Thursday, June 30, 2016

ನೀನಿಲ್ದ

ನೀನಿಲ್ದ ಊರಾಗ, ನೀನಿಲ್ದ ಮನಿಯಾಗ
ಒಬ್ನ ಕುಂತಿದ್ನಿ ನಿನ್ ವಿಚಾರದಾಗ
ಯಾರೊ ನಕ್ಕಂಗಾತು ಮನಿ ಹೊರಗ
ಎದ್ಬಂದ ನಿಂತೆ ಅಂಗಳದಾಗ

ಅಮಾಸಿ ಕತ್ತಲು ಹುಣ್ಣಿಮೆ ಬೆಳಕಿಲ್ಲ
ನೋಡಿದ್ರ ಬಾನಾನ ಚುಕ್ಕಿ ನಗಾಕ ಹತ್ತಿದ್ವು
ಮನಿ ಮುಂದಿನ ಮರಕ್ಕ ಸುತ್ತಗೊಂಡ
ಬಳ್ಳಿನು ನಗಾಕ ಹತ್ತಿತ್ತು

ಯಾಕ ನಗಾಕ ಹತ್ತಿರಿ ಅಂದೆ

ಚುಕ್ಕಿ ಅಂತು ನಿನ್ನ ಚೆಲ್ವಿದ್ದಾಗ ಅಕಿ
ಆಕಾಶದಂತ ಕಣ್ಣಾಗ ನಮ್ಮನ್ನ
ಎಣಸ್ಕೊಂತ ಆಕಿ ತೊಡಿಮ್ಯಾಲ
ಮಲ್ಗಿರತಿದ್ದಿ ಲೋಕಾನ ಮರತ
ಈಗೇನು, ಲೋಕಾನ ತಲಿಮ್ಯಾಲ
ಬಿದ್ಹಂಗ ಕುಂತಿಯಲ್ಲೊ

ಹ್ಞೂಂ, ಅದ್ನ ಕೇಳಿ

ನೀನ್ನ ನಗುವು

ನೀನ್ನ ನಗುವು ಹೂವಂತೆ
ಅದ್ಕ ಲಂಕೆ ಧಗಧಗಸಿಬಿಡ್ತು
ನಿನ್ನ ನುಡಿಯು ಹಾಡಂತೆ
ಅಲಾ, ಅದ್ಕ ದುರ್ಯೊಧನ
ಹಾರಾಡಿಬಿಟ್ಟ ಭೀಮನ ಕೈಯಾಗ

ನೀನ್ನ ನಗುವು

ನೀನ್ನ ನಗುವು ಹೂವಂತೆ
ಅದ್ಕ ಲಂಕೆ ಧಗಧಗಸಿಬಿಡ್ತು
ನಿನ್ನ ನುಡಿಯು ಹಾಡಂತೆ
ಅಲಾ, ಅದ್ಕ ದುರ್ಯೊಧನ
ಹಾರಾಡಿಬಿಟ್ಟ ಭೀಮನ ಕೈಯಾಗ

Wednesday, June 29, 2016

ಎರಡು ಹನಿ ಕಣ್ಣೀರು

ನೀನು ಬರ್ತಿಯಂತ
ಮುಂಜಾನಿಯಿಂದ
ಕಾಯಾಕ ಹತ್ತಿದ್ನ್ಯಾ

ಮೂಡಣದಾಗ ಮೂಡಿದ ಸೂರ್ಯ
ಮರಳಿ ಮುಳಗಾಕ ಹತ್ತಿದ
ಗೂಡ ಬಿಟ್ಟ ಹಕ್ಕಿಗಳೆಲ್ಲ
ಹೊರಳಾಕ ಹತ್ಯಾವ

ಸುಮಾ ತುಂಬಿನಿಂತ ಹೂವೆಲ್ಲ
ದುಂಬಿ ಹೀರಿ ಬಾಡಾಕ ಹತ್ಯಾವು
ಕಾಡಿಗೆ ಹೋದ ದನಗಳೆಲ್ಲಾ
ಮೇವುಂಡ ದೊಡ್ಡಿಗೆ ಹೊಂಟಾವು

ನೀ ಬರ್ತಿಯಂತ ಉಬ್ಬಿ ನಿಂತಿದ್ದ
ನನ್ನೆದಿ ಕುಗ್ಗಿ ಹೊಗ್ಯತಿ
ನಿನ್ನ ದಾರಿ ನೋಡಿ ನೋಡಿ
ನನ್ನ ಕಣ್ಣು ನೊಂದು ಎರಡ ಹನಿ
ನೀರ ಸೊಸತು

Tuesday, June 28, 2016

ಆಸರೆ

ಗೂಡಿಗೆ ಜೇನಿನಾಸರೆ
ಜೇನಿಗೆ ಹೂವಿನಾಸರೆ
ಹೂವಿಗೆ ಲತೆಯಾಸರೆ
ಲತೆಗೆ ತರುವಿನಾಸರೆ

ಮುತ್ತಿಗೆ ಚಿಪ್ಪಿನಾಸರೆ
ಚಿಪ್ಪಿಗೆ ಮಳೆಯಾಸರೆ
ಮಳೆಗೆ ಮೋಡದಾಸರೆ
ಮೋಡಕೆ ಶರಧಿಯಾಸರೆ

ಪ್ರೀತಿ ನಿನಗಾಸರೆ
ನಿನಗೆ ನಾನಾಸರೆ
ನನಗೆ ಒಲವಿನಾಸರೆ
ಒಲವಿಗೆ ನಮ್ಮಿಬ್ಬರಾಸರೆ

Monday, June 27, 2016

ಕಳ್ಳಿ ?

ನೀನೇಷ್ಟು ಕಳ್ಳಿಯದಿ
ಅನ್ನೋದು ಇವತ್ತ
ಗೊತ್ತಾತ ನೋಡು

ಆ ತಾವರೆ ಬಣ್ಣ ತಗೊಂಡು
ಮೈಗೆ ಬಳಕೊಂಡಿ
ಕಾಮನಬಿಲ್ಲನ ಕಿತ್ತಗೊಂಡ
ಕಣ್ಣೀನ ಹುಬ್ಬ ತಿಡಕೊಂಡಿ

ಆ ಗಿಳಿ ಮೂಗ ಕಸಗೊಂಡ
ಮೂಗ ಇಟಕೊಂಡಿ
ಗುಲಾಬಿ ಅಂದ ಇಸಗೊಂಡ
ತುಟಿಗೆ ಹಚ್ಚಕೊಂಡಿ

ಆ ಮಲ್ಗಿ ನಗುವಾ ಕಸಗೊಂಡ
ನಗಾಕ ಹತ್ತಿ
ಮೋಡದ ಮಿಂಚನ್ನ ಕಿತ್ತಗೊಂಡ
ನಡೆಯಾಗ ತೊಡಗಿಸಿಕೊಂಡಿ

ನನ್ನ ರಾತ್ರಿ ನಿದ್ರಿ ಕದ್ದ
ನಿನ್ನ ಕಣ್ಣಾಗ ಮಡ್ಕೊಂಡಿ
ನಿದ್ದೆನ ಕನಸನ್ನ ಸಹ ಕದ್ದ
ಓಡಾಡಕ್ಹತ್ತಿ ಮಳ್ಳಿ ಹಂಗ

ಎಲ್ಲಾ ಕದ್ದಾಕಿ ನನ್ನ
ಮನಸ್ಸನ್ಯಾಕ
ತಬ್ಬಲಿ ಮಾಡಿದಿ

ಅದನ್ನು ಒಂದ ಕದ್ದಿದ್ರ
ಎಷ್ಟ ಸುಖ ಇರ್ತಿತ್ತ
ಈ ಮನಸಿಗೆ...

ಮುಂಗಾರು ಮಳೆಯ ಸೊಬಗ

ನೋಡು ಮುಂಗಾರು
ಮಳೆಯ ಸೊಬಗ
ನಿದಿರೆಯ ಮಂಪರು
ಬಿಟ್ಟೇಳೊ ಹುಡುಗ

ಹಾದಿ ಬದಿಯತುಂಬ
ಹಚ್ಚ ಹಸಿರನು ನೋಡ
ಊರಿನ ಕೇರೆಯು ತುಂಬ
ಈಜುವ ಗೆಳೆಯರ ನೋಡ

ಹೊಲದಲಿ ಹಚ್ವನೆ
ಹಾಸಿಗೆ ನೋಡ
ಗಿಡದಲಿ ಉದ್ದನೆ
ಕಾಯ್ಗಳ ನೋಡ

ಚಿಗುರೆಲೆ ಮೇಲೆ
ಹನಿಗಳ ನೋಡ
ಕೊಂಬೆಯ ಮೇಲೆ
ಹಕ್ಕಿಯ ನೋಡ

ಏನೀ ಸೊಬಗ
ನೋಡೊ ಹುಡುಗ

Sunday, June 26, 2016

ಅವಳ ಪ್ರೀತಿಗೆ

ಅವಳ ಪ್ರೀತಿಯ ಪಡೆಯಲು

ಕಾಮನಬಿಲ್ಲನೆತ್ತಿ ಬಾಣವ ಬಿಟ್ಟೆ
ಕಾಮಬಾಣಕಂಜಿ ಕಾಣದಾದಳು

ಪತ್ರವ ಬರೆದು ಮೇಘನಿಗೆ ಕೊಟ್ಟೆ
ಮೇಘಾಕಾರವ ಕಂಡು ಮರೆಯಾದಳು

ಖರ್ಚು

ಖರ್ಚು ಮಾಡ್ಕೊಂಥ ಹೋದಂಗೆಲ್ಲಾ
ಕುಡಕ್ಯಾನ ಹೊನ್ನು ಕರಗತ್ಯತಿ

ಖರ್ಚು ಮಾಡದ್ಹಂಗೆಲ್ಲಾ
ತಲೆನ ಬುದ್ದಿ ಹೆಚ್ಚಾಕ್ಕೊಂತ
ಹೋಕ್ಯತಿ

ಬೇಕಂತ್ಯತಿ

ಕತ್ಲು ಚುಕ್ಕಿನು ಬೇಕಂತ್ಯತಿ
ಚಂದ್ರಾನೂ ಇರ್ಲಂತ್ಯತಿ

ಹೂವು ದುಂಬಿನ ಬೇಕಂತ್ಯತಿ
ಗಾಳಿನೂ ಇರ್ಲಂತ್ಯತಿ

ನೆಲ ಮಳಿನ ಬೇಕಂತ್ಯತಿ
ಬಿಸ್ಲುನೂ ಇರ್ಲಂತ್ಯತಿ

ಹಿಂಗ...
ಪ್ರೀತಿ ನೀನ್ನ ಬೇಕಂತ್ಯತಿ
ಮತ್ತ ನನ್ನೂ ಇರ್ಲಂತ್ಯತಿ

ಬಾಳೆ ಹೆಂಗ

ಮನೆ  ಮನೆ ಬೇಡಿ ತಿನ್ನೊ
ಬಿಕ್ಷುಕನ ಮನೆಗ್ಹೊಗಿ
ಬಿಕ್ಷೆ ಬೇಡಿದ್ರ ಹೆಂಗ

ಕಣ್ಣ ಕಾಣದೋನ ಮುಂದ
ಹೋಗಿ ಊರಿಗೆ ಹೋಗೊ
ದಾರಿ ಕೇಳಿದ್ರ ಹೆಂಗ

ಮಾತೆ ಬರದವನ ಕೈಗೆ
ಶ್ರಂಗಾರ ಕಾವ್ಯ ಕೊಟ್ಟ
ಹಾಡಂತಂದ್ರ ಹೆಂಗ

ಹಂಗ...

ಪ್ರೀತಿ ಸುಖ ಬೇಡಿ ಬಂದೊವ್ಗ
ಪ್ರೀತಿ ಅಂದ್ರ ಏನಂತ ಕೇಳಿದ್ರ
ನನ್ ಬಾಳೆ ಹೆಂಗ

ಮರಣ ಬೇಡ

ನೊಣ ಬೆಲ್ಲಾನು ಬೇಡತ್ಯತಿ
ಮಾವುನು ಬೇಡತ್ಯತಿ

ಆನೆ ಕಬ್ಬನು ಬೇಡತ್ಯತಿ
ಬಾಳೆನು ಬೇಡತ್ಯತಿ

ಆಸೆ ಹೆಣ್ಣನ್ನು ಬೇಡತ್ಯತಿ
ಹೊನ್ನನ್ನು ಬೇಡತ್ಯತಿ

ಜೀವಾ ಸುಖಾನು ಬೇಡತ್ಯತಿ
ದುಃಖ಼ಾನು ಬೇಡತ್ಯತಿ

ದೇಹಾ ಹುಟ್ಟನ್ನು ಬೇಡತ್ಯತಿ
ಆದ್ರ ಮರಣಾನ ಬೇಡಂತ್ಯತಿ

Thursday, June 23, 2016

ಉಸಿರು

|| ಎಲ್ಲಾರು ಹೇಳ್ತಿರ್ತಾರ
ನನ್ನ ಉಸಿರನ್ಯಾಗ
ನಿನ್ನ ಹೆಸರು ಐತಂತ ||

ಆದ್ರ ನಾನ್ ಹೇಳ್ತಿನಿ
ನಿನ್ನ ಉಸಿರಾಗ
ನನ್ನ ಹೆಸರು ಐತಂತ

ನಿನ್ನ ಉಸಿರು ನಿಂತ
ಹೋದ್ರ...
|| ನನ್ನುಸಿರ ನಿಂತ್ಹೊಕ್ಕ್ಯತಿ ||

Wednesday, June 22, 2016

ಬಾಗಿದ ಕಾಯ

ಹಣ್ಣು ತುಂಬಿದ ಕೊಂಬಿನ
ಯಾವಾಗ್ಲೊ ಬಾಗಿರತ್ಯತಿ

ಹೂ ತುಂಬಿದ ಬಳ್ಳಿನ
ಯಾವಾಗ್ಲೂ ಬಾಗಿರತ್ಯತಿ

ತನೆ ತುಂಬಿದ ನೆಲ್ಲೆ
ಯಾವಾಗ್ಲೂ ಬಾಗಿರತ್ಯತಿ

ವಿಚಾರ ತುಂಬಿದ ಕಾಯನ
ಯಾವಾಗ್ಲೂ ಬಾಗಿರತ್ಯತಿ

ಸುಮ್ನ

ಹೂ ಕೊಟ್ಟೆ
ಹ್ಞೂಂನ ಅನ್ನಲಿಲ್ಲ

ಪತ್ರ ಕೊಟ್ಟೆ
ಉತ್ತರಾನ ಕೊಡಲಿಲ್ಲ

ಬಳೆ ಕೊಟ್ಟೆ
ಬಳಿಗೆ ಬರಲಿಲ್ಲ

ಮೂಗುತಿ ಕೊಟ್ಟೆ
ಮೂತಿನ ನೋಡಲಿಲ್ಲ

ಮೊಬೈಲ್ ಕೊಟ್ಟೆ
ಮಾತ ಆಡಲಿಲ್ಲ

ಸುಬ್ಬಿ, ಸುಮ್ನ
ಹ್ಞೂಂ ಅನ್ನು ಇಲದಿದ್ರ
ಮುಂದ್ಕ ನಮ್ಮಪ್ಪ
ಯಾವದ್ಕನು ರೊಕ್ಕಾನ
ಕೊಡಂಗಿಲ್ಲ

ನಮ್ಮವ್ವ ೧

ಬೆಳ್ಳ ಬೆಳ್ಳನೆ ಮೋಡ
ಬೆಳ್ಳಿ ಬಟ್ಟಲು ಮೋಡ
ಹಾಲು ಚೆಲ್ಲಿದ ಮೋಡ
ಏನಾತ
ಭೂಮಿಗೆ ನಾಕ
ಹನಿ ಮಳಿನ
ಹುಯ್ಯಲಿಲ್ಲಂದ್ರ
ಏನ ಬಂತ ನಮ್ಮವ್ವ

ಕಪ್ಪ ಕಪ್ಪಾನ ಭೂಮಿ
ಕಪ್ಪಾ ಬಯಲ ಸೀಮಿ
ಗಡಿಗೆ ತುಂಬಾ ಬಂಗಾರ
ಕೊಟ್ಟರು ಸಿಗದಂತ ಭೂಮಿ
ಏನಾತ
ಬಿತ್ತಿದ ನಾಕ ಕಾಳಿಗೆ ಜೀವ
ತುಂಬಲಿಕ್ಕಂದ್ರ ಏನ ಬಂತ
ನಮ್ಮವ್ವ

ಕೆರಿ ತುಂಬ ತುಂಬೈತಿ
ಬಿಸಲಿಗೆ ಥಳಥಳಂತ ಹೊಳಿತೈತಿ
ನೋಡ್ದೊರ ಕಣ್ಣಾಗ ತೇಲಾಕ ಹತ್ತೈತಿ
ಏನಾತ
ಊರಿಗೆ ಹೋಗೊ ಬರೋ ಜನರ ದಾಹನ
ಇಂಗಸಲಿಲ್ಲಂದ್ರ ಏನ ಬಂತ
ನಮ್ಮವ್ವ

ಹೊಸಬಾಳು

ಆ ಗಾಳಿಯ ತುಂಟಾಟಕೆ
ನಲಿದಾಡುವ ನಿನ್ನಿ ಮುಂಗುರುಳು
ಕದಿತಾವ ನನ್ನ ನಿದಿರೆಯ ಹಗಲಿರುಳು
ನೀನಗಲ್ಲದೆ ಇನ್ನಾರಿಗೆ ಹೇಳಲಿ ನನ್ನಿ ಗೋಳು
ಬಾರೆ ಭಾಮೆ ನಾವಿಬ್ಬರು ಒಂದಾಗಿ
ಕಟ್ಟೋಣ ಹೊಸಬಾಳು

ಕುವೆಂಪು

ಅಂದು ಕುವೆಂಪುರವರು ಬರೆದರು
ತೆರೆದಿದೆ ಮನೆ ಓ ಬಾ ಅತಿಥಿ...
ಇಂದಿನವರು ಹಾಡುತ್ತಾರೆ
ಬರದಿರು ಮನೆಗೆ ಓ ಅತಿಥಿ...
ನೀವು ಬಂದರೆ ಮನೆಯವರಿಗೆಲ್ಲರಿಗೂ
ಆಗತ್ಯತಿ ಫಜೀತಿ

ಗೀಚಿ ಗೀಚಿ

ಹಿಂಗ್ಯಾಕ ನೋಡತಿದಿ ನನ್ನ
ಕದ್ದುಮುಚ್ಚಿ ಕದ್ದುಮುಚ್ಚಿ

ಎದೆಯಾಗ ಬರಲೊಲ್ಯಾಕ
ಗೆಜ್ಜೆ ಕಟ್ಟಿ ಕಾಲ್ಗೆಜ್ಜೆ ಕಟ್ಟಿ

ಓಡುತಿಯಾಕ ನನ್ನ
ನೋಡಿ ನೋಡಿ

ಮನಸ್ಯಾಕ ನೊಯಿಸುತಿ
ಕನಸಲಿ ಕಾಡಿ ಕಾಡಿ

ಎದೆಯಾಗ ಹಚ್ಚಿದೆ ನೀನು
ಪ್ರೀತಿಯ ಕಿಚ್ಚನು ನಾಚಿ ನಾಚಿ

ಸುಸ್ತಾಗಿ ಹೋದೆನು ನಿನ ಸೊಬಗಿನ
ಕವಿತೆ ಗೀಚಿ ಗೀಚಿ

ಪ್ರೀತಿಯ ಕಸ

ಕತ್ಲಾಗಿನ ದೀಪ ತಂದು
ಬೆಳಕನ್ಯಾಗ ಇಟ್ಹಂಗ
ಹೊಳ್ಯಾಗ ತೇಲೊ ತೆಪ್ಪಾನ
ತಂದು ಬಂಡಿ ಹಾದ್ಯಾಗ ಬಿಟ್ಹಂಗ
ಗೂಡನ್ಯಾಗ ಹುಟ್ಟೊ ಹಕ್ಕಿ ಮೊಟ್ಟೆನಾ
ಮನ್ಯಾನ ಒಲಿ ಹಂಚಿನ ಮ್ಯಾಲ ಇಟ್ಹಂಗ
ನನ್ ಮನದಾಗಿನ ಮಾತು
ನಿನ್ನ ಮಡಿಲಿಗ ಹಾಕಿದ್ರ
ನೀ ನಡೆಯೊ ದಾರಿಗೆ
ಕಸ ಮಾಡಿದೆಲ್ಲ

ನಂಟು

ಹುಟ್ಟು ಸಾವಿನ ನಂಟು
ಇಲ್ಲಾರು ಕಂಡದ್ದುಂಟು
ಬ್ರಹ್ಮ ಹಾಕಿದ ಗಂಟು
ಸಕಲ ಜೀವಿಗಳಲೂ
ನಮ್ಮ ಶಿವನುಂಟು

ಜಗಳ

ಅತ್ತಿ ಸೊಸಿ ಜಗಳಂದ್ರ
ದೋಣ್ಯಾಗ ಕುತ್ಗೊಂಡ
ಎರಡು ದಿಕ್ಕಿಗ ಹುಟ್ಟು ಹಾಕದ್ಹಂಗ

ಎದೆಯುರಿ

ಗೆಳತಿ ಅಳಬ್ಯಾಡ ನೀ ಹಿಂಗ
ಅಂಗಳ್ದಾಗ ಕುತಗೊಂಡ

ನೀನತ್ರ ನನ್ನೆದಿಗೆ ಬರೆ
ಎಳದ್ಹಂಗಾಕ್ಯತಿ

ನಿನ್ ಕಣ್ಣಾನ ನೀರು
ಬಲು ಉಪ್ಪದಾವು

ನೀನತ್ರ ಜಾರೊ ಆ ಮುತ್ತು
ನನ್ನೆದಿನ ಸೇರ್ತಾವು

ಉರಿಯೊ ಬೆಂಕ್ಯಾಗ
ತುಪ್ಪ ಸುರದ್ಹಾಂಗ

ಗಾಯದೆದಿಗ ನಿನ್ನ
ಮುತ್ತ ಬಂದ ಸೇರಿದ್ರ

ಹೆಚ್ಚ ತ್ರಾಸಾಗ್ತ್ಯತಿ
ಗೆಳತಿ ಹೆಚ್ಚ
ತ್ರಾಸಾಗ್ತ್ಯತಿ

Wednesday, June 15, 2016

ಕಟ್ಟುವದು

ಹೂವಿಂದ ಪ್ರೀತಿನ
ಹುಟ್ಟುಸ್ತಾರ
ಮುಳ್ಳಿಂದ ಪ್ರೀತಿನ
ಸಾಯಸ್ತಾರ
ನೀರಿಂದ ಬೆಳೆನ
ಬೆಳಿತಾರ
ಬೆಂಕಿಯಿಂದ ಬೆಳೆನ
ಸುಡತಾರ

ನೀನು

ನೀನು...
ನನ್ನ ಸೀರೆಯ
ಸೇರಗಾಗಿದ್ದರೆ...
ನನ್ನ ಕಂಬನಿಯ ನೋವು
ನಿನಗರಿವಾಗುತಿತ್ತು

ನನ್ನ ಹಣೆಯ
ಕುಂಕುಮವಾಗಿದ್ದರೆ...
ಭಯದ ಬೆವರಿನ
ವಾಸನೆ ತಿಳಿಯುತ್ತಿತ್ತು

ನನ್ನ ಮಂಚದ
ದಿಂಬಾಗಿದ್ದರೆ...
ಒಡಲಾಳದ ಅಳವು
ಗೊತ್ತಾಗುತ್ತಿತ್ತು 

ಬಾಲ್ಕನಿ ಮೇಲೆ ಬೀಸುವ
ತಂಗಾಳಿಯಾಗಿದ್ದರೆ...
ಮನದಾಳದ ಮಾತನು
ಕೇಳುತ್ತಿದ್ದೆ

ನನ್ನ ಮನೆಯ
ಕನ್ನಡಿಯಾಗಿದ್ದರೆ...
ನನ್ನ ಮೊಗದ ಭಾವನೆಗಳ
ನೊದುತ್ತಿದ್ದೆ

ನನ್ನ ಕೋಣೆಯ
ಗೋಡೆಯಾಗಿದ್ದರೆ...
ಎದೆಯಾಳದ ಕನಸುಗಳನು
ಚಿತ್ರಿಸುತ್ತಿದ್ದೆ

ಹೇಳದೆ-ಕೇಳದೆ
ಬರೆಯದೆ-ಓದದೆ
ಪ್ರೀತಿಗೆ ನೋವನು
ನೀಡಿ
ನೀನು...
ನಡೆದುಬಿಟ್ಟೆ

ನಲ್ಲ ನೀ ಬರದಿರೆ

ಸಂಪಿಗೆ ಸೊರಗಿರೆ
ಮಲ್ಲಿಗೆ ಮುದುಡಿರೆ
ಕಮಲವು ಕಮರಿರೆ
ನಲ್ಲ ನೀ ಬರದಿರೆ

ಮಳೆಯು ಮರೆಯಾಗಿರೆ
ಸೂರ್ಯನು ಸುಡುತಿರೆ
ನೆರಳು ನೋಯುತಿರೆ
ನಲ್ಲ ನೀ ಬರದಿರೆ

ಮನವಿದು ಮೀಡಿಯುತಿರೆ
ಕನಸದು ಕರಗುತಿರೆ
ಆಸೆಯು ಆರುತಿರೆ
ನಲ್ಲ ನೀ ಬರದಿರೆ

ಸಂಜೆಯು ಸರೆಯುತಿರೆ
ಮಾತದು ಮರೆಯುತಿರೆ
ನಗುವದು ನೋವಾಗುತಿರೆ
ನಲ್ಲ ನೀ ಬರದಿರೆ

ಹಕ್ಕಿಯು ಹಾರುತಿರೆ
ಮೋಡವು ಮುದುಡುತಿರೆ
ಗಾಳಿಯು ಗುನುಗುತಿರೆ
ನಲ್ಲ ನೀ ಬರದಿರೆ

ಬಂದುಬೀಡು ಬಾಣದಂತೆ
ಧುಮುಕಿಬಿಡು ದುಂಬಿಯಂತೆ
ಮುದ್ದಾಡಿಬಿಡು ಮರೆಯದಂತೆ
ಬೆರೆತುಬಿಡು ಬೇರ್ಪಡಿಸದಂತೆ

Friday, June 10, 2016

ಮಲಗಿದ ಕವಿ

ಗೊತ್ತಿಲ್ಲ ನನಗರಿಯದೆ
ನನ್ನೊಳಗಿನ ಕವಿ ಸದ್ದಿಲ್ಲದಂತೆ
ಮಲಗಿಯೇ ಬಿಟ್ಟ ಯಾರೀಗೂ
ಅರಿವಾಗದಂತೆ

ಕಾರಣ...

ಕದ್ದು ಕದ್ದು ಬರೆಯುವರ ಕಂಡು
ಬಳಸಿಕೊಂಡವರಧಿಕಾರವ ಕಂಡು
ಭಾವನೆಗಳ ತಿರುಚುವವರ ಕಂಡು
ನಂಬಿಕೆಯ ಹುಗಿಯುವವರ ಕಂಡು
ಲಾಲಸೆಗಾಸೆಗಾಗಿ ಬದುಕುವರನು ಕಂಡು

ಮಲಗಿಯೇ ಬಿಟ್ಟನವನು
ನನ್ನೊಳಗಿನ ಕವಿಯೆಂಬ
ಭ್ರಮೆಯ ಶಿಶು

ಉಪ್ಪಿಟ್ಟು

ಸಂಜೆಯ  ಹೊತ್ತು
ಸೂರ್ಯನು ಕರಗುವ ಹೊತ್ತು
ಶಾಲೆಯು ಬಿಡುವ ಹೊತ್ತು
ಕಟ್ಟೆಯ ಮೇಲೆ ಡಬರಿ ಇತ್ತು
ಡಬರಿ ಒಳಗೆ ಉಪ್ಪಿಟ್ಟಿತ್ತು
ಉಪ್ಪಿಟ್ಟಿನ ವಾಸನೆ ಮೂಗಿಗೆ ಬಡೆದಿತ್ತು
ಹೊಟ್ಟೆಯು ತುಂಬಾ ಹಸಿದಿತ್ತು
ಬಾಯಲಿ ನೀರು ಸೋರಿತ್ತು
ಶಾಲೆಯ ಘಂಟೆಯು ಬಾರಿಸಿತು
ಎಲ್ಲರ ಸಾಲು ಸರತಿ ನಿಂತಿತು
ಕೈಯಲಿ ಉಪ್ಪಿಟ್ಟು ಕುಳಿತಿತ್ತು
ಖಾರದ ಪುಡಿ ಮೇಲೆ ಮಲಗಿತ್ತು
ಹೊಟ್ಟೆಯ ತಳಮಳ ನಿಗಿತ್ತು
ನೀರು ಒಡಲನು ಸೇರಿತ್ತು
ಪಾಟಿಚೀಲವು ಮನೆ ಗೂಟಕೆ ನೇತಿತ್ತು

ಗೆಳೆಯ

ಎಂಥ ಹ್ರದಯವಂತ
ಗೆಳೆಯಾ ನೀನು
ನನ್ನ ಶಾಲೆಯ ಹಣವನ್ನು
ನೀನೆ ಪಾವತಿಸಿದೆ
ನಿನ್ನ ಮನೆಯೂಟವನ್ನು
ನನಗೆ ಬಡಿಸಿದೆ
ನಿನ್ನ ಬಟ್ಟೆಯನ್ನು
ನನಗೆ ತೋಡಿಸಿದೆ
ನಿನ್ನ ಪ್ರೀತಿಯನು
ನನಗೆ ಕೊಡಿಸಿದೆ
ನಿನ್ನ ಕೆಲಸವನ್ನು
ನನಗೆ...
ಹೀಗೆ ಎಲ್ಲ ನನಗೆ
ನೀಡಿದ ನೀನು
ಎಂಥ ಹ್ರದಯಹೀನವಾಗಿಬಿಟ್ಟೆ
ನೀನು ಗೆಳೆಯಾ, ಮೊನ್ನೆ ಕೊಟ್ಟ
ನೂರು ರೂಪಾಯಿಯನ್ನು
ಮರಳಿ ಕೇಳಿದೆಯಲ್ಲ

ಆಸೆ

ನೀರಿಗೆ ಬಣ್ಣವಿಲ್ಲ
ಗಾಳಿಗೆ ಗಂಧವಿಲ್ಲ
ಬಾನಿಗೆ ಎಲ್ಲೆಯಿಲ್ಲ
ಆಸೆಗೆ ಕೊನೆಯಿಲ್ಲ

ದಣಿವಿಲ್ಲ

ಖಡ್ಗಕ್ಕೆಂದು ದಣಿವಿಲ್ಲ
ದ್ವೇಷಕ್ಕೆಂದು ಮರೆವಿಲ್ಲ
ಪ್ರೀತಿಗೆಂದು ಸಾವಿಲ್ಲ
ಸಾವಿಗೆಂದು ಕರುಣೆಯಿಲ್ಲ

ತವರೂರು

ಸಿರಿಗಂಧದ ತವರೂರು
ಬೆಲ್ಲಚ್ಚಿನ ಮದ್ದೂರು
ಕಾಷ್ಠಶಿಲೆಗಳ ಬೇಲೂರು
ಹಳದಿ ಲೋಹದ ಸಿರಿಯೂರು

ಧರ್ಮ

ಬೇರೆ ಯಾರೊ ಎಣ್ಣೆಯನು
ಹಾಕುವುದಿಲ್ಲೆಂಬುದಕೆ ದೀಪವದುರಿಯುವುದಿಲ್ಲ
ಉರಿಯುವುದು, ಬೆಳಕನೀಡುವುದದರಧರ್ಮ

ಬೇರೆ ಯಾರೊ ನೀರನ್ನು
ಹಾಕುವುದಿಲ್ಲೆಂಬುದಕೆ ಹೂವರಳುವುದಿಲ್ಲ
ಮೊಗ್ಗಾಗುವುದು, ಅರಳುವುದದರಧರ್ಮ

ಬೇರೆ ಯಾರೊ ಮೇವನ್ನು
ಹಾಕುವುದಿಲ್ಲೆಂಬುದಕೆ ಹಾಲನಿಯುವುದಿಲ್ಲ
ಹಡೆಯುವುದು, ಹಾಲನಿಯುವುದದರಧರ್ಮ

ಮಾತು

ಬಾಣ ನಿನ್ನ ಬತ್ತಳಿಕೆಯಲ್ಲಿರುವವರೆಗೆ
ಮಾತ್ರ ಅದು ನಿನ್ನದು
ಶರಬಿಟ್ಟ ಮೇಲಾಗುವ
ಪರಿಣಾಮ ನಿನ್ನದಲ್ಲ

ಕೈಯೊಳಗಿನ ಕನ್ನಡಿ
ಕೈಜಾರುವವರೆಗೂ ಅದು ನಿನ್ನದೆ
ಜಾರಿದ ಮೇಲಾಗುವ
ಪರಿಣಾಮ ನಿನ್ನದಲ್ಲ

ಮಾತಾಡುವ ಮೊದಲು
ಮಾತುಗಳು ನಿನ್ನವೆ
ಆಡಿದ ನಂತರ ಬೀರುವ
ಪರಿಣಾಮ ನಿನ್ನದಲ್ಲ

ಮಾತು ಆಡಿದ್ರೆ ಹೊತು
ಮುತ್ತು ಒಡದ್ರೆ ಹೊತು
ಮುತ್ತಿನಂಥ ಮಾತು

ಇರದು

ಕನ್ನಡಿಯನ್ನು  ಒಡೆದು ಹಾಕಿದರು
ಪ್ರತಿಬಿಂಬವ ತೋರದೆ ಇರದು

ಗಂಧವನು ಕಡೆದು ಹಾಕಿದರು
ಸುಗಂಧವನು ಬೀರದೆ ಇರದು

ಕಬ್ಬನ್ನು ರುಬ್ಬಿ ಹಾಕಿದರು
ಸಿಹಿಯ ನೀಡದೆ ಇರದು

ಸಾಧ್ಯವಾಗದು

ಹರಿಯುವ ನೀರನು
ಮರಳಿ ಹಿಮ್ಮೆಟ್ಟಿಸಲಾಗದು
ಬೀಸುವ ಗಾಳಿಯ
ದಿಕ್ಕನ್ನು ಬದಲಾಯಿಸಲಾಗದು

ಮೌಲ್ಯ

ಮರವದು  ಕಾಯಿ ಬಿಟ್ಟರು
ಬಿಡದಿದ್ದರೂ ಅದು ಮುಪ್ಪಾಗುವದು
ಬಳ್ಳಿಯೊಂದು ಹೂ ಬಿಟ್ಟರು
ಬಿಡದಿದ್ದರು ಒಣಗುವದದು
ದೇಹವಿದು ದುಡಿದರು
ದುಡಿಯದಿದ್ದರು ಹಣ್ಣಾಗುವದು

ಮರವದು ಕಾಯಿ ಬಿಟ್ಟರೆ
ಅದರ ರುಚಿ ನೆನಪುಳಿಯುವದು
ಬಳ್ಳಿಯದು ಹೂ ಬಿಟ್ಟರೆ
ಅದರ ಗಂಧ ನೆನಪುಳಿಯುವದು
ದೇಹವಿದು ದುಡಿದರೆ
ಅವನ ಸ್ಮಾರಕವುಳಿಯುವದು

ನೋವು

ಎದಿಯುದ್ಕ ಬೆಳೆದ ನಿಂತ
ಮಗ ದುಡಿತಿಲ್ಲಂದ್ರ ತಂದಿಗೆ
ಎದೆನೋವು ಶುರುವಾಗ್ತದ
ನೆರೆತ, ಬೆಳೆದ ನಿಂತ ಮಗಳು
ಮದುವಿಯಾಗಾಕ ಒಲ್ಲಂದ್ರ
ತಾಯಿಗೆ ತಲೆನೋವು ಶುರುವಾಗ್ತದ

ಹೊಲದ ತುಂಬಾ ಪಿಕ ಹಾಕಿ
ಫಸಲ ಬರತಿಲ್ಲಂದ್ರ ರೈತಗ
ಎದೆನೋವು ಬರ್ತದ
ಊರೊರ ಹೊಲದಾಗ ಖಾಸಗಿ
ಆರ್ಸಾ ಕೆಲಸಿಲ್ಲಂದ್ರ
ಈಕಿಗೆ ತಲೆನೋವು ಬರ್ತದ

ಹುಟ್ಟುಗುಣ

ಹಾವಿಗೆ ಹಾಲು ಹಾಕಿದ್ರು
ಅದು ಕಚ್ಚೊದ್ನ ಬಿಡೊದಿಲ್ಲ
ನಾಯಿಗೆ ಮ್ರಷ್ಟಾನ್ನ ಬಡಿಸಿದರು
ಅದು ಹೇಸ್ಗಿ ತಿನ್ನೊದನ್ನ ಬಿಡೊದಿಲ್ಲ

ಚಿಗುರು

ಉರಿದ ಕೊರಡನು ನೆಟ್ಟು
ನೀರುಣಿಸಿದೊಡೆ ಚಿಗುರೊಡೆಯುವುದೇ ?

ಬೆಂದ ಕಾಳುಗಳನು
ಉತ್ತಿ ಬಿತ್ತಿದೊಡೆ ಚಿಗುರೊಡೆಯುವುದೇ ?



ಚಿಕ್ಕದು

ಮದಸಲಗದ
ಸದ್ದಡಗಿಸುವುದೊಂದಿರುವೆ
ಕೇಸರಿಯ ಸೊಕ್ಕನ್ನು
ಮುರಿಯಿತೊಂದು ನೊಣ
ಮಹಾಬಂಡೆಯನೆ
ಸಿಳಿತೊಂದುಳಿ
ದಟ್ಟಡವಿಯನೆ
ಸುಟ್ಟುಹಾಕಿತೊಂದು ಕಿಡಿ
ದೊಡ್ಡ ನಾವೆಯೊಂದನೆ
ಮುಳುಗಿಸಿತೊಂದು ರಂದ್ರ
ಆಂಗ್ಲ ಸಾಮ್ರಾಜ್ಯವನೆ
ನಡಗಿಸಿತೊಂದು ದಂಗೆ
ಭಯಂಕರ ರೋಗವನೆ
ಹತ್ತಿಕ್ಕಿತೊಂದು ಲಸಿಕೆ
ಆರಡಿ ದೇಹವನೆ
ಮಲಗಿಸುವುದೊಂದು ಸೊಳ್ಳೆ

ಚಿಕ್ಕದು, ಸಣ್ಣದೆಂಬ
ತಿರಸ್ಕಾರವಿರದಿರಲಿ

Friday, June 3, 2016

ಉಪಯೋಗ

ಹಸು ಹಾಲ ಕರಿದಿದ್ರ
ಕಟ್ಕನ್ಗೆ ಮಾರ್ತಾರ
ಕೋಳಿ ಮೊಟ್ಟಿ ಹಾಕದಿದ್ರ
ಕುತ್ಗಿನ ಕೊಯ್ತಾರ
ಮರ ಹಣ್ಣು ಬಿಡದಿದ್ರ
ಬಡ್ಡಿನ ಕಡಿತಾರ
ಬಳ್ಳಿ ಹೂ ಕೊಡದಿದ್ರ
ಬೇರಿಂದ್ಲೆ ಕಿತ್ತೊಗಿತಾರ

ಕೆರಿಗೆ ನೀರು ಬಂದಿಲ್ಲಂತ
ಮೈದಾನ ಮಾಡ್ತಾರ
ಬಾವ್ಯಾಗ ನೀರಿಲ್ಲಂತ
ಮುಚ್ಚಿ ಗುಡಿನ ಕಟ್ತಾರ
ಹಳ್ಳಾಗ ನೀರಿಲ್ಲಂತ
ಕಸದ ರಾಶಿನ ಹಾಕ್ತಾರ
ಸಮುದ್ರ ಸಿಹಿಯಿಲ್ಲಂತ
ಅದ್ಕ ಬರೀ ವಿಷಾನ ಬಿಡ್ತಾರ 

ಜನರಿಗೆ ಉಪಯೋಗಕ್ಕೆ
ಬರದಿದ್ರೆ ಯಾವದನ್ನೂ
ಉಳಿಸೊದಿಲ್ಲ

Wednesday, June 1, 2016

ಮಗಳು..

ಹಸುವಿನ ಬಣ್ಣಕ್ಕಿಂತ ಹೆಚ್ಚು
ಹಸುವಿನ ಹಾಲಿಗಿಂತ ಹೆಚ್ಚು
ಯವ್ವಾ, ನನ್ನ ಮಗಳು
ತೊಟ್ಟಿಲ್ಕ ಹಾಕಿ ತೂಗಿದ್ರ
ತೊಟ್ಟಿಲ ತುಂಬಾ ಬೆಳಕು

ಚೆಲ್ವಿ

ಏಳ ಮೊಳ್ದ ನೀರ್ಗಿ
ಸೀರಿ ಉಟ್ಟಾಳ
ಮೂರ ಮೊಳ್ದ ಮಲ್ಗಿ
ಹೂವಾ ಮುಡದಾಳ

ಸೂರ್ಯನ ಬಣ್ಣಾನ
ಹಣಿಗೆ ಇಟ್ಕೊಂಡಾಳ
ಗುಲಾಬಿ ಬಣ್ಣಾನ
ತುಟಿಗೆ ಹಚ್ಕೊಂಡಾಳ

ಮೊಖದ ತುಂಬಾ
ನಾಚ್ಕಿ ತುಂಬ್ಕೊಂಡಾಳ
ನಡ್ಗಿ ತುಂಬ
ನಡತಿ ಉಳ್ಸಕೊಂಡಾಳ