ಉಸಿರು
ನಿಲ್ಲುವವರೆಗೂ...
ಕೊನೆಯಾಗದ
ರಂಗೀಯ ನೋವು,
ನಿನ್ನದೊಂದು ಪ್ಯಾಲೆಯ
ಶರಾಬಿನಿಂದ
ಮಾಯವಾಗುವುದೇನು
ಸಾಕಿ...
ಬರೆದಿಟ್ಟ ಹಾಳೆಗಳನ್ನೇನೊ
ಸುಟ್ಟುಬಿಡಬಹುದು.
ಹೇಗೆ ಉರಿಸಿಬಿಡಲಿ
ಅವಳ ನೆನಪುಗಳನ್ನು...
ನಾನೆ...
ಉರಿದು ಹೋಗದ
ಹೊರತು.
Wednesday, February 27, 2019
ಶಾಯರಿ ೭೦೦
ಶಾಯರಿ ೭೧೩
ಒಬ್ಬಳು ನೀಡಿದ
ನೋವಿಗೆ...
ಮದ್ದಿಲ್ಲದೆ
ನಿನ್ನರಮನೆಗೆ
ಬಂದಿರುವೆ
ಸಾಕಿ...
ಇನ್ನೊಬ್ಬಳ
ಹುಡುಕಿಕೊಂಡು
ಹೋಗಲಿಕ್ಕೆ,
ಗುಂಡಿಗೆ ಮೊದಲಿನಷ್ಟು
ಗಟ್ಟಿಯಾಗಿಲ್ಲ.!!!
ಶಾಯರಿ ೭೦೭
ಭಾವಗೀತೆಗಿಂತ
ಮೌನ ಗೀತೆಯನ್ನೆ
ಚೆನ್ನಾಗಿ
ಹಾಡುತ್ತಿದ್ದಳವಳು
ಸಾಕಿ...
ಹೊರಟು ನಿಂತಾಗ...
ನನ್ನ ಪಾಲಿಗೆ
ಬಿಟ್ಟದ್ದು...
ಶೋಕ ಗೀತೆಯನ್ನು.
ಶಾಯರಿ ೭೩೦
ಭಾವನೆಗಳೇನೊ
ಸತ್ತು ಹೋಗಿವೆ
ಎದೆಯೂರಲ್ಲಿ
ಸಾಕಿ....
ಹೂಳಲೆಲ್ಲಿ?
ನಿರ್ಭಾವವೆ
ತುಂಬಿಕೊಂಡಿರುವ
ಜಗದ
ಮರುಭೂಮಿಯಲ್ಲಿ.
Tuesday, February 26, 2019
ಶಾಯರಿ ೭೨೩
ಬಸುರಿದ್ದ
ಕನಸುಗಳೆಲ್ಲ
ಅಸುನೀಗಿದವು
ರಂಗೀಯು
ಕೈ ಬಿಟ್ಟಾಗ
ಸಾಕಿ...
ತೆಕ್ಕೆಯಲಿ
ಅವಳೆರಿಸಿ ಹೋದ
ಬಿಸಿಯನ್ನು....
ತಣ್ಣಗಾಗಿಸಿಕೊಳ್ಳುತ್ತಿರುವೆ,
ಪ್ಯಾಲೆಯೊಳಗಿನ
ನಿನ್ನ ಶರಾಬನ್ನು
ಕುಡಿದು.
ಶಾಯರಿ ೭೨೫
ಕಟ್ಟಿಬಿಟ್ಟರಲ್ಲ
ರಂಗೀಯ
ಮನೆ ಬಾಗಿಲಿಗೆ
ಹಸಿರು
ತೋರಣ
ಸಾಕಿ....
ಹಾಡಿಬಿಡು
ನೀನೆ ಇಂದು....
ನನ್ನ ಬಾಳಿಗೆ,
ಚರಮ ಗೀತೆಯ
ಕೊನೆ.......
ಚರಣ.
ಶಾಯರಿ ೭೧೦
ನಡೆದು ಬಂದ
ಹಾದಿಯನ್ನು
ಮರೆಯಲೆಂದೆ....
ನಿನ್ನರಮನೆಗೆ
ಬಂದಿರುವೆನಿಂದು
ಸಾಕಿ...
ಪದೆ...ಪದೆ...
ಹಳೆ ಹಾದಿಯ
ನೆನಪುಗಳನ್ನೆ
ಕೇಳಿ....ಕೇಳಿ...
ನನ್ನನು
ಹಿಂಸಿಸಬೇಡ
ಶಾಯರಿ ೭೨೪
ಅಮಲೇರಿ
ಕಣ್ಣು ಮುಚ್ಚುವ
ಮುನ್ನವೆ...
ದಿಟ್ಟಿಸಿ ನೋಡಿಬಿಡು
ನನ್ನ ಕಣ್ಣಲಿ
ಕಣ್ಣಿಟ್ಟು
ಸಾಕಿ....
ರಂಗೀಯ
ಪ್ರತಿಬಿಂಬವೊಂದನು
ಹೊರತುಪಡಿಸಿ
ಇನ್ನೇನು ಕಾಣಸಿಗದು
ನಿನಗಲ್ಲಿ
ಶಾಯರಿ ೬೮೪
ನೋಡು..!!!
ಆ ಬೀದಿಯ
ಕೊನೆಯಲ್ಲಿ
ಬರುತಿಹುದು,
ರಂಗೀಯ ಮದುವೆ
ಮೆರವಣಿಗೆ..
ಸಾಕಿ....
ನಿಲ್ಲಿಸಿಬಿಡಲೇನು?
ಇನ್ನು....
ಅವಳನ್ನೊಲಿಸಲು
ಬರೆಯುತ್ತಿದ್ದ
ಪದ್ಯಗಳನ್ನು
ಶಾಯರಿ ೭೦೫
ಉಸಿರು
ನಿಲ್ಲುವವರೆಗೂ...
ಕೊನೆಯಾಗದ
ರಂಗೀಯ ನೋವು,
ನಿನ್ನದೊಂದು ಪ್ಯಾಲೆಯ
ಶರಾಬಿನಿಂದ
ಮಾಯವಾಗುವುದೇನು
ಸಾಕಿ...
ಬರೆದಿಟ್ಟ ಹಾಳೆಗಳನ್ನೇನೊ
ಸುಟ್ಟುಬಿಡಬಹುದು.
ಹೇಗೆ ಉರಿಸಿಬಿಡಲಿ
ಅವಳ ನೆನಪುಗಳನ್ನು...
ನಾನೆ...
ಉರಿದು ಹೋಗದ
ಹೊರತು.
Monday, February 25, 2019
ಶಾಯರಿ ೭೧೪
ರಂಗೀಯ
ನಗುಮೊಗವು
ಹೊತ್ತಿಲ್ಲದ,
ಹೊತ್ತಿನಲ್ಲಿ...
ನೆನಪಾಗುವುದಲ್ಲ
ಸಾಕಿ....
ಮಲಗಬೇಕಲ್ಲ..!!!
ಕಾಡುವವಳ ಎಲ್ಲ
ಕನಸುಗಳನ್ನು
ನಿದಿರೆಯಿಂದ ಹೊರ
ನೂಕಿ....
ಶಾಯರಿ ೭೩೧
ರಂಗೀಯ ಬಗ್ಗೆ
ನಿನಗೇನೆಂದು
ಬರೆದುಕೊಡಲಿ
ಸಾಕಿ...
ಸಂತೋಷಕ್ಕೆ
ಪುಟಗಳೆ ಇಲ್ಲ !!!
ದುಃಖಕ್ಕೆ....
ದಿನಗಳೆ ಉಳಿದಿಲ್ಲ.
ಶಾಯರಿ ೭೦೮
ಮೆಹಂದಿ
ಹಚ್ಚಿಕೊಂಡವಳ
ಕೈಯಿಂದಲೆ
ಬೆನ್ನಿಗೆ ಚೂರಿ
ಬಿದ್ದಿದೆ
ಸಾಕಿ....
ಹೂವು
ಹಾವಾಗುವುದು
ಎಂದಿದ್ದರೆಲ್ಲರು....
ನನಗಿಂದು
ಅರ್ಥವಾಯಿತು.
ಶಾಯರಿ ೭೧೭
ನನ್ನೆದೆಯ
ನೆತ್ತರಿನಿಂದವಳ
ಮೆಹಂದಿ ಶಾಸ್ತ್ರ
ಮುಗಿದು
ಹೋಯಿತು
ಸಾಕಿ....
ನಾಳೆ.....
ನನ್ನ ಚಿತೆಗೆ
ಸ್ಪರ್ಶಿಸಿದ
ಅಗ್ನಿಯಿಂದ,
ರಂಗೀಯ ಮಾಂಗಲ್ಯ
ಧಾರಣೆಯೂ.....
ನಡೆದುಹೋಗಲಿ.
ಶಾಯರಿ ೬೯೩
ಕೃತಜ್ಞತೆ......?
ಯಾರಿಗೆ
ಹೇಳಲಿ ಸಾಕಿ....
ನಿನ್ನರಮನೆಗೆ
ಕಳುಹಿಸಿ
ಕೊಟ್ಟವಳಿಗೊ..?
ಪ್ಯಾಲೆಗೆ
ಶರಾಬನ್ನು
ಸುರಿಯುವವಳಿಗೊ?
ಶಾಯರಿ ೭೧೬
ರಂಗೀಯನ್ನು
ಭೇಟಿಯಾಗುವ
ಮೊದಲು....
ನನಗೂ ಊರು
ಕೇರಿಗಳ ನಡುವಿನ,
ಅಂತರದ ಅರಿವಿತ್ತು
ಸಾಕಿ....
ಅವಳು ಕೈ
ಬಿಟ್ಟ ದಿನದಿಂದ...
ಊರು ಕೇರಿಗಳಲ್ಲಿ
ಈಗ ಅಂತರವೇನು
ಕಾಣಿಸುತ್ತಿಲ್ಲ
ಶಾಯರಿ ೭೩೩
ಉರಿದು ಹೋದ
ರಾತ್ರಿಗಳನ್ನು
ನೆನಪಿಡುವುದು
ಬಲು ಕಷ್ಟ
ಸಾಕಿ...
ಉರಿದು....
ಬೂದಿಯಾಗದೆ,
ಸುಡುವ ನೆನಪುಗಳ
ಬಿಸಿಯನ್ನು ತಡೆದುಕೊಳ್ಳುವುದು
ಇನ್ನೂ... ಕಷ್ಟ
ಶಾಯರಿ ೭೧೫
ನಾ ಕೊಟ್ಟ
ಉಡುಗೊರೆಗಳನ್ನೆಲ್ಲ...
ಕಸದ ಬುಟ್ಟಿಗೆ
ಎಸೆದು
ಬಿಟ್ಟಳಲ್ಲ ಸಾಕಿ....
ಪರ್ವಾಗಿಲ್ಲ,
ನನ್ನನ್ನೇಕೆ
ನಿನ್ನರಮನೆಯ
ತಿಪ್ಪೆಗೆ ತಂದು
ಕೂರಿಸಿದಳು.
ಶಾಯರಿ ೭೪೩
ಅದ್ಹೇಗೆ?
ಶರಾಬನ್ನು ಕುಡಿದ
ಮತ್ತಿನಲ್ಲೂ...
ನೋಡಿದೆಲ್ಲೇಲ್ಲ...
ರಂಗೀಯ ರೂಪವೆ
ಕಾಣುವುದು
ಸಾಕಿ...
ಕೊಟ್ಟಿರುವೆಯೇನು?
ನೀನೇನಾದರೂ...
ಮದ್ಯಕ್ಕೆ ಮಂತ್ರವನ್ನು
ಹಾಕಿ...
ಶಾಯರಿ ೭೨೯
ಮೊದಲ ಪುಟ...!!!!
ಕೊನೆಯ ಪುಟಗಳ
ಲೆಕ್ಕವನ್ನಿಡುವುದೆಕೀಗ
ಸಾಕಿ....
ಬದುಕೆಂಬ
ಪುಸ್ತಕದಲ್ಲಿ....
ಹಾಳೆಗಳೆ ಕಿತ್ತು
ಹೋಗಿರುವಾಗ..!!!
ಶಾಯರಿ ೭೨೨
ಬಣ್ಣ ಹಚ್ಚಿದವಳ
ಮುಂದೆ....
ಕನಸುಗಳನ್ನು
ಹಂಚಿಕೊಂಡರೇನು
ಬಂತು ಸಾಕಿ...
ನಾಟಕವಾಡುವವಳ
ಜೊತೆಗೆ,
ಬದುಕನ್ನು
ಕಟ್ಟಿಕೊಳ್ಳಲು
ಸಾಧ್ಯವೇನು?
ಶಾಯರಿ ೬೯೫
ಇರಿಯುವುದು...
ಸುಡುವುದೆಲ್ಲ, ರಂಗೀಯ
ಕಣ್ಣಂಚಿನಲ್ಲಿಯೆ
ಇರುವುದೆಂದು
ಕೊಂಡಿದ್ದೆ
ಸಾಕಿ....
ಉಳಿಸುವುದು...
ಕೊಲ್ಲುವುದು...
ಅವಳ ತುಟಿಯಂಚಿನ
ರಂಗಿನಲ್ಲೂ ಇದೆ
ಎಂಬುದು...
ನನಗಿಂದೆ ಅರ್ಥವಾದದ್ದು
ಶಾಯರಿ ೭೦೧
ತುಟಿಗಳೆರಡು ಒಡೆದು..
ಬಿರುಕುಬಿಟ್ಟ
ಸಂಧಿಯೊಳಗಿಂದ,
ರಕ್ತವು ಜೀನುಗುತಿಹುದು
ಗೆಳೆಯ..
ಮಧು ಬಟ್ಟಲು...
ತುಟಿಯನೊಮ್ಮೆ ಸೋಕಿದಾಗಲೆಲ್ಲ...
ರಂಗೀಯು
ತುಟಿಕಚ್ಚಿದ ನೆನಪುಗಳು
ಮತ್ತೆ....ಮತ್ತೆ...
ನೆನಪಾಗುವವಲ್ಲ..!!!
Tuesday, February 19, 2019
ಶಾಯರಿ ೭೪೪
ಎಟುಕದ ಹಣ್ಣನ್ನು
ಹುಳಿಯೆಂದು
ಹೇಗೆ ಹೇಳಿಬಿಡಲಿ
ಸಾಕಿ....
ನೋವನ್ನು ಮರೆಸದ
ನಿನ್ನ ಮದ್ಯವನ್ನು
ಕಹಿಯೆಂದು ಹೇಗೆ
ಕರೆದುಬಿಡಲಿ.
ಶಾಯರಿ ೭೪೬
ಅವಳು ದೀಪ
ಹೆಸರಿಗೆ ತಕ್ಕ
ಹಾಗೆಯೆ
ಉರಿಯುತ್ತಿದ್ದಳು
ಸಾಕಿ...
ಪತಂಗವಾದದ್ದು
ನನ್ನದೆ ತಪ್ಪು...
ಹೇಳವನಾಗಿರುವೆ
ನಾನೀಗ...
ಒಲವಿನೆರಡೂ
ರೆಕ್ಕೆಗಳ ಸುಟ್ಟುಕೊಂಡು
ಶಾಯರಿ ೭೫೧
ನಿನ್ನ ಮೌನವನ್ನು
ಶರಾಬಿಗೂ
ಕಲಿಸಿಬಿಟ್ಟರೆ
ಇನ್ನೇನುಳಿಯಿತು
ಬದುಕಲಿಕ್ಕೆ
ಸಾಕಿ....
ಕುಡಿಯುವ
ಮದ್ಯವೂ...
ನಂಜಾಗಿಬಿಟ್ಟರೆ,
ಈ ಸಂಜೆಗಳಿಗೆ
ಅರ್ಥವುಂಟೇನು?
Monday, February 18, 2019
ಶಾಯರಿ ೭೪೯
ಅಮಲು
ಎಷ್ಟೇರಿದರೇನು ತಲೆಗೆ,
ನಮ್ಮ ಬಟ್ಟಲಿಗೆ
ನಾವೆ ಸುರಿದುಕೊಳ್ಳಬೇಕು
ಶರಾಬನ್ನು ಸಾಕಿ...
ನಶೆಯಿಳಿದರೆ...
ನೆನಪಾಗಿ ಚುಚ್ಚುವುವಲ್ಲ
ರಂಗೀಯ ನೆನಪುಗಳು
ಎದೆಯನ್ನು ತಾಕಿ
ಶಾಯರಿ ೭೨೦
ಪ್ರೀತಿಯ ಏಣಿಯನ್ನು
ಹತ್ತಲು ಬಾರದೆ,
ಕಾಲು ಜಾರಿ...
ನಿನ್ನಂಗಳಕೆ ಬಂದು
ಬಿದ್ದಿರುವೆ
ಸಾಕಿ...
ತಾಳಿಕೊಳ್ಳಲಿ ಹೇಗೆ
ಜಾರಿದ ನೋವನು,
ಹನಿ ವಿಷವನ್ನಾದರು
ಕುಡಿಸಿಬಿಡು...
ಮುಕ್ತಿ ಸಿಗಲಿ ಈ
ನೋವಿನಾಟಕೆ
ಶಾಯರಿ ೭೫೩
ಕನಸುಗಳನ್ನೇನು?
ಬದುಕನ್ನೆ
ಬಿಕರಿಗಿಟ್ಟಿರುವೆ
ಕೊಳ್ಳುವವರೆ ಇಲ್ಲ
ಸಾಕಿ....
ತಿರುಕನ
ಕನಸುಗಳಿಗೂ
ಬೆಲೆಯುಂಟು.
ಈ ಬಡವನೆದೆಯ
ಮಾತುಗಳಿಗೆ, ಕವಡೆ
ಕಾಸು ಕಿಮ್ಮತ್ತಿಲ್ಲ
ಶಾಯರಿ ೭೬೧
ಅವಳು
ಸುಖವಾಗಿರಬಹುದೇನೊ?
ದುಡ್ಡಿರುವವರ
ದೌಲತ್ತಿನಲ್ಲಿ
ಸಾಕಿ...
ನಾನಂತೂ
ಸ್ವರ್ಗದಲ್ಲಿಯೇ
ಇರುವೆ,
ನಿನ್ನ ಮದ್ಯದಮಲಿನಲ್ಲಿ
ಶಾಯರಿ ೭೩೫
ಕನವರಿಸಿ...
ಕನವರಿಸಿ
ಮದ್ಯದಮಲಿನಲೂ
ಬಾಯಾರುತಿದೆ
ಸಾಕಿ...
ಪಕ್ಕದಲಿ
ಯಾರಿಲ್ಲ!!!
ಬಿಕ್ಕುತಿರುವ
ಬಾಯಿಗೆ
ಹನಿ ವಿಷವನ್ನು
ಬಿಡಲು
ಶಾಯರಿ ೭೫೨
ಮದಿರೆ ಬಟ್ಟಲನ್ನು
ಎದುರಿಗೆ ಹೀಗೆ
ಖಾಲಿ ಇಡಬೇಡ
ಸಾಕಿ...
ಯಾವ ಹೊತ್ತಿನಲ್ಲಿ
ರಂಗೀಯ ನೆನಪುಗಳು
ಎಚ್ಚರವಾಗುವವೊ
ಗೊತ್ತಿಲ್ಲ!!!
ಶಾಯರಿ ೬೫೨
ಬೆನ್ನು ತೋರಿಸಿದ
ದಿನವೇ....
ಪ್ರೀತಿಯೂ...ಸತ್ತು
ಹೋಗುತ್ತದಾ
ಸಾಕಿ....
ಹಾಗಿದ್ದರೆ....
ಬಟ್ಟಲು ಮದ್ಯವನ್ನು
ಕುಡಿದ ಮೇಲೆ
ರಂಗೀಯ ನೆನಪುಗಳೇಕಿನ್ನು
ಸಾಯುತ್ತಿಲ್ಲ...
ಶಾಯರಿ ೭೨೭
ನೀನು ಹಾಕಿಕೊಟ್ಟ
ಮಧು ಬಟ್ಟಲು
ಖಾಲಿಯಾಗಿದೆ...
ಅವಳು ಚುಂಬಿಸಿದ್ದ
ತುಟಿಗಳಿಂದು
ಒಣಗುತಿವೆ...
ನೀನು ಸುರಿದು
ಕೊಟ್ಟ, ಮಧು ಬಟ್ಟಲು
ಖಾಲಿಯಾಗಿದೆ
ಸಾಕಿ...
ಒಣಗಿದ ತುಟಿಗಳಿಗೆ
ಮತ್ತೆ ಜೇನ ತುಂಬಲು
ರಂಗೀ...ಬರುವಳೆಂಬ
ನಂಬಿಕೆಯಿಲ್ಲ..!!!
ಜೇಬಲ್ಲಿ ದುಡ್ಡಿಲ್ಲದ
ನನಗೆ, ಇನ್ನೊಂದು
ಬಟ್ಟಲು ಮದಿರೆಯನ್ನು
ನೀನು ಕೊಡುವೆಯೆಂಬ
ಭರವಸೆಯಂತೂ.....
ಮೊದಲೆ ಇಲ್ಲ.
Sunday, February 17, 2019
ಶಾಯರಿ ೭೨೧
ನನ್ನ ಗೋರಿಗೊಮ್ಮೆ
ಬಂದು... ಚೊಂಬು
ನೀರನ್ನಾದರೂ...
ಹಾಕಿ ಹೋಗೆಂದು
ರಂಗೀಗೆ ಹೇಳಿ
ಕಳುಹಿಸು
ಸಾಕಿ....
ಎದೆಯಲ್ಲೇನೊ...
ಬಾಡಿ ಹೋಗಿದೆ
ಪ್ರೀತಿ.....
ಗೋರಿಯ ಮೇಲೆ
ನೆಟ್ಟ...ಹೂಬಳ್ಳಿಯಾದರೂ
ಚಿಗುರುತಿರಲಿ.
ಶಾಯರಿ ೭೧೧
ಬೆನ್ನ ಹಿಂದೆ,
ಪ್ರೇಮೊನ್ಮಾದದಿ ರಂಗೀಯು
ಗೀರಿ ಹೋದ
ಗೆರೆಗಳೇನೊ...
ವಾಸಿಯಾಗಿವೆ
ಸಾಕಿ...
ಎದೆಯ ರೋಮವ
ತೋರು ಬೆರಳಲಿ
ಸರಿಸಿ.....
ತುಟಿಯಂಚಲಿ
ಒತ್ತಿದ...ಮುದ್ರೆಯ
ರಂಗೆ...ಹೋಗುತ್ತಿಲ್ಲ!!!!
ಎಷ್ಟೇ ತಿಕ್ಕಿಕೊಂಡರು.
ಶಾಯರಿ ೭೫೯
ಕುಡುಕರ
ಸಾಮ್ರಾಜ್ಯಕ್ಕೆ
ನಾನೇ
ಅಧಿಪತಿ
ಯಂತಿದ್ದಾರಲ್ಲ
ಸಾಕಿ....
ಹೇಗೆ ಕುಳಿತುಕೊಳ್ಳಲಿ
ಇಲ್ಲಿಯೂ....
ಬೆನ್ನಿಗೆ ಚೂರಿ
ಇರಿಯುವವರಿಲ್ಲವೆಂಬ
ಸುಳ್ಳನ್ನೆ ನಂಬಿ
ಶಾಯರಿ ೭೩೬
ಹಾದಿಯ ಎಲ್ಲ....
ತಿರುವುಗಳು,
ರಂಗೀಯ ನೆನಪುಗಳತ್ತಲೆ
ಮುಖ ಮಾಡುವವು
ಸಾಕಿ....
ಯಾವ ತಿರುವು
ಸುತ್ತಿ ಬಂದರೇನು?
ನಿನ್ನರಮನೆಯ
ಹಜಾರವೆ ಕೊನೆ
ಎಂಬುದನ್ನು,
ಮರೆತಿಲ್ಲ ನಾನು.
Saturday, February 16, 2019
ಶಾಯರಿ ೭೬೨
ರಾತ್ರಿಗಳ ಲೆಕ್ಕ!!!
ಹುಚ್ಚಿ....
ಹರೆಯದ ದಿನಗಳೆ
ಉರಿದುಹೋಗುತಿಹುವಿಲ್ಲಿ
ಸಾಕಿ....
ತುಂಬಿದ ಮಧು
ಬಟ್ಟಲು....
ಹಚ್ಚಿಟ್ಟ ದೀಪ...
ಮುಚ್ಚಿಟ್ಟ ದುಃಖ
ಕೊನೆಯಾಗಬೇಕಲ್ಲವೆ
ಒಂದು ದಿನ.
ಶಾಯರಿ ೭೬೩
ಕಲ್ಲಿನಂತಿದ್ದವನನ್ನು
ಎಷ್ಟೂ.....
ನಾಜೂಕು ಮಾಡಿ
ಹೋಗಿ ಬಿಟ್ಟಳವಳು
ಸಾಕಿ...
ನಿನ್ನರಮನೆಯ
ಮದ್ಯದ ಬಟ್ಟಲಿನಂತಿರುವೆ
ನಾನೀಗ...
ಕೈ ಬಿಡಬೇಡ,
ಒಡೆದು ಹೋದೇನು..!!!
Friday, February 15, 2019
ಸಾಕಿ
ಈ ದುಃಖ...!!!
ಈ ಮಣ್ಣಿಗೇನು ಹೊಸತಲ್ಲ ಸಾಕಿ...
ನೋವು..ಹತಾಶೆ...ಹಂಗಿನ ನೆರಳು...ವ್ಯಾಘ್ರನ
ಘರ್ಜನೆಗೆ ಹೆದರಿ ನಿಂತಂಥ ಹರಿಣಿಯ ಭಾವ...
ಈಗ ಇದೆಲ್ಲ...ಇವಳೀಗೀಗ ಹೊಸತು..
ಅರಳುವಳು ಹೇಗೋ...!!!? ನರಭಕ್ಷಕ
ಸಮಾಜದೊಳು ಬೆರೆತು.
ಇವಳ ಹೆತ್ತವಳ ಮಡಿಲೇನು ಚಿಕ್ಕದಲ್ಲ ಸಾಕಿ....
ಹಾಗಂತ...ಸದಾ ಉಡಿಯಲ್ಲಿ ನೋವಿನ ಗಂಟನ್ನೆ
ಕಟ್ಟಿಕೊಂಡಿರಬೇಕೆನು?
ಇಲ್ಲಿರುವವರೆಲ್ಲ ಚಿಕ್ಕವರೇನಲ್ಲ ನೋಡು!!!
ನೋಡಿ..ಮರೆತು ಮುನ್ನೆಡೆಯುವವರ
ಹೆಜ್ಜೆಗಳೇನು ಸಣ್ಣವಿಲ್ಲ..
ಕನಿಕರದಿ, ಕಣ್ಣಂಚಲಿ ಜಿನುಗುವ ಕಣ್ಣ ಹನಿಗಳ
ಒರೆಸುವಷ್ಟು...ವ್ಯವಧಾನವು ಇವರಿಗಿಲ್ಲ...
ಎಲ್ಲರ ಹಾಗೆ ನಾನು....ಇವಳಿಗೆ ಒಂದೆರಡು
ಕಿವಿ ಮಾತುಗಳನ್ನು ಹೇಳಿಬಿಡಲೆ ಸಾಕಿ....
ನಮ್ಮಲ್ಲಿದಕ್ಕೇನು ಕೊರತೆಯಿಲ್ಲವಲ್ಲ?!!!
ಎಲ್ಲರ ಹಾಗೆ ನೀನು...ಅತ್ತು ಸುಮ್ಮನಿದ್ದುಬಿಡಬೇಡ ಮಗಳೆ...
ಹರಿಣಿಯಾದ ಮಾತ್ರಕ್ಕೆ...ಹಿಂಜರಿಯಬೇಡ, ಎದುರಾಳಿಯ
ಹುಟ್ಟಡಗಿಸುವ ಸಿಂಹಿಣಿಯಾಗು...
ಮುಟ್ಟಿದರೆ, ತಟ್ಟಿ ಮಸಣಕೆ ಕಳಿಸುವ ಮೃತ್ಯು ದೇವತೆಯಾಗು
ಹೇಳಿಬಿಟ್ಟೆ.. ನಾಚಿಕೆಯಿಲ್ಲದೆ ಯಾಕೆ ಹೇಳು ?
ಅವಳಿನ್ನೂ... ಹೊರ ಜಗದ ಕಹಿಯನರಿಯದ
ಪಾಪದ ಮಗು ಸಾಕಿ....
ನಾಯಕರಾಡಾವ ಕಣ್ಣಾಮುಚ್ಚಾಲೆಯ ಪುಂಡಾಟ
ಇವಳಿಗಿನ್ನು ಗೊತ್ತಿಲ್ಲ....
ಕೈಗೆ ಬಳೆಯ ತೊಟ್ಟು... ನಾಟಕವಾಡುವ
ಬೃಹನ್ನಳೆಯರ ಆಟಕೆ...ಬಲಿಯಾಗುವವರ ಸಂಖ್ಯೆಯೇ...
ಇನ್ನೂ ನಿಂತಿಲ್ಲ...
ಇನ್ನೂ.. ಒಂದು ಮಾತನ್ನು ಹೇಳಿಬಿಡಲೆ ಅವಳಿಗೆ ಸಾಕಿ....
ಕೇಳು ಮಗಳೆ.... ನಿನಗೆ ಎದೆತಟ್ಟಿ ಹೇಳಿಕೊಳ್ಳಲು...
ನಿಮ್ಮಪ್ಪನ ಶೌರ್ಯದ ಇರಿಹಾಸವಿದೆ...
ನಮ್ಮೆಲ್ಲರ ಹತ್ತಿರ ಇನ್ನೇನಿದೆ...ತಿಂದುಂಡು
ಬೊಜ್ಜು ಸಂಪಾದಿಸಿಕೊಳ್ಳಲು, ಎಲ್ಲರಪ್ಪರು ಮಾಡಿಟ್ಟು
ಹೋದ ಸಿರಿಯೊಂದೆ....ಇದೆ.
ಏನೋ...ಹೇಗೊ.... ಎದೆಗೆ, ಯಾರೊ..ಸದ್ದಿಲ್ಲದಂತೆ
ಇರಿದ ಭಾವ ಸಾಕಿ...
ಎದೆಗೆ ಎದೆಕೊಟ್ಟು ಹೋರಾಡದೆ... ಬೆನ್ನಿಗೆ
ಚೂರಿ ಹಾಕುವ, ಗುಳ್ಳೆ ನರಿಗಳನ್ನಾದರು ಎಷ್ಟು
ದಿನವಂತ ಸಹಿಸುವುದು... ಭವ್ಯ ಭಾರತದ ಕುಡಿಗಳಲಿ
ಜಿನಗುವ ಈ ಕಣ್ಣ್ ಹನಿಗಳ ಒರೆಸುವರಾರು...
ನಿಲ್ಲಿಸುವರಾರು....
ಉತ್ತರ....? ನನ್ನಲೂ ಶೂನ್ಯ..!!!!
Thursday, February 14, 2019
ಶಾಯರಿ ೭೩೪
ಹೊತ್ತು..ಗೊತ್ತಿಲ್ಲದ
ಸಮಯದಲ್ಲಿ
ಹುಟ್ಟುವ ಪ್ರೀತಿಯನ್ನು
ಒಂದೆ ದಿನದಲ್ಲಿ
ಕಟ್ಟಿ ಹಾಕುವರೇನು
ಸಾಕಿ...
ಕುಡಿದ ಒಂದೆ
ಬಟ್ಟಲಿನ....
ಅಮಲಿನಲಿ
ಅವಳೆಲ್ಲ ನೆನಪುಗಳನ್ನು
ಮರೆತು ಬಿಡಬಹುದೇನು?
ಶಾಯರಿ ೭೫೦
ಅವಳದೆಂತಹ ಮಾಯೆ...
ಎಲ್ಲ ಯುವಕರ
ಕೈಯಲ್ಲೂ...
ಪ್ರೇಮದುಡುಗೊರೆಗಳು
ಸಾಕಿ...
ಪಾಪ... ಅವರೆಲ್ಲ !!!
ನಿನ್ನೆ ನನ್ನ ಕೈಯೊಳಗಿತ್ತು
ಅವಳಿಗೆಂದೆ ತಂದಿದ್ದ
ಪುಟ್ಟ ತಾಜಮಹಲು....
ಇಂದೀರುವುದಲ್ಲ..!!!
ನಿನ್ನ ಮದಿರೆಯ
ಮಧು ಬಟ್ಟಲು...
ಶಾಯರಿ ೭೫೫
ಸತ್ತ ಮೇಲೆ....?
ಒಲವು ಅಜರಾಮರವಾಗುವುದೊ...
ಇಲ್ಲವೋ... ನನ್ನ
ಹಾಗೆ, ಗೋರಿಯಲ್ಲಿ
ಹೂತು ಹೋಗುವುದೊ...
ಒಂದು ಗೊತ್ತಿಲ್ಲ
ಸಾಕಿ....
ನಿನ್ನ ಮದಿರೆ
ಮನೆಯ, ಮಧು ಬಟ್ಟಲು
ಮಾತ್ರ.....
ಚಿರಕಾಲವಿರಲಿ.
ಭಗ್ನವಿರಹಿಗಳೆದೆಯುರಿಯ
ಸದಾ...ತಣಿಸುತಿರಲಿ.
Monday, February 11, 2019
ತಮ್ಮಾ...
ಊರ ಹೊತ್ತ ಊರ್ಸಿದವ್ರನ್ನ...ಇವತ್ತ
ಊರ ತುಂಬಾ ಮೆರವಣ್ಗಿ ಮಾಡ್ಕೊಂಡ ಹೊಂಟಾರ್ನೋಡೊ...ತಮ್ಮಾ
ನಾಕ್ಮಂದಿ ಮುಂದ ಶಿಕ್ಷೆ ತಗೋಬೇಕಾದವ್ರು
ಅದ ನಾಕ್ಮಂದಿಗೆ ಬುದ್ದಿ ಹೇಳೊ ಕಟ್ಟಿ ಏರಿಯ್ಯಾರ
ನೋಡು..ಇಂತದ್ಕ ಏನೊ? ನ್ಯಾಯದವ್ವನ ಕಣ್ಣಿಗೆ
ಕಪ್ಪನ ಬಟ್ಟಿ ಕಟ್ಬಿಟ್ಟಾರು ನೋಡ್ತಿಮ್ಮಾ..
Sunday, February 10, 2019
ಶಾಯರಿ ೭೧೮
ಈ ಸಂಜೆಗೆ
ಕುಡಿದ ಮದ್ಯವು
ರಂಗೀಯ ಹಳೆಯ
ನೆನಪುಗಳನ್ನೆಲ್ಲ
ಮತ್ತೆ...ಮತ್ತೆ..
ನೆನಪಿಸುತ್ತಿವೆ
ಸಾಕಿ...
ಹೂವಿಗೆಂದು
ಕಾದಿದ್ದು ಹುಸಿಯಾಯಿತಲ್ಲ!!!
ಕಾಯಿ ಬಲಿಯುವ
ಮುನ್ನವೇ....
ಉದುರಿ ಹೋಯಿತಲ್ಲ!!
Saturday, February 9, 2019
ಶಾಯರಿ ೭೧೯
ಮದಿರೆ ಮನೆಯ
ಗೋಡೆಯ ಮೇಲೆ
ಅವಳೊಲವಿನ
ಸಾಲುಗಳನ್ನು
ನಾನದೇಷ್ಟು
ಬರೆದು ಬಿಟ್ಟಿರುವೆ,
ಒಮ್ಮೆಯಾದರೂ...ನೀನು
ಕಣ್ಣೆತ್ತಿ ನೋಡಲೆ
ಇಲ್ಲವಲ್ಲ
ಸಾಕಿ....
ಅದೇಷ್ಟೊ...
ಮದಿರೆಯನ್ನು
ಬಟ್ಟಲು ಬಟ್ಟಲುಗಳಿಗೆ
ಸುರಿದುಕೊಟ್ಟೆ...
ನಾನಂತೂ......
ಮೊದಲು..
ಕೊನೆಯದೆಂಬ,
ಬಟ್ಟಲುಗಳ ಲೆಕ್ಕವನ್ನೇ.....
ಇಟ್ಟಿಲ್ಲ.
ಶಾಯರಿ ೭೬೦
ರಂಗೀಯನ್ನು
ಕಣ್ಣ ಭಾಷೆಯಿಂದ
ಅರಿಯಲಾಗಲಿಲ್ಲ
ಸಾಕಿ...
ಮರೆಯಲಾಗುತ್ತಿಲ್ಲ...
ಮದ್ಯವನ್ನೇ... ಕುಡಿದರು
ಅರಿವಾಗದವವಳ
ಕುಡಿ ನೋಟವನ್ನು
Friday, February 8, 2019
ತಮ್ಮಾ..
ಹಿಡಿಬೇಕಂತಂದ ಬಿಸಿದ ಬಲಿಯೊಳ್ಗಿಂದ
ಹ್ಯಾಂಗಾರ ಜಿಗ್ದಾಡಿ, ಹಾರಾಡಿ, ಹೊರ್ಗ ಬರ್ಬೋದು
ನೋಡ್ತಮ್ಮಾ...
ಕತ್ತ ಕೊಯ್ಯಬೇಕಂತನ ಕಾದ...ಕಾದ ಗಾಳಕ್ಕ
ಹುಳಕಟ್ಟಿ ಹಿಡ್ಕೊಂಡು, ಮಸಾಲಿ ಅರಿಯೋರಿದ್ರ
ಯಾರನ್ನಂತರ ನಂಬಬೇಕೊ ತಿಮ್ಮ...
ಎದಿಗೆ...ಎದಿಕೊಟ್ಟು ಎದ್ರು-ಬದ್ರು ನಿಂತ್ಗೊಂಡ,
ತೊಡಿ ತಟ್ಟಿ, ನಾನಾ ನೀನಾ ಅಂತಂದ್ರ...
ಒಂದ ಕೈ ನೋಡ್ಕೊಬೊದೊ ತಮ್ಮ...
ಹೆಣ್ಣನ್ನ ಮುಂದ ನಿಲ್ಲಿಸಿ...ಹಿಂದ್ನಿಂದ
ಶಕುನಿ ಹಂಗಾ, ಪಗಡಿ ಗಾಳ ಉರ್ಸೊ..
ಊಸರವಳ್ಳಿಯಂತೊರ್ನ ಗೆಲ್ಲಾಕ ಆಗ್ತದೈನೊ ತಿಮ್ಮ
ಚಂದ್ರನ ಹಾಲ್ಬೆಳ್ಕ ನಂಬ್ಕೊಂಡು ನಡು ಅಂಗಳ್ದಾಗ
ಉಣ್ಕೋತ ಕುಂದ್ರಬ್ಯಾಡೊ ತಮ್ಮಾ...
ಬೆಳ್ಳಿ ಬೆಳ್ಕ ಚೆಲ್ಲೊನ ಎದಿಯಾಗ್ನೂ ಕರಿಕಪ್ಪ
ಕಲಿಗಳಾದವ ಅನ್ನೋದನ್ನ ನೀ ತಿಳ್ಕೊಂಡಿರೊ ತಿಮ್ಮ
ಈಜಾಕ ಬರದಿದ್ರ... ಇನ್ನೊಬ್ರನ್ನ ನಂಬಿ ತೆಪ್ಪ
ಹತ್ತಬಾರ್ದೊ.. ನಡು ನೀರನ್ಯಾಗ ಬಿಟ್ಟ ಹೋಗ್ಬಿಡ್ತಾರೊ
ತಮ್ಮಾ...
ಹುಟ್ಟಿಲ್ದಿದ್ರೂ.. ಯಾವ್ದರ ದಡಾನ ಸೇರ್ಕೊಬೊದು
ತೆಪ್ಪದ ತಳಕ್ಕ ತೂತ ಹಾಕಿ ಹೋದ್ರ..ಯಾವ ತುದಿಯಂತ
ಸೇರ್ತಿಯೋ ತಿಮ್ಮ...
ಬೆನ್ನಿಗೆ ಚೂರಿ ಹಾಕ್ಸಿಕೊಳ್ಳೊದು ನಂಗೇನು ಹೊಸ್ದಲ್ಲ
ಹಿಂದ, ಇರ್ದ ಹೋದೊರ ಗಾಯಾನ ಇನ್ನ ಮಾಸಿಲ್ಲ
ನೋಡ್ತಮ್ಮ...
ಕಂಡು..ಕಂಡು ಹಾಳ ಬಾವ್ಯಾಗ ಬೀಳೊದ ಅಂತಾರಲ್ಲ
ಅದನ್ನ.. ನನ್ನ ನೋಡಿಯೆ ಹೇಳಿರ್ಬೇಕು ನೋಡ್ತಿಮ್ಮಾ..
ಶಾಯರಿ ೭೬೬
ರಂಗೀಯ
ಪ್ರೀತಿಯೊಂದೆ
ಕಪಟವೆಂದುಕೊಂಡಿದ್ದೆ
ಸಾಕಿ...
ಬಟ್ಟಲಿಗೆ ಸುರಿದಿರುವ
ಮದ್ಯವು...
ನಕಲಿಯಾಗಿದೆಯಲ್ಲ
ಶಾಯರಿ ೭೫೪
ಮದ್ಯದಲ್ಲಿರುವ
ನಶೆಯನ್ನು
ಬೇರ್ಪಡಿಸುವುದಾದರೂ
ಹೇಗೆ ಸಾಕಿ...
ಅವಳ ಕಣ್ಣ
ಕೊಳದಲ್ಲಿ
ಈಜಾಡಿ...
ಗೆದ್ದು ಬಂದಂತೆ
Thursday, February 7, 2019
ಶಾಯರಿ ೭೧೨
ಉಸಿರು ನಿಲ್ಲುವ
ಮುನ್ನವೇ...
ರಂಗೀಗಾಗಿ,
ಒಂದೆರಡು
ಸಾಲುಗಳನ್ನು
ಬರೆದಿಡಬೇಕು
ಸಾಕಿ...
ಒಪ್ಪುತ್ತಾಳಂತದಲ್ಲ,
ಆಗಾಗ.. ನನ್ನ
ನೆನಪಿಸಿಕೊಳ್ಳಲು
ಬೇಕಲ್ಲ..
ಶಾಯರಿ ೭೩೨
ಎದೆಯಲ್ಲಿ
ರಂಗೀಯ ಹೆಸರಿಗೊಂದು
ಕವಿತೆಯು
ಬಸುರಿತ್ತು
ಸಾಕಿ...
ಅವಳು
ಹೊರಡುವೆನೆಂದಾಗ,
ಕೊಸರಾಡದೆ...
ಅದರ ಉಸಿರು
ನಿಂತಿತ್ತು...
ಸ್ವಾದರ ಮಾವಾ
ಸ್ವಾದರ ಮಾವನ ಮಗ್ನ
ಮಾಡ್ಕೊತೀನಿ ಅಂದಿದ್ದಿ ಲಗ್ನ
ಪ್ಯಾಟಿ ಹುಡ್ಗಿ ಕಂಡ ತಕ್ಷಣ
ಮರತೆಲ್ಲ ನನ್ನ.. ಇದೇನ ನಿನ್ನ ಲಕ್ಷಣ
ಶಾಯರಿ ೭೦೯
ಮಕ್ಕಳ ಮಾತಿಗೆ
ಸೀತೆಯನ್ನೇನೊ
ಕಾಡಿಗಟ್ಟಿಬಿಟ್ಟನವನು
ಸಾಕಿ...
ಅವಳ ಸೀರೆಯ
ಸೆರಗಂಚಲಿ...
ತನ್ನ ಪ್ರಾಣವನ್ನೆ
ಕಟ್ಟಿಕೊಟ್ಟದ್ದನ್ನು
ಯಾರೂ ಗಮನಿಸಲೆ
ಇಲ್ಲವಲ್ಲ..!!
Wednesday, February 6, 2019
ಶಾಯರಿ ೭೩೯
ನಡೆದಳಲ್ಲ...
ಒಲವಿನ ಬಣವಿಗೆ
ವಿರಹದ
ಬೆಂಕಿಯನಿಟ್ಟು
ಸಾಕಿ...
ಅವಳಾದರೂ...
ತಣ್ಣಗಿರಲಿಬಿಡು,
ನನ್ನ ಗೋರಿಗೆ
ತರ್ಪಣವನ್ನಾದರು
ಬಿಟ್ಟು.
ಶಾಯರಿ ೭೫೭
ಟುಟೇ ಹುಯೇ..
ಪ್ಯಾಲೆ ಸೆ ಭೀ...ಮೈ
ಶರಾಬ್ ಫೀ ಸಖ್ತಾಂವೂ
ಸಾಕಿ...
ಟುಟೇ ಹುಯೇ...
ದಿಲ್ ಸೆ ಮೈ
ಕೈಸೆ ಜೀ ಸಕೂಂಗಾ..
ಶಾಯರಿ ೭೩೭
ಕಂಡ ಕನಸುಗಳೆಲ್ಲ
ಕಂಗಳಲ್ಲೆ...
ಅಸುನೀಗಿದವಲ್ಲ
ಸಾಕಿ...
ಹೂಳಬೇಕೆಂದುಕೊಂಡೆ,
ಮನಸ್ಸಾಗುತ್ತಿಲ್ಲ..
ಮತ್ತೆ ಜೀವ
ಬರಬಹುದೆಂದು
ಕಾದು ಕುಳಿತಿರುವೆ.
ಶಾಯರಿ ೭೫೬
ನಲಿವಿನ ದಿನಗಳು!!!!
ಎಲ್ಲವೂ...ಎಂದೊ...
ಎಲ್ಲೋ..ಕಳೆದು
ಹೋಗಿರುವುವಲ್ಲ
ಸಾಕಿ...
ನೋವಿನ ಹಿಂದೆ
ನಲಿವು!!!
ಎಂಬ ನಂಬಿಕೆ
ನನಗೀಗ ಉಳಿದಿಲ್ಲ.
ಒಂದರ ಹಿಂದೊಂದರಂತೆ
ಮಧು ಬಟ್ಟಲುಗಳಿರುವಾಗ,
ನಾಳೆಯ ಚಿಂತೆ...ನನಗಿಲ್ಲ
ಶಾಯರಿ ೭೫೮
ಕಣ್ಣಲ್ಲೇ...
ಬಾಣ ಹೂಡಿ
ಗಾಯ ಮಾಡಿ
ಹೋದವಳ
ಮಾತೇಕೀಗ
ಸಾಕಿ...
ಎದೆಯುರಿಯ
ನೋವಿಗೆ...
ನಿನ್ನ ಮದ್ಯವೊಂದೆ
ಮದ್ದಲ್ಲವೆ ಈಗ
ಶಾಯರಿ ೭೩೮
ರಂಗೀ...ನೀಡಿದ
ಎದೆಯುರಿಯನ್ನೆ
ಸಹಿಸಿಕೊಂಡವನು
ನಾನು ಸಾಕಿ...
ಇನ್ನೂ, ಬಟ್ಟಲೊಳಗೆ
ಮಲಗಿರುವ ನಿನ್ನ
ಮದ್ಯದುರಿಯು
ಇನ್ನಾವ ಲೆಕ್ಕ
Tuesday, February 5, 2019
ಶಾಯರಿ ೭೪೮
ರಂಗೀಯು ಬಿಟ್ಟು
ಹೋದಾಗ
ನಿನ್ನ ಮಧು
ಬಟ್ಟಲನ್ನು ಹಿಡಿದುಕೊಂಡೆ
ಸಾಕಿ...
ಮತ್ತೀಗ, ಎದುರಿಗೆ
ಮತ್ತೆ ರಂಗೀಯು
ಬಂದು ನಿಂತಿರುವಳಲ್ಲ!!!
ಮಧು ಬಟ್ಟಲನ್ನು ಈಗ
ಹೇಗೆ ಬಿಟ್ಟು ಬಿಡಲಿ
ಶಾಯರಿ ೭೬೫
ಸುಳ್ಳುಗಳನ್ನೆ
ಹೇಳುವ ಮೊದಲು
ಸತ್ಯವನ್ನೇ...
ನುಡಿದಿದ್ದರೆ
ಸಾಕಾಗಿತ್ತು ಸಾಕಿ....
ಕೈಗೆ ಮಧು
ಬಟ್ಟಲನ್ನು ಕೊಡುವ
ಬದಲು....
ವಿಷವನ್ನೆ ಕೊಟ್ಟಿದ್ದರು
ಸಾಕಾಗುತ್ತಿತ್ತು...
ತಮ್ಮಾ
ನಾಳೆಯನ್ನೊ ಕಟ್ಟಿದ ಬುತ್ತಿ ಗಂಟಿನ
ಚಿಂತಿ ಇವತ್ತ್ಯಾಕ ಮಾಡ್ತೀಯೋ ತಮ್ಮಾ...
ಹೋಳ್ಗಿಯೊ...ಸಜ್ಜಕಾನೊ...ತಂಗ್ಳ ರೊಟ್ಟಿಯೊ,
ಸೋನಾ ಮಸೂರಿ ಅನ್ನಾನೊ..ಇವತ್ತ ಏನ್
ಸಿಕ್ಕೈತಿ, ಬಾಯ್ಚಪ್ಪರಿಸಿ ಉಂಡ್ಬಿಡೊ ತಿಮ್ಮ..
ಇವತ್ತ ಉಣ್ಣೊದ ಬಿಟ್ಟ... ನಾಳಿಗೀ...ಇರ್ಲಿ,
ನಾಳಿಗೀ ಇರ್ಲಿ ಅನ್ಕೊಂತ...ಕೂಡಿಟ್ಕೊಂತ
ಕುಂದ್ರಬ್ಯಾಡೊ ತಮ್ಮಾ...
ಊರ ತುಂಬಾ, ಹಸ್ದ ನಾಯಿಗಳ ಸಾಕಷ್ಟ
ಓಡಾಡಾಕ ಹತ್ತ್ಯಾವು
ಸುಳ್ಳಿನ ಕಂತಿ ಹೊತ್ಗೊಂಡ ಊರೂರ ಸಂತ್ಯಾಗ
ಮಾರ್ಕೊತ ಹೊಂಡ್ಬ್ಯಾಡ ತಮ್ಮಾ...
ಶಾಯರಿ ೭೪೦
ಹರಿದುಹೋದ
ಅರ್ಧ ಚಾಪೆಯ
ಮೇಲಾದರೂ
ಕೂರಿಸು....
ಚಿಂತೆಯೇನಿಲ್ಲ
ಸಾಕಿ...
ಎದೆಯುರಿಯು
ತಣ್ಣಗಾಗುವುದಾದರೂ
ಹೇಗೆ?
ಮಧು ಬಟ್ಟಲಿಗೆ
ಅರ್ಧ ಮದ್ಯವನ್ನೆ
ಸುರಿದಿಟ್ಟರೆ ಹೀಗೆ
ಶಾಯರಿ ೭೪೨
ರಂಗೀಯ ಒಲವಿನಲಿ
ಬಿದ್ದ ಮನಸ್ಸಿದು
ಕೊರಡಾಗಿತ್ತು
ಸಾಕಿ...
ನಿನ್ನ
ಮಧು ಬಟ್ಟಲಿನಲಿ
ಮುಳುಗಿದ ಮೇಲೆ...
ಮನಸ್ಸು ಈಗೀಗ...
ಕೊನರತೊಡಗಿದೆ.
Monday, February 4, 2019
ಗಾಲಿಬ್
ಈ ಇಳಿಸಂಜೆಗೊಂದು ನಾನೀಗ....
ರಾಗವ ನುಡಿಸುವೆ
ಆಲಿಸುವೆಯಾ? ಗಾಲಿಬ್...
ಮಿಡಿವ ಸ್ವರಗಳಲೊಂದು ಶೃತಿಯು
ತಪ್ಪಿದರೂ...ತಪ್ಪಬಹುದು
ಕ್ಷಮಿಸಿ, ಒಪ್ಪಿಯೊಮ್ಮೆ ತಲೆದೂಗಿಬಿಡುವೇಯಾ?
ಎದೆಯುರಿಯ ಬೇಗೆಗೆ ನಿನೇನೊ...
ಒಂದೇ...ಗುಟುಕಿಗೆ ಮದ್ಯದ ಬಾಟಲಿಯನ್ನೇ
ಕುಡಿದಿಟ್ಟು ಬಿಡುವೆ ಗಾಲಿಬ್..
ಈ ರಾತ್ರಿಯೊಂದಕೆ ನಾನ್ಹೇಗೆ ಸಪ್ತ ಸ್ವರಗಳ
ಮಥಿಸಿ...ನುಡಿಸಿ..ನೋವನ್ನು ಮರೆಸಿಬಿಡಲಿ...
ಒಂದಿರುಳಲಿ ಕಳೆದ್ಹೋಗುವ ನೋವೇನದು?
ಮರೆತೆ...ಹೋಗುವುದಾದರೆ...ಬದುಕುಳಿಯುವೇಯೆ
ನೀನು?
ಚಿಂತೆಯಿಲ್ಲ...ಬೇಸರವು ಏನಿಲ್ಲ, ಈ ಸಂಜೆಗೊಂದು
ಮಲ್ಲಿಗೆಯನು ನೀನು ತಾರದಿದ್ದಕ್ಕೆ ಗಾಲಿಬ್..
ಎಷ್ಟೋ ಸಂಜೆಗಳಿಗೆ...ಆಸೆಯಿಂದ ತಂದುಕೊಟ್ಟ
ಹೂಗೂಚ್ಚಗಳನು ನಾನು ಮುಡಿಯಲೇ...ಇಲ್ಲ
ಕಟ್ಟಿದ ಹಾಳೆಯನ್ನು ಬಿಚ್ಚದೆ, ಕಸದ ತೊಟ್ಟಿಗೆ
ಎಸೆದಿದ್ದೇನೆಲ್ಲ...!!!
ಬಾಳಲ್ಲಿ ಏನಾದರು ಹೆಚ್ಚಾದರೂ...ಅದು ಕಸವೆ
ಹೌದಲ್ಲ?!!!!
ನಾನೇನು ದೇವತೆಯೇನಲ್ಲ...ರಂಗೀ ನೀಡಿ ಕಳಿಸಿದ
ನೋವು...ಚಿಕ್ಕದೇನಲ್ಲ, ಮಿಡಿಯುವೆ ಮಾತಿಗೆ,
ನುಡಿಸುವೆ ನೋವಿಗೆ ಗಾಲಿಬ್...
ಅರೆ ಘಳಿಗೆಯಾದರು ಮಲಗಿ ಅತ್ತುಬಿಡು ಈ
ತೊಡೆಯ ಮೇಲೆ, ನಿನ್ನ ಕಣ್ಣೀರ ಉಪ್ಪಿಗೆ ನೆನೆದ
ಚರ್ಮವಿದು ಉರಿಯುವುದಿಲ್ಲ...ಎಷ್ಟೋ
ಭಗ್ನಿಗಳೆದೆಯ ಕಣ್ಣೀರ ನುಂಗಿಕೊಂಡಿದೆ ಲೆಕ್ಕವಿಲ್ಲ
ಏಕೆ? ಹೀಗೇಕೆ? ಇಷ್ಟೊಂದು ಉಸಿರನ್ನು ಗಟ್ಟಿಯಾಗಿ
ಹಿಡಿದುಕೊಂಡಿರುವೆ, ಗಾಲಿಬ್
ಬರುತ್ತಿರುವುದೀಗ ಪೌರ್ಣಿಮೆ, ಮತ್ತೆ ಬೆಳದಿಂಗಳ
ಚೆಲ್ಲಲು... ಅವಳು ಬರುವಳೆಂದುಕೊಂಡೇಯಾ?
ಬರುವಳಾ?....ಬರುವಳಾ?.....ಬರುವಳೆಂಬುದೊಂದು ಭ್ರಮೆಯೊ?
ಸುಟ್ಟುಬಿಡು ಸ್ಮೃತಿ ಪಟಲದಲಿ ಗೂಡು ಕಟ್ಟಿರುವ
ಅವಳ ನೋವಿನ ನೆನಪುಗಳನ್ನು
ಮಲಗಿಬಿಡು... ಇಂದಾದರೂ ಕೇಳುತಲಿ ಹೊಸ ರಾಗವನು
ಶೃತಿ ತಪ್ಪಿದರೆ...ತಪ್ಪಲಿ ಬಿಡು, ನೋವು... ಇದೊಂದೆ ದಿನದ್ದೆನಲ್ಲವಲ್ಲ !!!!
Saturday, February 2, 2019
ಶಾಯರಿ ೭೨೮
ಒಲವ ಬೇಡಿಕೊಂಡ
ಬಂದ ಜೋಳಿಗೆ
ಬರಿದಾಗಿಯೇ....
ಇದೆ ಸಾಕಿ...
ನಿನ್ನ ಕಾಲ್ಗೆಜ್ಜೆಯ
ನೃತ್ಯಕ್ಕೆ ಸಿಕ್ಕು...
ನರಳಿದ ಮಲ್ಲಿಗೆಗಳನ್ನಾದರು
ಸುರಿದುಬಿಡು...
ಬರಿದಾದುದದರ
ನಿರಾಸೆಯಾದರೂ...
ಕೊನೆಗೊಳ್ಳಲಿ.
ನಮ್ಮವ್ವ
ಕರಿಕಲ್ಲ ದ್ಯಾವ್ತಿಗೆ
ಉಡಿ ತುಂಬಿ..
ಹೆಣ್ಣ ನೋಡಾಕ
ಹೋಗ್ಯಾರು
ನೋಡವ್ವ..
ನೋಡಿದ ಹುಡ್ಗಿ
ಕಪ್ಪಾದಳನ್ಕೊಂಡು..
ಮುಡಿಯಾಕ ಹೂವಾನು
ಕೊಡ್ದ, ಎದ್ದ ಬಂದಾರಲ್ಲೊ
ನಮ್ಮವ್ವ
ಊರಾಗಿನ ಎಲ್ಲಾ
ಹೆಣ್ಣ ದ್ಯಾವ್ರಿಗೆ ಹರ್ಕಿ
ಹೊತ್ಗೊಂಡ ಬರ್ತಾರ
ಸೊಸಿ ಗಂಡ್ಮಗು
ಹಡಿಲೆಂತ
ಕೇಳವ್ವ...
ಸೊಸಿ ಆರಾಮಾಗಿ
ಹೆಣ್ಣ ಹಡದ್ರ...
ಮನೇನ ಜಗ್ಲಿ ಮ್ಯಾಲಿನ
ದೇವ್ರು...ಎರ್ಡ ದಿನ
ದೀಪ ಕಾಣೊದಿಲ್ಲಲ್ಲೊ
ನಮ್ಮವ್ವ
ಹೆಣ್ಣು ಶಕ್ತಿ ದ್ಯಾವ್ತಿ
ಅಂತಂದ ಊರ್ತುಂಬಾ
ಹುಣ್ವಿಗೆ ಪ್ರಾಣಿನ
ಬಲಿ ಕೊಡ್ತಾರು
ನೋಡವ್ವ...
ಹೊಟ್ಟ್ಯಾಗೊಂದು
ಹೆಣ್ ಜೀವಾ ಉಸರೈತಂದ್ರ,
ಪಿಂಡಾ ಬಲಿಯೊ ಮುಂಚೇನ,
ಬಲಿ ತಗೊಂಡ ಬಿಡ್ತಾರಲ್ಲೊ
ನಮ್ಮವ್ವ
Friday, February 1, 2019
ಶಾಯರಿ ೭೬೪
ಪ್ಯಾಲೆ...ಪ್ಯಾಲೆಗಳೆ
ಬರಿದಾಗಿ ಹೋದವು...
ರಂಗೀಯ ನೆನಪಿನ
ಬಿಕ್ಕಳಿಕೆಗಳು ಮಾತ್ರ
ನಿಲ್ಲುತ್ತಿಲ್ಲ ಸಾಕಿ...
ಎದೆಯ ಮೇಲೆ ನಿನ್ನ
ಅಂಗೈಯನ್ನಾದರೂ ಇಟ್ಟು
ಬಿಡು ಒಮ್ಮೆ....
ಅಂಗೈಯ ಬಿಸಿಗೆ...ಬಿಕ್ಕುಗಾಳದರು
ನಿಲ್ಲಲಿ, ಇಲ್ಲವೆ....
ಉಸಿರಾದರೂ ನಿಂತು
ಹೋಗಲಿ.
ಶಾಯರಿ ೭೪೭
ಈ ಜೋಗಿಯ
ಜೋಳಿಗೆಯನದೆಷ್ಟು
ತಡಕಾಡುವೆ ಸಾಕಿ...
ಬಿಡಿಗಾಸಿಗಾಗಿ
ಕೊಸರಿ ಜಾಡಿಸಿಬಿಡುವೊಮ್ಮೆ
ನಿನ್ನರಮನೆಯ ಕಿಟಕಿಯೊಳಗಿಂದ
ಉಸಿರಲ್ಲದೆ ಬಿದ್ದಿರುವದೇಷ್ಟೊ
ಪತ್ರಗಳಿವೆ..ರಂಗೀಯ ಹೆಸರಿನಲ್ಲಿ...
ನಿನ್ನಿಂದಾದರೂ ಅವುಗಳಿಗೆ
ಮುಕ್ತಿ ಸಿಗಲಿ.
ಶಾಯರಿ ೬೭೨
ಉಸಿರಿರುವ ಮುನ್ನವೇ...
ಗೋರಿಯ ಮೇಲೆ
ಹೆಸರನ್ನು ಬರೆಸಿಬಿಟ್ಟಿರುವೆ
ಸಾಕಿ...
ಅವಳಿಗೆ ಹೇಳಿ
ಕಳುಹಿಸು....ಪದಗಳು
ತಪ್ಪಿದ್ದರೆ, ತಿದ್ದುವಳು
ಅವಳೊಬ್ಬಳು
ಶಿಕ್ಷ-ಕಿ..
ಶಾಯರಿ ೬೭೫
ಮಧು ತುಂಬಿದ
ಗಾಜಿನ ಬಿರಡೆಯನ್ನು
ಸದಾ.... ನನ್ನ
ಪಕ್ಕದಲ್ಲಿಯೇ...
ಇಡದಿರು ಸಾಕಿ...
ನನ್ನೆದೆಯ
ವಿರಹದ ಬಿಸಿ
ಸೋಕಿ..ಅದೂ
ಕೂಡಾ, ಕರಗಿ
ಹೋದಾತು....
ಶಾಯರಿ ೭೪೧
ಉಸಿರಿದ್ದಾಗಲೆ ಬಾರದವಳು
ಉಸಿರು ನಿಂತ ಮೇಲೆ
ಗೋರಿಗೆ ಮಣ್ಣನ್ನು
ಸುರಿಯಲೆಂದು ಬರುವಳೇನು
ಸಾಕಿ...
ಬರುವುದಾದರೆ..
ಬರಿಗೈಯ್ಯಲ್ಲಿಯೆ...ಬರಲಿಕ್ಕೆ
ಹೇಳು.
ಗೊತ್ತಿಲ್ಲ...ಗೋರಿಗೆಂದೆ
ತರುವ ಹೂಗಳ ಮಕರಂದ,
ಸತ್ತ ಕನಸುಗಳಿಗೂ ಜೀವ
ಕೊಟ್ಟಾತು...
ಮಣ್ಣಿನೊಳಗೂ...ಮತ್ತೆ
ಹೊಸ ಬೇಗುದಿಯನ್ನೆ
ಹುಟ್ಟು ಹಾಕಾತು..