ಮತ್ತ್ಯಾಕ...ಬಂತೊ ಮಾಂವ ಅಧಿಕ ಮಾಸ
ಹಗಲು ರಾತ್ರಿ ಕೊಡ್ತೈತಿದು ಎಷ್ಟೊಂದು ತ್ರಾಸ
ಮೈ ಮನಗಳಿಗೆಲ್ಲ ತಂತಲ್ಲೊ...ಉಪವಾಸ
ತಪ್ಪೊದಿಲ್ಲಿನ್ನು...ಅಮ್ವಾಸೆವರೆಗಿನ ವನವಾಸ
ಸಾಕಾಗೈತೊ..ಈ ಹೊಳೆ ದಂಡೆ ಸಹವಾಸ
ಬಟ್ಟಿ ಒಗಿಲಾಕ....ನಂಗಿಲ್ಲ ಚೂರು ಮನಸ
ಕಣ್ಣ ಬಿಟ್ಟ ಕದ್ಲಾವಲ್ವು ನೀ...ನಿಟ್ಟ ಕನಸ
ಜೊತೆಗೂಡೊ ತನಕ ಆಗೋದಿಲ್ಲ ಎಲ್ಲ ನನಸ
ಕಾಡ್ತವ ನೋಡ....ನೀ ತೊಡ್ಸಿದ ಹಸಿರು ಬಳೆ
ಬರುವಾಗ ನೆನಪಿಲೆ ತಗೊಂಡ ಬಾರೊ...ಚಕ್ಲಿ ಕೊಡ್ಬಳೆ
ಹೊಂಟ ನಿಂತಾವು...ಹ್ವಾದ ಕತ್ಲನ ನೆಪ್ಪುಗಳು ಗುಳೆ
ಮನಸಿನ ಮಾತ ಅರಿತ ಬಂದಬಿಡು...ಇನ್ನೊಂದಿನಾನು ನಾ ತಾಳೆ
ಕಬ್ಬಿನಗದ್ದಿ ನೋಡಿ ಮನಸ ನಂದು ಚುರ್ರ ಅಂದೈತಿ...
ಕಾದ...ಕಾದ..ಹರೆಯದ ಬೆಣ್ಣಿ ಕರ್ಗಲಾಕ ಹತ್ತೈತಿ..
ಉರಿಬಿಸಿಲ ತಡ್ಕೊತೀನಿ..ನೀನಿಲ್ದ ಬಿಸಿನ ನಾ ಹ್ಯಾಂಗ ತಡ್ಕೊಳ್ಲಿ...
ಹದ...ಬೇಡೊ ಮಣ್ಣಿದು, ಮಳಿ ಇಲ್ದ ನಾ ಹ್ಯಾಂಗ ಬಾಳ್ಲಿ...
No comments:
Post a Comment