ತಲಾಖ್
ಹಸೀನಾಳ ತುರುಬನ್ನು ಹಿಡಿದು ದರದರನೆ ಆಸ್ಪತ್ರೆಯ ವಾರ್ಡಿನಿಂದಾಚೆ ಎಳೆದುಕೊಂಡು ಬರುತ್ತಾ, ಆಸ್ಪತ್ರೆಯ ಅವರಣದ ಕಂಪೌಂಡಗೆ ಹತ್ತಿಕೊಂಡು ಬೆಳೆದು ನಿಂತಿದ್ದ ಬೇವಿನ ಮರದ ಕೆಳಗಡೆ ಬಂದು ಹಸೀನಾಳನ್ನು ತುರುಬನ್ನು ಹಿಡಿದು ಜಗ್ಗಿ, ಬಗ್ಗಿಸಿ, ನಾಲಿಗೆಯನ್ನು ಕಚ್ಚಿಕೊಂಡು, ದ್ಯಾಮವ್ವನ ಕೋಣವನ್ನು ಕಡೆಯುವಾಗ ಕಟುಕನ ಕಣ್ಣುಗಳು ಯಾವ ರೀತಿಯಲ್ಲಿ ರೌದ್ರವಾಗಿರುತ್ತವೊ ಅದೆ ರೀತಿಯಲ್ಲಿ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಬಲಗೈಯಿಂದ ಹಸೀನಾಳ ಬೆನ್ನಿನ ಮೇಲೆ ಒಂದು ಗುದ್ದನ್ನು ಗುದ್ದಿದನು. ಹೊಡೆತಕ್ಕೆ 'ಡಬ್' ಎಂಬ ಶಬ್ದವು ಬಂದರೆ, 'ಅಮ್ಮೀ...' ಎನ್ನುತ್ತಾ ಹಸೀನಾಳು ಬಿದ್ದ ಹೊಡೆತಕ್ಕೆ ನೆಲಕ್ಕೆ ಮಂಡಿಯೂರಿ ಕುಳಿತಾಗ, ಉಸಿರೆ ನಿಂತು ಹೋದಂತಾಗಿತ್ತು ಅವಳಿಗೆ, ಕಣ್ಣುಗಳೆರಡು ಮಂಜುಗಟ್ಟಿದಂತಾಗಿಬಿಟ್ಟವು, ಆದರೂ ಸಾವರಿಸಿಕೊಂಡು, ಈ ಸಲ ತಾನೆ ಮುನ್ನುಗ್ಗಿ ಮುನ್ನಾನ ಎಡಗಾಲನ್ನು ಹಿಡಿದೆಳೆದು ಅವನ ತೊಡೆಯನ್ನು ತನ್ನ ಬಾಯಿಂದ ಜೋರಾಗಿ ಕಚ್ಚಿಬಿಟ್ಟಳು. ಹಸೀನಾ ಯಾವ ರೀತಿ ಕಚ್ಚಿದಳೆಂದರೆ ಅವನ ಪ್ಯಾಂಟು ಹರಿದು ಇವಳ ಹಲ್ಲುಗಳು ಅವನ ತೊಡೆಯ ಚರ್ಮವನ್ನು ಸೀಳಿ ರಕ್ತವನ್ನು ಹರಿಸಿಬಿಟ್ಟವು, ಚಿಮ್ಮಿದ ರಕ್ತವು ಪ್ಯಾಂಟನ್ನು ತೊಯಿಸುತ್ತಾ, ಹಸೀನಾಳ ಬಾಯಿ ನಾಲಿಗೆಯನ್ನು ತೊಯಿಸಿಬಿಟ್ಟಿತು, ಮುನ್ನಾನ ಅರ್ಧ ನಿಶೆಯು ಇಳಿದು ಹೋದಂತಾಗಿ, ಹಸೀನಾಳ ತುರುಬನ್ನು ಬಿಟ್ಟು, ಎರಡು ಕೈಯಿಂದ ಅವಳನ್ನು ದೂರಕ್ಕೆ ತಳ್ಳಿ , ತನ್ನ ಎಡಗಾಲನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ' ನನ್ನ ತೊಡೆಯನ್ನೆ ಕಡೆದುಬಿಟ್ಟೆಯಲ್ಲೆ ನಾಯಿ ಜಾತಿಯವಳೆ,' ಎಂದು ಬೈಯ್ಯುತ್ತಾ ನರಳಾಡತೊಡಗಿದನು. ಹಸೀನಾಳು ಈಗ, ತನ್ನ ಮರಿಗಳನ್ನು ಬೇಟೆಯಾಡಲು ಬಂದ ಪ್ರಾಣಿಯನ್ನು ಹಿಮ್ಮಟ್ಟಿಸಲು ಸಿಂಹಿಣಿಯು ಯಾವ ರೀತಿಯಲ್ಲಿ ರೋಷಗೊಳ್ಳುತ್ತದೇಯೊ ಅದೇ ರೀತಿಯಲ್ಲಿ ಕೋಪ, ಆಕ್ರೋಶವನ್ನು ಹೊತ್ತು ನಿಂತಿದ್ದಳು, ಕಣ್ಣುಗಳೆರಡು ಈಗಾಗಲೆ ರೋಷದಿಂದ ಕೆಂಪೆರಿದ್ದವು, ಬಾಯಿಗೆ ಹತ್ತಿದ್ದ ರಕ್ತವನ್ನು ಎಡಗೈಯಿಂದ ವರಿಸಿಕೊಳ್ಳುತ್ತಾ, ಸೀರೆಯ ಸೆರಗನ್ನು ನಡುವಲ್ಲಿ ಸಿಕ್ಕಿಸಿಕೊಂಡು, ಕೆದರಿದ ಕೂದಲನ್ನು ಒಟ್ಟುಮಾಡಿ ತುರುಬನ್ನು ಬಿಗಿದುಕೊಂಡು, ಅತ್ತಿತ್ತ ನೋಡುತ್ತಲೆ, ದಿನವೂ ತನ್ನ ಮೈ ಮೇಲೆ ನೃತ್ಯ ಮಾಡುತ್ತಿದ್ದ ಬೇವಿನ ಮರದ ಕೊಂಬೆಯೊಂದು ಕಂಡಿತು, ತಕ್ಷಣವೆ ಕೈ ಚಾಚಿ ರಂಬೆಯನ್ನು ಹಿಡಿದು ಜಗ್ಗಿ ಮುರಿದುಕೊಂಡವಳೆ, ತಾಳಿ ಕಟ್ಟಿದ ಗಂಡ ಅಂತಾ ಮುಖಾ ಮೂತಿನು ನೋಡದೆ, ಚೆನ್ನಾಗಿ ಬಾರಿಸತೊಡಗಿದಳು ಗಂಡನನ್ನು, ಹೊಡೆದು ರೂಢಿಯಾಗಿದ್ದ ಮುನ್ನಾನಿಗೆ ಹೊಡೆಸಿಕೊಂಡ ರೂಢಿಯಿದ್ದಿಲ್ಲ. ಹಸೀನಾಳು ಕೊಡುವ ಒಂದೊಂದು ಏಟಿಗೆ, ಹಾವನ್ನು ಹೊಡೆದಾಗ ಅದು ಯಾವ ರೀತಿಯಲ್ಲಿ ಹೊರಳಾಡುವುದೊ ಅದೆ ರೀತಿಯಾಗಿ ಆಸ್ಪತ್ರಯೆ ಅಂಗಳದ ತುಂಬೆಲ್ಲಾ ಹೊರಳಾಡತೊಡಗಿದನು. ಹಸೀನಾಳ ಸಿಟ್ಟು ಮತ್ತಷ್ಟು ಹೆಚ್ಚಾಗುತ್ತಲೆ ಹೋಯಿತು, ಉರಿಯುವ ಮೇದಿಗೆ ಗಾಳಿಯು ಸೇರಿಕೊಂಡ ಹಾಗೆ, ಕೈಯಲ್ಲಿದ್ದ ರಂಬೆಯು ಮುರಿದು ಹೋಯಿತು, ಅದನ್ನು ಬಿಸಾಡಿ, ಎದುಸಿರನ್ನು ಬಿಡುತ್ತಾ ಅತ್ತಿತ್ತ ನೋಡುತ್ತಿದ್ದ ಹಾಗೆಯೆ, ಕಾರ್ ಪಾರ್ಕಿಂಗ ಮಾಡಿ ಅದರ ಗಾಲಿಗೆ ಒಂದು ಕಲ್ಲನ್ನು ಇಡಲು ಉಪಯೋಗಿಸುತ್ತಿದ್ದರು, ಅದು ಇವಳ ಕಣ್ಣಿಗೆ ಬಿದ್ದಿತು. ತಡಮಾಡದೆ ಹೋಗಿ ಕಲ್ಲನ್ನೆತ್ತಿಕೊಂಡು ಬಂದು ಅನಾಮತ್ತಾಗಿ ಎತ್ತಿ ಅವನ ತಲೆಯನ್ನು ಕುಂಬಳಕಾಯಿ ಒಡೆದ ಹಾಗೆ ಒಡೆದು ಹಾಕಬೇಕು, ನಾನು ಗಂಡಸು ಎಂದು ನೋಡುವವರ ಎಲ್ಲ ರಂಧ್ರಗಳಲ್ಲಿ ನೀರು ಬಂದು ಬಿಟ್ಟಿದ್ದವು ಆ ದೃಶ್ಯವನ್ನು ನೋಡಿ. ಇನ್ನೇನು ಮುನ್ನಾನ ತಲೆ ಅಲ್ಲಾನ ಪಾಲಾಯಿತು ಅನ್ನುವಾಗಲೆ, 'ಅಮ್ಮೀ' ಅಂತಾ ಜೋರಾಗಿ ಕೂಗಿ ಅಳುತ್ತಾ ಓಡಿ ಬಂದ ಆರು ವರ್ಷದ ಮಗಳು ರುಬೀನಾ ಹಸೀನಾಳ ಬಲಗಾಲನ್ನು ಹಿಡಿದುಕೊಂಡು ಜೋರಾಗಿ ಅಳತೊಡಗಿದಳು. ಹೊತ್ತಿಲ್ಲದ ಹೊತ್ತಿನಲ್ಲಿ ಧೋ ಎಂದು ಬಿರುಗಾಳಿ, ಆಣೆಕಲ್ಲುಗಳ ಸಹಿತ ಬಿದ್ದ ಮಳೆಯು ಕ್ಷಣಾರ್ಧದಲ್ಲಿ ಸುರಿದು ತಣ್ಣಗಾಗುವಂತೆ, ಮಗಳ ಮುಖವನ್ನು ನೋಡಿದ ಹಸೀನಾ, ಎತ್ತಿದ ಕಲ್ಲನ್ನು ಆಚೆಗೆಸೆದು, ಮಗಳನ್ನು ಎತ್ತಿಕೊಂಡು ' ಇವತ್ತು ಉಳ್ಕೊಂಡುಬಿಟ್ಟೆ ನೀನು, ಇನ್ನೊಂದು ಸಾರಿ ಏನಾದ್ರೂ ಇ ಕಡೆ ತಲೆ ಹಾಕಿದಿ ಅಂದ್ರೆ, ನಡ್ಕೊಂತ ಹೋಗೊದಿಲ್ಲ, ನಾಕ್ಮಂದಿ ಹೆಗಲ ಮ್ಯಾಲ ಹೊಗ್ತಿದಿ, ಥೂ' ಎಂದು ಮುನ್ನಾನ ಕಡೆಗೆ ಉಗಿದು, ಆಸ್ಪತ್ರೆಯ ಒಳಗಡೆ ಹೊರಟು ಹೋದಳು ಹಸೀನಾ.
No comments:
Post a Comment