Sunday, December 4, 2016

ಎಂಥಹ ಬದುಕು

ಎಂಥ ಬದುಕ ನೀಡಿದೆ ನೀನು
ಯಾರ ಕಾಗೆ ಕಣ್ಣಿಗೆ ಸೋಕಿಸಿ
ಯಾವ ಪಾಪದ ಕೈಯಿಂದ
ಉಡಿಯಕ್ಕಿ ಹಾಕಿಸಿ ಕಳಿಸಿದೆ ನೀನು

ಮೆಟ್ಟಿದ ಮನೆಯ ಗಂಡನು
ಬಿಟ್ಟು ಹೋಗಿಹನು
ನಾಲ್ಕು ಮಕ್ಕಳ ನೀಡಿ
ಅತ್ತೆ ಮಾವಂದಿರು ಹೊರಗೆ
ದೂಡಿ ಕುಳಿತಿರುವರು ಕೈ ಚೆಲ್ಲಿ

ಎಷ್ಟಾದರೂ ತವರ ಕರುಳು
ನೀಡಿದರು ಮುಖ್ಯರಸ್ತೆಯಲಿ
ಒಂದಂಗಡಿಯನು ದುಡಿದು
ಬದುಕಲು, ಹೊಟ್ಟೆ ಹೊರೆಯಲು

ಎಂಥ ದುಡಿಮೆ ನೀಡಿದೆ ನೀನು
ಬೇವಿನಮರದ ನೆರಳಲಿ ಕಬ್ಬಿನ
ಹಾಲನು ಮಾರುವ ಕಾಯಕವ
ನೀಡಿದೆ

ಮುದ್ದಾದ ಮನೆಯಲಿ ಮುದ್ದಾಗಿ
ಬೆಳೆದ ನಾನು ಹೊರಗೆ ಹೋದರೆ
ದೃಷ್ಟಿಯಾಗುವದೆಂದು ಹೊಸಿಲು
ದಾಟಿಸದೆ ಇದ್ದ ತಾಯಿ

ಇಂದು ನೂರಾರು ಜನರ
ಕಾಮದ ನೋಟವನೆದುರಿಸುವ
ಕೆಟ್ಟ ನುಡಿಗಳನರಗಿಸಿಕೊಳ್ಳುವ
ಐದು ಹೊಟ್ಟೆಗಳ ಹಸಿವು ನೆನೆದು
ನನ್ನ ತಾಯಿ ಅದೇಷ್ಟು ಕುದ್ದಿರುವಳೊ
ಮನದಲಿ

ಕಹಿಯನರಿಯದ ನನ್ನ ನಾಲಿಗೆಗೆ
ಕಹಿಯ ಸವಿಯ ಉಣ್ಣಲೆಂದೆ
ಈ ಬದುಕ ನೀಡಿದೇಯೆ?

ಇಷ್ಟಲ್ಲದೆ ನೀನು
ಕಾಲ ಮೇಲೆ ಬಂಡೆ ಜಾರಿದಂತೆ
ದುಡಿಯಲು ಬಲಗೈ ಆಗಿದ್ದ
ಹಿರಿಮಗನ ಬಲಗೈಯ ಮೂರು
ಬೆರಳುಗಳನೇ ಯಂತ್ರದಲಿ ಸಿಕ್ಕು
ಕತ್ತರಿಸುವಂತೆ ಮಾಡಿಬಿಟ್ಟೆ ನೀನು
ಹೆತ್ತಕರುಳು ಉರಿಯುವಂತೆ ಮಾಡಿ
ಹಿಮಗಿರಿಯಲಿ ತಣ್ಣಗೆ ಧ್ಯಾನ
ಮಗ್ನವಾಗಿರುವೇಯಾ?

ನೀ
ಕೊಟ್ಟ ವರವ ನಾನೆಂಥ ಮರೆಯಲಿ

ಕಹಿಯ ಬುಡದಲಿ 
ಸಿಹಿಯ ಮಾರುವ
ಬಾಳನು

No comments:

Post a Comment