ಎಚ್ಚರ!!!
ರಸ್ತೆಯಲ್ಲಿ ಬಿದ್ದಿವೆ
ಗುಂಡಿ
ಯಾಮಾರಿದ್ರೆ...
ನಮಗೆ ತೇಗಿತಾರೆ
ಗುಂಡಿ
ಮತ್ತೆ ಬಂದಿತು ಯುಗಾದಿ
ಶಿಶಿರನು ಬಿಟ್ಟನು ವಸಂತನಿಗೆ ಹಾದಿ
ಇಷ್ಟು ದಿನಗಳ ವಿರಹ ಗಾಯನಕ್ಕೆ
ಕೋಗಿಲೆಯು ಹಾಡಿತು ನಾಂದಿ
ಇದರ ವಸಂತ ಗಾನಕೆ ಮನಸೋಲದೆ
ಇರುವುದಿಲ್ಲಾವ ಮಂದಿ
ಮತ್ತೆ ಬಂದಿದೆ ಈ ಸುದಿನ
ಬ್ರಹ್ಮನ ಸೃಷ್ಟಿಯ ಮೊದಲ ದಿನ
ತರುವಿನ ಚಿಗುರು ನಳನಳಿಸುವ ದಿನ
ವರುಷದುದ್ದಕೂ ಬರುವ ದಿನಗಳ
ಜಾತಕಗಳನೊದಿ ಅರಿಯುವ ಜನ
ಹೂರಣ ಹೋಳಿಗೆಯ ಉಣ್ಣಲು
ತವಕಿಸುವುದಿಂದೆಲ್ಲರ ಮನ
ಮತ್ತೆ ಕಾಣನು ಇಂಥಹ ಚಂದ್ರಮ
ನೋಡೆ ಶಾಪವ ದೊರಕುವುದು
ಚತುರ್ಥಿಯ ಚಂದ್ರಮ
ಇಷ್ಟಾರ್ಥ ಸಿದ್ಧಿಗಳು ಲಭಿಸುವವು
ನೋಡೆ ಪಾಡ್ಯದ ಚಂದ್ರಮ
ಇವನ ಕಾಂತಿಗೆ ದವನವು ಚೆಲ್ಲುವುದು
ಘಮಘಮಿಸುವ ಸುಮ
ಮತ್ತೆ ದೊರಕದು ಕಹಿಗಳ ಮಿಲನ
ಮಾವು ಬೇವು ಹುಣಸೆ ಹೊಂಗೆ
ಎಲ್ಲ ಹುಳಿ ವಗರು ಕಹಿ ಹಣ್ಣುಗಳ
ತೊನೆಗಳು ತೂಗಿ ತೂಗಿ ಭೂದೇವಿಯ
ಸ್ಪರ್ಶಿಸಲು ಹಾತೊರೆಯುವ ದಿನ
ಮತ್ತೆ ಮರು ವರ್ಷಕೆ ಕಾಣಸಿಗುವದು
ಇಂಥಹ ಸೌಭಾಗ್ಯ
ಬರಡು ಟೊಂಗೆಯ ತುದಿಯ ಮೇಲಿನ
ಚಿಗುರೆಲೆಗಳ ನರ್ತನ
ಚಿಗುರೆಲೆಯ ಸವಿದು ಚಿಲಿಪಿಲಿಸುವ
ಹಕ್ಕಿಗಳ ಗಾಯನ
ಈ ಸೃಷ್ಟಿಯ ಸೊಬಗನು ಸವಿಯಲು
ನರಜನ್ಮವನಿಕ್ಕಿದ ಸೃಷ್ಟಿಷನಿಗೆ
ನಮ್ಮೀ ನಮನ
ಈ ಮುಖಪುಸ್ತಕದಾಗ
ಇಷ್ಟ ದಿವಸ ಮುಖ
ಮುಚ್ಗೊಂಡ ಕುಂತಿದ್ನಿ...
ಯಾಕಂದ್ರ ಈ ಮುಖಪುಸ್ತಕದಾಗ
ತಮ್ಮ ಮುಖ ತೋರ್ಸೊದ್ಕಿನ
ತಾವ್ ಹಾಕೀರೊ ಮುಖವಾಡನ
ತೋರ್ಸೊರ ಭಾಳ ಮಂದಿ ಇರ್ತಾರ ಇಲ್ಲೆ
ಭೂದೇವಿಯು ಯೌವ್ವನಕೆ ಕಾಲಿಟ್ಟು
ಚಿಗುರೆಲೆಗಳ ಸೀರೆಯ ಹೊದ್ದು
ಮಾವು ಬೇವಿನ ಹೂವ ಮುಡಿದು
ಸೂರ್ಯ ರಶ್ಮಿಗೆ ಮಿನುಗುವ ಚಿಗುರೆಲೆಯ
ಮಿಂಚನು ಒಡವೆಯಾಗಿ ತೊಟ್ಟುಕೊಂಡು
ಹೊಂಗೆಯ ನೇರಳಲಿ ಕುಳಿತುಕೊಂಡು
ಬಾನಿಗೆ, ವಧು ಪರೀಕ್ಷೆಯ ಕುವರಿಯಂತೆ
ಕಂಗೊಳಿಸುತಿಹಳು
ಇವಳ ಸೊಬಗಿಗೆ ಸೋತು ಸುರಿಸಲಿ
ಪ್ರೇಮ ಸಿಂಚನದ ಮಳೆ ಹನಿಗಳ
ಬಾಯಾರಿ ಬಳಲಿದ ಭೂದೇವಿಯ
ಒಡಲು ತಣಿವಾಗಿ, ನಿಮ್ಮಿಬ್ಬರ
ಒಲವಿನ ಕುರುಹುವಾಗಿ ಹಸಿರುಸಿರು
ಉಸಿರಲಿ, ತರುಲತೆಗಳ ಕೊರಡುಗಳಲಿ
ಪ್ರೇಮ ಕಾಣಿಕೆಗಳು ಚಿಗುರಿ, ವಸಂತ
ಗಾಯನವ ಹರಿಸಿ, ನರರ ಸುಂದರ
ಬದುಕಿಗೆ ಮುನ್ನುಡಿಯ ಹೊಸೆಯಲಿ
ಮುಡಿಗೆ ಮಲ್ಲಿಗೆ ಮುಡಿಸುವ
ಮೊದಲೇ ಮುನಿಸಿಕೊಂಡೇಕೆ?
ಮಾತ ಮತ್ತಲಿ ಮರೆಸುವ
ಮುನ್ನವೇ ಮೌನವಾದೇಕೆ?
ಮನದ ಮೂಡಣದಿ ಮೂಡುವ
ಮುಂಚೆಯೇ ಮರೆಯಾದೆಯೇಕೆ?
ಹರುಷದ ಹೊನಲು ಹಸಿರಾಗಿಸದೆ
ಹಗೆಯಾಗಿಸಿದೇಕೆ?
ಹುಸಿಯಿರದ ಹಸನಾದ ಹಾದಿಗೆ
ಹೂವಾಗಲಿಲ್ಲವೇಕೆ?
ಹವಳದಂತಹ ಹರೆಯದ ಹೊತ್ತುಗಳ
ಹಾರವಾಗಿಸಲಿಲ್ಲೇಕೆ?
ಕಂಡು ಕಾಣದಂತೆ ಕತ್ತಲಲ್ಲಿ
ಕರಗಿಬಿಟ್ಟು
ಕಾಣದಾ.. ಕಲ್ಪನಾ... ಕನ್ನಡಿಯಲ್ಲಿ
ಕುಳಿತುಬಿಟ್ಟೆ
ಕಂಡ ಕನಸುಗಳನೆಲ್ಲವ ಕೊಳ್ಳಲೀನ್ನೂ
ಕಾಯಿಸುತಿರುವೆ
ಮರೆತುಬಿಡು ಮನದ ಮುನಿಸು
ಮಲಗಿ ಮಡಿಲಲೆನ್ನ ಮರೆಸು
ಮೂಡಲಿ ಮೊಗದಲಿ ಮಂದಹಾಸ
ಮುರಿಯೋಣ ಮನಗಳೆರಡ ಮೌನವಾಸ
ಕೊಲ್ಲುತಿದೆ ನೀನಿರದ ಏಕಾಂತ
ಮನದ ದುಗುಡ ದುಮ್ಮಾನಗಳ
ಅಲೆಗಳಾಗುತ್ತಿಲ್ಲ ಪ್ರಶಾಂತ
ಸಮಾಧಾನದ ಮಾತುಗಳ
ಮಳೆಯೇ ಸುರಿಸಿದರೂ
ಮನವಾಗುತ್ತಿಲ್ಲ ಶಾಂತ
ನೀ ಬರುವವರೆಗೂ ಕಣ್ಣುಗಳು
ಪಡೆಯುವುದಿಲ್ಲವಂತೆ ವಿಶ್ರಾಂತ
ಎಷ್ಟೇಂದು ಕಾಯಲಿ ಘಂಟೆಗಳಿಗಿಂತ
ನಿಮಿಷಗಳೆ ಭಾರವಾಗಿರುವಾಗ
ಸುಡುವ ನೆತ್ತಿಯ ಆ ರವಿಯ ಉರಿಗಿಂತ
ಮನದುರಿಯೇ ಹೆಚ್ಚಿರುವಾಗ
ಬೀಸುವ ಗಾಳಿಗೆ ತರಗೆಲೆಯ ಶಬ್ದಕ್ಕಿಂತ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಕಿವಿಗಳು
ಹಾತೊರೆಯುತ್ತಿರುವಾಗ
ಬರುತ್ತಿಲ್ಲವೇಕೆ?
ನನ್ನನು ಈ ಏಕಾಂತದ ಸುಳಿಗೆ ಸಿಲುಕಿಸಿ
ಉರಿಯುವ ಬೆಂಕಿಯಲಿ ದೂಡಿ
ವಾಸಿಗೊಳ್ಳದ ಚಡಪಡಿಸುವ ರೋಗಕ್ಕೆ ನೂಕಿ
ನಿಂತಿರುವೆ ಎಲ್ಲಿ ನನ್ನ ಮರೆತು
ಆಗುತ್ತಿಲ್ಲ, ನಿಲ್ಲಲು ಕಾಯಲು
ಈ ಪ್ರಕೃತಿಯ ನಿಶ್ಯಬ್ದವು ನನ್ನುಸಿರ
ಕಟ್ಟಿಸುವಂತಾಗುತ್ತಿದೆ
ಕದ್ದ ಕಳ್ಳನನ್ನು ಓಡಿ ಹೋಗದಂತೆ
ಕೈ ಕಾಲು ಕಟ್ಟಿ ಹಾಕಿದ ಹಾಗೆ, ನನ್ನ ಕಾಲುಗಳು
ನಿನ್ನ ಮೊಗದ ನಗುವ ನೋಡದೆ ಕದಲನೆಂದು
ಹಗ್ಗ ಕಟ್ಟಿಕೊಂಡು ಕುಳಿತುಬಿಟ್ಟಿವೆ
ನೀ ಬಾರದೆ...
ಈ ಒಂಟಿ ಮರದ ಕೆಳಗೆ ನಾನೊಬ್ಬನೆ
ಒಬ್ಬಂಟಿಯಾಗಿರುವೆ
ಏನಾಗಿದೆ ನನ್ನ ತಲೆಗೆ ?
ಏನೋ ಆಗಿದೆ, ಅರೇ! ಹೌದಲ್ಲ
ತಲೆಯ ಕೂದಲುಗಳು ಬೆಳ್ಳಿಯ
ರೂಪವ ಹೊಂದುತಿವೆಯಲ್ಲ
ನಿಜ.
ಆದರೆ ಬುದ್ದಿಗೇನಾಗಿದೆ?
ಏಕೆ ಮಂಕು ಕವಿದು ಕೂತಿದೆ
ಶಾಲೆಯಲ್ಲಿ ಹಾಕಿಕೊಟ್ಟ ಮನೆಯ
ಪಾಠವನ್ನು ಬರೆಯಲು ಒಲ್ಲೆಂದು
ರಚ್ಚೆ ಹಿಡಿವ ಮಗುವಂತೆ
ಬದುಕಿನ ಸಂತೆಯ ಕಂತೆಯ
ಬರೆಯಲು ಪದಗಳ ಕಟ್ಟದೆ
ಬುದ್ದಿಯು
ಮಲಗಿದೆಯೋ... ಮುದುಡಿದೆಯೋ...
ಸೋರಗಿದೆಯೋ...ಸೋಮಾರಿಯಾಗಿದೆಯೋ...
ಪಕ್ಷವಾದರೂ, ನೀರು ಬಾರದ ಸರಕಾರಿ
ನಲ್ಲಿಯ ಕೆಳಗೆ ತೊಳೆದಿಟ್ಟ ತಾಮ್ರದ
ಹಂಡೆಯಂತೆ ಬರಿದಾಗಿ ಕೂತಿದೆ
ಹರೀವ ನೀರಿನ ಜೀವ ಜಂಜಾಟಗಳ
ತುಮಲಗಳ ಹಿಡಿದಿಡದೊಲ್ಲದೆ
ಜ್ಞಾನವು
ಜಾರಿದೆಯೋ.... ಜಡವಾಗಿದೆಯೋ....
ದಣಿದಿದೆಯೋ... ದಾಹವಾಗಿದೇಯೋ...
ನಾನರೀಯೆ, ಆದರೆ ಚಿಂತಕನೆ
ಸುಮ್ಮನೆ ಕುಳ್ಳಿರಿಸಿ ದಡ್ಡನನ್ನಾಗಿ
ಮಾಡದಿರು ನನ್ನನು
ಏಕೆ ಬರೆಯುತ್ತಿಲ್ಲವೆಂದು ಕೇಳುವ
ಬಳಗ ಬಹಳವಿದೆ ನನಗೆ
ಹೊತ್ತಿಗೆ ಅಡುಗೆ ಮಾಡದ ತಾಯಿಯನ್ನು
ಹಸಿದ ಮಗು ಕೇಳಿದ ಹಾಗೆ
ಹಬ್ಬಕ್ಕೆ ಸೀರೆ ತರದ ಗಂಡನನ್ನು
ಮಡದಿ ಕೇಳಿದ ಹಾಗೆ
ಪರೀಕ್ಷೆಯಲ್ಲಿ ಉತ್ತೀರ್ಣನಾಗದ ಮಗನನ್ನು
ತಂದೆ ನೋಡುವ ಹಾಗೆ
ಬರೆಯಬೇಕಿದೆ
ರಾತ್ರಿ ಕಳೆದು ಹಗಲು ಮೂಡುವವರೆಗೆ
ಬರೆಯುವ ಹಾಳೆಗಳು ಉಳಿಯದೆ
ಲೇಖನಿಯ ಮಸಿಯಾಗುವವರೆಗೆ
ನನ್ನ ಬಳಗ ಓದಿ ಓದಿ ಅವರ ಜ್ಞಾನದಾಹ
ತೀರುವವರೆಗೆ
ಬರೆಯಬೇಕಿದೆ ಓಡು ಬುದ್ದಿಯೇ
ಬಣ್ಣ ಮಾಸುವ, ಉದುರಿ ಬೀಳುವ
ಕೂದಲುಗಳ ಚಿಂತಿಸದೆ
ಓಡು ಓಡು ಓಡು
ಕಾಲ ಓಡುತಿದೆ ನೋಡು
ಜನ ಮರಳೊ
ಜನನಾಯಕರು ಮರಳೊ
ಆಡಳಿತವು ಮರಳೊ
ಅಧಿಕಾರಿಗಳು ಮರಳೊ
ಜನಸಾಮಾನ್ಯರಿಗೆ ಸಿಗುತ್ತಿಲ್ಲವಲ್ಲ
ಮರಳು
ಅಧಿಕಾರಿ ವರ್ಗದವರ ತಲೆಯಲ್ಲಿ
ಇಲ್ಲದಿರುವುದೆ ತಿರುಳು
ಕಾಣುತ್ತಿಲ್ಲವೆ? ನಿಮ್ಮತ್ತ ಜನಸಾಮಾನ್ಯರು
ತೋರುತ್ತಿರುವ ಬೆರಳು
ಕೇಳುತ್ತಿಲ್ಲವಲ್ಲ ಮನೆ ಕಟ್ಟಿಸುವವನ
ಗೋಳು
ಮನೆ ಕಟ್ಟುವವರು ಹಾಕಿಕೊಳ್ಳಬೇಕಿದೆ
ಕೊರಳಿಗೆ ಉರುಳು
ಊರನು ಬಿಟ್ಟು ಹಳ್ಳ ಕೊಳ್ಳಗಳ
ಕಾಯುತಿಹರಲ್ಲ ಖಾಕಿ ಖಾದಿಯ
ಮಂದಿಗಳು
ಚಿನ್ನದ ಹಟ್ಟಿಗೆ ಇರದ ಬೆಲೆಯು
ಮರುಳಿನ ಗುಡ್ಡೆಗೆ ಬಂದಿಹುದಲ್ಲ
ಏನೀದರ ಹುರುಳು
ಯೋಚಿಸಲು ಸಮಯವಿಲ್ಲವೆ
ನಮಗೆಲ್ಲರಿಗೂ ಒಂದಿರುಳು
ಗಟ್ಟಿಯಾಗಿ, ಏಕೀಲ್ಲ ನಮಗೆ ಮರಳು
ಎಂದು ಕೇಳುವವರೆ ಇಲ್ಲ, ಎಲ್ಲ ಅಂಜಿ
ಕುಳಿತುಕೊಳ್ಳುವುದೆ ನಮಗಂಟಿದ
ಗೀಳು
ಭಯವಾಗುತ್ತಿದೆ ಕಂಡರೆ ನಮ್ಮದೆ
ನೆರಳು
ಕಾರಣ ಹಣಕಾಸು ಸಂಸ್ಥೆಯ ಸಾಲವು
ಹಿಂಡುತಿದೆಯಲ್ಲ ನಮ್ಮ ಬಾಳು
ಆಡಳಿತಾಧಿಕಾರಿಗಳೆ ನಿಮಗಿಲ್ಲವೆ ಕರುಳು
ಮನೆ ಕಟ್ಟಲಿಕ್ಕೆ ನೀಡಿರಿ ನಿಮ್ಮದೊಂದು
ತೋಳು
ಖರೀದಿಸಿದ ಜಾಗವು ಬೀಳದಿರಲಿ ಬೀಳು
ಕಟ್ಟದೆ ಅರ್ಧಕ್ಕೆ ನಿಂತಿರುವ ಮನೆಗಳಾಗದಿರಲಿ
ಪಾಳು
ಮಧ್ಯಮ ವರ್ಗದವರ ಆಸೆ ಆಗದಿರಲಿ
ಹೋಳು
ಕಟ್ಟಬೇಕಾಗಿರುವ ಕನಸಾಗದಿರಲಿ ಹಾಳು
ಜನ ಮರಳೊ..
ಮರುಳಿಗೆ ಜನ ಮರಳೊ..
ಕಾಯುತಿರುವೆವು ಮರುಳಿಗಾಗಿ
ಹಗಲಿರುಳು, ಒಡೆಯನ ಅಂಗಳದಿಂದ
ಕರಗಲಿ ಮರುಳೆಂಬ ಮಾಯೆಯ
ಇರುಳು ಇರುಳು ಇರುಳು