Saturday, July 30, 2016

ನಾನು ಅಪ್ಪ ಕಣೋ / ಣೇ

ನಾನು ಅಪ್ಪ ಕಣೋ
ನಿನ್ನವ್ವನ ಹಾಗೆ ಹಾಲುಣಿಸುವನಲ್ಲ
ಅತ್ತರೆ ಜೋಗುಳ ಹಾಡಿ ಮಲಗಿಸುವನಲ್ಲ
ನಡು ರಾತ್ರಿಯ ಒದ್ದೆ ಬಟ್ಟೆಯ ಬದಲಿಸುವನಲ್ಲ
ಎಣ್ಣೆಯ ಹಚ್ಚಿ ಮ್ಯೆಯನು ತಿಕ್ಕಿ ತೊಳೆಯುವನಲ್ಲ
ಅಗುಳಗುಳ ಹಿಚುಕಿ ಉಣಿಸುವನಲ್ಲ
ತೊದಲು ನುಡಿಗಳ ಗುರುವಾಗುವನಲ್ಲ
ನಿನ್ನ ಮನದ ಮಾತುಗಳರಿಯುವ ತಾಯಿ ಮಮತೆಯವನಲ್ಲ
ನೀನಿಲ್ಲದ ಅಂಗಳವ ನೆನೆದು ಕೊರಗುವನಲ್ಲ

ನನಗೆ ಇಷ್ಟು ಮಾತ್ರ ಗೊತ್ತು ನಾನಾಗದ
ನಾನೇರದ, ನಾ ಮುಟ್ಟದ ಗುರಿಗಳನೆಲ್ಲವ
ನಿನ್ನ ರೂಪದಲಿ ಪಡೆಯುವ ಹಂಬಲ
ಅದಕಾಗಿ ಎಷ್ಟೊ ರಾತ್ರಿಗಳನು ಹಗಲಾಗಿಸಿರುವೆ
ಉಡದುಣ್ಣದೆ, ಮಲಗದೆ ನಿನ್ನ ಶಿಖರದ ತುದಿಯ
ಮುಟ್ಟಿಸಲು, ನಿನ್ನ ಹೆತ್ತವಳಾರೆಂದು ಕೇಳುವಂತೆ
ಮಾಡಿ ಅದರಲಿ ನನ್ನ ನಾ ಹುಡುಕುವೆ

ಗೊತ್ತಾ ಮಗನೆ/ ಳೆ

Wednesday, July 13, 2016

ಬೇಸಿಗೆ ಬಾನು

ಬೇಸಿಗೆಗೆ ಕಡಲನು
ಬೇಡುವ ಬಾನು
ಭೂವಿಗೆ ಹಸಿರನು
ಉಣಿಸದಿರುವುದೇ ತಾನು 

ನಾನೇಷ್ಟು ಓದಿದ್ದೆ ಗೊತ್ತಾ

ನಾನೇಷ್ಟು ಓದಿದ್ದೆ ಗೊತ್ತಾ ...
ನಾನೇಷ್ಟು ಅರಿತಿದ್ದೆ ಗೊತ್ತಾ ...
ನಾನೆಂಥ ಮನಸ್ಸಿನವಳು
ಅಂಥ ತಿಳಿದುಕೊಂಡೆ
ಮದುವೆಯಾಗಿದ್ದೆ ನೀನು
ಯಾಕೆ ...

ನಾನಷ್ಟು ಓದಿದ್ದು, ಅರಿತಿದ್ದು
ನಿನಗೆ ಮುಳುವಾಯಿತೆ
ಅದಕೆ ಬಂಧನವಿರದ
ಅಡುಗೆ ಮನೆಗೆ ನೂಕಿ
ಬಿಟ್ಟೆ ನನ್ನೆಲ್ಲ ಓದು
ಅರಿವು ಅಡುಗೆಯ
ವಗ್ಗರಣೆ ವಾಸನೆಗೆ
ಕಮರುವಂತೆ 

ಯಾವ ದಾರಿ

ಹೂವಿರದ ಬಳ್ಳಿಯಲಿ
ಜೇನು ಸುಳಿಯದು ಸನಿಹದಲಿ
ಶಶಿಯಿರದ ಬಾನಿನಲಿ
ಕಡಲುಕ್ಕೇರದು ತೀರದಲಿ

ನೋವಿಲ್ಲದ ಎದೆಯಲಿ 
ಜಾರದು ಬಿಂದು ಕಣ್ಣಿನಲಿ
ನಗುವಿರದ ಮೊಗದಲಿ
ಗೆಲುವಿರದು ಬಾಳಿನಲಿ

ದೇವರಿರದ ಗುಡಿಯಲಿ
ಯಾವ ದೀಪವ ಬೆಳೆಗಲಿ
ನೀನಿಲ್ಲದ ಪಯಣದಲಿ
ಯಾವ ದಾರಿಯ ಹಿಡಿಯಲಿ 

Tuesday, July 12, 2016

ಒಲವಿನ ಪ್ರೀತಿಯಲಿ

ಒಲವಿನ ಪ್ರೀತಿಯಲಿ
ನೋವಿಗೆ ಸೋಲಿರಲಿ 
ಪ್ರೀತಿಯ ಬದುಕಿನಲಿ
ನಲಿವಿಗೆ ಜಯವಿರಲಿ 

ಮುಳ್ಳಿನ ಹಾದಿಯಲಿ
ಹೂವಿನ ನಗೆಯಿರಲಿ
ಮೆಚ್ಚಿನ ದಿನಗಳಲಿ
ನೋವಿನ ಅರಿವಿರಲಿ 

ಹೇಗೆ ಬರೆಯಲಿ

ಹೇಗೆ ಬರೆಯಲಿ ನಾನು
ಹೇಳದೆ ಹೋದರೆ ನೀನು 
ಹೇಳಿ ಹೋಗಿದ್ದರೆ ನೀನು
ಮರೆಯುತ್ತಿದ್ದೇನೆ ನಿನ್ನ ನಾನು 

ನೆನಪಾಗಿ ಉಳಿದರೆ ನೀನು 
ಹೇಗೆ ಮಲಗಲಿ ನಾನು 
ಮಲಗಿದರೆ ನಾನು
ನೆನಪಾಗುವೆ ನೀನು 

ಉಸಿರೊಂದೆ ನನಗೆ ನೀನು
ಉಸಿರಾಡ ಬೇಕು ನಾನು 
ಉಸಿರಾಗದಿದ್ದರೆ ನೀನು
ಹೇಗೆ ಬದುಕಲಿ ನಾನು 

ನೀನಿಲ್ಲದ ಮನದಲಿ

ನೀನಿಲ್ಲದ ಮನದಲಿ
ನೀನಿರದ ನೆನಪಿನಲಿ
ಏನೆಂದು ಬರೆಯಲಿ
ಬಿಳಿ ಹಾಳಿಯಲಿ

ಆಡಿದ ಮಾತಿರಲಿ
ನೋಡಿದ ಕನಸಿರಲಿ
ಮೀಡಿದ ಶ್ರುತಿಯಿರಲಿ
ಹಾಡಿದ ಗೀತೆಯಿರಲಿ

ಒಂದಾದರೂ ನೆನಪಿರದ
ಮನದಲಿ ಏನೆಂದು
ಬರೆಯಲಿ ಬಿಳಿ
ಹಾಳೆಯಲಿ

ನೀನಿಲ್ಲದ ನೆನಪುಗಳ
ಬರೆದು ಹೇಗೆ ಇರಲಿ
ಆ ಬಿಳಿ ಕಾಗದವ
ಸಾಯಿಸಿ ... 

Saturday, July 9, 2016

ತೊಡಿರೊ ಗುಂಡಿ

ತೊಡಿರೊ ಗುಂಡಿ
ತೆಗೆಯಿರೊ ಗುಂಡಿ
ಮಳೆಯ ನೀರದು
ಹರಿದು ಹಳ್ಳವ
ಸೇರುವ ಮುನ್ನ

ಬಾಳಿನ ಬಂಡಿ
ನೀರಿನ ಕೊಂಡಿ
ಕಳಚಿ ಬಿಳದೆ
ಸೊಸಿ ಹಿಡಿಯಿರೊ
ಹರಿಯುವ ಮುನ್ನ


ಧರ್ಮ ಮತ್ತು ಬಣ್ಣ

ಭರತಖಂಡವಿದು ನಮ್ಮ ಭೂಮಿ
ಸರ್ವ ಧರ್ಮಗಳ ತವರೂರು
ಈ ಪುಣ್ಯಭೂಮಿ
ಪುಣ್ಯಪುರುಷರ ಜಗಕೆ ನೀಡಿದ
ಪೂಜ್ಯಭೂಮಿ

ಈ ಭೂಮಿಯಲಿ ನೂರೆಂಟು
ಬಣ್ಣಗಳು ಆ ಬಣ್ಣಗಳಿಗೂ
ನೂರೆಂಟು ಜಾತಿಯ ತಳಕುಗಳು
ಕೇಸರಿಯ ತೊಟ್ಟರೆ ಹಿಂದೂಗಳು
ಬಿಳಿಯನು ತೊಟ್ಟರೆ ಕ್ರಿಶ್ಚಿಯನ್ನರು
ಹಸಿರನು ಉಟ್ಟರೆ ಮುಸಲ್ಮಾನರು

ಎಲ್ಲ ಬಣ್ಣಗಳಿಗೂ ಒಂದೊಂದು
ಜಾತಿಯ ನಂಟು ಆ ಬಣ್ಣ ನಮ್ಮ
ಗುರುತು ಈ ಬಣ್ಣ ನಮ್ಮ ಸ್ವತ್ತು
ಎನ್ನುತ ದ್ವೇಷವ ಬಿತ್ತುತಿಹರೆಲ್ಲ
ಅವರಿಗೇನೂ ಗೊತ್ತು ಏಳು ಬಣ್ಣ
ಸೇರಿದರೆ ಬಿಳಿಯ ಬಣ್ಣ ಹುಟ್ಟುವದು

ಶಾಂತಿಯ ಮಂತ್ರ ಆ ಬಣ್ಣ ಅದನ್ನು
ಜಾತಿಯ ಕತ್ತಿಗೆ ಸುತ್ತಿಹರು

ಬೋಧನೆ

ಸರ್ವಸಂಗ ಪರಿತ್ಯಾಗಿಗಳು
ಸಕಲಕಾಮನೆಗಳ ತೊರೆದವರು
ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ
ಮುತ್ತು ರತ್ನ ಹವಳ ಕಾಂಚನಗಳ
ಸ್ವೀಕರಿಸದವರು ಆಡುವರು ನಾಕು
ಮಾತು ಎಲ್ಲರ ತಲೆಯ ಮೇಲೆ ಕೈಯಿಟ್ಟು

ಸಂಸಾರ ಅಂದ್ರ ಹಾಲು ಜೇನು
ಇದ್ದಂಗ, ಗಂಡ ಹೆಂಡತಿ ಅಂದ್ರ
ಹೂ ದುಂಬಿದ್ದಂಗ, ಮಕ್ಳಂದ್ರ
ರೊಟ್ಟಿ ಮೇಲೆ ಬೆಣ್ಣಿದ್ದಂಗ
ಇಷ್ಟಿದ್ರ ಸುಖ ಸಂಸಾರಕ್ಕ
ಇನ್ನೇನ ಬೇಕಂತ ಅಂತಾ ಎಲ್ಲಾ
ಹೇಳ್ತಾರ

ಬಂಜೆ....

ಯವ್ವಾ...
ಮದುವ್ಯಾಗಿ ಹದಿನಾರು
ವರ್ಷ ಕಳದಹೋದವು ಇನ್ನೂ
ಬಾಯಿ ಕೆತ್ತಿ ಹುಳಿ ಬೇಡವಲ್ದ
ತಲಿಸುತ್ತಿ ವಾಂತಿ ಬರುವಲ್ದು
ಅವ್ವಾ ಅಂತಾ ಕರೆಯಾಕ
ಹೊಟ್ಟ್ಯಾಗೊಂದು ಹುಳು ಹುಟ್ಟವಲ್ದ

ನನ್ನ ಜೊತೆ ಮದುವ್ಯಾದ ನನ್ನ
ಓರಗಿತ್ತಿಯವರ ಮಕ್ಳು ಈಗ ಮ್ಯೆ
ಕ್ಯೆ ತುಂಬಕೊಂಡ ನೆರೆಯಾಕ ಹತ್ಯಾರ
ಊರೊರ ಹೊಲ್ಕ ಹೋಗಿ ಕೂಲಿನೂ
ದುಡಿಯಾಕ ಹತ್ತಾರ ಅಲ್ದ ಅರ್ಧ ಮನಿ
ಕೆಲಸಾನೂ ತಾವ ತೂಗುಸಾಕ ಹತ್ತಾರ

ಯವ್ವಾ....
ನನ್ನ ಕೊಟ್ಟ ಮನಿ ಹೊಲಾನು ಬಂಜರು
ಆ ಮನಿಗೆ ಹೋದಾಕಿ ನಾನು ಬಂಜರು
ಹೊಲ ಬಂಜರಾದ್ರು, ಜಾಲಿ ಬೆಳಿತ್ಯೆತಿ
ಅದನ್ನ ಕಡದು ಉರವಲು ಮಾಡ್ಕೊತಾರ
ಹಸರು ಹುಲ್ಲು ಹುಟ್ಟಿದ್ರ ದನಕ್ಕ ಮೇವಾಗ್ತ್ಯತಿ
ತೆಗ್ಗ ತಗದ ಬಿಟ್ರ ಮಳೆಗಾಲದ ನೀರ ನಿಂತ
ದನಕರಕ್ಕ ಕುಡಿಯೊ ಕೆರಿಯಾಗತ್ಯೆತಿ

ನಾನು ಬಂಜರಾದ್ರ ಊರೊರ ಸೀರಿ
ಕಾರಣಕ್ಕ , ತೊಟ್ಟಿಲ ಕಾರಣಕ್ಕ
ಮನಿ ಶುಭಕಾರ್ಯಕ್ಕ ಎರವಾಗ್ತೀನಿ
ಹಾಲ ಕರೆಯೊ ಹಸು ಕೆಚ್ಚಲಿಗೆ ಹಿಂಡಾಕ
ಕ್ಯೆ ಹಾಕಿದ್ರ ಕೆಚ್ಚಲು ಎಲ್ಲಿ ಬತ್ತಿ ಹೋಗತ್ಯೆತೊ
ಅಂತ ಮನೆಯವರು ನೋಡೊ ನೋಟಕ್ಕ
ನನ್ನ ಹೊಟ್ಟ್ಯಾಗೊಂದು ಹುಳ ಹುಟ್ಸಂತ ಆ
ಕಣ್ಣು, ಕರುಳಿಲ್ಲದ ದೇವರಿಗೆ ಮೊರೆ ಇಡಾಕ
ಹತ್ತೀನಿ

ಯವ್ವಾ...
ನನ್ನನ್ನ ಯಾಕರ ಬಂಜಿಯನ್ನಾಗಿ ಹುಟ್ಸಿದಿ
ನೀನಾದ್ರೂ ಬಂಜಿಯಾಗಿದ್ರ ನಾನಿವತ್ತು
ಎಲ್ಲಾರ ಕಣ್ಣಾಗ ಕೀಳಾಗಿ, ಕೊಟ್ಟ ಮನಿಗೆ
ಹೊರೆಯಾಗೋದು ತಪ್ಪುತ್ತಿತ್ತು ದಿನಾ.. ನಾ
ಬಸುರು ಉಸಿರ ಬೆಳಿವಲ್ದಂತ ಹಲುಬುದು
ತಪ್ಪತಿತ್ತು

ನಾನೇಷ್ಟು ಸ್ವಾರ್ಥಿ ಅದಿನಲ್ಲಾ ಬೇ..
ನೀನು ಬಂಜಿಯಾಗಿ ನಿನ್ನ ತಾಯಿನ
ನೀನು ಹಿಂಗ ಕೇಳಿದ್ರ ನೀನರ ಎಲ್ಲಿರ್ತಿದ್ದಿ
ನಾನರ ಎಲ್ಲಿರ್ತಿದ್ನಿ, ನೀನೇರ ಬಂಜಿಯಾಗಿದ್ರ
ಅದರ ನೋವು ನಿನ್ನ ಕ್ಯೆಲಿ ತಡಕೊಳ್ಳದ ಆಗ್ತಿತ್ತೊ
ಇಲ್ಲೊ ನನಗಂತು ಗೊತ್ತಿಲ್ಲ

ನನ್ನ ಬಂಜಿತನಕ್ಕ ನಿನ್ನ ಹೊಣೆ ಮಾಡೋ
ಹಣೆಬರಹನ ಆ ದೇವರ ಬರೆದಾನ ಆದ್ರ
ನೀ ಮನಸ್ಸಿಗೆ ತಗೊಬ್ಯಾಡ ಬೇ.. ಮಗು
ಮನಸ್ಸನಂಥ ಗಂಡದಾನ ಅಷ್ಟ ಸಾಕ
ಅವರ ಮಡಿಲಾಗ ಮುಂದಿನ ಜನ್ಮಕ್ಕಾದ್ರೂ
ತೊಟ್ಟಿಲ ತೂಗೊ ಭಾಗ್ಯ ನೀಡಂತ ಆ ಶಿವ್ನಲ್ಲಿ
ಬೇಡ್ತಾ ಕಣ್ಮುಚ್ಚತೀನಿ

ಕೇಳು ಹೆಣ್ಣೆ

ಕೇಳು ಹೆಣ್ಣೆ ನಾನು ರಾಮನಲ್ಲ
ಮದುವೆಯ ನಂತರ ನಿನಗೊಬ್ಬಳಿಗೆ
ನಿಷ್ಠೆಯಾಗಿರುವವನಲ್ಲ ಹಾಗಂತ
ರಾವಣನ ಹಾಗೆ ಪರ ಸ್ತ್ರೀ ಯನ್ನು
ಮನೆಗೆ ಎತ್ತಿಕೊಂಡು ಬರುವುದಿಲ್ಲ
ಯಾಕೆಂದರೆ ಬಿ.ಪಿ.ಎಲ್ ಕಾರ್ಡಿನಲ್ಲಿ
ಅವಳ ಹೆಸರನ್ನು ನಮೂದಿಸಲಾಗುವುದಿಲ್ಲ

ಅರಿತಿಕೊ ಹೆಣ್ಣೆ ನಾನು ಭೀಮನಲ್ಲ
ಮದುವೆಯ ನಂತರ ನಿನ್ನನ್ನು
ಅವಮಾನಿಸಿದವರ ಎದೆಬಗೆಯುವನಲ್ಲ
ಹಾಗಂತ ನಾನೇನು ದುಶ್ಯಾಸನನೇನಲ್ಲ
ದಾಸಿಯ ಸೀರೆಯ ಸೇರಗನು ಈಗ
ಎಳೆಯಲಾಗುವುದಿಲ್ಲ ಯಾಕಂದರೆ
ಇತ್ತೀಚೆಗೆ ನಮ್ಮನೆ ಕೆಲಸದಾಕೆ
ಚೂಡಿಯನ್ನು ಧರಿಸಿರುತ್ತಾಳೆ

ತಿಳಿದಿಕೋ ಹೆಣ್ಣೆ ನಾನೇನು ಶಿವನಲ್ಲ
ಪಾರ್ವತಿಯ ಪ್ರೀತಿಗೆ ಅರ್ಧ ದೇಹವನೆ
ನೀಡಿ ಅರ್ಧನಾರೀಶ್ವರ ನಾಗುವನಲ್ಲ
ಹಾಗಂತ ನಿನ್ನನ್ನು ನನ್ನ ಶರೀರದ
ಅರ್ಧ ದೇಹದಲ್ಲಿ ತೂರಿಸಿಕೊಳ್ಳಲು
ಆಗುವುದಿಲ್ಲ ಯಾಕಂದರೆ ನಿನಗಿಂತ
ನನ್ನ ಹೊಟ್ಟೆ ಸ್ವಲ್ಪ ದಪ್ಪ ಅದಕ್ಕೆ

ದೊಡ್ಡದು ಚಿಕ್ಕದು

ಎಪ್ಪತ್ತು ಲಕ್ಷದ ಕಾರಿದ್ರೆನಾತ
ಎಪ್ಪತ್ತು ರೂಪಾಯಿ ಎಣ್ಣಿ
ಇಲ್ಲಂದ್ರ ಗಾಡಿ ಒಂದ ಒಂದ
ಗಾಲಿ ಉಳುಕಿ ಉಳ್ಳೊದಿಲ್ಲ

ಐವತ್ತ ಸಾವ್ರ ರೂಪಾಯಿ ಫೋನಿದ್ರೆನಾತ
ಐವತ್ತ ಪ್ಯಸೆ ಫೋನ್ ನ್ಯಾಗ
ಇಲ್ಲಂದ್ರ ಒಂದ ಒಂದ ಮಿಸ್ಡ್
ಕಾಲ್ ಮಾಡೋಕ ಬರಂಗಿಲ್ಲ

ಐವತ್ತು ರೂಪಾಯಿ ಸೀಗರೇಟ ಪ್ಯಾಕಿದ್ರೇನಾತ
ಐದು ರೂಪಾಯಿದು ಒಂದ ಬೆಂಕಿ
ಪಟ್ಟಣ ಇಲ್ಲದಿದ್ರ ಒಂದ ಒಂದ
ಸೀಗರೇಟನ್ನು ಸೇದಾಕ ಆಗೋದಿಲ್ಲ

Thursday, July 7, 2016

ನಾನು ಮೊದಲು ಹೇಗಿದ್ದೆ ಗೊತ್ತಾ

ನನ್ನ ತಂದೆಯ ಮನೆ ನನಗೆ
ಗ್ರಹಬಂಧನವಾಗಿದ್ದರೂ ನನ್ನ
ಚಿಕ್ಕಪುಟ್ಟ ಆಸೆಗಳ ರೆಕ್ಕೆಗೆ
ಬಂಧನವಿರಲಿಲ್ಲ

ಮನೆ ಮುಂದಿನ ಕೈ ತೋಟದಲ್ಲಿ
ಹೂಗಳ ಜೊತೆ, ಹಾರಾಡುವ
ಚಿಟ್ಟಗಳ ಜೊತೆ, ತೂಗಿರುವ
ತಳಿರು, ಹಂಪಲುಗಳ ನಡುವೆ
ಓಡಾಡಿಕೊಂಡಿರುವಾಗ

ಮನೆಯ ಮೇಲ್ಛಾವಣಿ ಮೇಲೆ
ಚಂದ್ರನ ಜೊತೆ ಮಾತಾಡುತ್ತ
ಬೀಸುವ ತಂಗಾಳಿಗೆ ಮುಖವೊಡ್ಡಿ
ಮನದಲ್ಲೆ ಹಾಡು ಗುನುಗುತ ಗೆಳೆಯನ
ನೆನೆದು ನಾಚುವಾಗ

ಊರಿನ ಸಂತೆಯಲಿ ಅಮ್ಮನ
ಸೇರಗಂಚು ಹಿಡಿದುಕೊಂಡು
ಆ ಭೀಮಜ್ಜನ ಜಿಲೆಬಿ, ಮೆಹಬೂಬಿ
ಅಜ್ಜಿಯ ಗಜ್ಜರಿಗಳನ್ನು ಕದ್ದು
ತಿನ್ನುವಾಗ

ಹ್ಞೂಂ...ಹ್ಞೂಂ..ಇದ್ಯಾವದು
ನನಗೆ ಎಂದು ಬಂಧನವೆ ಅನಿಸಲಿಲ್ಲ
ಆದರೆ ನಿನ್ನ ನಾ ಮದುವೆಯಾಗಿ
ಬಂದ ಮೇಲೆ ಈ ಮಹಡೀ ಮನೆ
ನನಗ್ಯಾಕೊ ಬಂಧವೆನಿಸುತ್ತಿದೆ

ನಿನ್ನ ಮನೆಯಲ್ಲಿ ನನ್ನನ್ನು ಸ್ವಚ್ಛಂದ
ಹಕ್ಕಿಯಂತೆ ಹಾರಾಡಲು ಬಿಟ್ಟಿದ್ದರೂ
ನೀ ಕಟ್ಟಿದ ತಾಳಿ ಕೊರಳಿಗೆ ಹಗ್ಗವಾಗಿ
ಒಂಟಿತನದ ಉಸಿರು ಬಿಗಿಯುತಿದೆ
ಕೊಸರಿ ಚಿರುವಂತಾಗಿದೆ

ನಿನ್ನ ಬಂಗಾರದ ಕೈ ಬಳೆಗಳು
ಸಂಕೋಲೆಯಂತೆನಿಸಿ ಕೈಗಳನೆ
ಕಟ್ಟಿಹಾಕಿರುವಂತೆನಿಸಿದೆ, ಆ
ಬೆಳ್ಳಿಯ ಕಾಲ್ಗೆಜ್ಜೆಗಳು ಭಾರವಾಗಿ
ಅಲೆದಾಡದಂತೆನಿಸಿವೆ

ಈ ಸ್ವೆಚ್ಛಂದ ತಿರುಗಾಟದಲೂ
ನನಗೆ ಬಂಧನದ ಭಾಸವಾಗುತಿದೆ
ನನಗ್ಯಾಕೊ ಈ ಸ್ವತಂತ್ರತೆಯ
ವಿಹಾರಕ್ಕಿಂತಲೂ ಬಂಧನದ
ಪ್ರೀತಿಯೆ ಅಪ್ಯಾಯಮಾನವೇನುಸುತಿದೆ

Wednesday, July 6, 2016

ಈ ಸಾವು ನ್ಯಾಯವೆ

ನೀನು ಮೊದಲು ಹೇಗಿದ್ದೆ ಗೊತ್ತಾ

ನೀನು ಮೊದಲು
ಹೇಗಿದ್ದೆ ಗೊತ್ತಾ...

ಬಣ್ಣ ಮಾಸಿದ, ಇಲ್ಲೊ
ಅಲ್ಲೊ ಪಂಕ್ಚರ ಆಗುವಂತಿದ್ದ
ಟೈರ್,  ಬಹಳ ದೂರವು
ಹೋಗಲಾರದಷ್ಟು ಪೇಟ್ರೊಲ್
ಆ ಗಾಡಿಯ ಶಬ್ದ ದೂರದೂರಿಗೂ
ಕೇಳುವಷ್ಟು ಕರ್ಕಷವಾಗಿದ್ದರು
ಹಿಂಬದಿಯ ಸೀಟಿನಲ್ಲಿ ನನ್ನನ್ನು
ಕುಳ್ಳರಿಸಿಕೊಂಡು ಆ ಬೆಟ್ಟದ
ತಪ್ಪಲಿನಲ್ಲಿ ಲೋಕಾನೆ ಮರೆತು
ಗಂಟೆಗಟ್ಟಲೆ ಮಾತನಾಡುತ್ತಿದ್ದೆ
ನನ್ನಂದವನೆಲ್ಲಾ ಆ ಕಣ್ಣುಗಳಿಂದಲೆ
ಕುಡಿಯುವಂತೆ ನೋಡುತ್ತಿದ್ದೆ
ನನ್ನೆ ನಾ ನಾಚಿ ನೀರಾಗುವಂತೆ

ಇಂದು ಹೇಗಿರುವೆ ಅದಾದರೂ
ನಿನಗೆ ಗೊತ್ತಾ

ಸಪ್ತಪದಿ ತುಳಿದು ನಿನ್ನ
ಕೈಗೆಟುಕುವಷ್ಟು ಸನಿಹದಲ್ಲಿದ್ದರೂ
ಯಾಕೀಷ್ಟು  ತಾತ್ಸರ
ಕೈಯೊಳಗೆ ಕೈಹಾಕದಿದ್ದರು ಸರಿ
ನನ್ನ ಭುಜದ ಮೇಲೆ ನೀನು ಕೈ
ಹಾಕದಿದ್ದರು ಸರಿ
ಆ ಕೈ ಸೊಂಟವ ಸುತ್ತಲಿದ್ದರು ಸರಿ
ನೀ ಹಾಗೆ ಮುನ್ನಡೆದು ದಾರಿ
ತೋರಿದರು ಸರಿ ನಿನ್ನ ಹಿಂಬಾಲಿಸುವೆ
ದೂರದ ಬೆಟ್ಟವಾದರೂ ಬೇಡ
ಹತ್ತಿರದ ತೋಟಕ್ಕಾದರೂ
ಕರೆದೊಯ್ಯಿ ನನ್ನರಿವಿರುವಂತೆ

ಸಾವೆ ನಿನಗೆ ನ್ಯಾಯವೆ

ಸಾವೆ

ಓ ಸಾವೆ ಏನೆಂದು ಕರೆಯಲಿ
ನಿನ್ನ ನಾ...

ಆ ಸೀತೆಯದು ಹದಿನಾಲ್ಕು
ವರ್ಷದ ವನವಾಸ
ಈ ವನಿತೆಯದು ಎರಡು
ವರ್ಷದ ತವರುವಾಸ
ಗಂಡನಿಗೆ ಬೇಡವಾಗಿ
ಅತ್ತೆಮಾವರಿಗೂ ತಿರಸ್ಕಾರವಾಗಿ
ಅಲ್ಲಿಗೂ ಸಲ್ಲದ ಇಲ್ಲಿಯೂ ಇರಲೊಲ್ಲದ
ವೇಳೆಯಲಿ ಚಿಗುರಿತೊಂದಾಸೆ ಒಡಲ
ಕುಡಿಯೊಂದು ಹುಟ್ಟಿದ ವೇಳೆ
ಕತ್ತಲಲಿ ಕಿರಣವೊಂದು ಕಂಡಂತೆ
ಸೂರಿಲ್ಲದವನಿಗರಮನೆ ಸಿಕ್ಕಂತೆ
ಬರದ ಬಾಳಿಗೆ ಹಸಿರುಕ್ಕಿದಂತೆ
ಬೆಳಗಿದ ದೀಪ ಮಗ ಪವನ

ಇನ್ನಿಲ್ಲ ಚಿಂತೆ ಗಂಡನರಕಮನೆಯ
ಆಸೆ| ಬಾಳಿಗೊಂದು ಬೆಳಕಂತೆ
ಕೈಗೊಂದು ಊರುಗೊಲಂತಿರಲು
ದೈವಕ್ಕೆ ಇದನ್ನು ಸಹಿಸದಾಯಿತೇನೊ
ಚಿವುಟಿತು ಚಿಗುರನು ಹುಟ್ಟಿದ ಪಕ್ಷದೊಳಗೆ
ಸಾವಿನ ಸವಾರಿ ಹೊರಟೆ ಬಿಟ್ಟಿತ್ತು
ಅವನಂಗಳದೊಳಗೆ | ತಾಯಿ ಲಾಲಿ
ಕೇಳಲಿಲ್ಲ | ತೊಟ್ಟಿಲ ತೂಗಿನ ನಿದ್ದೆಯ
ಮಾಡಲಿಲ್ಲ | ದಿನವಾದರೂ ಹೊಟ್ಟೆ ತುಂಬ
ಹಾಲು ಕುಡಿಯದೆ ಸವಾರಿಯನೇರಿಬಿಟ್ಟ
ತಾಯಿಗೆ ಮಗುವ ಮರಣದ ಕೊಡುಗೆ
ತವರಿಗೆ ದೇವರು ನೀಡಿದ ದುಃಖದಡುಗೆ
ಉಣ್ಣುವದೊ ಚಲ್ಲುವದೊ ದೇವರಡಿಗೆ
ದುಃಖವನೆಲ್ಲ ಒಪ್ಪಿಸಿದೆವು ನಿನ್ನ ಮುಡಿಗೆ

ಓ ಸಾವೆ...
ಏನೆಂದು ಕರೆಯಲಿ ನಿನ್ನ ನಾ

Tuesday, July 5, 2016

ಹೇಳದೆ ಇರದಿರು ಸುಮ್ಮನೆ

ಮರೆಸದಿರು ಆ ಮಾತನ್ನು
ನಿನ್ನ ಕಣ್ಣಿನ ಮತ್ತಿನಲಿ
ಹೇಳಿಬಿಡು ಒಂದೇ ಸಾರಿ
ಕೆಂದುಟಿಯ ಅಂಚಿನಲಿ

ಸನ್ನೆಯನ್ನಾದರೂ ಮಾಡು
ಮುಂಗುರುಳಿನಲಿ
ಸದ್ದನ್ನಾದರು ಮಾಡು
ಕೈ ಬಳೆಯಲಿ

ತಿಳಿಸಿಬಿಡು ಕಾಲ್ಗೆಜ್ಜೆಯ
ನಾದದಲಿ
ತೋರಿಸಿಬಿಡು ಲಜ್ಜೆಯ
ರೊಪದಲಿ

ಹೇಳದೆ ಇರದಿರು ಸುಮ್ಮನೆ
ಕೇಳದೆ ಇರಲಾರೇನು ಒಬ್ಬನೆ

Monday, July 4, 2016

ನನ್ನ ನೀನು

ಓ ತಂದೆಯೆ....
ನೀನು ನನ್ನನ್ನು ಬಯಸುತ್ತಿದ್ದರೆ
ಗರ್ಭದಲ್ಲಿಯೆ ಚಿವುಟುತ್ತಿರಲಿಲ್ಲ
ಹೆಣ್ಣೆಂದು ಜರಿಯುತ್ತಿರಲಿಲ್ಲ
ಅಶಿಕ್ಷತಗೆ ದೂಡುತ್ತಿರಲಿಲ್ಲ
ಅಪ್ರಾಪ್ತ ವಯಸ್ಸಿನಲ್ಲೆ
ಗಂಡನ ಸೆರೆಮನೆಗೆ ದೂಕುತ್ತಿರಲಿಲ್ಲ

ಓ ಗಂಡನೆ ನೀನಾದರೂ
ನನ್ನನ್ನು ಪ್ರೀತಿಸುತ್ತಿದ್ದರೆ
ಹೀಗೆ ಮಾಂಸದ ಮುದ್ದೆಯಂತೆ
ಹಿಂಡುತ್ತಿರಲಿಲ್ಲ
ಕೊಟ್ಟಿಗೆಯ ದನದಂತೆ
ಬಡಿಯುತ್ತಿರಲಿಲ್ಲ
ಮಕ್ಕಳ ಹೆರುವ ಯಂತ್ರದಂತೆ
ಮಾಡುತ್ತಿರಲಿಲ್ಲ
ಇಷ್ಟ ಕಷ್ಟಗಳ ಕೇಳದಿರುವ
ಕಿವುಡನಾಗುತ್ತಿರಲಿಲ್ಲ

ಓ ಮಡಿಲ ಮರಿಗಳೆ
ನೀವಾದರು ಬಯಸಿ
ಈ ನೊಂದೊಡಲನು
ನೀವಾದರು ಅರೆಯಿರಿ
ಮಾತೆಯ ಮಮತೆಯನು
ಸೋದರಿಯ ಕರುಣೆಯನು
ಮಡದಿಯ ಪ್ರೀತಿಯನು

Sunday, July 3, 2016

ಕುಶಲೊಪಚಾರ

ಸಗಣಿ ಸಾರಿಸಿ, ಚುಕ್ಕಿಯಿಟ್ಟಂಗಳ್ಕ
ಅಲಂಕಾರ ಮಾಡಿದ್ರೆದ್ಕ ಬಂತ
ಗಾದ್ಯಾಗ ಕುಳ್ಳರಿಸಿ, ಬಿಸಣಕಿ
ಬೀಸಿದ್ರೇನ ಬಂತ
ನೀರಿಗೆ ನಿಂಬೆ ಸಕ್ರಿಯ ಹಾಕಿ
ಪಾನಕ ಮಾಡಿಕೊಟ್ರೇನ ಬಂತ
ಬಾಗಿಲಿಗೆ ಬಂದೊರಿಗೆ ಹೆಂಗದಿರಂತ
ಕೇಳದಿದ್ರ ಇವ್ನೆಲ್ಲಾ ಯಾಕ
ಮಾಡಬೇಕಂತ

ಇಸ್ಪೀಟ ಆಟ

ಇಸ್ಪೀಟ ಆಟ
ನೋಡಕ್ಹತ್ರ ಮಾಟ
ಆಡಾಕ ಹತ್ರ ಬಖ್ಣ ಖೊಟಾ
ಮನೆಗಬಂದ್ರಿವಳ ಕಾಟ
ರಾತ್ರೊತ್ತಿಗಿಲ್ಲ ಊಟ
ನಿದ್ದಿಗೆ ಹೇಳ್ಬೇಕು ಟಾಟಾ
ಏನ್ಮಾಡೋದೆಲ್ಲಾ ದೇವರಾಟ

ಓ..ಹೆಣ್ಣೆ ನಿನಗಿದೊ ನಮನ

ಓ ತಾಯೆ, ತಂಗಿಯೆ, ಸಹೋದರಿಯೆ
ಪ್ರೇಯಸಿಯೆ, ಮಡದಿಯೆ, ಮಗಳೆ
ಎಲ್ಲ ಹೆಣ್ತನದ ರೂಪಗಳೆ ನಿಮಗಿದೊ
ನನ್ನಿ  ನಮನ

ಬಳ್ಳಿ ಹುಟ್ಟಿನಿಂದಲೂ
ಮರವನಾಶ್ರಯಿಸುವಂತೆ

ನೀನು ಹುಟ್ಟಿನಿಂದ ತಂದೆಯ
ತೊಳೊಳಗಿನ ಲಾಲಿ
ಬುಜದ ಮೇಲಿನ ಸವಾರಿ
ಬೆನ್ನ ಮೇಲಿನಂಬಾರಿ
ಕಿರು ಬೆರಳ ನಾರಿ
ಅಪ್ಪನ ಬಂಗಾರಿ

ಬೆಳಿತಾ ಬೆಳಿತಾ ಗಂಡನ
ಪಕ್ಕನ ಮಡದಿ
ರಾತ್ರಿಗೆ ಸುಖದ ನೋವಿನ ಸಂಗಾತಿ
ಅಡುಗೆ ಮನೆಯೊಡತಿ
ಮದ್ಯಾಹ್ನಕೆರಡು ಮಕ್ಕಳ ತಾಯಿ
ಮುಸ್ಸಂಜೆಗೆ ಮೊಮ್ಮಕ್ಕಳ ದೊಡ್ತಾಯಿ

Saturday, July 2, 2016

ಕವಿತೆ

ಛೆ...ಅದೇಷ್ಟು
ಸಂಜೆಗಳನ್ನು ಕಳೆದುಬಿಟ್ಟೆ
ನೀನಿಲ್ಲದೆ, ನಿನ್ನರಿವಿಲ್ಲದೆ

ಅದೇಷ್ಟು ಪದಗಳ
ಮರೆತುಬಿಟ್ಟೆ, ಕೊಂದುಬಿಟ್ಟೆ
ಅರಿತರಿವಿಲ್ಲದೆ

ಅರ್ಥವಿಲ್ಲದವರೊಡಗೂಡಿ
ಸರಣಿ ವಾಹಿನಿಗಳ ನೋಡಿ
ವ್ಯರ್ಥದಾರಿಯೊಳಡ್ಡಾಡಿ

ಓದದೆ, ಅರಿಯದೆ, ಅನುಭವಿಸದೆ
ಬರೆಯಲೆದ್ದು ಕತ್ತು ಹಿಸುಕಿದೆ, ವಿಲವಿಲನೆ
ಒದ್ದಾಡಿಸಿಬಿಟ್ಟೆ ಕವಿತೆ ಹುಟ್ಟುವ ಮೊದಲೆ...

ಕ್ಷಮಿಸಿಬಿಡಿ ಅಕ್ಷರಕಳೆ
ಹುಟ್ಟುವಾರ್ಧದಲೆ ಸಾಯಿಸಿ
ಅರೆಬೆಂದ ಕವಿ ಥೂ...

ಹಾಗೆನ್ನಲೆನಗೆ ನಾಚಿಕೆ
ಅವಮಾನ, ಸಂಕಟ
ಎಲ್ಲವಡಗೂಡಿ ಅಪರಾಧಿ
ಭಾವನೆ ಟೀಸುಲೂಡೆಯುತಿಹುದು
ಮನದಲಿ....

ಮನ್ನಿಸಿ
ಅಕ್ಷರಗಳೆ

ಚೆಲುವು

ಅಷ್ಟೇನು ಎತ್ತರವಲ್ಲದ
ತಳ್ಳನೂ ಅಲ್ಲದ, ದಪ್ಪನೂ
ಇಲ್ಲದ ನಿನ್ನ ದೇಹ

ಆ ಬೆದರು ಜಿಂಕೆಯ
ಕಣ್ಣುಗಳು| ದುಂಡು
ಮಲ್ಲಿಗೆಯಂತಹ
ಮುದ್ದಾದ ಮೂಗು

ಆ ನೆರಲೆ ಹಣ್ಣಿನ
ತುಟಿಯ ಬಣ್ಣ
ದಾಳಿಂಬೆ ಹಣ್ಣಂತ
ಸಾಲು ದಂತುಗಳು

ಮ್ಯೆ ತುಂಬಿ ನಿಂತ
ದೇಹ| ಹೋಗು
ಬರವಾಗೊಮ್ಮೆ ನೋಡವ
ವಾರೆಕಣ್ಣೊಟ ಓಹಃ

ಮದುವೆಯಾಗಿದ್ದರು
ಆ ಕಣ್ಣ ಬಲೆಯಲಿ
ಒಮ್ಮೆಯಾದರೂ ಬಿದ್ದು
ಬಿಡಬೇಕೆಂಬುವ ಹಂಬಲ

ಅರಿಯಿತು ಮನವು
ನಾನೊಬ್ಬರ ಸೊತ್ತು
ನಿನೊಬ್ಬರ ಸೊತ್ತೆಂದು
ಅದಕೆ ಮುರಿಯಿತು....

ಬೆಸೆಯುವ ಹಂಬಲವ
ಹೊಸೆಯುವ ಬಂಧನವ

ಮಾತು

ಮದುವೆಗೂ ಮುಂಚೆ....

ಮದುವೆಗೂ ಮುಂಚೆ ನೀನು
ಚೆಲುವೆ, ಒಲವೆ, ಬಲವೆ
ನೀನಿದ್ದಲ್ಲೆಲ್ಲಾ ಗೆಲುವೆ

ನೀನ್ನ ಮಾತು ಕೇಳಲು
ಮುತ್ತು, ಮತ್ತು, ಗಮ್ಮತ್ತು,
ಆಡುವ ಮಾತಿನಲ್ಲೆ ಕಳೆಯುತ್ತಿತ್ತು ಹೊತ್ತು

ನೀನು ನಗಲು ಹೀಗೆ
ಮೆಲ್ಲಗೆ, ಮಲ್ಲಿಗೆ, ಸಂಪಿಗೆ
ಎದೆ ಜಾರುತ್ತಿತ್ತು ಕಂಪಿಗೆ

ಬೆನೆ ಬಂದಳಲು ನೀ
ಯಾತನೆ, ವೇದನೆ, ರೋದನೆ
ಮಡಿಲಲಿ ಮಗುವಾಗುತ್ತಿದ್ದೆ ಸುಮ್ಮನೆ

ಮದುವೆಯ ನಂತರ....

ಮದುವೆಯ ನಂತರ ನೀನು
ಬ್ಯೆಯುವೆ, ತಿವಿಯುವೆ, ಬಡಿಯುವೆ
ನೀ ಕ್ಯೆಯಿಟ್ಟಲ್ಲೆಲ್ಲಾ ನೋವೆ

ನೀನು ಮಾತಾಡುತ್ತಿದ್ದರೆ
ಕುತ್ತು, ವಿಪತ್ತು, ಆಪತ್ತು
ಯಾಕಾದರೂ ಬೆಳಗಾಗುತ್ತಿತ್ತೂ

ನೀ ನಗಲು ಹೀಗೆ
ಹೆದರಿ, ಬೆದರಿ, ಕಮರಿ
ಎದೆ ಒದರುತ್ತಿತ್ತು ಹಾಗೆ

ನಾ ಬಂದಳಲು ನಿನ್ನಲ್ಲಿಗೆ
ಸುಮ್ಮನೆ, ತಣ್ಣನೆ, ಕೇಳದೆನೆ
ಹಿಡಂಬಿಯಾಗುತ್ತಿರುವೆ ಹಾಸಿಗೆಗೆ

ಮನವಿಲ್ಲದವರು

ಮನವಿಲ್ಲದವರೊಡನೆ
ಮಾತೆಂತಯ್ಯ
ಒಲವಿಲ್ಲದವರೊಡನೆ
ಬೆಸುಗೆ ಎಂಥಯ್ಯ
ಫೋನಿಲ್ಲದವರೊಡನೆ
ಭೇಟಿ ಎಂಥಯ್ಯ

Friday, July 1, 2016

ನಿನ್ ಅಂದ

ನಿನ್ ಅಂದಾನ ಕಲ್ಲನ್ಯಾಗ
ಕೆತ್ತಿಡ್ತೀನಿ...
ನಿನ್ನ ಮಾತ್ನ ಮುತ್ತನ್ಯಾಗ
ಪೋಣಿಸ್ತಿನಿ...
ನಿನ್ನ ನಗೂನ ಮಲ್ಲಿಗ್ಯಾಗ
ಕಟ್ಟಿಡ್ತೀನಿ....
ನಿನ್ನ ಪ್ರೀತಿನ ನನ್ ಮನದಾಗ
ಮುಚ್ಚಿಡ್ತೀನಿ....

ಹೇಳಿಬಿಡು

|| ಕಣ್ಣಾಗ ಕಣ್ಣಿಟ್ಟ ನೋಡಿದ್ರ
ಪ್ರೀತಿ ಹುಟ್ಹಂಗಿಲ್ಲ ||
ಕಣ್ಣಾಗ ಕಣ್ಣಿಟ್ಟ ನೋಡಿದ್ರ
ಕಣ್ ಬ್ಯಾನಿ ಹುಟತ್ಯತಿ

|| ನೂರಾರು ಪತ್ರ ಬರೆದು ಕೊಟ್ರು
ಪ್ರೇಮ ಬರೊಲ್ಲ ||
ನೂರಾರು ಪತ್ರ ಬರದ್ರ ಕೈ
ನೋವು ಬರತ್ಯತಿ

|| ಸಾವಿರಾರ ಹಾಡ ಹಾಡಿ ಅವಳೆದ್ಯಾಗ
ಪ್ರಣಯ ಬರಸಲಿಕ್ಕಾಗಂಗಿಲ್ಲ ||
ಸಾವಿರ ಹಾಡ ಹಾಡಿದ್ರ ನೀನು
ಗಂಟಲಬ್ಯಾನಿ ಬರಸ್ಕೋತಿ

ಯಾಕಿಷ್ಟು ರಗಳಿ ಮಾಡ್ಕೊತಿ
ಹೇಳ್ಬಿಡು ಅವಳಿಗೆ
ನಾನ ಅದಿನಿ ನಿನ್ ಇರುಳ
ಕನಸಿನ ರಾಜಾಂಥ