Tuesday, October 25, 2016

ಮನಸಿನ ಕೊಳೆ

ನಿನ್ನ ಮೈಬಟ್ಟೆಗಂಟಿದ
ಕೊಳಕನ್ನು ನೀರಲ್ಲಿ ನೆನಸಿ
ಸಾಬೂನಿನಿಂದ ಉಜ್ಜಿ ಉಜ್ಜಿ
ತೊಳೆದು ಒಣಗಿಸಬಲ್ಲೆ

ನಿನ್ನ ಮೈಗಂಟಿದ ಮಣ್ಣನ್ನು
ಹದವಾಗಿ ಕಲ್ಲಿಂದ ನಿನ್ನ ಮೈಯನ್ನು
ತಿಕ್ಕಿ ತಿಕ್ಕಿ ಶುಭ್ರಗೊಳಿಸಬಲ್ಲೆ

ನಿನ್ನ ಬೂಟಿಗಂಟಿದ ಕೇಸರನ್ನೂ
ಸಹ ಬ್ರಷ್ ನಿಂದ ಉಜ್ಜಿ ಅವನ್ನು
ಫಳಫಳವಂತೆನಿಸುವೆ

ನೀನಿರುವ ಕೋಣೆಯ ಗುಡಿಸಿ
ಸಾರಿಸಿ ಘಮಘಮಿಸುವ
ಪರಿಮಳವ ಸಿಂಪಡಿಸಿ ಶೃಂಗರಿಸುವೆ

ಹ್ಞೂಂ.......
ಯಾಕೊ ಅದೊಂದು ಮಾತ್ರ
ನನ್ನ ಕೈಯಿಂದ ಸಾಧ್ಯವಾಗುತ್ತಿಲ್ಲ
ಎಷ್ಟೇ ಅದನ್ನು ನನ್ನ ಮಾತಿಂದ
ನಗುವಿಂದ, ನೋವಿಂದ, ಮುತ್ತಿಂದ
ದೇಹದಿಂದ, ಒಲವಿಂದ ಪ್ರಯತ್ನಿಸಿದರೂ
ಎಷ್ಟೇಯಾದರೂ ನೀನೊಂದು ಹೆಣ್ಣೆ
ಎನ್ನುವ ಕೀಳು ಯೋಚನೆಯ ಕೊಳೆಯೊಂದನ್ನು
ನನ್ನ ಕೈಯಲ್ಲಿ ತೊಳೆಯಲಾಗಲಿಲ್ಲವಲ್ಲ
ನಾನಷ್ಟೊಂದು ಕೀಳು ಹೆಣ್ಣೆ?

No comments:

Post a Comment