ಪುಣ್ಯ...!!!
ಮಧುಶಾಲೆಯ
ಮುಖ್ಯದ್ವಾರಕ್ಕೆ
ಹೊಸ್ತಿಲೊಂದು
ಇಲ್ಲ...
ಸಾಕಿ...
ಯೌವ್ವನದಲ್ಲಿ
ಎಚ್ಚರವಿದ್ದಾಗಲೇ...
ಎಡವಿ ಬಿದ್ದವರು
ಇನ್ನೂ... ಮದ್ಯವನ್ನು
ಕುಡಿದ ಮೇಲೆ...?
ಪುಣ್ಯ...!!!
ಮಧುಶಾಲೆಯ
ಮುಖ್ಯದ್ವಾರಕ್ಕೆ
ಹೊಸ್ತಿಲೊಂದು
ಇಲ್ಲ...
ಸಾಕಿ...
ಯೌವ್ವನದಲ್ಲಿ
ಎಚ್ಚರವಿದ್ದಾಗಲೇ...
ಎಡವಿ ಬಿದ್ದವರು
ಇನ್ನೂ... ಮದ್ಯವನ್ನು
ಕುಡಿದ ಮೇಲೆ...?
ಬೇಕಿದ್ದರೆ,
ನಿನ್ನ
ಕಹಿ ಮದ್ಯವನ್ನು
ಕುಡಿದು...
ಕುಡಿದೆ...
ಸತ್ತುಬಿಡುವೆ
ಸಾಕಿ...
ಅವಳಿಂದಲೆ
ಅಳೆದದ್ದು..
ಎಂಬ ಕಹಿ
ಸತ್ಯವನ್ನು...
ನಾ...ಯಾರಲ್ಲಿಯೂ...
ಹೇಳಲಾರೆ
ಅವಳಿಲ್ಲದ
ಈ ಸಂಜೆಗಳಲ್ಲಿ
ಜೊತೆಗುಳಿದದ್ದು
ಕಣ್ಣೀರು.. ನಿನ್ನ
ಮಧು ಬಟ್ಟಲು
ಸಾಕಿ...
ಒಂದು ಉಪ್ಪು...
ಒಂದು ಕಹಿ...
ಆರಿಸಿಕೊಂಡದ್ದು
ಕಹಿಯನ್ನೆ...
ಉಪ್ಪು ಅವಳನ್ನು
ನೆನಪಿಸಿದರೆ...
ಕಹಿಯಾದರೂ...
ಚೂರು...ಚೂರು..
ಅವಳ ನಗೆಯನ್ನು
ಮರೆಸುತ್ತಿತ್ತು..
ಜನರಿಗೆಲ್ಲ..
ಏನು ಗೊತ್ತು
ಸಾಕಿ...
ತಿಳಿದಿಹರು
ಮದ್ಯವೆ...
ನನ್ನನು
ಕೊಲ್ಲುತಿಹುದೆಂದು
ಅವರಿಗಿನ್ನು
ಗೊತ್ತಿಲ್ಲ ..
ನಿತ್ಯ
ಕೊಲ್ಲುತ್ತಿದ್ದವಳ
ನೆನಪುಗಳನ್ನೆ...
ನಿನ್ನ ಮದ್ಯವಿಂದು
ಕೊಲ್ಲುತಿಹುದೆಂದು
ಕುಡಿಯುವುದನ್ನೆ
ಬಿಟ್ಟು ಬಿಡುವೆ
ಸಾಕಿ....
ಅವಳ ನೆನಪನ್ನು
ನೆನಪಿಸದ
ಜಾಗವೊಂದು ಇದ್ದರೆ
ಹೇಳು ಈ
ಲೋಕದಲ್ಲಿ...
ಬದುಕನ್ನೆ ಕಟ್ಟಿಕೊಳ್ಳುವೆ...
ಮರಳಿ....
ನಿನ್ನ ಮದ್ಯವೊಂದನ್ನು
ಹೊರತುಪಡಿಸಿ
ಅವಳನ್ನು
ಮರೆಸುವ ಬೇರಾವ
ಮದ್ದೊಂದಿದ್ದರೂ...
ತಿಳಿಸು
ಅವಳು ಬರುವ ಹೊತ್ತಾಯಿತು...
ನಿನ್ನ ಮಧುಶಾಲೆಯ ಗುಲಾಬಿಯ ತೋಟಕ್ಕೊಂದು
ಪರದೆಯನ್ನು ಕಟ್ಟಿಸಿಬಿಡು ಸಾಕಿ....
ಅವಳಂದವ ಕಂಡು...ಹೂಗಳೆಲ್ಲ ಸುಟ್ಟು ಹೋದಾವು..!!!
ನಾನೇನೊ....ಅಧರದ ಮಧುವು ಸಿಗದೆ, ಬಿಕ್ಕಿ...
ಬಿಕ್ಕಿ.....ಬಂದಿರುವೆನಿಲ್ಲಿಗೆ,
ಹೂವೆದೆಯ ಗಂಧವು ಸಿಗದೆ...ಹಾರಾಡುವ ದುಂಬಿಗಳು
ಸದ್ದಿಲ್ಲದೆ ಗೋರಿಯನ್ನು ಸೇರಿ ಹೋದಾವು...!!!
ಅವಳ ಮುಖಕ್ಕೆ ಪರದೆಯನ್ನಾದರೂ...
ಕಟ್ಟಿಕೊಂಡು ಬರಲು ಹೇಳಿ ಕಳುಹಿಸು ಸಾಕಿ...
ಹೆಚ್ಚಾಗಿಬಿಟ್ಟಿದೆ...ಬೀದಿಯಲ್ಲಿ ಹಿಂದೆ ಬಿದ್ದು ಕಣ್ಣು ಹೊಡೆಯುವವರ ಸಾಲು...
ಅವಳಾದರೂ...ಹಂಚುವಳದೇಷ್ಟು ಪ್ರೀತಿಯಲ್ಲಿ ಪಾಲು..
ದಕ್ಕದೆ ಹೋದವರೆಲ್ಲ ನಿನ್ನ ಮಧುಶಾಲೆಯ ಬಟ್ಟಲನು
ಹಿಡಿದು.....ಬಿದ್ದಿರುವರಲ್ಲ ಮುರಿದುಕೊಂಡು ಕಾಲು
ನೋಡಲ್ಲಿ...!!! ಊರ ಹೊರಗಿನ ದೇವಿಯ ಜಾತ್ರೆಯಲ್ಲಿ
ಸದ್ದುಗದ್ದಲವಿಲ್ಲದೆ ಎಷ್ಟೋ...ಪ್ರಾಣಿಗಳ ನೆತ್ತರು ಮಣ್ಣಿನಲ್ಲಿ
ಇಂಗಿ ಹೋಗುತ್ತಿದೆ ಸಾಕಿ....
ಅವಳು ನಗುವುದನ್ನು ಕೆಲದಿನ ಮರೆಯಲಿಕ್ಕಾದರು ಹೇಳು..
ಹಿಂದೆ ನಗುವಿಗೆ ಸೋತವರೆಲ್ಲ, ನೆತ್ತರನ್ನೆ ಕಾರಿಕೊಳ್ಳುತಿಹರು
ನಿನ್ನ ಹೂದೋಟದಲ್ಲಿ... ರಕ್ತ ಮೆತ್ತಿದ ಗುಲಾಬಿಗಳೇನೊ
ನಗುನಗುತಿಹವು...ಏನು ಆಗಿಲ್ಲದಂತೆ, ಕೊಟ್ಟ ಹೂವನು
ಮೂಸಿಯು ನೋಡದೆ, ಹೊಸಕಿ ಹೋದಳವಳು
ಏನು ಗೊತ್ತಿಲ್ಲದಂತೆ...
ಆ ಮಿಣಮಿಣಗುವ ತುಟಿಗಳಿಗಾದರೂ...
ನೋಡುಗರೆದೆಯಲ್ಲಿ ಮತ್ತೇರಿಸುವಂತಹ ..ಬಣ್ಣವನ್ನು
ಹಚ್ಚಿಕೊಳ್ಳದಿರೆಂದು ವಿನಂತಿಸಿಕೊ.. ಸಾಕಿ....
ತುಟಿಯಂಚಿನ ಸವಿಯನು ಸವಿಯಲು ಹೋದವರೆಲ್ಲ...
ಬಟ್ಟಲೊಳಗಿನ ಕಹಿ ಮದ್ಯಕ್ಕೆ......ದಾಸರಾಗಿಹರೆಲ್ಲ
ತುಟಿಯ ರಂಗಿನ ಗುಂಗಿನೊಳು ಬಿದ್ದವರೆಲ್ಲ.....ಹೂಜಿ..
ಹೂಜಿಗಳನೆ ಖಾಲಿ ಮಾಡುತ್ತಿದ್ದರೂ......ನಶೆ ಇಳಿಯುವ
ಸೂಚನೆಯೆ ಇನ್ನೂ ಸಿಗುತ್ತಿಲ್ಲ...ಮಧುಶಾಲೆಯಲ್ಲಿ ಮಲಗಿದ
ಲಕ್ಷ್ಮೀಗೂ...ಕೂಡಾ ಎಚ್ಚರವಾಗಿಲ್ಲ...!!!!
ಈ
ಹುಣ್ಣಿಮೆ
ರಾತ್ರಿಯಲ್ಲಿ
ಇನ್ನಷ್ಟೂ
ಸಿಂಗರಿಸಿಕೊಳ್ಳದಿರೆಂದು
ಅವಳಿಗೆ ನಿ...
ಹೇಳಿಬಿಡು
ಸಾಕಿ....
ತುಂಬು ಚಂದಿರ...
ನಾಚಿ.. ಬಿದ್ದಾನು
ಬೀದಿಗೆ...
ಸುಟ್ಟ..
ಮಣ್ಣಿನ ಇಟ್ಟಿಗೆಯಿಂದಲೆ
ಮನೆಯ
ಕಟ್ಟಿಕೊಳ್ಳುವರು
ಸಾಕಿ...
ಜನರೆಲ್ಲ...
ಉರಿದು
ಹೋದ ಮನಗಳ
ಹಣವನ್ನೆ
ಹಿರಿದು...
ಅರಮನೆಯನ್ನೆ
ಕಟ್ಟಿಸಿಕೊಂಡಿರುವೆ...
ಆರಾಧಿಸಲು ನಿನೇನು
ದೇವತೆಯಲ್ಲ... ಹಾಗಂತ
ನಿನ್ನ ತೊರೆಯುವ
ಹಾಗೂ ಇಲ್ಲ...ಈಗಲೆ
ಮಸಣ ಸೇರುವ
ಹುಚ್ಚು ಧೈರ್ಯ
ಯಾರೆದೆಯಲ್ಲೂ
ಇನ್ನೂ ಹುಟ್ಟಿಲ್ಲ...
ಹೆಣ್ಣು...ಹೊನ್ನು...
ಮಣ್ಣುಗಳ ಹಿಂದೆ
ಹೋದವರೊಬ್ಬರೂ...
ಉದ್ಧಾರವಾಗಿಲ್ಲವಂತೆ
ಸಾಕಿ...
ಉದಾಹರಣೆಗೆಲ್ಲ....
ನನ್ನತ್ತಲೆ
ಬೊಟ್ಟು
ಮಾಡಿ
ತೋರಿಸುವರಲ್ಲ...
ಕರಿಕಲ್
ದ್ಯಾವ್ರ ನೆತ್ತಿ
ಮ್ಯಾಲೆ
ಎಣ್ಣಿ ಸುರಿತಾರ
ತಣ್ಣಗಾಗ್ಲೆಂತಂದ
ನೋಡವ್ವ
ಹಸಿದೊಡಲ
ನಾಯಿ...
ಎಣ್ಣಿನೆಲ್ಲ
ನೆಕ್ಕಿ....
ದೇವ್ರನ್ನೆ
ಎಂಜ್ಲಾ ಮಾಡಿತ್ತ
ನೋಡವ್ವ
ಧರ್ಮಕ್ಕೊಂದೊಂದು
ಬಣ್ಣಾ..ಬಣ್ಣದ
ಬಟ್ಟಿ ಕಟ್ಗೊಂಡ
ಬಡ್ದಾಡ್ಕೊಂತ
ಕುತ್ಗೊಂಡಾರು
ನೋಡವ್ವ...
ಬಿತ್ತೊ... ಬೆಳಿಯೊಳ್ಗ
ಬಣ್ಣ ಬಣ್ಣದ
ಅನ್ನ ಐತಿ...
ಆರ್ಸಿಕೊಂಡ
ಉಣ್ತಾರೇನೊ
ನಮ್ಮವ್ವ
ಕೋಳಿಗರ್ದ
ಭಕ್ಷಿ.. ಮನಿಯ್ಯಾನ
ಮಸಾಲಿ ವಾಸ್ನಿ...
ಗಾಳಿಗುಂಟ ನಮ್ಮನಿ
ಪಡಸಾಲಿಗೆ ಬಂದಿತ್ತ
ನೋಡವ್ವ...
ವಾಸ್ನಿ
ಹೊತ್ತ ತಂದ
ಗಾಳಿನ ಬೈಕೊಬೇಕೊ
ಏನ್
ಉಸಿರಾಡೋದನ್ನ
ನಿಲ್ಸಬೇಕೊ ಹ್ಯಾಂಗ
ನೀನರ
ಹೇಳವ್ವ
ಇಷ್ಟೊಂದು ಮುನಿಸೇಕೆ..ಬಡವನ ಮೇಲೆ
ಸಾಕಿ....
ಹಿಡಿ ಪ್ರೀತಿಯ ಬೇಡಿ ಬಂದ ಭಿಕ್ಷುಕ ನಾನು...
ಅಲೆದ ಬೀದಿಗಳಲ್ಲಿ ತಂಗಳೊಲವು ದಕ್ಕಲಿಲ್ಲ...
ಮುಖದ ತುಂಬಾ ಪರದೆಯನ್ನು ಹಾಕಿಕೊಂಡು,
ಹಳಸಿದ ನಟನೆಯಲ್ಲಿಯೆ... ಪ್ರೀತಿಯ ತುತ್ತೊಂದ
ನಾದರೂ... ನೀಡು ಬಾ....
ಮೂಗ ಮುಚ್ಚಿ... ದೂರ ನಿಂತುಕೊಳ್ಳುವಷ್ಟು..
ದೇಹವಿನ್ನು ಮೈಲಿಗೆಯಾಗಿಲ್ಲ.... ಸಾಕಿ...
ನೆನಪುಗಳ ಸುಳಿಗೆ ಸಿಕ್ಕು...ಕೊಳೆತು ನಾರುವ
ಮನದ ವಾಸನೆ, ನಿನ್ನ ಮೂಗಿಗೆ ತಾಕಿದರೆ....
ಹೊಣೆ ನನ್ನದಲ್ಲ... ಮದ್ದನ್ನು ಸವರಬೇಕಾದವರೆ...
ಗಾಯವ ಮಾಡಿ ಹೋಗಿರುವಾಗ... ವಾಸಿಮಾಡಿಕೊಳ್ಳ
ಬೇಕೆಂಬ ದರ್ಧು ನನಗೆನಿಲ್ಲ....
ನೋಡಿಲ್ಲಿ... ಮಧು ಶಾಲೆಯ ಮುಂದೆ.....
ನೋವುಂಡು ಸರತಿಯಲ್ಲಿ ನಿಂತವರ ಸಾಲು...
ಊರ ಅಗಸಿಯನ್ನೆ ದಾಟಿ ನಿಂತಿದೆ, ಸಾಕಿ....
ಅರೆ ಘಳಿಗೆ ನಿ ತಡ ಮಾಡಿದರೆ...
ಊರ ಹೊರಗಿನ ಸ್ಮಶಾನದಲ್ಲಿ ಗೋರಿಗಳನ್ನು
ತೋಡಲು ಸ್ಥಳವಿಲ್ಲದಂತಾದಿತು...,
ಪಿಂಡವನುಣ್ಣಲು ಬರುವ ಕಾಗೆಗಳಿಗೂ...
ಬರ ಬಂದಾತು...
ಸಾಕಿ...
ಮಧುಶಾಲೆಯ ಮೇಲೆ...ಒಂದೆ ಒಂದು ಹದ್ದು ಸಹ
ಹಾರಾಡುತ್ತಿಲ್ಲವಿಂದು...., ಸತ್ತು ಬೀಳುವವರ ಹೆಣವನ್ನು
ಕುಕ್ಕಿ ತಿನ್ನಲು.....
ಬಹುಶಃ ಅವುಗಳಿಗೂ...ಗೊತ್ತಾಗಿರಬೇಕೇನೊ...?
ಅವಳ ನೆನಪುಗಳೆ ನಮ್ಮನು ಕಿತ್ತು..ಕಿತ್ತು ತಿಂದಿರುವಾಗ..
ರುಚಿಯಾದರು ಎಲ್ಲಿ ಉಳಿದಿತೆಂದು...,ಈಗೀಗ ದೇಹದ
ತುಂಬೆಲ್ಲ ಮಧುಶಾಲೆಯ ಮದ್ಯವೆ ತುಂಬಿಕೊಂಡಿರುವಾಗ...
ಬಾಗಿಲು ತೆರೆಯದೆ ಹೋದರೂ.... ಹೋಗಲಿ ಬಿಡು
ಸಾಕಿ...
ತುಸು ನಸುನಕ್ಕಿಬಿಡು ಮಹಡಿ ಮೇಲಿನ ಕಿಟಕಿಯಿಂದ,
ಈಗಲೊ...ಆಗಲೊ..ಎನ್ನುವವರು...ನಿನ್ನ ನಗೆಯ
ಚಿಲುಮೆಯಿಂದ... ಇನ್ನೆರಡು ದಿನ ಬದುಕುಳಿಯಲಿ...
ಹರೆಯದ ಹೊರೆಯನು ಹೊತ್ತು ನಿಂತವರೆದೆಯಲ್ಲಿ
ಭರವಸೆಯ ಬೆಳಕೊಂದಾದರೂ...ಮೂಡಲಿ...
ಅಂಗೈಯಲ್ಲಾದರು ಚೂರೆ...ಚೂರಾದರು..ಮಧುವನ್ನು
ಸುರಿದುಬಿಡು ಸಾಕಿ... ತೀರ್ಥದಂತೆ...
ಗಂಟಲಪಸೆಯಿಂದೇಕೊ ಬಹುವಾಗಿ ಒಣಗುತಿಹುದು...
ಹಸಿಮಣ್ಣಿನ ವಾಸನೆ ಮೂಗಿಗೆ ಬಡಿಯುತಿಹುದು...
ಗೊತ್ತಿಲ್ಲ....ಎದೆಯ ಬಡಿತವಿಂದೇಕೊ ದಿನದಂತಿಲ್ಲ...
ನಾಳೆಯ ಸಂಜೆಗೆ ನಿನ್ನ ಮಧು ಬಟ್ಟಲಿಗೆ ಮುತ್ತಿಕ್ಕುವ,
ತುಟಿಗಳ ಅಂಚಲ್ಲಿ ಹಿಡಿಯಕ್ಕಿಯಿರಬಹುದೇನೊ...
ನಿನಗೆ ಮುಡಿಸಲೆಂದು ತರುತ್ತಿದ್ದ ಮಲ್ಲಿಗೆ... ಗೋರಿಗೆ ಚಾದರವಾದರು ಆಗುವುದೇನೊ...?
ಅವಳ ತುಟಿಯಂಚಿನ
ಮಧುವನ್ನೊಮ್ಮೆ
ಸವಿಯಬೇಕಿಂದಿದ್ದೆ
ಸಾಕಿ...
ತುಟಿಗೆ...ತುಟಿಯೊಂದನು
ಒತ್ತಿ...
ವಿಧಿ ವಿಪರ್ಯಾಸವ
ನೋಡು...
ನನ್ನ ತುಟಿಗೀಗ ನಿನ್ನ
ಮಧು ಬಟ್ಟಲು
ಒತ್ತಿಕೊಂಡಿದೆ,
ಆದರೂ..
ಇದರ ಸವಿ
ಅನುಭವಿಸಿದವರಿಗಷ್ಟೆ
ಗೊತ್ತಿದೆ...
ನಿನಗೆ ಗೊತ್ತೆ
ಸಾಕಿ...
ನಾನಿಂದು
ಮಂದಿರಕ್ಕೆ
ಹೋಗಿದ್ದೆ...
ಆಶ್ಚರ್ಯವಾಯಿತೆ...?
ಪ್ರೀತಿ ಫಲಿಸಲೆಂದು
ಆರತಿ
ತಟ್ಟೆಯಲ್ಲಿ
ಹಣವನ್ನು ಹಾಕಿದ್ದೆನಂದು
ಇಂದದನ್ನು
ಮರಳಿ ತರಲು
ಹೋಗಿದ್ದೆ...
ನಾನಂದು
ಉತ್ತಮ ಗೆಳಯರಿಬ್ಬರ
ಮಧ್ಯದಲ್ಲಿ
ಇದ್ದಿದ್ದರೆ
ಸಾಕಿ...
ಇಂದು ಪ್ರತಿದಿನವು
ಕುಡಿದು ಬಿಸಾಡುವ
ಮದ್ಯದ ಬಟ್ಟಲುಗಳ
ಜೊತೆಗಿರುತ್ತಿರಲಿಲ್ಲ.
ಅವಳಿಗಂದು
ಖರ್ಚು ಮಾಡಿದ
ದುಡ್ಡಿನಲ್ಲಿ ಅರ್ಧದಷ್ಟಾದರೂ...
ಗೆಳೆಯರಿಗೆ ಖರ್ಚು
ಮಾಡಿದ್ದರೆ...
ಸಾಕಿ..
ಇಂದು ಕುಡಿದ
ನಿನ್ನ ಮದ್ಯದ ಹಣವನ್ನು
ಕೊಡಲಿಕ್ಕೊಬ್ಬರಾದರು
ಇರುತ್ತಿದ್ದರು..
ಮಸಣವು...
ಮಧುಶಾಲೆಯು....
ಎರಡು ಒಂದೇ...
ಸಾಕಿ...
ಮಸಣದಲ್ಲಿ
ಮಲಗಿದವರೆಲ್ಲ...
ಸಾವಿನ
ಜಾತಿಯವರು...
ಮುಸ್ಸಂಜೆಯ
ಮಧುಶಾಲೆಯಲ್ಲಿ
ಸಂಧಿಸಿದವರೆಲ್ಲ
ನೋವಿನ
ಕುಲದವರು...
ಮಧುಶಾಲೆಗೂ...
ಮಸಣಕ್ಕೂ...
ಹೆಚ್ಚು ದೂರವೇನಿಲ್ಲ
ಸಾಕಿ...
ಮಧುಶಾಲೆಯ
ತೊರೆದ ನಂತರ
ಹೋಗುವುದು
ನೇರ...
ಮಸಣಕ್ಕೆ..!!!
ಈ ಜಗದಲ್ಲಿ...
ನನಗೆ ಯಾರಿಲ್ಲವೆಂದು
ಕೊಂಡೆಯಾ...?
ಸಾಕಿ...
ಮಧುಶಾಲೆಯ
ಬಾಗಿಲ ಬಳಿಗೊಮ್ಮೆ
ನೋಡು....
ಪ್ರೀತಿಯೆಂಬ
ಕಂದರಕ್ಕೆ ದೂಡಿದ
ಸ್ನೇಹಿತರೆಲ್ಲ...
ಗೋರಿಯಲ್ಲೂ...ಮಲಗಿಸಲು
ಎಷ್ಟೊಂದು
ಕಾತುರತೆಯಿಂದ
ಕಾದಿಹರು...
ಬದುಕಲ್ಲಿ ಅವಳ
ಪಡೆಯಬೇಕೆಂಬ
ಗುರಿಯ ಹಿಂದೆ
ಬಿದ್ದೆ ಸಾಕಿ....
ಸೋತೆ...
ಗುರಿಯ ಮೆಟ್ಟಿ
ಸಾಧಿಸಿದವರೆಲ್ಲ ಇಂದು
ಗೋರಿಯಲ್ಲೆ ಮಲಗಿರುವರಲ್ಲ...!!!
ಅವರಿಗಿಂತ, ಚೂರು....
ಮೊದಲೆ,
ನಾನಿಲ್ಲಿ ಬಂದಿರುವೆನಷ್ಟೆ
ಅವಳಿಗೆ
ಪ್ರೀತಿಯ
ಬಲೆಯನ್ನು
ಬಿಸಿದ
ಮೊದಲಿಗ ನಾನೆ
ಎಂದುಕೊಂಡಿದ್ದೆ
ಸಾಕಿ....
ಮಧುಶಾಲೆಗೆ
ಕಾಲಿಟ್ಟಾಗಲೆ ಗೊತ್ತಾದದ್ದು...
ನನಗಿಂತಲೂ ಮೊದಲೆ
ಬಲೆ ಬಿಸಿದವರೆಲ್ಲ...
ಇಲ್ಲಿ ಬಲಿಯಾದದ್ದು
ಜ್ಞಾನೋದಯವಾಗಲು
ಹಿಮಾಲಯಕ್ಕೇನು
ಹೋಗಬೇಕಾಗಿಲ್ಲ
ಸಾಕಿ....
ಎರಡು ದಿನ
ಮಧುಶಾಲೆಗೆ
ಭೇಟಿಯನ್ನಿತ್ತರಷ್ಟೇ
ಸಾಕು...
ಮೊದಮೊದಲಿಗೆ
ಅವಳ ನೋವು...
ನಿನ್ನ ಮದ್ಯ...
ಎಷ್ಟೊಂದು
ಕಹಿಯಾಗಿದ್ದವು
ಸಾಕಿ...
ಬದುಕುವುದೆ...
ಸಾಧ್ಯವಿಲ್ಲವೇನೊ...?
ಇವೆರಡಿರದಿದ್ದರೆ
ಎಂದೆನ್ನಿಸಿಬಿಟ್ಟಿದೆ
ಈಗ
ಮದ್ಯದ ಬಟ್ಟಲಿಗೆ
ತುಸು.....
ನೀರನ್ನು
ಬೇರಸಿಕೊಡು
ಸಾಕಿ....
ಈಗೀಗ
ಅವಳ ನೋವು...
ಹೆಚ್ಚೇನು
ಕಾಡುತ್ತಿಲ್ಲ ...
ಇದೇನಿದು....!!!!
ಮಾರುಕಟ್ಟೆಯಲ್ಲಿನ
ವಿಷದ ಬಾಟಲಿಗಿಂತ
ಮದ್ಯದ ಬಟ್ಟಲಿನ
ದರವೆ...
ಹೆಚ್ಚಿದೆಯಲ್ಲ...
ಸಾಕಿ...
ವಿಷವನ್ನೇನೊ...
ಕುಡಿಯಬೇಕೆಂದಿರುವೆ,
ಇನ್ನೂ...ಸಾಯುವ
ಆಸೆಯೆ...ಮೂಡಿಲ್ಲ,
ಮದ್ಯವನ್ನೆ...ಬಿಡಬೇಕೆಂದಿರುವೆ
ಏನು ಮಾಡಲಿ..?
ಅವಳನ್ನು ಮರೆಯುವ
ಆಸೆಯಿನ್ನು...ಬತ್ತಿಲ್ಲ...
ಜಗದಲ್ಲಿ...
ಯಾವುದಿದೆ ಸಾಕಿ
ಶಾಶ್ವತ...
ಮದ್ಯದ ಬಟ್ಟಲೊಂದನು
ಹೊರತುಪಡಿಸಿ...
ನಾನಳಿದ ಮೇಲೆ
ನನ್ನ ನೋವು ಸಾಯುತ್ತದೆ,
ಜಗವಳಿದ ಮೇಲೆ
ಜಗದ ನೋವು ಅಳಿಯುತ್ತದೆ,
ಮತ್ತೆ...
ಸುರಲೋಕದಲ್ಲಿ... ಇದ್ದೆ
ಇದೆಯಲ್ಲ...
ಮರುಜನ್ಮವೊಂದು
ಇರುವುದಂತಾರೆ
ಸಾಕಿ...
ಸೃಷ್ಟಿಸಿಬಿಡಲಿ
ದೇವನು ನನ್ನನು...
ಮಧು ಶಾಲೆಯ
ಹೂಜಿಯಂತನ್ನಾಗಿಸಿ...
ಖಾಲಿಯಾಗುವುದೆಂಬ
ಪ್ರಶ್ನೆಯೆ ಇಲ್ಲ....
ನಿಶೆಯಿಳಿಯುವುದೆಂಬ
ಭಯವೆ ಇಲ್ಲ..
ನಿನೇಕೆ
ಬಂದೆಯೆಂದು
ಪ್ರಶ್ನಿಸುವೆಯಲ್ಲ
ಸಾಕಿ...
ಮಡಿವಂತರು
ಹೇಳಿ ಕಳುಹಿಸಿದರು...
ಮಧುಶಾಲೆಯ
ಗೋಡೆಯ ಕನ್ನಡಿಯಲ್ಲಿ
ನೆಮ್ಮದಿ ಎನ್ನುವ
ಗಂಟಿದೆಯಂತಲ್ಲ..!!!
ಪಡೆಯಲು
ಬಂದಿರುವೆ...
ಮಣ್ಣಿನೊಳಗೆ
ಹುಗಿಯುವ ಮುನ್ನ..
ಕೊನೆಯದಾಗಿ ನನ್ನ
ಮುಖವನ್ನೊಮ್ಮೆ...
ನೋಡಿ ಹೋಗಲು
ಅವಳಿಗೆ ಹೇಳಿ
ಕಳುಹಿಸು
ಸಾಕಿ...
ನೋಡುವ ಆಸೆಗಾಗಿ...
ಮಣ್ಣಿಂದ ಮರಳಿ
ಎತ್ತಲು...ನಾನೇನು
ಇತಿಹಾಸದ
ಕುರುಹುವೇನಲ್ಲ..
ನನ್ನ ಪಾಲಿನ
ಮದ್ಯದ ಬಟ್ಟಲನ್ನು
ಗೆಳೆಯನಿಗೆ
ಕೊಟ್ಟುಬಿಡು
ಸಾಕಿ....
ಕುಡಿದ
ಮದ್ಯದಮಲಿನಲ್ಲೂ
ಸಹ....
ಅವಳ
ಹೆಸರನ್ನವನು
ನೆನಪಿಸದಿರಲಿ..
ಹುಳಿಗೂ..
ನನಗೂ ಅದೆಂತಹ
ಬಿಡಿಸಲಾಗದ
ನಂಟಿಹುದು
ಸಾಕಿ...
ಬಾಳಲ್ಲಿ
ವಿರಹದ
ಹುಳಿಯನ್ನೆ ಹಿಂಡಿ
ಹೋದವಳವಳು...
ಮರೆಯಲೆಂದವಳನ್ನ
ಮತ್ತೇರಿಸುವ ಮಧ್ಯವನ್ನು
ಕುಡಿದೆ...
ನಿನೇಕೆ ಅದರಲ್ಲಿ
ಅತಿಯಾಗಿ....ದ್ರಾಕ್ಷಿಯ
ಹುಳಿಯನ್ನು
ಹಿಂಡಿರುವೆ...
ಸಾಕಿ.....
ಮೈತುಂಬಾ ಮುಳ್ಳುಗಳೆ... ಇದ್ದರು
ನಗು...ನಗುತ್ತಲೆ ಇತ್ತು ಗುಲಾಬಿ
ಬೇಲಿಯಲಿ..
ಮದರಂಗಿಯು ನಾಚಿ ಕೆಂಪಾಗಿಸಿದ
ನಿನ್ನ ಸುಕೋಮಲ ಪಾದದಡಿಗೆ ಸಿಕ್ಕು,
ಎಸುಳೆಸುಳಾಗಿ ನಲುಗಿ ಹೋಗುತಿದೆ,
ನೋಡೀ...ಸಂಜೆಯಲಿ.....
ಬದುಕು ಕಷ್ಟಗಳ ಸಂಕೋಲೆಯಲೇನ್ನ
ಬಂಧಿಸಿದ್ದರೂ..... ನಗುನಗುತ್ತಲೆ ಇದ್ದೆ
ಸಾಕಿ...
ಅವಳ ಪ್ರೀತಿಯೆ ಸುಖವೆಂದುಕೊಂಡಿದ್ದ ನನಗೆ
ತೋಳ್ತೆಕ್ಕೆಯ ಅಮಲಿನಲ್ಲೂ...ಹೀಗೆ, ನನ್ನನು ಹೊಸಕಿ
ಮುಳಗಿಸಿಬಿಟ್ಟು ಹೋದಳಲ್ಲ....ನಿನ್ನ ಮಧುಶಾಲೆಯ
ಬಟ್ಟಲಿನಲಿ...
ತೊಟ್ಟಿಂದ ಜಾರಿದ ಹೂ..ಮತ್ತೆ ಅರಳುವುದೇನು...?
ಸಾಕಿ... ಬೇರಿಲ್ಲದ ಪ್ರೀತಿಯ ಬಳ್ಳಿಗೆ ಅಮೃತವನೆ...
ಹೋಯ್ದರೇನು...? ಹಬ್ಬುವುದೇನು....?
ಈ ಬಡವನೆದೆಯಲಿ ಒಲವಿನುಸಿರೆ ಬತ್ತಿ ಹೋಗಿರುವಾಗ...
ಸುರಿದರದೇಷ್ಟು ಬಟ್ಟಲು...ಬಟ್ಟಲು ಮದಿರೆಯನು...
ಹಸಿರುಕ್ಕುವುದೇನು...?
ಈ ಸಂಜೆಗೆ ತುಸು ಹೆಚ್ಚಿಗೆಯೆ ಸುರಿದುಬಿಡು
ಸಾಕಿ... ನಿನ್ನ ಮಧುವನ್ನು ಈ ಬಡವನೆದೆಗೆ....,
ಇಂದವಳ ಮದುವೆ ಮೆರವಣಿಗೆಯ ಡೋರಿಯು
ಮೆರೆಯುವುದು....
ತಾಳಮೇಳದ ಸದ್ದಿಗೆ ನನ್ನೆದೆಯ ಬಡಿತವು
ನಿಂತು ಹೋದಾತು.....
ಸುದ್ದಿಯ ತಿಳಿದು ಸಂಭ್ರಮವು ಸತ್ತು ಹೋದಾತು.
ಮಧ್ಯದಮಲಿನಲ್ಲಿ ಮಲಗಿದ ಮೇಲೆ, ಮುಖದ
ತುಂಬಾ... ಹೊದಿಕೆಯೊಂದನ್ನು ಹೊದಿಸಿಬಿಡು ಸಾಕಿ....
ನಾನುಸಿರಾಡುವ ಉಸಿರೂ.... ಅವಳನ್ನು ಸ್ಪರ್ಶಿಸದಿರಲಿ...
ನಿಟ್ಟುಸಿರನ ತಾಪವು ಸೋಕಿ, ಅವಳ ನಗುವು ಕುಂದಿದರೆ..?
ಸತ್ತು ನಾ ಹೋಗಲಿರುವ ನರಕದ ಬಾಗಿಲೂ...
ಮುಚ್ಚಿಕೊಂಡಾತು...!!!!
ಇದೊಂದು ಸಂಜೆ ಕ್ಷಮಿಸಿಬಿಡು ಸಾಕಿ....
ಬಹು ದಿನಗಳ ನಂತರ, ನಿನಗೆಂದೆ ತಂದಿದ್ದ
ಮಲ್ಲಿಗೆಯ ಗುಚ್ಛವನ್ನು... ಹರಿದು ಚೆಲ್ಲಿಬಿಡು...
ದಿಬ್ಬಣದ ಹಾದಿಗೆ, ಹೊತ್ತೊಯ್ಯವ ಬೀದಿಯಲ್ಲಿ
ಅದೇಷ್ಟು ಮುಳ್ಳುಗಳಿವೇಯೊ...ಚುಚ್ಚಿ..ಮೆರವಣಿಗೆಯು
ಅರ್ಧಕ್ಕೆ ನಿಲ್ಲದಿರಲಿ, ನಡು ಮಧ್ಯದಲಿ ಸಿಕ್ಕು...
ನರಳಾಡುವ ನೋವು ನನಗಷ್ಟೇ...ಇರಲಿ...
ಮಧುಶಾಲೆಯ ಅರಮನೆಯ ಮುಂದೆ....ಸುಂಗಧದ
ಧೂಪವನ್ನು ಹಾಕಿಬಿಡು ಸಾಕಿ....
ನಾ ಕುಡಿದುಬಿಟ್ಟ ಬಟ್ಟಲುಗಳ ಮಧ್ಯದ ವಾಸನೆ,
ಅವಳ ಎದೆಯನ್ನು ತಟ್ಟದಿರಲಿ... ಬಟ್ಟಲೊಳಗೆ
ನನ್ನೆದೆಯ ರಕ್ತವದೇಷ್ಟೊ....ಬೇರೆತಿದೆ..!!!!
ನಾನ್ಹೆಚ್ಚು ದಿನ ಬದುಕಿರಲಾರೆ...ಎಂದವಳಿಗರಿವಾದರೆ...
ರಸಭರಿತ ಮೊದಲ ರಾತ್ರಿಯು ವಿಷವಾಗಿಬಿಟ್ಟಾತು...
ನನ್ನ ಬದುಕಿಗಿದೆ... ಕೊನೆಯ ಕತ್ತಲಾದಿತು....
ನಿನೇಕೆ
ದುಃಖಿಸುತಿರುವೆ
ಸಾಕಿ...
ಕೊನೆಯ
ದಿನಗಳನೇಣಿಸುತ
ಲೆಕ್ಕ..
ಕ್ಷಣವು
ತಡಮಾಡದೆ
ಕರೆದೊಯ್ಯಯವುದು
ಸಮಯ,
ಮೇಲಿನವನ ಗಣಿತವೆಲ್ಲ...
ಪಕ್ಕ...
ಭೂಮಿಯ
ಬಗೆ
ಬಗೆದು
ತೆಗೆಯುವರು
ಸಾಕಿ...
ಚಿನ್ನ
ವಿರಹಿಯ
ಎದೆಗೆ
ನಿ
ಮೊಗೆ ಮೊಗೆದು
ಮದ್ಯವ
ಸುರಿಯದೆ
ಹೋದರೇನು
ಚೆನ್ನ
ನಾ ಬರೆದು
ಕಳುಹಿಸಿದ
ಓಲೆಗಳೊಂದು
ಅವಳ ಕೈ
ಸೇರಲಿಲ್ಲ
ಸಾಕಿ...
ವಿಧಿಯಾಟವ
ನೋಡು...
ಮಧುಶಾಲೆಯ
ಅಂಕಣದವರೆಗೂ....
ಹುಡುಕಿಕೊಂಡು
ಬಂದಿದೆ...
ಅವಳ
ಮದುವೆಯ
ಕರೆಯೋಲೆ
ಮದುವೆಯಾಗಿ ಬಹಳ ವರ್ಷಗಳ ನಂತರ ಹುಟ್ಟಿದ್ದ ಮಗವೊಂದು, ಜನಿಸಿದ ಕೆಲವೆ ದಿನಗಳಲ್ಲಿ ಸತ್ತು ಹೋದರೆ ಮನೆಯಲ್ಲೆಲ್ಲ ಯಾವ ರೀತಿಯ ಸೂತಕದ ಛಾಯೆ ಮೂಡಿರತ್ತದೊ, ಹಾಗೆ ಮನಸ್ಸುಗಳನ್ನು ಕೊಂದುಕೊಂಡವರು ಸ್ಮಶಾನ ಮೌನಕ್ಕೆ ಜಾರಿಬಿಟ್ಟಿದ್ದರು. ಸೋಮಣ್ಣನು ಭರಮಪ್ಪನ ಮುಖವನ್ನೊಮ್ಮೆ ನೋಡಿ, ಕೈ ಮುಗಿದು ' ಕ್ಷಮೆಯಿರಲಿ ಗೌಡ್ರೆ, ನಿಮ್ಮ ಮಗ್ಳನ್ನೆ ನಿಮ್ಮ ಸುಖಕ್ಕೆಂದು ತಂದು ಕೂಡಿಸುವ ಆಸೆ ನಂಗೇನು ಇರ್ಲಿಲ್ರೀ, ಆದ್ರ ನನ್ನ ಬಡತನ, ಅಸಹಾಯಕತೆಯನ್ನ ನೀವು ನಿಮ್ಮ ಕಾಮದಾಸೆಕ ಬಂಡವಾಳ ಮಾಡ್ಕೊಳ್ಳಾಕ ನೋಡಿದ್ರಿ, ನಮ್ಮ ತಾಯಿಗೆ ಆರಾಮಿಲ್ಲಂತಂದ ನಿಮ್ಹತ್ರ ರೊಕ್ಕಾ ಕೇಳಾಕ ಬಂದಾಗ್ನ ನೀವು ಕೊಟ್ಟಿದ್ರ ಆಕಿ ಬದುಕಿರ್ತಿದ್ಲು, ನನ್ ಹೆಂಡ್ತಿ ಅಂದ ಕಂಡ ದುರಾಸೆಯಿಂದ ಹಣ ಸುರದ್ರೀ ನನ್ ತಾಯಿ ಉಳಿಲಿಲ್ಲ, ಹೋಗ್ಲಿ ನಿಮ್ಮ ಹೊಟ್ಯಾಗ ಹುಟ್ಟಿದ ಮಗ್ಳಿಗಾದ್ರೂ ನೀವ್ ರೊಕ್ಕಾ ಕೊಟ್ಟಿದ್ರ ಇವತ್ತ ನಾವು ಯಾರು ಅಪರಾಧಿ ಸ್ಥಾನದೊಳ್ಗ ನಿಂದ್ರತಿದ್ದಲ್ರೀ, ಒಬ್ರ ಮನಿಗೆ ಬೆಂಕಿ ಹಚ್ಚಿ ಚಳಿ ಕಾಯ್ಸಕೊಳ್ಳೊ ಚಟ ಒಳ್ಳೆದಲ್ರೀ ಗೌಡ್ರ, ಇಂದಲ್ಲ ನಾಳೆ ನಮ್ಮ ಮನಿಗೂ ಬೆಂಕಿ ಹಚ್ಚವ್ನ ಆ ದೇವ್ರು ಈ ಭೂಮಿ ಮ್ಯಾಲ ಹುಟ್ಸಿರ್ತಾನ, ಮರಿಬ್ಯಾಡ್ರೀ.. '
ತಿರುಗಿ ಭರಮಪ್ಪನ ಮಗಳಿಗೆ ಕೈ ಮುಗಿದು 'ನೋಡ ತಂಗ್ಯಮ್ಮಾ ನಿನ್ನೆ ನೀನು ನನ್ನ ಪಾಲ್ಗೆ ದೇವ್ರ ಬಂದ್ಹಂಗ ಬಂದಿ ನೀನು. ನಿನ್ನ ಜೀವಾನೇನೊ ನಾನುಳ್ಸಿನಿ ನಿಜ, ಆದ್ರ ನನ್ನ ಜೀವಾ ಉಳ್ಸಕಾ ನೀನ ಸಿಕ್ಕಿದಿ ಅಂತ್ಕೋತೀನಿ, ನನ್ನ ದೇಹ್ದಾಗ ಉಸಿರಿರೊವರ್ಗೂ ನಿನ್ನ ಋಣಾನ ಮರಿಯದಿಲ್ಲವ್ವ, ನೀನೇನರ ನಿನ್ನೆ ನನ್ಗ ಸಿಗ್ದ ಹೋಗಿದ್ದಿದ್ರ, ಇಷ್ಟೊತ್ತಿಗೆ ನನ್ನ ಚಿತಿ ಸುಟ್ಟು ಬೂದಿಯಾಗಿ ಗಂಗವ್ವನ ಹೊಟ್ಯಾಗ ತೇಲ್ತಿರ್ತಿತ್ತು, ಬಂದ ಬೀಗ್ರ ತಲಿಮ್ಯಾಲ ನೀರ ಸುರ್ಕಂಡ ಊರ ಸೇರ್ತಿದ್ರು, ಕಾಲಿಟ್ಟ ವರ್ಷಾಗ್ಲಿಲ್ಲ ಅತ್ತಿನ್ನ, ಗಂಡನ್ನ ನುಂಗ್ಬಿಟ್ಟಾಕಿ ಅಂತಂದ ಊರೆಲ್ಲ ನನ್ಹೆಂಡ್ತಿಗೆ ಪಟ್ಟ ಕಟ್ತಿದ್ರು, ಆದ್ರೇನ್ಮಾಡ್ಲಿ ನಿಮ್ಮಪ್ಪನ ಕಣ್ಣಿಗೆ ಕಟ್ದಂತ್ಹ ಹಳ್ದಿ ಪೊರೆನ ನಾನ ತೆಗಿಬೇಕಿತ್ತು. ನೀನು ನನ್ನ ಕ್ಷಮಿಸುವ್ವ, ಒಂದ ಮಾತ ಹೇಳ್ತೀನ ತಾಯಿ.... ಇವತ್ತ ನಾ ನಿನ್ನ ತಲಿತುಂಬಿ ಹಣ್ದ ಆಸೆಕ ಕರ್ಕೊಂಡ ಬಂದೀನಿ, ನಾಳೆ ಇನ್ನಾರೊ ಕರೀತಾರ, ಹಂಗಂತಂದ ಮಾನಬಿಟ್ಟ ಹೋಗ್ಬ್ಯಾಡವ್ವ, ಹಣ ನಿನ್ನೆ ನಿಮ್ಮ ತಂದಿ ಕಡಿಯಿತ್ತ ಸಂಜಿಕ ನನ್ಹತ್ರ ಇತ್ತ, ಇವತ್ತ ನಿನ್ನ ಕೈಯ್ಯಾಗ ಐತಿ, ನಾಳೆ ಇನ್ಯಾರ್ದೊ ಕಡಿಗ ಇರ್ತದ. ಆದ್ರ ಮಾನ ? ಎಷ್ಟ ರೊಕ್ಕ ಸುರದ್ರರ ಬರ್ತದೆನವ್ವ..?'
ಸೋಮಣ್ಣನ ಮಾತುಗಳಿಗೆ ಕಣ್ಣೀರೊಂದೆ ಇಬ್ಬರುತ್ತರವಾಗಿತ್ತು, ಕೊನೆಯದಾಗಿ ಇಬ್ಬರಿಗೂ ಕೈ ಮುಗಿದು ಕೋಣೆಯಿಂದ ಹೊರಬಂದು ಬಿರುಸಿನಿಂದ ನಡೆಯುತ್ತಾ ಕತ್ತಲೆಯಲ್ಲಿ ಕರಗಿಹೋದನು. ದೀಪ ಹತ್ತಿತ್ತು ಅದರ ಬೆಳಕಿನಲ್ಲಿ ಎಷ್ಟು ದೂರ ನಡೆಯುವುದು..? ಎಂಬುದೊಂದೆ ಪ್ರಶ್ನೆಯಾಗಿ ಉಳಿದದ್ದು.
'ಗೌಡ್ರ... ನಿವೇನ ಅವತ್ತ ಖಡಕ್ಕಾಗಿ ಕಡ್ಡಿ ಮುರ್ದಂಗ ಹೇಳಿ ಕಳ್ಸಿಬಿಟ್ರಿ, ತಾಳಿ ಕಟ್ಟಿದ ಗಂಡ ನಾನು, ಲಗ್ನದಾಗ ನನ್ನಾಕಿ ಕೆನ್ನಿಗೆ ಹಚ್ಚಿದ ಅರಿಷ್ಣದ ಬಣ್ಣಾನ ಮಾಸಿಲ್ಲ, ತಲಿಮ್ಯಾಲ ಸುರ್ದ ಸುರ್ಗಿ ನೀರಿನ ತಂಪ ಇನ್ನ ಇಳ್ದಿಲ್ಲ, ಕೈಗೆ ಹಚ್ಗೊಂಡಿದ್ದ ಮದರಂಗಿ ಕೆಂಪೆರಿದ್ದ ನೆನಪ ನಮ್ಗಿನ್ನ ಮಾಸಿಲ್ಲ, ಕತ್ಲ ಕೊಣ್ಯಾಗ ಕುಂತ್ಗೊಂಡ ಮಾತಾಡೊ ಹಸಿಬಿಸಿ ಮಾತ್ಗಳ ಇನ್ನ ಮುಗ್ದಿಲ್ಲ, ಲಕ್ಷ್ಮೀ ಬಂದಾಳ... ಬಂದಾಳ ಸುಖ ಅನ್ನೊದ ಸುಣ್ಣದ ಗ್ವಾಡಿ ಮ್ಯಾಲಿನ ಕನ್ಡಿಯೊಳ್ಗಿನ ಗಂಟಾಗೈತಿ ಹಿಂಗಿದ್ದಾಗ, ನಿಮ್ಮ ಮನ್ಸನೊಳ್ಗಿನ ದುರಾಸೆನ ನಾ ಯಾ ಮುಖ ಹೊತ್ಗೊಂಡ ಹೋಗಿ ನನ್ಹೆಂಡ್ತಿ ಮುಂದ ನಿಂತ್ಕೊಂಡ ಹ್ಯಾಂಗ ಹೇಳ್ಲ್ರೀ, ನನ್ನ ಮಾಡ್ಕೊಂಡ ತಪ್ಪಿಗೆ ನೀನಿನ್ನೊಬ್ರ ಹಾಸ್ಗಿಗೆ ಹೂವಾಗಂತ ನಾ ಹ್ಯಾಂಗ ಒಪ್ಪಸ್ಲಿ ರೀ ಗೌಡ್ರ, ಕಷ್ಟಾನೊ, ಸುಖಾನೊ, ಸಿರಿಯೊ, ಬಡ್ತನಾನೊ, ಒಟ್ನಲ್ಲಿ ಸಾಯೊತನ್ಕ ನಾನಕೀನ ಕಣ್ಣಾಗ ಕಣ್ಣೀಟ್ಟ ಕಾಪಾಡಕೊಳ್ತೀನಂತಂದ ಅಗ್ನಿ ಮುಂದ ಏಳ ಹೆಜ್ಜಿ ತುಳ್ದಾಂವದಿನ್ರೀ, ಅಂತಾದ್ರಾಗ ಆಕೀನ ನಿಮ್ಮ ಕಾಮದ ಕಾವಿಗೆ ನೂಕಿ ಆ ಕಾವನ್ಯಾಗ ನನ್ನ ಮೈನ ಬೆಚ್ಚಗಾಗ್ಸಿಕೊಳ್ಳುವಷ್ಟು ಹೊಲ್ಸ ಮನಷ್ಯಾ ನಾನಲ್ರೀ.. ಗೌಡ್ರ ನಾನಲ್ಲ, ತಂದಿಲ್ಲ, ಮದ್ವಿಯಾದ ಸ್ವಲ್ಪ ದಿನಕ್ಕ ತಾಯಿ ನನ್ನ ತಬ್ಲಿ ಮಾಡಿ ಹೋದ್ಳು, ಇನ್ನೊಬ್ರ ಮುಂದ ಹೇಳ್ಕೊಳ್ಲಾರ್ದ ನನ್ನ ಮನಸಿನ ಎಷ್ಟೊ ದುಃಖಾನ ಆಕಿ ಮಡಿಲಾಗ ತುಂಬಿನ್ರೀ, ನಿದ್ರಿ ಇಲ್ದ ರಾತ್ರಿನೆಲ್ಲ ಆಕಿ ತೊಡಿಮ್ಯಾಲ ಮಲ್ಗಿ , ಆಕಿ ಕಣ್ಣಾಗ ನೂರಾರ ಬಣ್ಣದ ಬದುಕಿನ ಕನ್ಸಗಳನ್ನ ತುಂಬಿನಿ, ಅಂತಾದ್ರಾಗ... ನಾನ ಮುಂದ ನಿಂತ ನಿಮ್ಮ ಜೊತಿ ಹಾದ್ರಕ್ಕ ಆಕಿನ ದೂಡ್ಲ್ಯಾ, ಇದೆಲ್ಲಾ ಆಗೊ ಮಾತಲ್ಲ ಅನ್ಕೊಂಡ, ನಾ ಗಟ್ಟಿ ಧೈರ್ಯ ಮಾಡಿ, ಸೀದಾ ಹೋಗಿದ್ದ ಊರ ಹೊರಗಿನ ಕೆರಿಗ್ರೀ... ಸಾಕಿನ್ನ ಜೀವ್ನ ದೇವ್ರು ನನ್ನ ಹಣೆ ಬರ್ಹದಾಗ ಇಷ್ಟ ಸುಖಾ ಕೊಟ್ಟಾನಂತಂದ ತಿಳ್ಕೊಂಡು, ಕೆರಿಗೆ ಬಿದ್ದ ಸಾಯಾಕಂತಂದ ಹೋದನ್ರೀ.. ಹಗಲೊತ್ತಲ್ರೀ, ಅಲ್ಲೆ ಹಳ್ಳಿ ಹೆಣ್ಮಕ್ಳು ಬಟ್ಟಿ ಒಗಿಯಾಕ ಹತ್ತಿದ್ರು, ಅಲ್ಲೆ ಬೇನ ಗಿಡ್ದ ನೆಳ್ಳಿಗೆ ಒಂಚೂರ ಕುಂತೆ, ಅತ್ತೆ...ಸುಸ್ತಾದಾಗ ಆಗಿ ನಿದ್ದಿ ಯಾವಾಗ ಬಂತೊ ಗೊತ್ತಿಲ್ಲ ಹಾಗೆ ಅಡ್ಡಾಗಿಬಿಟ್ಟೆ, ಥಟ್ಟನೆ ಎಚ್ಚರವಾಯ್ತು ಆಗ್ಲೆ ಸಂಜಿ ಆರೂವರಿ ಆಗ್ಬಿಟ್ಟಿತ್ತು, ದನ ಕಾಯೋರು, ಬಟ್ಟಿ ಒಗಿಯೊರು ಎಲ್ಲಾರ ಹೋಗ್ಬಿಟ್ಟಿದ್ರು, ಇದೆ ಸರಿ ಸಮಯ ಅಂದ್ಕೊಂಡವನೆ ಒಂದೆ ಉಸಿರಿನಲ್ಲಿ ಓಡಿ ಹೋಗಿ ಕೆರೆಯ ದಂಡಿನ ಹತ್ತಿ ಇನ್ನೇನ ಹಾರ್ಬೇಕ ಅನ್ನುವಷ್ಟರೊಳ್ಗ ಯಾರೊ ಒಬ್ರು ಕೆರಿಯಾಗ ಅದಾಗ್ಲೆ ಹಾರಿ ಮುಳುಮುಳುಗಿ ಎಳಾಕ ಹತ್ತಿದ್ರ, ತಡಮಾಡ್ದನ ಕೆರಿಗ ಹಾರಿ, ದಂಡಿಗೆ ಎಳ್ಕೊಂಡ ಬಂದ ಕುಂದ್ರಿಸಿ ನೋಡಿದ್ರ ನಿಮ್ಮ ಮಗ್ಳ, ಯಾಕವ್ವಂತಂದ ಕೇಳಿದ್ರ ನಿಮ್ಮ ಮಗ್ಳ ಹೇಳ್ತಾಳ, ಆಕಿ ಕಾಲೇಜನ್ಯಾಗ ತನ್ನ ಗೆಳ್ತ್ಯಾರ ಜೊತಿ ಚಾಲೆಂಜ್ ಮಾಡಿದ್ಲಂತ ನಾನು ಸರೆಗಮಪಕ್ಕ ಹೊಕ್ಕಿನಂತಂದ ನೀವ... ಹಣ ಕೊಡಾಕ ಹಿಂದ್ಮುಂದ ಮಾಡಿದ್ರಿ, ಇಷ್ಟು ಸಾವುಕಾರ ಕಂಟ್ರ್ಯಾಕ್ಟರ ನಮ್ಮಪ್ಪ ಇದ್ದು ನಾನು ಕಾರ್ಯಕ್ರಮಕ್ಕ ಹೋಗೊದ ಆಗುವಲ್ದಲ್ಲನ್ನೊದು ಒಂದು. ಎರಡ್ನೆದ್ದು ಎಲ್ಲಾ ಸ್ನೇಹಿತ್ರ ಎದ್ರಿಗೆ ಮರ್ಯಾದಿ ಹೋಗ್ತತನ್ನೊದೊಂದು ಇನ್ನೊಂದು ಮನಿಗ ಬಂದ ಮತ್ತ ರೊಕ್ಕ ಕೇಳಿದ್ರ ನೀವ್ ಸಾಯ್ಸತಿದ್ರಂತ, ಅದ್ಕ ನಾನ ಸತ್ತ ಹೋದ್ರ ಛಲೊ ಅನ್ಕೊಂಡು ಕೆರಿಗೆ ಹಾರಿಬಿಟ್ಟಿದ್ಳು,'
ಭರಮಪ್ಪ ಮಗಳ ಮೊಖವನ್ನು ನೋಡಿ,
' ನಿಜ ಏನ್ಬೆ:
ಹೌದೆನ್ನುವಂತೆ ಕತ್ತನ್ನು ಆಡಿಸಿದಳು.
ಸೋಮಣ್ಣ ಮುಂದುವರೆದು' ಆವಾಗ ನೀವ್ ಕೊಟ್ಟ ನಾಕ ಲಕ್ಷ ನಂಗ ನೆಪ್ಪಿಗ ಬಂತ ಓಡ್ಹೋಗಿ ಗಾಡಿ ಬ್ಯಾಗನಿಟ್ಟಿದ್ದ ಸೂಟಕೇಸ್ ತಂದ ನಿಮ್ಮ ಮಗ್ಳಿಗೆ ತೋರಿಸಿ ಹೇಳಿದ್ನಿ, ನೀನ ಬದಕೋಕ ಮತ್ತ ಕಾಂಪಿಟೇಷನ್ಗೆ ಹೋಗಾಕ ನನ್ಹತ್ರ ಒಂದ ದಾರಿ ಐತಿ ಮಾಡ್ತೀಯಾ ಅಂದೆ, ಹ್ಞೂಂ ಅಂದಳು ಆಗ ನಾನು ಒಂದ ರಾತ್ರಿ ನೀನು ಒಬ್ಬನ ಜೊತಿಗೆ ಹಾಸ್ಗಿ ಹಂಚ್ಕೊಬೇಕಂತಂದೆ, ನಿಮ್ಮ ಮಗಳು ಸುತಾರಂ ಒಪ್ಪಲಿಲ್ಲ, ಇದ್ರಕ್ಕಿಂತ ಸಾಯೋದ ಭೇಷೈತಿ ಅಂತಂದ ಮತ್ತ ಎದ್ದ ನಿಂತ್ಲು, ಕೈ ಹಿಡ್ದ ಎಳ್ದ ಕುಂದ್ರಿಸಿ ಹೇಳ್ದ್ಯಾ, ನೋಡವ್ವಾ ಆ ಮನುಷ್ಯ ಭಾಳ ಶ್ರೀಮಂತ ಅದಾನು, ಮತ್ತ ಮುಂದ್ಕ ನಿ ಕೇಳದಷ್ಟ ರೊಕ್ಕಾನು ಕೊಡ್ತಾನು, ಏನ ಒಂದ ರಾತ್ರಿ ಕಣ್ಮುಚ್ಚಿಕೊಂಡ ಮಕ್ಕೊಂಡ್ಬಿಡು, ಹಣ ಸಿಗ್ತೈತಿ, ನಿ ಕಾರ್ಯಕ್ರಮದಾಗ ಕಾಂಪೀಟ್ ಮಾಡ್ಬೊದು, ನಿನ್ನ ಗೆಳತೆರ ಮುಂದ ಎದಿಯುಬ್ಬಿಸಿಕೊಂಡ ಅಡ್ಯಾಡ್ಬೊದು, ಈ ವಿಷ್ಯಾನ ನಾನು ಪ್ರಮಾಣ ಮಾಡಿ ಹೇಳ್ತಿನಿ ಯಾರ ಮುಂದನು ಹೇಳೊಂಗಿಲ್ಲ,
ನಾಳೆ ರಾತ್ರಿಗೆ ಹಳೆ ಐಬಿ ಹತ್ರ ಬಂದ್ಬಿಡು, ನಿಮ್ಮಪ್ಪಾರು ನಾಳೆ ಊರಾಗ ಇರಾಂಗಿಲ್ಲ ನಿಮ್ಮವ್ವರ್ರಿಗೆ ನಮ್ಮ ಗೆಳ್ತಿ ಮನಿಯ್ಯಾಗ ಓದ್ಕೊಳ್ಳಾಕ ಹೋಕ್ಕಿನಂತದ ಹೇಳಿ ಬಂದ್ಬಿಡು, ಅಂತಂದ ಹಾಳು ಮೂಳು ಸೇರ್ಸಿ ಇಲ್ಲಿ ತನ್ಕ ಕರ್ಕೊಂಡ ಬಂದನ್ರೀ.. ಆದ್ರೂ ಕೊನಿಕ ಒಂದ ಮಾತ ಕೇಳಿದ್ಲು, ನಂ ತಂದಿ ಇಷ್ಟ ರೊಕ್ಕಾ ಎಲ್ಲಿಂದ ತಂದಿ ಅಂತ ಕೇಳಿದ್ರ ಅಂತಂದ್ಲು, ಆಗ ನಾ ಹೇಳಿದ್ಯಾ, ನನ್ನ ಗೆಳ್ತ್ಯಾರ ಜೊತಿ ಇಸ್ಕೊಂಡಿನ ಅನ್ನು ಸುಮ್ನಾಕ್ಕಾನ, ಯಾಕಂದ್ರ ನಿಮ್ಮಪ್ಪಗ ಕಾರ್ಯಫಲದ ಅಂಜ್ಕಿನ ಇಲ್ಲ, ನಿನೇನ ಹೆದರ್ಬ್ಯಾಡ ಎಲ್ಲ ನಾನದೀನಿ ಅಂತಂದ ಹೇಳಿ ಇಲ್ಲಿ ತನ್ಕ ಕರ್ಕೊಂಡ ಬಂದನ್ರೀ' ಧೀರ್ಘ ನಿಟ್ಟುಸಿರೊಂದನ್ನು ಬಿಟ್ಟು ನಿಂತುಕೊಂಡನು.
ಸೋಮಣ್ಣ ಐಬಿಯ ವರಾಂಡದಲ್ಲಿ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿತ್ತ ಅಲೆದಾಡುತ್ತಿದ್ದನು, ಕೈಯಲ್ಲಿ ಟಾರ್ಚನ್ನು ಹಿಡಿದುಕೊಂಡು. ಕೈಯಲ್ಲಿದ್ದ ವಾಚನ್ನು ನೋಡಿಕೊಂಡನು ಗಂಟೆ ಹತ್ತೂ ಇಪ್ಪತ್ತೆಂಟಾಗಿತ್ತು.' ಯಾಕ ಈ ಮುದಿ ಗೌಡ ಇಷ್ಟೊತ್ತಾದ್ರು ಬರ್ಲೆ ಇಲ್ವಲ್ಲ, ' ಮನಸ್ಸಿನಲ್ಲಿ ಚಿಂತಿಸುತ್ತಿರುವಾಗಲೆ, ಐಬಿ ಗೇಟಿನ ಮುಂದೆ ಒಂದು ವಾಹನ ಬಂದು ನಿಂತಿತು. ಅದರೊಳಗಿಂದ ಒಂದು ಆಕೃತಿ ಇಳಿದು ಮೆಲ್ಲನೆ ಗೇಟನ್ನು ತೆಗೆದು ಒಳಬರತೊಡಗಿತು, ಬಂದ ವಾಹನ ಮರಳಿ ಹೊರಟು ಹೋಯಿತು. ಸೋಮಣ್ಣನು ಟಾರ್ಚನ್ನು ಹಾಕಿಕೊಂಡು ಆಕೃತಿಯ ಎದುರು ಹೋಗಿ ನಿಂತು ' ಯಾರ್ ನೀನು ' ಎಂದು ಪ್ರಶ್ನಿಸಿದನು. ತಲೆಯ ಮೇಲೆ ಬಿಳಿ ಟವಲ್ ನಿಂದ ಮುಸುಕನ್ನು ಹಾಕಿಕೊಂಡ ಬಂದ ಆಕೃತಿ ಸೋಮಣ್ಣನಿಗೆ ತನ್ನ ರೂಪವನ್ನು ತೋರಿಸಿತು. ಭರಮಪ್ಪ..!!!! 'ಎಲ್ಲಾ ರೇಡಿನಾ ' ಅತೀವ ಉತ್ಸುಕತೆಯಿಂದ ಕೇಳಿದ ಭರಮಪ್ಪ
'ಹೂನ್ರೀ ಗೌಡ್ರ, ನಿವ್ ಬರೋದ ಲೇಟಾಯ್ತು,'
'ಅದು ಬಿಡು, ಅದ್ರ ವಿಷ್ಯಾನ ಆಮೇಲೆ ಮಾತಾಡೋಣಂತ, ಕತ್ಲ್ಯಾಕ ಆಗೈತಿ ಐಬಿ, ಕರೆಂಟ ಏನರ ಹೋಗ್ಯಾವನು'
'ಇಲ್ರಿ ಗೌಡ್ರ ಯಾರ್ಗೂ ನೀವ್ ಬರೋದ ಗೊತ್ತಾಗ್ಬಾರದಂತಂದ ಲೈಟೆಲ್ಲಾ ಆಫ್ ಮಾಡಿನ್ರೀ '
'ಮತ್ತ ಲಕ್ಷ್ಮೀ ಒಪ್ಕೊಂಡ್ಳನು,'
' ಹೂನ್ರೀ..'
'ಅಲ್ಲಾ, ಮತ್ತ ನಾ ಒಮ್ಮೆ ಒಳೆಕ ಹೋದಮ್ಯಾಲ ಆಕಿ ಕೊಸರಾಡೊದು ಪಸರಾಡೊದ ಮಾಡಿದ್ರ ನಾ ಕೇಳವಲ್ಲಾ ನೋಡ, ಹಣ್ಣ ಹಿಂಡದೊ ರಸ ಕುಡಿಯೋದ'
ಭರಮಪ್ಪನ ಮಾತಿಗೆ ಸೋಮಣ್ಣನ ಮೈಗೆಲ್ಲ ಉರಿ ಹಚ್ಚಿ, ಎದೆಗೆ ಕೊಡ್ಲಿಯಿಂದ ಜೋರಾಗಿ ಮೇಲೆತ್ತಿ ಒಂದು ಖಚ್ಚ ಹಾಕದ್ಹಂತಹ ನೋವಿನನುಭವ, ಅವುಡುಗಚ್ಚಿಕೊಂಡು ಸಮಾಧಾನದಿಂದ, ' ಹೇ.. ಹಂಗೇನ ಆಗೋದಿಲ್ಲ ತಗೋರಿ ನಾ ಎಲ್ಲಾ ತಿಳ್ಸಿ ಹೇಳಿನಿ, ಮೊದ್ಲ ನಿಮ್ಮ ಮೊಬೈಲ ಕೊಡ್ರಿ, ನಿಮ್ಮ ಸುಖಕ್ಕ ಯಾರರ ಪೋನ್ ಮಾಡಿ ಮುಳ್ಳ ಚುಚ್ಚ್ಯಾರು' ಭರಮಪ್ಪನ ಮಾತಿಗೂ ಕಾಯದೆ ಪೋನ್ ನ್ನು ಕಸಿದುಕೊಂಡು ರೂಂನ ಹತ್ತಿರ ಕೈ ಹಿಡಿದು ಕರೆದುಕೊಂಡು ಹೋದನು.
'ನೀವ್ ಒಳಕಾ ಹೋಗ್ರಿ, ಒಂದೈದ ನಿಮಿಷ ಬಿಟ್ಟ ನಾನ ಲೈಟ್ ಹಾಕ್ತೀನಿ'
'ನಂಗ ಕಾಣ್ಬೆಕಲ್ಲೊ ಆಕಿ '
' ನಾ ತೋರ್ಸತ್ತೀನ ಬರ್ರಿ, ಸ್ವಲ್ಪ ಸೈಲೆಂಟಾಗಿರಿ, ಒಳಗ್ಹೋಗಿ ಆಕಿನ ತಬ್ಕೊಳ್ಳ ತನ್ಕ ಮಾತ ಆಡಬ್ಯಾಡ್ರಿ, ಹೆದರ್ಗಿದ್ರ್ಯಾಳು, ಫಸ್ಟ ಟೈಂ ನೋಡ್ರಿ'
'ಹೇ...ಹೆ ನಿ ಏನ ಚಿಂತಿ ಮಾಡ್ಬೇಡಾ ಇಂತಾದ್ರಗೆಲ್ಲಾ ನಾವ್ ಭಾರಿ ಎಕ್ಸಪರ್ಟ ಅದೀವಿ'. ಅಷ್ಟರಲ್ಲಾಗಲೆ ರೂಮಿನ ಹತ್ತಿರ ಬಂದುಬಿಟ್ಟಿದ್ದರಿಬ್ಬರು. ಸೋಮಣ್ಣನು ಮೆಲ್ಲಗೆ ರೂಮಿನ ಬಾಗಿಲನ್ನು ತೆಗೆದು ಮೊಬೈಲ್ ಟಾರ್ಚ್ ಮೂಲಕ ಬೇಡ್ ಮೇಲೆ ಬಾಗಿಲಿಗೆ ಬೆನ್ನನ್ನು ಮಾಡಿ ಕುಳಿತುಕೊಂಡಿದ್ದವಳನ್ನು ತೋರಿಸಿ, ಭರಮಪ್ಪನನ್ನು ಒಳಗೆ ಕಳುಹಿಸಿ ಬಾಗಿಲನ್ನು ಹಾಕಿಕೊಂಡುಬಿಟ್ಟನು. ಕತ್ತಲಲ್ಲಿ ಎರಡು ನಿಮಿಷ ನಿಂತು, ಕತ್ತಲೆಗೆ ಕಣ್ಣುಗಳು ಹೊಂದುಕೊಂಡ ಮೇಲೆ ಕಣ್ಣುಗಳನ್ನು ಹಿಗ್ಗಿಸುತ್ತಾ ಕಳ್ಳ ಬೆಕ್ಕಿನ ಹಾಗೆ ಹೆಜ್ಜೆಗಳನ್ನು ಹಾಕುತ್ತಾ, ಜಡೆಯ ತುಂಬ ಮುಡಿದಿದ್ದ ಮಲ್ಲಿಗೆಯ ವಾಸನೆಯನ್ನು ಗ್ರಹಿಸುತ್ತಾ, ಅವಳ ಭುಜದ ಮೇಲೆ ಕೈಯಿಟ್ಟು ಎಬ್ಬಿಸಿ, ಗಬಕ್ಕನೆ ತೆಕ್ಕಗೆ ಎಳೆದುಕೊಂಡು ಮಲ್ಲಿಗೆಯ ಘಮಲನ್ನು ಆಸ್ವಾದಿಸುತ್ತಾ, 'ಲಕ್ಷ್ಮೀ ಭಾಳ ದಿವ್ಸದ ಕನಸಿಗೆ ಇವತ್ತ ಹೇರಿಗೆಯಾಗೊ ಸಮಯಾ ಬಂದೈತ ನೋಡ,' ಎಂದು ತನ್ನ ತೋಳ್ಬಲವನ್ನು ಬಿಗಿಮಾಡಿದನು, ಅಷ್ಟೇ.. ಕ್ಷಣದಲ್ಲಿ ಕೋಣೆಯೆ ಪ್ರತಿಧ್ವನಿಸುವಂತೆ ಚೀರಿ ಆ ಹೆಣ್ಣು ಭರಮಪ್ಪನ ತೆಕ್ಕೆಯಿಂದ ಕೊಸರಿಕೊಂಡು ದೂರ ಸರಿದು ನಿಂತುಬಿಟ್ಟಳು.
ಫಕ್ಕನೆ ಕೋಣೆಯೆ ಝಗಮಗಿಸುವ ಹಾಗೆ ಲೈಟ್ ಹೊತ್ತುಕೊಂಡಿತು. ಆ ಬೆಳಕಿನ ಪ್ರಕಾಶಕ್ಕೆ ಕ್ಷಣ ಕಣ್ಣುಗಳು ಮಂಜಂತಾದರು ಉಜ್ಜಿಕೊಂಡು ಆ ಹೆಣ್ಣಿನ ಕಡೆ ನೋಡಿದ ಭರಮಪ್ಪನಿಗೆ ಎದೆಯೊಡೆದು ಸತ್ತುಬಿದ್ದಂತಹ ಅನುಭವ
ನೆತ್ತಿಗೇರಿದ್ದ ಕಾಮದ ಪಿತ್ತವು ಜರ್ರನೆ ನೆಲಕ್ಕಿಳಿದು ಹೂತು ಹೋಗಿತ್ತು. ಆಗ ಸೋಮಣ್ಣನು ಬಾಗಿಲನ್ನು ತೆರದು ಒಳಗೆ ಬಂದು ಗಹಗಹಿಸಿ ನಗುತ್ತಾ ನಿಂತನು, ಆಘಾತದಿಂದ ಚೇತರಿಸಿಕೊಂಡ ಭರಮಪ್ಪನು ಸಿಟ್ಟಿನಿಂದ ಎದ್ದು ಸೋಮಣ್ಣನ ಎದೆಯ ಮೇಲಿನ ಅಂಗಿಯನ್ನು ಹಿಡಿದುಕೊಂಡು ಗೋಡೆಗೆ ತಾಗಿಸಿ, ಬೆಂಕಿ ಕಾರುವ ಕಣ್ಣುಗಳಿಂದ ' ಏನ್ಲೆ ಇದು ಸೋಮ್ಯಾ '
' ಹೆಣ್ರೀ ಗೌಡ್ರ....'
' ನಂಗೊ ಗೊತ್ತೈತ್ಲೆ ಮಗನ, ಆದ್ರ ಆಕಿ ನನ್ನ ಮಗ್ಳ ಅದಾಳ'
'ಆದ್ರೇನಾತ್ರಿ...? ಸರ್...' ಗಾಯದ ಮೇಲೆ ತಣ್ಣನೆ ಮಂಜುಗಡ್ಡೆಯಿಡುವ ಹಾಗೆ ಮೆಲ್ಲಗೆ ನುಡಿದನು.
'ನನ್ನ ಮಗ್ಳನ ನಾನು...ಛಿ...ಛಿ..ಎಂತಾ ಅನಾಹುತ ಆಗಿ ಹೋಕ್ಕಿತ್ಲೆ ಸೋಮ್ಯಾ, ಎಂತಾ ಪಾಪದ ಕೂಪಕ್ಕ ತಳ್ಬಿಡ್ತಿದ್ದಿ ನಿ ನನ್ನ'
' ಏ ತಗಿರ್ರೀ..ಗೌಡ್ರ, ನೀರ ಹಾಸಾಕ ಮಣ್ಣು ಯಾರ್ದಾದ್ರೇನು, ಹದವೊಂದಿರ್ಬೇಕಷ್ಟ ಹೌದಲ್ರೀ... ಅದು ಅಲ್ದ ನೀವ ಹೇಳಿದ್ರಲ್ರೀ ಹೆಣ್ಣ ಯಾವ್ದಾದ್ರೇನ್ರೀ... ಮಗ್ಳಾದ್ರೇನ, ಅಕ್ಕಾದ್ರೇನ, ಹೆಂಡ್ರಾದ್ರೇನ, ಸುಖಾ ಮುಖ್ಯ ಅಂತಂದ, ತಗೋರಿ ನಿಮ್ಮ ಸುಖಕ್ಕಂತಂದ ನೀವ್ ಕೊಟ್ಟ ನಾಕ ಲಕ್ಷ ರೊಕ್ಕಾನ ಈಕೀಗೆ ಕೊಟ್ಟ ಕರ್ಕೊಂಡ ಬಂದಿನಿ ನಾ, ಯಾಕ ಸುಮ್ಕ ನಿಂತ್ಬಿಟ್ರಿ..? ಓಹೋ....ಮಗ್ಳನ್ನೊ ಮಮಕಾರ ನಿಮ್ಮನ್ನ ಪಾಪದ ಕೂಪಕ್ಕ ತಳ್ಳಾಕ್ಹತ್ತೈತೆನ್ರೀ ಗೌಡ್ರ, ಛೆ....ಛೆ...ಪಾಪಾಗಿಪ ಕಾರ್ಯಫಲನ್ನೆಲ್ಲಾ ನಂಬೊರಲ್ಲ ನೀವು ಹೌದಲ್ರೀ, ಒಂದ ಹೆಣ್ಣಿನ ಸೀರಿ ಸೆರ್ಗಿನ ಹಿಂದ ಸಾವ್ರಾರು ಕನ್ಸಗಳು ಇರ್ತಾವು, ಸಂಕಟಗ್ಳಿರ್ತಾವು, ಅವನ್ನೆಲ್ಲಾ ಅರ್ಥ ಮಾಡ್ಕೊಲಾರ್ದ ಬರೀ ನಿಮ್ಮ ಕಾಮದ ತೀಟಿಗಿ ಆ ಸೆರ್ಗನ್ನ ಬಳ್ಸಕೊಂಡ್ಬಿಟ್ಟಿರಿ, ಇವಾಗ ನಿಮ್ಗ ಸಂಕ್ಟ ಆಗ್ಲಾಕ ಹತ್ತೈತೇನು..?
ಯಾಕ ನಿಮ್ಮ ಮಗ್ಳ ಮೈ ನಿಮ್ಮ ದೇಹಾದ ಬೆಚ್ಗ ಮಾಡೊದಿಲ್ಲನು, ಇನ್ನೊಬ್ರ ಎದಿ ಬೆಣ್ಣಿನ ಕರ್ಗಿಸಿ ತುಪ್ಪ ಮಾಡ್ಕೊಂಡ ಕುಡಿಯೊರ ನೀವು, ಈಗೆಲ್ಲ ಹೋತ್ರಿಆ ತಾಕತ್ತ ಗೌಡ್ರ, ನಿಮ್ಮ ಕಾಟಕ್ಕ ಊರ ಬಿಟ್ಟೊರ ನೋವು, ಕೆರೆಗ ಹಾರಿ ಜೀವ ಕಳ್ಕೊಂಡ ಆ ಹೆಣ್ಮಗಳ ಗಂಡ ಮತ್ತ ಮಗ್ವಿನ ಸಂಕ್ಟ, ನಿಮಗೇನರ ಅರಿವಾಗ್ತತೇನ್ರಿ..? ಹ್ಯಾಂಗ ಅರಿವಾಗ್ತದ ತಾಯಿ ಮಮತೆ ತುಂಬಿದ ಎದಿನ ಕಾಮದ ಕಣ್ಣಿಲೆ ನೋಡರ ನೀವು. ನಿಮ್ಗೇನಿದ್ರ ಬೇಕಾಗಿರೊದು ಹತ್ತ ನಿಮಿಷ್ದ ಸುಖ ಅಷ್ಟ.'
ಸೋಮಣ್ಣನ ಮಾತುಗಳನ್ನು ಕೇಳಿ ನಿಂತ ಭೂಮಿ ಬಾಯ್ತೆರೆದು ನುಂಗಿದ ಅನುಭವವಾಯಿತು. ನಿನ್ನೆ ತಾನಾಡಿದ ಮಾತುಗಳನ್ನು ನೆನಪಿಸಿಕೊಂಡು, ಹಿಡಿದಿದ್ದ ಶರ್ಟನ್ನು ಬಿಟ್ಟು,
ಪಲ್ಲಂಗದ ಮೇಲೆ ಕುಸಿದು ಕುಳಿತನು. ಭರಮಪ್ಪ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದೆ, ' ಏನ್ಬೇ ಮಗಳ ಇವ್ನ ಕೈಯ್ಯಾಗ ನಿ ಹ್ಯಾಂಗ ಸಿಕ್ಕಿ, ಇಲ್ಲಿಗ್ಹ್ಯಾಗ ಬಂದಿ,' ಕೇಳುತ್ತಾ ಕಣ್ಣೀರಾದನು.
' ನಿಮ್ಮ ಮಗ್ಳದೇನು ತಪ್ಪಿಲ್ರೀ ಗೌಡ್ರ, ಆಕಿನ ಕರ್ಕೊಂಡ ಬಂದಿದ್ದ ನಾನಿಲ್ಗೆ '. ಸೋಮಣ್ಣ ನಿನ್ನೆ ನಡೆದ ಘಟನೆಯನ್ನು ವಿವರಿಸಲು ಪ್ರಾರಂಭಿಸಿದನು.