ಹುಟ್ಟೂರ ಮರೆತ್ಹೋಗಿ
ಹಿರಿಯೂರಲಿ ಕುತಗೊಂಡು
ತವರೂರ ಮರತೆನೆ
ನನ್ನ ಮಗಳೆ
ಪಂಚಮಿ ಬಂದ್ಯೆತೆ
ಅಳಿಯನ್ನ ಕರಕೊಂಡು
ಹಬ್ಬಕ್ಕೆ ಬಾರೆ ನನ್ನ ಗಿರಿ
ಮಗಳೆ
ಅಣ್ಣನ ಕಳಸಲೆ
ಅಪ್ಪನ ಕಳಸಲೆ
ಯಾರನ್ನ ಕಳಸಲೆ
ಹೇಳೆ ಸಿರಿ ಮಗಳೆ
ಅಜ್ಜಪ್ಪ ಹೊಸ್ದವ್ನೆ
ಜೋಕಾಲಿ ಹಗ್ಗವ
ತೇಗದ ಜಂತಿಯು
ಕಾಯತ್ಯೆತೆ ನನ ಮಗಳೆ
ಹಳ್ಳದ ಸಾಲಿಂದ
ಅಣ್ಣಾನು ತಂದವ್ನೆ
ಖ್ಯಾದ್ಗಿಯ ಹೂವಾವ
ಮುಡಿಬಾರೆ ನಾಗರ ಜಡೆಯವಳೆ
ಗೌರಿಯ ಕೆಚ್ಚಲಿಂದ
ಹಾಲ ಕರಿಸೇನೆ ಜಗಲಿಯ
ನಾಗಪ್ಪಗೆ ಹಾಲನೆರೆಯ ಬಾರೆ
ನನ್ನ ಹಿರಿ ಮಗಳೆ
ಎಳ್ಳುಂಡೆ ಕಾಳುಂಡೆ ಹೆಸರುಂಡೆ
ಕೊಬ್ಬರಿಯ ಕರದಂಟು, ಭೀಮಜ್ಜಿ
ಮನೆಯ ಗಡಿಗೆ ತುಪ್ಪವ ತರಿಸೇನೆ
ಉಣಬಾರೆ
ಇಲಕಲ್ಲ ಸೀರೆ ಪಚ್ಚೆ ಹಸಿರಿನ ಬಳೆ
ನಿನಗಾಗಿ ತರಿಸಿರುವೆ ಬಾ ಮಗಳೆ
ವಾರಾಯ್ತು ನೀ ಬರುವ ದಾರಿ
ಕಾಯಾಕ್ಹತ್ತು ಬಂದು ಬಿಡೆ
ನನ ಮಗಳೆ
Super mastre
ReplyDeleteSuper mastre
ReplyDelete