Friday, August 31, 2018

ಚು ೩೭೯

ನೆನಪುಗಳ ಸುಳಿಯಲ್ಲಿ
ಬರುವೆಯೇಕೆ ನಿ...
ದಿನನಿತ್ಯ...
ಸುಡುವ ವಿರಹದುರಿಗೆ
ಕೂಡದೆ...ತೋರಿಸುವುದೆಂದಕೆ
ಅಂತ್ಯ

Thursday, August 30, 2018

ಹನಿ ಶಾಯಿ

ತುಫಾಕಿಯ ಗುಂಡುಗಳಿಗಷ್ಟೆ ಇದ್ದ ರಕ್ತದ ರುಚಿ...
ಲೇಖನಿಯ ನಿಬ್ಬಿಗೂ ಸವಿಯುವ ಆಸೆ ಬಂತೇಕೊ...?
ನಂದನವನವಾಗಿಸಬೇಕಿದ್ದ ವಿಚಾರ ಧಾರೆಗಳು
ಧರೆಯನೆ ಹೊತ್ತುರಿಸಲು ಹಪಹಪಿಸುತಿಹುವೇಕೊ....?

ಗಿರಿ...ಕಂದರದೊಳಡಗಿರುವ ನರಿಗಳ ಬುದ್ದಿ
ನಾಗರಿಕ ನಾಯಕರ ಮತಿಗೂ ಬಳೆದುಕೊಂಡಿತ್ಹೇಗೊ..?
ಧರ್ಮದ ಧಮನಿ...ಧಮನಿಗಳು ಸಿಡಿದು ಪಡೆದ ಉಸಿರಿಗೆ
ಮತ್ತೆ...ಮತ್ತೆ...ಮತಿಯ ದಿಗ್ಭಂದನದಿಂದಲೆ ಉಸಿರುಗಟ್ಟಿಸುತಿರುವಿರೇಕೊ...?

ಅರಳುವ ಹೂಗಳಿಗೆ ಹಾಕಿಕೊಡುವ ದಾರಿ ಇದೇನಯ್ಯ ?
ಮನೆಯ ಸುತ್ತ ಬೇಲಿಯ ಕಟ್ಟಿಕೊಂಡೆ ಬದುಕುವುದು ಸಾಧ್ಯವೇನಯ್ಯ..?
ಅಂಧಕಾರಕೆ ಬೆಳಕಿನ ಹಣತೆಯ ಹಚ್ಚದೆ ಕೆಂಡದಹಾಸು ಹಾಸುವಿರೇನಯ್ಯ...?
ಏರಿಳಿತಗಳ ಸಮವಾಗಿಸುವ ಭರದಲ್ಲಿ ತಾಯಿ ಮಮತೆಯನೆ
ಮರೆಯುವರೇನಯ್ಯ ?

ಸಾಕು...ಸಾಕುಬಿಡಿ ಎದೆಗೆ ಗುರಿಯಿಕ್ಕುವುದನು, ಅರಿವಿಲ್ಲವೇನು..? ಬೆನ್ನು ತೋರಿಸುವವರ ಹಡೆಯುವ ಮಣ್ಣಿದಲ್ಲವೆಂದು
ಹೊಡೆಯುವುದೆ ಆದರೆ, ಹೊಡೆದುರುಳಿಸಿಬಿಡಿ ಮೌಢ್ಯಗಳನು
ಕಟ್ಟುವ ಕಿಚ್ಚೊಂದು ನಿಮ್ಮೆದೆಯಲ್ಲಿ ಉರಿಯುತ್ತಿದ್ದರೆ ಮಾತ್ರ !!

ಚಿಂತನೆಗಳಿರಲಿ...ಚಿತೆಗೇರಿಸುವ ಚಮತ್ಕಾರವ ತೋರದಿರಿ
ಮಥಿಸುತಿರಲಷ್ಟೆ ಮೌನ....ಮತ್ಸರವನ್ನೆ ಮೆಳೈಸಿಕೊಳ್ಳದಿರಲಿ
ಚಿಮ್ಮುತಿರಲಿ ಪದಗಳು...ವಿಷ ಬೀಜಗಳನೆ ಬಿತ್ತದಂತಿರಲಿ
ಚೆಲ್ಲಿದ ಹನಿ ಹನಿ ಶಾಯಿಯು....ರಕ್ತಚರಿತ್ರೆಯನ್ನ ಸೃಷ್ಟಿಸದಂತಿರಲಿ

ಮನದೊಳಗಿನ ಅಶಾಂತಿಯ ಪಥವು
ನಡೆಸಿತ್ತು ಪಾಪ ಕಾರ್ಯಗಳೆಡೆಗೆ...
ಮಾಡಿದ ಪಾಪವು ಸುತ್ತಿಕೊಳ್ಳದೀರುವುದೇನು..?
ಸುತ್ತಿಸದೆ ಬಿಡುವುದೇನು..? ಏಳೆಳು ಜನ್ಮಗಳನು

ಬಲಿಯಕೊಟ್ಟು ಶಾಂತಿಯ ಪಡೆದವರುಂಟೇನು..?
ಮಾಂಸಖಂಡಗಳನೆ ಕತ್ತರಿಸಿ ಕಟ್ಟಿದ
ಕಲ್ಲುಗೋಡೆಗಳ ಮಧ್ಯೆ..... ಅಮರವಾಗಿ
ನಿಂತವರುಂಟೇನು...?
ಪರರ ಹಾದಿಗೆ ಮುಳ್ಳಿನ ಹಾಸಿಗೆಯನ್ನೆ ಹಾಸಿ
ಕಣ್ಮುಚ್ಚಿಕೊಂಡು ಗುರಿಯ ಸೇರಬಹುದೇನು..?

ಭೂಮಿ ನಿಂತಿದೆ...ನಿಂತವರಿಗೆ, ಅದು ತಿರುಗತ್ತಲೆ ಇದೆ, ಹೊಸತನವ ಹುಡುಕುವವರಿಗೆ
ಕಟ್ಟಬೇಕಾಗಿರುವುದು, ಅಶಾಂತಿಯ ಕಿಡಿಗಳನೆ ಚಿಮ್ಮುವ ಕಲ್ಲು ಕಟ್ಟಡಗಳನ್ನಲ್ಲ..
ನಮ್ಮೊಳಗೆ ಕಟ್ಟಿಕೊಳ್ಳಬೇಕಿದೆ ನಿರ್ಮಲ
ಶಾಂತಿಯ ಕೋಟೆಯನ್ನ...

ಮನದ ಕಾಮನೆಗಳ ತಣಿಸಿಕೊ....
ಆಗುಹೋಗುವುದು ನಿನ್ನ ಕೈಯಲ್ಲಿಲ್ಲ
ಶಾಂತಿ ಮಂತ್ರವ ಜಪಿಸುತಿರು....(ಹೇಡಿಯಂತಲ್ಲ)
ಜಗವೆಲ್ಲ ನಿನ್ನ ಮುಂದೆ ಶರಣಾಗದೆ ಇರುವುದಿಲ್ಲ...

Wednesday, August 29, 2018

ನಮ್ಮವ್ವ

ದ್ಯಾವ್ರ ಹೆಸ್ರ ಹೇಳಿ
ಭಿಕ್ಷೆ ಬೇಡಿದ
ಹೊಟ್ಟಿಗೆ...
ಹಳ್ಸಿದ ಅನ್ನಾನ
ನೀಡಿದ್ರಲ್ಲೊ
ನಮ್ಮವ್ವ...
ಭಕ್ತಿ ಹೆಸರ್ನ್ಯಾಗ
ಮಾಡಿದ ಅಯ್ಯಗೊಳ
ಅಡ್ಗಿ...ತಿಂದುಂಡು
ತಿಪ್ಪಿಗೆ ಚೆಲ್ಯಾರು
ನೋಡವ್ವ..

ಬಾಯ್ಬಿಟ್ಟ ಬೇಡಿದ್ದ
ಜೀವಕ್ಕ...
ಹರಕ್ ಅಂಗಿ
ಕೊಟ್ಟಾರು..
ಕೇಳವ್ವ..
ಏನು ಕೇಳ್ದ
ಮೂಕ ದೇವ್ರಿಗೆ
ಜರತಾರಿ ಬಟ್ಟಿ
ಹೊದಸ್ಯಾರು
ನೋಡವ್ವ...

ದೇವ್ರ...ವಲ್ಲೆ...ವಲ್ಲೆ...
ಅಂದ್ರು... ಬೀಗ
ಹಾಕಿದ ಹುಂಡಿಗೆ
ಲಕ್ಷ...ಲಕ್ಷ... ರೊಕ್ಕ
ಸುರ್ದಾರು..
ನೋಡವ್ವ....
ಕಾಲ್ಗೆ ಬಿದ್ದ.. ಸಾಯ್ತಿನಂತಂದ
ಬಾಯ್ಬಿಟ್ಟ ಕೇಳಿದ್ರೂ..
ಪುಡಿಗಾಸು ಹಾಕಾಕ
ಹಿಂದ್ಮುಂದ ನೋಡ್ತಾರ
ಕೇಳವ್ವ...

ಎಲ್ಲ ಕೊಟ್ಟ ದೇವ್ರಿಗೇನಂತ
ಕೊಡೊದೈತಿ...
ಕಸ..ಇಲ್ದಂತ...ಭಕ್ತಿಯೊಂದ್ಬಿಟ್ಟ
ಅಲ್ಲೇನವ್ವ...
ಏನು ಇಲ್ದ ಮಂದಿಗೆ,
ರೊಕ್ಕ ಕೊಡ್ದಿದ್ರ ಅಷ್ಟ
ಹೋತ..
ಹಿಡಿ ಪ್ರೀತಿನರ..
ಹಂಚಿದ್ರ.. ಇವ್ರ ಮನಿ
ಗಂಟೆನರ ಸೊರಗಿ
ಹೊಕ್ಕೈತೇನೊ
ನಮ್ಮವ್ವ

ಶಾಯರಿ..೨೯೦

ಇತಿಹಾಸವು
ಇರುವುದಾದರು
ಏಕೆ...?
ಓದುವುದಕ್ಕೇ
ಅಲ್ಲವೆ..
ಸಾಕಿ...

ನಿನ್ನ ಮಧುವಿರುವುದಾದರು
ಏತಕ್ಕೆ...?
ಇತಿಹಾಸವನ್ನು
ಸೃಷ್ಟಿಸಲಿಕ್ಕೆ
ತಾನೆ...!!!

ಚು ೩೭೭

ಉಪ್ಪು ನೀರಿನ
ಮುತ್ತುಗಳ ಹೊತ್ತು
ತರಲೇಕೆ.... ಚೆಲ್ವಿ..
ಜೇನು ತುಂಬಿದ
ಮುತ್ತಿನ ಮೂಟೆಯೆ
ಇವುದಲ್ಲ.... ನಿನ್ನ
ತುಟಿಯಂಚಲಿ

ಶಾಯರಿ ೨೯೨

ಅವಳು ಬರುವ
ದಾರಿಗೆ ಹಣತೆಯೊಂದನು
ಹಚ್ಚಿಟ್ಟುಬಿಡು
ಸಾಕಿ...
ಮುನಿದ
ಚಂದಿರನಿಂದು
ಕತ್ತಲೆಯನ್ನೆ...
ಹಾಸಿಹನು ಹಾದಿಗೆ

ಶಾಯರಿ ೨೯೧

ಬಾವಿಯೊಳಗೆ ಬಿದ್ದ
ಚಂದ್ರನ ಬಿಂಬಕೆ
ಒಡೆದು ಹೋಗುವ
ಅಳುಕಿಲ್ಲ...
ಸಾಕಿ....
ನಿನ್ನ ಮದ್ಯದ
ಬಟ್ಟಲಿನಲ್ಲಿಯೆ
ಮುಳುಗೆದ್ದಿರುವ
ನನಗೆ ಸಾಯುವೆನೆಂಬ
ಭಯವೇನೂ...
ಇಲ್ಲ

Tuesday, August 28, 2018

ಶಾಯರಿ ೨೯೩

ಆಗಸದ ತುಂಬೆಲ್ಲ...
ಬೆಳ್ಳಿ ಪರದೆಯನ್ನೆ ಹಾಸಿ
ನಸುನಗುತ್ತಿದ್ದ
ಚಂದಿರ
ಸಾಕಿ....
ಬಡವನೆದೆಯಲ್ಲಿ
ಉರಿಯುತ್ತಿದ್ದ...
ವಿರಹದುರಿಗೆ, ತಣ್ಣನೆ
ತಂಗಾಳಿಯನ್ನು...
ಕಳಿಸಿಕೊಟ್ಟಿದ್ದ

Monday, August 27, 2018

ಶಾಯರಿ ೨೬೫

ನೀ...ಮುಡಿದ
ಮಲ್ಲಿಗೆಯ ವಾಸನೆಯನ್ನು
ನನಗೆ ತಾಕಿಸದಿರು
ಸಾಕಿ...
ಮರೆಯಲೆಂದೆ
ಬಂದವನನ್ನು
ಮತ್ತೆ...ಮತ್ತೇಕೆ ಆ
ಮಧುವಿನಿಂದ
ಅವಳನ್ನು ನೆನಪಿಸುವೆ...

ಶಾಯರಿ ೨೬೪

ನನ್ನ ಎದೆಯಲ್ಲಿ ಅವಳಿಗೆ
ಹೇಳಲೆಂದೆ ಉಳಿದ ಅದೇಷ್ಟೊ
ಮಾತುಗಳಿವೆ ಸಾಕಿ...
ಅವಳ ಮದುವೆ
ನಡೆದೆ ಹೋಯ್ತು..!!!
ಮತ್ತೀಗ ನಿನ್ನ ಮಧುವನ್ನು
ಕುಡಿದ ಮೇಲೆ, ಮತ್ತೆ ಆ ಮಾತುಗಳಿಗೆ
ಜೀವ ಬಂದಿವೆ..

Tuesday, August 21, 2018

ನಮ್ಮವ್ವ...

ಕಷ್ಟಾಪಟ್ಟ..ದುಡ್ದಿದ್ದೆಲ್ಲಾ..
ಮಳೆ ನೀರಿಗೆ
ಕೊಚ್ಗೊಂಡ
ಹೋತಲ್ಲೆ...
ನೋಡವ್ವ....
ಕ್ವಾಟಿನೂ ಇಲ್ಲ..
ಗುಡ್ಸಲಾನು ಇಲ್ಲ,
ಬದ್ಕು ಹಾದಿಗೆ
ಬಂದ್ಬಿತ್ತಲ್ಲೊ...
ನಮ್ಮವ್ವ..

ಮಡಿ...ಮಡಿಯೆಂದು
ಮಹಡಿ ಮನಿಯೇರಿ
ಕುಂತೋರ ಮನಿಗೆ...
ಊರಾನ ಕೇರಿ ತೊಳ್ದ
ನೀರು.. ಇವ್ರ ಹಟ್ಟಿಗೆ
ಹೊಕ್ಕೈತಿ..
ನೋಡವ್ವ..
ದೇವ್ರ ಕೋಣ್ಯಾನ ಬೆಳ್ಳಿ
ಮೂರ್ತಿ ನೆತ್ತಿನ...
ತೊಯ್ಸತೈಲ್ಲೊ
ನಮ್ಮವ್ವ...

ಶೀಲಾ....ಶೀಲಾ.. ಅಂದ್ಕೊಂಡ,
ಊರಾನ ಮನಿ ಹಾಳ ಮಾಡೋರ
ಬಾಯಿಗೆ ಹಿಡಿ ತುತ್ತಿಲ್ಲ...
ಕೇಳವ್ವ...
ಸೀರಿ ಸೇರ್ಗ ಹಾಸಿ,
ದುಡ್ಡ ಮಾಡ್ದಾಕಿ ಕೊಟ್ಟ
ರೊಕ್ಕದಿಂದ.... ತುತ್ತ ತಿನ್ನೊ
ಗತಿ ಬಂತಲ್ಲೊ
ನಮ್ಮವ್ವ

ಹೊಟ್ಟಿ ಹಸ್ವಿಗೆ
ಮಂದಿ ಮುಂದ
ಕೈ ಚಾಚೊ...ಜೀವಾನ
ಆ ಶಿವ ಇನ್ನು
ಯಾಕಾರ
ಇಟ್ಟಾನೊ...
ನಮ್ಮವ್ವ...
ಸುರ್ದ್ ಮಳಿ...ಕುಸ್ದ್ ಮಣ್ಣು
ಉಸರನ್ನರಾ..
ಕಸ್ಕೊಂಡ ಹೋಗ್ಲಿಲ್ವಲ್ಲೆ...
ನಮ್ಮವ್ವ...

Friday, August 17, 2018

ಸಾಕಿ ೧೦

ಅರಮನೆಯ ಕೋಣೆಗಳೊಳಗೆ ಹಚ್ಚಿಟ್ಟ....
ದೀಪಗಳನ್ನೆಲ್ಲವ ಆರಿಸದಿರು ಸಾಕಿ....
ಕಣ್ಣಲ್ಲಿ ಅವಳು ಕೆಡವಿ ಹೋದ ಧೂಳಿನಿಂದ
ಈಗೀಗ ಕಣ್ಣುಗಳು ಮಂಜಾಗಿಬಿಟ್ಟಿವೆ...,
ನನಗೂ... ಕತ್ತಲಲ್ಲೆ ನಡೆದು...ನಡೆದು ಸಾಕಾಗಿಬಿಟ್ಟಿದೆ.., ಒಮ್ಮೆ ಎಡವಿದ ನೋವಿಗೆ ಇನ್ನೂ.. ಮದ್ದು ಸಿಕ್ಕಿಲ್ಲ..., ಮತ್ತೆ...ಮತ್ತೆ ಎಡವುತ್ತ ಹೋದರೆ....ಹಿಡಿದೆಬ್ಬಿಸುವರೊಬ್ಬರು
ಯಾರಿಲ್ಲವಿಲ್ಲಿ....

ಈ ರಾತ್ರಿಗೊಂದಿಷ್ಟು...ಮದ್ಯವನ್ನು ಕಡಿಮೆಯೆ ಕುಡಿಸು
ಸಾಕಿ... ಬೇಸರಿಸುವುದಿಲ್ಲ..
ಸುರಿದುಬಿಡು ಬೇಕಿದ್ದರೆ....ನನ್ನ ಪಾಲಿನ ಮದ್ಯವನ್ನು
ಹಣತೆಗೆ.....
ನನ್ನ ಬರುವಿಕೆಯ ಮುಂಚೆ...,ನನ್ನಳಿಯುವೆಕೆಯ
ನಂತರವು.... ಬಂದು ಹೋಗುವವರೆದೆಯ ನೋವಿಗೆ...
ಬೆಳಕನ್ನು ಚೆಲ್ಲಬೇಕಲ್ಲ...!!!!
ಇಂದೊಂದು ಇರುಳಾದರು... ತನ್ನನೆ ತಾ... ಉರಿದುಕೊಳ್ಳುವ
ನೋವನ್ನಾದರು..... ಮರೆಯಲಿ...

ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಡು ಸಾಕಿ...
ಪರಿಮಳವನ್ನೆ ಹೊತ್ತು ತಂದ ಗಾಳಿಯು ಕೂಡಾ,
ದೀಪವನ್ನು ನಂದಿಸಿ ಹೋದಾತು...!!!
ಲೆಕ್ಕವಿರದಷ್ಟು ಭಗ್ನ ಎದೆಗಳ ಉಸಿರನು ಉರಿಸಿದ
ಬೆಳಕದು...ನನ್ನೆದೆಯ ನಿಟ್ಟುಸಿರೊಂದು ಅದರ
ಕಾವಲ್ಲಿ ಉರಿದು ಹೋಗಲಿ....
ಉಳಿಯುವುದಾದರು...ಏನು...? ಈ ಜಗದಲಿ
ನಿಸ್ತೇಜದ ದೇಹವೊಂದನು ಹೊರತುಪಡಿಸಿ...

ಇಂದು ನಿನ್ನ ಕಣ್ಣಲಿ ಕಣ್ಣಿಟ್ಟು...ಮಾತನಾಡುವಷ್ಟು
ಶಕ್ತಿಯು ನನ್ನಲಿ ಉಳಿದಿಲ್ಲ ಸಾಕಿ...
ಎಲ್ಲ ನಿನ್ನ ಮದಿರೆಯ ಅಮಲೆ ತುಂಬಿಕೊಂಡುಬಿಟ್ಟಿದೆ... ತಡಮಾಡದೆ, ಎದೆಯ ಮೇಲೆ ನಿನ್ನ ಕಿವಿಯಿಟ್ಟು ಬೇಕಾದರು
ಕೇಳು... ಪ್ರತಿ ಬಡಿತದಲ್ಲು ಅವಳ ಹೆಸರನ್ನೆ ಜಪಿಸುತಿಹುದು..
ನೀನೆ ಸಾಕ್ಷಿಯಾಗಾಬೇಕಲ್ಲವೆ ಆಗ, ಅವಳ್ಹೆಸರಲೆ ಈ
ಉಸಿರೊಂದು ಉರಿದು ಹೋದದ್ದಕ್ಕೆ...

ಶಾಯರಿ ೨೬೩

ಎಷ್ಟು ದಿನವಂತ
ಉಸಿರ ...
ಬಿಗಿ
ಹಿಡಿದಿರಲಿ
ಸಾಕಿ....

ಅವಳ ಹೆಸರಿನಲ್ಲಿ
ಗುಟುಕು
ಮದ್ಯವನ್ನು ಸುರಿದುಬಿಡು
ಬಾಯಿಗೆ....
ನಡೆದುಬಿಡುವೆ...

ಶಾಯರಿ ೨೬೨

ಈ ಜನ್ಮದಲ್ಲಿ
ನನ್ನ ತುಟಿಗಳದ್ದು
ಎಂತಹ ಸೌಭಾಗ್ಯ
ಸಾಕಿ....

ಅವಳಿದ್ದಾಗ....
ಕೆಂದುಟಿಯ ಸವಿಯನು
ಸವಿಯುತ್ತಿತ್ತು...
ಅವಳಿಲ್ಲದ ಈ
ಹೊತ್ತಿನಲ್ಲಿ...ನಿನ್ನ
ಮಧು‌ ಬಟ್ಟಲಿನ
ರಸವನ್ನು ಸವಿಯುತ್ತಿದೆ...

Sunday, August 12, 2018

ಶಾಯರಿ ೨೬೧

ಎಷ್ಟು ದಶಕದ
ಸಾಹಿತ್ಯವಾದರೇನು...?
ಸಾಕಿ...

ಸಿರಿವಂತರ
ಕೈಯಲ್ಲಿ ಸಿಕ್ಕು...
ಕಸವಾಗಿಯೆ...
ಹೋಯಿತಲ್ಲ

ಶಾಯರಿ ೨೬೦

ಅವಳು ಬಿಟ್ಟು
ಹೋದ ಮೇಲೆ ಬದುಕಿನಲ್ಲಿ
ಅಂತಹ ದೊಡ್ಡದೇನು
ಬದಲಾವಣೆಯಾಗಿಲ್ಲ
ಸಾಕಿ...

ಅವಳಿದ್ದಾಗ
ಹೂವೊಂದನ್ನು ಕಿತ್ತಿ
ಅದರೊಳಗಿನ ಗಂಧವನು
ಆಘ್ರಾಣಿಸುತ್ತಿದ್ದೆ...
ಈಗ...ಬಾಟಲಿಯ
ಬಿರಡೆಯನ್ನು ಬಿಚ್ಚಿ
ಮದ್ಯದ ವಾಸನೆಯನ್ನು
ಆಘ್ರಾಣಿಸುತ್ತಿರುವೆ.

ಶಾಯರಿ ೨೫೯

ಬಿರಡೆ ಬಿಚ್ಚದ
ಬಾಟಲಿಯ ಮದ್ಯವನ್ನೆ
ಸುರಿದುಬಿಡು
ಸಾಕಿ...
ಬಟ್ಟಲಿಗಿಂದು

ಹಿಡಿತವಿಲ್ಲದೆ
ತೂಗಾಡುತಿರುವ
ಬುರುಡೆಗಿಂದು
ಚೂರಾದರು ನಿದ್ದೆ
ಹತ್ತಲಿ....

ಶಾಯರಿ ೨೫೮

ಹಾವಿನ
ನೆತ್ತಿಯ ಮೇಲಾದರು
ಮುತ್ತಿಕ್ಕಿ...
ಬದುಕಬಹುದು
ಸಾಕಿ...

ನಿನ್ನ ಮದ್ಯದ
ಬಟ್ಟಲಿಗೆ
ಮುತ್ತಿಕ್ಕದೆ
ಬದುಕುಳಿದ
ವಿರಹಿಗಳಾರುಂಟು

ಜಗದಲಿ

ಸ್ವಾತಂತ್ರ್ಯವೇನೊ ಸಿಕ್ಕಿದ್ದು ಕಡು ಕಗ್ಗತ್ತಲಲ್ಲೆ....
ಹಾಗೆಂದು ಕತ್ತಲಲ್ಲೆ ಮುಳುಗಿರುವಿರೇಕಿನ್ನು
ಬಂಧುಗಳೆ..
ತೊಡೆದು ಬನ್ನಿ....ಧರ್ಮದ‌ ಸಂಕೋಲೆಗಳನ್ನು
ಸ್ವಾತಂತ್ರ್ಯವೆಂಬ ಉಸಿರಾಟವು ದಕ್ಕಿದ್ದು...
ಬೇವರು ಹನಿಗಳ ಮುತ್ತಿನಿಂದಲ್ಲ...
ಮೇಲು ಕೀಳು ನೀಚ ಉತ್ತಮ ಅಧಮ
ಬಾಲಕ ಯುವಕ ಸಂಸಾರಿಕರೆಂಬರೆಲ್ಲರ ನೆತ್ತರು...
ಕಾಲುವೆಯಾಗಿಯೆ ಹರಿದು...ಪಡೆದುಕೊಂಡ
ಉಸಿರಿದು...

ನಮಗೆ ಗೊತ್ತಿಲ್ಲ... ಸಂಪೂರ್ಣವಾಗಿ..
ಜೈಲಿನ ಸರಳುಗಳ ಹಿಂದೆ ಸೊರಗಿಹೋದ ಅದೇಷ್ಟೊ
ಯುವಕರ ಯೌವ್ವನ, ಹೆತ್ತೊಡಲಿಗೆ ಕೊಳ್ಳಿಯಿಡದೆ
ನರಳಾಡಿದ ಮಕ್ಕಳ ನೋವು.. ವಿವಾಹಿತೆಯರ ಹಣೆಯ ಹುಡಿಯು  ಬ್ರಿಟಿಷರ್ ಗಲ್ಲಿನ ಬಿರುಗಾಳಿಗೆ ಸಿಕ್ಕು ಅಳಿಸಿ ಹೋದದ್ದು..., ಲೆಕ್ಕವಿಟ್ಟಿಲ್ಲ ಬಿದ್ದ ಬಾಸುಂಡೆಗಳ
ಏಟು...ಎದೆಗೆ ಹೊಕ್ಕ ನೆತ್ತರನೆ ಕುಡಿದ ಗುಂಡುಗಳು...

ಊರೆಲ್ಲ ಹಬ್ಬವಾಗಿಬಿಡುವುದಂದು...ಯಾರ
ಸಮಾಜದೊಬ್ಬರ ಜಯಂತಿಯಿದ್ದರೆ...ಬೀದಿ..
ಬೀದಿಗಳು ತಳಿರು ತೋರಣಗಳಿಂದಲೆ ತುಂಬಿ
ಹೋಗುವುದು... ಕುಣಿದು ಕುಪ್ಪಳಿಸಲಿಕ್ಕೆಂದೆ
ಲಕ್ಷ...ಲಕ್ಷ ಹಣವನ್ನು ಖರ್ಚು ಮಾಡುವರು... !!!
ಏಕೆ ಬಂಧುಗಳೆ ಈ ದಿನ ನಮಗಿದು ಹಬ್ಬವಲ್ಲವೆ..!!!
ಭಾರತಾಂಬೆಯ ಮೆರವಣಿಗೆಯು ಬೇಡವೆ..
ಅವಳ ತ್ಯಾಗ ಬಲಿದಾನಗಳ ಅರಿವು ಮುಂದಿನ
ಪೀಳಿಗೆಗೆ ಬೇಡವೆ....
ಕಲ್ಲುಗೋಡೆಗಳ ಮೇಲಾಗದಿದ್ದರು ಹೋಗಲಿ...
ನಿಮ್ಮೆದೆಯ ಮೇಲಾದರೊಂದು ತ್ರಿವರ್ಣ
ಧ್ವಜವನ್ನು ಹಚ್ವಿಕೊಳ್ಳಿರಿ....ಈ ಒಂದು
ದಿನವಾದರು ನಾವೆಲ್ಲ ಒಂದೆ ಎಂಬ ಭಾವ
ಮೂಡುವಂತೆ..ಮನದ ವೈಶೈಮ್ಯಗಳ ಮರೆತು
ಬೆರೆಯಬಹುದಲ್ಲವೆ...

ಜಗದಾವ ಮೂಲೆಯಲ್ಲಿಯು ದೊರಕದು...
ನಿಮಗಿಷ್ಟು ಧರ್ಮಗಳ ವೈವಿಧ್ಯ...
ಸ್ವಾರ್ಥದ ಬಲಿಗೆ ಬಿದ್ದು ಕೇವಲ ಒಳ‌ಧರ್ಮಗಳನ್ನಷ್ಟೆ
ಬೆಳಸಿಕೊಳ್ಳದಿರಿ... ಇದನ್ನರಿತೆ ಅಲ್ಲವೆ ಆಂಗ್ಲರು
ನಮ್ಮನು ಬಳಸಿ...ಬಳಸಿ ಆಳಿಹೋದದ್ದು...ಕೊಳ್ಳೆ
ಹೊಡೆದು..ಹೊಡೆದು ಹೊತ್ತು ಓಡಿದ್ದು..
ಎಲ್ಲ ಧರ್ಮಗಳ ಕರ್ಮಭೂಮಿಯಿದು...
ಧರ್ಮೊ ರಕ್ಷತಿ ರಕ್ಷಿತಃ ಎಂಬ ನಾಣ್ಣುಡಿಯಂತೆ
ತಾಯೆ ರಕ್ಷಿತೆ ರಕ್ಷಿತಃ ಎಂಬ ಉಕ್ತಿಯು ನಮ್ಮ
ನರನಾಡಿಗಳಲ್ಲಿ ತುಂಬಿ ಹರಿಯಲಿ.. ವಂದೆಮಾತರಂ
ಎಂಬ ಮಂತ್ರ ಘೋಷವನ್ನು ಪ್ರಪಂಚದಾದ್ಯಂತ ಮೊಳ..
ಮೊಳಗಿಸೋಣ ಮೊಳ..ಮೊಳಗಿಸೋಣ

Friday, August 3, 2018

ಸಾಕಿ ಸೃಷ್ಟಿಸುವುದಾದರೂ ಹೇಗೆ ಇತಿಹಾಸವನ್ನು

ನನ್ನ ಹೆಣವ ಹೊತ್ತುಕೊಂಡು ಸಾಗುವ
ಹಾದಿಯನ್ನು.... ತಳಿರು ತೋರಣಗಳಿಂದ
ಸಿಂಗರಿಸಿಬಿಡು ಸಾಕಿ....
ಜಾತಿ...ಜಾತಿಯೆಂದು ಬೀದಿಯಲ್ಲಿ ಕಚ್ಚಾಡುವವರಿಗೆ,
ಪ್ರೀತಿಯ ಜಾತಿಯಲ್ಲಿ ಹೊಡೆದಾಡದೆ....!!!! ಸತ್ತು
ಹೋದವನು ನಾನೊಬ್ಬನೆ ಎಂದು ಅವರಿಗೆಲ್ಲ ತಿಳಿಯಲಿ...

ಮಸಣದ ಹಾದಿಯುದ್ದಕ್ಕೂ... ಪರಿಮಳವನ್ನೆ
ಸೂಸುವ ಹೂಗಳನ್ನು ಚೆಲ್ಲಿಬಿಡು ಸಾಕಿ...
ಅಂತಿಮ ದರ್ಶನಕ್ಕೆ ಅವಳು ಬರುತ್ತಾಳಂತಂದಲ್ಲ...
ಮೂಡ ಮನಗಳ ಘರ್ಷಣೆಗೆ ಸಿಕ್ಕು...ಅದೇಷ್ಟೊ
ಅಮಾಯಕರ ಜೀವಗಳು.... ದಾರಿ ಮಧ್ಯದಲ್ಲೆ...
ಹರಿದಿಹವು...ಅವುಗಳ ಆತ್ಮಕ್ಕೆ ಶಾಂತಿಯನ್ನುವುದು
ನಿನ್ನ ಕೈ ಸ್ಪರ್ಶಸಿ ಚೆಲ್ಲಿದ ಮಲ್ಲಿಗೆಗಳಿಂದಾರು ಸಿಗಲಿ...

ದಾರಿಯುದ್ದಕ್ಕೂ....ನನ್ನ ಇತಿಹಾಸವನ್ನೆ ಬೈದುಕೊಳ್ಳುತ್ತಾ
ನಿಂತ...ಜನರಿಗೆಲ್ಲ... ಒಂದೊಂದು ಬಟ್ಟಲು ಮದಿರೆಯನ್ನು
ಕುಡಿಸುತ್ತಾ ಹೋಗು ಸಾಕಿ....
ಅವಳ ನೆನಪುಗಳನ್ನು... ಮದಿರೆಯ ಕುಡಿದು...ಕುಡಿದು
ಮರೆಯಲಾರದೆ ಸತ್ತುಹೋದೆ...!!! ಇವರಾದರೂ...
ಕುಡಿದ ಅರೆಘಳಿಗೆ ವೈಷ್ಯಮ್ಮವ ಮರೆತು ನಗಾಡುತಿರಲಿ...

ಹುಗಿದ ಗೋರಿಯ ಮೇಲೊಂದು ಪುಟ್ಟದಾದ
ಕಟ್ಟೆಯೊಂದನ್ನು ಕಟ್ಟಿಸಿ..ಚಿಕ್ಕ ಮಾಡದಲ್ಲೊಂದು
ಹಣತೆಯನ್ನು ಹಚ್ಚಿಟ್ಟುಬಿಡು ಸಾಕಿ....
ಕಲ್ಲು ಗೋಡೆಗಳ ಮಧ್ಯದಲ್ಲಿ ದೇವರನ್ನೆ ಕಟ್ಟಿಹಾಕಿ,
ಶಾಂತಿಯ ಹೆಸರಲ್ಲಿ ನೆತ್ತರನೆ ಹರಿಸುವ ಮತಾಂಧರೆಲ್ಲ
ಒಮ್ಮೆ ನನ್ನ ಗೋರಿಯತ್ತ ಗಮನ ಹರಿಸಲಿ... ಶಾಂತಿ
ಎಂಬುದು ಕತ್ತರಿಸುವುದರಲ್ಲಿಲ್ಲ...ಪ್ರತಿಫಲವನ್ನೂ ಬೇಡದ ಪ್ರೀತಿಯನ್ನು ಹಂಚುವದರಲ್ಲಿದೆಂಬುದು ಅವರಿಗೂ..
ಚೂರು ಅರ್ಥವಾಗಲಿ...

ಅವಳ ಮೊಗದಲ್ಲಿ ಸದಾ ನಗುವಿರಲೆಂದೆ...ಕಹಿಯಾದರೂ
ಗುಟುಕು...ಗುಟುಕು...ಮದ್ಯವನ್ನೆ ಕುಡಿಯುತ್ತಾ...
ನಾನು ಸತ್ತದಲ್ಲವೆ ಸಾಕಿ....
ಕಹಿಯ ನುಂಗಿಕೊಳ್ಳಲಾಗದೆ... ಪರರಿಗೆ ನಾವು
ಹೇಗಾದರೂ ಸಿಹಿಯನ್ನು ಹಂಚಬಹುದು...
ದುಃಖವನ್ನೆ ಅರಗಿಸಿಕೊಳ್ಳಲಾರದವರು...ಸುಖವನ್ನು
ಅನುಭವಿಸಲು ಎಷ್ಟು ಅರ್ಹರು....?
ಇತಿಹಾಸವನ್ನೇ.. ಅರಿಯದೆ ಹೋದವರು....
ಸೃಷ್ಟಿಸುವುದಾದರು ಹೇಗೆ..? ಇತಿಹಾಸವನ್ನು...

ಶಾಯರಿ ೨೫೧

ಸಾಯುವುದು
ಎಷ್ಟು ಸುಲಭ
ಸಾಕಿ...
ಗುಟುಕು
ವಿಷದಲ್ಲಿ
ಎಲ್ಲವು ಮುಗಿದು
ಹೋಗಿಬಿಡುತ್ತದೆ...

ಗುಟುಕು...ಗುಟುಕು
ಮದಿರೆಯನ್ನು
ಕುಡಿಯುತ್ತಾ....
ಅವಳ ಮೋಸವನ್ನು
ನೆನೆದು..ನೆನೆದು
ಬದುಕುವುದು....
ಅದೇಷ್ಟು ಕಷ್ಟವಲ್ಲವೆ...?

ಶಾಯರಿ ೨೫೩

ಸ್ವರ್ಗ ಲೋಕದ
ಸುರಪಾನಕ್ಕೆ
ಮಾಡಬೇಕಂತೆ
ಸಾಕಿ..
ಸಾಕಷ್ಟು
ಪುಣ್ಯ...

ನನಗೀಗಾಲೆ
ದಕ್ಕಿದೆಯಲ್ಲ
ಮಧುಶಾಲೆಯ
ಬಟ್ಟಲು...ಪುಣ್ಯ
ಮಾಡುವ ಚಿಂತೆ
ನನಗೇಕಿಗ...?

ಶಾಯರಿ ೨೪೯

ಅವಳ
ಮನೆಗೆ ಹೋಗುವ
ಬೀದಿಯ ತುಂಬಾ
ಮಲ್ಲಿಗೆಯ ಘಮಲಿನ
ವಾಸನೆಯೆ
ತುಂಬಿಕೊಂಡಿದೆ
ಸಾಕಿ...

ಹೂದೋಟವೆನಿಲ್ಲ..
ನಿರಾಕರಣೆಗೆ ಸಿಕ್ಕು...
ನೊಂದು ಬಿದ್ದ
ಮಲ್ಲಿಗೆ ಗುಚ್ಚಗಳ
ತಿಪ್ಪೆಯೊಂದಿಹುದಲ್ಲ

ಶಾಯರಿ ೨೪೮

ಆ ತುಟಿಯಂಚಿನ
ನಗೆಯಿಂದ...
ನನ್ನೆದೆಯನು
ಘಾಸಿಗೊಳಿಸುವ
ಜರೂರತ್ತಾದರೂ
ಏನಿತ್ತು
ಸಾಕಿ....
ಅವಳಿಗೆ

ಕಣ್ಣಂಚಿನ
ಕುಡಿ ನೋಟದ
ಬಾಣದಿಂದಲೆ
ಕೊಂದು
ಬಿಡಬಹುದಿತ್ತಲ್ಲ

ಸಾಕಿ..೧೦

ಗಂಧದ ಕೊರಡುಗಳೇನು ಬೇಕಿಲ್ಲ.....
ಬೇವಿನ ಕಟ್ಟಿಗೆಗಳಿಂದಾದರೂ ಸರಿ...
ಇಂದು ಸಂಜೆಗೆ, ನನ್ನನು ಸುಟ್ಟು ಹಾಕಿಬಿಡು ಸಾಕಿ...
ನಾಳೆಯವಳ ಮದುವೆ ಮೆರವಣಿಗೆ ಸಾಗುವುದು..!!!
ಹೇಗೆ ಸಹಿಸಿಕೊಳ್ಳಲಿ ನಾನು...? ಬ್ಯಾಂಡ್ ಬಾಜಾದ ಸದ್ದನು...
ಅದಕ್ಕೂ ಮೊದಲೆ, ನನ್ನ ತಮಟೆಯ ಸದ್ದು ಬೀದಿ...
ಬೀದಿಗಳಲ್ಲಿ ಪ್ರತಿಧ್ವನಿಸಿಬಿಡಲಿ...

ಉರಿದು.... ಸುಟ್ಟು ಹೋದ ನನ್ನ ಬೂದಿಯನ್ನು
ಹೊಳೆಯಲ್ಲಿ ವಿಸರ್ಜಿಸಬೇಡ ಸಾಕಿ...
ಒಡಕು ಮಡಕೆಯಲ್ಲಾದರು ಸರಿ, ಗಾಳಿಗೆ ಹಾರಿ
ಹೋಗದಂತೆ ಮುಚ್ಚಳವ ಮುಚ್ಚಿ...ಬಚ್ಚಿಟ್ಟುಬಿಡು...
ಗಂಗೆಯನ್ನು ಹೊತ್ತು ತರಲೆಂದು ಬರುವ ನೀರೆಯರು....
ಬೂದಿ ಬೇರೆತ ನೀರನ್ನೊಯ್ದು...ಸುರಿಗಿಯನ್ನಾಗಿ ಅವಳ
ಮೈ ಮೇಲೆ ಸುರಿದಾರು......ಮದುವೆಗೂ ಮುನ್ನವೆ...
ನಾನನುಭವಿಸಿದ ವಿರಹದ ಉರಿ...
ಅವಳನ್ನು ತಬ್ಬಿಕೊಂಡಾತು...

ಗೋರಿಗೆಂದೆ....ಹೂವಿನ ಚಾದರ ಕಟ್ಟುವ ಬುಟ್ಟಿಯಲ್ಲಿ...
ಒಂದೆ.... ಒಂದು ಮೊಗ್ಗಿನ ಎಸಳು ಉಳಿಯದಂತೆ,
ಕಟ್ಟಬೇಕೆಂದು....ಅಲ್ಲಾಭಕ್ಷಿಗೆ ಆಜ್ಞಾಪಿಸಿಬಿಡು ಸಾಕಿ...
ಮತ್ತೈದೆಯ ಮುಡಿಯನೇರುವ ದಂಡಿಯಲ್ಲಿ...ಸಾವಿನ
ಹೂವೊಂದು ಸೇರಿ..... ಅಪಶಕುನವಾದಾತು...!!!!
ಅವಳ ಮುತ್ತೈದೆತನಕ್ಕೆ ಕಂಟಕ ತರುವ ಪಾಪವು...
ನನ್ನನೆ ಸುತ್ತುಕೊಂಡು......ಹುಗಿದ ಮಣ್ಣಿನೊಳಗು ನನಗೆ
ನೆಮ್ಮದಿಯಿಲ್ಲದಂತಾದಾತು...

ಆತ್ಮಕ್ಕೆ ಶಾಂತಿ ಸಿಗಲೆಂದೇನು...ಮಸಣದಲ್ಲೊಂದು
ದೀಪವ ಹಚ್ಚದಿರು ಸಾಕಿ....
ನಿ ಹಚ್ಚಿಟ್ಟ ಹಣತೆಯ ಬೆಳಕಿನಲ್ಲಿ...ಮೊದಲ ರಾತ್ರಿಗೆ
ಅವಳಾರಿಸುವ ದೀಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ
ದೌರ್ಭಾಗ್ಯ ನನ್ನದಾಗದಿರಲಿ...ಹೂ ಮಂಚದಲಿ ಅವಳೊಂದಿಗೆ... ಮಲಗದೆ ಹೋದರು...ಈ ಜನ್ಮಕ್ಕೆ,
ಅವಳ್ಹೆಸರಲೆ ಮಣ್ಣಲೆ ಮಲಗುವ ಸೌಭಾಗ್ಯವಾದರು
ಹಾಗೆ ಇರಲಿ....