ಬಿಟ್ಟ ನಿಟ್ಟುಸಿರು ನನ್ನದಲ್ಲ,
ರಾತ್ರಿ ಮಂಚದಲಿ ಮುಲುಗಿ
ನಲುಗಿ ಹೋದ ಮಲ್ಲಿಗೆಯ
ಎಸಳುಗಳು ನನ್ನದಲ್ಲ,
ಹಾಲಿನ ಲೋಟದ ಅಂಚಿಗೆ
ಮೆತ್ತಿದ ಕೆಳತುಟಿಗಳ ರಂಗು ನನ್ನದೆ!
ಮಿಲನದ ಮಹೋತ್ಸವದ ಮುನ್ನುಡಿಗಾಗಿ
ಕುಡಿದದ್ದಲ್ಲ, ಹರಿಣಿಯ ಮೇಲೆ ಎರಗುವ
ಹುಲಿಯ ಆಕ್ರಮಣವ ನೆನೆದು,
ಗಂಟಲು ಪಸೆಯು ಒಣಗಿ, ಹ್ಞೂಂ...
ಎನ್ನಲು ಶಕ್ತಳಲಿಲ್ಲದಾದಾಗ ಕುಡಿದದ್ದು!!!
ನನ್ನದೇನೂ... ಇಲ್ಲ...
ಇದ್ದದ್ದು ನಿನ್ನೆ ರಾತ್ರಿಗೆ ಹರೆದು...
ತೊಳೆದು ಹೋಯಿತಲ್ಲ!!!!
No comments:
Post a Comment