Tuesday, August 23, 2016

ಶರಣ

ಕುಡಿಯುವ ನೀರು
ವಿಷವಾದರೆಂತಯ್ಯ
ಸುರಿಯುವ ಮಳೆಯು
ಬೆಂಕಿಯಾದೊಡೆಂತಯ್ಯ
ತಾಯಿ ಮಗನಿಗೆ ವ್ಯೆರಿಯಾದೊಡೆ
ಯಾರಗೆ ದೂರಲಿ ಶರಣ

Saturday, August 20, 2016

ಏನೆಂದು ಬರೆಯಲಿ

ಏನೆಂದು ಬರೆಯಲಿ ನಾ
ಲೋಕದ ತಿರುಗ ಕಂಡು
ಏನೆಂದು ಅರಿಯಲಿ ನಾ
ಲೋಕದ ಸತ್ಯವ ಕಂಡು

ಹುಟ್ಟಿದ ಕೂಡಲೆ ತಾಯಿಯ
ಎದೆಹಾಲಿಗೆ ಬಾಯಿ ತೆರೆಯುವ
ಮಗ ಮಮತೆಯನುಣ್ಣುತ್ತಾನೆ
ಮದುವೆಯ ನಂತರ ಮಡದಿ
ಎದೆಯ ಬಯಸುವ ಮಗ
ಕಾಮವನುಣ್ಣುತ್ತಾನೆ 

ನದಿಯು ತನ್ನ ಹುಟ್ಟುಗುಮವ ಬಿಟ್ಟು
ಶರದಿಯನು ಸೇರುವಂತೆ
ಹೆತ್ತೊಡಲ ಮರೆತು
ಕಾಮದೊಡಲ ಸೇರುವ ಮಗನೇ...
ಜೀವವಿತ್ತವಳ ಮರೆತು
ದೇಹವಿತ್ತವಳನು ಸೇರುವೆಯಲ್ಲೋ

ತಾಯಿ ಹೆಣ್ಣೆ, ಮಡದಿ ಹೆಣ್ಣೆ
ಇವೆರಡರಂತರವನರಿತು
ಬಾಳು ಮಗನೇ
ತಾಯಿ ಮಡಿಲು ತಂಪು
ಮಡದಿ ಮಡಿಲು ಬೆಂಕಿ
ಮಡಿಲ ತಂಪಿನೊಳರಳುವೆಯೋ
ಮಡಿಲ ಬೆಂಕಿಯೊಳು ನರಳುವೆಯೋ

ಏನದು?

ಕದ್ದ ತಿಂದ್ರ ದಿಡ್ಡಿಗೆ
ದುಡಿದ ತಿಂದ್ರ ರೆಟ್ಟಿಗೆ
ಉಳುಮೆ ಮಾಡಿದ್ರ ಭೂಮಿಗೆ
ಚೀಲ  ರಾಶಿ ಮನೆಗೆ

Friday, August 12, 2016

ಸಹಿಸೋದು

ಹದಮಾಡಿದ ಹೊಲನ
ಸಾಕಷ್ಟು ನೀರನ್ನ ನುಂಗತ್ಯೆತಿ
ಬದುಗಟ್ಟಿದ್ದ ಕೆರಿನ ಸಾಕಷ್ಟು
ನೀರನ್ನ ಹಿಡದಿಡತ್ಯೆತಿ

ಹದವಾದ ಮನಸ್ಸಿದ್ರನ
ಸುಖ-ದುಃಖನ ನುಂಗತ್ಯೆತಿ

ಬರಹಗಾರ ?

ನಾನೊಬ್ಬ ಬರಹಗಾರನಷ್ಟೆ
ಅಲ್ಲೊ ಇಲ್ಲೊ,  ಯಾರೊ ಬಿಟ್ಟ
ಬಿಸಾಡಿದ ಪದಗಳ ಹುಡುಕಿ
ನನ್ನ ನೋವು ನಲಿವುಗಳೆಂಬ
ಪದ್ಯವೊ, ಗದ್ಯವೊ ಎಂಬಂತಹ
ಸಾಲಿಗೆ ತುರುಕುವೆನಷ್ಟೆ

ನಾನೊಬ್ಬ ಕೇಳುಗಾರನಷ್ಟೆ
ಅವರಿವರೂ ಹಾಡಿದ, ನುಡಿದ
ಮಾತುಗಳರ್ಥವ ಹಿಡಿದು
ಕುಡಿದು, ಮಲಗೆದ್ದು
ಅದರಲರ್ಥವಾದುದ
ಬರೆಯುವನಷ್ಟೆ

Thursday, August 11, 2016

ಚಿನ್ನಕ್ಕಿಂತ ಭಾರ

ಕೇವಲ  ಚೂರು ಬಂಗಾರಕ್ಕಾಗಿ
ಭಾರವಾಗಿಬಿಟ್ಟೇನೆ ?
ಮಾತು ಮಾತಿಗೂ ಚಿನ್ನ, ರನ್ನ
ಬಂಗಾರವೆನ್ನುತ್ತಿದ್ದವರಿಂದು
ಆ ಹತ್ತು ಗ್ರಾಮಿನ ಬಂಗಾರದೆದುರು
ಈ ಐವತ್ತು ಕೆಜಿಯ ಬಂಗಾರ
ಅಗ್ಗವಾಗಿ ಹೋಯಿತೆ..

ಈ ಚಿನ್ನ ನನ್ನ ಬಾಳಿನಲಿ
ಬಂಗಾರ ಬೆಳಕನು ಚೆಲ್ಲುವ ಗಣಿ,
ನನ್ನ ವಂಶಕ್ಕೆ ಬಂಗಾರದಂಥ
ಮಕ್ಕಳನು ಹೆತ್ತ ಮಡದಿ
ರುಚಿ, ರುಚಿಯನಡುಗೆ ಮಾಡುವ
ಬಂಗಾರ ಬಳೆಗಳ ಕ್ಯೆ
ಎಂದು ಮಾತು ಮಾತಿಗೂ ಹೇಳುತ್ತಿದ್ದ
ನೀನು
ನಿನ್ನ ಕುಡಿತದ ಚಟಕ್ಕಾಗಿ  ಎಲ್ಲವ
ಅಳಿದು, ಮರೆತು ನಿಂತಿರುವೆ

ನನ್ನ ಮಣ್ಣ ಸೇರಿಸಿಯಾದರೂ ಚಿನ್ನವ
ಪಡೆಯುವೆನೆಂದಿರುವೆ,
ಭೂಮಿ ಅಗೆದರೆ ಚಿನ್ನ ಸಿಕ್ಕರೂ ಸಿಗಬಹದು
ಸಿಗದಲೆ ಇರಬಹುದು
ನಾ ಮಣ್ಣ ಸೇರಿದರೆ ಮರಳಿ ನಾ
ಬೇಕೆಂದು ನೀ ಮಣ್ಣ ಅಗೆದರೆ
ನಾನು ಸಿಗಲಿಕ್ಕಿಲ್ಲವೇನೊ ಆದರೆ
ನನ್ನ ಅಸ್ಥಿ ಪಂಜರ ಮಾತ್ರ ನಿನ್ನ
ದಾರಿ ಕಾಯುತ್ತಿರುತ್ತದೆ

ಬಂಗಾರ ನಾನೂ?

ದುಃಖ

ನಿನ್ನೆದೆಯ ದುಃಖ ಎಷ್ಟೆಂದು
ನೀ ಹೇಳದಿದ್ದರೂ
ನಿನ್ನದರುವ ಅದರಗಳು
ಸೂಚಿಸುತಿವೆ
ಕಣ್ಣಂಚಲಿ ಜಾರದೆ ನಿಂತ ಹನಿ
ತೋರುತಿದೆ
ಮೆದುವಾಗಿ ಮೆತ್ತಗಿದ್ದ ಆ ಗಲ್ಲವು
ಬಿರುಸಾಗಿದೆ
ಮುತ್ತಾಗಿದ್ದ ಮಾತು ಮೌನದ
ಹುತ್ತವಾಗಿದೆ
ಹಕ್ಕಿಯ ರೆಕ್ಕೆಯಂತಿದ್ದ ಆ ಮುಂಗರುಳುಗಳು
ಸೋತಂತಿವೆ
ಹಣೆಯ ಮೇಲಿನ ಬಿಂದು ಬೆವರಿಗೆ
ಕರಗಿದೆ

ಅತ್ತುಬಿಡೊಮ್ಮೆ ಕೆರೆಯ
ಕಟ್ಟೆ ಒಡೆವ ಹಾಗೆ
ಸುರಿಸು ಬಿಡು ಕಣ್ಣೀರನು ಕರಿಮೋಡ
ಸುರಿದು ಹಗುರಾಗುವ ಹಾಗೆ
ನಿನ್ನ ಬಾಳ ನೋವನೆಲ್ಲ ನನಗೆ ನೀಡಿ
ಒರಗಿ ಬಿಡು ನನ್ನ ಹೆಗಲ ಮೇಲೆ
ಯಾವ ನೋವಿನ ಅರಿವಿಲ್ಲದಂತೆ
ಈ ಜಗದ ಪರಿವಿಲ್ಲದಂತೆ

Wednesday, August 10, 2016

ನಾನು ನನ್ನ ಮನಸ್ಸು - ರೂಪಗಳು

ನಾನೊಂದು ಹೂವಾಗಬೇಕು
ಮಳೆಯ ಚುಂಬನಕರಳುವಂತಿರಬೇಕು
ಶಶಿಯ ಕಾಂತಿ ನನ್ನ ಮ್ಯೆದುಂಬಿರಬೇಕು
ಸೂರ್ಯನ ಕಿರಣ ತಾಕದಂತಿರಬೇಕು
ಉದಯದಿಬ್ಬನಿ ನನ್ನನ್ನು ತಂಪಿರಿಸಿರಬೇಕು
ನನ್ನೆದೆಯ ಗಂಧಕೆ ಮುಳ್ಳಿನ ಕಾವಲಿರಬೇಕು
ನಾನಾರ ಕ್ಯೆಗೂ ಎಟುಕದಂತಿರಬೇಕು
ನನ್ನಂದವ ಕಂಡವರೆಲ್ಲರೂ ಬೇರಗಾಗಲೆಬೇಕು

ಇರಬೇಕು, ಇರಬೇಕು ಇಷ್ಟೇಲ್ಲಾ
ಸುಖದ ನಶೆಯಲಿರುವಾಗ ನೀ
ಹೇಗೆ ಬಂದೆ ಬಣ್ಣ ಬಣ್ಣದಾ 
ರೆಕ್ಕೆಯಾ ಚಿಟ್ಟೆಯಾ ಹಾಗೆ
ನೀನಿರದೆ ನಾನಿಲ್ಲೆನುವ ಮೋಹದಲಿ
ನನ್ನೆದೆಯ ಭಾವ-ಜೀವದ ರಸವಹೀರಿ
ಹಾರಿಬಿಟ್ಟೆಯಲ್ಲಾ ನನ್ನರಿಯದಂತೆ

ನೋಡು ಒಮ್ಮೆಯಾದರೂ ತೀರುಗಿ
ಇನ್ನದೊಂದೆದೆಯ ರಸ ಹೀರುವ
ಮೊದಲು ನನ್ನುರಾಗದ ಸವಿಯನಾದರೂ
ನೆನೆದು ನೋಡು ಒಮ್ಮೆ ನಾ ಬಾಡಿ
ಲತೆಯನಗಲುವಾಗ, ನಡೆವ ಹಾದಿಗೆ
ಕಸವಾಗುವಾಗ....

Tuesday, August 9, 2016

ಬಂತು ಪಂಚಮಿ

ಪಂಚಮಿ ಹಬ್ಬ ತರಸ್ಯೆತೆ
ತವರೂರ ನೆನಪ ಯಾಕೊ
ಮನಸ್ಸು ಸೆಳಿತ್ಯೆತಿ ಅವ್ವನ
ಕ್ಯೆ ರುಚಿಯ

ಆಲದ ಮರದ ರಂಬೆಯ
ಜೋಕಾಲಿ, ಸುನೀತಾ, ಗೀತಾ
ಶಾರು, ಲಕ್ಷ್ಮೀ, ಸುಮಾ, ಸಂಗೀತಾ
ಎಲ್ಲಾರೂ ತಲೆಯೊಳಗ ಸುಳಿಯಾಕ ಹತ್ತಾರ

ಜೋಡು ಜಡೆ, ಲಂಗಾ ದಾವಣಿ
ಇಬ್ಬಿಬ್ರು ಜೋಕಾಲಿ ಹತಗೊಂಡು
ಉಯ್ಯಾಲೆ ತೂಗುವ ನೆನಪು
ಗಿಳಿ ಹಿಂಡು ಬೆದರಿಸುವಂಥ ನಗು

ಬಾ ಮಗಳೆ ಪಂಚಮಿಗೆ

ಹುಟ್ಟೂರ ಮರೆತ್ಹೋಗಿ
ಹಿರಿಯೂರಲಿ ಕುತಗೊಂಡು
ತವರೂರ ಮರತೆನೆ
ನನ್ನ ಮಗಳೆ

ಪಂಚಮಿ ಬಂದ್ಯೆತೆ
ಅಳಿಯನ್ನ ಕರಕೊಂಡು
ಹಬ್ಬಕ್ಕೆ ಬಾರೆ ನನ್ನ ಗಿರಿ
ಮಗಳೆ

ಅಣ್ಣನ ಕಳಸಲೆ
ಅಪ್ಪನ ಕಳಸಲೆ
ಯಾರನ್ನ ಕಳಸಲೆ
ಹೇಳೆ ಸಿರಿ ಮಗಳೆ

ಅಜ್ಜಪ್ಪ ಹೊಸ್ದವ್ನೆ
ಜೋಕಾಲಿ ಹಗ್ಗವ
ತೇಗದ ಜಂತಿಯು
ಕಾಯತ್ಯೆತೆ ನನ ಮಗಳೆ

ಹಳ್ಳದ ಸಾಲಿಂದ
ಅಣ್ಣಾನು ತಂದವ್ನೆ
ಖ್ಯಾದ್ಗಿಯ ಹೂವಾವ
ಮುಡಿಬಾರೆ ನಾಗರ ಜಡೆಯವಳೆ

ಗೌರಿಯ ಕೆಚ್ಚಲಿಂದ
ಹಾಲ ಕರಿಸೇನೆ ಜಗಲಿಯ
ನಾಗಪ್ಪಗೆ ಹಾಲನೆರೆಯ ಬಾರೆ
ನನ್ನ ಹಿರಿ ಮಗಳೆ

ಎಳ್ಳುಂಡೆ ಕಾಳುಂಡೆ ಹೆಸರುಂಡೆ
ಕೊಬ್ಬರಿಯ ಕರದಂಟು, ಭೀಮಜ್ಜಿ
ಮನೆಯ ಗಡಿಗೆ ತುಪ್ಪವ ತರಿಸೇನೆ
ಉಣಬಾರೆ

ಇಲಕಲ್ಲ ಸೀರೆ ಪಚ್ಚೆ ಹಸಿರಿನ ಬಳೆ
ನಿನಗಾಗಿ ತರಿಸಿರುವೆ ಬಾ ಮಗಳೆ
ವಾರಾಯ್ತು ನೀ ಬರುವ ದಾರಿ
ಕಾಯಾಕ್ಹತ್ತು ಬಂದು ಬಿಡೆ
ನನ ಮಗಳೆ

Wednesday, August 3, 2016

ನನಗೂ ಒಬ್ಬ ಶರಣರು ಬೇಕು

ನನಗೂ ಒಬ್ಬ ಶರಣರೂ ಬೇಕು
ಕರುನಾಡಿನಲ್ಲಿ, ನಮ್ಮೂರಿನಲ್ಲಿ

ಅವರು ಶರಣರಾಗಿರಬೇಕು
ಅದರಲ್ಲೂ ಅವರು  ಕೆಳ
ಸಮಾಜದವರಾಗಿರಬೇಕು
ಬಸವಣ್ಣನ ಅನುಯಾಯಿಯಾಗಿರಬೇಕು

ಇರುವ ಶರಣರಲ್ಲಾರೂ ಖಾಲಿ
ಇಲ್ಲ | ಎಲ್ಲ ಶರಣರೂ ಎಲ್ಲ
ಸಮಾಜದ ಮೊಹರುಗಳಾಗಿದ್ದಾರೆ
ಸಮಾಜದ ಚಿರಾಸ್ತಿಯಾಗಿದ್ದಾರೆ 

ಚೆನ್ನಮ್ಮ ಅವರಿಗೆ, ಅಪ್ಪಣ್ಣ ಅವರಿಗೆ
ಮಾಚಯ್ಯ ಅವರಿಗೆ, ಚೌಡಯ್ಯ,
ಸಂಗಯ್ಯ, ಭೀಮಯ್ಯ, ಶಿವಯ್ಯ
ಕೇತಯ್ಯ, ಮಾರಯ್ಯ, ಅಲ್ಲಮರು

ಎಲ್ಲ ಶರಣರೂ ಅವರವರಿಗೆ
ಅವರ ಕುಲದವರೆ, ಅಂದವರು
ವಚನ-ಸಾಹಿತ್ಯದಿಂದಲೆ ಕುಲವನಳಿಸಿ
ಏಕತೆಯ ಸಮಾನತೆಯ ಹುಡುಕಿದರು

ಇಂದಿವರು ಕುಲದಿಂದಲೆ
ಶರಣರ ಹುಡುಕುತಿಹರು ನಮ್ಮ
ಕುಲವೆ ಬೇರೆಂದು ಬಸವಣ್ಣ
ನೀನಿರದ ನಾಡು ಇನ್ನೆಲ್ಲಿ

ನನಗೂ ಒಬ್ಬ ಶರಣರೂ ಬೇಕು
ಅವರ ವಚನ-ಸಾಹಿತ್ಯವನೊದದಿದ್ದರೂ
ಬೇಕು ಕೊಮಿಗೆ, ರಥಯಾತ್ರೆಗೆ,
ಸುಲಿಗೆಗೆ, ಸರಕಾರಿ ಸೌಲಭ್ಯಕ್ಕೆ
ಜನಗಣತಿಗೆ, ಅಲ್ಪಸಂಖ್ಯಾತರಾಗಲೂ

ಓಣಿಯ, ಊರಿನ, ತಾಲೂಕಿನ
ಜಿಲ್ಲೆಯ, ರಾಜ್ಯ ರಾಜಕೀಯದಲಿ
ಓಟಿನ ಖಾತೆಯನು, ಜಾತಿಯ
ಬಲದಲಿ  ಪಡೆಯುವ ಸೀಟನು

ಇವೆಲ್ಲದರ ಅನುಕೂಲತೆಗಾಗಿ
ಬೇಕಾಗಿದೆ ಒಬ್ಬ ಶರಣರೂ
ಯಾರ ಸಮಾಜದ ಮೊಹರಲ್ಲದ
ಒಬ್ಬ ಶರಣರು

ಹುಡುಕಾಟ

ಕಡಲಿನ ಮುತ್ತನ್ನಾದರೂ
ಹೆಕ್ಕಿ ತರಬಲ್ಲೆ
ಬಾನಿನ ತಾರೆಯನು
ಕಿತ್ತು ತರಬಲ್ಲೇನೆ

ಭೂಮಿಯ ಬಗೆದಾದರೂ
ಜಲವನ್ನು ತರಬಲ್ಲೆ
ಶಿವನ ಜಡೆಯಿಂದ
ಗಂಗೆಯ ಹರಿಸಬಲ್ಲೇನೆ

ನೀರಲಿ ಈಜುವ
ಮೀನನು ಹಿಡಿಯಬಲ್ಲೆ
ಬಾನಲಿ ಓಡುವ
ಮೋಡವ ಹಿಡಿಯಬಲ್ಲೇನೆ

ನೀನಿಲ್ಲದ ಊರಿನಲ್ಲಿ
ನಿನ್ನ ಹುಡುಕಬಲ್ಲೆ
ನೀನಿಲ್ಲದ ಲೋಕದಲಿ
ನಿನ್ನ ಹುಡುಕಬಲ್ಲೇನೆ

ನಾನೊಂದು ಮರ ಅಷ್ಟೆ

ನಾನೊಂದು ಮರವಷ್ಟೆ
ಹೇಗೆ ಹೇಳಲಿ ನನ್ನ ಕಥೆಯನ್ನ
ನಾಲ್ಕು ದಶಕಗಳ ನನ್ನ ಪಯಣವನ್ನು
ಮೊನ್ನೆಯಷ್ಟೆ ಅಂತ್ಯಗೊಳಿಸಿಬಿಟ್ಟರು

ಬಹುಶಃ ಭೂಮಿಗೆ ಭಾರವಾಗಿರದಿದ್ದರೂ
ಭೂ ಮಾಲೀಕನಿಗೆ ಭಾರವಾಗಿಬಿಟ್ಟಿದ್ದನೇನೊ
ಮಹಲನ್ನು ಕಟ್ಟುವ ಭರದಲ್ಲಿ ನನ್ನನ್ನು ಭೂಮಿಯ
ಒಡಲ ಋಣವನ್ನ ನನ್ನ ಕಡೆದು ತೀರಿಸಿದನೇನೊ

ಅವನು ಕಡೆದನೆಂದು, ಕೊಯ್ದನೆಂದೂ...
ಕತ್ತರಿಸಿ, ತುಂಡು-ತುಂಡು ಮಾಡಿದನೆಂದು
ನನಗೆ ಒಂದೆಲೆಯಷ್ಟು ಬೇಸರವಿಲ್ಲ
ಸಿಟ್ಟಿಲ್ಲ, ನೋವಿಲ್ಲ, ವಿಷಾದವಿಲ್ಲ ಆದರೆ...

ನನ್ನ ನೆರಳಲೆ ಬೆಳೆದು, ಆಡಿ, ಬೆಳೆದವರೆಲ್ಲರೂ
ನನ್ನ ಕಡಿಯುವಾಗ ಒಬ್ಬರೂ ಮರಗಲಿಲ್ಲವಲ್ಲ
ಅದೇಷ್ಟು ನೋವಾಯಿತು ನನಗೆ ಇಷ್ಟು ದಿನಗಳಲಿ
ಒಬ್ಬರಿಗೂ ಬೇಡವಾಗಿ ಬದುಕಿದೆನೆ ಎಂದು

ನನ್ನ ರಂಬೆಗೆ ಹಗ್ಗವ ಕಟ್ಟಿ ಜೋಕಾಲಿ
ಆಡಿದವರು ನನ್ನ ರಂಬೆಯನು ಕಡೆಯುವಾಗ
ತಡೆಯಲಿಲ್ಲ, ನನ್ನ ನೆರಳಲೆ ಹೂ ಕಟ್ಟಿ ಮಾರಿ
ಮಗಳ, ಮೊಮ್ಮಕ್ಕಳ ಮದುವೆ ಮಾಡಿದ ಆ
ದೇವಮ್ಮ ಕಣ್ಣೆತ್ತಿಯೂ ನನ್ನ ನೋಡಲಿಲ್ಲ

ಹಣ್ಣು ಮಾರುವ ಶಾಂತಮ್ಮ, ಕಾಳು-ಕಡಿ
ಮಾರುವ ನಂಜಮ್ಮ, ಪೇರಲ,ಸೀತಾಫಲ
ಮಾರುತ್ತಿದ್ದ ಕಲ್ಲಮ್ಮ ಎಲ್ಲ ಅಮ್ಮಂದಿರು
ನನ್ನ ನೆರಳಲೆ ಯೌವ್ವನ, ಮುದಿತನ ಹೊಂದಿ
ನನ್ನ ಸೀಳುವಾಗ ಆ ಅಮ್ಮಂದಿರ ಕಣ್ಣಲ್ಲಿ
ಒಂದೇ ಒಂದು ಹನಿ ಕಣ್ಣೀರು ಸುರಿಸದಿರುವದನು
ಕಂಡು ಯಾಕಾದರೂ ಬದುಕಿದೆನೊ ಅನ್ನಿಸಿಬಿಟ್ಟಿತ್ತು

ಆದರೆ ನನ್ನ ದೇಹದ ಒಂದೊಂದು ಅಂಗವು
ಯಾರದೊ ಮನೆಯ ಬಾಗಿಲು, ಕಿಟಕಿ, ಹೊಸ್ತಿಲು
ಜಂತಿ, ದೇವರ ಬಾಗಿಲು, ಅಡುಗೆ ಮನೆಯ
ಊರುವಲು, ತೊಟ್ಟಿಲು, ಹಸೆಮಣೆ, ನೊಗ,
ಜೋಡೆತ್ತಿನ ಬಂಡಿ ಅಬ್ಬಬ್ಬಾ... ಇರುವಾಗ ಸಿಗದ
ಸುಖ ನನಗೆ ಸತ್ತ ಮೇಲೆ ಸಿಕ್ಕಂತಾಯಿತು

ನಾನು ಸತ್ತು ಸುಖವ ಕಂಡೆ
ನನ್ನ ಕೊಂದವರು
ಸುಖದಿಂದಿರುವಿರೆ ?

Tuesday, August 2, 2016

ಕರಗದ ಮನಸು

ಸುಡಾಕ ಹತ್ತಿದ್ರ ಕಬ್ಬಿಣಾನೂ
ಕರಗತ್ಯತಿ
ಒಡೆಯಾಕ ಹತ್ತಿದ್ರ ಕಲ್ಲ ಬಂಡೆನೂ
ಚೂರಾಗತ್ಯತಿ
ಕಡಿಯಾಕ ಹತ್ತಿದ್ರ ದೊಡ್ಡ ಮರಾನೂ
ಊರಳತ್ಯತಿ
ಅಗಿಯಾಕ ಹತ್ತಿದ್ರ ನೆಲದನ್ ನೀರು
ಉಕ್ಕತ್ಯತಿ
ಹನ್ನೊಂದು ವರ್ಷಾಯ್ತು ನಿನ್ನ
ಪ್ರೀತಿ ಅನ್ನು ಮಾಯದ ಹಿಂದೆ ಬಿದ್ದು
ಆ ಕಲ್ಲನ್ನೊ ನಿನ್ನ ಮನಸ್ಸು ಇನ್ನೂ ಯಾಕರ
ಕರಗಾವಲ್ದದು