Saturday, October 29, 2016

ಮನವಿ

ಹೇಗೆ ದೂಡಲಿ ಇನ್ನುಳಿದ
ದಿನಗಳನು
ಹೇಗೆ ಕಳೆಯಲಿ ನೀ ಬಾರದ
ದಿನಗಳನು

ಯಾಕಿಷ್ಟು ಹಠವು ಈ
ಬಡವನ ಮೇಲೆ
ಯಾಕಿಷ್ಟು ಕೋಪ ಭೂದೇವಿಯ
ಮೇಲೆ

ಕಾಡ ಕಡೆದು ನಾಡ ಕಟ್ಟಿದುದಕೆ
ಕೆರೆಯ ಮರೆಸಿ ಮನೆಯ ಕಟ್ಟಿದುದಕೆ
ಭೂಗಂಗೆಯನು ನೀರರ್ಥಕವಾಗಿ ಹರಿಬಿಡುವದಕೆ
ನಿನ್ನಯ ನೀರನು ಉಳಿಸದೆ ಹಳ್ಳಕೆ ಹರಿಸಿದುದಕೆ

ಮಳೆರಾಯ, ಭೂದೇವಿಯ
ಒಡಲೊಡೆಯ, ಸಕಲ ಜೀವರಾಶಿಗಳ
ಆತ್ಮಜನೆ ಸುರಿದುಬಿಡು ಧೊ ಎಂದು
ಎಲ್ಲರೆದೆಯ ಉರಿಯಾರುವಂತೆ

ಬಿತ್ತಿದ ಬೆಳೆಯ ಉಸಿರಾಗಿಸೋಕೆ
ಮೂಕ ಜೀವಿಗಳ ದಾಹ ತಣಿಸುವದಕೆ
ಧರಣಿಯು ಹಸಿರುಡುಗೆಯ ಹೊಂದುವದಕೆ
ಕೊರಡೊಂದು ಚಿಗುರೊಡೆಯುವದಕೆ

ಹಸಿದೊಡಲ ಮಕ್ಕಳು ಅಮ್ಮಾ....ಎಂದು
ಕೂಗಿದರೆ ಮನೆಯಲಿ ಹಿಡಿ ಹಿಟ್ಟಿಲ್ಲ
ಸೇರು ಅಕ್ಕಿಯಿಲ್ಲ, ಕೊಟ್ಟಿಗೆಯ ದನಗಳು
ಅಂಬಾ... ಎಂದು ಕೂಗಿದರೆ ಹಾಕಲು ಮೇವಿಲ್ಲ
ಕುಡಿಸಲು ನೀರಿಲ್ಲ

ದನಗಳನ್ನಾದರು ಮನಸ್ಸು ಕಲ್ಲು ಮಾಡಿಕೊಂಡು
ಕಟುಕನಿಗೆ ಮಾರಿಬಿಡಬಹುದು, ಮೇವಿಲ್ಲದೆ ಬಾಯಾರಿ
ಸಾಯಲೆಂದು ಗುಡ್ಡದ ತೆಪ್ಪಲಿನಲ್ಲಿ ಬಿಟ್ಟು ಬರಬಹುದು
ಶಿವ್ನೆ  ನನ್ನನ್ನೇ ನಂಬಿ ಬಂದ ನನ್ನ ಮಡದಿ, ಎಷ್ಟೇ
ಕಷ್ಟವಾದರೂ ಸರಿ ಸಾಕುತ್ತೇನೆಂಬ ಭರವಸೆಯಲಿ
ಹಡೆದ ಮಕ್ಕಳನೇನು ಮಾಡಲಿ, ಅವರನ್ನೂ.....?

ನಿನ್ನ ನಾಕು ಹನಿ ಸಾಕೇನಗೆ ಇನ್ನೊಬ್ಬರ
ಹಂಗಲಿ ಬೀಳದಂತೆ, ಯಾರೊಬ್ಬರ ಮುಂದೆ
ಕೈ ಚಾಚದಂತೆ, ಕುಹಕ ಮಂದಿಯ ನಡುವೆ
ಕುಗ್ಗಿ ನಡೆಯದಂತೆ, ನನ್ನೆದೆಯ ಉಸಿರು
ನಿಟ್ಟುಸಿರಾಗುದಂತೆ ತಡೆಯಲು

ನಿನ್ನ ಕೊರಗಲಿ ಮಡದಿ ಮಕ್ಕಳು
ನಾನು ಮಣ್ಣ ಸೇರುವ ಮುನ್ನ
ಇಳಿದು ಬಿಡು ಧರೆಗೆ ಇಲ್ಲವೆ ನಾವೆ
ಸೇರುತ್ತೇವೆ ಮಣ್ಣಿಗೆ

ಇಂತಿ ನಿನ್ನ ದಾರಿ ಕಾಯುತ್ತಿರುವ
ಮಳೆಯಾಕಾಂಕ್ಷಿ

ತುಳಿದರು ನನ್ನ

ತುಳಿದರು ನನ್ನ ತುಳಿಯುತಿಹರೂ
ಇನ್ನೂ ನನ್ನ ಮಡಿಕೆಯ ಮಣ್ಣಿನಂತೆ
ನನ್ನೆದೆಯ ನೋವು ಕೇಳಿಸದೆ
ಬಾಳುತಿರುವಿರಿ ನಾಡಿನಲ್ಲೆ

ನನ್ನುಗಮದ ನೀರು ನನಗಿಲ್ಲ
ಬಾಯಾರಿದ ನನಗೆ ನೀರಿಲ್ಲ
ಹರಿಸುತಿಹರಿ ಯಾಕೋ
ನೋಡುತ ನಿಂತಿಹರೆಲ್ಲ

ಭಾಷೆಯ ಕತ್ತಿಗೆ ದೇಹದ
ಭಾಗವನೇ ಕತ್ತರಿಸುತಿಹರು
ಕಾಣದೆ ಇರುವುದಲ್ಲವಲ್ಲ
ಅರಿತು ಮೌನಿಯಾಗಿರುವಿರೆಲ್ಲ

ನೀಡದೆ ನನಗೊಂದು ಗುರುತು
ಮೂಡವುದೆ ಅಭಿಮಾನದ ಹೆಗ್ಗುರುತು
ಓದದೆ ಬರೆಯದೆ ನನ್ನ ನುಡಿ
ಹಚ್ಚುವಿರೆಂದು ಕನ್ನಡದ ಕಿಡಿ

Friday, October 28, 2016

ನಿನ್ನ ನೆನೆದು

ನಿನ್ನ ನೆನೆ ನೆನೆದು ನಾ
ಬಿಡುವ ನಿಟ್ಟುಸಿರಿಗೆ
ಬಳ್ಳಿಯ ಹೂಗಳೆ ಕಮರುತಿವೆ

ನೆನಪುಗಳ ಸುಳಿ ಸುಳಿದು
ಬರುವ ಕಣ್ಣೀರಿಗೆ ಕಿಟಕಿಯ
ಸರಳುಗಳೆ ತುಕ್ಕು ಹಿಡಿಯುತ್ತಿವೆ

ನೀನಾಡಿದ ಚುಚ್ಚು ಮಾತಿನ
ಮೊನಚಿಗೆ ಕೊರಳಿನ ಹಾರದ
ಮುತ್ತುಗಳೆ ಒಡೆಯುತ್ತಿವೆ

ಹಗಲಲಿ ಬಾರದೆ, ಕನಸಲಿ
ಇಣುಕದೆ, ಮನಸಲಿ ನಿಲ್ಲದೆ
ಕೊರೆಯುತ್ತಿರುವೆ ನನ್ನ ಕೊರಡಂತೆ

ಸಾಕಾಯ್ತೇ? ಅಲೆದ ಜಾಗ, ಆಡಿದ
ಮಾತು, ನೀಡಿದ ಕೊಡುಗೆ, ಮಾಡಿದ
ಆಣೆ, ಮುಡಿಸಿದ ಹೂವು, ಕೊಡಿಸಿದ
ಬಳೆ, ಹುಸಿ ಮುನಿಸು, ನಾನೀರುವೆನೆಂಬ
ಭರವಸೆ ಇಂದಿಲ್ಲವಾಯಿತೆ?

ಇಷ್ಟು ದಿನಗಳು ನನ್ನೊಡಗೂಡಿ
ಅಲೆದ ನಿನಗೆ ಯಾರದೂ ಮಾತಿನ
ನಂಬಿಕೆಗೆ ಶಂಕಿಸಿ ಕುರುಡು ಪ್ರೀತಿಯ
ಈ ಹುಡುಗಿಯನು ಬಿಟ್ಟು ಹೊದೇಯಾ
ಬಾವಿಯ ಕಟ್ಟೆಗೆ ಕುಳ್ಳರಿಸಿ

ನನ್ನ ಹಿಂದೆ

ಸಪ್ತಪದಿ ತುಳಿದಾಗದಿಂದಲೂ
ನೀನು ನನ್ನ ಹಿಂಬಾಲಿಸುತ್ತಿರುವೆ
ದೇಹದ ನೆರಳಂತೆ

ಮುಂಜಾವಿನ ವಿಹಾರದಲಿರಲಿ
ಮದುವೆ ಮುಂಜಿ ಕಾರ್ಯಕ್ರಮಗಳಿರಲಿ
ಬದುಕಿನ ಏಳು ಬೀಳುಗಳಲಿ
ನನ್ನೆಲ್ಲ ಗೆಲುವಿಗಿಂತ ಸೋಲುಗಳಲಿ
ನೀ ನೀಡಿದ ಧೈರ್ಯ ಬೆಂಬಲ
ಎಲ್ಲವನ್ನು ನೀನು ಗೆಲ್ಲಬಲ್ಲೆಯೆಂದು
ತೋರುವ ನಿನ್ನ ನಗುಮೊಗ

ನಾನೇಡವಿದರು ನೀ ತಿದ್ದುವೆ
ಎನ್ನುವ ನನ್ನೆಲ್ಲ ಹುಂಬುತನದ
ನಿರ್ಧಾರಗಳ ಹಿಂದೆ ನೀನಿದ್ದೆ
ಇಲ್ಲಿಯವರೆಗೆ... ಇನ್ನು ಮುಂದೆ
ನಿನ್ನ ಹಿಂದೆ ಬರುವ ಹಾಗೆ ನೀನಿರುವೆ
ನನ್ನ ಮುಂದೆ ಗುಣವಾಗದ ರೋಗವ
ಪಡೆದು

ನಿನ್ನ ಹಾಗೆ ನನಗೆ ನಿನ್ನನ್ನು ಹಿಂಬಾಲಿಸುವಷ್ಟು
ಧೈರ್ಯವಾಗುತ್ತಿಲ್ಲ, ಮಕ್ಕಳೆರಡಿರುವಾಗ ನೀ
ಕಂಡ ಕನಸಿನ ಹಾಗೆ ಅವರ ಬದುಕ ರೂಪಿಸಿ
ಬದುಕಿನ ದಾರಿಯನು ತೋರಿಸಿ ನಿನ್ನ ಹಿಂದೆಯೆ
ಬಂದುಬಿಡುತ್ತೇನೆ ಬಹಳ ದಿನ ಕಾಯದೆ

ನಿನಗೆ ಗೊತ್ತು ನಿನ್ನ ಬಿಟ್ಟಿರುವುದು
ನನಗಾಗದ ಮಾತು ಮರಣದ ನಂತರ
ಸುಳಿಯುತ್ತಿರು ಗಾಳಿಯ ಹಾಗೆ, ಹಾಡುತ್ತಿರು
ಹಿತ್ತಲ ಗಿಡದ ಹಕ್ಕಿಯ ಹಾಗೆ, ಮೊರೆಯುತ್ತಿರು
ಮಳೆಯಂತೆ, ಕೊರೆಯುತ್ತಿರು ಚಳಿಯಂತೆ,
ಸುಡುತಿರು ಬಿಸಿಲಂತೆ, ಕಾಯುತ್ತಿರು ನೀ
ಯಾವತ್ತೂ ..ಅಧೀ ದೇವತೆಯಂತೆ

Tuesday, October 25, 2016

ಮನಸಿನ ಕೊಳೆ

ನಿನ್ನ ಮೈಬಟ್ಟೆಗಂಟಿದ
ಕೊಳಕನ್ನು ನೀರಲ್ಲಿ ನೆನಸಿ
ಸಾಬೂನಿನಿಂದ ಉಜ್ಜಿ ಉಜ್ಜಿ
ತೊಳೆದು ಒಣಗಿಸಬಲ್ಲೆ

ನಿನ್ನ ಮೈಗಂಟಿದ ಮಣ್ಣನ್ನು
ಹದವಾಗಿ ಕಲ್ಲಿಂದ ನಿನ್ನ ಮೈಯನ್ನು
ತಿಕ್ಕಿ ತಿಕ್ಕಿ ಶುಭ್ರಗೊಳಿಸಬಲ್ಲೆ

ನಿನ್ನ ಬೂಟಿಗಂಟಿದ ಕೇಸರನ್ನೂ
ಸಹ ಬ್ರಷ್ ನಿಂದ ಉಜ್ಜಿ ಅವನ್ನು
ಫಳಫಳವಂತೆನಿಸುವೆ

ನೀನಿರುವ ಕೋಣೆಯ ಗುಡಿಸಿ
ಸಾರಿಸಿ ಘಮಘಮಿಸುವ
ಪರಿಮಳವ ಸಿಂಪಡಿಸಿ ಶೃಂಗರಿಸುವೆ

ಹ್ಞೂಂ.......
ಯಾಕೊ ಅದೊಂದು ಮಾತ್ರ
ನನ್ನ ಕೈಯಿಂದ ಸಾಧ್ಯವಾಗುತ್ತಿಲ್ಲ
ಎಷ್ಟೇ ಅದನ್ನು ನನ್ನ ಮಾತಿಂದ
ನಗುವಿಂದ, ನೋವಿಂದ, ಮುತ್ತಿಂದ
ದೇಹದಿಂದ, ಒಲವಿಂದ ಪ್ರಯತ್ನಿಸಿದರೂ
ಎಷ್ಟೇಯಾದರೂ ನೀನೊಂದು ಹೆಣ್ಣೆ
ಎನ್ನುವ ಕೀಳು ಯೋಚನೆಯ ಕೊಳೆಯೊಂದನ್ನು
ನನ್ನ ಕೈಯಲ್ಲಿ ತೊಳೆಯಲಾಗಲಿಲ್ಲವಲ್ಲ
ನಾನಷ್ಟೊಂದು ಕೀಳು ಹೆಣ್ಣೆ?

Monday, October 24, 2016

ಮುತ್ತು

ಎಲೆಯ ಮೇಲೆ ಕುಳಿತ
ಇಬ್ಬನಿ ಮುತ್ತು ನೀನು
ಅದನರಿಯದೆ ನನ್ನ
ಬಾಳಲಿ ನಿನ್ನ ಪೊಣಿಸ
ಬಂದೆ ನಾನು

ಮುತ್ತಿಕ್ಕಲಾಗದ, ಎತ್ತಿಡಲಾಗದ
ಪೋಷಿಸಲಾಗದ ಹನಿಯು ನೀನು
ಸವಿಯಲಾಗದ, ಬಳಸಲಾರದ
ಉಳಿಸಲಾಗದ  ಬಿಂದು ನೀನು

ಗೂಡಿನೊಳಗಿನ ಹನಿ ಜೇನಾಗಿದ್ದರೂ
ಸಾಕಿತ್ತು ನನಗೆ ಬಾಳ ಹಾಲಿನಲಿ
ಬೇರಸುತ್ತಿದ್ದೆ , ಹೂವಿನೊಳಗಿನ
ಗಂಧವಾಗಿದ್ದರೂ ನನ್ನೆದೆಗೆ ಇಳಿಸುತ್ತಿದ್ದೆ

ನೀನೊಂದು ಹಾವಿನ ಹಲ್ಲಿನ ವಿಷಬಿಂದು
ಕ್ಷೀರಸಾಗರದಲಿ ಹುಟ್ಟಿದ ಹಾಲಾಹಲವು
ಮನೆಮುರಿಯುವ ಮನಸ್ಸಿನ ಹುಡುಗಿ
ತುಂಬಿದ ಗಡಿಗೆಯ ಒಡೆಯುವ ಬೆಡಗಿ

ಹಾಲಾಗಿ ಕಂಡರೂ ಹಾಲಲ್ಲ ನೀನು
ಹೂವಾಗಿ ಕಂಡರೂ ಹೂವಲ್ಲ ನೀನು
ಎಲ್ಲ ಕಪಟವ ಬಲ್ಲವಳು ನೀನು
ಸಾಕಿನ್ನು ಜಾರಿಬಿಡು ಬಾಳ ಎಲೆಯ
ತುದಿಯಿಂದ

ಏನೆಂದು ದೂರಲಿ

ಏನೆಂದು ದೂರಲಿ ನನ್ನ
ಸಮಯವನು, ಈ ಸಂಜೆಯನು
ನನ್ನೆಲ್ಲ ನೋವು ನಲಿವುಗಳ
ಕರಗಿ ನೀರಾಗಿಸೋಕೆ
ನಿರ್ಧರಿಸುವರಿಂದೆ ಒಂದು
ಸಂಜೆ ಸಾಹಿತ್ಯ ಸಂಜೆ

ಅದು ಗಂಡಸರೆ ನಿರ್ಧರಿಸಿರುವ  ಸಂಜೆ
ನನ್ನ ತಂದೆ ನನ್ನ ಓದು ಮತ್ತು
ಮದುವೆಯನ್ನು ನಿಶ್ಚಯಿಸಿದ ಹಾಗೆ
ಪತಿ ನನ್ನಾಸೆ ಆಕಾಂಕ್ಷೆಗಳನು ಅವರಿಚ್ಚೆಯ
ಮಕ್ಕಳನು ಹೇರುವ ಹಾಗೆ
ಮಕ್ಕಳು ಗಂಡನಿಲ್ಲದ ನನ್ನ ಬದುಕನ್ನು
ನಿರ್ಧರಿಸುವ ಹಾಗೆ

ನಿಮಗರಿವಾಗುತ್ತಿಲ್ಲವೇಕೆ ? ಶತಶತಮಾನಗಳ
ನನ್ನ ನೋವನ್ನು ಕೇವಲ ಈ ಒಂದು
ಸಂಜೆಯಲಿ ತೋಡಿಕೊಳ್ಳಲಾದಿತೆ ? ನೊರಾರು
ವರ್ಷಗಳ ನನ್ನ ನಲಿವನ್ನು ಹಂಚಿಕೊಳ್ಳಲಾದಿತೆ ?
ನಾ ಮೆಟ್ಟಿರುವ, ಮುಟ್ಟಿರುವ, ಮುಟ್ಟಬೇಕಾಗಿರುವ
ಸಾಧನೆಗಳನೆಲ್ಲವ ವಿವರಿಸಲಾದಿತೆ?

ಗೊತ್ತಿಲ್ಲದಿರುವದೇ ನಿಮಗೆ?
ಸಂಜೆಯಾಗುತ್ತಲೆ ಅತ್ತೆ ಮಾವಂದಿರ
ಚಹಾ, ಶಾಲೆಯಿಂದ ಬಂದ ಮಕ್ಕಳ ಅಭ್ಯಾಸ
ನಮ್ಮವರಿಗೆ ಕಾಫೀ, ಅಂಗಳದ ಕಸ, ರಂಗೋಲಿ
ರಾತ್ರಿಯಡುಗೆಯ ತಯಾರಿ, ಸಂಜೆಯಾಗುತಲಿದೆಯಂದು ನೆನಪಿಸುವ ನನ್ನ ಬೆನ್ನುನೋವು ಇವೆಲ್ಲವ  ತೂಗಿಸಿ
ನಿಗಿಸಿ ಬರಲಾದಿತೆ ಈ ಸಂಜೆಗೆ?
ಸಾಕಾದಿತೆ ನನಗಿದೊಂದು ಸಂಜೆ?

Wednesday, October 5, 2016

ಕಾಡುತಿವೆ ನೆನುಪುಗಳು

ಕಾಡುತಿವೆ ನಿನ್ನ ನೆನಪುಗಳು
ಸುಂದರವೊ, ವಿಕೃತವೊ
ಮುದ್ದಾದವೊ, ನೋವಾದವೊ
ಇನ್ನಾದರೂ ನನಗರ್ಥವಾಗುತಿಲ್ಲ

ಮರೆಯಲು ಪಟ್ಟ ಶ್ರಮವೆಲ್ಲ
ಮಳೆಯ ನೀರಂತೆ ಹರಿದು
ಹಳ್ಳವ ಸೇರಿದೆ, ಸೋತಿರುವೆನಾದರೂ
ಗೆಲ್ಲುವ ಛಲವೊಂದನ್ನು ಬಿಟ್ಟಿಲ್ಲ

ನೀನು ಜೊತೆಯಾಗಿದ್ದಾಗ
ನೀಡಿದ ನೋವಿಗಿಂತ ನಿನಿಲ್ಲದಿರೊ
ಆ ನೆನಪುಗಳು ಇನ್ನೂ ಕೊಲ್ಲುತಿವೆ
ನೆಮ್ಮದಿಯ ಉಸಿರು ಬಿಡದ ಹಾಗೆ

ಹರಿಶ್ಚಂದ್ರನಿಗೆ ನಕ್ಷತ್ರಿಕನು ಕಾಡಿದಂತೆ
ಲಕ್ಷ್ಮಣನಿಗೆ ಶೂರ್ಪನಖಿ ಕಾಡಿಸಿದಂತೆ
ರಾವಣನಿಗೆ ಜಟಾಯು ಪೀಡಿಸಿದಂತೆ
ಕಾಡುತಿವೆ ನೀನಿಲ್ಲದ ನೆನಪುಗಳು

Tuesday, October 4, 2016

ನೀನಿರುವೆ ದೂರದಲಿ

ನೀನಿರುವೆ ದೂರದಲಿ ನಾನೇನ ಹೇಳಲಿ
ಬಂದು ಕೂರೊಮ್ಮೆ ಸನಿಹದಲಿ
ಮನಸಿನ ಮಾತು ಕೇಳುತಲಿ
ಕಾಣು ನೂರಾರು ಬಯಕೆಯ ಕಣ್ಣಲಿ

ಮಲಗು ಮಗುವಂತೆ ಮಡಿಲಲಿ
ಕಳೆದುಕೊ ನೋವನು ಸೆರಗಂಚಲಿ
ಪಡೆದುಕೊ ಸುಖವನು ತುಟಿಯಂಚಲಿ
ಬೇವರಾಗಿ ಸೇರಿಬಿಡು ದೇಹದಲಿ

ಮುನಿಸಿ ಕೂರದಿರು ಮನೆಯಲಿ
ನೆನೆದು ಬಿಕ್ಕಳಿಸದಿರು ಮನದಲಿ
ಒಮ್ಮೆಯಾದರೂ ಕೂಗು ಕನಸಲಿ
ಓಡೋಡಿ ಬರುವೆ ನಿನ್ನ ಬಳಿಯಲಿ

ನಿನ್ನ ಹಿಂದೆ

ನಡೆದು ಬಂದೆ ನಿನ್ನ ಹಿಂದೆ
ತೆಗ್ಗು, ದಿನ್ನೆಗಳ ಹಾದಿಯಲಿ
ಏರು ಇಳುವಿನ ಬಾಳಿನಲಿ
ಒಂದಿನಿತು ನೋವೆನಿಸಲಿಲ್ಲ
ನಿನ್ನ ಮಾತಿನ ಮತ್ತಿನಲಿ

ಎಲ್ಲ, ಎಲ್ಲರ ತೊರೆದು ನಿನ್ನೊಲವ
ಬಯಸಿ ಬಂದಿರುವೆ ನಿನ್ನ ಲೋಕಕೆ
ಎಲ್ಲ, ಎಲ್ಲರ ಮರೆಸುತ್ತಿತ್ತು, ಒಂದ್ಹೊತ್ತಿಗಿಲ್ಲವಾದರೂ
ಮರು ಹೊತ್ತಿಗೆ ನೀ ಹಸಿದಾದರೂ ನನಗೆ ನೀ
ನೀಡುತ್ತಿದ್ದ ಕೈ ತುತ್ತು

ಕಷ್ಟಗಳೇ ಸೊರಗಿದ್ದವು, ಹಸಿವೆ ಅಂಜಿತ್ತು
ನಿನ್ನ ಪ್ರೀತಿಸೋ ಹೃದಯಕ್ಕೆ, ಓ ದೈವವೆ
ಇನ್ನಷ್ಟು ದಿನವಾದರು ಉಳಿಸಬಾರದೆ
ಆ ಪ್ರೀತಿಯನು, ಅಪಘಾತವಾಗಿ ಮಲಗಿರುವ
ನನ್ನ ಬಡ ಪ್ರೇಮಿಯನು

ಅವನು ಬಡವನಾದರೂ ಅವನ
ಪ್ರೀತಿ ಎಂದು ಕರಗದ ಬಂಗಾರದ
ಗಣಿಯಂತಹದು ಇದನಗೆದರೆ
ಬಂಗಾರವಾದರೂ ಬರಿದಾದಿತು
ನನ್ನವನ ಪ್ರೀತಿಯ ಬಂಗಾರವೆಂದೂ
ಬರಿದಾಗದೂ

ನನ್ನೆಲ್ಲ ನೋವು ನಲಿವುಗಳ ಹಿಂದೆ
ನೀನಿರುವೆ, ಇಂದು ನಾನು ನಿನ್ನ ಹಾಸಿಗೆಯ
ಪಕ್ಕದಲೇ ನಿಂತಿರುವೆ, ನನ್ನ ತೊರೆದು ತೌವರು
ಸೇರೆನ್ನುತಿರುವ ನಿನ್ನಂಥಕರಣದ ಮುಂದೆ
ನಾನೇಷ್ಟು ಸಾರಿ ಸೋಲಲಿ ನಿನ್ನಾರೈಕೈಯ ಪ್ರೀತಿಗೆ
ಅದಕೆ ನಾನು ಸಾವಲ್ಲಾದರೂ ಸರಿ ನಾ ಬರುವೆ
ನಿನ್ನ ಹಿಂದೆ