Wednesday, August 3, 2016

ನಾನೊಂದು ಮರ ಅಷ್ಟೆ

ನಾನೊಂದು ಮರವಷ್ಟೆ
ಹೇಗೆ ಹೇಳಲಿ ನನ್ನ ಕಥೆಯನ್ನ
ನಾಲ್ಕು ದಶಕಗಳ ನನ್ನ ಪಯಣವನ್ನು
ಮೊನ್ನೆಯಷ್ಟೆ ಅಂತ್ಯಗೊಳಿಸಿಬಿಟ್ಟರು

ಬಹುಶಃ ಭೂಮಿಗೆ ಭಾರವಾಗಿರದಿದ್ದರೂ
ಭೂ ಮಾಲೀಕನಿಗೆ ಭಾರವಾಗಿಬಿಟ್ಟಿದ್ದನೇನೊ
ಮಹಲನ್ನು ಕಟ್ಟುವ ಭರದಲ್ಲಿ ನನ್ನನ್ನು ಭೂಮಿಯ
ಒಡಲ ಋಣವನ್ನ ನನ್ನ ಕಡೆದು ತೀರಿಸಿದನೇನೊ

ಅವನು ಕಡೆದನೆಂದು, ಕೊಯ್ದನೆಂದೂ...
ಕತ್ತರಿಸಿ, ತುಂಡು-ತುಂಡು ಮಾಡಿದನೆಂದು
ನನಗೆ ಒಂದೆಲೆಯಷ್ಟು ಬೇಸರವಿಲ್ಲ
ಸಿಟ್ಟಿಲ್ಲ, ನೋವಿಲ್ಲ, ವಿಷಾದವಿಲ್ಲ ಆದರೆ...

ನನ್ನ ನೆರಳಲೆ ಬೆಳೆದು, ಆಡಿ, ಬೆಳೆದವರೆಲ್ಲರೂ
ನನ್ನ ಕಡಿಯುವಾಗ ಒಬ್ಬರೂ ಮರಗಲಿಲ್ಲವಲ್ಲ
ಅದೇಷ್ಟು ನೋವಾಯಿತು ನನಗೆ ಇಷ್ಟು ದಿನಗಳಲಿ
ಒಬ್ಬರಿಗೂ ಬೇಡವಾಗಿ ಬದುಕಿದೆನೆ ಎಂದು

ನನ್ನ ರಂಬೆಗೆ ಹಗ್ಗವ ಕಟ್ಟಿ ಜೋಕಾಲಿ
ಆಡಿದವರು ನನ್ನ ರಂಬೆಯನು ಕಡೆಯುವಾಗ
ತಡೆಯಲಿಲ್ಲ, ನನ್ನ ನೆರಳಲೆ ಹೂ ಕಟ್ಟಿ ಮಾರಿ
ಮಗಳ, ಮೊಮ್ಮಕ್ಕಳ ಮದುವೆ ಮಾಡಿದ ಆ
ದೇವಮ್ಮ ಕಣ್ಣೆತ್ತಿಯೂ ನನ್ನ ನೋಡಲಿಲ್ಲ

ಹಣ್ಣು ಮಾರುವ ಶಾಂತಮ್ಮ, ಕಾಳು-ಕಡಿ
ಮಾರುವ ನಂಜಮ್ಮ, ಪೇರಲ,ಸೀತಾಫಲ
ಮಾರುತ್ತಿದ್ದ ಕಲ್ಲಮ್ಮ ಎಲ್ಲ ಅಮ್ಮಂದಿರು
ನನ್ನ ನೆರಳಲೆ ಯೌವ್ವನ, ಮುದಿತನ ಹೊಂದಿ
ನನ್ನ ಸೀಳುವಾಗ ಆ ಅಮ್ಮಂದಿರ ಕಣ್ಣಲ್ಲಿ
ಒಂದೇ ಒಂದು ಹನಿ ಕಣ್ಣೀರು ಸುರಿಸದಿರುವದನು
ಕಂಡು ಯಾಕಾದರೂ ಬದುಕಿದೆನೊ ಅನ್ನಿಸಿಬಿಟ್ಟಿತ್ತು

ಆದರೆ ನನ್ನ ದೇಹದ ಒಂದೊಂದು ಅಂಗವು
ಯಾರದೊ ಮನೆಯ ಬಾಗಿಲು, ಕಿಟಕಿ, ಹೊಸ್ತಿಲು
ಜಂತಿ, ದೇವರ ಬಾಗಿಲು, ಅಡುಗೆ ಮನೆಯ
ಊರುವಲು, ತೊಟ್ಟಿಲು, ಹಸೆಮಣೆ, ನೊಗ,
ಜೋಡೆತ್ತಿನ ಬಂಡಿ ಅಬ್ಬಬ್ಬಾ... ಇರುವಾಗ ಸಿಗದ
ಸುಖ ನನಗೆ ಸತ್ತ ಮೇಲೆ ಸಿಕ್ಕಂತಾಯಿತು

ನಾನು ಸತ್ತು ಸುಖವ ಕಂಡೆ
ನನ್ನ ಕೊಂದವರು
ಸುಖದಿಂದಿರುವಿರೆ ?

No comments:

Post a Comment