Thursday, November 30, 2017

ತಾಯಿ.....ಲೇಖನ

ಚಂದ್ರಿ" ಎಂದು ಕೂಗಿದಳು ಕಲ್ಲವ್ವ, ಮನೆಯಿಂದ ಹೊರಗೋಡಿ ಬಂದಳು ಕಂಕುಳಲ್ಲಿ ಅಕ್ಕನ ಮಗಳನ್ನು ಎತ್ತಿಕೊಂಡು. "ಹೇಳ್ಬೇ.."  ಎಂದು ನಿಂತಳು ಚಂದ್ರವ್ವ ಕಲ್ಲವ್ವನ ಆರನೇ ಮಗಳು, ಕಿತ್ತು ತಿನ್ನುವ ಬಡತನಕ್ಕೆ ಅಸರೆಯಾಗಲೆಂದು ಗಂಡು ಗಂಡೆಂದು ಸಾಲು ಸಾಲಾಗಿ ಆರು ಹೆಣ್ಣು ಮಕ್ಕಳ ಹಡೆದಿದ್ದಳು ಕಲ್ಲವ್ವ. ಕೊನೆಗೆ ಆರು ಹೆರಿಗೆಗಳ ನಂತರ " ನಿನಗೆ ರಕ್ತಹೀನತೆಯಿದೆ, ಮತ್ತೆ ಏನಾದರೂ ಗರ್ಭವನ್ನು ಧರಿಸಿದರೆ ನಿನಗೆ ಪ್ರಾಣಾಪಾಯವಿದೆ" ಎಂದು ಸರಕಾರಿ ಆಸ್ಪತ್ರೆಯ ಡಾಕ್ಟ್ರಮ್ಮ ಕಲ್ಲವ್ವನ ಗಂಡ ಸಿದ್ದಪ್ಪನಿಗೆ ಹೇಳಿದ ಮೇಲೆ ಅದೇ ವಾರದಲ್ಲಿ ವಿಧಿಯಿಲ್ಲದೆ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಿಕೊಂಡು, ಗಂಡು ಸಂತಾನದ ಆಸೆಗೆ ಎಳ್ಳು ನೀರು ಬಿಟ್ಟು ಊರು ಸೇರಿದ್ದರು." ಯವ್ವಾ... ಇನ್ನೊಂದೆರ್ಡ ಬಿಂದ್ಗಿ ನೀರ...ರ ತಂದ ಹಾಕ್ಬೇ, ಮುಸುರಿ, ಬಟ್ಟಿ ವಗ್ಯಾಣ ಭಾಳ ಅದಾವು" ಎಂದು ದಣಿದ ದನಿಯಲ್ಲಿ ನುಡಿದಳು. "ಅಯ್ಯ... ಸಾಕ ಬಾರ್ಬೆ,  ಈಕೀನ್ನ ನೀನ ಎತ್ಗೊ ಬಾ ಇಲ್ಲೆ, ನಾನ ಎಲ್ಲ ಅರ್ಬಿ ವಗ್ದ ಹಾಕಿ, ಮುಸರಿನೂ ತೋಳ್ಕೊಂಡು ಬರ್ತೀನಿ, ನಿನ್ಗ ಆಗ್ಲೆ ಹೇಳಿದ್ದೀಲ್ಲಾ ನಾನು
ಎಲ್ಲಾ ಕೆಲ್ಸ ನಾ ಇಕ್ಕಟ್ಟ ಮಾಡ್ತೀನಿ ಅಂತಂದ ಆಗ್ಲೆ ಬಂದ ಕುಂತ ಬಿಟ್ಟಿಯನ ಇಲ್ಲೆ ಅಂಗಳ್ದಾಗ ಬಂದ, ನಡಿ.. ನಡಿ.. ಎಳ ಎದ್ದೇಳ... ನಾನೆಲ್ಲ ಕೆಲ್ಸ ಮುಗ್ಸಿಕೊಂಡ ಬರ್ತಿನ ನಡಿ". ಎನ್ನುತ್ತಾ ಅಕ್ಕನ ಮಗಳನ್ನು ತಾಯಿ ಕಂಕುಳಿಗೆ ವರ್ಗಾಯಿಸುತ್ತಾ, ಲಂಗಾವನ್ನು ಎತ್ತಿ ನಡುವಿಗೆ ಸಿಕ್ಕಿಸಿಕೊಂಡು, ಮುಸುರಿ ಮತ್ತು ಬಟ್ಟೆಗಳನ್ನು ಒಗೆಯಲು ಅಣಿಯಾದಳು ಚಂದ್ರವ್ವ. ಚಂದ್ರವ್ವ ಅಷ್ಟೊಂದು ಹೇಳಿಕೊಳ್ಳುವಷ್ಟೇನು ಸುಂದರಿಯಲ್ಲ, ಆದರೆ ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನ್ನುವ ಅಂಗಸೌಷ್ಠವ. ಐದು ಅಕ್ಕಂದಿರ ಮದುವೆ, ಬಾಣೆಂತನ ಅವರು ಹಬ್ಬ ಹರಿದಿನಗಳಿಗೆ ಬಂದರೆ ಅವರ ಮಕ್ಕಳ ಚಾಕರಿ, ಅವರವರ ಅತ್ತೆ ಮನೆಗಳಲ್ಲಿ ನಡೆಯುತ್ತಿದ್ದಂತಹ ವಿಚಾರಗಳ ಕೇಳಿ, ದುಃಖಕ್ಕೆ ಸಂತೈಸುತ್ತಿದ್ದರೆ... ನಲಿವಿಗೆ ಮತ್ತಷ್ಟು ಜೇನನ್ನು ಬೇರಸುತ್ತಿದ್ದಳು. ಅಕ್ಕಂದಿರದೆಲ್ಲರ ಬಾಳನ್ನು ಕಂಡು, ವಿದ್ಯಾವಂತೆಯಲ್ಲದಿದ್ದರೂ... ಬಾಳಿನ ಒಳಾರ್ಥವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಳು. ವಿವೇಚನೆಯುಳ್ಳವಳಾಗಿದ್ದು, ಸ್ವಾಭಿಮಾನಿಯು ಆಗಿದ್ದಳು.

     ಹೀಗೆ ದಿನಗಳು ಕಳೆದಂತೆ.. ಚಂದ್ರವ್ವ ಮಾಗಿದ ಹಣ್ಣಾದಳು, ಆ ಹಣ್ಣನ್ನು ಜೋಪಾನದ ಜವಾಬ್ದಾರಿಯ ಭಾರವನ್ನು ಹೋರುವ ಗಂಡಿನ ಹುಡುಗಾಟಕ್ಕಾಗಿ ತಂದೆ ಸಿದ್ದಪ್ಪ ಅಲೆದಾಡಿ ಊರೊರನ್ನು ವಿಚಾರಿಸುತ್ತಿದ್ದನು.

  ಅವನು ಮಲ್ಲವ್ವನನ್ನು ಕೋಣೆಯೊಳಗೆ ಕರೆದುಕೊಂಡು ಬಂದು ಬಾಗಿಲ ಚೀಲಕವನ್ನು ಹಾಕಿ, ಮೆಲ್ಲಗೆ ಕೋಣೆಯ ಕಿಡಕಿಯನ್ನು ತೆಗೆಯುತ್ತಾನೆ. ತಣ್ಣನೆ ಗಾಳಿಯು ಸುಳಿ ಸುಳಿದು ಬಂದು ಅವನ ಮೈಯೆಲ್ಲಾ ಆವರಿಸಿ ಕಾದ ಹಂಚಿನ ಮೇಲೆ ಸಿಡಿಸಿದ ನೀರಿನಂತೆ ಚುರ್ರೆಂದು ಅವನ ದೇಹದೊಳಗಿನ ಕಾಮದ ಪಿತ್ತವನ್ನು ಹೆಚ್ಚಿಸುತ್ತದೆ, ಆರು ತಿಂಗಳ ಗರ್ಭಿಣಿಯಂತೆ ಅರ್ಧಾಕೃತಿಯಂತಿರುವ ಚಂದ್ರನ ಬೆಳಕು ಅತ್ತ ಹೆಚ್ಚು ಅಲ್ಲ ಇತ್ತ ಕಡಿಮೆಯೂ ಇಲ್ಲದಂತೆ ಕೋಣೆಯ ಒಂದು ಭಾಗಕ್ಕೆ ಹರಡುತ್ತದೆ. ಕತ್ತಲಿನಲ್ಲಿ ಮರೆಯಾಗಿ ನಿಂತಿದ್ದ ಮಲ್ಲವ್ವನ ಭುಜವನ್ನು ಎರಡು ಕೈಗಳಿಂದ ಹಿಡಿದುಕೊಂಡು ಬೆಳಕಿನತ್ತ ಕರೆತರುತ್ತಾನೆ. ಮೆಲ್ಲಗೆ ಅವಳೆದೆಯ ಮೇಲಿನ ಸೆರಗನ್ನು ಜಾರಿಸುತ್ತಾನೆ. ಆ ಮಂದ ಬೆಳಕಿನಲ್ಲಿ ಮಲ್ಲವ್ವನ ಹಾಲು ತುಂಬಿದ ಎದೆಯ ಕಂಡು ಉನ್ಮಕ್ತನಾಗಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಇದೆಲ್ಲದರ ಅರಿವಿಲ್ಲದಂತೆ ಮಲ್ಲವ್ವ ಕಣ್ಣೀರು ಸುರಿಸುತ್ತಾ ನಿಂತಿರುತ್ತಾಳೆ. ಇನ್ನೇನು, ಹೊತ್ತು ಸರಿದರೆ ತುಪ್ಪ ಜಾರಿದಂತಯೆ ಲೆಕ್ಕ ಇಷ್ಟು ದಿನ ಮನದಲ್ಲಿ ಮಂಡಿಗೆ ತಿನ್ನುತ್ತಿದ್ದವನಿಗೆ ಇಂದು ಆ ದೇವರು ಅನಾಯಾಸವಾಗಿ ಬಾಳೆಲೆಯ ತುಂಬ ಮೃಷ್ಟಾನ್ನವನ್ನೆ ಉಣಲು ಕೊಟ್ಟಂತಾಗಿದೆ, ಅಬ್ಬಾ ಇನ್ನೂ  ತಾಳಲಾಗದು" ಎಂದು ಮನದಲ್ಲಿಯೆ ಮಾತನಾಡಿಕೊಳ್ಳುತ್ತ ತಡಮಾಡದೆ  ತಿಮ್ಮಣ್ಣ ಅವಳ ಎಲ್ಲ ವಸ್ತ್ರಗಳನ್ನು ಕಳಚಿ, ನೆಲದ ಮೇಲೆ ಮಲಗಿಸಿ ಅವಳ ಮೇಲೆ ಹುಲಿಯಂತೆ ಎಗರುತ್ತಾನೆ, ಸುಖದ ತುತ್ತ ತುದಿಯನೇರಬೇಕೆನ್ನುವಾಗ ಮಲ್ಲವ್ವನನ್ನು ಕೇಳುತ್ತಾನೆ, "ನಿನಗೆ ಈಗ ಹೇಗೆ ಎನ್ನಿಸುತ್ತಿದೆ". ಎಂದು ನಾನೆ ಗೆದ್ದೆ ಎಂಬ ಧ್ವನಿಯಲ್ಲಿ, ಆಗ ಮಲ್ಲವ್ವ ಇದನ್ನೆಲ್ಲ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು, ತಿಮ್ಮಯ್ಯನ ಮಾತುಗಳನ್ನು ಕೇಳಿ, ಕಣ್ಬಿಟ್ಟು  ಮಬ್ಬುಗತ್ತಲಿನಲ್ಲಿ ಅವನನ್ನು ದಿಟ್ಟಿಸಿ ನೋಡಿದಳು, ಕಾಮದ ಬೆಂಕಿಗೆ ಬೆವರಿ ನೀರು ನೀರಾಗಿದ್ದನು, ಕಣ್ಣುಗಳಲ್ಲಿ ನಿನ್ನ ಹೆಣ್ತನದ ಅನ್ನವನ್ನು ನಾನಿಂದು ತಿಂದು ತೇಗುವೆ ಎನ್ನುವ ಭಾವ ತುಂಬಿ ಹರಿದಾಡುತ್ತಿತ್ತು, ಮಲ್ಲವ್ವ ಮೆಲ್ಲನೆ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಹೇಳಿದಳು " ನೋಡು ತಿಮ್ಮಯ್ಯ, ಕಾಲವೆಂಬ ಹುಲಿಯ ಬಾಯಿಗೆ ಸಿಕ್ಕ ಹರಿಣಿ ನಾನು, ನೀನು ನನ್ನ ದೇಹವನ್ನೆಲ್ಲವ ಆಕ್ರಮಿಸಿಕೊಳ್ಳುತಿರುವೆ, ನನ್ನ ಶೀಲದ ಕೊಳಕ್ಕೆ ಕೆಸರಿನ ಕಳಕಂವ ಸುರಿಯಲು ಹಾತೊರೆಯುತ್ತಿರುವೆ, ಏನು ಮಾಡಲಿ ? ನನಗಿದು ಅನಿವಾರ್ಯವಾಗಿದೆ ನನ್ನ ಮಾಂಗಲ್ಯ ಭಾಗ್ಯವ ಉಳಿಸಿಕೊಳ್ಳಲು, ನಿನಗಿದು ಕಾಮದೂಟ, ನನಗೆ ಇದನ್ನು ಚಿಕ್ಕ ಮಗುವಿನಾಟವಾಗಿ ನೋಡಿತ್ತಿದ್ದೇನೆ, ಕೇಳು, ಕೆಳಗಿನ ಭಾಗವ ನೀನು ಆಕ್ರಮಿಸಿದರೆ, ನಾನು ನನ್ನ ಎರಡನೇಯ ಮಗುವಿಗೆ ಜನ್ಮವ  ನೀಡುತ್ತಿರುವ ಹೆರಿಗೆಯ ನೋವು ಎಂದುಕೊಂಡು ಹಿಂಸೆಯನ್ನೆಲ್ಲಾ.... ಸಹಿಸಿಕೊಳ್ಳುತ್ತೇನೆ, ಮತ್ತೆ ನನ್ನೆದೆಯ ಮೇಲೆ ನೀನು ಎರಗಿದರೆ, ಹುಟ್ಟಿದ ಹಸುಗೂಸಿನ ಹೊಟ್ಟೆಯ ಹಸಿವನಿಂಗಿಸಲು ಎದೆಹಾಲ ನೀಡುತ್ತಿರುವೆನೆಂದು ಸಹಿಸಿಕೊಳ್ಳುವೆ, ನನ್ನ ಮೊಗದ ತುಂಬಾ ನಿನ್ನ ಮುಳ್ಳು ಚುಂಬನಗಳು ಮುದ್ರೆಯ ಒತ್ತಲು ಬರುವುದಾದರೆ, ಅಂಗಳದಿ ಆಡಿ ಓಡೋಡಿ ಬಂದ ಮಗವು ತನ್ನ ತಾಯಿಯನ್ನು ಅಪ್ಪಿ ಮುದ್ದಾಡಿತೆಂದು ಮಲಗಿ ಬಿಡುವೆ, ಗಂಡು ಸಂತಾನವಿರದ ನನಗೆ ನಿನ್ನನೆ ಮಗನೆಂದುಕೊಳ್ಳುವೆ", ಎಂದು ಮಲ್ಲವ್ವ ಅವನ ಕಾಮದೋಕುಳಿಗೆ ಸಹಕರಿಸಲು ಮುಂದಾದಳು, ಮೈತುಂಬಾ ವಿದ್ಯುತ್ ಶಕ್ತಿಯ ತರಂಗಗಳು ಹರಿದಾಡಿದಂತಾಗಿ, ಧಿಕ್ಕನೆ ಮಲ್ಲವ್ವನ ಮೈ ಮೇಲಿಂದ ಎದ್ದು ಬಿಟ್ಟನು ತಿಮ್ಮಯ್ಯ, ಮಳೆಯಲ್ಲಿ ನೆಂದವರಂತೆ ಮೈಯಿಂದ ಸರಸರನೆ ಬೆವರು ಕಿತ್ತು ಬರಲಾರಂಭಿಸಿತು. ನೆತ್ತಿಗೇರಿದ್ದ ಕಾಮದ ಪಿತ್ತವು ಪಾಪಪ್ರಜ್ಞೆಯ ಬೆಂಕಿಗೆ ಸುಟ್ಟು ಕರಗಿ ಇಳಿದು ಹೋಗಿತ್ತು, ನಿಂತ ನೆಲವು ಬಾಯ್ತೆರೆದು ನುಂಗುವಂತೆ ಭಾಸವಾಗಹತ್ತಿತು, ಅರೆ ಕ್ಷಣವು ಅಲ್ಲಿ ನಿಲ್ಲದೆ, ಹೊರಳಿ ಮಲ್ಲವ್ವನತ್ತ ಕಣ್ಣೇತ್ತಿಯೂ ನೋಡದೆ, ಬಟ್ಟೆಯ ಧರಿಸಿಕೊಂಡು ಹೊರ ನಡೆದುಬಿಟ್ಟ, ಇದನ್ನು ಊಹಿಸದೆ ಇರದ ಮಲ್ಲವ್ವ, ಸರಕ್ಕನೆ ಎದ್ದು ಕುಳಿತಳು "ಅಯ್ಯೋ ಭಗವಂತ ಇದೇನಾಯಿತು ? ಬಾಯಿಗೆ ಬಂದಂತೆ ನಾನು ಏನೇನೊ ಮಾತನಾಡಿಬಿಟ್ಟೆ, ಒಂದು ವೇಳೆ ಇವನು ರಕ್ತವ ಕೊಡದೆ ಹೋದರೆ ನನ್ನ ಮಾಂಗಲ್ಯದ ಗತಿಯೇನು?" ಎನ್ನುತ್ತಲೆ ಮಲ್ಲವ್ವ ಬಟ್ಟೆಗಳನ್ನೆಲ್ಲ ಉಟ್ಟುಕೊಂಡು ತಿಮ್ಮಯ್ಯನನ್ನೆ ಹುಡುಕಲು ಮಹಡಿಯ ಹತ್ತಿ ಬಂದಳು, ಅಷ್ಟರಲ್ಲಾಗಲೆ ತಿಮ್ಮಯ್ಯನು ರಕ್ತಭಂಡಾರ ಕೋಣೆಯಲ್ಲಿ ತನ್ನ ರಕ್ತವನ್ನು ಕೊಡುತ್ತಿದ್ದನು. ಅರ್ಧ ತಾಸಿನಲ್ಲಿ ಮಲ್ಲವ್ವನ ಗಂಡ ಸಣ್ಣಯ್ಯನಿಗೆ ರಕ್ತವ ಹಾಕಿದರು. ರಕ್ತವ ಕೊಟ್ಟ ತಿಮ್ಮಯ್ಯ ತಲೆತಗ್ಗಿಸಿಕೊಂಡು ಬಂದು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಸಣ್ಣಯ್ಯನ ಪಾದವ ಹಿಡಿದುಕೊಂಡು ಅಳುತ್ತಾ, ಅಲ್ಲೆ ನಿದ್ರೆಗೆ ಶರಣಾಗಿದ್ದ, ಮಲ್ಲವ್ವನಿಗೆ ಏನು ತಿಳಿಯದೆ ಗೋಡೆಗೆ ಆಸರೆಯಾಗಿ ಕುಳಿತುಕೊಂಡು ನೆಲಕ್ಕೆ ಮಲಗಿಸಿದ್ದ ಮಗವನ್ನು ಮಡಿಲಲ್ಲಿ ಹಾಕಿಕೊಂಡು ಎದೆಹಾಲನ್ನು ಕೊಡುತ್ತಾ, ಗಂಡನಿಗೆ ರಕ್ತ ಸಿಕ್ಕಿದುದಕೆ ಸಮಾಧಾನಗೊಂಡು ಹಾಗೆ ಸ್ವಲ್ಪ ನಿರಾಳವಾಗಿ ಕಣ್ಮುಚ್ಚಿದಳು.

      ಮುಂಜಾವು ನಾಲ್ಕರ ಸಮಯ, ಸಣ್ಣಯ್ಯ ಸಣ್ಣಗೆ ಬಿಕ್ಕ ತೊಡಗಿದನು, " ಮಲ್ಲಿ, ಮಲ್ಲಿ," ಎಂದೆರಡು ಸಲ ಕೂಗಿದನು. ಮಲ್ಲವ್ವನಿಗೆ ತಟಕ್ಕನೆ ಎಚ್ಚರವಾಗಿ ಮಗಳನ್ನು ನೆಲದ ಮೇಲೆ ಮಲಗಿಸಿ, ಗಂಡನ ಬಳಿ ಸರಿದು " ಏನಾಯ್ತು, ಹೇಳ್ರಿ, ಏನ್ಬೇಕಿತ್ತು ? ನೀರು ಕುಡಿತೀರಾ ಇರೀ ನರ್ಸಮ್ಮನ್ನ ಕರೀತಿನಿ" ಎಂದು ಅವಸರಿಸಿದಳು. ಸಣ್ಣಯ್ಯ ಗೋಣಾಡಿಸುತ್ತಲೆ ಬೇಡವೆಂದ, ಮೆಲ್ಲಗೆ ನಡುಗುವ ಕೈಗಳಿಂದ ಅವಳ ಕೈಯನ್ನು ಹಿಡಿದುಕೊಂಡು " ಮಗ....ಳು... ಹು...ಷಾ..ರು" ಎನ್ನುತ್ತಲೆ ಅವನ ಪ್ರಾಣಪಕ್ಷಿ ಎದೆಗೂಡಿನಿಂದ ಬಿಡುಗಡೆಯ ಹೊಂದಿತ್ತು.
ಮರಳಿ ಅವನು ಮಾತನಾಡದೆ ಇರುವುದನ್ನು ನೋಡಿ ಮಲ್ಲವ್ವ ಜೋರಾಗಿ ಅಳುತ್ತಾ, ನರ್ಸಮ್ಮನನ್ನು ಕರೆಯಲು ಓಡಿದಳು. ಮಲ್ಲಮ್ಮನ ಚೀರುವಿಕೆಗೆ ಎಚ್ಚರಗೊಂಡ ತಿಮ್ಮಯ್ಯನು ಎದ್ದು ಸಣ್ಣಯ್ಯನನ್ನು ನೋಡುತ್ತಾನೆ, ಸಣ್ಣಯ್ಯನ ಕಣ್ಣುಗಳು ಇವನನ್ನೆ ದಿಟ್ಟಿಸಿ ತಿವಿದು ನೋಡುವ ಹಾಗೆ ತೆರದುಕೊಂಡಿರುತ್ತವೆ. ಮಲ್ಲವ್ವನ ಕರೆಗೆ ಓಡಿ ಬಂದ ನರ್ಸಮ್ಮ ಸಣ್ಣಯ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ, ಅವನೆರಡು ಕಣ್ಣುಗಳ ರೆಪ್ಪೆಯ ಮುಚ್ಚಿ, ಮಲ್ಲವ್ವನ ಮುಖವನೊಮ್ಮೆ ನೋಡಿ ಸಣ್ಣಯ್ಯ ಇನ್ನಿಲ್ಲ ಎಂಬಂತೆ ತಲೆಯಾಡಿಸಿ ಹೊರಟು ಹೋಗುತ್ತಾಳೆ. ತಲೆಯ ಮೇಲೆ ಬಂಡೆಕಲ್ಲು ಬಿದ್ದವರ ಹಾಗೆ ಮಲ್ಲವ್ವಳಿಗೆ ಏನು ಮಾಡುವುದು ತೋಚದೆ ಗೋಡೆಗೊರಗಿ ತಲೆಮ್ಯಾಲೆ ಎಡಗೈಯನ್ನಿಟ್ಟುಕೊಂಡು, ಸೀರೆಯ ಅಂಚನ್ನು ಬಲಗೈಯಿಂದ ಬಾಯಿಗೆ ಒತ್ತಿ ಹಿಡಿದು ಅಳಲಾರಂಭಿಸುತ್ತಾಳೆ.
ಪಕ್ಕದ ಮಂಚದಲ್ಲಿ ಇದನ್ನೇಲ್ಲವ ನೋಡುತ್ತಿದ್ದ ರೋಗಿ ಅಜ್ಜಿಯೊಬ್ಬಳು " ಶಿವ್ನೆ ಇಷ್ಟು ಚಿಕ್ಕ ವಯಸ್ಸನ್ಯಾಗ ಆ ಹುಡುಗಿನ ವಿಧವೆ ಮಾಡ್ದೆಲ್ಲಪ್ಪ, ಆ ತಾಯಿ ಮತ್ತ ಹಸುಗೂಸಿಗೆ ದಿಕ್ಕು ದೇಸಿಯಿಲ್ದ ಪರದೇಶಿ ಮಾಡ್ದೇಲ್ಲೊ, ಇನ್ನಾರ ದಿಕ್ಕ ಆಕ್ಕಾರ ಇವರ ಬಾಳ್ವಿಗೆ" ಎಂದು ಎರಡು ಹನಿ ಕಣ್ಣೀರನ್ನು ಸುರಿಸುತ್ತಾ ಹೇಳಿದಳು.

    ಇಷ್ಟು ಹೊತ್ತು ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಕುಳಿತಿದ್ದ ತಿಮ್ಮಯ್ಯ ಅಜ್ಜಿಯ ಮಾತುಗಳ ಕೇಳಿ, ಕಣ್ಣೀರೊರೆಸಿಕೊಳ್ಳುತ್ತಾ, ಸಣ್ಣಯ್ಯನ ಕಾಲ್ಬಳಿ ಬಂದು ಅವನ ಪಾದಗಳ ಮುಟ್ಟಿ ನಮಸ್ಕರಿಸಿ, ಧೀರ್ಘವಾದ ನಿಟ್ಟುಸಿರೊಂದನು ಬಿಟ್ಟು, ನೆಲದ ಮೇಲೆ ಮಲಗಿಸಿದ್ದ ಮಗುವನ್ನು ಎತ್ತಿಕೊಂಡು ಮಲ್ಲವ್ವನ ಬಳಿ ಬಂದು, ಅವಳ ಕೈಯನ್ನು ಹಿಡಿದೆಬ್ಬಿಸಿಕೊಂಡು, ಸಣ್ಣಯ್ಯನ ಶವದೇದುರು ನಿಂತು ಒಂದು ಮಾತನ್ನು ಹೇಳುತ್ತಾನೆ. " ಇಂದಿನಿಂದ ನನ್ನ ತಂಗಿ ಮತ್ತು......‌ನನ್ನ ತಾಯಿಯನ್ನು.....‌ ನಾನು ಸಾಕುತ್ತೇನೆ". ಎಂದಾಗ, ಬಿಟ್ಟ ಕಣ್ಣನು ಹಾಗೆ ಬಿಟ್ಟು ಮಲ್ಲವ್ವಳು ತಿಮ್ಮಯ್ಯನನ್ನು ನೋಡುತ್ತಾಳೆ. ಆಗ ತಿಮ್ಮಯ್ಯನು " ನಿಜ ಅವ್ವ ಮಲ್ಲವ್ವ, ನನ್ನ ತಾಯಿ ನನಗೆ ಜನ್ಮವಕೊಟ್ಟು ಈ ಭುವಿಗೆ ತಂದಿರಬಹುದು. ಆದರಿನ್ನೂ ನಾನು ಕತ್ತಲಲ್ಲೆ ಇದ್ದೆ, ಮನದೊಳಗಿನ ಕೋಣೆ ಬೆಳಕನ್ನು ಬೇಡುತ್ತಿತ್ತು ಅದನ್ನು ನೀನಿಂದು ಕತ್ತಲಲಿ ಹೊತ್ತಿಸಿದೆ, ಕಾರ್ಗತ್ತಲಲೂ... ನನಗೆ ಬಾಳಿನ ಜ್ಞಾನೋದಯವ ಬೆಳಗಿಸಿದೆ. ನಿನ್ನ ಹೊಟ್ಟೆಯಲ್ಲಿ ಹುಟ್ಟಸಿದ್ದರೂ ನಿನ್ನ ದೇಹ ಸ್ಪರ್ಶದಿಂದ ಈ ಹಿಂದೆ ನಾ ಮಾಡಿದ ಪಾಪಗಳೆಲ್ಲವು ತೊಡೆದು ಹೋಗಿ ಮತ್ತೆ ನನಗೆ ಪುನರ್ಜನ್ಮವ ನೀಡಿದೆ. ಉಳಿದ ಪಾಪದ ಕೊಡಗಳನ್ನು ನಿನ್ನ ಪಾದ ಸೇವೆಯಲ್ಲಿ ಸುರಿಯುತ್ತಾ ಹಗುರು ಮಾಡಿಕೊಳ್ಳುವೆ.
ತಿರಸ್ಕರಿಸಬೇಡ ತಾಯಿ... ಮಲ್ಲವ್ವ... ನಿನ್ನ ಹಿರಿಮಗನೆಂದು ನಿನ್ನ ಸೇರಗಿಗೆ ಗಂಟು ಹಾಕಿಕೊಳ್ಳವ್ವ" ಎಂದೆನ್ನುತ್ತ ಗೋಳೊ ಎಂದಳತೊಡಗಿದನು.

   ಮಲ್ಲವ್ವನಿಗೆ ಆತಂಕದೊಳಗೊಂದು ನಿರಾತಂಕದ ಕಿರಣವೊಂದು ಮೂಡಿತು. ಗಂಡ ಸಣ್ಣಯ್ಯನ ಮೊಗವನೊಮ್ಮೆ ನೋಡಿ ಅವನ ಪಾದವಮುಟ್ಟಿ ನಮಸ್ಕರಿಸಿ ಮುಂದಿನ ಕಾರ್ಯಕ್ಕೆ ಅಣಿಯಾಗತೊಡಗಿದರು.

Tuesday, November 28, 2017

ಶರಣ ೬

ಬದುಕಿನಾ ಸಂತೆಯಲಿ...
ಬಂಧು ಬಾಂಧವರು..
ಒಡಹುಟ್ಟಿದವರು...ಸ್ನೇಹಿತರ
ಮರಣದ ನಂತರ... ಚಟ್ಟವ
ಹೊರುವ ಭುಜಗಳನ್ನಾಗಿರಿಸದಿರಯ್ಯ
ಅವರ ಉನ್ನತಿಯ ಹಾದಿಯಲ್ಲಿ
ಹತ್ತುವ ಮೆಟ್ಟಿಲುಗಳನ್ನಾಗಿಸಯ್ಯ
ಎನ್ನ ಹೆಗಲುಗಳ....
ಶ್ರೀ ಶರಣಬಸವ

ಈ ಪ್ರೀತಿಗೆ ಬೆಂಕಿನರ ಹಚ್ಚ

ಹೋಗೊದ ಹೊಂಟಿ ನೋಡಬ್ಯಾಡ
ನಿ ನನ್ನ ಹೊಳ್ಳಿ
ಕರುಳಿಲ್ದ...ಪ್ರೀತಿ ಬಣವಿ ಒಣಗಿಸಿ
ಇಟ್ಟ ಹೊಂಟಿಯಲ್ಲ ಉರಿಯೊ ಕೊಳ್ಳಿ
ಮಾವಿನ ತೋಟದ ನಡು ತೋಪನ್ಯಾಗ
ಎಷ್ಟರ ಮಾತಾಡ್ತೀದ್ದಿ ಮಳ್ಳಿ
ಅಗಸಿ ಬಾಗಲ್ದಾಗ ನಿಂದ್ರೀಸಿ ಹೊಂಟಿಯಲ್ಲ ನನ್ನ
ನಗಾಕ ಹತ್ತೈತಿ ನೋಡಿಲ್ಲೆ....ನಾವ್ ಕೂಡಿ ಆಡಿದ ಹಳ್ಳಿ

ಗಂಧದಂತ ನಿನ್ನ ರೂಪಾನ ತುಂಬ್ಕೊಂಡಿದ್ದ ಈ
ಜೋಡಿ ಕಣ್ಣಾಗ ಹಾಕಿ ಹೊಂಟೊಯಲ್ಲ.. ಬೊಗಸೆ ಮಣ್ಣ
ಕಾಡಿ.. ಬೇಡಿ ಕೇಳಿದ್ರೂನು ವರ ಕೊಡ್ತಾನ ಆ ಕರಿ ಕಲ್ಲಿನ
ದ್ಯಾವ್ರು... ಕೊಟ್ಟ ವರಾನ ಶಾಪ ಮಾಡಿ ಹೊಂಟ ನಿಂತಿಯಲ್ಲ ನೀನೆಂಥ ಹೆಣ್ಣ
ನನಗ ಗೊತ್ತಾಗ್ಲಿಲ್ವಲ್ಲೆ..... ಚೆಲ್ವಿ ನಿನ್ನ ಊಸರವಳ್ಳಿ ಬಣ್ಣ
ನಿನ್ನನ್ನ ನಂಬಿ ಹೊಡ್ಕೊಂತಿದ್ದ ಈ ಎದಿಯಾಗ...
ಮಾಸಲಾರ್ದಂತದ್ದು ಮಾಡಿಟ್ಟಿಯಲ್ಲೆ ಪ್ರೀತಿಯ ಹುಣ್ಣ

ನಾ.. ಕೊಟ್ಟ ಮಲ್ಗಿ ದಂಡಿ ಕಿತ್ತ ಒಗ್ದಿಯಲ್ಲ ಸೆಗಣಿ ಗುಂಡ್ಯಾಗ
ಸಾವುಕಾರನ್ ಮನಿ ಸೊಸಿಯಾಗಿ ಹೊಂಟಿಯಲ್ಲ ಜೋಡೆತ್ತಿನ
ಬಂಡ್ಯಾಗ
ನನ್ನ ನೆಪ್ಪಾಗಿ ಓಡೋಡಿ ಬರ್ತೀಯೇನೊ... ಅಂಥಾ ಕಾಯ್ಕೊಂತ ಕುಂತೇನ ಈ ಕೆರಿ ದಂಡ್ಯಾಗ
ಆಗೋದಿಲ್ಲಂದ್ರ... ನಿನ್ನ ನೆಪ್ಪನ್ಯಾಗ ಒಣಗಿ ಕುಂತ ನನ್
ಮೈಗೆ ಬೆಂಕಿನರ ಹಚ್ಚಿಬಿಡು... ಸುಟ್ಟ ಹೋಗ್ತಿನಿ ನಿನ್ನ
ನೆನಪಿನ ತಂಡ್ಯಾಗ

Monday, November 27, 2017

ಸಾವು ಕರೆಯುವವರೆಗೂ....

ಹಸಿವು.. ಹಸಿವೆನ್ನುತ ಸಾಯುವ ಮಣ್ಣಲಿ
ಎನ್ನ ಜೀವದ ಬೀಜಾಂಕುರವಾಗಿದೆ...
ನಾಟಿ, ಚಿಗುರೊಡೆದಿರುವೆ... ರೆಂಬೆ
ಕೊಂಬೆಗಳ ಹರಡಿ.. ಮುಗಿಲು ಮುಟ್ಟಲು
ಬೇಕಿದೆ ನೀರು ಗೊಬ್ಬರಗಳು...

ಬಲಿಯುವ ಮೊದಲೆ.... ಬಡವಾಗಿ ಬಗ್ಗಿದೆ
ನಡುವು... ಹಸಿವಿನೊಂದಿಗೆ ಕಾದಾಡುವ
ಮೊದಲೆ ಸೋತು ಶರಣಾಗಿವೆ ತೋಳುಗಳು..

ಹೊತ್ತಿಗೆ ಕುಡಿಸಿದ ನೀರು ಅಮೃತವಾಯಿತು..
ನೀನೀಡಿದ ತುತ್ತೊಂದು ಮೃಷ್ಟಾನ್ನವಾಯಿತು
ಈ ಘಳಿಗೆಯ ಸಾವು ಇನ್ನೊಂದು
ಹೊತ್ತಿಗೆ ಸರಿದು ಕೂತಿತು

ಹಸಿವೆನ್ನುವುದು ಈ ನಾಡಿನ ಶಾಪ
ಹುಟ್ಟುತ್ತಿರುವವೊ ಅರಿವಿಲ್ಲದೆ ನನ್ನಂತ
ಎಷ್ಟೊಂದು... ಪಾಪ
ತಟ್ಟುತ್ತಿಲ್ಲವಲ್ಲ ಆ ದೇವನಿಗೆ ನಮ್ಮಯ ಹಸಿವಿನ ತಾಪ
ಇರಬೇಕು ಅದೇಷ್ಟು ನಮ್ಮ ಮೇಲೆ ಕೋಪ

ನಡೆಯಬೇಕಿದೆ ಬದುಕಿದು ಹೀಗೆ..
ರವಿಯ ತಾಪಕೆ ಕರಗುವವರೆಗೂ..
ಕಾಲನ ಕಾಲಿಗೆ ಸಿಕ್ಕು ಮುದುಡುವವರೆಗೂ...
ಬೆಂದು ಬಾಯ್ಬಿಟ್ಟ ಭೂ ಒಡಲಲಿ
ಮಣ್ಣಾಗುವವರೆಗೊ..
ನಾನರಿಯೆ..

ಸೊಗಸಾದ ಸಾಲುಗಳು ಕವಿಮಿತ್ರರೆ
ಶುಭೋದಯ

Saturday, November 25, 2017

ನಿನಗಿದು ತರವೆ..? ಜನನಿ

ನಿನಗಿದು ತರವೆ...? ಜನನಿ
ಉಸಿರಿಲ್ಲದೆ ಮಡಿಲಲಿ ಮಲಗಿ
ಮಾಡಿದೆಲ್ಲ ನನ್ನನು ಜಗದೊಂದಿಗೆ ಮೌನಿ
ಎನಿತು ಜನ್ಮಗಳ ಪುಣ್ಯಗಳ ಫಲವೊ...
ಹೆತ್ತು.. ಹೊತ್ತು... ಎದೆ ಹಾಲುಣಿಸಿ...
ಆಸೆ ಕಂಗಳಲೆನ್ನ ನೋಡುತಾ....ಮಡಿಲಲಿ
ಮಲಗಿಸಿಕೊಂಡು ಮುದ್ದಾಡುತಿದ್ದ ಜ್ಯೋತಿಯೆ...‌

ಲೆಕ್ಕ ಮುಗಿಸಿದ ಕಾಲ ತಜ್ಞನ ಸುಳಿಗಾಳಿಗೆ
ಸಿಕ್ಕು , ಸರಿದೆಯಲ್ಲವ್ವ... ಕಾರ್ಗತ್ತಲಲಿ
ಲಕ್ಷ.. ಲಕ್ಷ.. ಮಾಡಿದರು ವೆಚ್ಚ..!!!
ಮಿಡಿಯಲಿಲ್ಲ ಇನ್ನಷ್ಟು ದಿನ... ನಿನ್ನ
ಹೃದಯದ ಬಡಿತ... ಅರಿವಾಗಲಿಲ್ಲವೇಕೊ...?
ಚತುರ್ಮುಖನ ಲೇಖನಿಗೆ.. ಅನುಕ್ಷಣವು ಅಮ್ಮನಿಗಾಗಿ
ಹಲಬುತಿರುವ ನನ್ನ ಮನದಾಳದ ತುಡಿತ !!!

ವಲೆಯ ಕಾವನುಂಡು ನಿ ಬಡಿಯುತ್ತಿದ್ದ ರೊಟ್ಟೆಯ
ಸಪ್ಪಳಕ್ಕಿಂತ... ನನ್ನೆದೆಯ ಬಡಿತವು... ಹೊಡೆದು
ಹೊಡೆದು...ಸಿಡಿಯುವುದೇನೊ..? ಎಂದೆನಿಸುತಿದೆ..
ನೀನಿಂದು ಪೂರ್ಣಾಗ್ನಿ ಕಾವಿಗೆ ಹೊತ್ತುರಿಯುತ್ತಿರುವುದ ಕಂಡು. ಮನೆಯೊಲೆಯೊಳು ಸುಟ್ಟು ಮಲಗಿದೆ ಸುಖಗಳ ಬೂದಿ... ಮನದೊಲೆಯೊಳು ಸಹಿಸದ ಕಿಚ್ಚ ಹೊತ್ತಿಸಿದೆ...
ನಿನ್ನ ನುಂಗಿ ಮಲಗಿದ ಬೂದಿ

ನನಗೇನು ಅರಿವಾಗುತ್ತಿತ್ತೊ..? ಜೀವನ್ಮರಣದಿ ಕಾದಾಡಿ
ನನಗೆ ಜನ್ಮವಿಯ್ಯಲು ನೀನನುಭವಿಸಿದ ನೋವು..!!!
ಅರಿವಾಗುತಿವುದಿಂದು...ಎದೆಯಲಿ ಸಾವಿರ ನೋವಿನ
ಸೂಜಿಗಳ ನರ್ತಗೈಯಿಸುತಿದೆ ಅವ್ವ... ನಿನ್ನ ಸಾವು !!!
ಇನ್ನಾರ ಬಳಿ ನಾ ಕೈ ಚಾಚಿ ಬೇಡಲಿ... ಕೈ ತುತ್ತನುಣಿಸಿ
ಲಾಲಿಯ ಹಾಡಿ ಇಂಗಿಸುವರೆ...? ತಾಯ್ವೊಲವ ಹಸಿವು !!!

ನಿನಗಿದು ತರವೆ...? ಜನನಿ
ಹೆಗಲೆರಿಸಿ ಹೊರಟು ಹೋದೆಯಲ್ಲ ನೀನು
ನೋವಿನ..‌ ಶನಿ

Tuesday, November 21, 2017

ಪಾಪದ ಪಿಂಡವಾದಳು

ಅಪ್ಪನ ಅಕ್ಕರೆಯ ಸಕ್ಕರೆಯ ಗೊಂಬೆಯು...... ಕರಗಿಹೋಯಿತು
ಕಾಮದ ಬೆಂಕಿಗೆ ಸಿಲುಕಿ
ಯೌವ್ವನದ ಹೊದೋಟದಲಿ ನಳನಳಿಸುತಿದ್ದ ಹೊವೊಂದನು ಕಿತ್ತು
ಆಘ್ರಣಿಸಿ... ನಡೆದು ಹೋದನು ಕಾಲ
ಬುಡದಲಿ ಹೊಸಕಿ

ಅಕ್ಕಪಕ್ಕದ ಮನೆಯವರ ಪಾಲಿಗೆ
ಚಪ್ಪರಿಸಿ ತಿನ್ನುವ ಸಿಹಿಯಾದಳು
ಮದುವೆಯ ಮುಂಜಿಯ ಕನಸು ಕಂಡಿದ್ದ
ಅಪ್ಪನ ಗಂಟಲಲಿ ನುಂಗಲಾರದ ತುತ್ತಾದಳು

ಹರೆಯದ ಹೊಸ್ತಿಲಲ್ಲಿ ನಲುನಲುಗಿ
ನರಕದ ಹಜಾರದಲಿ ಮಲಗಿಹಳು
ನೋಡುಗರ ಕಣ್ಣಿಗೆ ಸಿಪ್ಪೆ ಒಡೆದ
ಕಡಲೆ ಬೀಜವಾದಳು
ಬೇರಿಲ್ಲದ ಕನಸುಗಳ ಹೊತ್ತು
ತಾಯಾದಳು.. ಪಾಪದ
ಪಿಂಡಕ್ಕೆ ವಾರಸುದಾರಳಾದಳು

ಇಷ್ಟೇ ಕಣ್ರೀ ಮಿತ್ರರೆ ನನ್ನ ಕೈಲಿ ಬರೆದು ಹಾಕಲಾಗುವುದು..
👌👌👌👌👌 🙏🙏🙏🙏
ಶುಭರಾತ್ರಿ

Saturday, November 18, 2017

ಬೇರಿಲ್ಲದ ಕನಸುಗಳು

"ಅಯ್ಯೋ.. ಮೂದೇವಿ, ಎದ್ದೇಳೆ ನಿನಗೇನು ಹೊತ್ತುಗಿತ್ತು ಆಗೈತೆ ಇಲ್ಲೊ..? ಸೂರ್ಯ ಆಗ್ಲೇ ನೆತ್ತಿ ಮೇಲೆ ಬಂದವ್ನೆ" ಎಂದು ದಬದಬ ಬಾಗಿಲು ಬಡೆಯುತ್ತಿತ್ತು ಮುದುಕಿ. ಆ ಸದ್ದಿನ ಸಪ್ಪಳಕ್ಕೆ ಧಿಕ್ಕನೆ ಎದ್ದು ಕುಳಿತಳು ಮಂಜುಳಾ. ಗೋಡೆಗೆ ನೇತು ಹಾಕಿದ ಗಡಿಯಾರವ ನೋಡಿದಳು ರಾತ್ರಿ ಮೂರಕ್ಕೆ ಇಪ್ಪತ್ತಕ್ಕೆ ನಿಂತು ಬಿಟ್ಟಿದೆ. ಬೆಳಗ್ಗೆ ಐದು ಮೂವತ್ತಕ್ಕೆ ಎಬ್ಬಿಸಬೇಕಾದದ್ದು ಹಾಳಾದ್ದು ತಾನು ನಿಂತು ನನ್ನನ್ನು ಇವತ್ತು ಅತ್ತೆಯ ಕೈಯಿಂದ ಬೆಳಿಗ್ಗೆ ಬೆಳಿಗ್ಗೆಯೆ ಮಂಗಳಾರತಿ ಮಾಡಿಸುತ್ತಿದೆ ಎಂದುಕೊಂಡು ಮೆಲ್ಲನೆ ಏಳು ತಿಂಗಳ ಹೊಟ್ಟೆಯ ಹಿಡಿದುಕೊಂಡು ಮೇಲೆದ್ದು ತಲಬಾಗಿಲವ ತೆರೆದಳು. ಹಾಳ ಮುಖದ್ಲೆ... ಅತ್ತಿ ಮತ್ತಿಷ್ಟು ಶುರು ಹಚ್ಚಿಕೊಂಡು ಬಿಟ್ಲು, "ಅಯ್ಯೊ ನಿನ್ನ ದುರ್ಗವ್ವ ನುಂಗಿ ದ್ಯಾಮವ್ವ ನೀರ ಕುಡಿಲಿ, ಏದ್ದಿದ್ದ ಹೊತ್ತಾಗಿ ಅಂತಾದ್ರಾಗ ಮತ್ತ ನಿನ್ನ ನೀರ ಕಾಣ್ದ ಹಾಳ ಸುಡಗಾಡಿ ಮೊತಿ ತೋರ್ಸಿಬಿಟ್ಟೆಲ್ಲ, ಆತ ಇವತ್ತು ಸಂಜೆನ್ನೊದ್ರೊಳಗ ಏನ ಕಾದೈತೊ ಏನೊ, ಸರಿಸರಿ ದಾರಿಬಿಡು, ಕ್ವಾಣ ಊರ ಕ್ವಾಣ ನಾಳೆ ಹೊಟ್ಟಿ ತೆರ್ದ ಹಡದ್ರ ತಾಯಿ ಆಗಾಕಿ ಅದೀದಿ ಅಷ್ಟು ಗೊತ್ತಾಗದಿಲ್ಲನು ನಿನಗ " ಅಂತಾ ವಟಗುಡುತ್ತಾ ಹಾಗೆ ಊರಗೋಲನ್ನು ಹಿಡ್ಕೊಂಡು ಒಳಗೆ ಹೋದಳು.  ತಡವಾಗಿ ಎದ್ದಿದ್ದಕ್ಕೆ ತನ್ನನ್ನೆ ಬೈದುಕೊಳ್ಳುತ್ತಾ, ಕೊಟ್ಗಿಯಲ್ಲಿದ್ದ ಎಮ್ಮೆಯನ್ನು ಮನೆಯನ ಪಕ್ಕದಲ್ಲಿದ್ದ ವೀರಭದ್ರೇಶ್ವರ ದೇವಸ್ಥಾನದ ಮೈದಾನದಲ್ಲಿದ್ದ ಬೇವಿನ ಗಿಡಕ್ಕೆ ಕಟ್ಟಿ ಬಂದು, ಸಗಣಿ ಸಾರಿಸಿ, ಅಂಗಳದ ಕಸ ಹೊಡೆದು, ನೀರನ್ನು ಹಣಿಸಿ, ಚುಕ್ಕಿಯ ಸೇರಿಸಿ ರಂಗೋಲಿಯನಿಟ್ಟು, ದಡಬಡನೆ ಬಂದು ಮೊಖವನ್ನು ತೊಳೆದುಕೊಂಡು ಒಲೆಯ ಹಚ್ಚಿದಳು ಚಹಾವ ಸೊಸಲು. ಚಹಾವ ಸೊಸಿ ಅತ್ತೆಗೆ ಕೊಟ್ಟು ಮನೆಯ ಪಕ್ಕದ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿದ್ದ ಮಾನವನನ್ನು ಎಬ್ಬಿಸಿ ಅವರಿಗೆ ಕುಡಿಯಲಿಕ್ಕೆ ನೀರು, ಚಹಾವನ್ನು ಕೊಟ್ಟು ಬಂದು ಗಂಡನನ್ನು ಹುಡುಕಿದಳು. ಅವನ್ಯಾವಗಲೊ ಎದ್ದು ಹೋದ ಹಾಗಿತ್ತು, ಅಷ್ಟರಲ್ಲೇ ಸರಕಾರಿ ನಳವು ಝಳು ಝಳೆಂದು ಸದ್ದು ಮಾಡತೊಡಗಿತ್ತು ಅಕ್ಕಪಕ್ಕದವರು ಆವಾಗಲೆ ಎರಡೆರಡು ಕೊಡಗಳ ಪಾಳೆಯ ಹಚ್ಚತೊಡಗಿದ್ದರು. ಮಂಜುಳಾನು ಅವಸರಿಸಿ ಕೊಡವ ತೆಗೆದುಕೊಂಡು ಹೋಗಿ ಪಾಳೆಗಿಟ್ಟಳು. ಬಿಡುವುದೆ ಒಂದು ತಾಸು ನೀರು ಅಷ್ಟರಲ್ಲಿ ಎರಡು ದಿನಕ್ಕಾಗುವಷ್ಟು ನೀರನ್ನು ಹೊತ್ತು ಹಾಕಬೇಕಿತ್ತು. ಪಾಳೆಯ ಬಂದು ತುಂಬಿದ ಬಿಂದಿಗೆಯನ್ನು ಎತ್ತಿ ಕಂಕುಳಲ್ಲಿ ಇಟ್ಟುಕೊಳ್ಳಬೇಕೆಂಬಷ್ಟರಲ್ಲಿ ಹೊಟ್ಟೆಯ ಬಲ ಪಕ್ಕಡಿಯಲ್ಲಿ ಮುಳ್ಳಂತೆ ಚುಚ್ಚಿದ ಅನುಭವವಾಯಿತು. ಅದೊಂದೆ ಕೊಡವ ಹೊತ್ತು ತಂದು ಜಗುಲಿಯಲ್ಲಿಟ್ಟು, ಹೊಟ್ಟೆಯ ಹಿಡಿದುಕೊಂಡು, ಗೋಡೆಗೆ ತಲೆಕೊಟ್ಟು ಆಸರೆಯಾಗಿ ಕಣ್ಮುಚ್ಚಿ ನಿಂತು ರಾತ್ರಿ ನಡೆದ ಘಟನೆಯನ್ನು ನೆನಪಿಸಿಕೊಂಡು ಬೆಚ್ಚಿಬಿದ್ದಳು.

       ಸಮಯ ಮಧ್ಯರಾತ್ರಿ ಹನ್ನೆರಡು ವರೆಯಾಗಿತ್ತು, ಓಣಿಯ ಬೀದಿಗಳೆಲ್ಲ ಅಲ್ಲೊ ಇಲ್ಲೊ ಬೀದಿ ನಾಯಿಗಳು ಬೌಂ...‌ ಅನ್ನುವ ಕೂಗೊಂದನು ಹೊರತುಪಡಿಸಿ ನಿಶ್ಯಬ್ದವನ್ನು ಹೊದ್ದು ಮಲಗಿದ್ದವು, ಬಾಗಿಲ ಸಂದಿಯಲ್ಲಿ ಗುಯ್ಯಂ.. ಅನ್ನುವ ಹುಳದ ಶಬ್ದ, ವಲೆಯ ಮೇಲೆ ಮಾಡಿದ ಅಡುಗೆ ಆರಿ ಮಲಗಿತ್ತು, ಮಂಜುಳಾಳ ಕಣ್ಣುಗಳು ಮೆಲ್ಲಗೆ ನಿದ್ರೆಗೆ ಜಾರತೊಡಗಿದ್ದವು. ಡಬ್ ಡಬ್ ಎಂದು ಬಾಗಿಲ ಬಡಿತದ ಶಬ್ದ ಆ ಶಬ್ದಕ್ಕೆ ತಟ್ಟನೆ ಎಚ್ಚರವಾಗಿ ಎದ್ದು ಹೋಗಿ ಬಾಗಿಲನ್ನು ತೆರೆದಳು. ಗಂಡ ಸುರೇಶನು ಎಂದಿನಂತೆ ಇವತ್ತು ಹೊತ್ತಾಗಿ ಸ್ವಲ್ಪ ಕುಡಿದೆ ಬಂದಿದ್ದನು. " ಯಾಕೀಷ್ಟೊತ್ತು ಬಾಗ್ಲಾ ತಗಿಯಾಕ ?, ಎದೆಯುದ್ಕ ತಿಂದ ಕುಂತಬಿಟ್ಟಿದ್ದೇನ ಟಿ.ವಿ ನೋಡ್ಕೊಂಥ " ಎನ್ನುತ್ತಾ ಅವಳ ಭುಜವ ಹಿಡಿದು ಸರಿಸಿ ಒಳ ನಡೆದ ಇವಳಿಗೆ ಸ್ವಲ್ಪ ಗಾಭರಿಯಾಯಿತು ದಿನಕ್ಕಿಂತಲೂ ಇಂದು ಯಾಕೊ ಅವರ ಮಾತಲ್ಲಿ ತಿರಸ್ಕೃತ, ಸಿಟ್ಟಿನ ಭಾವ ಹೆಚ್ಚಾಗಿತ್ತು. ಬಟ್ಟೆಯ ಬದಲಿಸಿ ಮುಖವನ್ನು ತೊಳೆದುಕೊಂಡು ಊಟಕ್ಕೆ ಬಂದು ಕುಳಿತನು. ಮಂಜುಳಾನು ಮಾಡಿದಡುಗೆಯ ನೀಡಿ ಗೋಡೆಗೆ ಒರಗಿ ನಿಂತಳು. ಅನ್ನವನುಣ್ಣುವ ಮುಂದ ನೀಡಿದ ಸಾರು ತಣ್ಣಗಾಗಿತ್ತು. ತುತ್ತನ್ನು ಕೈಯಲ್ಲಿ ಹಿಡಿದುಕೊಂಡು " ಮನ್ಯಾಗ ಕುತ್ಕೊಂಡು ಏನ ಮಾಡ್ತೀದಿ ನೀನು, ಕತ್ತಿಗಿತ್ತಿ ಕಾಯಾಕರ ಹೋಗು ಏನ ನಿಮ್ಮವ್ವ ಅಡ್ಗಿ ಮಾಡಿ ನೀಡೊದನ್ನ ಹಿಂಗ ಕಲ್ಸ್ಯಾಳನು" ಎಂದು ಮಾತ ಮಾತನಾಡುತ್ತಲೆ ಕೈಯಲ್ಲಿದ್ದ ತುತ್ತನ್ನು ಅವಳ ಮುಖಕ್ಕೆ ಎಸೆದನು, ಕೋಪ ತಣ್ಣಗಾಗಲಿಲ್ಲವೇನೊ, ಅತ್ತ ಇತ್ತ ನೋಡಿ ಮುಂದಿ ಕುಡಿಯಲಿಕ್ಕೆಂದು ತುಂಬಿಟ್ಟಿದ್ದ ಚರಿಗೆಯನ್ನು ತೆಗೆದುಕೊಂಡು ಮಂಜುಳಾತ್ತ ಎಸೆದನು. ಅದು ನೇರವಾಗಿ ಬಂದು ಅವಳ ಬಲ ಪಕ್ಕಡಿಗೆ ಬಿದ್ದಿತು. ಉಸಿರೆ ನಿಂತಂತ ಅನುಭವವಾಗಿತ್ತು ಮಂಜುಳಾಳಿಗೆ ಹಾಗೆ ಹೊಟ್ಟೆಯ ಹಿಡಿದುಕೊಂಡು "ಅವ್ವಾ..." ಎಂದು ಚೀರಿ ಅಲ್ಲೆ ಹೊಟ್ಟೆಯ ಹಿಡಿದುಕೊಂಡು ಅಳುತ್ತಾ ಕುಳಿತು ಬಿಟ್ಟಳು. ಗಂಡನೆಂಬುವನು ಅವಳ ನೋವಿಗೆ ಕಿವಿಗೊಡದೆ ಹಾದಿಗೆ ದಿಂಬನು ಎತ್ತಿಕೊಂಡು ಮಾಳಿಗೆಯ ಹತ್ತಿಬಿಟ್ಟಿದ್ದನು. ಆ ನೋವನ್ನು ಹಾಗೊ ಹೀಗೊ ಸಹಿಸಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮೇಲೆದ್ದಳು, ಅಡುಗೆ ಮನೆಗೆ ಹೋಗಿ ಕೊಡದ ಮುಚ್ಚಳವನ್ನು ತೆಗೆದು ಚರಿಗೆ ನೀರನ್ನು ಕುಡಿದು ಹೊರಗೆ ಪಡಸಾಲೆಗೆ ಬಂದು ಅಲ್ಲಿಯೆ ಮೆಲ್ಲಗೆ ನೆಲದ ಮೇಲೆ ಹಾಸಿಕೊಂಡಿದ್ದ ಹಾದಿಗೆಯ ಮೇಲೆ ಮಲಗಿದಳು. ಹೊಟ್ಟೆಗೆ ಬಿದ್ದ ಪೆಟ್ಟಿಗೂ.. ಮದುವೆಯಾಗಿ ಐದು ವರುಷಗಳಲ್ಲಿ ಪಟ್ಟ ನೋವುಗಳ ನೆನೆದು ಕಣ್ಣಂಚಿನ ತುದಿಯಿಂದ ಕಣ್ಣೀರು ಜಾರಿ ತಲೆ ದಿಂಬನ್ನು ತೊಯಿಸುತ್ತಿದ್ದವು. ಮಲಗಿದಲ್ಲಿಯೆ ಮದುವೆಯ ನಂತರದ ದಿನಗಳನ್ನು ನೆನೆಯ ಹತ್ತಿದಳು.

   "ಬೇಕಾಗಿಲ್ರೀ ನಿಮ್ಮ ಮಗಳು ನಮ್ಗ, ಒಂದು ತೊಲಿ ಬಂಗಾರ ಕೊಡೊದ ಅಗೋದಿಲ್ಲಂದ್ರ ನಿಮ್ಮ ಮಗ್ಳನ್ನ ಇಲ್ಲೆ ಇಟ್ಕೊಳ್ಳಿ ನಮಗೇನು ಜರುರತ್ತೇನಿಲ್ಲ, ನಿಮ್ಮ ಮಗಳ ಕೈಲೆ ರೊಟ್ಟಿ ತಿನ್ಬೇಕ ಅನ್ನೊದು. ಬಂಗಾರ ತಯಾರಾದಾಗ ಹೇಳ್ರಿ, ನಾನಾ ಖುದ್ದಾಗಿ ಬಂದು ಬಂಗಾರನ ನಿಮ್ಮ ಮಗ್ಳನ ಕರ್ಕೊಂಡು ಹೊಗ್ತೀನಿ. ಅಲ್ಲಿ ತನ್ಕ ನಿಮ್ಮ ಮಗ್ಳನ ಇಲ್ಲೆ ನಿಮ್ಮ ತವರ ಮನಿಯಾಗ ಇಟ್ಕೊಳ್ರಿ" ಅಂಥ ಅತ್ತೆ ಅಂದು ಮದುವೆಯಾದ ಮೂರೆ ದಿನಕ್ಕೆ ಹಾಕಿದ ಮೂರು ಗಂಟುಗಳಿಗೆ ಬೆಲೆ ಕೊಡದೆ, ಬೆನ್ನಿ ತಿರುಗಿಸಿ ನಡೆದುಬಿಟ್ಟಿದ್ದಳು. ಪಾಪ ಅಪ್ಪ ಎರಡು ಕೊಡ ನೀರು ತುಂಬಲು ಒಂದು ನಲ್ಲಿ ಇರದ ಮನೆಗೆ ಎರಡು ಲಕ್ಷ ಖರ್ಚು ಮಾಡಿ, ಅವರು ಕೇಳಿದಷ್ಟು ವರದಕ್ಷಿಣೆ ಬಂಗಾರವ ಕೊಟ್ಟಿದ್ದ ಅದೊಂದು ತೊಲಿಯ ಬಂಗಾರಕ್ಕಾಗಿ ನನ್ನ ಬಾಳು ಸಂಸಾರದ ಮೊದಲ ಮೆಟ್ಟಿಲಲ್ಲೆ ನಿಂತುಬಿಟ್ಟಿತು. ಬಂದು ಬಳಗದವರಾರು ಕೈ ಚಾಚಿ ಕೊಡಲು ಮುಂದೆ ಬರಲಿಲ್ಲ. ಅವರ ಗುಣವನರಿತಿದ್ದ ಅಪ್ಪನು ಅವರ ಮುಂದೆ ಕೈ ಚಾಚಿರಲಿಲ್ಲ. ನನ್ನಲ್ಲೆ ಕ್ಷಮೆ ಕೇಳಿ, ಕಣ್ಣೀರಿಟ್ಟು ಆ ಒಂದು ತೊಲೆಗಾಗಿ ಹಗಲಿರುಳು ದುಡಿಯಲು ಹತ್ತಿದ. ದಿನಗಳೆದಂತೆ ಕಷ್ಟಗಳು ಹೆಚ್ಚಾಗುತ್ತ ಹೋದಾವು, ಅಮ್ಮನ ಅರೋಗ್ಯ, ತಮ್ಮನ ವಿದ್ಯಾಭ್ಯಾಸ, ಹಬ್ಬ ಹರಿದಿನಗಳಿಗೆ ಬಂದು ಹೋಗುವ ಅಕ್ಕ, ಅವರ ಮಕ್ಕಳಿಗೆ ಬಟ್ಟೆ ಬರೆ ಹಾಗೆ... ನೋಡ ನೋಡುತ್ತಿದ್ದಂತೆಯೆ ನಾಲ್ಕು ವರ್ಷಗಳು ಕಳೆದು ಹೋದವು.
ಹಣವು ಹೊಂದಿತು. ಬಂಗಾರವು ಬಂದಿತು, ಅತ್ತೆಯ ಬಂದಿದ್ದಳು ತನ್ನ ನವವಧುವನ್ನು ಮನೆಯ ತುಂಬಿಸಿಕೊಳ್ಳಲು.
ಹ್ಞೂಂ.. ಇನ್ನೇನು ಉಳಿದಿತ್ತು ನವ ವಧುವಿನಲ್ಲಿ ಮದುವೆಯ ಹೊಸತರಲ್ಲಿ ಕಂಡ ಕನಸುಗಳು ಬೇರಿಲ್ಲದೆ ಕಮರಿದ್ದವು. ಮೈ ಕೈಗೆ ಹಚ್ಚಿದ ಅರಿಷಿಣದ ಬಣ್ಣ ಎಂದೊ ಮಾಸಿ ಹೋಗಿತ್ತು. ಸುರಿಗೆ ನೀರಲ್ಲಿ ಎರೆದ ದೇಹವು ವಿರಹದಿಂದಲೆ ಬಾಡಿ ಹೋಗಿತ್ತು. ಬಾಳಲ್ಲಿ ಈಗ ವಸಂತವೇನೊ ಬಂದಿತ್ತು ಆದರೆ ಅದರ ಚಿಗುರನು ತಿಂದು ಸಂತಸದಿ ಹಾಡುವ ಆಸೆ ಇರಲಿಲ್ಲ.

   ಹೇಗೊ.. ಅಕ್ಕಿ ಬೆಲ್ಲದ ಸೇರನ್ನು ಒದ್ದು ಬಲಗಾಲಿಟ್ಟು ಒಳಗೆ ಬಂದೆ, ಆರತಿ ಶಾಸ್ತ್ರಗಳೊಂದಿಗೆ ಮಧುಮಂಚಕೆ ಹೋದೆ, ಇಷ್ಟು ದಿನಗಳ ಮೇಲಾದರೂ ಬಾಳಲಿ ಕಾಮನಬಿಲ್ಲು ಅರಳುವುದಲ್ಲ ಎಂದವಳಿಗೆ ಆಘಾತ ಕಾದಿತ್ತು. ಇವಳಿಗಿಂತ ಮುಂಚೆಯೆ ಸುರೇಶ ಸುರಪಾನವ ಸೇವಿಸಿ ಸುರಲೋಕದ ಪಯಣದಲ್ಲಿದ್ದ. ನಾಲ್ಕು ವರ್ಷಗಳಲ್ಲಿ ಹೇಗಿದ್ದೀಯಾ ಎಂದು ಕೇಳದವನು ಇಂದಾದರೂ.. ನನ್ನನೆತ್ತಿ ಅಪ್ಪಿ ಮುದ್ದಾಡುವನೇನೊ ಎಂದು ಕಂಡ ಕನಸು... ಕನಸಾಗಿಯೆ ಉಳಿಯಿತು... ನನಗನ್ನಿಸಿದ್ದು ಅಂದು ನಾ ದಾಟಿ ಬಂದದ್ದು ನರಕದ ಬಾಗಿಲೆಂದು. ಬೆಳಗಾಯಿತು.. ದಿನ ದಿನಕ್ಕೆ ಕೆಲಸದ ವೇಳೆಯು ನಿಗದಿಯಾಯಿತು.. ಕೆಲಸ ಮುಗಿದ ಮೇಲೆ ದಿನ ರಾತ್ರಿ ಗಂಡನ ಕಾಯುವ ಪಾಳೆಯಾಯಿತು. ಕುಡಿದ ಮತ್ತಿನಲಿ ಒಪ್ಪಿಯೊ.. ಒಪ್ಪದೇಯೊ.. ದೇಹವನುಂಡದ್ದಾಯಿತು.. ಬೆಳಗು ಕತ್ತಲೂ..ಕತ್ತಲೂ ಬೆಳಗಿನಾಟದೊಳಗೆ ಬಸುರು ಉಸಿರಿತು. ಅತ್ತೆಯು ನನ್ನ ತವರು ಮನೆಗೆ ಹೋಗಿ ಸೀಮಂತ ಕಾರಣಕ್ಕೆ ಹೋಗಿ ಬೇಡಿಕೆಯನ್ನಿಟ್ಟು ಬಂದಿದ್ದಳು. ಬಂದ ದಿನದಿಂದ ಶುರುವಾಗಿತ್ತು ಬೈಗಳುಗಳ ಸುರಿಮಳೆ, ಒಮ್ಮೊಮ್ಮೆ ಹೊಡೆತ
ಹಾಗೊ ಹೀಗೊ ಕುಂಟುತ್ತಾ ದಿನಗಳ ದೂಡುವ ಹೊತ್ತಿಗೆ.. ಈ ಕತ್ತಲಿಗೆ ಅವನ ಕೋಪದ ತಾಪಕ್ಕೆ ಹೊಟ್ಟೆಗೆ ಪೆಟ್ಟು ಬಿದ್ದಿತ್ತು. ಹಾಗೆ ಎಲ್ಲವ ನೆನೆಯುತ್ತಾ.. ನೆನೆಯುತ್ತಾ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ.. ಅತ್ತೆಯು ಬೆಳಿಗ್ಗೆ ಬೈಯುತ್ತಾ ಬಾಗಿಲ ಬಡೆಯುವವರೆಗೂ ಎಚ್ಚರವಾಗಿರಲಿಲ್ಲ. " ಅಯ್ಯೋ.. ಬೇಗ ಬಾರೆ ಮಂಜು ನಿನ್ನ ಕೊಡ ತುಂಬಿತು " ಎಂದು ಎದುರುಮನೆ ಶಾಂತಕ್ಕ ಕೂಗಿದಾಗಲೆ ಕಳೆದ ಘಟನೆಗಳಲಿ ಲೀನವಾಗಿದ್ದ ಮಂಜು ಎಚ್ಚರವಾಗಿ ಮೊದಲೆ ತುಂಬಿದ್ದ ಕೊಡವನ್ನು ಹರಿವಿಗೆ ಸುರಿದು, ಮತ್ತೆ ನೀರನ್ನು ತರಲು ನಲ್ಲಿಯ ಕಡೆಗೆ ನೋವನ್ನು ಅವುಡುಗಚ್ಚುತ್ತಾ ನಡೆದಳು.

   ಎಲ್ಲೆಲ್ಲೂ.. ಓಡಾಟದ ಸಂಭ್ರಮ ಆರತಿಯ ಹಾಡುಗಳು, ಚಿಕ್ಕ ಮಕ್ಕಳ ಕೇಕೆಗಳು, ತವರು ಸೀರೆಯನುಟ್ಟು ಉಡಿತುಂಬ.......  ತುಂಬಿಕೊಂಡು ಗಂಡ ಸುರೇಶನೊಂದಿಗೆ ಸೀಮಂತ ಕಾರಣದ ಕಾರ್ಯಕ್ರಮದಲ್ಲಿ ಕುಳಿತುಕೊಂಡಿದ್ದರು.
ದೂರದೂರಿಂದ ಬಂದಂತಹ ಬೀಗರು, ಮನೆಯವರು, ಓಣಿಯ ಎಲ್ಲ ಮುತ್ತೈದೆಯರು ಆರತಿಯ ಮಾಡಿ ಹುಟ್ಟುವ ಮಗುವು ಬಂಗಾರದಂತಹ ಗುಂಡು ಕಲ್ಲಿನಂಥಹ ಗಂಡಾಗಲೆಂದು ಎಲ್ಲರೂ ಹರಸಿ ಹಾರೈಸುತ್ತಿದ್ದರು. ಮಂಜುಳಾನ ಅಪ್ಪ ಭೀಮಪ್ಪಜ್ಜನು ಅಳಿಯನಿಗೆ ಉಡುಗೊರೆಯಾಗಿ ಅರ್ಧ ತೊಲೆ ಬಂಗಾರದ ಸುತ್ತನ್ನು ಅವನ ನಡು ಬೆರಳಿಗೆ ತೋಡಿಸಿ ಹರಸಿದನು. ಅತ್ತೆ ರತ್ನವ್ವಳ ಮೊಗದಲ್ಲಿ ವಿಜಯದ ನಗು ಕುಣಿಯುತ್ತಿತ್ತು... ದೀಪದಾರತಿಯ ಬೆಳಕಿಗೆ ಸುತ್ತು ಫಳಫಳನೆ ಹೊಳೆಯುತ್ತಿತ್ತು..
ಅಷ್ಟೇಲ್ಲ ಸಂಭ್ರಮ ಸಡಗರಗಳ ನಡುವೆ ಬಾಗಿಲ ಸಂಧಿಯಲಿ ನಿಂತಿದ್ದ ಭೀಮಜ್ಜನ ಕಣ್ಣುಗಳಿಂದ ಜಾರಿದ ಹನಿಗಳನ್ನು ಯಾರು ಗಮನಿಸಿರಲಿಲ್ಲ... ತಾಯಿ ಕಾಯಿಲೆಯಿಂದ ಸಾವಿನಂಚಿನಲ್ಲಿ ಇದ್ದುದ್ದರಿಂದ ಈ ಶುಭ ಕಾರ್ಯಕ್ಕೆ ಬಂದಿರಲಿಲ್ಲ. ಅಬ್ಬಾ..!!!  ಇನ್ನೇನು ಎಲ್ಲಾ ಸೂಸುತ್ರವಾಗಿ ಮುಗಿಯಿತೇನ್ನುವಷ್ಟರಲ್ಲಿಯೆ ಅಡುಗೆ ಬಡಿಸುತ್ತಿದ್ದ ಸ್ಥಳದಿಂದ ಗದ್ದಲದ ಸದ್ದು ಕೇಳಿ ಬಂದಿತ್ತು.

  "ಏನೋ ಇಷ್ಟೇಲ್ಲಾ ಖರ್ಚು ಮಾಡಿ ಊಟಕ್ಕೆ ಉಪ್ಪಿನಕಾಯಿ ತಂದಿಲ್ವಾ, ಥೂ ನಿಮ್ಮ ಜನ್ಮಕ್ಕಿಷ್ಟು" ಅಂತಾ ಗಂಡನ ಮನೆಯ ಕಡೆಯ ಬೀಗರೊಬ್ಬರು ಉಪ್ಪಿನಕಾಯಿಯ ಸಲುವಾಗಿ ಜಗಳವನ್ನು ಪ್ರಾರಂಭಿಸಿಬಿಟ್ಟಿದ್ದರು. ಯಾರು ಎಷ್ಟೇ ಸಮಾಧಾನಪಡಿಸಿದರು ಸಮಾಧಾನವಾಗದೆ, ಅತ್ತೆಯೂ... ಮಧ್ಯಸ್ಥಿಕೆ ವಹಿಸಿ ಇತ್ಯರ್ಥಗೊಳಿಸಬೇಕೆನ್ನುವಷ್ಟರಲ್ಲಿ, " ಏನಮ್ಮ ನಿಮ್ಮ ಮನೆ ಕಾರ್ಯಕ್ಕೆ ಬಂದವರಿಗೆ ಛಲೋ ಮರಿಯಾದಿನ ಕೊಟ್ರಿ ಬಿಡ್ರಿ" ಎಂದು ಬಿಟ್ಟ ಒಬ್ಬ ಆಸಾಮಿ. ಇಷ್ಟು ದಿನದ ಹೊಟ್ಟೆಯೊಳಗಿನ ಎಲ್ಲ ಕೆಸರನ್ನು ಹೊರಹಾಕಿ, ಶುಭಕಾರ್ಯವನ್ನು ಅಶುಭವಾಗಿ ಮಾರ್ಪಾಡಿಸಿಬಿಟ್ಟಳು. ಮಂಜುಳಾಳ ತಂದೆ ಎಷ್ಟೇ ಪರಿಪರಿಯಾಗಿ ಬೇಡಿಕೊಂಡರು, ಕವಡೆ ಕಾಸು ಕಿಮ್ಮತ್ತು ಕೊಡದೆ, ಉಟ್ಟ ಬಟ್ಟೆಯಲ್ಲೆ ಎಲ್ಲ ಬಂಧು ಬಾಂಧವರ ಎದುರಿನಲ್ಲಿ ತುಂಬು ಗರ್ಭಿಣಿಯನ್ನು ಹೊರದಬ್ಬಿಬಿಟ್ಟರು. ಹಣೆಬರಹಾನ ಯಾರ ತಪ್ಪಿಸೊಕೆ ಸಾಧ್ಯ ಬನ್ನಿ ಹೋಗೊಣ ದೇವರಿದ್ದಾನೆ ಎನ್ನುತ್ತಾ ಎಲ್ಲ ಹೆಣ್ಣಿನ ಕಡೆಯವರು ಹೊರಟು ನಿಂತರು. ಮಂಜುಳಾ ಇಲ್ಲಿಗೆ ನನ್ನ ಗಂಡನ ಮನೆಯ ಹೊಸ್ತಿಲು ಭಾಗ್ಯ ಮುಗಿಯಿತೇನೊ ಎಂಬಂತೆ ಎರಡು ಕ್ಷಣ ನಿಂತು, ಹೊಟ್ಟೆಯ ಹಿಡಿದುಕೊಂಡು ಅಪ್ಪನ ಕಡೆ ಒಮ್ಮೆ ನೋಡಿ, ಕಣ್ಣೀರನ್ನು ಒರೆಸಿಕೊಂಡು " ಸಾಕಪ್ಪ ಈ ಬಾಳ್ವೆ, ನನ್ನ ಕರುಳಬಳ್ಳಿ ಯಾವುದೆ ಇರಲಿ, ನಾನೆ ದುಡಿದು ಸಂಪಾದಿಸಿ, ಆ ಕಂದನನ್ನು ಹೆಮ್ಮರವಾಗಿ ಬೆಳೆಯುವಂತೆ ನಾನು ಹಗಲಿರುಳು ಕಷ್ಟ ಪಡುವೆ, ನಿ ಚಿಂತಿಸದಿರು, ಸಾಕು ನಡೆಯಿರಿ ಇಲ್ಲಿಂದ ಅವರು ಮಾಡಿದ ಅವಮಾನದಿಂದ ಈಗಲೆ ಸಾಕಷ್ಟು ಹೊಟ್ಟೆ ತುಂಬಿದೆ, ಇನ್ನಷ್ಟು ಹೆಚ್ಚಿನದನ್ನು ನಾವು ಬಯಸಿದರೆ ಅದು ಅಜೀರ್ಣವಾದಿತು". ಎನ್ನುತ್ತಾ ಮಂಜುಳಾ ತನ್ನಪ್ಪನ ಕೈಯನ್ನು ಹಿಡಿದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದಳು.

  "ಅಮ್ಮಾ " ಎಂದು ಜೋರಾಗಿ ಕಿರುಚಿದಳು ಮಂಜುಳಾ, ಆ ಕಿರುಚುವಿಕೆಯ ಹಿಂದೆಯೆ ಮಗುವಿನ ಅಳುವಿನ ಶಬ್ದವು ಅರಳಿತು ಮಧ್ಯರಾತ್ರಿಯಲ್ಲಿ, ಭೀಮಜ್ಜನ ಕಣ್ಣುಗಳಲ್ಲಿ ಕಾಂತಿ, ತಾಯಿ ಮಗು ಆರೋಗ್ಯವಾಗಿರುವುದನ್ನ ವಿಚಾರಿಸಿಕೊಂಡು ಸಮಾಧಾನದ ನಿಟ್ಟುಸಿರನ್ನು ಬಿಟ್ಟನು. ಮಂಜುಳಾಳು ಗಂಡು ಮಗುವಿಗೆ ಜನ್ಮವನಿತ್ತಿದ್ದಳು. ತವರುಮನೆಯಲ್ಲಿ ಸಂತಸಕ್ಕೆ ಪಾರವೆ ಇರಲಿಲ್ಲ, ಮತ್ತೆ ದೀಪಾವಳಿ ಬಂದಿತೆಂದು ಮನೆಯವರೆಲ್ಲರೂ ಸಂಭ್ರಮಿಸಿದರು. ಇತ್ತ ಗಂಡನ ಮನೆಯವರಿಗೆ ಸುದ್ಧಿ ತಿಳಿದ ತಕ್ಷಣವೆ ಅತ್ತೆ ರತ್ನವ್ವಳಿಗೆ ಬೆಟ್ಟದಷ್ಟು ಸಂತೋಷದೊಂದಿಗೆ, ಆದ ಘಟನೆಯ ನೆನೆದು ಹಲುಬತೊಡಗೊದಳು. ಹೇಗೊ ಮತ್ತೆ ಊರ ಜನರ ಪಂಚಾಯ್ತಿ ಸೇರಿಸಿ, ಭೀಮಜ್ಜನ ಮನೆ ಬಾಗಿಲವರೆಗೂ ಬಂದು, ಮೊಮ್ಮಗನನ್ನು ಎತ್ತಿ ಸಂತೋಷಿಸಿದಳು, ಬಹಳ ವಿಜೃಂಭಣೆಯಾಗಿ ತೊಟ್ಟಿಲ ಕಾರ್ಯಕ್ರಮವು ನೇರವೇರಿತು.
ಹಳೆಯ ನೆನಪುಗಳ ಎಲೆಗಳುದಿರಿ ಹೊಸ ಕನಸುಗಳ ಚಿಗುರುಗಳು ಚಿಗುರೊಡೆಯುವುವೇನೊ.. ಬಾಳಲ್ಲಿ ಎಂದುಕೊಂಡಿದ್ದ ಮಂಜುಳಾಳ ಮನದಲ್ಲಿ ಇನ್ನೂ ದುಗುಡುವು ಮನೆ ಮಾಡಿತ್ತು. ಗಂಡನು ಅಷ್ಟಕ್ಕಷ್ಟೇ, ಮಾವ ಲೆಕ್ಕಕ್ಕಿಲ್ಲ,‌ ಇನ್ನೂ ತಾಸು ತಾಸಿಗೂ ಬುದ್ದಿ ಬದಲಾಯಿಸುವ ಅತ್ತೆಯ ನೆನಸಿಕೊಂಡರೆ ಮೈಯಲ್ಲೆಲ್ಲಾ ನಡುಕ, ಯಾವ ಹೊತ್ತಿನಲಿ ಯಾರ ಮಾತ ಕೇಳಿ ನನ್ನನ್ನು ಹೊರಗೆ ದೂಡಿದರೆ !!! ಏನು ಮಾಡುವುದು? ಎಂಬ ಆತಂಕವೊಂದು ಅನುದಿನವು ಮಂಜುಳಾಳನ್ನು ಕಾಡುತ್ತಿತ್ತು. ಬೇಡ... ಬೇಡ ಇಷ್ಟು ದಿನ ಅವರೊಂದಿಗಿದ್ದು ಅವರು ಕೊಟ್ಟ ನೋವನ್ನು ಅನುಭವಿಸಿದ್ದು ಸಾಕು. ಮಡಿಲಲ್ಲಿ ಬೆಂಕಿಯಂತ ಗಂಡು ಮಗನಿದ್ದಾನೆ, ಇವನಿಗಿಂದು ನಾನಾಸರೆಯಾದರೆ, ನಾಳೆ ಇವನು ನನಗಾಸರೆಯಾಗಲಾರನೇನು? ಇದೊಂದೆ ನನ್ನ ಕನಸು, ಈ ಕನಸನ್ನು ಪೂರ್ಣಗೊಳಿಸಲು ನಾನು ಅಣಿಗೊಳ್ಳಬೇಕಿದೆ, ನಾ ಕಂಡ ಕನಸು ಕಾಮನಬಿಲ್ಲಾಗದೆ, ಸದಾ ರವಿಯ ಕಿರಣದಂತೆ ನಳನಳಿಸುತಿರಬೇಕು. ಎಂದು ಕಣ್ಮುಚ್ಚಿ ಮಗುವಿಗೆ ಎದೆಹಾಲನ್ನು ಕುಡಿಸುತ್ತಾ ಕುಳಿತಿದ್ದ ಮಂಜುಳಾಗೆ ಮಗುವು, ಕೆಮ್ಮಿ, ಕೆಮ್ಮಿ ಕುಡಿದ ಹಾಲನ್ನೆಲ್ಲ ಕಕ್ಕಿಬಿಟ್ಟಿತು, ಮುಂಜಾನೆ ಸ್ವಲ್ಪ ಹುಳಿ ಜಾಸ್ತಿ ಉಂಡಿದ್ದಕ್ಕಾಗಿ ಅವನು ಈ ಥರ ಕಕ್ಕಿರಬೇಕೆಂದು ಮಂಜುಳಾ ಸುಮ್ಮನಾದಳು. ಸಂಜೆಯವರೆಗೂ ಇದೆ ಪುನರಾವರ್ತನೆಯಾಗತೊಡಗಿತು. ರಾತ್ರಿ ವೇಳೆಗೆ ವ್ಯಧ್ಯರ ಹತ್ತಿರ ಹೋಗಿ ಔಷದಿಯ ಬರೆಸಿಕೊಂಡು ಬಂದಳು. ದಿನದಿಂದ ದಿನಕ್ಕೆ ಖಾಯಿಲೆ ಹೆಚ್ಚಾಗುತ್ತಲೆ ಹೋಯಿತು, ಗಂಡನ ಮನೆಗೆ ತಿಳಿಸಿದರೆ ಅವರ್ಯಾರು ಹೆಚ್ಚಿಗೆ ತಲೆಯನ್ನು ಕೆಡಸಿಕೊಳ್ಳಲಿಲ್ಲ, ಮಂಜುಳಾ ಮತ್ತು ಭೀಮಜ್ಜ ಇಬ್ಬರೂ ಕೂಸನ್ನು ಕರೆದುಕೊಂಡು ಇಲಕಲ್ ನ ದೊಡ್ಡ ದವಾಖಾನೆಗೆ ತೋರಿಸಿಕೊಂಡು ಬರಲು ಹೊರಟರು. ವಿಧಿ ದಾರಿ ಮಧ್ಯೆದಲ್ಲಿ ಕಾದು ಕುಳಿತಿದ್ದು ಮಂಜುಳಾಳ ಮಗನ ಪ್ರಾಣಹರಣವನ್ನು ಮಾಡಿಬಿಟ್ಟಿತು. ನಡುದಾರಿಯಲ್ಲೆ ಇಳಿದು, ಅಲ್ಲೆ ಪಕ್ಕದಲ್ಲೆ ಹೊಲದ ಬದುವಿಗೆ ಇದ್ದ ಬೇವಿನ ಮರದ ನೆರಳಿಗೆ ಕುಳಿತು ಮಡಿಲಲ್ಲಿ ಮಗುವನ್ನು ಮಲಗಿಸಿಕೊಂಡು, ಮುಳುಗುತ್ತಿರುವ ಸೂರ್ಯನನ್ನೆ ದಿಟ್ಟಿಸುತ್ತಾ ಕುಳಿತಳು, ಅವಳ ಮನದಲ್ಲಿ "ದೇವರು ನನಗೆ ಏತಕೆ ಬೇರುಗಳಿಲ್ಲ ಕನಸುಗಳನ್ನು ಕಟ್ಟಿಕೊಟ್ಟನು". ಎಂಬ ಪ್ರಶ್ನೆಯು ಕಾಡುತ್ತಿದ್ದರೆ, ಇದ್ದ ಒಂದು ಕನಸು ಕಮರಿಹೋಗಿದ್ದನ್ನು ಕಂಡು, ನಾಳೆಗೆ ಮೂಡುವ ಸೂರ್ಯನ ಭರವಸೆಯನ್ನು ಹೊಂದದೆ ಭೀಮಜ್ಜ ಮಗಳ ರಟ್ಟೆಯನ್ನು ಹಿಡಿದೆಬ್ಬಿಸಿ, ಮರಳಿ ತಮ್ಮೂರಿಗೆ ಕಡೆಗೆ ಭಾರವಾದ ಹೆಜ್ಜೆಗಳ ಹಾಕುತ್ತ ನಡೆದರು.