ಬರೀ ನಿನ್ನ ನೆನಪಿನ್ಯಾಗ ......
ಬಿರು ಬಿಸಿಲಿಗೆ ಬೆನ್ನನ್ನ ಬಂಡೆ ಮಾಡಿ
ನಮ್ಮಪ್ಪ ಹೊಲದಾಗ ಕಮತ ಮಾಡಿ
ಶಾಲೆಗೆ ಕಳಸ್ತಿದ್ದಮಗ ಕೀರ್ತಿ ತರ್ಲಂತ.
ಹೊತ್ತೊತ್ತು ಮನೆಮುಸುರಿ ತೊಳುದು
ನಮ್ಮವ್ವ ಹೊಟ್ತುಂಬ ಕೂಳ ಹಾಕ್ತಿದ್ಲು ಮಗ
ಊರಿಗೆ ಮುತ್ತಾಗ್ಲಂತ.
ಒತ್ತೊತ್ತಿ ಹತ್ತಿ ಬೀಜ ತಗದ, ದುಡುದ ನಮ್ಮಮ್ಮ
ಕೈಯಾಗ ಒಂದಿಷ್ಟು ಕಾಸ ಕೊಡ್ತಿದ್ಲು
ಮಗನ ಕುಡಿ ಬಾನ ಮುಟ್ಲಂತ
ಸಾಲಿ ಬಿಟ್ಟೆ, ತುತ್ತು ಬಿಟ್ಟೆ, ಕಾಸು ಬಿಟ್ಟೆ,
ನಿನ್ ಸಲುವಾಗಿ
ಮೂರು ಬಿಟ್ಟು ನಿನ್ ಹಿಂದ ಬಿದ್ದ ನಾನು
ಅಪ್ಪಗ ಕೀರ್ತಿ ತರಲಿಲ್ಲ
ಅವ್ವಗ ಮುತ್ತಾಗಲಿಲ್ಲ
ಅಮ್ಮಗ ವಂಶದ ಕಳಶಾಗಲಿಲ್ಲ
ಎಲ್ಲಾ ಕಳಕೊಂಡ ನಾ ಮಣ್ಣಾ ಸೇರಿನಿ
ಬರಿ ನಿನ್ನ ನೆನಪಿನ್ಯಾಗ