Tuesday, January 1, 2019

ತಮ್ಮಾ...

ಸಾಕಷ್ಟಿದ್ರು ಬೇಕು... ಬೇಕು...ಅನ್ಕೊಂತ ದೇವ್ರ
ಹುಂಡಿಗೆ ಇಷ್ಟ ಹಾಕಿ... ಅಷ್ಟ ಬೇಡೊ ಹುಳ್ಕು
ಮನಸ್ಸಿರುವಾಗ ತಿಮ್ಮಪ್ಪನ ಹುಂಡಿ ಎಂದರ
ಬರಿದಾಗ್ಬೇಕೊ ತಮ್ಮಾ...
ಗಳ್ಸಿದ್ದು.. ಇವತ್ಗಿಷ್ಟ ಸಾಕ ಅಂತಂದ, ಆಸೆ
ಮಾಡೋದ ಬಿಡಲಾರ್ದನ ಕುಬೇರನ
ಸಾಲ ಹ್ಯಾಂಗ ತಿರತೈತೊ ತಿಮ್ಮ

ನಿಮ್ಮ ಹೊಟ್ಟಿ ಸಲುವಾಗಿ ದೇವ್ರ ಹೆಸರನ್ಯಾಗ
ಬಾಯಿಲ್ಲದ ಪ್ರಾಣಿನ ಮೆಯ್ಸಿದ್ರೇನ ಬಂತೊ
ತಮ್ಮಾ...
ನಿಮ್ಮ ಹಸ್ವು ನಿಗಲಾರ್ದಾನ.. ಬಲಿಬೇಡೊ
ಕಲ್ಲಿನ ದ್ಯಾವ್ರ ಹಸ್ವು ನೀಗತೈತೇನೊ ತಿಮ್ಮ...

ಎಷ್ಟೊತ್ತ ಕೂಗಿ...ಕೂಗಿ...ಕಾಣ್ದ ದ್ಯಾವ್ರ ಪ್ರಾರ್ಥನಾ
ಮಾಡಿದ್ರೇನ ಬಂತ, ನಂಗ ಕೇಳ್ಸೈತಂತ ದ್ಯಾವ್ರ
ಯಾರಿಗಾದ್ರೂ ಹೇಳ್ಯಾನೇನೊ ತಮ್ಮಾ...
ಕಂಡು...ಕಂಡು...ಪಕ್ಕದ್ಮನಿಯವ್ರ ಕಷ್ಟದ ಕೂಗಿಗೆ
ನಾವ್ ಕಿವಿಯಾಗ್ಲಿಲ್ಲಂದ್ರ, ಮ್ಯಾಲ್ನವಂಗ ಹ್ಯಾಂಗರ
ನಂ ಕೂಗು ಕೇಳ್ಸತೈತೊ ತಿಮ್ಮ...

ಮೈಯ್ಯಾಗ ದ್ಯಾವ್ರ ಬಂದೈತನ್ಕೊಂಡ ಹುಚ್ರಂಗ
ಕುಣಿಯೊರ್ನ ಕಂಡು ಏನ್ ಹೇಳ್ಬೇಕೊ ತಮ್ಮಾ...
ಮೈಯ್ಯೊಳ್ಗ ಹೊಕ್ಕೊಂಡಿರೊ ಬುದ್ದಿಗೇಡಿತನಾನ
ಕಳ್ಕೊಳ್ಳೊ ತನ್ಕ...ಏರೀರೊ.. ಹುಚ್ಚನ್ನ ಇಳ್ಳೊರಾದ್ರು
ಯಾರೊ ತಿಮ್ಮ

ಹಾದಿ ಬೆಳ್ಕಿಗಂತಂದ‌ ದೀಪ ಹಚ್ಚಿಟ್ರ, ಊರೊರ
ಮನಿಗೆ ಬೆಂಕಿ ಹಚ್ಕೊಂತ ಹೊಂಟ್ರ ಹ್ಯಾಂಗೊ
ತಮ್ಮಾ....
ನಿನ್ನ ಮನಿಯ್ಯಾನ ದೀಪಾನ ನೀನ ಹಚ್ಗೊಳ್ದನ
ಮಂದಿ ಮನಿ ದೀಪಾನ ನಿನೇನ ಹಚ್ತೀಯೊ ತಿಮ್ಮ...

ಶರಣ್ರು...ಪ್ರವಾದಿಗಳು ಅಂಗೈಯ್ಯೊಳ್ಗ ತುತ್ತ ಹಿಡ್ದಂಗ
ಜ್ಞಾನದ ಬುತ್ತಿನ... ಬೀದಿ...ಬೀದಿಯೊಳಗ ಹಂಚ್ಗೊಂಡ
ಹೋದಂತ ಮಣ್ಣೈತಿದು, ಗೊತ್ತೇನೊ ತಮ್ಮಾ....
ಓದ್ಲಿಲ್ಲ...ಅನುಭವಿಸ್ಲಿಲ್ಲ..ಮಾತ್ ಮಾತಿಗೂ ಕೈಯ್ಯಾಗ
ಕತ್ತಿ ಹಿಡ್ಕೊಂಡ.. ನಡು ಬೀದಿ ತುಂಬಾ ರಕ್ತದ ಹೊಳಿನ
ಹರಸ್ಯಾರು ನೊಡ್ತೀಮ್ಮ..

No comments:

Post a Comment