಮಾತನ್ನ ನಂಬಿ ಕುಂತೆಂದ್ರ...
ಮುಲ್ಲಾನ ಓದ್ಗಿನೂ ಓದಲಾರ್ದನ, ಕತ್ತ
ಕೊಯ್ದ ಬಿಡ್ತಾರೊ ತಿಮ್ಮ...

ಹೊರಾಕ ಹೆಗಲ ಗಟ್ಟಿಯದಾವ ಅನ್ಕೊಂಡ
ಹೊತ್ತು ಊರೂರ ಮೆರವಣ್ಗಿ ಹೊಂಡಬ್ಯಾಡೊ
ತಮ್ಮಾ...
ನೂರ ಎಕರೆ ಹೊಲ ಬಿತ್ನಿ ಮಾಡಿ ಬಂದ್ರ ಏನಾತು
ಸಂಜಿಕ...ದನಾನ ಕೊಟ್ಗ್ಯಾಗ ಕಟ್ತಾರೊ ತಿಮ್ಮಾ...

ನಂಬ್ಕಿ ಅನ್ನೊ.. ಹಾಲಿನ ಮಡಕ್ಯಾಗ, ಸದ್ದಿಲ್ದಂಗ
ಹಲ್ಲಿ ಬಡ್ದ ಹಾಕೋರ ಅದಾರೊ ತಮ್ಮಾ...
ಕುಡ್ದ ಮ್ಯಾಲ ಗೊತ್ತಾಗೊದ... ಹಾಲೊಳಗಿನ
ಹಾಲಾಹಲದ ಕರಾಮತ್ತು. ಹ್ಯಾಂಗರ ನಂಬಬೇಕು
ಮಂದಿ ನಗುನ ಹಿಂದಿರೊ ಮಸಲತ್ತು
ಅರಿಯೊದಾದ್ರು ಹ್ಯಾಂಗ ನೀನದಿಯಲ್ಲ ಇನ್ನೂ ತಿಮ್ಮ..

Monday, November 19, 2018

ಶಾಯರಿ ೪೦೪

ಯಾವ ಧರ್ಮದವನೆಂದು
ಬಾಯ್ತಪ್ಪಿಯು
ಕೇಳಬೇಡ
ಸಾಕಿ....
ಮೇಲುಕೀಳುಗಳ
ಗೋಡೆಯೆ ನನ್ನ
ಪ್ರೀತಿಗಿಂದು
ಅಡ್ಡವಾದದ್ದು

Saturday, November 17, 2018

ನಮ್ಮವ್ವ

ಗಲ್ಲಿ.. ಗಲ್ಲಿಯೊಳಗು
ಜಾತಿಯ
ಝೆಂಡಾ ಕಟ್ಯಾರು
ನೋಡವ್ವ..
ಯಾವ ಝೆಂಡಾದ
ನೆರಳಾಗ ಕುಂತ್ರೇನ ಬಂತು..
ಮುಕ್ತಿಯನ್ನೊದ
ಸಿಗುವಲ್ದ ಆಗೈತೆಲ್ಲೊ
ನಮ್ಮವ್ವ

ಮೂಲಿ...ಮೂಲಿಗೊಂದು
ಗುಡಿ ಗುಂಡಾರ ಕಟ್ಟಿ
ದೀಪಾ ಹಚ್ಚ್ಯಾರ
ನೋಡವ್ವ
ಎದ್ಯಾನ ಗುಡಿನ
ಹಾಳ್ಗೇಡವಕೊಂಡ
ತಾವ ಕತ್ಲದಾಗ ಕುಂತಾರಲ್ಲೊ
ನಮ್ಮವ್ವ

ಸುರಿಯೊ ಮಳಿಗೆ
ಜಾತಿಲ್ಲಂತಾರ...
ಹರಿಯೊ ನದಿಗ್ಯಾಕ
ಹೆಸರಿಟ್ಟಾರು
ಹೇಳವ್ವ
ಬಿತ್ತೊ... ಬೆಳಿಗೆ
ಹೆಸರಿಡ್ತಾರು...
ಹಸಿಯೊ ಹೊಟ್ಟಿಗೆ
ಏನಂತ ಹೆಸರಿಡ್ತಾರೊ
ನಮ್ಮವ್ವ

Friday, November 9, 2018

ಅವಳೆಂದರೆ.....

ಅವಳೆಂದರೆ...
ಏನು ಹೇಳಲಿ ಸಾಕಿ...
ಅರ್ಥವಿಲ್ಲದಷ್ಟು ಇರುಳುಗಳಿಗೆ ಹೂವಾಗಿ,
ಎದೆಯತೊಗಲು ಹರಿದು ಹೋಗಿ.. ಕರುಳ
ಬಳ್ಳಿಗೆ ಹಾಲನಿಯ್ವವಳ್ಳೇನ್ಬಲೆ...?
ಹಗಲ ರವಿಗೆ ಬೆನ್ನ ಕೆಂಪಗಾಗಿಸಿ....‌ತೊಯ್ದ
ರವಿಕೆಯಲಿ ನಾಲ್ಕು ದುಡ್ಡನು ದುಡಿದು ತಂದವಳು,
ನಾಲ್ಕಾಣೆ..ಬಿಲ್ಲೆ ಕಟ್ಟಿದವನ ಬಡಿತಕ್ಕೆ ದಮ್ಮಡಿಯನೂ
ಸೋತು, ತಣ್ಣೀರನೆ ಕುಡಿದು ತಣ್ಣಗೆ ಮಲಗುವವಳೇನ್ನಲೆ..?

ಅವಳೆಂದರೆ...
ಹೇಗೆ ಬರೆಯಲಿ ಸಾಕಿ....
ತುಂಬು....ಸಾಗರದೊಡಲೆಲ್ಲಾ...ಉಪ್ಪೆ ತುಂಬಿಕೊಂ
ಡಿದ್ದರು... ಮುತ್ತು.. ರತ್ನಗಳ ಕೊಡುವುದಿಲ್ಲವೇನು..?
ಮಾನಸಿಕ, ದೈಹಿಕ, ನೋವೊ, ನಲಿವೊ, ಸಹ್ಯವೊ ಅಸಹ್ಯವೊ,
ಬೇಕು..ಬೇಡಗಳರ್ಥವನರಿಯದೆ...ಎದೆಯೊಳಗೆ,
ಧಗಧಗಿಸುವ ಜ್ವಾಲಾಮುಖಿಯನು ಅದುಮಿಕೊಂಡು..
ಮಣ್ಣಿನ ಋಣವ ತೀರಿಸಲು....ಶತೃಗಳ ಪಾಲಿಗೆ, ಬೆಂಕಿ ಕಿಡಿಗಳನೆ...ಕಾರುವ ಗಂಡೆದೆಯ ಭಂಟರನ್ನು ಹೆತ್ತು
ಕೊಡುವವಳ ಬಗ್ಗೆ.... ಬರೆದು ಬಿಡಲಿ ಹೇಗೆ
ಅಲ್ಪ ಮತಿಯಲಿ...

ಅವಳೆಂದರೆ....
ಹಾಡಿ ಹೊಗಳಿಬಿಡಲೆ ಸಾಕಿ....
ಹ್ಞೂಂ.....ಹ್ಞೂಂ....ಸಾಧ್ಯವೆ...ಇಲ್ಲ,
ಮನದಲ್ಲಿ ಸಾವಿರ ಕಲ್ಮಶಗಳ ತುಂಬಿಕೊಂಡು...
ಹೇಗೆ ಹೊಗಳಲಿ ನಾನವಳ ಸಾಧನೆಗಳ..
ಗಂಡು...ಗಂಡೆಂಬ ಅಹಂನ ರೆಂಬೆಯ ಕತ್ತರಿಸಲಾಗದೆ,
ಅವಳಬಲೆಯೆಂದು ಹಿಡಿದಿಟ್ಟುಕೊಂಡಿರುವ ಮುಷ್ಠಿಯನು
ಸಡಿಲಿಸದೆ..
ಕಕ್ಷೆಯ ಮುಟ್ಟಿ ಬಂದರು... ಮನೆಯ ಹೊಸ್ತಿಲನು ದಾಟಿಸಲು
ಹಿಂಜರೆಯುತ್ತಿರುವಾಗ.., ನಡು ರಾತ್ರಿಯ ಪಾಡು ಬೇಡ..!!!
ನಡು ಹಗಲಲ್ಲೆ ಎಸುಳೆಗಳ ಹುರಿದು ಮುಕ್ಕುವ..ಕೆಸರು
ಮನಸಿನ ಹೊಲಸನು ತೊಳೆದುಕೊಳ್ಳುವ ತನಕ..
ಹೇಗೆ ಹಾಡಿಬಿಡಲಿ ಕಿವಿಗವಡಿಚ್ಚುವ ವಾದ್ಯದಲಿ...
ಅರ್ಥವಾಗದ ಹುಳುಕು ಪದಗಳಲಿ...

ಅವಳೆಂದರೆ....
ಅವಳೆ ಸಾಕಿ... ಅವಳೆ...
ಮಧುವು..ಅವಳೆ, ಮತ್ತು ಅವಳೆ, ವಿಷವು ಅವಳೆ
ಅಮೃತವು ಅವಳೆ, ಲಾಲಿ ಹಾಡಿಸುವುದು ಗೊತ್ತು...
ಜೊಲಿ ಹೊಡೆಸುವುದು ಗೊತ್ತು.. ಸದ್ದಿಲ್ಲದೆ, ಮಣ್ಣಲಿ
ಮಲಗಿಸಿ... ಗೋರಿಯ ಮೇಲೊಂದು ನಗುವ ಹೂವೊಂದ
ನಿಡುವ ಕಲೆ ಅವಳಿಗೆ ಮಾತ್ರ ಗೊತ್ತು... ನನಗೇನು
ಗೊತ್ತಿಲ್ಲ ಅವಳೆಂದರೆ...ಹುಡುಕಬೇಕಿದೆ.., ಕಂಡುಕೊಳ್ಳಬೇಕಿದೆ, ಅರ್ಥ ? ಮಾಡಿಕೊಳ್ಳಬೇಕಿದೆ..
ಹರಿವ ನೀರಿನ ವೇಗ.... ಅರಿತುಕೊಂಡಷ್ಟು..ಅರ್ಥವಾಗದೆ
ಆಳಕ್ಕೆ ಕರೆದೊಯ್ಯುವ ಅವಳ ಮನದ ಸುಳಿಯನ್ನು
ಅರಿತವರಾರು... ಅವಳ ಪಾದಕ್ಕೆ ಶರಣಾಗದ ಹೊರತು.
ಅದನ್ನಾದರು ಕಂಡುಕೊಳ್ಳಬೇಕಿದೆಯಲ್ಲ.. ಶರಣಾಗತಿಯ
ಧೈರ್ಯವನ್ನು...

ಸಾಕಿ....
ಹಚ್ಚಿಟ್ಟುಬಿಡು ಒಂದು ದೀಪವನ್ನು ಈ ಬೆಳದಿಂಗಳಿರುಳಿಗೆ
ಹುಡುಕಿಕೊಂಡು ಹೊರಟುಬಿಡುವೆನೀಗಲೆ..
ಪದಪುಂಜಗಳಲಿ ಕಟ್ಟಿಕೊಡಲು..ಅವಳನ್ನು..
ಈ ಅಕ್ಷರ ಬಡವನ ಜೋಳಿಗೆಯಲ್ಲಿ ಪದಗಳಿಲ್ಲ,
ಅವಳರ್ಥೈಸಿಕೊಳ್ಳದ ಬಾಳಿಗೆ ನೆಮ್ಮದಿಯಿಲ್ಲ...

Thursday, November 8, 2018

ಶಾಯರಿ ೩೮೧

ಮದ್ಯವು...
ಕೊನೆಯ ಬಟ್ಟಲದ್ದೆ...
ಯಾದ್ದಾರೇನು
ಸಾಕಿ...
ಮತ್ತೇರಿಸದಿರುವುದೆ..

ಎಷ್ಟು..? ಯಾವಾಗ?
ಹೇಗೆ? ಸುರಿದೆಯೆಂಬುದರ
ವಿಮರ್ಶೆ ಏಕೀಗ...?
ಸುರಿಯುವವಳ
ಎದೆಯಲ್ಲಿ... ಬತ್ತದೆ
ಒಸರುತಿರುವ...
ಒಲವ
ಸೆಲೆಯೊಂದಿರುವಾಗ

Tuesday, November 6, 2018

ಶಾಯರಿ ೩೬೦

ಸಾಕಿ...
ನಿ...
ಸುರಿದ
ಮದ್ಯದಿಂದಲೆ
ಬದುಕುಳಿದಿದೆ
ಈ ಜೀವ...
ಏನು ಮಾಡಲಿ,
ಅನುದಿನವು ಬಿಡದೆ
ಕೊಲ್ಲುತಿದೆ ಅವಳ
ಮೋಸದಾ...
ಭಾವ

Monday, November 5, 2018

ಸಾಕಿ

ಪುಡಿಗಾಸು ಚೆಲ್ಲಿದರೆ...ಅನುಭವಿಸಲಾರದಷ್ಟು
ಸುಖವು ಸಿಗುವುದು ಸಾಕಿ...ನಿನ್ನರಮನೆಯಲ್ಲಿ..
ಝಣಝಣಿಸುವ ಹಣದ ಥೈಲಿಯನ್ನೆ...ಹೊತ್ತು
ತಂದಿರುವೆ, ಹುಡುಕಿದರು... ಮಧುಶಾಲೆಯ ಮೂಲೆ ಮೂಲೆಗಳಲ್ಲಿ ಹಣವನ್ನು ಚೆಲ್ಲಿ, ಹಿಡಿ ಪ್ರೀತಿಯು ದಕ್ಕಲಿಲ್ಲವಲ್ಲ

ಹಚ್ಚಿದ ದೀಪವನಾರಿಸಿ...ಮಲ್ಲಿಗೆಯ ಹರಡಿ, ಹೊಸಕಿ
ಕತ್ತಲಲ್ಲಿಯೆ ಸುಖವನ್ನು ಕಂಡುಕೊಳ್ಳುವರಲ್ಲ..!!!
ಸಾಕಿ...‌ಮದವೇರಿದ ಮಾಂಸದ ಮುದ್ದೆಗಳು..
ಕೈಯಲ್ಲಿ ಸುಡವ ಹಣತೆಯನ್ನೆ ಹಚ್ಚಿಕೊಂಡು
ನಡೆದೆ ಬೆಳಕಿನಲ್ಲಿ.. ತುಳಿದದ್ದು ಮಾತ್ರ
ವಿರಹದ ವಿಷವೇರಿಸುವ ಮುಳ್ಳುಗಳನು

Sunday, November 4, 2018

ಶಾಯರಿ ೩೫೧

ದಿನವೊಂದಕೆ ನಕ್ಕು
ಅಸುನೀಗುವ
ಹೂವಿನ ಸಾರ
ನಿನಗೇನು ಗೊತ್ತು
ಸಾಕಿ....
ಕಲ್ಲು ದೇವರಾದರೂ...
ಹೂವಿನ ಸ್ಪರ್ಶವಿಲ್ಲದೆ
ಜೀವಂತಿಕೆಯ
ಹೊಂದವುದೇನು...?

Friday, November 2, 2018

ಶಾಯರಿ ೩೫೦

ಕುಡಿದುಬಿಟ್ಟ
ಖಾಲಿ ಬಟ್ಟಲುಗಳನ್ನು
ತೊಳೆದಿಡಬೇಡ
ಸಾಕಿ...
ಬಿರಿದೆದೆಯ
ಮಾತುಗಳನ್ನೆಲ್ಲ
ಅವುಗಳ ತುಂಬ..
ತುಂಬಿಟ್ಟಿರುವೆ..

Thursday, November 1, 2018

ಶಾಯರಿ ೩೪೬

ಸಾವಿಗೂ...
ಸಂಜೀವಿನಿ ಎಂಬ
ಮದ್ದುಂಟು
ಸಾಕಿ...
ಬೆಟ್ಟವ ಹೊತ್ತು
ತರುವಷ್ಟು
ಬಲವು ನನ್ನಲಿಲ್ಲ...
ಅವಳ ನೋವುಗಳ
ಮರೆಸಿಕೊಳ್ಳಲು...
ಕೈಯಲೊಂದು ಮಧು
ಬಟ್ಟಲಿದೆ ಸಾಕಲ್ಲ..

ಶಾಯರಿ ೩೪೫

ಮುಚ್ಚಿಟ್ಟುಬಿಡು...
ಅವಳ ಮದುವೆಯ
ಕರೆಯೋಲೆಯನ್ನು
ಸಾಕಿ...
ಹೃದಯವಿಲ್ಲಿ
ಬಿರುಕುಬಿಟ್ಟಿದೆ,
ಬಂದಿರುವುದು
ನನ್ನ ಮರಣದ
ಆಹ್ವಾನ ಪತ್ರಿಕೆ

ಶಾಯರಿ ೩೪೪

ಎಲ್ಲ ಗ್ರಹಗಳಲ್ಲಿಯೂ
ಶನಿಯೆ....
ತುಂಬಿಕೊಂಡಿರುವನಲ್ಲ
ಸಾಕಿ....
ಸುರಿದುಬಿಡು
ಬಟ್ಟಲು ಮದಿರೆಯನು
ಬಿಕ್ಕುವ ಬಡವನೆದೆಗೆ.
ಆಸೆಯೊಂದನು ಇಟ್ಟುಕೊಳ್ಳದೆ,
ಲೀನವಾಗಿಬಿಡುವೆ
ಪಂಚಭೂತಗಳಲ್ಲಿ