Showing posts with label ಕಲ್ಲು ಮನಸ್ಸಿನವಳ ನಂಬಿ. Show all posts
Showing posts with label ಕಲ್ಲು ಮನಸ್ಸಿನವಳ ನಂಬಿ. Show all posts

Friday, August 2, 2019

ಕಜಲ್


ಕಲ್ಲು ಮನಸಿನವಳ ನಂಬಿ, ಶಿಲೆಯ ಮೇಲೆ
ನೀನೆ....‌ಪದವಾಗಿಬಿಟ್ಟಿರುವೆಯಲ್ಲೊ ಪಾಗಲ್...
'ದಾಗ್' ನ್ನು ಬಳಿದುಬಿಟ್ಟಿದ್ದಾರವರು ನಿನ್ನ ಬದುಕಿಗೆ...
ಅರ್ಥೈಸುವುದಾದರು ಹೇಗೆ? ಈ ಜಗಕೆ, ಪ್ರೀತಿಗೆ
ಕುರುಬಾನಿ ನೀಡಿದ ಕಥೆಯನ್ನು...

ಈ ಇಳಿಸಂಜೆಗಳಲಿ, ನನ್ನ ಹಾಗೆ ಬಂದವಳು ನಿನ್ನ
ಎದೆಬಂಡೆಯನ್ನು ಸವರಿ ಹೋಗುವವಳೇನು? ಪಾಗಲ್...
ಹುಗಿದ ಗೋರಿಯ ಮೇಲೆ, ಹಾಕಲು ಹಿಡಿಮಣ್ಣು...
ಭಾರವಾಗಿತ್ತು!!! ಅವಳ ಕೈಗೆ, ಇನ್ನೂ....ನಿನ್ನ ಮುಟ್ಟುವ
ಸಾಹಸವನ್ನವಳು ಮಾಡುವಳೇನು?

ನೀನು ಹೇಳಿದ ಹಾಗೆಯೆ, ಪೌರ್ಣಮಿ ರಸಿಕನ ಬೆಳಕು
ನಿನ್ನ ಸೋಕದ ಹಾಗೆ ಏನೊ ಮರೆಯಾಗಿಸಿಬಿಟ್ಟೆ ಪಾಗಲ್....
ತಡೆಹಿಡಿಯಲಿ ಹೇಗೆ? ಅವಳ ದೇಹಕ್ಕೆ ಪೋಸಿಕೊಂಡ ಅತ್ತಾರಿನ ಸುವಾಸನೆಯನ್ನು, ಹೊತ್ತು ತರುವ,  ಸುಳಿಗಾಳಿಯನ್ನು

ನೋವುಂಡು... ಹನಿ ಕಣ್ಣೀರಿಗೂ ದಿಕ್ಕಿಲ್ಲದೆ ಮಸಣವ
ಸೇರಿ ಹೋದೆನೆಂದು ದುಃಖಿಸದಿರು ಪಾಗಲ್....
ನಿನ್ನೀತಿಹಾಸವ ಕೆತ್ತಿದವನು ನಿನಗಿಂತಲೂ ಹೆಚ್ಚಿಗೆಯೇ..
ನೊಂದುಕೊಂಡಿದ್ದನೆ,
ಬಂಡೆಯನ್ನು ಶಿಲೆಯಾಗಿಸುವ ಭರದಲ್ಲಿ, ಕೈಯೊಳಗೆದ್ದ
ಬೊಬ್ಬೆಗಳಿಂದಲ್ಲ, ಪದಪದವನ್ನು ಕೆತ್ತುವಾಗ....
ಮೋಸಹೋದ ನಿನ್ನ ಪ್ರೀತಿಯ ಪರಿಯನ್ನು ಓದಿ

ನೀನು ಹೇಳಿದ್ದೆ, ಅವಳು ಕೊಟ್ಟುಹೋದ ನವಿಲು ಗರಿಯು
ಇತಿಹಾಸ ಪುಸ್ತಕದಲ್ಲಿ ಮರಿಯನ್ನೇನಾದರು ಹಾಕಿದರೆ
ಹೇಳು ಅಂತ!!!.... ಪಾಗಲ್,
ನವಿಲು ಗರಿಯನ್ನು ಇತಿಹಾಸದ ಪುಸ್ತಕದಲ್ಲಿಯೇ... ಏಕಿಟ್ಟೆಯೊ? ಅಂದು, ನಾನರಿಯೆ...
ಇತಿಹಾಸದ ಪುಟದಲ್ಲಿಂದು, ನೀನು ಸೇರಿ ಹೋದದ್ದು
ಮಾತ್ರ....ಸರಿಯೇ...? ಉತ್ತರಿಸುವರಾರು?