Thursday, September 28, 2017

ಹರೆಯದ ಹೊರೆ

ಈ ಹರೆಯಕೆ ಹೊರಿಸದಿರು ನಿನ್ನ
ನೆನಪುಗಳ ಹೊರೆಯ..
ತಾಳಲಾರೆನು ಪದೆ..ಪದೆ
ಬಂದೊರಗುವ ವಿರಹಗಳ  ಅಲೆಯ

ಓದಿರುವೆಯೊ... ಇಲ್ಲವೊ...
ನಾ ಕೊಟ್ಟು ಕಳಿಸಿರುವ ಓಲೆಯ
ಸಾಲು..  ಸಾಲುಗಳಲು ತುಂಬಿ
ಕಳಿಸಿರುವೆ ನನ್ನೊಲವಿನ ಸುಧೆಯ

ಹಗಲಿರುಳು ನಿನ್ನ ಬರುವಿಕೆಗೆ ಕಾದಿಹೆ ನಾ...
ನೋಡು ನಿಲ್ಲದೆ ಓಡುತಿಹುದೀ...ಸಮಯ
ನೀ.. ಬಾರದೆ ಹೋದ ಹೊತ್ತುಗಳ ನೆನಪುಗಳ
ಅಳಿಸಿ ಹಾಕಲಿ ನಿನ್ನ ನಗುವ ಪ್ರಳಯ

ಮುಂಗೋಪವದು ತರವಲ್ಲ ನನ್ನಲಿ
ಇದನರೀಯೊ.. ಇನಿಯ
ನಿನ್ನ ಬಿಸಿ ಸ್ಪರ್ಶಕ್ಕೆಂದೆ ಕಾದು.. ಕಾದು
ಕಾದ ಹಂಚಾಗಿದೆ ಈ ಹರೆಯ..

ಆಲಿಸದೇನೊ... ನಿನ್ನ ಮನವು.. ನನ್ನ
ಮನದೊಳಗಿನ ನೋವಿನ ಕರೆಯ
ಇಳಿಸು ಬಾರೊ... ಇನಿಯ
ಈ ಹರೆಯದ ಹೊರೆಯ

ಮತ್ತೆ ಬಾರದು.. ಇಂಥಾ..ಸಮಯ

Wednesday, September 27, 2017

ಅಪ್ಪಿಗೆ

ಯಾವ ಸ್ವರ್ಗದಲ್ಲೂ
ಸಿಗದ ಸುಖವ
ಕೊಡುವುದು
ನಿನ್ನ
ಅಪ್ಪುಗೆ

ಬಾಳಪೂರ್ಣ ನಿನ್ನ
ಜೊತೆಗಿರಲು ಕೊಡುವೆ
ನಿನ್ನೊಲವಿಗೆ ನನ್ನಯ
ಒಪ್ಪಿಗೆ

Saturday, September 23, 2017

ಒಂಟಿ ಕಾಲ್ಬದುಕಿನ ಬೆಲೆ

ಕಾಲು ಕತ್ತರಿಸಿ ಹೋದುದಕೆ ವ್ಯಥೆಯಿಲ್ಲ
ಕಾಲವು ನಿಲ್ಲದೇ... ಉರುಳುತಿಹುದು
ಎಂಬುದೊಂದು ಚಿಂತೆಯು ಸುಡುತಿಹುದಲ್ಲ ...
ಮೊದಲೆ...ಮಧ್ಯಮ ವರ್ಗದ ಬದುಕಿದು
ಕಾಲವು.. ಕಾಲನು ಕಸಿದುಕೊಂಡು ಬದುಕಿನ
ಮಧ್ಯದಲಿ ಒಂಟಿ ಕಾಲಲಿ ನಿಲ್ಲಿಸಿಬಿಟ್ಟಿದೆಯಲ್ಲ...

ಸಾವಿರ... ಲಕ್ಷ ರೂಪಾಯಿಗಳ ಕೊಟ್ಟು..
ಪುಸ್ತಕಗಳ ಚೀಲವನು... ಹೊತ್ತು ಬರುವಷ್ಟು
ಶಕ್ತಿ ನನ್ನ ಬೆನ್ನಿಗಿಲ್ಲ..
ಹಗಲಿರುಳು ನೂರಾರು ಚೀಲಗಳ...
ಮಣಭಾರವನು ತಂದೆಯು ಹೊತ್ತು ಹಾಕಿದರೂ...‌
ದಿನದ ಬದುಕು ನಡುಗಡ್ಡೆಯಾಗಿದೆಯಲ್ಲ

ಬೇಡವಣ್ಣ ನನಗೆ ಕ್ರೀಡಾಂಗಣ...ಚಿತ್ರಾಂಗಣ..
ನೃತ್ಯಾಂಗಣ...ರಂಗಾಯಣ...ನೀಡಿರಣ್ಣ
ಕೊಠಡಿಯೊಳಗೊಂದಿನ ಮೂಲೆ...
ಅರಳಿಸ ಬೇಕಿದೆ ನನ್ನ ಕನಸುಗಳನೆಲ್ಲವ...
ಗೋಡೆಗೆ ತೂಗು ಹಾಕಿದ ಕರಿ ಹಲಗೆಯ ಮೇಲೆ.. ತೋರಿಸಿಕೊಡಬೇಕಿದೆ ಈ ಜಗಕೆ ಒಂಟಿ ಕಾಲ್ಬದುಕಿನ ಬೆಲೆ

ಒಂಟಿ ಕಾಲಲೆ ಕಂಡುಕೊಳ್ಳಬೇಕಿದೆ ಬದುಕಿಗೆ ನೆಲೆ
ಬದುಕಲಿ ಕಾಡುವ ನೂರೆಂಟು ಪ್ರಶ್ನೆಗಳಿಗೆ
ಉತ್ತರವ ಕಂಡುಕೊಳ್ಳಲು... ಜಗದೆಲ್ಲ ಕೌತುಕಗಳ
ಓದಿ ತಿಳಿಯುವ ದಾಹವನಿಂಗಿಸಿಕೊಳ್ಳಲು...
ಕಾಲಲಾಗದವನು.. ಎಂದು ನುಡಿಯುವ ಕುಹಕಿಗಳ
ಬಾಯನ್ನು ಮುಚ್ಚಿಸಿ.. ಈ ಒಂಟಿ ಕಾಲ್ಕಂಬದ ಮೇಲೆ
ಮನೆಯ ಹತ್ತು ತೊಲೆಗಳ ಹೊತ್ತು ನಿಲ್ಲಲು ಬೇಕಿದೆ
ಎನಗೆ ಅಕ್ಷರಗಳ ಸೆಲೆ...

Thursday, September 21, 2017

ಚುಟುಕು ಗುಟುಕು ೪೩೦

ಅವನು
ರಾತ್ರಿಯಲ್ಲಷ್ಟೇ..
ಬರೆಯುತ್ತಾನೆ
ಎಷ್ಟೊಂದು
ಚುಟುಕು

ಯಾರಿಗೆ ಗೊತ್ತು
ಅದೇಷ್ಟು
ಪ್ರಭಾವ
ಬೀ(ರು)ರಿರಬೇಕು
ಸಂಜೆಯ
ಗುಟುಕು

ಪದ್ಯ.. ಗದ್ಯ... ಮದ್ಯ.. ೪೩೩

ನಿನ್ನ
ನೋಡಿದ ಕ್ಷಣವೆ
ಬರೆದೆ ನಾ
ಪದ್ಯ...

ನಿನ್ನ
ಪ್ರೇಮದ
ತೆಕ್ಕೆಯಲಿ
ಮೈ
ಮರೆತು ಬರೆದದ್ದು
ಗದ್ಯ...

ನೀ...
ಬಿಟ್ಟ
ಘಳಿಗೆಯಲಿ ನಾ
ಕುಡಿದದ್ದು
ಬರಿ
ಮದ್ಯ

ಪ್ರೀತಿ... ಭೀತಿ..೪೩೬

ನಿನ್ನ ನೆನಪುಗಳು
ಬಂದಾಗಲೆಲ್ಲ
ಕಣ್ಮುಚ್ಚಿ ಕೂರುವೆ
ಗೆಳತಿ..
ನಾವಿಬ್ಬರು ಕಂಡ
ಕನಸುಗಳೆಲ್ಲ.. ಎಲ್ಲಿ
ಹರಿದು ಹೋಗುವವೊ
ಎಂಬ ಭೀತಿ

ನಮ್ಮಯ ಸ್ಥಿತಿ

ಆರಿ ಹೋಯಿತು ಕಾವು
ಇತಿಹಾಸದ ಕರಾಳ ಪುಟದಲ್ಲಿ
ಸೇರಿಹೋಯಿತು ಇನ್ನೊಂದು ಸಾವು
ಬೂದಿಯಾಯಿತು ಹೊತ್ತಿದ ಚಿತೆಯು
ಕೇಳದಾದವು ಕರ್ಣಗಳು ನೊಂದವರ ವ್ಯಥೆಯ

ಮೌನವಾದವು ಧರಣಿ ಪ್ರತಿಭಟನೆಗಳು
ಬೀಕೊ ಎನ್ನುತಿಹುವು..ಒಣಗಿದ ಮಾಲೆಯಲಿ
ಕುಳಿತ ಗಾಂಧೀ ಪಟಕೆ ನೆರಳು ನೀಡುವ ಗುಡಾರಗಳು
ನಿಸ್ತೇಜನರಾದರೂ ಕೂಗಿ..ಕೂಗಿ ಕೇಳುವರು
ಇದೊಂದಿನದ ಮಾತೆಲ್ಲವೆಂದು ಮನೆ ಸೇರಿದರೆಲ್ಲ
ಹಿಂಬಾಲಕರು

ನಾಯಿಗಳು ಓಡಾಡುತಿವೆ ಗಲ್ಲಿ.. ಗಲ್ಲಿಗಳ ಮೂಸಿ
ಇನ್ನೂ ಅನುಮಾನದ ಹೊಗೆಯನ್ನೆ ಊದುತ್ತ..
ಕುಳಿತಿಹರು ಬೆತ್ತದ ಮಾಲೀಕರು... ರಾಷ್ಟ್ರ ನಾಯಕನನ್ನೆ
ಕೊಂದ ಪಾತಕರ ಹಿಡಿದ ಪಡೆ ನಮ್ಮದು... ಏನಾಗಿದೆ
ಇಂದು... ಹೊರಗಿನಿಂದಲೆ ಬಂದು ನಾಡೊಳಗಿನ
ಹಿರಿಯರ ಕೊಂದು ಹೋದವರ ಸುಳಿವು ಸಿಗುತ್ತಿಲ್ಲವಲ್ಲ

ಹೇಗಾಗಿದೆಯೊ ನೋಡಿ... ನಮ್ಮದೆ ನೆಲದಲ್ಲಿ
ನಮ್ಮನೆಯ ಬರಹಗಾರರ ಪರಿಸ್ಥಿತಿ
ಬದುಕಬೇಕಾದರೆ ಬರೆಯುವ ಹಕ್ಕನ್ನೆ ....
ತೊರೆಯಬೇಕಾದಂತಹ ದುಸ್ಥಿತಿ
ಬರೆಯಬೇಕಾದರೆ ಬದುಕುವ ಹಕ್ಕನ್ನೆ...
ತೂಗುಗತ್ತಿಗೆ ಕೊಡುವಂತಹ ವಿಷಮಸ್ಥಿತಿ

Wednesday, September 20, 2017

ವರ್ತಮಾನದಲ್ಲಿ ಕವಿ

ವರ್ತಮಾನದ ವಿಷಯಗಳ ಕುರಿತು
ಬರೆಯಲು ಹವಣಿಸುತಿಹುದು ಮನಸು
ಸಮಾಜದೊರೆಕೋರೆಗಳ ತಿದ್ದುವವರೆ
ಎಡುವುತ್ತಿರುವುದನು ಕಂಡು ಕರಗುತಿದೆ
ಕವಿ ಕಂಡ ಸ್ವಸ್ಥ ಸಮಾಜದ ಕನಸು

ಆಂಗ್ಲರ ಬಂಧನದ ಸಂಕೋಲೆಗಳ ತೊಡೆದು
ಹಾಕಿದೆವು... ಕಡೆದು ಹಾಕಲಾಗಲಿಲ್ಲ ಆಂಗ್ಲ ಭಾಷೆಯೆಂಬ
ಹೆಮ್ಮರವನ್ನು... ಇದರ ಗಾಳಿಯ ಸೇವಿಸಿ ಬಿಕ್ಕುತಿಹರಲ್ಲ
ನಾಡಿಗರು...ಹಣದ ಹೊಳೆಯನೆ ಹರಿಸಿ.. ಹರಿಸಿ
ಪೋಷಿಸಿ...ಸೃಷ್ಟಿಸಿಕೊಳ್ಳುತಿಹೆವಲ್ಲ ನಾವೆ ವಿಷವರ್ತುಲವನು

ಮೇಲುಕೀಳು ಅಸ್ಪೃಶ್ಯತೆಯಂತಹ.. ಸಮಾಜದ
ಪಿಡುಗುಗಳ ವಿರುದ್ಧ ವೈಚಾರಿಕತೆಯ ನುಡಿಗಳ
ಸಿಡಿಯುವ ಮತಿಗಳ ಸೀಳುತಿವೆಯಲ್ಲ ಗುಂಡುಗಳು
ಕುಡಿಯಲು ನೀರಿಲ್ಲ.. ಮಳೆ ಬಂದರೆ ಸೂರಿಲ್ಲ
ದುಡಿಯಲು ಕೆಲಸವಿಲ್ಲ...ಆದರೂ ಜಾತ್ರೆ...
ಜಯಂತಿಗಳ ನಡೆಸುವುದಕ್ಕೆ ಹಣಕ್ಕೇನು ಕೊರತೆಯಿಲ್ಲ

ಹುಡುಕುತಿದೆ ಭಾವನೆಗಳ ಮನಸು ಈ ಲೋಕದಲಿ
ಹುಡುಕಿದರೂ ಸಿಗದಾಗಿದೆ ಪ್ರೀತಿ..ಪ್ರೇಮ..
ಕರುಣೆ...ತ್ಯಾಗ..ಸಹನೆ.. ದಯೆ ಎಲ್ಲದರಲ್ಲಿಯೂ
ನಿರ್ಭಾವವೆ ಮನೆಮಾಡಿಬಿಟ್ಟಿದೆ... ಕಾರಣ ಧನದ
ಭೂತವು ಇವೆಲ್ಲವ ಹೂತು ಕುಳಿತುಬಿಟ್ಟಿದೆ
ಹೊರಬರದಂತೆ ಕಾಯುತ್ತ.... ಇದನ್ನೆಬ್ಬಿಸಿ ಓಡಿಸುವ
ಲೇಖಕರ ಲೇಖನಿಗಳು ಅಡುವಾಗಿರುವವಲ್ಲ ಇದರದೆ ಕಪಾಟಿನಲ್ಲಿ....

ತವಕ ತಲ್ಲಣದಿ ಬೇಯುತಿದೆ ಕವಿಯ ಮನವು
ಒಂಟಿ ದಾರಿಯಲಿ ಕೂಗಿ.. ಕೂಗಿ ಕುಸಿದಂತಾಗಿದೆ ಕಸುವು
ನೀಗುವುದೆ ರಾಮರಾಜ್ಯದ ನಿರ್ಮಾಣದ ಹಸಿವು
ಬರುವುದೆಂದು ಬರಗಾಲನೆದುರಿಸುವ ಬಲವು
ಸಿಕ್ಕುವುದೆ...? ಅವನ ಕನಸುಗಳಿಗೆ ಗೆಲವು...ಹೇಗೆ.?
ಬರೆಯದೆ ಅಳಿದುಳಿದ ಹಾಳೆಗಳಿಗೆ ಬೆಲೆಯುಂಟು
ಕವಿ ಕಂಡು ಬರೆದ ಪುಟದೊಳಗಿನ ಭಾವನೆಗಳಿಗೆ
ಏಂಟಾನೆಯ ತೂಕವು........ಇಲ್ಲದಂತಾಗಿರುವಾಗ

Monday, September 18, 2017

ಹಸಿವಿಗೆ ಬಲಿಯಾರು

ಆರಿದೆ ವಲೆಯು... ಬತ್ತಿದೆ ಮೊಲೆಯು
ಹಸಿದಿದೆ ಹೊಟ್ಟೆಯು.. ಈ ಒಂದ್ಹೊತ್ತು
ನನಗೂ ನಿನ್ನ ಕೆಚ್ಚಲಿನ ಹಾಲನ್ನು ಕುಡಿಸೆಯಾ
ಆಡವ್ವ.... ಕಂದನ ಗಂಟಲಪಸೆಯ ಬಾಯಾರಿಕೆಯ
ನೀಗಿಸವ್ವ...

ಓ.. ಮೂಕದೇವಿಯೆ ಮಾಂಸದುಂಡೆಯಾ
ಗುವೆಯಲ್ಲೆ... ನಮ್ಮಯ ಹಿಡಿ ಹಿಟ್ಟಿಗೆ
ಸಂಜೆಗೆ.. ಖಾರದೂಟವಾಗುವೆಯಲ್ಲೆ
ಉಳ್ಳವರ ಹೊಟ್ಟೆಗೆ
ಬರೀ... ಹಸಿವಿನ ಹಾಲ್ವಾಸನೆಯೆ
ಸುಳಿದಾಡುವುದಾಗ ಹಟ್ಟಿಯೊಳಗೆ

ನಿನ್ನ ಮಾರಿ ಬಂದ ಹಣವು
ನೀಗಿಸುವುದೆ ಪೂರ್ಣ ಬಾಳಿನ ಹಸಿವು
ಮತ್ತೆ.....? ಬೀಳದಿರುವುದೆ ಕಣ್ಣು
ನಾಳೆಯೊ...ನಾಡಿದ್ದೊ ಇನ್ನೊಬ್ಬರ
ಮನೆಯ ಪಾತ್ರೆಯಲಿ ಮರಿಯೂ... ಕುದ್ದು
ಕುದ್ದಾಗವುದು ಹಣ್ಣು

ನಿಮ್ಮಿಬ್ಬರ ಸಾವಿನ ದಿನಗಳು
ಹಸಿವಿನ ಹೊತ್ತುಗಳ ಕಡಿಮೆಗೊಳಿಸಬಲ್ಲವೆ
ವಿನಃ.... ನಿಲ್ಲಿಸಲಾರವು
ಹಾಗಾದರೆ... ಮುಂದಿನ ತುತ್ತಿನ ಹೊತ್ತುಗಳಿಗಾಗಿ
ಮಾರಾಟವಾಗುವ ಜೀವ ಯಾವುದು..?
ಉಳಿದ ಹಸಿವಿನ ದಿನಗಳು ಬಲಿಯ
ಬೇಡುತ್ತಿರುವುದನ್ನಾದರು ಯಾರನ್ನೊ.‌‌‌‌...?

Friday, September 15, 2017

ಮುನಿಸು

ನಿನ್ನ ನನ್ನ ಮುನಿಸಿನಲಿ
ಮಾತುಗಳದೇಷ್ಟು
ನಲುಗಿದವೊ..
ಮೌನದ ತಾಪಕೆ
ಒಡಲಾಳದ
ಕನಸುಗಳೇದಷ್ಟು
ಕರಗುತಿಹವೊ...

ರಾಜಿ ೪೨೯

ನಾನು
ಸೂಜಿಯೊಂದಿಗೆ
ಮಾಡಿಕೊಳ್ಳಲೆ....
ಬೇಕಿದೆ
ರಾಜಿ...
ಕಾರಣ
ಚುಚ್ಚುತ್ತಿರುವವಳು
ನರ್ಸ್..
ರೋಜಿ

Thursday, September 14, 2017

ಹೊಳ್ಳ ಹೊಳ್ಳಿ ಬರಬ್ಯಾಡ

ಆ ದಿನಸಿ ಅಂಗಡಿ ಶೆಟ್ರ ನೆಪ ಮಾಡ್ಕೊಂಡ
ಹೊಳ್ಳೆ.. ಮುಳ್ಳೆ.. ಅಡ್ಯಾಡಬ್ಯಾಡ ನನ್ ಕಣ್ಮುಂದ
ಬಾಳೆ.. ಬಗಸಿ ಬಿಟ್ಕೊಟ್ಟ ನಿಂದ್ರಲೇನ..
ಹುಡುಗಿ ನಿನ್ಮುಂದ
ಈ ರತಿ ರೂಪಾನ ಕುಂದ್ರಿಸಿ ಹೋಗಬ್ಯಾಡ
ನೀ.. ನನ್ನ ಕಣ್ತುಂಬ
ಆ ನಿನ್ನ ಪ್ರೀತಿದು ಗುಂಗಿ ಹುಳಾನ ಬಿಟ್ಹೋಗಬ್ಯಾಡ
ನನ್ನ ತಲಿ ತುಂಬ

ಎಷ್ಟರ ಪದ ಇಟ್ಕೊಂಡಿ ಆ ಕಣ್ಣಾಗ
ಎಷ್ಟ.. ಓದಿದ್ರೂ ನಿಲ್ಲುವಲ್ವು ಮನದಾಗ

ನಿಗಿ

ನಿಗಿ..ನಿಗಿ..ಕೆಂಡಾನು ಸುಟ್ಟ ಬೂದ್ಯಾಕ್ತೈತಿ
ನಗಿ..ನಗಿ..ನಗೊ ಬಾಯಿನು ಅಳ್ತೈತಿ

ನಿನ್ ಗತ್ತು

ತೋರ್ಸಬ್ಯಾಡ ನಿನ್ನ ಗತ್ತ
ನಿನ್ನ ಮನದಾಗ ಏನೈತನ್ನೊದ ನಂಗೊತ್ತ
ತೋರ್ಸ್ತಿಯಲ್ಲ ಎಷ್ಟರ ನಿಂದ ಕರಾಮತ್ತ

Tuesday, September 12, 2017

ಯಾಕ ತಂಗಿ

ಯಾಕ ತಂಗಿ..
ಹಿಂಗ್ಯಾಕ ಸೆಟಗೊಂಡ ಹೊಂಟಿ
ಛಲೋ ಅಲ್ನೋಡಿದು ನೀ ತಗೆಯೊ ತಂಟಿ
ನೀ ಇಲ್ದ ಒಣಗಿ ಹೊಂಟೈತಿ ಗುಲಾಬಿ ಕಂಟಿ
ನಿನ್ನ ಹೆಜ್ಜೆನ ಮಾತಿಲ್ದ ಮನಿಯಾಗೈತಿ ಒಂಟಿ
ಸೆಡವು ಮರತ ಮನಿಗ ಬಾರ ತುಂಟಿ

ಬೆಂಗ್ಳೂರಣ್ಣ ರೇಷ್ಮಿ ಸೀರಿ ಕೊಡ್ಸಿಲ್ಲಂತ
ಸಿಟ್ಟಾಗಿಯನು..
ಶಿರಶಿ ಅಕ್ಕೊರು ಚಕ್ಲಿ.. ಕೊಡ್ಬಳೆ ತಿನ್ಸಿಲ್ಲಂತ
ಕೊರಗಾಕ ಹತ್ತಿಯನು
ಗುರುಗಳು ಶಿಶುನಾಳಗೆ ಕರ್ದಿಲ್ಲಂತ
ಬ್ಯಾಸ್ರಾ.. ಮಾಡ್ಕೊಂಡಿಯನು..
ಹೋಗ್ಲಿ ಬಿಡ.. ತಂಗಿ ಈ ನಿಮ್ಮ
ಗಡಾದಣ್ಣ ಇಳಕಲ್ಲ ಚಮ್ಕಾ ಸೀರಿ ತರ್ತಾನ
ನಮ್ಮೂರ ಕತ್ರ್ಯಾನ ಬೆಲ್ಲದ ಜಿಲೆಬಿ ತಿನ್ನಸ್ತಾನ
ವಾರ.. ವಾರ ಮೈಸೂರು ಮಠದಾಗ ನಡೆಯೊ
ಸಂಜಿ ಹೊತ್ತನ್ಯಾಗ.. ನಿನವ ಛಲೊವೊ..
ನಾಕ ಕವನ ಓದಾಕ ಹಚ್ತಾನ..

ತೆಪ್ಪದಾಗ ಕುತಗೊಂಡ ತೆಪ್ಪಗಿರಬ್ಯಾಡ ನಮ್ಮವ್ವ
ಎಲ್ಲಾ.. ನೆನದ ನೆನದ ಕಣ್ಣಾಗ ಹನಿ ತಂದ್ಕೊಬ್ಯಾಡ
ಮೊದ್ಲ ಮಲ್ಗಿ ಬಳ್ಳಿ ಅದಿ ನೀನು ಇನ್ನಷ್ಟು ಸೊರಗಬ್ಯಾಡ
ಗೊತ್ತು ಗುರಿಯಿಲ್ದ ದಾರಿ ಹಿಡ್ದ ಹೊಂಡಬ್ಯಾಡ
ನೀ..ಹೊಳ್ಳಿ ಬರ್ತಿಯಂತಾನ ಕೈಯಾಗ ಜೀವ
ಹಿಡ್ಕೊಂಡು ಕುಂತಿವಿ ನೀ ಇದನ್ನ ಮರಿಬ್ಯಾಡ

ಬಿಟ್ಯಾಕ ಹೋದಿ.. ನನ್ ಮರತ

ಬಿಟ್ಟ್ಯಾಕ ಹೋದಿ ನನ್ ಮರೆತ...
ಯಾರು ಇಲ್ಲ ಈ ಜಗದಾಗ ನಿನ್ನ ಪರತ
ಹ್ಯಾಂಗರ ಇರ್ತೀ ನೀ.. ನನ್ನ ಹೊರತ
ಸೇರೊನು ಬಾರಾ.. ಹಾಲು ಜೇನ್ಹಂಗ
ಒಂದಾಗಿ ಬೇರೆತ
ಅರಿತ ಬಾಳಿದ್ರ... ನಮ್ಮಿಬ್ರಿಗೂ ಒಳಿತ

ಪ್ರೀತಿ ಹಾಲಿಗೆ ಹೆಪ್ಪ ಹಾಕೋದ ಬಿಟ್ಟು
ಉಪ್ಪ.. ಹಾಕಿ ಹೋಗೊದೇನ
ನಂಬ್ಕಿ ಮಡ್ಕಿಗೆ ತೂತು... ಹಾಕಿದ್ದು ಮರಿತೇನ
ಯಾರ್ದರ ಮಾತಿಗೆ ತಾಮ್ರದ ಕಿವಿ ಕೊಟ್ಟ
ಕೆಡ್ಸಕೊಂಡಿ ಯಾಕ ನಿನ್ನ ನಡ್ತಿ
ಬೆಲ್ಲದ ಮಾತನ್ಯಾಗ ವಿಷ ತುಂಬೊದ್ನ
ನೀ.. ಯಾರಿಂದ ಕಲ್ತಿ..

ಪ್ರೀತಿ ಬಳ್ಳಿ ಇಷ್ಟೇತ್ತರಕ್ಕ ಬೆಳಸಿ... ಹೂವಾ
ಬಿಡೊ ಮುಂದ.... ಅದನ್ಯಾಕ ಚಿವುಟಿದಿ
ಬದುಕಿನ ಅಂಗಳ್ದಾಗ... ಕನಸಾ ಕಂಡ...
ಬಿಡಿಸಿದ ರಂಗೋಲಿಗೆ.... ನೀರ..ರ ಯಾಕ ಸುರ್ದಿ...
ನಿನ್ನ ನಗುವಿನಾ ರೂಪಾನ... ಹೊತ್ಕೊಂಡ ತಿರ್ಗತೀದ್ದ
ನನ್ನೇದಿ ಕನ್ನಡಿನ.. ಯಾಕರ ಒಡ್ದಿ..

ನಿನ್ನ ನೆಪ್ಪನ್ಯಾಗ ನೆಂದ.. ನೆಂದ..ತುಕ್ಕ
ಹಿಡಿಯಾಕ ಹತ್ತೈತಿ..ಈ ಪ್ರೀತಿಯ ಕಂಬಿ
ಹೋಗಬ್ಯಾಡ ನೀ ಹಿಂಗ.. ಮನಸಿನ
ಮಡಿಕ್ಯಾಗ ನೋವಿನ ಬ್ಯಾನಿ ತುಂಬಿ...
ಬಾಳೆನರ.. ಹ್ಯಾಂಗ ಮಾಡ್ಲಿ ನಾನು..ನೀನಿಲ್ದ
ವಿಷಾ ತುಂಬಿದ ಈ ಜಗತ್ತನ್ನ ನಂಬಿ...

Sunday, September 10, 2017

ನಾನೆಂದೂ ಸತ್ತಿಲ್ಲ

ಬಯಸಿ.. ಬಯಸಿ ಪಡೆದ ಸಾವಲ್ಲ
ನಿನ್ನಳಿಸಲೆಂದೇ.. ನಾನಿಲ್ಲಿ ಮಲಗಿಲ್ಲ
ತುಂಬು ಪ್ರೀತಿಗೆ ಯಾರ ಕಣ್ಣು ತಾಕಿತೊ.. ಗೊತ್ತಿಲ್ಲ
ಎಷ್ಟೆ ಬೇಡಿದೆ..... ಜವರಾಯ ಮಾತ್ರ ಬಿಡಲಿಲ್ಲ

ನಿನ್ನ ಮುಡಿಗೇರಬೇಕಿದ್ದ ಸುಮಗಳೆಲ್ಲ
ನನ್ನ  ಗೋರಿಯ ಮೇಲಿವೆ
ಕಂಡ ಕನಸುಗಳೆಲ್ಲ ನನಸಾಗದೆ
ನನ್ನೊಡನೆ ಹೂತು ಮಲಗಿವೆ

ನಡು ದಾರಿಯಲ್ಲಿಯೆ ಬಿಟ್ಟು ಬಂದಿರುವೆ

ನಿನಗೆಂದೆ ಕೊಡುವ ಮುತ್ತು
ನನ್ನಲಿ ಉಳಿದು ಹೋಯ್ತು
ಬದುಕಿ ಬಾಳಬೇಕಾದ ದಿನಗಳೆಲ್ಲ
ಮಣ್ಣಲೆ ಬೇರೆತು ಹೊಯ್ತು
ನಿನ್ನ ಬಿಟ್ಟು ಬಂದ ಜಗವಿದು
ನೀನಿಲ್ಲದೆ ಬರಿದಾಯ್ತು

Saturday, September 9, 2017

ಏನೀ ಬಾಳು

ಏನೀ.... ಬಾಳು
ಮಾಯಾನಗರಿಗೆ ಬಂದರೂ...
ತಪ್ಪುತ್ತಿಲ್ಲವಲ್ಲ ಗೋಳು
ಬರವು ಹಳ್ಳಿಯ ಬದುಕನ್ನೆ
ಮಾಡಿದೆಯಲ್ಲ ಹೋಳು
ನೆರೆಯು ತುತ್ತಿನ ಚೀಲದೂರಿಗೂ...
ತುಂಬಿಸಿಬಿಟ್ಟಿತಲ್ಲ ಹೂಳು

ಅರಿವಿಲ್ಲದಾಯಿತೆ ವರುಣ..
ನಮ್ಮೂರಿನಲ್ಲಿ ನೀನೀತ್ತ ಹಸಿವಿನ ಸಂಕಟ
ನಿನಗಿಲ್ಲವಾಯಿತೆ ಕರುಣ...
ತಂದಿಟ್ಟೆಯಲ್ಲೊ ಬೆಂದೂರಿನಲ್ಲಿ
ದುಡಿಮೆಗೂ ಕಂಟಕ
ನಿನಗರಿವಾದಿತೊ...ಬೀದಿ ಕಾಮಣ್ಣರ ಕಣ್ತಪ್ಪಿಸಿ
ಬದುಕುವ ಬದುಕಿನ ಸಂಕಷ್ಟ

ಹುಟ್ಟಿದೂರಿನಲಿ ವಲೆಗೆ ಬೆಂಕಿಯ
ಹಚ್ಚಲು ಶಕ್ತಿಯ ನೀಡಲಿಲ್ಲ
ವಲಸೆ ಬಂದಲ್ಲಿ ವಲೆಯ ಹಚ್ಚಲು.. ನೀರು
ಸುರಿಸಿ.. ಆರಿಸಿ ನಿನ್ನ ಕುಯುಕ್ತಿ ಬಿಡಲಿಲ್ಲ
ತೋಯ್ದ ಬಟ್ಟೆಗಳೊಂದಿಗೆ ನಿನ್ನ ಹನಿಗಳಲಿ
ನೆನೆಯುತ್ತ ಸೂರಿಲ್ಲದೆ ಸಾಗುತಿಹುವೆವಲ್ಲ

ನಮಗಿನ್ನೂ... ಬದುಕುವ ಆಸೆಯಿದೆ
ಬದುಕ ಕಟ್ಟಿಕೊಳ್ಳುವ ಛಲವಿದೆ
ಊರ ಶೆಟ್ಟರಂಗಡಿಯ ದಿನಸಿ ಬಾಕಿಯನ್ನು
ಚುಕ್ತಾ ಮಾಡುವ ದುರಾಸೆಯಿದೆ
ಕರುಳ ಬಳ್ಳಿಗಳ ಓದಿಸಿ ನಮ್ಮ ಕಷ್ಟಗಳಿಗೆ
ಅವರ ಕೈಯಿಂದಲೆ...ಮುಕ್ತಿ ಹಾಡಿಸಬೇಕೆಂಬ
ಮಹದಾಸೆಯಿದೆ

ಬದುಕಬೇಕಿದೆ ನಾವು.. ನಾಳೆಗಳ ಗೆಲ್ಲೋಕೆ
ಮೆಟ್ಟಬೇಕಿದೆ ನಾವು ನೀ ಕೊಟ್ಟ ಕಷ್ಟಗಳ
ಬರುವ ಬದುಕಿನ ಹಾದಿಯ ಹಸನಾಗಿಸೋಕೆ

ನಗಿ ಬಾವ್ಯಾಗ ಬಿದ್ದಾಂವ

ಬಾವಿಕಟ್ಟಿ ಮುಂದ ನೀ ನನ್ನ
ನೋಡಿ ನಕ್ಕಿದ್ದು ಸುಳ್ಳಲ್ಲ
ಆ ನಗಿ ಬಾವ್ಯಾಗ ಸದ್ದಿಲ್ದ ಬಿದ್ದಾಂವ
ನಾನಂತ ಇಲ್ಲೆ ಯಾರಿಗೂ.. ಗೊತ್ತಿಲ್ಲ
ಎಷ್ಟ ಬಿಂದ್ಗಿ ನೀರ ಸೇದಿ ಸುರಕೊಂಡ್ರೂ
ನಿನ್ನ ನಗಿ ಮತ್ತ.. ಇಳಿತಿಲ್ಲ

ಹಾದಿ ಮೂಲ್ಯಾಗ ನಿಂತ್ಗೊಂಡ ಜಿಂಕಿ
ಕಣ್ಣಿಲೆ ಎಷ್ಟರ ಪ್ರೇಮದ ಬಾಣ ಬಿಟ್ಟಿ
ಹಗಲ್ಯಾವ್ದೊ... ರಾತ್ರಿಯಾವ್ದೊ...ಕಣ್ಣಿಗೆ
ಪುರಸೊತ್ತ ಇಲ್ದಂಗ ನಿದ್ದಿಗೆ ಕೊಳ್ಳಿ ಇಟ್ಟಿ
ಕಣ್ಣಿದ್ದೂ.. ಕುರ್ಡನಂಗ ಅಡ್ಯಾಡಕ ಹಚ್ಚಿಯಲ್ಲ
ನನ್ನ.... ಕಣ್ಣಿಗೆ ನಿನ್ನ ಪ್ರೀತಿ ಬಟ್ಟಿಯ ಕಟ್ಟಿ

ಎದಿಯಾಗ ಎಷ್ಟ ಭಾರ ಆಗೈತಿದು
ನಿನಗ ಹೇಳುವಂತ‌ ಮಾತ... ಒಂದು
ಕೇಳಿಯೂ... ಕೇಳ್ದಂಗ ಹೋಗ್ಬ್ಯಾಡ ನೀನು
ಪ್ರೀತಿ ಹಾದ್ಯಾಗ ಕಾದ ಕುಂತ ಹಕ್ಕಿನ ಕೊಂದು
ಬಾಳೊದ ಆಗೋದಿಲ್ಲ ನಂಗ... ವಲ್ಲೆನ್ನೊ
ನೋವಿನ ಬೆಂಕ್ಯಾಗ ಬೆಂದು ನೊಂದು

ನಿನ್ನ ನಗಿ ಬಾವ್ಯಾಗ ಬಿದ್ದಾವ್ನ
ಮುಳಗುಸ್ತೀಯೊ... ತೇಲಸ್ತಿಯೊ...ಹೆಂಗೊ.?
ತಲಿಬಾಗ್ಲದಾಗ ಅಕ್ಕಿ ತುಂಬಿದ ಸೇರಿಟ್ಟಿನಿ
ಒದ್ದ ಒಳಗ ಬರ್ತೀಯೊ...‌.
ನಿನ್ನ ನಂಬಿ ಕುಂತ ಎದಿಮ್ಯಾಲ ಕಾಲಿಟ್ಟ
ಅದರ ಉಸುರ ನಿಲ್ಲಿಸಿ ಹೋಗ್ತಿಯೊ...

Monday, September 4, 2017

ಸೇಡವು

ಎಷ್ಟರ..ಸೇಡವು ನನ್ನ ಮ್ಯಾಲೆ
ಮುಡಿಗೆ ತೊಡಿಸ್ಲೇನ ಹೂವಿನ ಮಾಲೆ
ಕೇಳ್ಲಿಲ್ಲಂತ ಸಿಟ್ಟಾಗಬೇಡ ನೀನು ಆಮೇಲೆ
ಆ ಮೊಗದಾಗ ನಗುವಿನ ಮಲ್ಗಿನ.. ಇಲ್ಲಂದ್ರ
ನಾ ಹ್ಯಾಂಗರ ಬದುಕಿರ್ಲಿ..ಈ ಭೂಮಿ ಮ್ಯಾಲೆ

ಮನದಾನ ಸಿಟ್ಟನ್ನ ಕನಸಿಗ್ನೂ
ಯಾಕ ಕಲಿಸಿದಿ
ಕನಸನ್ನು ಕಸಗೊಂಡು ರಾತ್ರಿ
ನಿದ್ದಿ ಯಾಕ ಮರೆಸಿದಿ
ನೆನಪಿನ ಭಾರನ ಎದಿಮ್ಯಾಲ
ಅದೇಷ್ಟು ಹೊರಿಸಿದಿ
ನೋವಿನ ನೀರು ಎಷ್ಟ ಕಹಿಯಂತ
ನೀ ಏನ ತಿಳಿದಿ
ನನ್ನ ಕಣ್ಣೀರಾಗ ನಿನ್ನ ಕಣ್ಣನ್ನರ ತೊಳ್ಕೊ...
ತಿಳಿಯಾಗ್ಲಿ ನಿನ್ನ ಕಣ್ಣಾನ ಹಳ್ದಿ

ಮುಚ್ಚಿಟ್ಟಿದ್ದು ಭಾಳ ದಿನ ನಿಂದ್ರಂಗಿಲ್ಲ
ಹಳಸಿ ಹೊಕ್ಕೈತಿ
ಪ್ರೀತಿ ಉಸಿರ ತಡೆ ಹಿಡ್ಕೋಬ್ಯಾಡ
ತಡ ಆದ್ರ ಅದರ ಉಸಿರ ನಿಲ್ತತೈತಿ
ಜೇನು ಹೂವಿಗೆ ಮುತ್ತು ಕೊಟ್ರ..ಹೂ
ಅರಳಿದ್ದು ಸಾರ್ಥಕ ಆಕ್ಕೈತಿ
ನನ್ನ ಹೂವಿನ ಜೊತೆ ನಾನು ಬಾಳೆ ಮಾಡಿದ್ರನ
ಬದುಕಿಗೊಂದು ಅರ್ಥ ಬರತೈತಿ..

Sunday, September 3, 2017

ಗುರುಗಳೆ

ಬೆತ್ತದ ರುಚಿಯಲಿ
ಬತ್ತದ ಅಕ್ಷರಗಳ ಕಲಿಸಿದವರು
ಗೆಜ್ಜೆಗಳ ನಾದದಲಿ
ಗೋವಿನ ಹಾಡನು ಹಾಡಿಸಿದವರು
ಒಂಟಿ ಕಾಲಲೆ ನಿಲ್ಲಿಸಿ
ಸಾಲು ಸಾಲು ಮಗ್ಗಿಗಳ ಕಲಿಸಿಕೊಟ್ಟವರು

ಹಗಲಿರುಳು ತಮ್ಮ ತಾ ಸುಟ್ಟುಕೊಂಡು
ನಮ್ಮ ಬಾಳಿಗೆ ಬೆಳಕ ಚೆಲ್ಲಿದವರು
ಬಗ್ಗದ.. ಜಗ್ಗದ ದಡ್ಡ ಕಬ್ಬಿಣಗಳ
ಕಾಯಿಸಿ..ಕಾಯಿಸಿ ರೂಪವ ಕೊಟ್ಟವರು
ಜೀವನದ ಹಾಳೆಯಲಿ ತಪ್ಪುಗಳನೆಲ್ಲವ
ಅಳಿಸಿ.. ಮರಿಸಿ..ಒಳ್ಳೆಯದಕ್ಕೆ ಮುನ್ನುಡಿಯ
ಬರೆದವರು

ಬೆಟ್ಟ ಗುಡ್ಡಗಳ ಸುತ್ತಾಡಿಸಿ.. ಪ್ರಕೃತಿಯ ಮಡಿಲಲಿ
ಬೇರಸಿ.. ಮಲಗಿಸಿ ಮಾಸದ ಅನುಭವವ
ಕಟ್ಟಿಕೊಟ್ಟವರು
ಗೆಲುವೆಂದರೆ ಅದು ನಿನ್ನಿಂದ ಎಂಬ
ಹುರುದುಂಬಿಸುವ ಮಾತುಗಳಿಂದ ಕ್ರೀಡೆಗಳಿಗೆ
ಕಳಿಸುತ್ತೀದವರು
ನಮಗಾಗಿ ಬದುಕುವುದು ಬದುಕಲ್ಲ..
ಇನ್ನೊಬ್ಬರಿಗಾಗಿ ಬದುಕುವುದು ಬದುಕೆಂದು
ಬದುಕಿ ತೋರಿಸಿಕೊಟ್ಟವರು

ಜಡವಾದ ಕೊರಡಾಗಿದ್ದೇನ್ನನು.. ನೆಟ್ಟು
ಜ್ಞಾನದ ನೀರೆರೇದು ಪೋಷಿಸಿದವರು
ಮನಸಿನ ಕಲ್ಮಷವನು ಶಿಕ್ಷಣದ ಗಂಗೆಯಲಿ
ತೊಳೆದು ಸನ್ಮಾರ್ಗವ ತೋರಿದವರು
ಸಮಾಜಕ್ಕೆ ನೆರಳಾಗಿಸಿ.. ದೇಶಕ್ಕೆ ಉತ್ತಮ
ಫಲಕಾರ್ಯಗಳ ನೀಡುವಂತೆ ರೂಪಿಸಿದವರು

ಗುರುಗಳೆ...ನೀವು ಬಿತ್ತಿದ ಪದ ಪದಗಳಿಗೂ
ನಾನವ ಬೆಲೆಯ ಕಟ್ಟಲಿ... ಅದಾವ ರೀತಿಯಲ್ಲಿ
ಗುರು ಕಾಣಿಕೆಯನರ್ಪಿಸಲಿ...