Friday, October 20, 2023
ಚುಟುಕು
Wednesday, October 18, 2023
ಗೆಳೆಯ
Thursday, October 12, 2023
ಚುಟುಕುಗಳು
ಚುಟುಕು
ಹೆಸರಿಡಿದ ಕವಿತೆಗಳು
Wednesday, October 4, 2023
ಮುನ್ನುಡಿ
ಲೇಖಕರ ನುಡಿ
'ಕಥೆ' ಈ ಒಂದು ಶಬ್ದ ಬಾಲ್ಯದಿಂದಲೂ ನನಗೆ ಬಹಳಷ್ಟು ಅಪ್ಯಾಯಮಾನವಾದಂತಹದ್ದು ಒಂದು ರೀತಿಯಲ್ಲಿ ಇಲ್ಲಿಯವರೆಗೂ ಜೀವಾಮೃತವನ್ನೆ ಉಣಿಸಿಕೊಂಡೆ ಬಂದಿದೆ ಎನ್ನಬಹುದು ಅಷ್ಟರಮಟ್ಟಿಗೆ ನನ್ನನ್ನು ಆವರಿಸಿಕೊಂಡಂತಹ ಭಾವ; ನಮ್ಮ ಮನೆಯಲ್ಲಿ ಅಷ್ಟೇ ಏನು, ನಮ್ಮ ವಂಶಸ್ಥರಲ್ಲಾಗಲಿ, ದೂರದೂರದ ಸಂಬಂದಗಳಲ್ಲಾಗಲಿ ಯಾರೆಂದರೆ ಯಾರೊಬ್ಬರಿಗೂ ಸಾಹಿತ್ಯದ ಗಂಧ-ಗಾಳಿ ಗೊತ್ತಿರಲಿಲ್ಲ!. ಕೆಲವು ಹಿರಿಕರು ಹೊಟ್ಟೆಪಾಡಿಗಾಗಿ ಹುಟ್ಟೂರನ್ನು ಬಿಟ್ಟು ಹೋದ ಹಾಗೆ ನಮ್ಮ ಹಿರಿಯರು ಹೊಟ್ಟೆ ಪಾಡಿಗಾಗಿಯೆ ಹಳ್ಳಿಯನ್ನು ಬಿಟ್ಟು ಊರೂರು ಅಲೆದು ಗಜೇಂದ್ರಗಡದಲ್ಲಿ ನೆಲೆಯೂರಲು ಆಯ್ಕೆ ಮಾಡಿಕೊಂಡ ಕೆಲಸವೆಂದರೆ ಚಹಾದಂಗಡಿ. ಅಪ್ಪ-ಅವ್ವ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಎಂಟರವರೆಗೂ ಬಿಡುವಿರದೆ ದುಡಿಯುತ್ತಿದ್ದರು ನಾವೊ ಉಂಡಿದ್ದು-ಆಡಿದ್ದು ಸರಿ. ಓದಿದ್ದು?- ಬರೆದಿದ್ದು? ಇಲ್ಲಿಯೆ ನೋಡಿ ದೊಡ್ಡ ಸಮಸ್ಯೆ. ಮನೆಯಲ್ಲಿ ಬೇರೆ ಯಾರು ವಿದ್ಯಾವಂತರಿರಲಿಲ್ಲ ಏನು ಬರೆದೆ? ಏನು ಓದಿದೆ?, ಮುಂದಿನ ಭವಿಷ್ಯವೇನು? ಇಂತಹುದನೆಲ್ಲ ವಿಚಾರಿಸಿ, ಸರಿದಾರಿಗೆ ಅಂದರೆ ನೌಕರಿ ಸೇರಲು/ತನ್ನ ಕಾಲಿನ ಮೇಲೆ ತಾನು ನಿಂತು ದುಡಿಯುವಂತಹ ಕೌಶಲ್ಯ ತರಬೇತಿಯ ಯಾವ ಯಾವ ಕೋರ್ಸ್‌ಗಳನ್ನು ಮಾಡಬೇಕು ಮತ್ತು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳುವರಾರು ಇರಲಿಲ್ಲ ಹೀಗಾಗಿ ಈ 'ಕಥೆ' ಎನ್ನುವ ಪದ ಆಗ ನನ್ನನ್ನು ಬಹಳಷ್ಟು ಆಳವಾಗಿ... ಅಂದರೆ ಹೇಗೆ ಹೇಳಬೇಕೆಂದರೆ ತಾಯಿ ಅಕ್ಕಮಹಾದೇವಿಯ ಎದೆಯಾಳದಲ್ಲಿ ಬೇರೂರಿದ ಚೆನ್ನಮಲ್ಲಿಕಾರ್ಜುನನಂತೆ ಈ ವಿಷಯವು ಬೇರೂರಿಬಿಟ್ಟಿತು. ಮುಖ್ಯವಾಗಿ ಆಗೆಲ್ಲ ನನ್ನನ್ನು ಚಹಾದಂಗಡಿಯ ಹುಡುಗನೆಂದೆ ಗುರುತಿಸುತ್ತಿದ್ದರು. ಒಂಥರಾ ಕಿಳರಿಮೆಯ ಭಾವ, ತಾತ್ಸರತೆಯ ನೋಟ, ಗುರುತಿಸಿಕೊಳ್ಳಲು ಹೋರಾಡುವಾಗಲೂ ತುಳಿತ, ಚಿತ್ರಕಲೆಗೆ ಕೈ ಹಾಕಿದೆ ಇದೇನು ಹೊಟ್ಟಿಗೆ ಅನ್ನ ಹಾಕುತ್ತದೇನಯ್ಯ ಎಂದರು, ಚೆಸ್ - ಟೆನಿಕ್ವಾಯಿಟ್ ಆಟಗಳಲ್ಲಿ ಗಜೇಂದ್ರಗಡದ ಪ್ರತಿನಿಧಿಯಾಗಿ ಧಾರವಾಡ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಅರ್ಹತೆ ಅಲ್ಲದೆ ಕೊನೆಕೊನೆಗೆ ಹೋಗುವುದು ಖಚಿತವೆಂದು ತಿಳಿಸಿ ಕೊನೆಯ ಕ್ಷಣದಲ್ಲಿ ಆ ಅವಕಾಶವನ್ನು ಕಸಿದುಕೊಂಡು ಮುಂದಿನ ಸಲ ನೋಡೋಣ ಬಿಡಯ್ಯ ಎಂಬ ಉದಾಸೀನ ಉತ್ತರ ಯಾವಾಗಲೂ ನನ್ನ ಪಾಲಿಗಿರುತ್ತಿತ್ತು. ಇಂತಹ ಹೇಳಿಕೊಳ್ಳಲಾರದಂತಹ ಅವಮಾನ, ಈ ಗುರುತಿಸಿಕೊಳ್ಳುವಿಕೆ ಎಂಬುದೊಂದು ನನ್ನೊಳಗೆ ಒಂಥರಾ ಯಾರಲ್ಲೂ ಹೇಳಿಕೊಳ್ಳಲಾರದಂತಹ ಕಸಿವಿಸಿ, ಸಂಕಟವಾಗುತ್ತಿತ್ತು. ಇದರಿಂದ ಹೊರಬರಲು ಪಟ್ಟ ಹಲವಾರು ಪ್ರಯತ್ನಗಳಲ್ಲಿ ಈ ಬರಹವು ಒಂದು. ಆದರೆ ಬೆಳೆಯುತ್ತ.. ಬೆಳೆಯುತ್ತ ಬಂದಂತೆಲ್ಲ ಬದುಕಿಗೆ ಕೀಳರಿಮೆ, ಅಹಸ್ಯವೇನಿಸುವಿಕೆ, ಗುರುತಿಸುವುದಿರುವಿಕೆ ಇವೆಲ್ಲದಕ್ಕೂ ಮೀಗಿಲಾಗಿ ಹಸಿವೊಂದಿತ್ತು... ಬಾಳಿನ ಹಸಿವು ಎಲ್ಲವನ್ನು ಕಸಿದುಕೊಂಡುಬಿಟ್ಟಿತ್ತು, ಅದರಲ್ಲೂ ನಮ್ಮ ಗಜೇಂದ್ರಗಡದಂತಹ ವಾಣಿಜ್ಯ ನಗರದಲ್ಲಿ ಕಲೆ-ಸಾಹಿತ್ಯ-ಸಾಂಸ್ಕೃತಿಕ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡುತ್ತಿರಲಿಲ್ಲ ಶಾಲೆಯ ಗೋಡೆಯ ಮೇಲೆ ನೀತಿ ಕಥೆಯ ಹೇಳುವ ತೈಲವರ್ಣ ಚಿತ್ರಗಳು, ಜಾಲಿಹಾಳ ಸರ್ ಕೈಯಲ್ಲಿ ಆಕಳದ ಗೆಜ್ಜೆಯನ್ನು ಕಟ್ಟಿ, ತಾಳಕ್ಕೆ ತಕ್ಕಂತೆ ಟೇಬಲ್ ಗೆ ಕುಟ್ಟುತ್ತಾ 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಹಾಡನ್ನು ಮಣ್ಣಿನಲ್ಲಿ ಮಣ್ಣಾಗುವವರೆಗೂ ಎದೆಯಲ್ಲಿ ಜೀವಂತಿಕೆಯಿಂದ ತುಳುಕುವಂತೆ ಹಾಡಿ- ಹಾಡಿಸಿದ ಜನಪದ ಗೀತೆ ಅಲ್ಲದೆ ಟೋಪಿ ಮಾರುವವ ಮತ್ತು ಮಂಗ, ಮೊಸಳೆ ಮತ್ತು ಮಂಗ, ಬೆಕ್ಕು ಮತ್ತು ಮಂಗ, ಹಾಲು ಮಾರುವವ, ಮೊಲ ಮತ್ತು ಆಮೆ ಹೀಗೆ ಹತ್ತು ಹಲವಾರು ಕಥೆಗಳು ಬದುಕಿಗೆ ಬೇಕಾದಂತಹ ನೈತಿಕತೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಲು, ಮಾರ್ಗದರ್ಶಕವಾಗಿಯೂ ಪ್ರೇರಣೆಯಾಗಿದ್ದವು.
ಇದೀಷ್ಟು ಪೀಠಿಕೆಯನ್ನು ಏಕೆ ಕೊಟ್ಟೆನೆಂದರೆ, ಈಗ ರಾಶಿ ರಾಶಿಗಟ್ಟಲೆ ಹರಿದು ಬರುತ್ತಿರುವ ಸಾಹಿತ್ಯದಲ್ಲಿ ಏನಿದೆ? ಓದಿದರೆ ಏನು ಪ್ರಯೋಜನವಿದೆ? ಯಾವ ದಿಕ್ಕಿನಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ? ನಮ್ಮೊಳಗೆ ಯಾವ ಮೌಲ್ಯವನ್ನು ಕಟ್ಟಿಕೊಡುತ್ತದೆ? ಸಮಾಜದಲ್ಲಿ ಬದುಕಲು ಹೇಗೆ ಪ್ರೇರಿಪಿಸುತ್ತದೆ? ಬದುಕಿಗೊಬ್ಬ ಮಾದರಿ ಮನುಷ್ಯನನ್ನಾಗಿಸಿ ರೂಪಗೊಳಿಸಲು ಎಷ್ಟೊಂದು ಬಲವನ್ನು ತುಂಬುತ್ತದೆ? ಒಂದೇ... ಎರಡೇ... ಹೀಗೆ ಕೆದಕುತ್ತಾ ಹೋದಂತೆ ನಮಗೆ ನಿರಾಶೆ ಭಾವವೊಂದನ್ನು ಬಿಟ್ಟು ಮತ್ತಿನ್ನೇನು ದೊರಕದು. ಪದಕ್ಕೆ ಪದ ಪೋಣಿಸಿ ಕವಿತೆಯೆಂದರು, ಸಾಲಿಗೆ ಸಾಲು ಸೇರಿಸಿ ಕಥೆ ಎಂದರು, ಪುಟಕ್ಕೆ-ಪುಟ ಜೋಡಿಸಿ ಕಾದಂಬರಿ ಎಂದರು, ಸರಿ ಎಂದರು ಹಿಂಬಾಲಕರು, ಬಹುಪರಾಕ್ ಹಾಕಿದರು ಬಾಯಿ ಬಡುಕರು. ಇಂತಹ ಪುಸ್ತಕಗಳಿಂದ/ವಿಷಯಗಳಿಂದ ಸ್ವಾಭಿಮಾನವಿಲ್ಲದ ಓದುಗರನ್ನು ಸೃಷ್ಟಿಸುತ್ತಾ ಸಾಗುತ್ತಿದ್ದೇವೆ.
ಹೀಗಾದರೆ.. ಮುಂದಿನ ಪೀಳಿಗೆ ನಮ್ಮನ್ನು ಬಿಡಿ ಬೇಂದ್ರೆ-ಕುವೆಂಪು ಅಂಥವರನ್ನೆ ಮರೆತುಬಿಡುತ್ತಾರೆ. ನಮ್ಮ ಓದು ಮತ್ತು ಬರಹ ಇಂದಿನ ವಾಸ್ತವಿಕತೆಯನ್ನು ಮುಂದಿನ ತಲೆಮಾರಿಗೆ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವಂತಹ ವಿಷಯವಾಗಿರಬೇಕು, ಓದುಗ ಪುಸ್ತಕವನ್ನು ಓದುತ್ತಾ ಹೋದಂತೆ ಮಗ್ನನಾಗಬೇಕು, ಭಾವಪರವಶಗೊಳ್ಳಬೇಕು, ಅಳಬೇಕು, ನಗಬೇಕು, ಉತ್ಸಾಹಿತನಾಗಿ ಆ ಕಥೆಯ/ಕಾದಂಬರಿಯ ನಾಯಕ/ಕಿಯು ಅವನ ಬದುಕಿನಲ್ಲಿ ತಿರುವನ್ನು ತಂದುಕೊಡಬೇಕು, ಕಾಡುಮೃಗದಂತಹ ಮನಸ್ಸಿನವರು ಹೂವಾಗಿ ಅರಳಬೇಕು, ಹುಟ್ಟುತ್ತಾ ಯಾರು ಒಳ್ಳೆಯವರು ಆಗಿರುವುದಿಲ್ಲ, ಕೆಟ್ಟವರು ಆಗಿರುವುದಿಲ್ಲ ಕಾಲ, ಸಮಯ, ಸಂದರ್ಭಗಳು ಒಳ್ಳೆಯವನನ್ನು - ಕೆಟ್ಟವನನ್ನಾಗಿಸುತ್ತದೆ, ಕಟುಕರನ್ನು- ಸಾಧುವಿರಂತೆ ಮಾಡುತ್ತವೆ. ಹಾಗಂತ ನಾವು ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಈ ಭೂಮಿಯಲ್ಲಿ ಹುಟ್ಟಿದಂತಹ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಒಂದು ತಿರುವು ಬಂದೆ ಬರುತ್ತದೆ ಆ ತಿರುವನ್ನು ಹೇಗೆ ತನಗೆ ಲಾಭವನ್ನಾಗಿಸಿಕೊಂಡೊ/ಬಳಸಿಕೊಳ್ಳುತ್ತಾನೋ ಅದರ ಮೇಲೆ ಅವನ ಮುಂದಿನ ಭವಿಷ್ಯ ನಿರ್ಧಾರಗೊಳ್ಳುತ್ತದೆ.
ಬರಹ ಸಮಾಜಕ್ಕೆ ಹೊರೆಯಾಗದೆ ಓದುಗನ ಅಂತಃಕರಣವನ್ನು ಜಾಗೃತಿಗೊಳಿಸಿದರೆ ಸಾಕು! ಅರ್ಧ ಊರು, ದೇಶ ನಿಶ್ಚಿಂತೆಯಿಂದ ಉಸಿರಾಡಿದಂತೆ.
ಬದುಕು ಹೇಗೆ? ಯಾವಾಗ? ಎಲ್ಲಿಗೆ ತಂದು ನಿಲ್ಲಿಸುತ್ತದೇಯೊ ಅರಿವಾಗುವುದೇ ಇಲ್ಲ! ಎರಡು ಸಾಲುಗಳನ್ನು ಬರೆಯುತ್ತಿದ್ದವನನ್ನು ಧೀರ್ಘ ಕವನ, ಚುಟುಕು, ಕಾದಂಬರಿ, ಶಾಯರಿ, ಕಜಲ್ ಗಳನ್ನು ಬರೆಯುವಂತೆ ಪ್ರೇರೆಪಿಸಿದ ನಮ್ಮ ನಿಕಟಪೂರ್ವ ಕ.ಸಾ.ಪ.ದ ಸಾಹಿತ್ಯ ಬಳಗಕ್ಕೂ, ನಿಕಟಪೂರ್ವ ಅಧ್ಯಕ್ಷರು ಆದಂತಹ ಶ್ರೀಯುತ ಐ.ಎ.ರೇವಡಿ. ಶಿಕ್ಷಕರು ಇವರಿಗೆ ಮತ್ತು ಮುಖ್ಯವಾಗಿ ದಾರವಾಡದ ಮೌನಿ ಎಂ.ಧಾರವಾಡ ಇವರು ಮುಂಬೈನ ಡೊಂಬಿವಿಲಿಯಲ್ಲಿ ಆಯೋಜಿಸಿದ್ದಂತಹ ರಾಷ್ಟ್ರ ಮಟ್ಟದ ಕಥಾ ಸ್ಪರ್ಧೆಯಲ್ಲಿ ನನ್ನ ಚೊಚ್ಚಲ ಅಂದರೆ ಇದೆ ಸ್ಪರ್ಧೆಗಾಗಿ ಬರೆದಂತಹ ಮೊದಲ ಕಥೆ 'ಚಂದ್ರವ್ವ' ಕಥೆಗೆ ವಿಶೇಷ ಬಹುಮಾನವನ್ನು ನೀಡುವ ಮೂಲಕ ಮತ್ತಷ್ಟು ಕಥೆಗಳನ್ನು ಬರೆಯಲು ದಾರಿಮಾಡಿಕೊಟ್ಟರೆಂದರೆ ತಪ್ಪಾಗಲಾರದು ಹಾಗೂ ಗುರುರಾಜ್ ಎಲ್. ಶ್ರೀಮತಿ ಗೀತಾ ಶ್ರೀಧರ ಯಾಳಗಿ, ಚಂದ್ರಶೇಖರ ಮಾಡಲಗೇರಿ ಇನ್ನೂ ಹಲವರು ನನ್ನ ಕಥಾಯಾನಕ್ಕೆ ಸಾಥ ನೀಡಿದಂತವರಿಗೂ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿ - ತಾಲೂಕ ಘಟಕ ಗಜೇಂದ್ರಗಡದ ಅಧ್ಯಕ್ಷರು - ಸದಸ್ಯರುಗಳಿಗೆಲ್ಲರಿಗೂ, ಮುಖಪುಟದ ಎಲ್ಲ ಸಹೃದಯಿಗರೆಲ್ಲರಿಗೂ ಈ ಅಕ್ಷರ ಬಡವನಿಂದ ಅನಂತ... ಅನಂತ.. ಪ್ರಣಾಮಗಳು.
ಕೊನೆಯದಾಗಿ ಈ ಎರಡು ತಿಂಗಳ ಹಿಂದೆಯೆ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದರೆ ಅದು ನಮ್ಮ ದಿ. ಶ್ರೀ ಈಶ್ವರಪ್ಪ ಎ. ರೇವಡಿ ಇವರ ಕೈಯಿಂದಲೆ ನೆರವೇರಿರುತ್ತಿತ್ತು. ಅವರ ಅಕಾಲಿಕ ಅಗಲಿಕೆಯಿಂದಾಗಿ ನಮ್ಮ ಭಾಗದ ಸಾಹಿತ್ಯವಷ್ಟೆ ಅಲ್ಲ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ವರ್ಗಕ್ಕೆ ಅಪಾರವಾದ ತುಂಬಲಾರದಂತಹ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ನೋವು ಮಾತ್ರ ಶಾಶ್ವತ....
ಆಶಯ ನುಡಿ
"ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಸಾಹಿತ್ಯವೆಂಬುವುದು
ಎಲ್ಲರಿಗಿಲ್ಲ" ಎಂಬ ಸರ್ವಜ್ಞನ ನುಡಿಯಂತೆ ವೃತ್ತಿಯಿಂದ ವ್ಯಾಪಾರಸ್ಥರಾದರು ಪ್ರವೃತ್ತಿಯಿಂದ ಭಾವನಾ ಜೀವಿಯಾಗಿ ಸಾಹಿತ್ಯದತ್ತ ವಾಲಿರುವ ಅಪರೂಪದ ವ್ಯಕ್ತಿತ್ವ ಹೊಂದಿರುವಂತಹ ಶ್ರೀ ಶರಣಪ್ಪ ಕ.ಬೇವಿನಕಟ್ಟಿ ಇವರು ನಿಷ್ಠುರ ಮಾತಿನ, ಮೃದು ಮನಸ್ಸಿನ ಹಾಗೂ ಜಾನಪದ ಶೈಲಿಯ ಕವನಗಳ ಬರೆಯುವಲ್ಲಿ ಇವರು ನಿಸ್ಸೀಮರು, ಪದಗಳ ಜೋಡಣೆಯ ಅಕ್ಕಸಾಲಿಗ, ಆಡು ಮಾತಿನ ಪದಗಳಿಂದಲೆ ಕವನ ಕಟ್ಟುವ ಕಲೆ ಇವರಿಗೆ ಕರತಲಾಮಲಕವಾಗಿದೆ. ಗಜೇಂದ್ರಗಡ ನಗರವು ಸುತ್ತಮುತ್ತಲಿನ ನಗರಗಳಾದಂತಹ ರೋಣ, ನರೇಗಲ್, ಯಲಬುರ್ಗಾ, ಗುಡೂರು, ಬೇಲೂರು ಇವೆಲ್ಲ ನಗರಗಳ ವ್ಯಾಪಾರಕ್ಕಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಇಂತಹ ವಾತಾವರಣದಲ್ಲಿದ್ದುಕೊಂಡು ಸ್ವತಃ ಒಬ್ಬ ವ್ಯಾಪಾರಸ್ಥರಾಗಿ, ರೈತರಾಗಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದ್ದುಕೊಂಡು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ, ಅಲ್ಲದೇ ನಾಡಿನ ಪ್ರತಿಷ್ಠಿತ ಸಾಹಿತ್ತಿಕ ಸಂಸ್ಥೆಗಳು ಆಯೋಜಿಸಿದಂತಹ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ, ಉಪನ್ಯಾಸ, ಅತಿಥಿಯಾಗಿ ಭಾಗವಹಿಸಿ ಊರ ಕೀರ್ತಿಯನ್ನು ನಾಡಿನಾದ್ಯಂತ ಪಸರಿಸಿದ್ದಾರಲ್ಲದೆ, ನಮ್ಮ ಗಜೇಂದ್ರಗಡ ನಗರದಲ್ಲಿ ನಡೆಸುತ್ತಿದ್ದಂತಹ ಮಹತ್ವಪೂರ್ಣ ವಾರದ ಸಾಹಿತ್ಯ ಚಿಂತನಾಗೋಷ್ಠಿಗಳಾದಂತಹ ೧೫೦, ೧೭೫, ೨೦೦ ವಾರಗಳ ಸಾಹಿತ್ಯ ಚಿಂತನಾಗೋಷ್ಠಿಗಳ ಸಂಭ್ರಮಾಚರಣೆಯ ಪ್ರಯುಕ್ತವಾಗಿ ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಮತ್ತು ಸಾಹಿತ್ಯ ಸಿರಿ ಎಂಬ ಪುಸ್ತಕ ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯ ವಿಮರ್ಶಕರಾಗಿ ಯಾವುದೇ ಕಪ್ಪು ಚುಕ್ಕೆ ಬರದ ಹಾಗೆ ಕಾರ್ಯ ನಿರ್ವಹಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ನಮ್ಮವ್ವ - ಅವಳೆದೆಯ ಮಾತುಗಳು ಕವನ ಸಂಕಲನ ಹಾಗೂ ನಿರ್ಣಯ - ಕಾದಂಬರಿ ಈಗ ಚಂದ್ರವ್ವ ಎಂಬ ಕಥಾ ಸಂಕಲನವನ್ನು ಹೊರತರುತ್ತಿರುವುದು ನಮಗೆಲ್ಲ ಅತೀವ ಸಂತೋಷವನ್ನುಂಟುಮಾಡಿದೆ. ಚಂದ್ರವ್ವ ಎಂಬ ಕಥೆಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ವಿಶೇಷ ಬಹುಮಾನವನ್ನು ಪಡೆದುಕೊಂಡು ಬಂದು ನಮ್ಮ ಕನ್ನಡ ಕಂಪನ್ನು ನಾಡಿನಾಚೆಗೂ ಪಸರಿಸಿದ ಚೈತನ್ಯವಿದು. ಐದುವರೆ ವರ್ಷಗಳ ಕಾಲ ನಮ್ಮೊಡಗೂಡಿ ಕನ್ನಡ ಸಾಹಿತ್ಯ ಪರಿಷತ್ತು ರೋಣ-ಗಜೇಂದ್ರಗಡ ತಾಲೂಕ ಘಟಕದ ಅವಿಭಾಜ್ಯ ಅಂಗವಾಗಿ ಕಾರ್ಯವನ್ನು ನಿರ್ವಹಿಸಿದ್ದು
ಈ ಕಥಾಸಂಕಲನದ ಮೂಲಕ ನಾಡು ಮೆಚ್ಚುವ ಅದ್ಭುತ ಕಥೆಗಾರನಾಗಿ ಸಾಹಿತ್ಯ ಲೋಕಕ್ಕೆ ಪರಿಚಿತವಾಗಿ ಅವರು ಊರಿನ ಅಭಿನವ ಬೇಂದ್ರೆಯಾಗಿ ಬೆಳೆಯಲಿ ಎಂಬುದೆ ನನ್ನ ಹಾಗೂ ನಮ್ಮ ಕಸಾಪ ಬಳಗದ ಸದಸ್ಯರೆಲ್ಲರ ಸದಾಶಯ.
ಈಶ್ವರಪ್ಪ ಎ. ರೇವಡಿ
ಶಿಕ್ಷಕರು, ನಿಕಟಪೂರ್ವ ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ
ರೋಣ-ಗಜೇಂದ್ರಗಡ
.
ಹೆಸರಿಡದ ಕವಿತೆಗಳು ೧
ಇದು...ಸರಿಯಲ್ಲ ಎಂದು ಹೇಗೆ
ಸಮರ್ಥಿಸಿಕೊಳ್ಳಲಿ...!! ತಾಯಿ...
ಇಂತಹ ಕೃತ್ಯಕ್ಕೆ ಅನಾದಿಕಾಲದಿಂದಲೂ
ಇತಿಹಾಸವಿದೆ, ಪ್ರೋತ್ಸಾಹವಿದೆ, ಅನುಕಂಪವಿದೆ
ಹೋರಾಟವು ಇದೆ..!! ನಿಸ್ಸಹಾಯಕತೆಯೂ ಇದೆ..
ಇಲ್ಲಿ ಯಾರನ್ನೂ ದೂಷಿಸಲಿ..!! ಅಕ್ಕ..
ಕಾಲಕಾಲಕ್ಕೆ ಅಜ್ಞಾನವನ್ನು ಹೊಡೆದೊಡಿಸುವಂತಹ
ಜ್ಞಾನಿಗಳನ್ನೆ ಹುರಿದು ಮುಕ್ಕಿಬಿಟ್ಟಿದ್ದೇವೆ..
ಈಗೇನಿದ್ದರೂ ಜಾತಿಗಾಗಿ ಬಡಿದೆಬ್ಬಿಸುವ ಕಾವಿಗಳು,
ಸರಿಯೋ-ತಪ್ಪೊ ವಿಮರ್ಶಿಸದೆ ಪತ್ವಾ ಹೊರಡಿಸುವ ಮೌಲ್ವಿಗಳು!!
ಯಾವ ನೆಲವಾದರೇನು ಕಬಳಿಸಲು ಬಾಯ್ತೆರೆದು
ಕುಳಿತ ಕ್ರೈಸ್ತ ಮಿಶನರಿಗಳು..!!
ಇವುಗಳೆಲ್ಲದರ ಗೊಡವೆಗಳ ನಡುವೆ ನಿನ್ನ ಕೂಗು
ಕೇಳಿಸುವುದೆ...
ಜಾತಿಯ ಸೌಧಕ್ಕೆ ಎಲ್ಲ (ಅ)ಜ್ಞಾನಿಗಳು ಒಂದೊಂದಾಗಿ
ಇಟ್ಟಿಗೆಯನ್ನು ಕಟ್ಟುತ್ತಾ ಬಂದವರಲ್ಲವೆ ತಾಯಿ..
ಅದರ ಕಂದರದೊಳಗೆ ಬಿದ್ದು, ಬೆಂದು, ಉರಿದು
ಹೋಗುವವರು ನಮ್ಮಂತಹ ನಿಸ್ಸಹಾಯಕರೆ ಅಲ್ಲವೇ?
ಇಷ್ಟರ ಮೇಲೆ ಬೆಳೆ ಬೇಯಿಸಿಕೊಳ್ಳುವವರ ಸಂಖ್ಯೆಗೆನೂ
ಕಡಿಮೆ ಇಲ್ಲ..!!
ಏನು ಮಾಡುವುದು..!! ನಿಟ್ಟುಸಿರೊಂದನ್ನು ಹೊರಚೆಲ್ಲಿ
ಜಿಟಿಜಿಟಿ ಸುರಿಯುವ ಮಳೆಯಲ್ಲಿ, ತಂಪು ಗಾಳಿಯೊಡಗೂಡಿ
ಬಿಸಿಬಿಸಿ ಎರಡು ಬೊಂಡಾ, ಒಂದು ಕಾಫೀಯನ್ನು ಹೀರುತ್ತ
ಛೇ.. ಹೀಗಾಗಬಾರದಿತ್ತೆಂದು ಲೊಚಗುಟ್ಟಿದರೆ ಸಾಕು
ಇಲ್ಲದಿದ್ದರೆ ಅವರ ಕಪ್ ನಲ್ಲಿ ನೊಣ ಬಿದ್ದು ಸತ್ತು ಹೋಗಿಬಿಟ್ಟರೆ..!! ಅನಾಮತ್ತು ಮೂವತ್ತು ರೂಪಾಯಿ ಲುಕ್ಸಾನು..
ಈ ಮಣ್ಣಿನಲ್ಲಿ ಯಾವುದಕ್ಕೂ ಕೊರತೆಯಿಲ್ಲ..!! ಅಕ್ಕ
ಒಂದೆಡೆ ತುಂಬಿ ತುಳುಕುವ ವಿದ್ವತ್ ಕೋಶ...
ಮತ್ತೊಂದೆಡೆ ಅನಕ್ಷರಸ್ಥ ಕೂಪ..!! ಕೈ ಹಿಡಿದೆತ್ತುವವರನ್ನು
ಮಣ್ಣಲ್ಲಿ ಮಣ್ಣಾಗಿಸಿ ಸಂಭ್ರಮಿಸುತ್ತೇವೆ...
ಅದುಮಿ, ತುಳಿದು, ತಿಂದು, ತೇಗಿ ಕೊಬ್ಬಿದವನನ್ನು
ಹೊತ್ತುಕೊಂಡು ಮೆರೆದಾಡುತ್ತೇವೆ... ವಿಪರ್ಯಾಸವಾದರೂ
ಸತ್ಯವಲ್ಲವೇನು..?
ಅಬ್ಬಾ... ಅಂತೂ ಇಂತೂ ನಿನ್ನ ವಿಷಯವಂತೂ
ಕೆಲವರ ಬೆರಳಿಗೆ ಸಾಕಷ್ಟು ಕೆಲಸವನ್ನು ಕೊಟ್ಟಿತು ತಾಯಿ..
ನಿನ್ನನ್ನು ಬೆತ್ತಲಾಗಿಸಿ...., ಬೆಚ್ಚಗಿನ ಗೂಡಿನವರು ಬೆಂಕಿಯನ್ನು
ಕಾಯಿಸಿಕೊಂಡರು, ಹೊಟ್ಟೆಯನ್ನು ತುಂಬಿಸಿಕೊಂಡರು!
ಇವತ್ತಿಗೆ ನಿನ್ನದು, ನಾಳೆಗೆ ಇನ್ನಾರದ್ದೊ... ನಿನ್ನ ಸುದ್ದಿಯಂತೂ
ನಾಳೆಗೆ ರದ್ದಿಯಲ್ಲವೆ...
ಇಟ್ಸ್ ಆಲ್ ರೈಟ್ ಮುಂದಕ್ಕ ಹೋಗೊಣ
ಕಜಲ್ - ಮಸೀದಿ ಮಂದಿರಗಳೆಲ್ಲ
ಮಸೀದಿ-ಮಂದಿರ ಚರ್ಚಗಳೆಲ್ಲ ಬಿಕ್ಷೆ
ಬೇಡುವ ಕೇಂದ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ..!!
ಡೇಬಿಟ್/ಕ್ರೇಡಿಟ್ ಕಾರ್ಡಗಳಿದ್ದರೆ ಮಾತ್ರ... ಕಲಿಯಗದ
ಶ್ರೀಮಂತ ಅಲ್ಲಾ-ಯೇಸು-ದೇವರುಗಳ ದರ್ಶನ
ವಾಗುವುದು ಸಾಕಿ...
ದೇಹಿ ಎಂದು ಹೋದವರೆಲ್ಲ... ದೀನವಾಗಿ
ಸುಡು ಬಿಸಿಲಿನಲ್ಲಿ, ಕಂಕುಳಲ್ಲೊ..ಹೆಗಲ ಮೇಲೊ
ಮಕ್ಕಳನ್ನು ಹೊತ್ತುಕೊಂಡು ಕಾಯುತ್ತಿರಬೇಕಷ್ಟೆ..!!
ಅವರು ಮೆಕ್ಕಾಗೆ ಹೋದರೆ, ಇವರು ಕಾಶಿಯನ್ನು
ಸುತ್ತಿ ಬಂದರು ಮತ್ತವರು ಜೆರುಸೇಲಂ ಗೆ ಹೋಗಿದ್ದರು
ಮತ್ತೊಂದಿಷ್ಟು ಜನ..... ಹಾಲು-ತುಪ್ಪ
ಕುರಿ-ಕೋಳಿಗಳನ್ನು ಬಲಿ ಕೊಡುವ ದೇವ-ದೇವತೆಯರನ್ನು
ಪೂಜಿಸಿದರು-ಆರಾಧಿಸುತ್ತಿರುವರು ಸಾಕಿ...
ಅಲ್ಲಿ, ಇಲ್ಲಿ, ಮತ್ತೆಲ್ಲಿಗೋ... ಹೋಗಿ ಬಂದವರು
ಸಂತರಾದರೂ..? ಸಮಾಜಕ್ಕೆ ಮಾದರಿಯಾದರೂ..?
ಲೋಕೊದ್ಧಾರಕರಾದರೊ..? ಹೋಗಲಿ ಮನೆಯನ್ನು
ಬಿಡಿ... ಮನಸ್ಸಿಗಾದರೂ ಶಾಂತಿ ದಕ್ಕಿದೇಯಾ..?
ಯಾವ ಕಂಪೋಡಿನ ಹತ್ತಿರ ಹೋದರೂ...
ಕಾಮದ ಘಮಟು ವಾಸನೆ ಮೂಗಿಗೆ ಬಡೆಯುತ್ತದೆ..!!
ಕಟ್ಟಡಗಳ ಯಾವ ಮೂಲೆಯೂ ಸಾಕಾಗುತ್ತಿಲ್ಲ
ಕಂತೆ..ಕಂತೆಗಳ ಮೂಟೆಯನ್ನು ಒಟ್ಟಲು
ಸಾಕಿ....
ಕೋರ್ಟಿನ ಕಟಕಟೆಗಳಿಗೂ ಗೆದ್ದಲು ಹತ್ತಿರಬಹುದು!
ಜೈಲಿನ ಕಂಬಿಗಳಿಗೂ.. ತುಕ್ಕು ಹಿಡಿದಿರಬಹುದು..!!
ಶಿಕ್ಷೆಯನ್ನು ಬರೆಯುವ ಲೇಖನಿಯ ಮಸಿಯು ಮಂಕಾಗಿರಬಹುದು...!!
ಎಲ್ಲವನ್ನೂ... ಗೆದ್ದವೆಂದುಕೊಂಡವರು... ಮೇಲಿನವನ
ಲೆಕ್ಕದಿಂದ ನುಣುಚಿಕೊಳ್ಳಬಲ್ಲರಾ...?
ಚುಟುಕುಗಳು ಗೆಳೆಯ+ರಂಗೀ
ಚುಟುಕುಗಳು ಗೆಳೆಯ+ರಂಗೀ
ಜಗತ್ತಿನ ಬಗ್ಗೆ ನೀನು
ಯಾವತ್ತೂ ತಲೆಯನ್ನು
ಕೆಡಸಿಕೊಳ್ಳಬೇಡ..!! ಅದು
ಯಾವಾಗಲೂ ಸುಟ್ಟು ಉರಿದು
ಬೂದಿಯಾಗುವುದನ್ನೇ....
ಕಾಯುತ್ತಿರುತ್ತದೆ ರಂಗೀ....
ನಮ್ಮ ಬುಡಕ್ಕೆ ನಾವೆ...
ನೀರೇರೆದುಕೊಳ್ಳಬೇಕು..!!
ಬಿರುಗಾಳಿಗೂ ಬೇರುಗಳು
ಜಗ್ಗದಂತೆ..!!
ನಿನ್ನದೊಂದು ಸಿಹಿಯೋ..ಅಥವಾ
ಕಹಿ ಮುತ್ತಿಗಾಗಿ ನಾನು
ಬೇಲಿ ಮೇಲಿನ ಹೂವಾಗಿ
ಅರಳಿಬಿಡುತ್ತೇನೆ
ಗೆಳೆಯ...
ಮತ್ತೊಂದು ದುಂಬಿಯ
ದಾಳಿಗೆ ಸಿಕ್ಕು ನಲುಗಿ
ಹೋಗದಂತೆ
ಕಾಪಿಟ್ಟುಕೊಳ್ಳುವೇಯಾ..?
ಇಲ್ಲಿ...ಹೂವಾದರೇನು?
ಹೆಣ್ಣಾದರೇನು..? ಸೌಂದರ್ಯದ
ಘಮಲಿನಮಲು ಇರುವವರೆಗೆ
ಮಾತ್ರ ಬೆಲೆ
ಗೆಳೆಯ...
ಆಸ್ವಾದಿಸುವವರೆಲ್ಲ
ರಸಿಕರೆ..? ಎಂದು ಹೇಗೆ
ಕರೆಯಲಿ... ಮುಡಿಯ
ಮಲ್ಲಿಗೆಯನ್ನೆ.. ಹೊಸಕಿ
ಹಾಕುವ ಜನರಿಹರಿಲ್ಲಿ...!!
ನೀನು ಹೊರಟು ಹೋದ
ದಾರಿಯನ್ನೇನು...ನಾನು
ನೆನಪಿಟ್ಟುಕೊಂಡಿಲ್ಲ
ಗೆಳೆಯ...
ಬರುವ ಹಾದಿಯನ್ನೆ
ಕಾಯುತ್ತಿದ್ದೇನೆ...!!
ಕವಲಾಗಿಸಿಬಿಡಬೇಡ
ಯಾಕೇ....
ಎಲ್ಲರೂ ನೋವಿನಲ್ಲಿರುವಾಗ
ವೀಣೆಯನ್ನೆ...ನುಡಿಸುತ್ತಾರೆ
ಎಂಬುದು ನನಗರಿವಾಗಿರಲಿಲ್ಲ
ಗೆಳೆಯ...
ಈಗರಿವಾಯಿತು... ನೋಡು
ಬಿಟ್ಟು ಹೋದ ನಿನ್ನ ನೋವಿನ
ನೆನಪುಗಳ ತೊಡೆದು
ಹಾಕಲು ಈ ತಂತಿಗಳ
ನಾದವೇ.... ಮದ್ದೆಂಬುದು..
ಹೂವಿನಂತವಳು....ನೀ
ಹೂವಿಗೆ ನೋವು ಕೊಟ್ಟರೆ
ಹೇಗೆ ಹೇಳು..
ರಂಗೀ...
ಚುಚ್ಚು ಮಾತುಗಳಿಂದ
ನನ್ನೆದೆಯನ್ನು
ಇರಿದಿದ್ದೆ ಸಾಕಿತ್ತು..!!
ಯಾವ ಧರ್ಮದ
ದೇವರನ್ನು ಅಮೃತ ಶಿಲೆಯಲ್ಲಿ
ಕೆತ್ತಿಸಿಟ್ಟರೇನಾಯಿತು?
ಪೂಜಿಸುವ ಎದೆಗಳೆ
ಕಲ್ಲಾಗಿ ಹೋಗಿರುವಾಗ..!!!
ರಂಗೀ...
ಕತ್ತಲು... ಕಳೆದು, ಬೆಳಕನ್ನು
ಸಂಭ್ರಮಿಸುವುದಾದರು
ಯಾವಾಗ..? ಪ್ರೀತಿಯನ್ನು
ಹಂಚುವ ಕೈಯಲ್ಲಿ
ಬಂದೂಕನ್ನು ಹಿಡಿದಿರುವಾಗ..!!!
ಚುಟುಕುಗಳು ರಂಗೀ
ಅವಳು ಹೊರಟು
ಹೋದ ಮೇಲೆ... ಹೆಚ್ಚು
ಗಾಬರಿಗೊಂಡುಬಿಟ್ಟಿದ್ದೆ..!!
ಜಗತ್ತು ನನ್ನ ಬಗ್ಗೆ ಏನೆಲ್ಲ
ಯೋಚಿಸುತ್ತದೆ ಅಂತಾ
ರಂಗೀ....
ಯಾವ ಮಣ್ಣಿನಲ್ಲಿ...
ಮಡಿದ ಯೋಧರನ್ನು
ನೆನಪಿಸಿಕೊಳ್ಳುವುದಿಲ್ಲವೊ
ಅಂತವರು ನನ್ನ ಬಗ್ಗೆ ಯಾವ
ರೀತಿಯ ಕಾಳಜಿಯನ್ನು ಮಾಡುತ್ತಾರೆ
ಬಿಡು...
ಯಾರೋ... ಹೇಳಿದರು
ಅವಳ ಕೆನ್ನೆ ರೇಷ್ಮೆಗಿಂತಲೂ
ಮೃದುವಾಗಿದೆ ಎಂದು
ರಂಗೀ....
ಮುಟ್ಟಲು ಹೋದೆ..!!
ನನ್ನ ಕೆನ್ನೆಗೆ ಕರೆಂಟ್
ಹೊಡೆದಂತಹ
ಅನುಭವವಾಯಿತು..!!
ಅವಳು ಕೈ ಬಿಟ್ಟಳೆಂದು
ನನ್ನ ಪಾಲಿನ ಜಗತ್ತು
ಮುಗಿದು ಹೋಯಿತೆಂದು
ಕಣ್ಮುಚ್ಚಿಕೊಂಡು ಬಿಟ್ಟೆ
ರಂಗೀ....
ಅಲ್ಲಿ ನನ್ನ
ತಾಯಿ ಕಂಡಳು....
ಮತ್ತೊಂದು ಹೊಸ
ಜಗತ್ತು ತೆರೆದುಕೊಂಡಿತು.
ಆ ದೀಪವನ್ನು
ಆರಿಸಿಬಿಡು
ರಂಗೀ....
ಬಾಳಲ್ಲಿ ಬೆಳಕಾಗ
ಬೇಕಾದವಳೆ,
ಎಂದೋ...ಕತ್ತಲೆಗೆ
ದೂಡಿ ಹೋಗಿದ್ದಾಳೆ...
ಎದೆಯ ದುಃಖವನ್ನು
ಯಾರೊಂದಿಗೂ ನಾನು
ಹಂಚಿಕೊಳ್ಳಲಾರೆ... ಬೇಕಿದ್ದರೆ
ಚೂರು ವಿಷವನ್ನು ಕೊಟ್ಟುಬಿಡಲಿ
ನುಂಗಿ ಬಿಡುತ್ತೇನೆ...!!
ರಂಗೀ...
ಆ ವಿಷವು ನನ್ನನ್ನು ಕೊಲ್ಲುವುದು
ಇಲ್ಲವೋ... ಗೊತ್ತಿಲ್ಲ..!!
ಅಷ್ಟೊಂದು ನಂಜೆರಿಬಿಟ್ಟಿದೆ
ದೇಹದಲ್ಲಿ..
ದುಃಖವು ಒಂದು
ಸಿರಿಯಲ್ಲವೇನು..?
ಎಲ್ಲರಿಗೂ ಅದನ್ನು ಹೇಗೆ
ಹಂಚುತ್ತಾ... ಬರಲಿ
ರಂಗೀ....
ಬಟ್ಟಲು ಮದಿರೆಗೆ
ಜೊತೆಯಾದವರು...
ನೋವಿನಲ್ಲಿ
ಬಾಗಿಯಾಗುವರೇನು?
ಪಾಪ ಕಳೆಯುತ್ತವೆ ಎಂಬ
ಎಲ್ಲ ಹರಿಯುವ ನೀರಿನಲ್ಲೂ
ಅಂಗೈಯನ್ನು ಉಜ್ಜಿ...ಉಜ್ಜಿ
ತೊಳೆದುಕೊಂಡೆ
ರಂಗೀ...
ಕಾಣಿಸಲೆ... ಇಲ್ಲ..
ಯಾವುದು ಇರಬಹುದದು..!!
ಅವಳನ್ನು ಒಲಿಸಿಕೊಂಡವನ
ಅಂಗೈಯ ರೇಖೆ..
ಅವಳ ಕಣ್ಣಂಚಿನಿಂದ
ನನ್ನೆದೆಗೆ ನಂಜನ್ನು
ಸುರಿದುಬಿಟ್ಟರೂ ಸಾಕಿತ್ತು...
ರಂಗೀ...
ಒಲವಿನ ನಶೆಯನ್ನೆ...
ಏರಿಸಿಬಿಟ್ಟಳು...
ವಿರಹದ ನಗರಕ್ಕೆ
ನಾನೇ ರಾಜನೀಗ..
ಏನೂ... ಗೊತ್ತಿಲ್ಲದ
ಅಮಾಯಕ ನಾನು
ನಡೆಯತ್ತಿದ್ದೆ ಬೀದಿಯಲ್ಲಿ
ರಂಗೀ....
ಅವಳು ನಕ್ಕುಬಿಟ್ಟಳು
ಬದುಕಿನ ಹಾದಿಯೆ
ಬದಲಾಗಿ ಹೋಯಿತು..!!
ಹೇಳಿದ ಅದೇಷ್ಟೊ..
ಮಾತುಗಳಿಗವಳು
ಕಿವಿಯಾಗಲೆ ಇಲ್ಲ
ರಂಗೀ...
ಹಿತ್ತಲಿನಲ್ಲಿ ಹಚ್ಚಿದ್ದ
ಹೂವಿನ ಗಿಡಗಳು
ಬಾಡಿ ಹೋಗುತ್ತೀವೆ..
ಹುಟ್ಟಿದವರ ಕೊನೆಯ
ನಿಲ್ದಾಣ ಇದೆ...ತಾನೇ..?
ನಾನೇನು ಹೊತ್ತು ತರಲಿಲ್ಲ
ರಂಗೀ....
ನನ್ನವರೇ...ಇಲ್ಲಿ
ನನ್ನನ್ನು ಸುಟ್ಟು
ಹಾಕಿದರು....
ಅವಳು ನನ್ನನ್ನು
ಬದಲಿಸಿದಳು....
ಜಗತ್ತು ನನ್ಮನ್ನು
ಬದಲಿಸಲಿಲ್ಲ..!
ರಂಗೀ..
ಜಗತ್ತಿಗೆ ನನ್ನ
ಅವಶ್ತಕತೆ ಇತ್ತು
ಅವಳಿಗೆ ಮಾತ್ರ ನನ್ನ
ಜರೂರತ್ತು ಇರಲಿಲ್ಲ.
ಎಲ್ಲರೂ...ಕೇಳಿದರು
ನಿನ್ನೆದೆಗೆ ಗಾಯವನ್ನು
ಮಾಡಿದವರು ಯಾರು..?
ರಂಗೀ...
ಹೇಗೆ ಹೇಳಲಿ....
ಆಕೆಯಿನ್ನೂ... ಮುಖದ
ಪರದೆಯನ್ನೆ ಸರಿಸಿಲ್ಲ..!!
ಕೇವಲ.... ಅವಳ ನಗೆಯ
ಸದ್ದನ್ನು ಕೇಳಿ.. ಎದೆಯ ಹಕ್ಕಿ
ಬೇಟೆಗಾರ ಬಿಸಿದ ಬಲೆಗೆ ಸಿಕ್ಕು
ವಿಲವಿಲನೆ ಒದ್ದಾಡುವಂತೆ
ಮಾಡಿಬಿಟ್ಟಿದೆ ರಂಗೀ...
ಇನ್ನವಳು... ಎದುರಿಗೆ
ಬಂದು ಬಿಟ್ಟರೆ...!!
ಇಂದವಳ ಪಾದವನ್ನು
ಸ್ಪರ್ಶಿಸಿದೆ ರಂಗೀ...
ಹೂವಿಗಿಂತಲೂ...
ಮೃದುವಾಗಿದೆ ಆದರೂ
ಅದರೊಳಗಿನ ಗಂಧ
ಇಲ್ಲಿ ಸಿಗಲಿಲ್ಲ..
ಪ್ರೀತಿಯೆಂಬುದು
ಕೆಸರಿದ್ದ ಹಾಗೆ...
ಒಮ್ಮೆ ಇಳಿದರೆ
ಎದ್ದು ಬರುವುದು ಕಷ್ಟ..!!
ಗೆಳೆಯ...
ಅಲ್ಲಿ ಸುಮ್ಮನೆ
ಕಾಲಹರಣ ಮಾಡಬಾರದು
ಮಾಡಿದರೆ....
ಯೌವ್ವನಕ್ಕೆ ನಷ್ಟ..!!
ಅವಳ
ತುಟಿಯಂಚಿನಲ್ಲಿ
ಹೇಗೆ ಇಷ್ಟೊಂದು
ಸಿಹಿಯಿದೆ
ರಂಗೀ...
ಬಹುಶಃ ಅವಳಿಗೆ
ಇದ್ದಿರಬಹದೇನೊ
ಸಕ್ಕರೆಯ ಕಾಯಿಲೆ 😝
ಮುರಿದು ಬೀಳುವ
ಸಂಬಂಧಗಳಿಗೇತಕೆ
ಮನಸ್ಸು ಹಾತೊರೆಯುತ್ತದೆ
ರಂಗೀ...
ಖಾರ ಅರಿಯುವವರ
ಮಧ್ಯದಲ್ಲಿ...
ಬೆಣ್ಣೆ ತಿನ್ನುವವನಿಗೇನು
ಕೆಲಸ..
ಕವಿತೆ...ಘಜಲ್
ಶಾಯರಿಗಳನ್ನು
ಬರೆದು ನನ್ನ ದುಃಖವನ್ನು
ಮರೆಯುತ್ತೇನೆ ಎನ್ನುವುದು
ನಿಜವಾದರೆ ರಂಗೀ...
ಮದ್ಯವನ್ನು ಮುಟ್ಟದೆ
ಅವಳ ಕಹಿ ನೆನಪುಗಳನ್ನು
ಕೊಲ್ಲಬಲ್ಲೆ ಎಂಬುದು
ಸತ್ಯ..
ಎದೆಯ ಮೇಲಿನ
ಖಾಲಿ ಜೇಬು...ಸಂಬಂಧಗಳ
ನಡುವೆ ಅಳೆದು ತೂಗಿ
ಕೂರಿಸುತ್ತದೆ
ರಂಗೀ...
ಖಾತೆ ಚಲಾವಣೆ ಇಲ್ಲವೆಂದ
ಮೇಲೆ.. ಅವರ ಪಟ್ಟಿಯಲ್ಲಿ
ನಮ್ಮ ಹೆಸರನ್ನು ಹುಡುಕುವುದು
ಹುಚ್ಚತನವಲ್ಲದೆ..
ಬೆರಿನ್ನೇನು..?
ಮೊನ್ನೆ-ನಿನ್ನೆ ಕೂಡಿ
ನಡೆದ ದಾರಿಗಳೆಲ್ಲ
ಈಗ ಹೆದ್ದಾರಿಗಳಾಗಿವೆ
ರಂಗೀ...
ನಡೆಯುವ ಹಾದಿಗಳೆ
ವಿಸ್ತಾರವಾಗಿರುವಾಗ...
ಇಂದೇಕೆ ನಿನ್ನ ಮನಸ್ಸು
ಸಂಕುಚಿತಗೊಳ್ಳುತ್ತಿದೆ..!!
ಚುಟುಕು ಗೆ-ರ
ನಮ್ಮ ಪ್ರೀತಿ....
ಹರಿಯುವ ನೀರಿನಲ್ಲಿ
ಬಿಟ್ಟ ಕಾಗದದ
ದೋಣಿಯಂತಾಯಿತಲ್ಲ..!!
ಗೆಳೆಯ....
ಹುಟ್ಟು ಹಾಕುವ
ಮೊದಲೇ... ಕೈ ಚೆಲ್ಲಿ
ಕುಳಿತರೆ...
ತೀರದ ಮೇಲಿನ ದುರಾಸೆ
ತಪ್ಪಲ್ಲವೇನು..?
ಜನರು ಆಡಿದ ಚುಚ್ಚು
ಮಾತುಗಳಿಗಿಂತ
ನಿಮ್ಮ ಸೂಜಿಯ
ನೋವೇನು ದೊಡ್ಡದಲ್ಲ
ಬಿಡಿ ಡಾಕ್ಟ್ರೆ.....
ಕೆಲವೊಂದು ಕಾಯಿಲೆಗಳಿಗೆ
ಔಷಧಿಯ ಅವಶ್ಯಕತೆ
ಇರುವುದಿಲ್ಲ... ಭರವಸೆಯ
ನಾಲ್ಕು ಮಾತುಗಳೆ
ಸಂಜೀವಿನಿಯಾಗಿ ಬಿಡುತ್ತವೆ.