ನಾನು ಸಾಕು...
ಸಾಕೆಂದರೂ.. ಬಿಡದೆ
ಒಲವ ಮಧುವ
ತುಂಬಿಸುತ್ತಿದ್ದಳೆನ್ನೆದೆಗೆ
ತುಟಿಗೆ ತುಟಿಯನೊತ್ತಿ
ಸಾಕಿ...
ಅತಿಯಾದದ್ದು ವಿಷವಂತೆ...
ಒಣಗುತಿರುವೆನೀಗ...
ಅವಳೊಲವ ಹನಿಯೂ
ಇಲ್ಲದಂತೆ
ಬಾಯಾರಿ...
Monday, February 26, 2018
ಶಾಯರಿ ೨೧
ಶಾಯರಿ ೧೯
ಅವಳ ಒಂದು
ಕಣ್ಣಿನ ಹೊಡೆತಕೆ
ಗಾಯಗೊಂಡು..
ಬಿದ್ದಿರುವೆ..
ನಿನ್ನ ಮಡಿಲಲಿ
ಸಾಕಿ...
ಎರಡು ಕಣ್ಣುಗಳಲಿ
ಹೊಡೆದಿದ್ದರೆ...
ಮುಚ್ಚಿರುತ್ತಿದ್ದರೇನೊ..?
ಗುಂಡಿಯಲ್ಲಿ..
ಮಣ್ಣನ್ನು ಹಾಕಿ
ಶಾಯರಿ ೨೦
ಅವಳು ನಗುತಿರುವಾಗ
ಒಂದು ಹೂವನಾದರೂ
ಅರಳಿಸಿ ಕೊಡಲಿಲ್ಲ
ಆ...ಗುಲಾಬಿಯ
ಕಂಟಿ....
ನಗುತಿಹುದು..
ಮೈ ತುಂಬಾ
ಮುಳ್ಳುಗಳನೆ
ಹೊದ್ದುಕೊಂಡು
ಮಾಡಿ ನನ್ನನು
ಒಬ್ಬಂಟಿ
ಶಾಯರಿ ೧೮
ಎದೆಯ ಗೂಡಿನಲ್ಲಿ
ಅದೇಷ್ಟೊ ಕನಸಿನ
ಮೊಟ್ಟೆಗಳಿವೆ
ಸಾಕಿ...
ಕಾವಿಟ್ಟು...
ಜನ್ಮ
ನೀಡಬೇಕಾದವಳೆ
ಹಾರಿರುವಳು..
ಕೈಗೆ ಸಿಗದ
ಹಾಗೆ
ಶಾಯರಿ ೧೬
ಅವಳಿಲ್ಲದ ಈ
ಎದೆಬುಟ್ಟಿಯು...
ಬರಿದಾಗಿದೆ
ಸಾಕಿ...
ಅರಳಿದ ಸುಮಗಳು
ನಗುತಿಹವು ಈಗ...
ನನ್ನನ್ನೆ..... ದಿಟ್ಟಿಸಿ
ನೋಡಿ
Saturday, February 24, 2018
ಶಾಯರಿ ೧೭
ಈ ಕ್ಷಣಗಳಲ್ಲೂ...
ಅದೇಷ್ಟು ವಿಷವ
ತುಂಬಿರುವಳವಳು
ಸಾಕಿ...
ಕಳೆಬರದಂತಹ
ಹೊತ್ತುಗಳ
ಮರೆಯಲೆ...
ಬಿಡುತ್ತಿಲ್ಲ
ಉಸಿರುತ್ತಿರುವ
ಘಳಿಗೆಗಳು
Friday, February 23, 2018
ಶಾಯರಿ ೧೫
ನಿನ್ನ ಮಧು
ತುಂಬಿದ ಬಟ್ಟಲು
ಸಿಗದೇ ಹೋಗಿದ್ದರೆ
ಸಾಕಿ...
ದವಾಖಾನೆಯಲಿ ಕುಡಿದ
ಮದ್ದಿಗೆ... ನಾನೆಂದೊ
ಗೋರಿಯಾಗಿರುತ್ತಿದ್ದೆ.
ಶಾಯರಿ ೧೪
ಅವಳು ನೀಡಿದ
ನೋವಿಗೆ
ಶರಣಾಗುವರಲ್ಲ ....
ಪ್ರೇಮದಾಸರು
ಸಾವಿಗೆ...
ಸಾಕಿ..
ಶರಣಾಗಿದ್ದರೆ
ಸಾಕಿತ್ತಲ್ಲವೆ
ನಿನ್ನ
ಮಧುಬಟ್ಟಲಿಗೆ
ಶಾಯರಿ ೧೩
ಅವಳಿಗೆ ಹೇಳದೇ...
ಉಳಿದ ಮಾತೊಂದು
ತುಟಿಯಂಚಲೇ ಸತ್ತಿತ್ತು...
ಸಾಕಿ...
ನಿನ್ನ ಮಧು ಬಟ್ಟಲಿನ
ಸ್ಪರ್ಶಕೆ ಮತ್ತೆ ಜೀವ
ಬಂದಿತ್ತು...
ಏನು ಮಾಡಲಿ?
ಅವಳಿಗೀಗಾಗಲೇ
ಮದುವೆಯಾಗಿಬಿಟ್ಟಿತ್ತು.
ಶಾಯರಿ ೧೨
ನೆಮ್ಮದಿಯ ದಿನಗಳಿಗೆ
ನಿದಿರೆಯಿಲ್ಲದ ಕಿಚ್ಚನು
ಹೊತ್ತಿಸಿ ಹೋದಾಕಿ
ಆಕಿ....
ಮಡಿಲಲ್ಲಿ ಮಗುವಂತೆ
ಮಲಗಿಸಿ... ಮಧುವ
ಸುರಿದು ಎದೆಯ
ತಣ್ಣಗಾಗಿಸಿದವಳು
ನೀನೆ ಸಾಕಿ...
ಶಾಯರಿ ೧೧
ಸತ್ತ ಕನಸುಗಳಿಗೆ
ಕೊಳ್ಳಿಯಿಡುವುದೇಕೆ ?
ಸಾಕಿ...
ಅವಳಾಗಲೆ
ನಡೆದಿರುವಳಲ್ಲ..
ವಿರಹದ
ಬೆಂಕಿಗೆ ನನ್ನನು
ನೂಕಿ..
Thursday, February 22, 2018
ಲಟ್ಟಣಿಕೆ
ತೋರಿಸಬ್ಯಾಡ ನಿನ್ನ ಲಟ್ಟಣಿಕೆ
ಹತ್ತಬೇಕಾದಿತು ನಾನು ಮಾಳಗಿಯ ನಿಚ್ಚುಣಕೆ
ಮರೆತು ಬಂದಿರುವೆ ನೀ ಆಜ್ಞಾಪಿಸಿದ ಕಾಣಿಕೆ
ನಾಳೆ ತಪ್ಪದೆ ತಂದುಕೊಡುವೆ ತಂಪಗಾಗೆ ಚಂದ್ರಿಕೆ
ಬಾರಿಸದಿರು... ಲಟ್ಟಣಿಗೆಮೇಳ
ತಾಳಲಾರದು ದೇಹವಿದು ನೀ...ಮಿಡಿಯುವ ತಾಳ
ಅರಿವಾಗುತಿಲ್ಲವೇನೆ ತಲೆಯಲೆದ್ದ ಗಂಟುಗಳ ಗೋಳ
ನೋಯ್ತಾವ ಕಣೆ ಖಂಡಗಳು.... ಹೊಡಿಬೇಡ ನಿ ಬಹಳ
ನಿನ್ನ ಕೋಪದ ತಾಪಕೆ ತೊಡೆ ತಟ್ಟಿ ನಿಲ್ಲಬಲ್ಲೇನೇನೆ
ನಾನು...| ಕಾಳಿ ಕಣ್ಣಿನ ಅಗ್ನಿ ದೃಷ್ಟಿಯೊಂದೆ ಸಾಕು
ನಾ ಸುಟ್ಟು ಬೂದಿಯಾಗಲು..| ಅದಾವ ಭಟ್ ರ ಹಾಡ
ಹಾಡಿ...ಮೈಸೂರು ಸಿಲ್ಕ ಸಾರಿಯನ್ನ ಅರ್ಪಿಸಲಿ..
ಮೂಲೋಕದೊಳದಾವ ಗಂಡುಗಳುಂಟು ಚೆಲುವೆ,
ನಿನ್ನಾಯುಧವನೇದುರಿಸಿ ನಿಲ್ಲುವ ಭಂಟರು
ನಾನೊ... ನಿರಾಯುಧ, ಶಾಂತಿದ್ಯೂತಕ....ನಿನ್ನ ಸೀರೆಯ ಸೆರಗಂಚಲ್ಲದೆ, ಇನ್ನಾವುದನು ಎತ್ತಲಾರದಷ್ಟು ಅಮಾಯಕ
ಶಾಂತಳಾಗು ದೇವಿ.. ರಾತ್ರಿಗೆಲ್ಲ ಹಾಡುವೆ ಪ್ರೇಮಾಯಣ
ಕಡಕೊಟ್ಟದಾರೂ ಸರಿ ತಂದು ಹೂಡುವೆ ಮನ್ಮಥನ ಬಾಣ
ಖರ್ಚಿಲ್ಲದ ಪ್ರೀತಿಯ ಸುರಿಸಲು ನಾನಲ್ಲ ಜಿಪುಣ
ಮಡಿಲಿಗೆ ಬಂಗಾರದ ಬೊಂಬೆಯ ಕೊಡಬಲ್ಲನೀ..ನಿಪುಣ
ಶಾಯರಿ ೯
ಅವಳ ಮಾತುಗಳೆಲ್ಲವು
ಎದೆಯ ನೆತ್ತರನೆಲ್ಲವ...
ಬತ್ತಿಸಿಬಿಟ್ಟಿದೆ
ಸಾಕಿ...
ಚೂರು ಮದ್ಯವಾದರೂ..
ಬಿಟ್ಟು ಬಿಡು ಬಾಯಿಗೆ..
ಚಿಗುರೊಡೆಯುವೆ ಮತ್ತೆ
ನಿನ್ನ ತುಂಟಿಯಂಚಲಿ
ಮಿಂಚ್ನಗುವನು....
ಕಾಣುವಾಸೆಗೆ
ಶಾಯರಿ ೮
ನೆಚ್ಚಿದವಳು...
ನಂಜಾದಾಗ
ವಿಷಕೊಟ್ಟಾದರೂ ಸರಿ...
ಬದುಕಿಸುವೆ
ನೆಂದವಳು ನೀನೆ
ಸಾಕಿ...
ಹಾಲಂತ ನಗುವಲ್ಲಿ..
ಹಾಲಾಹಲವ
ತುಂಬಿ..ತಣ್ಣಗೆ
ಮಲಗಿಸಿಬಿಟ್ಟವಳು
ಆಕಿ...
ಶಾಯರಿ ೭
ಆ ಮೂಲೆಯ
ನೀರಿನ ಬಿಂದಿಗೆಗೂ...
ನಾಚಿಕೆ ಬಂದಿತ್ತೇನೊ...?
ನೀರಿಗಿಂತಲೂ ನಿನ್ನ
ಕೈಯೊಳಗಿನ ಮದಿರೆಯನ್ನು..
ನಾ ಕುಡಿದದ್ದನ್ನು ಕಂಡು..
ಅದಕ್ಕೂ... ಹೊಟ್ಟೆ ಕಿಚ್ಚಾಗಬಹುದಲ್ಲವೆ..?
ಒಂದಲ್ಲ ಒಂದು ದಿನ
ಅವಳ ನೆನಪಲ್ಲಿ
ಸುಟ್ಟ ನನ್ನ ಬೂದಿ... ಅದರ
ಒಡಲಲ್ಲಿ ಸೇರುವುದೆಂದು...!!!
ಸಾಕಿ.....
ಶಾಯರಿ ೧೦
ನಿನ್ನ
ನೋಟಕ್ಕಿಂತಲೂ
ಹರಿತಾದುದು
ಯಾವುದಿಹುದು
ಚೆಲುವೆ..
ಒಪ್ಪಿಬಿಡು...ಈ
ಬಡವನೊಲವನು..
ಆ ಕಣ್ಣ ಕುಡಿ ನೋಟದೇಟಿಗೆ
ಸಾಯುವ ಮುನ್ನವೆ...
Wednesday, February 21, 2018
ಉರಿದು ಹೋಗಲಿ
ಇರುಳ ಕನಲಿಕೆಗಳ ಕಾಟವ ತಾಳಲಾರದೆ
ಸುಳಿಗಾಳಿಯ ತಂಪಿಗೆ ನರಳಲಾರದೆ
ಸುಂಯ್ಯಗುಡುವ ಸೊಳ್ಳೆಯ ಸದ್ದನು ಸಹಿಸಲಾಗದೆ
ಮಂದ ದೀಪದ ಬೆಳಕಿನ ಕಾವನ್ನು ತಡೆಯಲಾಗದೆ
ನಿನ್ಹೆಸರಿನಲಿ ಮಾಡಿರುವೆನಲ್ಲ ಜಾಗರಣೆ
ಉರಿವ ತನುವಿಗೆ ತಣ್ಣೀರನು ಸುರಿದುಕೊಂಡು,
ದಿನವು ಜಡೆಯಾಗಲು ಜಗಳವಾಡುವ ಹೇರಳುಗಳನು ಸಡಿಲಿಸಿ..
ಮೂಡಣವು ಚೆಲ್ಲಿದ ಬಂಗಾರ ಬೆಳಕಿಗೆ ಮೈಯೊಡ್ಡಿ,
ಕಾದಿರುವೆ ತಲೆಬಾಗಿಲ ಚೀಲಕದ ಸದ್ದಿಗೆ
ಕಿವಿಗಳನು ಕಾಯ್ದಿರಿಸಿ
ವಿರಹದೊರೆ ಕೊಳಲ್ಪಿಡಿದವನಿಗೂ ಹಚ್ಚಿರುವೆ ದೀಪ
ಕರುಣಿಸಿ...ಕರಗಿಸಲಿ ನಿನ್ನೆದೆಯೊಳಗಿನ ಕೋಪ
ಕೊನೆಯಾಗಲಿ ಈ ಘಳಿಗೆಗೆ ನಿನ್ನ ಕಾಯುವಿಕೆಯ ಜಪ
ಬಂದಾಗ ನಿನಗರಿವಾಗುವುದು ನನ್ನೊಳಗಿನ ತಾಪ
ತೋರಿಸಿಬಿಡು..ನೀನಾಗ ಈ ಬೆಲ್ಲದ ಗಲ್ಲದಾ.... ಮೇಲೆ
ನಿನ್ನೆಲ್ಲ ಪ್ರತಾಪ
ತೊಟ್ಟ ಬಳೆಗಳಲ್ಲೊಂದೆರಡಾದರೂ ವಡೆದು ಬಿಡಲಿ...
ಹರಡಿದ ಧೂಪದ ಸುವಾಸನೆಯು... ನಮ್ಮಿಬ್ಬರ
ಮೈ ಬೇವರಿಗೆ ನಾಚಿಕೊಳ್ಳಲಿ
ತಿಳಿ ಬೆಳಕು ಧಗಧಗನೆ ಉರಿದುಕೊಳ್ಳಲಿ,
ನಮ್ಮೊಳಗಿಬ್ಬರಲಿ ಹೊತ್ತಿದ ಉರಿಯು... ತಣ್ಣಗಾಗಿಬಿಡಲಿ
Tuesday, February 20, 2018
ಶಾಯರಿ ೬
ಹೊತ್ತುಗಳಿಗೂ..ಸುಳ್ಳು
ಹೇಳುವುದನ್ನು ಕಲಿತದ್ದು
ಅವಳಿಂದಲೆ
ಸಾಕಿ..
ಉರಿಯುವ
ಸಮಯಕ್ಕೆ
ಸುಳ್ಳಿನ ತುಪ್ಪವನು
ಸುರಿಯುತ್ತಲೆ ಇರುವೆ..
ಇನ್ನರೆಘಳಿಗೆ...
ಅವಳು
ಬರುವಳಲ್ಲ ಎಂದು...
ಶಾಯರಿ ೫
ಹೇಗೆ ಮರೆತುಬಿಡಲಿ
ಕಪ್ಪು ತುಟಿಯೆಲನ್ನಧರವ
ಕಚ್ಚಿ.. ಮೈಯನ್ನು ಬೆಚ್ಚಗಾಗಿಸಿದ
ಘಳಿಗೆಯನು..
ಸಾಕಿ
ಸುಟ್ಟುಕೊಂಡು ಬಿಡಲೆ..?
ನನ್ನ ನಾನೆ...
ಅವಳಿಲ್ಲದ ಈ
ಹೊತ್ತು
ನನ್ನೀಗ
ಬೇಯಿಸುತಿರುವಾಗ
ಶಾಯರಿ...೪
ಅವಳ ತುಟಿಯು...
ಕೆಂದುಟಿಯದ್ದೆ ಆಗಿದ್ದರೂ
ಸುರಿದದ್ದು ನನ್ನೆದೆಗೆ
ಇಳಿಸಲಾಗದ ವಿಷವನ್ನು
ಸಾಕಿ...
ಬಟ್ಟಲೊಳಗಿನ ಮಧುವು
ಕಪ್ಪೆ...ಆಗಿದ್ದರೂ...
ಅಲ್ಪವಾದರೂ
ಇಳಿಸಿತ್ತು ಅವಳ
ನಶೆಯನ್ನು..
Monday, February 19, 2018
ಗಜಲ್ ೧
ನಿನಗೆಂದೂ... ಅರ್ಥವಾಗದು ಗೆಳೆಯ
ಮನದ ಗೂಡಿಗೆ ಅವಳು ಕೊಳ್ಳಿಯಿಟ್ಟ ವಿಷಯ
ಮತ್ತೆ ಅತ್ತು ಗೋಗರೆದು ತರಬಲ್ಲೆಯಾ ? ಗೆಳೆಯಾ..
ಅವಳೊಂದಿಗೆ ನೀರಂತೆ ಹರಿದು ಹೋದ ಹರೆಯದ ಸಮಯ
ಮನದ್ಗಡಲಲವಳೆಬ್ಬಿಸಿದ ಸುಳಿಯ ಸೆಳತೆವ ನೀನೇನು ಬಲ್ಲೆಯೊ ಗೆಳೆಯ...
ಮೋಹದ ತಿರುವಿಗೆ ಸಿಕ್ಕ ನನ್ನನ್ನು ಕೈ ಹಿಡಿದೆತ್ತುವೇಯಾ ?
ಹೂವಿನೊಳಗು ವಿಷದ ರಸವಿರುವದ ನೀ ಕಾಣೆ ಗೆಳೆಯ
ಸವಿಯಂದೆ ಸವಿದ ಒಡಲಿಂದು ಧಗಧಗಿಸುತಿಹುದು ಆರಿಸುವೇಯಾ...?
ಸುಟ್ಟ ಗಾಯಕೆ ಮುಲಾಮು ನೀನಾಗಬಲ್ಲೆಯೇನೊ ಗೆಳೆಯಾ...
ಅವಳೊಲವ ಮದ್ದಿಲ್ಲದೆ ವಾಸಿಯಾಗದೀ... ಹೃದಯ
ಗಂಗಾರ್ಪಣಕೆಂದೆ ಸುಟ್ಟು ಬೂದಿಯಾಗಿದೆ ಪ್ರೀತಿಯ ಬಳ್ಳಿ ಗೆಳೆಯಾ..
ಹರಿವ ಹೊಳೆಯೊ..ನಿಂತ ನೀರೊ..ಎಮ್ಮೆ ಮಲಗಿದ ಕೆಸರಲ್ಲಾದರೂ ಸರಿ ಒಮ್ಮೆ ಕಣ್ಮುಚ್ಚಿ ವಿಸರ್ಜಿಸಿಬಿಡು ನನ್ನ ಬೂದಿಯಾ...
ಶಾಯರಿ ೩
ಬಿಕ್ಕುತಿದೆ ಬಡವನೆದೆಯಿಂದು
ಅವಳೊಲವಿನ ಸುಧೆಯದೂ..
ವಿಷವಾಗಿ ಕೊಲ್ಲುತಿರೆ...
ಸಾಕಿ...
ಸಾಯುವ ಆಸೆಯೇನೊ...
ಇದೆ, ಅವಳ ಕಹಿ ನೆನಪುಗಳಿಗಾಗಲ್ಲ
ನಿನ್ನಮೃತದ ಮಧುವ
ಮಡಿಲಿಗಾಗಿ
Thursday, February 15, 2018
ಶಾಯರಿಗಳು ೨
ನೀ.. ಸುರಿದಿಟ್ಟ
ಮದ್ಯದ ಬಟ್ಟಲಲಿ
ಅವಳ ನಗುವಿನ ಸದ್ದೆ
ಸದ್ದು ಮಾಡುತಿಹುದು
ಸಾಕಿ....
ಒಳಗಿಳಿದ ಮದ್ಯವು
ಮತ್ತೆಯವಳ ಮತ್ತಿನ
ನಗುವನು ನೆನಪಿಸುತಿಹುದಲ್ಲ
ಎದೆಯನ್ನು ತಾಕಿ...
Wednesday, February 14, 2018
ಜೊತೆಗೂಡು ಚು ೪೧೬
ಹೆಸರೇ....
ಉಸಿರಲಿ ಬೇರೆತಿರುವಾಗ
ಅಳಿಸುವ ಮಾತೇಕೆ ಒಲವೆ..
ನನ್ನುಸಿರಿಗೆ ನಿನ್ನುಸಿರ
ಬೆಸೆದು ನೋಡು...
ಹೊತ್ತುರಿಯುವುದು ಪ್ರೇಮ
ಜ್ಯೋತಿ... ಮರೆಯದೆ
ಬಳಿಸಾರಿ ಜೊತೆಗೂಡು...
ನನ್ನುಸಿರನು ಬೇರಸಿ
ರನ್ನೆ.... ಎಷ್ಟೀದ್ದರೇನು ತಲೆಯಲ್ಲಿ ಹೇನು!!
ಬಾಚಿ, ಹೆಕ್ಕಿ ಹೊಸೆಯುವುದಿಲ್ಲವೆ ನಾನು ?
ಇರದಿದ್ದರೇನು ? ಹೇರಳುಗಳಿಗೆ ಎಣ್ಣೆ..
ನವೀರಾಗಿ ಬಾಚಿ..ಜಡೆಯ ಕಟ್ಟುವೆ ಕೇಳೆ ಜಾಣೆ
ಜಗದಲಿ ನಿನಗಿಂತಲೂ ಸುಂದರಿಯ ನಾ ಕಾಣೆ
ತುಂಬಿಲ್ಲವೆ ನಮ್ಮ ಬಾಳಲ್ಲಿ ಎಷ್ಟೊಂದು ಜೇನು !!
ತರು ಲತೆಗಳ ಮಿಲನಕರಳಿಲ್ಲವೆ ಮಡಿಲಲೊಂದು ಹೂವು
ಸಿರಿತನದ ಬೇಗುದಿಯೊಂದನು ಹೊರತುಪಡಿಸಿ
ಸುರಲೋಕದ ಸುಖವು ಸಂಕಟಗೊಳ್ಳುತಿಹುದು...
ನಮ್ಮಿಬ್ಬರ ನೋಡಿ..
ನಿನಗದೇಷ್ಟು ವಂದಿಸಲಿ ಕರುಣಾಮಯಿ...
ತುಳಿಯುವ ಸಪ್ತಪದಿ ಕಲ್ಲು ಮುಳ್ಳುಗಳ
ಹಾಸೆಂದರಿತಿದ್ದರೂ...ಕಣ್ಮುಚ್ಚಿ ನಡೆದುಬಂದೆ
ನನಗೆಂದೆ...ಹರಿದ ಸೀರೆಯ ಸೆರಗಂಚಲಿ
ಪ್ರೀತಿಯ...ಬುತ್ತಿಯನು ಕಟ್ಟಿ..ತಂದೆ
ಹೊಸ್ತಿಲಿಲ್ಲದವನ ಬೆನ್ನು ಬಿದ್ದು ಬಂದವಳೆ...
ಸೂರು... ನೆರಳಿಲ್ಲದ ತಿರುಕನಿಗೆ ಒಲಿದವಳೆ..
ಹಣಕೊಟ್ಟು ತರುವುದಿರಲಿ... ಊರ ತೋಟದ
ಹೂವೊಂದನು ಮುಡಿಸದವನಿಗೆ ಒಲಿದ ಲಕ್ಷ್ಮೀಯೆ..
ಕಾಪಾಡಿಕೊಳ್ಳುವೆ ಹುಡಿಯೊಳಗಿನ ಲೋಹಕ್ಕಿಂತಲೂ ಹೆಚ್ಚಾಗಿ
ಹೊತ್ತಿನನ್ನವ ಕುಚ್ಚಲು... ಮಣ್ಣ ಮಡಿಕೆಯೂ
ಇಲ್ಲದವನ ಮಡದಿಯಾದವಳೆ...
ಹೊತ್ತೊತ್ತಿಗಿಲ್ಲದಗುಳಿಗೆ ಬತ್ತಿದೆಯನು ಕಂದನು
ಗೀರುವ... ನೋವ ಸಹಿಸಿಕೊಳ್ಳುವವಳೆ
ನೋವೆಲ್ಲ ನನಗಿರಲಿ.. ನಗುವೊಂದೆ ನಿನಗಿರಲೆನ್ನುವವಳೆ..
ಏನು ಕೊಡಲೆ... ಮಡದಿ ನಿನ್ನೀ... ತ್ಯಾಗಕೆ
ಸರಿದೂಗುವುದೆ..ನಿನ್ನೊಲವಿಗೆ ನಿರ್ಜೀವ ಕಾಣಿಕೆ
ನೀನೊಬ್ಬಳು ಬೆಲೆ ಕಟ್ಟಲಾಗದ ಅವತಾರ ಕನ್ನಿಕೆ
ಏನಿದೆ... ನನ್ನಲಿ ನಿನ್ನೊಲವೊಂದನು ಹೊರತುಪಡಿಸಿ
ಮಲಗಿಬಿಡುವೆ ಸುಮ್ಮನೆ.... ನಿನ್ಮಡಿಲಿಗೆ, ನಿನ್ನುಸಿರಿಗೆ
ನನ್ನುಸಿರನು ಬೇರಸಿ
ಬಿಟ್ಟದ್ದು ಚು. ೪೧೮
ನಿನ್ನ ಒಲವಿನ
ಸುಳಿಯಲ್ಲಿ ಸಿಕ್ಕಿ ಬಿದ್ದದ್ದು
ನಾನೆ ಎಂದು ಎಲ್ಲರಿಗೂ
ಗೊತ್ತಿತ್ತು... ನಿನಗೂ ಸಹ..!!!
ಒಬ್ಬರದಾರೂ ಕೈ ಹಿಡಿದೆತ್ತಲಿಲ್ಲ
ನೀನಿರುವೆ ಎಂದು.
ಅವರಾರಿಗೂ...
ಗೊತ್ತೆ...ಇರಲಿಲ್ಲ
ನೀನೆಂದೊ...
ನನ್ನ ಕೈಯನ್ನು
ಬಿಟ್ಟದ್ದು..
Tuesday, February 13, 2018
ಶಾಯರಿಗಳು ೧
ನಿನ್ನ ಕೈಯೊಳಗಿನ ಅಮೃತವ
ಕುಡಿದು..ಕುಡಿದು ಸತ್ತನೆಂದರೆಲ್ಲರೂ...
ಸಾಕೀ...
ಅವರಿಗೆಲ್ಲ ಏನು ಗೊತ್ತು ?
ಅವಳಿಲ್ಲದೆ ಬಿಕ್ಕುತ್ತಿದ್ದ ಜೀವಕೆ
ಹನಿ..ಹನಿಯನು ಹಾಕಿ
ನೀ....ಉಳಿಸಿಕೊಂಡದ್ದು..!!
****
ನಿನ್ನ ಮುಂದೆ ಪದೆ ಪದೆ
ಸೋಲುತ್ತಿರುವೆ..
ಗೆಲ್ಲಲಾಗಲಂದಲ್ಲ..
ದಾಸನಾಗಲೆಂದು..!!!
ಶಾಯರಿಗಳು
ಅವಳೊಂದಿಗಿನ ಕಳೆದ ಮಧುರ
ನೆನಪುಗಳನ್ನೆಲ್ಲವ ನೆನೆದಾಗ...
ನೀ...ಸುರಿದ ಮದಿರೆಯು
ಕಹಿಯಾಗುವುದು ಸಾಕೀ...
ಬದುಕಿನ ಬಿಂದಿಗೆಗೆ ವಿರಹದ
ವಿಷವನ್ನೆ ತುಂಬಿರುವವಳಲ್ಲ....
ಬದುಕಲೇನಿದೆ ಬಾಕಿ..
ಮರೆಯುವ ಮಾತದು...ಮರತೆ
ಹೋಗಿರುವಾಗ...!!!
Saturday, February 10, 2018
ಬೆಸುಗೆ
ಗೆಳತಿ...
ಎದೆಯೊಳಗಿನ ಒಲವ ಝರಿ
ಬತ್ತಿ ಹೋಗುವುದೆಂಬ ಭ್ರಮೆಯ
ಮರೆತುಬಿಡು... ಗೊತ್ತಿಲ್ಲದಿರುವುದೆ ನಿನಗೆ ?
ಅದನ್ನು ನಾನೆ ಚಿಮ್ಮಿಸಿರುವುದೆಂದು..!!
ನಿನ್ನ ಸೌಂದರ್ಯ ಗಣಿಯ ಮುಂದೆ
ಎಂತಹ ಹಳಸಲು ಪದಗಳು... ಸ್ವರ್ಣ
ಲೇಪನವ ಹೊಂದುವವು...
ಹಾಡಲೆಂದು ಕುಳಿತಾಗಲೆಲ್ಲ ಗಂಟಲು
ಕಟ್ಟಿ ಬರುವುದು...ಸನಿಹದಲಿ
ನಿನ್ನನುರಾಗವಿಲ್ಲದುದನು ಅರಿತು..
ಮರಭೂಮಿಯನಾಗಿಸಿಕೊಳ್ಳದಿರು
ಮನವನು...ಒಲವ ಸುಧೆಯ ಎಷ್ಟೇ
ಸುರಿಸಿದರೂ... ದಾಹತೀರದ ಒಡಲದರದ್ದು...
ಬರಿಯ ಇಬ್ಬನಿಯನೆ ಅಪ್ಪಿ...
ಫಲ ಕೊಡುವ ಮಣ್ಣಾಗು...
ನನ್ಮನವ ಅರಿತು... ಟೀಸಿಲಿನ
ಪ್ರೇಮ ಕೊಂಡಿಗೆ ಬೆಸುಗೆಯಾಗು...
Thursday, February 8, 2018
ಮೀನ ಮೇಷವೇಕೆ
ಸದ್ದಿಲ್ಲದೆ ಮನದಂಗಳದಿ ಪ್ರೀತಿ
ಬಳ್ಳಿಯ ನೆಟ್ಟವಳೆ...
ಒಳಬರಲಿಂದು ಅಪ್ಪಣೆಯು ಬೇಕೆ ?
ನನ್ನೆದೆಯ ನಗುವಿನ ತಿಜೋರಿಯ
ಕೀಯನು ಹೊತ್ತೊಯ್ದವಳೆ....
ಅವಸರಿಸಿ ಬರಲು ಇನ್ನೂ..
ಮೀನ ಮೇಷವೇಕೆ ?