Thursday, May 31, 2018

ಶಾಯರಿ ೨೧೭

ಎಂತಹ
ಮೋಹದ
ಬಲೆಯಲ್ಲಿ
ಬಿಳಿಸಿಬಿಟ್ಟಿತು
ಸಾಕಿ...
ಅವಳ ಕಣ್ಣಿನ
ಕಾಡಿಗೆ

ಅರಿವಾಗುವ
ಮುನ್ನವೇ....
ದಬ್ಬಿಬಿಟ್ಟಿದೆ
ನನ್ನನು...
ವಿರಹದ
ಕಾಡಿ...ಗೆ

Wednesday, May 30, 2018

ಸಾಕಿ ೩

ಸತ್ತು...ಗೋರಿಯ ಸೇರಿದ
ಮೇಲೂ...ಅವಳೇಕೆ ಹೂವೊಂದ
ನಿಟ್ಟು ಹೋದಳು ಸಾಕಿ...
ಪ್ರೀತಿಗೊ...ವಿರಹಕೊ...ಸಂತಾಪಕ್ಕೊ..?
ಮತ್ತೆ... ನಾನೆಂದು ಎದ್ದು ಬರುವುದಿಲ್ಲವೆಂಬ
ಸಂತೋಷಕ್ಕೊ....?

ಕೊಟ್ಟ ಹೂವನು ಮೂಸಿಯೂ.... ನೋಡದೆ,
ಕಾಲಲಿ ಹಾಕಿ ಹೊಸಕಿ ಹೋದವಳು...
ಹುಗಿದ ನನ್ನ ಮಣ್ಣ ಮೇಲೇಕೆ ಬಳ್ಳಿಯ ನೇಡಲು
ಬಂದಳು ಸಾಕಿ....
ಹೂವೊಳಗಿನ ಗಂಧದ ಬೆಲೆಯೆ...ಗೊತ್ತಿಲ್ಲದವಳಿಗೆ
ನನ್ನೆದೆಯೊಳು ತಿಡಿದ್ದ ಪ್ರೀತಿಯ ಸುವಾಸನೆಯನ್ನಾದರು
ಹೇಗೆ ಅರಿತಾಳು...

ಎದೆಯಲ್ಲಿ ಬಾಡಿಹೋದ ಅದೇಷ್ಟೊ
ಹೂಗಳ ಮುಳ್ಳು ಕಡ್ಡಿಗಳು ಚುಚ್ಚಿಕೊಂಡಿವೆ..
ಸಾಕಿ....
ತೆಗೆಯುವವರು...ಯಾರಿಲ್ಲವೆಂದು ತಾನೆ...
ಭರಿಸಲಾಗದ ನೋವನ್ನು ಹೊತ್ತು...ಸತ್ತು
ನಾನಿಂದು ಮಣ್ಣ ಸೇರಿರುವುದು...

ನಿನ್ನೊಬ್ಬಳ ಹೊರತುಪಡಿಸಿ, ಯಾರೂ ಬರದಂತೆ
ನನ್ನ ಗೋರಿಗೊಂದು ಬೇಲಿಯನ್ನು ಹಾಕಿಸಿಬಿಡು
ಸಾಕಿ....
ತೂಗು ಹಾಕಿಬಿಡು ನನ್ನ ಹೆಸರಿನ ಫಲಕವನ್ನು...
ಸತ್ತದ್ದು ನಾನೆ ಅಂತ ಎಲ್ಲರಿಗೂ ಗೊತ್ತಾಗಲಿ...
ಅವಳ ಮೋಸದಿಂದಾಗಿಯೆ ನಾನು ಅಳಿದದ್ದೆಂದು
ಯಾರಿಗೂ ಗೊತ್ತಾಗದಿರಲಿ.....

ಹುಚ್ಚರೆದೆಯಲ್ಲಿ ಅಳಿದುಳಿದು ಅರಳಿರುವ
ಅಲ್ಪ ಪ್ರೀತಿಯೂ..... ಬಾಡಿ ಹೋದಾತು...
ಸಾಕಿ....
ಎಲ್ಲರಿಗೂ ನನ್ನಷ್ಟು ನೋವನ್ನು ನುಂಗಿಕೊಳ್ಳುವ
ಶಕ್ತಿಯು ಇರಬೇಕಲ್ಲ...?
ನೋವನ್ನೆ ಸುಖವಾಗಿಸಿಕೊಳ್ಳುವ ಪರಿಯನ್ನು
ಅವರು ಕಲಿತಿರಬೇಕಲ್ಲ...?

ಸಾಕು...ಸಾಕು...ಸಾಕಿ,
ಕಳಿಸಿಬಿಡು ಮಸಣದಿಂದಾಚೆಗೆ ಅವಳನ್ನು
ಅವಳ ಹೆಜ್ಜೆಯ ಗುರುತುಗಳು ಮೂಡದಂತೆ...
ಸ್ವರ್ಗಕ್ಕೊ...ನರಕಕ್ಕೊ...ಹೋಗಬೇಕಾದವನು
ಮರಳಿ ಮರುಳಾಗಿ ಅವಳ ಹೆಜ್ಜೆಯ ಜಾಡನ್ನು
ಹಿಡಿಯಬೇಕಾದಿತು....!!!!!

Tuesday, May 29, 2018

ಶಾಯರಿ ೨೧೬

ಅದೇಷ್ಟು
ಒರೆಸುವೆ
ಬಿಡು
ಸಾಕಿ...
ಕನ್ನಡಿಯನ್ನು

ಮುಖದ ಮೇಲಿನ
ನಗುವೆ
ಕಳೆದು
ಹೋಗಿದೆ
ಮಾಡುವುದಿನ್ನೇನು..?

ಶಾಯರಿ ೨೧೫

ಹೇಗಿದೆ ಎಂದು
ಕೇಳಬೇಡ
ಸಾಕಿ...
ಎದೆಯ
ನೋವು...

ಬಟ್ಟಲೊಳಗಿನ
ಮಧುವಿನ
ಸವಿಯನ್ನಾದರು
ಹೇಳಬಲ್ಲೆ.....
ಹೇಗೆ ಹೇಳಲಿ..?
ಈ ಎದೆಯ
ನೋವು...

ಚು ೪೨೧

ಅವಳ ಪ್ರೀತಿಯ ಅಂಗಳದಲ್ಲಿ
ಮಲಗಿದ್ದೆ ಒಲವಿನ ಚಾದರವ
ಹೊದ್ದಿಸುವಳೇನೊ...? ಎಂದು
ಎಣಿಸಿರಲಿಲ್ಲ...ನನ್ನ ಪ್ರೀತಿಯ
ಗೋರಿಗೆ ಹೂವಿನ ಚಾದರ
ಹೊದ್ದಿಸುವಳೆಂದು...

ಚು ೪೧೯

ಅರಿತವರು ಹೇಳಿದ್ದರು, ಅವಳ ಪ್ರೀತಿಯ
ಜೋಳಿಗೆಯಲ್ಲಿ ಸೋಲದವರೆ ಇಲ್ಲ
ಅವಳ ಜೋಳಿಗೆಯಲ್ಲಿ ಸಣ್ಣದೊಂದು
ರಂಧ್ರವಾಗಿದೆ, ನಮಗಾರಿಗೂ ಅದರ ಅರಿವಾಗಲೆ ಇಲ್ಲ

Monday, May 28, 2018

ನೆಮ್ಮದಿ ಸಿಗಲಿ....

ನಿನ್ನ ಕೆಂದುಟಿಯಂಚಿಂದ ಮಧು...
ಬಟ್ಟಲನೊಮ್ಮೆ ಚುಂಬಿಸಿ ಕೊಟ್ಟುಬಿಡು
ಸಾಕಿ...
ಒಲವಲ್ಲಿ ಬಾಯಾರಿ ಮಣ್ಣು ಸೇರಿದ
ಎಷ್ಟೋ....ಭಗ್ನ ಹೃದಯಗಳಿವೆ.... ಎರಡು
ಬಟ್ಟಲು ಮದಿರೆಯನ್ನಾದರು...ಸುರಿದು
ಬರುವೆ, ತಣ್ಣಗಿರಲೆಂದು ಗೋರಿಯಾ ಮೇಲೆ...

ನಿನ್ನ ಮಧುವೊಂದನ್ನು ಬಿಟ್ಟು....
ಮುಕ್ತಿಕೊಡುವ ಬೇರಾವ ಅಮೃತವು ಉಂಟು
ಸಾಕಿ...
ವಿಷವನ್ನೆ...ಕುಡಿದವರು ಬದುಕಿದ್ದರಲ್ಲ...!!!!
ನಿನ್ನ ಮಧುವನ್ನೆ ಕುಡಿದು...,ಅಮೃತವೇನಲ್ಲ
ವಾದರು...ಉಳಿಸಿಕೊಂಡಿತ್ತಲ್ಲ, ಉಳಿದರಾದರೂ...
ಅವಳ ನೆನಪುಗಳ ಉರುಳಿಗೆ ಸಿಕ್ಕವರೊಬ್ಬರಾದರು....
ಉಳಿಯಲಿಲ್ಲವಲ್ಲ...

ಘಲ್...ಘಲ್..ಘಲ್...ಎನ್ನುವ ನಿನ್ನ
ಗೆಜ್ಜೆಯ ಕಟ್ಟಿಕೊಂಡು...ಈ ನೀರವ
ನಿಷ್ಕರುಣಿ ಮಸಣದಲ್ಲೊಮ್ಮೆ ನಡೆದು ಹೋಗು
ಸಾಕಿ...
ಗೆಜ್ಜೆ ನಾದಗಳ ಸದ್ದಿಗೆ...ಅತೃಪ್ತ ಆತ್ಮಗಳೆಲ್ಲವು
ಅರೆ ಘಳಿಗೆ, ಶಾಂತಿಯಿಂದಾದರು ನಿದ್ರಿಸಲಿ...

ಹ್ಹ....ಹ್ಹ...ಹ್ಹ...ಹುಚ್ಚನೆನ್ನುವರು, ನನ್ನನೆಲ್ಲರು
ಸಾಕಿ... ಗೋರಿಗಳ ಮುಂದೆ ಕುಳಿತು ನಾ....
ಮಾತನಾಡುವುದ ಕಂಡು..., ಹಣ್ಣಿನ ರುಚಿ...ಕಚ್ಚಿ...
ಸವಿದ ಗಿಳಿಗಳಿಗೆ ಮಾತ್ರ ಗೊತ್ತು..!!!
ಹೆಣ್ಣಿನ ಪ್ರೀತಿಯ ಸವಿಯನ್ನು ಸವಿಯಲಾಗದೆ
ಅನುಭವಿಸುವ ಯಾತನೆ ಪ್ರೇಮಾತ್ಮಗಳಿಗಷ್ಟೇ...ಗೊತ್ತು..

ಏನೆಂತ ವಿವರಿಸಲಿ ಸಾಕಿ... ನಿನಗೆ, ಹುಗಿದ ಮಣ್ಣಿನೊಳಗು
ಸಿಕ್ಕಿಲ್ಲವಂತೆ ಶಾಂತಿ... ಸೀಗುವುದಾದರು ಹೇಗೆ ?
ಲೆಕ್ಕವಿರದಷ್ಟು ದೇಹಗಳ ನುಂಗಿ..ನುಂಗಿ...ಮಲಗಿಸಿಕೊಂಡ ಭೂ ಒಡಲ ಕಣಕಣದಲ್ಲೂ...
ಬರಿ ವಿರಹದ ತಾಪವೆ.... ತುಂಬಿಕೊಂಡುಬಿಟ್ಟಿದೆಯಂತೆ,
ಬದುಕಿದ್ದಾಗಲೆ ಬೇಯಿಸಿದಂತಹ ವಿರಹದ ತಾಪ,
ಇನ್ನೂ ಮಣ್ಣು ಸೇರಿದ ಮೇಲೆ...? ನೀನೆ ಊಹಿಸಿ ನೋಡು...

ಗೋರಿಯೊಳಗೆ ಹುಗಿದು ಹೋದವರ ಪಾಡು
ನಿನಗೇನು ಗೊತ್ತು ಸಾಕಿ....
ನೀನೇನೊ...ಬದುಕಿದ್ದಾಗ, ಉರಿಯುವ ಎದೆಗಳನ್ನು
ಉಳಿಸಿಕೊಳ್ಳಲೆತ್ನಿಸಿದೆ ಮಧುವನ್ನು ಹಾಕಿ...
ಗೋರಿಯ ಮೇಲೆ ಅವಳಿಟ್ಟು ಹೋದ ಗುಲಾಬಿಯ
ಮುಳ್ಳುಗಳು ಇವರನ್ನು.... ನರಕಕ್ಕೂ ಹೋಗದಂತೆ
ಬೇಲಿಯ ಹಾಕಿಬಿಟ್ಟಿವೆಯಂತೆ ಮಿಸುಕದಂತೆ, ಕಟ್ಟಿಹಾಕಿ...

ಹೇಗೆ ಹೇಳಲಿ....? ಸಾಕಿ....
ಗೋರಿಯೊಳಗೆ ಮಲಗಿದವರೆಲ್ಲ...ಸತ್ತದ್ದು
ಹೊರನೋಟಕ್ಕಷ್ಟೆ.....ಒಳಗಣ್ಣನು ತೆರೆದಾದರು ನೋಡೊಮ್ಮೆ...ಅವಳ ಹೆಸರಿನ ಜಪದಲ್ಲೆ...
ಸುತ್ತುತಿಹವು...ದುರಾತ್ಮಗಳು...? ಮಸಣವನು...
ಸಾಕಿ......
ದಿನವು ನರ್ತಿಸಿ...ನರ್ತಿಸಿ....ಮದರಂಗಿ ಮೆತ್ತಿದ
ನಿನ್ನ ಕಾಲಡಿಯಲಿ ಸಿಕ್ಕು, ಹೊಸಕಿ ಹೋದ
ಮಲ್ಲಿಗೆಗಳನ್ನಾದರು......ತಂದು, ಚೆಲ್ಲಿಬಿಡು ಈ ಗೋರಿಗಳ ಮೇಲೆ, ನೆಮ್ಮದಿ ಎನ್ನುವುದಾದರೂ... ನಿನ್ನ ಪಾದದ
ಧೂಳಿನಿಂದಾದರು ಸಿಗಲಿ...

Saturday, May 26, 2018

ಮೋಸ

ತೆರೆದ ಕಿಟಕಿಯ ಬಾಗಿಲುಗಳನ್ನು
ಮುಚ್ಚಿಬಿಡು ಸಾಕಿ.... ಇಂದು ಪೌರ್ಣಿಮೆ..
ಅವನಿಗೆ ಗೊತ್ತಾಗದಿರಲಿ ನಾ ಹೋದ ಮೋಸ
ಅವಳ ಮೇಲೆ ಅವನು...ಸಾಕಷ್ಟು ಒಲವಿನ
ನಂಬಿಕೆಯನ್ನಿಟ್ಟುಕೊಂಡಿದ್ದಾನೆ...

ಪೊಟ್ಟಣದಲ್ಲಿ ಕಟ್ಟಿ ತಂದ ಮಲ್ಲಿಗೆಯ
ಹೂವನ್ನು ಬಿಚ್ಚದಿರು ಸಾಕಿ...
ವಿರಹದ ತಾಪಕ್ಕೆ ಸಿಕ್ಕು ನಲುಗಿ ಹೋದಾವು..!!!
ನಿನ್ಮನೆಯ ಗೋಡೆಗೆ ನೇತು ಹಾಕಿರುವ ದೇವರ
ಪಟಕ್ಕಾದರು ಹಾಕಿಬಿಡು ಮುಕ್ತಿಗೊಳ್ಳಲಿ...

ಅಕ್ಕಸಾಲಿಗನು ಎಷ್ಟೊಂದು ಗೆಜ್ಜೆಗಳ ಪೋಣಿಸಿ
ಕೊಟ್ಟಿದ್ದಾನೆ ಅವಳ ಜಿಂಕೆ ಕಾಲ್ಗಳಿಗೆ....
ಎದೆಯ ಬಡಿತವೆ ನಿಂತು ಹೋಗುತ್ತಿರುವಾಗ,
ನನ್ನೆದೆಯ ಮೇಲೆ ಅವಳ ಅಂಗಾಲನ್ನಿಟ್ಟು...
ಕಾಲ್ಗೆಜ್ಜೆಯ ಕಟ್ಟಿ... ಅವಳೊಂದಿಗೆ ಹೆಜ್ಜೆ ಹಾಕಬೇಕೆಂದಿದ್ದ
ಸಂಜೆಯು... ಈಗಾಗಲೆ ಗೋರಿಯಲ್ಲಿ ಹೂತು ಹೋಗಿದೆ

ನನ್ನ ಪಾಳಿ....

ಮುಖಕ್ಕೆ ಹಚ್ಚಿದ ಬಣ್ಣವು
ಕರಗುತಿದೆ ರವಿಯ ತಾಪಕೆ

Friday, May 25, 2018

ಬಣ್ಣ ಬದಲಿಸದ ಸಂಜೆ

ಉತ್ತರ ಸಿಗದ...ಅದೇಷ್ಟೊ
ಸಂಜೆಗಳನ್ನು ಕಳೆದುಬಿಟ್ಟಿರುವೆ...
ಕಳೆಯುತ್ತಲಿರುವೆ, ಮೌನದ ಬೀಗವನ್ನು
ಹಾಕಿ...ಅವಳು ಬಿಟ್ಟು....ಎದ್ಹೊದ ಬೆಂಚಿನಲಿ.
ಮುಳುಗುವ ಸೂರ್ಯನ ರಂಗೇನು ಬದಲಾಗಿಲ್ಲ,
ಅವಳು‌ ಮಾತ್ರ ತನ್ನ ಬಣ್ಣವನ್ನು ಬದಲಿಸಿಬಿಟ್ಟಳು...
ನಗು ಬರುವುದು ನನಗೊಮ್ಮೊಮ್ಮೆ...
ಅವಳಾಡಿದ ಮಾತುಗಳ ನೆನೆದು...ಸೂರ್ಯ
ಚಂದ್ರರಿರುವವರೆಗೂ.....????
ಮುಂದಿನದ್ದು ನಿಮ್ಮ ಊಹೆಗೆ ಬಿಟ್ಟದ್ದು...

ನಡು ರಾತ್ರಿಯವರೆಗೂ...ಕುಳಿತುಬಿಟ್ಟಿರುತ್ತೇನೆ
ಚಿಂತಿಸುತ್ತಲ್ಲ....ವಿಮರ್ಶಿಸುತ್ತಾ... ಪ್ರೀತಿ ನಿಲುಕುತ್ತಾ,
ಚೌಕಟ್ಟಿನೊಳು ನಿಂತು ಸೋಲುತ್ತಾ...ಗೆಲ್ಲುತ್ತಾ...
ಅಥವಾ ಫೀರ್ಯಾದುದಾರನನ್ನೆ ಕೊಂದು ಬಿಡುತ್ತಾ..
ಕೊಲ್ಲುವುದೆ ಪ್ರೀತಿಯಾದರೆ...? ಪ್ರೀತಿಸಲೆಬೇಕಾ...?
ಹುಚ್ಚಪ್ಪಾ....ಪ್ರೀತಿಗೆ ಕಣ್ಣಿಲ್ಲ ಹುಟ್ಟುತ್ತದೆ...ಕಾಮಕ್ಕು
ಕಣ್ಣಿಲ್ಲ !!!! ಉರಿದುಹೋಗಿತ್ತದೆ.. ನೀನಾವ ವರ್ಗದವನು..?

ಎರಡರಲ್ಲೂ ಮೈತ್ರಿ ಮಾಡಿಕೊಂಡಿದ್ದರೆ ? ಒಂದು
ಸಾಯುತ್ತಿತ್ತು...ಇನ್ನೊಂದು ಉರಿಯುತ್ತಿತ್ತು...
ಒಂದನ್ನು ಕೊಂದು ಬದುಕುವುದೆ ಜಗದ ನಿಯಮ
ಒಂದು ಕಲ್ಮಷ...ಮಗದೊಂದು ನಿಷ್ಕಲ್ಮಷ..
ಛೆ...ಛೆ....ಇದೇನಿದು ವಿಮರ್ಶಿಸುತ್ತಾ ಹೋದಂತೆ
ಉತ್ತರವಿರದ ಪ್ರಶ್ನೆಗಳೆ ಮತ್ತೆ ಎದುರುಗೊಳ್ಳುವವಲ್ಲ
ಎದ್ದುಬಿಡುತ್ತೇನೆ.. ನಿದ್ದೆ ಬರದ ರಾತ್ರಿಯನ್ನು ಕಳೆಯಲು
ಮತ್ತೆ....ಮತ್ತೆ...ಮತ್ತೆ...ಮತ್ತೆ....ಅದೆ ಸಂಜೆ.. ಅವನೆ
ಸಾವಿಲ್ಲದ ರವಿ...ಉತ್ತರ ಸಿಗದ ನೂರೆಂಟು ಪ್ರಶ್ನೆಗಳು
ಹುಡುಕಬೇಕೆಂದೇನೊ ಹೊರಡುತ್ತೇನೆ... ಅವಳು
ಬಿಟ್ಟು ಹೋದ ಬೆಂಚು ಒಂಟಿಯಾಗುವುದಲ್ಲವೆಂದು
ಮತ್ತಲ್ಲಿಯೆ ಕುಳಿತುಬಿಡುತ್ತೇನೆ... ಬಣ್ಣ ಬದಲಿಸದ
ಸಂಜೆಯನ್ನು ನೋಡುತ್ತಾ...

Wednesday, May 23, 2018

ಇತಿಹಾಸದ ಪುಟದಲ್ಲಿ

ಹೊತ್ತೆರುವ ಮುನ್ನವೆ...
ಅಲ್ಲಾಭಕ್ಷಿಗೆ ಹೇಳಿ, ನನ್ನ ಗೋರಿಗೊಂದು
ಹೂವಿನ ಚಾದರವ ಕಟ್ಟಿಸಿಬಿಡು
ಸಾಕಿ....
ಬಾಳಲ್ಲಿ ನಳನಳಿಸದೆ ನಲುಗಿ ಹೋಗಿದೆ ಪ್ರೀತಿ
ಬುಟ್ಟಿಯಲ್ಲಿ ಮಲಗಿದ ಮಲ್ಲಿಗೆಯ
ಘಮಲು... ಚೂರಾದರು ಉಳಿಯಲಿ...

ನಾಲ್ಕು ಹನಿ ಅತ್ತಾರನ್ನು ಚಿಮುಕಿಸಿಬಿಡು
ನನ್ನೆದೆಯ ಮೇಲೆ...ಸಾಕಿ...
ಹೊತ್ತಿದಡುಗೆಯ ಸವಿಯು ರುಚಿಸದಾರಿಗೂ...
ಬೆಂದ ಮನದ ವಾಸನೆ ಯಾರ ಮೂಗಿಗು
ತಾಕದಿರಲಿ....

ಉಸಿರಿರುವ ಮುನ್ನವೆ....ಗೋರಿಯೊಳಗೆ
ಹುಗಿದುಬಿಡು ಸಾಕಿ... ಕಲ್ಲು ಗಾರೆಗಳ ಹಾಕಿ...
ಗಾಳಿಯು ಒಳಹೊರಗೆ ನುಸುಳದಂತೆ,
ಕೊನೆಯುಸಿರನ್ನು ಅಲ್ಲಿಯೆ ಬಿಟ್ಟುಬಿಡುವೆ...
ಅವಳ್ಹೆಸರಲೆ...ಉಸಿರಿದ ಉಸಿರಿದು,
ಅಲ್ಲಿಯೆ ಸುಳಿಸುಳಿಯುತಿರಲಿ...

ನಿನ್ನ ಹಿಡಿಯಿಂದ ಶಪಿಸಿ...ಒಂದಿಷ್ಟು ಮಣ್ಣನ್ನು
ಚೆಲ್ಲಿಬಿಡು ಗೋರಿಯ ಮೇಲೆ...
ಮರುಜನ್ಮದಲ್ಲಾದರು ಅವಳ ಪಡೆಯಬೇಕೆಂಬ
ಆಸೆಯು ಮಣ್ಣುಗೂಡಲೆಂದು
ಕಟ್ಟಿಹಾಕಿ ಬಿಡಲಿ... ಅಳಿದ ನನ್ನ ಪ್ರೀತಿಗೆ
ಮರುಗಿ ಉದುರಿದ ನಿನ್ನ ಕಣ್ಣ ಹನಿಗಳು..

ನೀನೇಕೆ ದುಃಖಿಸುವೆ ಸಾಕಿ....?
ಬೇಕಾದವರೆ ಎರಡು ಹನಿ ಕಣ್ಣೀರನ್ನು ಹಾಕದಿದ್ದಾಗ,
ನಿತ್ಯ.....ನಿನ್ನ ಮಧು ಬಟ್ಟಲಿನ ಗಿರಾಕಿಯ
ಸಾವಾಗಿ, ನಷ್ಟವಾಯಿತೆಂದುಕೊಂಡೆಯಾ....?
ಹುಚ್ಚಿ...!!!! ಜಗದಲ್ಲಿ ಪ್ರೀತಿಗೇನು ಕೊರತೆಯಿಲ್ಲ,
ಸೋತು ನೊಂದವರೆಲ್ಲ ನಿನ್ನ ಗಿರಾಕಿಗಳಾಗಲೆಬೇಕಲ್ಲ....

ನಾನು ಸತ್ತನೆಂದು ಯಾರಿಗೂ ಹೇಳಬೇಡ ಸಾಕಿ...
ಅವಳ ಮನೆಯತ್ತ ಸುಳಿಯುವ ಗಾಳಿಗೂ...
ಗೊತ್ತಾಗದಂತೆ, ಹುಚ್ಚು ಹುಡುಗಿಯವಳು
ಸುದ್ದಿಯ ತಿಳಿದು ನೊಂದುಕೊಂಡಾಳು...
ಅವಳನ್ನು ನೋಯಿಸಿ...ನಾನವ ಸ್ವರ್ಗಕ್ಕೆ...? ಹೋಗಲಿ

ಕೊನೆಯದಾಗಿ....
ಮಸಿಯನ್ನು ಸವರಿಬಿಡು ಸಾಕಿ ಗೋರಿಗೆ
ದೇವದಾಸನ ಹೆಸರಿನಲ್ಲಿ ನಾನಿಂದು ಗೋರಿಯಲ್ಲಿ
ಮಲಗಿರುವೆ...
ನನ್ನ ಹೆಸರಿನ ಹುರುಪಿನಲ್ಲಿ ಮತ್ತೊಬ್ಬನು
ಗೋರಿಗೆ ಚಾದರವ ಹಾಸಿಕೊಳ್ಳದಿರಲಿ...
ಇತಿಹಾಸದ ಪುಟದಲ್ಲಿ ನನ್ನ ಹೆಸರೆಂದು ಸೇರದಿರಲಿ..

Tuesday, May 22, 2018

ಚುಟುಕು ೪೨೨

ಅವಳ
ನೆನಪಲ್ಲಿ ಬರೆದ
ಎಷ್ಟೊ...
ಕವಿತೆಗಳನ್ನು
ನಿಮ್ಮ ಮಡಿಲ್ಲಲ್ಲಿ
ಹಾಕಿಕೊಂಡು
ಲಾಲಿಸುವರಲ್ಲ...
ಇನ್ನೂ ಸ್ವಲ್ಪ ದಿನ
ಬದುಕಬೇಕೆನಿಸುತ್ತಿದೆ...
ಅವಳ ಮೋಸಕ್ಕಾಗಿಯಲ್ಲ
ನಿಮ್ಮೆಲ್ಲರ ಪ್ರೀತಿಗಾಗಿ

ಶಾಯರಿ ೨೧೪

ನಿನ್ನ
ಮಧು ಬಟ್ಟಲನ್ನು
ಬಿಟ್ಟು ಬಿಡುವಾಸೆ
ಸಾಕಿ...

ತೊರೆಯುವ
ಮನಸ್ಸೆ
ಆಗುತ್ತಿಲ್ಲ...
ಕಾಡುವ
ಅವಳ
ನೆನಪುಗಳ
ಹಾಗೆ...

Monday, May 21, 2018

ಶಾಯರಿ ೨೧೩

ಕುಡಿಯುವುದ
ನನಗೂ...
ಒಂಚೂರು
ಇಷ್ಟವಿಲ್ಲ
ಸಾಕಿ...

ಇನ್ನೇನಿದೆ....
ಬದುಕಲಿಕ್ಕೆ...!!!
ಅವಳ
ನೆನಪುಗಳನ್ನು
ಮರೆಯುವುದೊಂದೆ
ಬಾಕಿ...

ಚುಟುಕು ೪೨೦

ಕಣ್ಣಲ್ಲೆ...ಕೊಲ್ಲುವ
ಕಲೆಯನ್ನು ಬೇರೊಬ್ಬರಿಂದ
ಕೇಳಿ ತಿಳಿದುಕೊಳ್ಳಬೇಕೆ...?
ನಿನ್ನ ಕಣ್ಣನ್ನೊಮ್ಮೆ ನೋಡಿದರೆ
ಸಾಲದೆ...

ಶಾಯರಿ ೨೧೧

ವಿರಹದ
ನೋವಿಗೆ
ಯಾವ
ಮದ್ದು ಇಲ್ಲ...
ಸಾಕಿ...
ನಿನ್ನ ಮಧ್ಯವೊಂದನು
ಹೊರತುಪಡಿಸಿ....

ಶಾಯರಿ ೨೧೨

ಅವಳೆದೆಯ
ಮಾತು...
ನನಗೆ
ಗೊತ್ತೆ ಇರಲಿಲ್ಲ
ಸಾಕಿ....

ಅವಳದೇನು
ತಪ್ಪು...?
ನಾನು
ಸೋತದ್ದು
ಜಿಂಕೆ ಕಣ್ಣಿನ
ನೋಟಕ್ಕೆ...

ಶಾಯರಿ ೨೧೦

ಬಟ್ಟಲೊಳಗಿನ
ನಿನ್ನ
ಮಧ್ಯದ್ದೇನು...
ತಪ್ಪಿಲ್ಲ
ಸಾಕಿ....

ಎದೆಯಿಂದ
ಅವಳನ್ನು
ಹೊರ ಹಾಕಲು
ಮನಸ್ಸಿನ್ನು
ಒಪ್ಪಿಲ್ಲ...

ಶಾಯರಿ ೨೦೯

ಬೈಕು
ಓಡ ಬೇಕಾದರೆ
ಹಾಕಲೆಬೇಕು
ಸಾಕಿ...
ಪೆಟ್ರೋಲು...

ನಾನು
ನಡೆಯಲೆ
ಬೇಕಾದರೆ
ಹಿಡಿಯಬೇಕು
ನಿನ್ನ ಮಧು
ಬಟ್ಟಲು...

ಶಾಯರಿ ೨೦೮

ಎಲ್ಲರು
ಉಗಿದುಬಿಟ್ಟಿದ್ದರು
ಸಾಕಿ...
ಅವಳ
ಪ್ರೀತಿಯನ್ನು
ಗೆಲ್ಲಲು
ನಿನಗೇನು
ಧಾಡಿ....

ನೋಡಿಗ...
ಅವಳ
ಮನವನ್ನು
ಕದಿಯಲು
ಬಿಟ್ಟಿರುವೇನಲ್ಲ
ಈಗ...
ದಾಡಿ

ಶಾಯರಿ ೨೦೭

ಸೋಲುವುದಕ್ಕೆ
ಎಂದು
ನಾನು
ಪ್ರೀತಿಸಲಿಲ್ಲ
ಸಾಕಿ...

ಹೇಗೆ ಹೇಳಲಿ...
ಗೆಲ್ಲುವುದಕ್ಕೆ
ಅವಳೊಂದು
ಅವಕಾಶವನ್ನು
ಕೊಡಲೆ....
ಇಲ್ಲ

ಶಾಯರಿ ೨೦೬

ಕಣ್ಣಿಗೆ
ಪ್ರೀತಿ
ಕಾಣುವುದಿಲ್ಲ
ಅನ್ನುತ್ತಾರಲ್ಲ
ಎಲ್ಲರು
ಸಾಕಿ...

ನನಗೆ
ಕಂಡಿತ್ತು...
ಕೈಗೆ ಮಾತ್ರ
ಸಿಗಲಿಲ್ಲವಷ್ಟೇ..

ಶಾಯರಿ ೨೦೫

ಅವಳ
ಕೆಂದುಟಿಯಂಚಲಿ
ಮುತ್ತುಗಳಿಗೇನು
ಕೊರತೆಯಿರಲಿಲ್ಲ
ಸಾಕಿ...

ಮುತ್ತುಗಳ
ಹೆಕ್ಕಿ...ತುಟಿ
ಚಿಪ್ಪಿನಲಿ
ಬಂಧಿಸುವ
ಭಾಗ್ಯ...
ನನ್ನದಾಗಿರಲಿಲ್ಲವಷ್ಟೇ...

ಶಾಯರಿ ೨೦೪

ಅವಳ
ಹುಣ್ಣಿಮೆಯ
ಮೋಹಕತೆಯ
ನಗುವಿಗೆ
ಸೋಲದವರೆ
ಯಾರು ಇಲ್ಲ
ಸಾಕಿ...

ಸೋತವರೆಲ್ಲ
ನಿನ್ನ ಮದಿರೆ
ಮನೆಯ...
ಬಾಗಿಲನ್ನು
ತಟ್ಟದೆ ಉಳಿದವರು
ಯಾರು ಇಲ್ಲ...

ಶಾಯರಿ ೨೦೩

ಗೆದ್ದವರಾರು
ಅವಳ
ಪ್ರೀತಿಯ
ಸವಿಯನ್ನೆ
ಸವಿದಿಲ್ಲ
ಸಾಕಿ...

ಸೋತವರಾರು
ಅವಳ
ಒಲವಿನ
ಸವಿಯನ್ನೆ
ಮರೆತಿಲ್ಲ....

ಶಾಯರಿ ೨೦೨

ಯಾರ ಮುಂದೆ
ಹೇಳಿದರೇನು
ಬಂತು..
ಸಾಕಿ....
ಒಲವನರಿಯದ
ಜನಗಳ ಮುಂದೆ...

ನಡೆದು
ಬಂದಿರುವೆನಲ್ಲ
ಮನದ
ಮಾತನಾಲಿಸುವ
ನಿನ್ನ ದಾವಣಿಯ
ಹಿಂದೆ

ಶಾಯರಿ ೨೦೧

ನಾನಂದೆ
ಅವಳನ್ನು
ಕೇಳಬೇಕಾಗಿತ್ತು
ಸಾಕಿ...
ನನ್ನ ಪ್ರೀತಿಯನ್ನು
ಏಕೆ ಕೊಂದೆ...

ಅವಳು...
ಹೇಳಿರುತ್ತಿದ್ದಳೇನೊ...?
ನಿನಗೆ  ನಾ...
ಸೋಲದವಳು
ಬರದಿರು ನನ್ನ
ಹಿಂದೆ..

ಶಾಯರಿ ೧೯೯

ನನ್ನ
ಕನಸುಗಳನ್ನು
ಅವಳೇಕೆ
ಕಸಿದುಕೊಂಡು
ಹೋದಳು
ಸಾಕಿ...

ಹೋದರೆ
ಹೋಗಲಿ ಬಿಡು...
ಇರುಳ ನಿದಿರೆಯನ್ನೇಕೆ
ಕೊಂದು ಹೋದಳು

ಶಾಯರಿ ೧೯೮

ಅವಳನ್ನು
ಗೆದ್ದೆ..ಗೆಲ್ಲುತ್ತೆವೆಂದು
ಹಿಡಿದು
ಹೊರಟಿದ್ದರು
ಸಾಕಿ...
ಎಲ್ಲರು
ಹಠ...

ಹಠದಲ್ಲಿ
ಸೋತವರೆಲ್ಲ
ಸೇರಿಕೊಂಡದ್ದು
ಮಾತ್ರ
ಮಠ...

ಶಾಯರಿ ೧೯೭

ಅವಳೇಕೆ
ತೂಗಲಿಲ್ಲ
ಸಾಕಿ...
ನನ್ನ ಪ್ರೀತಿಯ
ತೊಟ್ಟಿಲು...

ಮೊದಲೆ
ನಿರ್ಧರಿಸಿಬಿಟ್ಟಿದ್ದಳೇನೊ...?
ನನ್ನ ಕೈಗೆ
ಕೊಡಬೇಕೆಂದು
ನಿನ್ನ
ಮಧು ಬಟ್ಟಲು

ಶಾಯರಿ ೧೯೬

ಅವಳ
ಮನಸ್ಸು
ಬಂಗಾರ....?
ನಾನ್ಹೇಗೆ
ಪರಿಕ್ಷೀಸಲಿ...
ಸಾಕಿ...

ಒಲವ
ಮಾತುಗಳನರಿಯದ
ಕಬ್ಬಿಣದ
ಮನವದು
ಇನ್ನೇನನ್ನು
ನಾ...
ನಿರೀಕ್ಷಿಸಲಿ...

ಶಾಯರಿ ೧೯೫

ನನ್ನ
ಪ್ರೀತಿಯೆಲ್ಲ
ಬಾಡಿತು...
ಬಾಡಿತು..
ಎನ್ನುವರಲ್ಲ
ಸಾಕಿ...
ಗೆಳೆಯರು...

ಅದು ಹೇಗೆ..?
ಮದ್ಯದಮಲು
ಇಳಿದು...
ಕಣ್ಬಿಟ್ಟಾಗಲೆಲ್ಲ
ನನಗೆ
ನಳನಳಿಸುತಲೆ
ಕಾಣುವುದಲ್ಲ

ಶಾಯರಿ ೧೯೪

ಕಡಲ
ಮಧ್ಯದ
ಕಲ್ಲು ಬಂಡೆಗೆ
ಮಳೆಯ ಹನಿಗಳ
ಸವಿಯನೇನು
ಸವಿದಿತು...
ಕಡಲಲೆಗಳ
ಉಪ್ಪೇನು
ಅರಿತಿತು
ಸಾಕಿ...

ಕಲ್ಲಂತಹ
ಮನಸ್ಸನ್ನೆ
ಹೊಂದಿದವಳಿಗೆ
ನೋವು ನಲಿವುಗಳ
ಅನುಭವವಾದರು
ಇದ್ದಿತೇನು...?

ಶಾಯರಿ ೨೦೦

ಅವಳ
ಕೆಂದುಟಿಯಂಚಿನ
ಮುತ್ತಿನಮಲಿಗೆ
ಬೆಲೆ ಕಟ್ಟುವಷ್ಟು
ಶ್ರೀಮಂತನು
ನಾನೇನಲ್ಲ...
ಸಾಕಿ...

ನಿನ್ನ
ಮಧು ಬಟ್ಟಲಿಗೆ
ಎಷ್ಟಾದರೇನು
ಬೆಲೆ...
ಕೊಳ್ಳದಿರುವಷ್ಟು
ಬಡವನೇನಲ್ಲ
ನಾನು...

Saturday, May 19, 2018

ಶಾಯರಿ ೧೯೩

ಹಗಲಿರುಳು....
ನಿನ್ನ ಮಧ್ಯದ
ಅಮಲಿನಲಿಯೆ
ಮುಳುಗುವಾಸೆ
ಸಾಕಿ...
ಸಾಯಬೇಕೆಂಬ
ಆಸೆಯೆನಿಲ್ಲ

ಅವಳಿಲ್ಲದೆ
ಉಸಿರಾಡಬೇಕಿದೆಯಲ್ಲ
ಬದುಕಬೇಕೆಂಬ
ಆಸೆಯು
ಉಳಿದಿಲ್ಲ...

ಶಾಯರಿ ೧೯೨

ಜೇನಿಗೆ
ಹೂವೆ
ಇಲ್ಲವೆಂದ
ಮೇಲೆ
ಗೂಡಿನ
ಪಾಡೇನು
ಸಾಕಿ....

ಬಾಳಲ್ಲಿ
ನನ್ನ
ಸುಮವಿಲ್ಲದಿದ್ದ
ಮೇಲೆ
ನನ್ನೆದೆಗೂಡಿನ
ಪಾಡೇನು
ಹೇಳು....

ಶಾಯರಿ ೧೯೧

ಕೋಪವೆನಿಲ್ಲ
ಸಾಕಿ....
ನಿನ್ನ ಮಧು
ಬಟ್ಟಲು
ಸೋತಿದೆಯಂದು...

ತಾಪವೊಂದೆ
ಇರುವುದು
ಮನದಲಿ
ಕುಡಿದಷ್ಟು
ಅವಳ
ನಗುವು
ಮರೆಯಾಗುತಿಲ್ಲವಲ್ಲ
ಎಂದು..

ಶಾಯರಿ ೧೯೦

ಹೊಟ್ಟೆಯ
ಉರಿಗೆ..
ನಿನ್ನ ಮಧು
ಬಟ್ಟಲೊಳಗಿನ
ಮಧ್ಯವು
ಮದ್ದಾಗಬಹುದು
ಸಾಕಿ....

ಎದೆಯೊಳಗೆ
ಉರಿಯುತಿರುವ
ವಿರಹದುರಿಗೆ
ನಿನ್ನಲಾವ
ಮದ್ದುಂಟು
ಮಾಸಿಸಲು

ಶಾಯರಿ ೧೮೯

ಸುಡುವ
ಹೆಣಗಳ
ಮಸಣಕೆ
ಬೇಲಿ
ಹಾಕಿದರೇನು
ಬಂತು
ಸಾಕಿ...

ಮದ್ದಿಲ್ಲದ
ನೋವಿಗೆ
ತುಪ್ಪವ
ಸವರಿದರೇನು
ಬಂತು
ಹಚ್ಚಿ....

Friday, May 18, 2018

ಶಾಯರಿ ೧೮೮

ನಾನು ಈಜಲೇ...ಬೇಕೆಂದಿದ್ದೆ
ಸಾಕಿ...
ಕಡು ಕಪ್ಪು
ಕಾಡಿಗೆಯ
ಬೇಲಿ ಹಾಕಿದ
ಅಮಲುಗಣ್ಣಲಿ...

ಹಾರಿದ್ದೇನೊ...
ನಿಜ
ಎದ್ದದ್ದು
ಮಾತ್ರ....
ಅಮಲೇರಿಸುವ
ಮಹಲಿನಲಿ...

Thursday, May 17, 2018

ಹ್ಯಾಂಗ ಬಾಳ್ಲಿ...

ಮತ್ತ್ಯಾಕ...ಬಂತೊ ಮಾಂವ ಅಧಿಕ ಮಾಸ
ಹಗಲು ರಾತ್ರಿ ಕೊಡ್ತೈತಿದು ಎಷ್ಟೊಂದು ತ್ರಾಸ
ಮೈ ಮನಗಳಿಗೆಲ್ಲ ತಂತಲ್ಲೊ...ಉಪವಾಸ
ತಪ್ಪೊದಿಲ್ಲಿನ್ನು...ಅಮ್ವಾಸೆವರೆಗಿನ ವನವಾಸ

ಸಾಕಾಗೈತೊ..ಈ ಹೊಳೆ ದಂಡೆ ಸಹವಾಸ
ಬಟ್ಟಿ ಒಗಿಲಾಕ....ನಂಗಿಲ್ಲ ಚೂರು ಮನಸ
ಕಣ್ಣ ಬಿಟ್ಟ ಕದ್ಲಾವಲ್ವು ನೀ...ನಿಟ್ಟ ಕನಸ
ಜೊತೆಗೂಡೊ ತನಕ ಆಗೋದಿಲ್ಲ ಎಲ್ಲ ನನಸ

ಕಾಡ್ತವ ನೋಡ....ನೀ ತೊಡ್ಸಿದ ಹಸಿರು ಬಳೆ
ಬರುವಾಗ ನೆನಪಿಲೆ ತಗೊಂಡ ಬಾರೊ...ಚಕ್ಲಿ ಕೊಡ್ಬಳೆ
ಹೊಂಟ ನಿಂತಾವು...ಹ್ವಾದ ಕತ್ಲನ ನೆಪ್ಪುಗಳು ಗುಳೆ
ಮನಸಿನ ಮಾತ ಅರಿತ ಬಂದಬಿಡು...ಇನ್ನೊಂದಿನಾನು ನಾ ತಾಳೆ

ಕಬ್ಬಿನಗದ್ದಿ ನೋಡಿ ಮನಸ ನಂದು ಚುರ್ರ ಅಂದೈತಿ...
ಕಾದ...ಕಾದ..ಹರೆಯದ ಬೆಣ್ಣಿ ಕರ್ಗಲಾಕ ಹತ್ತೈತಿ..
ಉರಿಬಿಸಿಲ ತಡ್ಕೊತೀನಿ..ನೀನಿಲ್ದ ಬಿಸಿನ ನಾ ಹ್ಯಾಂಗ ತಡ್ಕೊಳ್ಲಿ...
ಹದ...ಬೇಡೊ ಮಣ್ಣಿದು, ಮಳಿ ಇಲ್ದ ನಾ ಹ್ಯಾಂಗ ಬಾಳ್ಲಿ...

ಶಾಯರಿ ೧೮೪

ನಾನೀಗ
ಮದಿರೆಯಲ್ಲಿಯೆ
ಮುಳುಗೆದ್ದಿರುವೆ...
ಸಾಕಿ...
ಮಧ್ಯದ ವಾಸನೆಗೆ
ನನ್ನ ಬಳಿಯಾರು
ಸುಳಿಯುತ್ತಿಲ್ಲ...

ಕುಡಿದು
ಬಿಡಿಸಿಕೊಳ್ಳಬೇಕೆಂದೆ
ಆಗಲಿಲ್ಲ...
ಅವಳ ಪ್ರೇಮದ
ಪರಿಮಳವು
ನನ್ನನಿನ್ನು ಸುತ್ತುತ್ತಲೆ...
ಇದೆಯಲ್ಲ...

ಶಾಯರಿ ೧೮೫

ಭೂಮಿ ದುಂಡಗಿದೆ
ಸುತ್ತಿದರೆ...
ಕಳೆದವರು
ಮತ್ತೆ
ಸಿಗಬಹುದೆಂದರೆಲ್ಲರು
ಸಾಕಿ...

ಅವಳು
ಸಪ್ತಪದಿಯ ಸುತ್ತಿ....
ಸುತ್ತಿ...ಹೋದಳು...
ನಾನು....ಊರೆಲ್ಲ
ಸುತ್ತಿ... ಸುತ್ತಿ ನಿನ್ನ
ಮದಿರೆಯ
ಮನೆಗೆ ಬಂದೆ...

ಶಾಯರಿ ೧೮೬

ನಾನಳಿದೆ
ಮೇಲೆ
ನನ್ನೆರಡು
ಕಣ್ರೆಪ್ಪೆಗಳ
ಮೇಲೆ....ಹೂಗಳೆರಡನ್ನು
ಇಟ್ಟುಬಿಡು
ಸಾಕಿ....

ಕಣ್ತುಂಬಾ...
ತುಂಬಿಕೊಂಡಿರುವೆ
ಅವಳನ್ನು....
ಎಲ್ಲರು ಸುರಿದ
ಮಣ್ಣು ಬಿದ್ದು...
ನನ್ನವಳಿಗೆ...
ನೋವಾಗಬಾರದಲ್ಲ...!!!

ಶಾಯರಿ ೧೮೭

ಮುನಿದ
ಮೋಡಗಳು...
ಭೂರಮೆಗೆ
ಮಳೆ ಹನಿಗಳ
ಸುರಿಸಿಯಾದರು...
ಹಗುರಾಗುವವು
ಸಾಕಿ...

ಮನದಲಿ
ಮಡುಗಟ್ಟಿದ
ಮೌನದ....
ಮಾತುಗಳ
ಬಿಚ್ಚಿ.... ಯಾರಲ್ಲಿ
ಹಂಚಿಕೊಳ್ಳಲಿ....
ಆಲಿಸುವ ಮಡಿಲುಗಳೆ
ಇಲ್ಲದಿರುವಾಗ...

Wednesday, May 16, 2018

ಶಾಯರಿ ೧೮೩

ಜೀವನದಲ್ಲಿ
ಪ್ರೀತಿಯಲೊಮ್ಮೆ
ಬಿಳಲೆಬೇಕಾ....?
ಸಾಕಿ....

ಬಿದ್ದು ಎದ್ದವರೇನೊ...
ಸೌಧವನ್ನು ಕಟ್ಟಿಕೊಂಡರು...
ಏಳದವರೇನು...?
ಗೋರಿಯನ್ನು
ಕಟ್ಟಿಕೊಳ್ಳಲೆಬೇಕಾ....?

ಶಾಯರಿ ೧೮೨

ನಿನ್ನ ಮದಿರೆ
ಮನೆಯ
ಗೋಡೆಯ
ಮೇಲೆ....
ಎಣಿಸಲಾರದಷ್ಟು
ಭಗ್ನ ಪ್ರೇಮಿಗಳ
ಹೆಸರುಗಳು
ಸಾಕಿ....

ಒಲವೆಂಬುದು
ನಿನ್ನ ಬಟ್ಟಲೊಳಗಿನ
ಮದಿರೆಗಿಂತ
ದುಬಾರಿಯೆ....

ಶಾಯರಿ ೧೮೧

ಎಷ್ಟೊಂದು
ಕ್ಷಾಮವಿದೆ
ಸಾಕಿ....
ನಿನ್ನರಮನೆಯಲ್ಲಿ

ಪ್ರೀತಿಯ
ಬೆಳೆಯ
ಸುಟ್ಟುಕೊಂಡು
ಬಂದವರೆ...ಎಲ್ಲ
ನಿನ್ನಲ್ಲಿ....

ಶಾಯರಿ ೧೮೦

ಸಂಕಟಕ್ಕೆ...
ದೇವರೆ
ದಿಕ್ಕೆನ್ನುವರು
ಸಾಕಿ....

ಅಷ್ಟ ದಿಕ್ಕುಗಳಲ್ಲಿಯು
ಹುಡುಕಿದೆ....ಅವನು
ಸಿಗಲಿಲ್ಲ...
ನಿನ್ನ ಮದಿರೆ
ಮನೆಯ ಹಾದಿಯನ್ನು
ತೋರಿಸುವುದನ್ನವನು
ಮರೆಯಲಿಲ್ಲ...

ಶಾಯರಿ ೧೭೯

ಯಾರಿಗೂ....
ಹೇಳಬೇಡ
ಸಾಕಿ...
ಅವಳ
ಹೆಸರಲ್ಲೆ
ನನ್ನುಸಿರ
ನಿಂತದ್ದು....

ನಿನಗೆ ಗೊತ್ತಿಲ್ಲ....
ಕಲ್ಲು ಹೊಡೆಯುವವರ
ಮಧ್ಯದಲ್ಲಿ
ಅವಳು
ನಿಂತದ್ದು....

ಶಾಯರಿ ೧೭೮

ಉಸಿರಾಡುತ್ತಿರುವೇನೊ...
ಇಲ್ಲವೊ...ಎಂಬುದನ್ನು
ಹಿಡಿದು
ನೋಡಬೇಡ
ಸಾಕಿ...
ನಾಡಿ...

ನನ್ನೆದೆಯ ಮೇಲೆ
ಕಿವಿಯಿಟ್ಟು ಕೇಳು...
ಮಿಡಿಯುತಿಹುದು
ಅವಳ ಹೆಸರನ್ನೆ
ಹಾಡಿ...

ಶಾಯರಿ ೧೭೭

ಅವಳ
ನೆನಪುಗಳು
ನಡು ಮನೆಯ
ತೂಗು ಮಂಚದಂತೆ
ಸಾಕಿ...

ಮದಿರೆಯನ್ನು
ಕುಡಿದಾಗ
ಹಿಂದೆ ಹೋಗುವವು...
ಮತ್ತು ಇಳಿದಾಗ
ಎದುರು...
ಬರುವವು....

ಶಾಯರಿ ೧೭೬

ಮನೆಯ
ಮೇಲ್ಛಾವಣಿ ಗೆ
ತೊಲೆಗಂಬಗಳೆ
ಆಧಾರ...
ಸಾಕಿ...

ನೋವು
ತುಂಬಿದ ಈ
ದೇಹದರಮನೆಗೆ
ನಿನ್ನ ಮಧು
ಬಟ್ಟಲೊಂದೆ
ಆಧಾರ...

ಶಾಯರಿ ೧೭೫

ಮರ...
ಮುಪ್ಪಾಯಿತು
ಹುಳಿ
ಮುಪ್ಪಾಗಲಿಲ್ಲ
ಸಾಕಿ...

ದೇಹ
ಕೃಶವಾಯಿತು....
ಕಣ..ಕಣದಲಿ
ಬೇರೆತ ವಿರಹದ
ನೋವು...ಚೂರಾದರು
ಕ್ಷೀಣಿಸಿಲ್ಲ...

ಶಾಯರಿ ೧೭೪

ಲೋಕದ
ಮಾತು ಎಂದು
ಸುಳ್ಳಾಗದೆಂದು
ನನಗಿಂದು ಅರಿವಾಯಿತು
ಸಾಕಿ....

ಅರಗಿಣಿ ಪಂಜರವನ್ನೆಂದು
ಬಯಸದು...
ಪಾರಿವಾಳ ಮನೆಯ
ಮಾಳಿಗೆಯನ್ನೆಂದು ತೊರೆಯದು...
ಹಕ್ಕಿಯನ್ನು ಆರಿಸುವುದರಲ್ಲಿ
ಎಡವಿದ್ದು
ನನ್ನದೆ ತಪ್ಪು...
ಉಣ್ಣುತ್ತಿರುವೇನಲ್ಲ....
ಬದುಕಿನ ತುಂಬಾ...
ಬರಿ ಉಪ್ಪು...

ಶಾಯರಿ ೧೭೩

ಅಲ್ಲಾಭಕ್ಷಿಯು
ಕಟ್ಟಿಕೊಟ್ಟ
ಹೂ ಮಾಲೆಯಲ್ಲಿ
ಸುಗಂಧಕ್ಕೇನು...
ಕಡಿಮೆಯಿರಲಿಲ್ಲ
ಸಾಕಿ...

ಮನದಲ್ಲಿ
ಭಕ್ತಿಯ
ಗಂಧವೆ ಇಲ್ಲವಲ್ಲ....
ಪೂಜಿಸುವುದಾದರು
ಏಕೆ...? ಹೂ
ಹಾರವನ್ನು
ಹಾಕಿ....

ಶಾಯರಿ ೧೭೨

ಸೃಷ್ಟಿಗೆ...
ಪ್ರತಿ ಸೃಷ್ಟಿಯನ್ನೆ
ಸೃಷ್ಟಿಸುವ...
ವಿಶ್ವಾಮಿತ್ರನಂತಹ
ಶಕ್ತಿಯು...
ನನಗಿದ್ದಿದ್ದರೆ
ಸಾಕಿ....

ಅವಳಿಲ್ಲದಿದ್ದರೂ...
ಅವಳ
ಪ್ರತಿ ರೂಪವ
ಸೃಷ್ಟಿಸಬಹುದಾಗಿತ್ತು...
ಈ ಒಂಟಿತನದ
ಮನದ ಬೆಂಕಿಯನ್ನಾದರು
ನಂದಿಸಬಹುದಿತ್ತು....

ಶಾಯರಿ ೧೭೧

ಬಾಹುಬಲಿ...!!!!
ಅವನನ್ನು
ನೋಡಿದಾಗಲೆಲ್ಲ
ಮನಸ್ಸಿಗೆ
ಅದೆಂತಹದೊ
ಸಮಾಧಾನ
ಸಾಕಿ....

ಲೌಕಿಕದೊಳಗೆನಿಲ್ಲ...
ಬದುಕಿದು
ನಶ್ವರವೆಂದು...
ದಿಗಂಬರನಾಗಿ
ನಿಂತಿರುವುದ
ಕಂಡು....

ಶಾಯರಿ ೧೭೦

ಬುದ್ದನಿಗೆ
ಪ್ರೀತಿಸುವ
ಹೆಂಡತಿ ಮಗುವನ್ನು
ಬಿಟ್ಟ ಹೊದ
ಮೇಲೆ....
ಶಾಂತಿ
ಸಿಕ್ಕಿತಂತೆ
ಸಾಕಿ....

ನಾನು
ಮೋಹಿಸಿ
ಮೋಸಿಸಿದವಳ
ತೊರೆದೆ
ಬಂದೆ....
ಶಾಂತಿ ಎಲ್ಲೂ
ಸಿಗುತ್ತಿಲ್ಲ...
ಬುದ್ಧನ
ಮಂತ್ರವದೇಕೊ...
ಮನಸ್ಸಲ್ಲಿಯೆ...
ಇಳಿಯುತ್ತಿಲ್ಲ...

ಶಾಯರಿ ೧೬೯

ಬುದ್ದನು
ಮಧ್ಯ ರಾತ್ರಿಯಲ್ಲಿ
ಮನೆ ಬಿಟ್ಟಾಗ
ಅಪ್ಪಿಕೊಂಡದ್ದು
ಬೋಧಿ
ವೃಕ್ಷವನ್ನು
ಸಾಕಿ....

ಪ್ರೀತಿಯ
ಮಧ್ಯದಲಿ
ಅವಳು ನನ್ನನು
ಕೈ ಬಿಟ್ಟಾಗ...ನಾ
ಹಿಡಿದುಕೊಂಡದ್ದು
ಮದಿರೆಯ
ಬಟ್ಟಲನ್ನು

ಶಾಯರಿ ೧೬೮

ಹರಿಯುವ ನೀರಿಗೆ
ಕೊಳಚೆಯೇನು...
ಅಮೃತವೇನು...
ಕೊಚ್ಚಿಕೊಂಡು
ಹೋಗುವುದಲ್ಲ...
ಸಾಕಿ...

ಕಾಲವೇಕೆ ಹೀಗೆ..?
ಪ್ರೀತಿಯನ್ನು
ಸೆಳೆದುಕೊಂಡು
ಹೋಗಿ...
ವಿರಹದ ಕೊಳಚೆಯನ್ನು
ಉಳಿಸಿಬಿಟ್ಟಿದೆಯಲ್ಲ...

ಶಾಯರಿ ೧೬೭

ನಾ...ಕೊಟ್ಟ
ಪ್ರೇಮದ
ಕಾಣಿಕೆಗಳನ್ನೆಲ್ಲವ
ಮರಳಿ...ಕೊಟ್ಟು
ಹೋದಳಾಕಿ...

ಒಂದನ್ನು
ಮಾತ್ರ
ಕೊಟ್ಟಿಲ್ಲವಲ್ಲ...
ಸಾಕಿ...
ನನ್ನ ಮನಸ್ಸನ್ನು
ಇನ್ನೂ... ತನ್ನಲ್ಲಿಯೆ...
ಇಟ್ಟುಕೊಂಡಿರುವಳಲ್ಲ!!!!

ಶಾಯರಿ ೧೬೬

ಅವಳ ಬಗ್ಗೆ...
ಮಾತನಾಡುವುದನ್ನು
ಬೇಕೆಂದರೆ....
ನಿಲ್ಲಿಸಿಬಿಡಬಲ್ಲೆ
ಸಾಕಿ....

ಅವಳ ಹೆಸರನೆ
ಉಸುರುತಿರುವ
ನನ್ನುಸಿರನು....ನಾ
ಹೇಗೆ ನಿಲ್ಲಿಸಿಬಿಡಲಿ.....

ಶಾಯರಿ ೧೬೫

ಅವಳು ಕೈ
ಹಿಡಿದ
ಪ್ರೀತಿಯ ಆಯಸ್ಸು
ಅಲ್ಪವಾಗಿತ್ತು
ಸಾಕಿ....
ಬಹಳ ದಿನ
ಉಸುರಲಿಲ್ಲ....

ಅವಳೆ....
ಕೊಟ್ಟ ಗುಲಾಬಿಯು
ಬಾಡಿದೆ.... ಪುಸ್ತಕದ
ಹಾಳೆಗಳ ಮಧ್ಯದಲ್ಲಿ....
ಹೂವು....ಸತ್ತಿದೆ...
ಸುಗಂಧ ಮಾತ್ರ
ಇನ್ನೂ.... ಹಾಳೆಗೆ.....
ಅಂಟಿಕೊಂಡಿದೆ....

ಶಾಯರಿ ೧೬೪

ಸಂಜೀವಿನಿ
ಬೆಟ್ಟವ ತರಲು....
ಸಾಗರವ ದಾಟ
ಬೇಕೆಂದಿದ್ದೆ
ಸಾಕಿ....
ಪ್ರೀತಿಯನ್ನು
ಬದುಕಿಸಿಕೊಳ್ಳಲು...

ಹೇಗೆ ಹಾರಲಿ...?
ಕಹಿ ನೆನಪುಗಳ
ಕೊಳದಲ್ಲಿಯೆ...
ನಾನಿನ್ನು
ಮುಳುಗಿರುವಾಗ...

Tuesday, May 15, 2018

ಶಾಯರಿ ೧೬೩

ಗುಟುಕು
ಮದಿರೆಯನ್ನು
ಕುಡಿಯಲು
ಬಿಡದಂತೆ
ಬರುತ್ತಿವೆ...
ಬಿಕ್ಕಳಿಕೆಗಳು
ಸಾಕಿ...

ನೆನಪಿಸುತ್ತಿರುವವೇನೊ...?
ಹಳೆಯ
ನೆನಪುಗಳು...
ಅವಳ ಮನಸ್ಸನ್ನು
ತಾಕಿ..

Saturday, May 12, 2018

ಶಾಯರಿ ೧೬೨

ಊರ ಹೊರಗಿನ
ಆಲದ ಮರವನ್ನು
ಕಡೆದು ಹಾಕಿದರಂತೆ
ಸಾಕಿ....

ನನ್ನ ಪ್ರೀತಿಯ
ಕುರುಹುವೊಂದು
ಸದ್ದಿಲ್ಲದೆ...
ಉರುಳಿಹೋಯಿತು
ಆ ಗಿಡದಡಿಯಲ್ಲಿ....
ಅವಳ ನನ್ನ
ಒಲವಿನ ಮಾತುಗಳು
ಅದೇಷ್ಟೊ...
ಅಡಗಿತ್ತು... ಅದರ
ಒಡಲಲ್ಲಿ....

Wednesday, May 9, 2018

ಬಾಟ್ಲು ೩೮೨

ಪ್ರಚಾರಕ್ಕೆಂದು
ಹೋದವರು
ಸಂಜೆಗೆ ಏರಿಸಿಕೊಂಡು
ಬರುತ್ತಾರೆ...
ಸಾಕಷ್ಟು
ಬಾಟ್ಲು...

ರಾತ್ರಿಗೆ ಬಂದು
ತೆರೆಯುತ್ತಾರೆ
ಪಕ್ಕದ ಮನೆಯವರ
ಗೇಟು..

ಅವ್ರು ಬಾಗ್ಲು
ತೆರದ್ರೆ,
ಧರ್ಮದೇಟು...
ಮನಿಯಾಕೆ ಬಂದು
ಮನಿಗೆ ಕರ್ಕೊಂಡ
ಹೋದ್ರೆ ಸೌಟಿನೇಟು

ಅಂತೂ ಕುಡ್ದಮ್ಯಾಲ
ತಪ್ಪೊದಿಲ್ಲ
ಏಟು

ನಿಶ್ಚಿಂತೆ

ಬದುಕ ಬವಣೆಯ ಬಂಡಿಯ
ನೊಗಲುಗಳ ಹೊರವಷ್ಟು ಬಲವಲ್ಲ
ನಮ್ಮಯ ಹೆಗಲುಗಳು...
ನಿನ್ನ ನೆರಳಿಲ್ಲದಿರುವ ನಮ್ಮನು,
ಬೀದಿ ಕಾಮಣ್ಣರ ಕಣ್ಣುರಿಯಲ್ಲಿ
ಬೇಯಿಸಲು ಹಾತೊರೆಯುತ್ತಿವೆ ಹಗಲುಗಳು.

ನಾವೇನು ಬಲಹೀನರೇನು....? ನಾಡ
ನಾರಿಯರ ಹೋರಾಟದ ಕಿಡಿಗಳನ್ನು ಮನದಲ್ಲಿ
ತುಂಬಿಲ್ಲವೇನು..?, ಮೋಸದಿ....ಕಿಂಡಿಯಿಂದ
ನುಸುಳುವವರ ತಲೆಯನ್ನು ಚಚ್ಚುವ ಕಿಚ್ಚನ್ನು...
ಆಕ್ರಮಿಸಲು ಬಂದವರ ರುಂಡ ಮುಂಡಗಳ
ಚೆಂಡಾಡುವ ಕೆಚ್ಛನ್ನು...ಕಣಕಣದಲ್ಲಿ ಹರಿಸಿಲ್ಲವೇನು?

ಅಪ್ಪ... ಗಂಡು ಗಂಡೆಂದು ಅರೆಘಳಿಗೆಯು ನೀ.. ಕೊರಗಲಿಲ್ಲ
ಹೆಣ್ಣು ಹುಣ್ಣುಗಳೆಂದು ಒಂದಿನವು ಜರಿಯಲಿಲ್ಲ
ಗಂಡುಗಳಿಗಿಂತಲೂ ಹೆಚ್ಚು ಮನೊಸ್ಥೈರ್ಯವ ತುಂಬಿರುವೆಯಲ್ಲ
ಕಷ್ಟದ ಗೋಡೆ ಯಾವುದಾದರೇನು..? ಬದುಕಿನಲ್ಲಿ...
ತೋಳಿನಲ್ಲಿ ಹೋರಾಡಿ ಕೆಡುವವಷ್ಟು ಬಲವನ್ನು ತುಂಬಿರುವೆಯಲ್ಲ
ಸೋಲಿಗೂ...ಬೆವರಿಳಿಸುವ ಕಲೆಯ ಕರಗತಗೊಳಿಸಿರುವೆಯಲ್ಲ

ಬರದೆ ಹೋದರೇನಾಯಿತು..? ಹೊನ್ನು ಮಣ್ಣಿನಾಸೆಯ
ಬಂಧುಗಳು...
ಸ್ವರ್ಗದ ಬಾಗಿಲು ತೆರೆಯದಿರುವುದೆ..? ಭೂ ದೇವಿಯು
ತನ್ನೊಡಲಲಿ ಜಾಗವ ನೀಡದಿರುವಳೆ...?
ಬೇಡ ನಮಗೆ ಸ್ವಾರ್ಥ ಜಗದ ಜನರ ಶಕುನಿಯ ಅನುಕಂಪ
ಕನಿಕರದಿ ಬಂದರೆ ಹೊರುವೆವು ಯಾರದ್ದಾದರೂ ಚಟ್ಟ...!!!
ಕೆಣಕಲು ಬಂದರೆ ಕಟ್ಟುವೆವು ನಾವೆ ಅವರಿಗೆ ಚಟ್ಟ..!!!!

ಸಿಗಲಿ ಅಪ್ಪ... ಅನಂತದಲ್ಲಾದರೂ ನಿಶ್ಚಿಂತೆ
ಬೇಡ ನಿನಗಿನ್ನೂ.. ಈ ಲೋಕದ ಚಿಂತೆ..
ನಿನ್ನ ಬಳುವಳಿಯಿವುದು ಬದುಕಿಗೆ ಅನುಭವದ ಕಂತೆ
ಗೆಲ್ಲುತ್ತೇವೆ...ಸೋತು...ಸೋತು ಗೆಲ್ಲುತ್ತೇವೆ ಬಾಳಿನ ಸಂತೆ
ದೈಹಿಕವಾಗಿ ನಮ್ಮ ಜೊತೆಯಲ್ಲಿ ನೀನಿಲ್ಲದಿದ್ದರೆನಂತೆ....
ನೀಲಾಗಾಸದಿ ನಿಂತು ಹರಸಿದಿರೆ ಸಾಕು, ಜಗವನ್ನೆ ಗೆದ್ದಂತೆ

ಶಾಯರಿ ೧೬೧

ಏಕೆ
ಏಬ್ಬಿಸುವೆ
ಬಿಡು
ಸಾಕಿ...
ಗೋರಿಯೊಳಗಿನ
ನೆನಪುಗಳನ್ನು

ಮತ್ತೆಂದೂ....
ಅವುಗಳಿಗೆ
ಜೀವ ಬರುವುದಿಲ್ಲ...
ಉಸಿರಾಡುತಿರುವ
ನನಗಿಂದು
ಸಾಯಲು
ಬಿಡುತಿಲ್ಲ...

Friday, May 4, 2018

ತೂಕ ಎಷ್ಟೀರಬಹುದು ಸಾಕಿ

ಸಾಕಿ....
ಮಧು ಬಟ್ಟಲನ್ನು
ಹಿಡಿದುಕೊಂಡು ದರ್ಪಣದಲ್ಲಿ
ನನ್ನನೊಮ್ಮೆ ನೋಡಿಕೊಂಡಾಗ,
ನನ್ನ ಮೇಲೆ ನನಗೆ ಜಿಗುಪ್ಸೆಯೆನಿಸುವುದು
ನೀರು ಕಾಣದ ಮೊಖ, ಎಣ್ಣೆ ಮುಟ್ಟದ
ಕೆದರಿದ ಕೇಶ, ನನ್ನದೆ ಜಾಗವಿದೆಂದು
ಹುಲುಸಾಗಿ ಬೆಳೆದ ಗಡ್ಡ...
ಗಂಜಿಯ ಕಾಣದ ಬಟ್ಟೆ, ಹೊಟ್ಟೆಗೆ
ಹಿಟ್ಟಿಲ್ಲದೆ ಸೊರಗಿರುವ ದೇಹ...
ಅಲ್ಲಾ... ಎಪ್ಪತ್ತೈದು ದೇಹ ತೂಕದ
ನನ್ನನ್ನು... ಕೇವಲ ಆ ಒಂದು
ಚಿಕ್ಕ ಮಲ್ಲಿಗೆಯ ನಗುವಿನಿಂದ
ಸೋಲಿಸಿಬಿಟ್ಟಳಲ್ಲ....ಸಾಕಿ
ಅವಳ ತುಂಟಿಯಂಚೊಳಗಿನ
ಮಿಂಚಿನ ನಗುವಿನ ತೂಕವಾದರು
ಎಷ್ಟೀರಬಹುದು...?

ಶಾಯರಿ ೧೬೦

ನಿನ್ನ ಮನೆಯ
ಹೊರಗಿರುವ ನನ್ನೆಲ್ಲ
ಸ್ನೇಹಿತರಿಗೆಲ್ಲ ಒಂದು
ಕಿವಿ ಮಾತನ್ನು
ಹೇಳಿ ಕಳುಹಿಸಿಬಿಡು
ಸಾಕಿ...

ಹರೆಯವೆಂಬುದು
ಬೆಲೆಕಟ್ಟಲಾದದ್ದು
ಅವಳ ಮೋಹದ
ಹೊಳೆಯಲ್ಲಿ ಹಾರಿ
ಈಜುವ ಹುಚ್ಚು
ಸಾಹಸಕ್ಕೆ
ಕೈ ಹಾಕದಿರೆಂದು